"ಇದು ವಿಮರ್ಶೆಯಲ್ಲದ ಚಿಂತನ"

Thursday, January 10, 2019

ಗೌರವದ ಸ್ವಯಂ ಪ್ರಜ್ಞೆ



ಅದೊಂದು ಬೃಹತ್ ಧಾರ್ಮಿಕ ಕಾರ್ಯಕ್ರಮ. ಜಗದ್ಗುರುಗಳು ಇನ್ನೇನು ಆಗಮಿಸುವುದರಲ್ಲಿದ್ದರು.   ಸಾವಿರಾರು ಸಂಖ್ಯೆಗಳಲ್ಲಿ ಸಭಾಂಗಣ ನೆರೆದಿತ್ತು. ಕುಳಿತುಕೊಳ್ಳುವುದಕ್ಕೆ ಆಸನವಿಲ್ಲದೆ ಬಹಳಷ್ಟು ಜನ ನಿಂತೇ ಇದ್ದರು. ಎಲ್ಲರ  ದೃಷ್ಟಿ ವೇದಿಕೆಯ ಮೇಲೆ ಇದ್ದರೂ ಬಂದ ಸಭಿಕರಲ್ಲಿ ಬಹಳಷ್ಟು ಜನ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಹಾಗಾಗಿ ಸಾವಿರ ಸಾವಿರ ಜನರ ನಾಲಿಗೆ ಹರಿದಾಡುವಾಗ ಗುಜು ಗುಜು ಸದ್ದು ಸಭಾಂಗಣ ತುಂಬಿತ್ತು.  ಗುರುಗಳ ಆಗಮನದ ಮೊದಲು ಸಭಾಕಾರ್ಯಕ್ರಮ ನಡೆದಿತ್ತು. ಯಾರೋ ಒಬ್ಬ ಧಾರ್ಮಿಕ ಪ್ರಮುಖರು ಧರ್ಮದ ಬಗ್ಗೆ ವೇದಾಂಗ ಉಪನಿಷತ್ ಬಗ್ಗೆ ಪ್ರವಚಿಸುತ್ತಿದ್ದರು. ಉತ್ತಮವಾದ ಪ್ರವಚನ. ಆಕರ್ಷಕ ವಿಚಾರ ಮಂಥನಗಳು. ಆದರೂ ಸಭೆಯ ಸದ್ದು ಕಡಿಮೆಯಾಗಲಿಲ್ಲ. ಇದರ ಬಗ್ಗೆ ಗಂಭೀರವಾಗದೇ ಆ ಅತಿಥಿ ವರೇಣ್ಯರು ತಮ್ಮ ಭಾಷಣ ಮುಂದುವೆರೆಸಿದ್ದರು. ತುಸು ಹೊತ್ತಿನಲ್ಲೆ ಜಗದ್ಗುರುಗಳ ಘನ ಗಂಭೀರ ಆಗಮನವಾಯಿತು. ಬಂದವರೇ  ಸಕಲರ ವಂದನೆ ಗೌರವಗಳನ್ನು ಸ್ವೀಕರಿಸಿ ವೇದಿಕೆಯಲ್ಲಿದ್ದ ತಮ್ಮ ಪೀಠದಲ್ಲಿ ಆಸೀನರಾದರು. ಅದಾಗಲೇ ಧಾರ್ಮಿಕ ಪ್ರವಚನ ಮಾಡುತ್ತಿದ್ದ ವರೇಣ್ಯರು ತಮ್ಮ ಭಾಷಣ ಮೊಟಕುಗೊಳಿಸಿ ನೇಪಥ್ಯಕ್ಕೆ ಸೇರಿದರು. ಜಗದ್ಗುರುಗಳ ಆಶೀರ್ವಚನ ಇನ್ನೇನು ಆರಂಭವಾಗಬೇಕು ಈಗ ಸಭೆ ಒಮ್ಮಿಂದೊಮ್ಮೆಲೇ ಮೌನಕ್ಕೆ ಹತ್ತಿರವಾಗತೊಡಗಿತು. ಗುರುಗಳು ತಮ್ಮ ಆಶೀರ್ವಚನವನ್ನು ಆರಂಭಿಸಿದರು. ಆ ಕಂಚಿನ ಕಂಠದಿಂದ ಓಂಕಾರ ಮೊಳಗುತ್ತಿದ್ದಂತೆ ಸಭೆ ಸೂಜಿ ಬಿದ್ದ ಸದ್ದನ್ನು ಆಲಿಸುವುದಕ್ಕೆ ಸಿದ್ದವಾದಂತೆ ಶಾಂತವಾಯಿತು. ಅರೆ, ಸಹಸ್ರ ಸಹಸ್ರ ನಾಲಿಗೆಗಳಿಗೆ ನಿಶ್ಚಲವಾಗುವುದಕ್ಕೆ  ಅದೆಲ್ಲಿಂದ ಬಂತು ಈ ಪ್ರಚೋದನೆ? ಅದಕ್ಕೆ ಕಾರಣ ಇಷ್ಟೇ ಆ ಗುರುಗಳ ವರ್ಚಸ್ಸು. ಅದಾಗಲೇ ಮಹನೀಯರು ಪ್ರವಚಿಸಿದ್ದ ವಿಷಯಗಳನ್ನೇ ಪ್ರಸ್ತಾಪಿಸಿ  ಸ್ವಾಮೀಜಿಗಳು ತಮ್ಮ ಆಶೀರ್ವಚನದ ಅಮೃತ ತುಲ್ಯ ಮಾತುಗಳನ್ನಾಡುತ್ತಿದ್ದರು. ಬಹುತೇಕ ಅದೇ ವಿಷಯಗಳಾದರೂ ಸಹಸ್ರ ಸಂಖ್ಯೆಯ ಸಭೆ ನಿಶ್ಚಲವಾಗಿ ಬಿಟ್ಟ ಕಣ್ಣಿನಿಂದ ನೆಟ್ಟ ಕಿವಿಯಿಂದ ಸ್ತಭ್ಧ ನಾಲಿಗೆಯಿಂದ ಆ ಭಾಷಣವನ್ನು ತದೇಕ ಚಿತ್ತದಿಂದ ಆಲಿಸುತ್ತಿತ್ತು. ಕುಳಿತವರು ಕತ್ತು ಉದ್ದ ಮಾಡಿದರೆ ನಿಂತವರು ಕುಳಿತುಕೊಳ್ಳುವುದನ್ನು ಮರೆತು ಕೇಳಿದರು. ಭೋರ್ಗರೆವ ನದಿಯ ದಡದಿಂದ ಹತ್ತಿರದ ಉದ್ಯಾನವನಕ್ಕೆ ಹೋದಂತಹ ಅನುಭವ. ಆ ಸಭೆಯಲ್ಲಿ ಒಂದು ಧೂಳಿನ ಕಣವೂ ಸಹ ನಿಶ್ಚಲವಾಗಿತ್ತು.

ವ್ಯಕ್ತಿಗಳೀರ್ವರ ಪ್ರವಚನ ಒಂದೇ ಆಗಿದ್ದರೂ ವ್ಯಕ್ತಿ ವರ್ಚಸ್ಸು ವಿಭಿನ್ನ. ಅದನ್ನೇ ಸ್ವಯಂ ಗೌರವ ಎನ್ನುವುದು. ಯಾರೊ ದಂಡ ಹಿಡಿದು ನಿಂತು ಜನಸ್ತೋಮವನ್ನು ನಿಯಂತ್ರಿಸಬೇಕಿಲ್ಲ. ಯಾರೂ ಆದೇಶಿಸಬೇಕಿಲ್ಲ. ಸ್ವಯಂ ಜನಗಳೇ ಆದೇಶ ಪಾಲಿಗಳಾಗಿ ಸ್ಥಬ್ಧರಾಗಿದ್ದರು. ಗೌರವ ಎಂಬುದು ಸೆಳೆದು ತರುವುದಕ್ಕಿಂತ ಆಯಾಚಿತವಾಗಿ ಬರುವುದರಲ್ಲಿ ಯೋಗ್ಯತೆ ಹೆಚ್ಚಿರುತ್ತದೆ.

ಅದೊಂದು ಯಕ್ಷಗಾನ ಬಯಲಾಟ. ಅದುವೆರೆಗೆ ಯಾವುದೋ ಅಬ್ಬರದ ವೇಷ ಕುಣಿದು ನೇಪಥ್ಯಕ್ಕೆ  ಸರಿದಿತ್ತು. ರಂಗದ ತೆರೆ ಮೇಲೆ ಸರಿದು ಭಾಗವತರು ಪದ ಹೇಳಿ ನಿಲ್ಲಿಸಿದರು. ಚೆಂಡೆ ಮದ್ದಲೆಯ ಸದ್ದು ನಿಶ್ಚಲವಾಯಿತು. ಇನ್ನೇನು ಅಲ್ಲಿ ಕುಳಿತ ವೇಷಧಾರಿ ತನ್ನ ಮಾತುಗಳನ್ನು ಆರಂಭಿಸಬೇಕು,  ಸಭೆ ಗಂಭೀರವಾಗಿತ್ತು.  ಒಂದರೆ ಘಳಿಗೆ ಸಭೆ ಮೌನವಾಯಿತು. ವೇಷಧಾರಿಯ ಮಾತುಗಳನ್ನು ಕೇಳುವುದಕ್ಕೆ ಕಿವಿಯಗಲಿಸಿ ಆಸನದ ತುದಿಗೆ ಬಂದು ನೆಟ್ಟಗೆ ಕುಳಿತರು. ಅದಮ್ಯವಾದ ಕುತೂಹಲ ನಿರೀಕ್ಷೆ. ವೇಷಧಾರಿ ಇದನ್ನೆ ನಿರೀಕ್ಷಿಸಿ ಮತ್ತೂ ಒಂದರೆ ಕ್ಷಣ ಸಭೆಯನ್ನೇ ನೋಡಿದರು. ಸಭೆ ಮತ್ತಷ್ಟೂ ಕುತೂಹಲಕ್ಕೆ ಒಳಗಾಗಿ ತೊಡಗುವ ಮಾತಿಗೆ ಕಾದು ಕುಳಿತಿತು. ಪರಿಪೂರ್ಣವಾಗಿ ಸದ್ದಡಗಿದಾಗ ವೇಷಧಾರಿ ನಿಧಾನವಾಗಿ ತಮ್ಮ ಕಂಚಿನ ಕಂಠದಲ್ಲಿ ಮಾತನಾಡುವುದಕ್ಕೆ ತೊಡಗಿದರು.  ಆ ವೇಷಧಾರಿ ಮತ್ತಾರೂ ಅಲ್ಲ , ಶತಮಾನಕ್ಕೊಬ್ಬನೇ ಶೇಣಿ ಎಂದು ಕರೆಸಲ್ಪಡುವ ಯಕ್ಷಗಾನ ಶ್ರೇಷ್ಠ ವಾಗ್ಮಿ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರು. ಅವರ ಶೈಲಿಯೇ ಹಾಗೆ. ಸಭೆಯನ್ನು ಆಕರ್ಷಿಸುವ ರೀತಿಯೇ ಹಾಗೆ. ಭಾಗವತರ ಪದ ನಿಂತರೂ ಒಂದಷ್ಟು ವಿಳಂಬಿಸಿಯೇ ಮಾತಿನ ವಾಗ್ಝರಿ ಆರಂಭವಾಗುತ್ತದೆ. ಇದಕ್ಕೆ ಸರಿಯಾಗಿ ಸೇರಿದ ಸಭೆ ಪ್ರತಿಕ್ರಿಯಿಸುತ್ತದೆ. ಅದು ಶೇಣಿ ವರ್ಚಸ್ಸು.

ಇಂದು ರಂಗದಲ್ಲಿ ಇಂತಹ ಗೌರವ ಭಾವ ಯಾಕೆ ಅಪರೂಪವಾಗಿ ಹೋಗಿದೆ? ಸ್ವಯಂ ಗೌರವ ಎಂಬುದು ಇನ್ನೊಬ್ಬರು ಕೊಟ್ಟು ಬರುವುದಲ್ಲ. ಆದು ಯಾರ ಅನುಗ್ರಹಕ್ಕೂ ಕಾಯುವುದಿಲ್ಲ. ಅದು ಸ್ವತಃ  ಅಂತರ್ಗತ ಗುಣಗಳಿಂದ ಅರ್ಹತೆಯನ್ನು ಮೊದಲು ಪಡೆಯುತ್ತದೆ.  ಗೌರವಕ್ಕೆ ಮೂಲಧನ ಸ್ವತಃ ನಮ್ಮಲ್ಲೇ ಇರಬೇಕು.  ವ್ಯವಹಾರಕ್ಕೆ ಮೊದಲ ಮೂಲಧನವನ್ನು ನಾವು ಹಾಕಿದಂತೆ ನಮ್ಮ ಗೌರವಕ್ಕೆ ಮೊದಲ ಮೂಲಧನ ನಮ್ಮಿಂದಲೇ ತೊಡಗಬೇಕು. ಆನಂತರ ಬಾಹ್ಯ ಪ್ರಪಂಚ ಹೇಗೆ ಬೇಕೋ ಹಾಗೆ ಸ್ವೀಕರಿಸಿ ಗೌರವ ವೃದ್ಧಿಯಾಗುತ್ತದೆ. ಹಾಗಾದರೆ ನಮ್ಮೊಳಗಿನ ಗೌರವದ ಬಗ್ಗೆ ಅದನ್ನು ಸ್ವತಃ ನಾವು ಗೌರವಿಸುವ ಬಗ್ಗೆ ಯೋಚಿಸುವ ಆವಶ್ಯಕತೆ ಇದೆ.

ಟೀವಿಯಲ್ಲಿ ಯಾವುದೋ ಜನಪ್ರಿಯ ರಿಯಾಲಿಟಿ ಶೋ ಒಂದು ಪ್ರದರ್ಶನವಾಗುತ್ತಿದೆ. ಯಾವುದೋ ನಾಟ್ಯದ ಸ್ಪರ್ಧೆ ನಡೆಯುತ್ತಿರುತ್ತದೆ. ಸಹಜವಾಗಿ ಇರುವುದರಿಂದ ವಿಪರೀತವಾಗಿ ಇರುವುದೇ ಇಂದಿನ ಆಧುನಿಕ ನಾಟ್ಯ. ಅದಕ್ಕೆ ಯಾವುದಾದರೂ ಒಂದು  ನಿಯಮ ನಿಬಂಧನೆ ಇದೆ ಎಂದು ಅನ್ನಿಸುವುದಿಲ್ಲ. ನಡುವೆ ಅಲ್ಲಿ ಯಕ್ಷಗಾನದ ಯಾವುದೋ ಒಂದು ತುಣುಕು ಸೇರಿಕೊಳ್ಳುತ್ತದೆ. ಯಕ್ಷಗಾನ ಕಂಡರಿಯದವನು ಅಥವಾ ಬರೀ ಚಿತ್ರದಲ್ಲೇ ಕಂಡವನು ಅದರ ಸಾಧಕ ಬಾಧಕಗಳನ್ನು ನಿರ್ಣಯಿಸಿ ಅಂಕ ಬರೆದು ಬಿಡುತ್ತಾನೆ. ಅಷ್ಟೇ ಯಕ್ಷಗಾನದ ಮಾನ ಮರ್ಯಾದೆ ಹರಾಜಾಯಿತು ಅಂತ ವಿವಾದ ಎದ್ದು ಬಿಡುತ್ತದೆ. ನಾವು ಗೌರವಿಸುವ ಪೂಜಿಸುವ ಯಕ್ಷಗಾನಕ್ಕೆ ಘೋರ ಅವಮಾನವಾದಂತೆ ವಿವಾದ ಹುಟ್ಟಿಕೊಳ್ಳುತ್ತದೆ.  ಈಗಿನ ವಿದ್ಯುತ್ ಮಾಧ್ಯಮಗಳಲ್ಲಿ ವಿವಾದಗಳು ಹುಟ್ಟುವುದು ಮತ್ತದು ಪ್ರಚಾರವಾಗುವುದು ಬಹಳ ಸುಲಭ. ಇಲ್ಲಿ ಯಕ್ಷಗಾನದ ಮಾನ ಹರಾಜಾದ ಮೂಲ ಯಾವುದು ಎಂದು ಪರಿಶೀಲಿಸುತ್ತಾ ಸಾಗಿದರೆ ಅದು ಸುತ್ತಿ ಸುತ್ತಿ ನಮ್ಮಲ್ಲಿಗೆ ಬಂದು ಬಿಡುತ್ತದೆ!

ಕಥಕ್ಕಳಿ ಭರತ ನಾಟ್ಯ  ಮುಂತಾದ ಕಲೆಗಳಿಗೆ  ಯಾಕೆ ಈ ಸನ್ನಿವೇಶ ಎದುರಾಗುವುದಿಲ್ಲ? ಬಹಳ ಸರಳ ಉತ್ತರ. ಅಲ್ಲಿ ಅದಕ್ಕೆ ಕಠಿಣವಾದ ನಿಯಮ ನಿಬಂಧನೆಗಳು ಇವೆ. ಮತ್ತದು ಗೌರವಿಸಲ್ಪಡುತ್ತದೆ.  ಅದು ಪಾಲನೆಯಾಗುವಂತೆ ಸರಕಾರವೂ ಕಾನೂನನ್ನು ರೂಪಿಸಿದೆ.  ಅಂದರೆ ಅಲ್ಲಿ ಆ ಗೌರವವನ್ನು ಉಳಿಸಿ ಬೆಳೆಸಿದ್ದಾರೆ  ಹಾಗಾದುದರಿಂದ , ನಮ್ಮ ವಸ್ತುವಿಗಿರುವ ಗೌರವದ ಭಂಡವಾಳದ ಮೂಲಧನ ಅದು ನಮ್ಮದೇ ಆಗಿರಬೇಕು.

ಯಕ್ಷಗಾನದ ಮಾನ – ಅವಮಾನದ ಬಗ್ಗೆ ಗಂಭೀರವಾಗಿ ಚರ್ಚೆಗಳಾಗುತ್ತವೆ. ನಿಜವಾಗಿಯೂ ಆಗಲೇ ಬೇಕಾದ ವಿಚಾರ. ಆದರೆ ವಿಚಾರಗಳು ವಸ್ತು ನಿಷ್ಥವಾಗಿ ಸತ್ಯ ನಿಷ್ಠವಾಗಿ ಇದ್ದರೆ ಅದನ್ನು ಮೌಲ್ಯಯುತ ಎನ್ನಬಹುದು.  .ಹಲವು ಸಲ ಈಗಿನ ಯಕ್ಷಗಾನ ಪ್ರದರ್ಶನಗಳನ್ನು ಕಾಣುವಾಗ ಮಾನ ಅವಮಾನದ ಬಗ್ಗೆ ಹೇಳಿ ಬಿಡುವ ಅರ್ಹತೆಯನ್ನೇ ಕಳೆದುಕೊಂಡಿದ್ದೇವೆ ಎಂದು ಮನಸ್ಸು ವಿಷಾದಿಸುತ್ತದೆ.  ಇದಕ್ಕೆ  ಸ್ವಂತ ಮನಸ್ಸಿನ ಭಾವನೆಯೇ ಕಾರಣವಾಗಿರಬಹುದೇ?   

ಈಗಿನ ಯಕ್ಷಗಾನ ಪ್ರದರ್ಶನಗಳನ್ನು ಕಾಣುವಾಗ ಕೇಳುವಾಗ ಇದು ಯಾವುದಾದರೂ ಒಂದು ನಿಯಮಕ್ಕೆ ಬದ್ಧವಾಗಿದೆ ಎಂದನಿಸುವುದಿಲ್ಲ. ಹಲವು ವರ್ಷಗಳಿಂದ ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಪರಿಶ್ರಮದ ಪ್ರಜ್ಞೆ ಇದೆ ಎಂದನಿಸುವುದಿಲ್ಲ. ನಮ್ಮೂರಲ್ಲಿ ಹಲವು ದೈವ ಸ್ಥಾನಗಳಿರುತ್ತವೆ. ಅಲ್ಲಿ ನೇಮ ಉತ್ಸವಗಳಾದಾಗ ಭೂತ ಕುಣಿಯುತ್ತದೆ. ಅದರ ಬಗ್ಗೆ ತಿಳಿಯದ ಅನ್ಯ ಮತೀಯವನೂ ಸಹ ಭಯದಿಂದ ಗೌರವದಿಂದ ಒಂದರೆ ಕ್ಷಣವಾದರೂ ನೋಡುತ್ತಾನೆ. ಆತನಿಗೆ ಹಾಗೆ ನೋಡಲೇ ಬೇಕೆಂಬ ಅನಿವಾರ್ಯತೆ ಇಲ್ಲ. ಆದರೂ ಆತನ ಅಂತರಂಗದ ಪ್ರಚೋದನೆ ಆ ಭಯವನ್ನು ಹುಟ್ಟಿಸಿರುತ್ತದೆ. ಯೋಚಿಸೋಣ ಇಂದಿನ ಯಕ್ಷಗಾನ ನೋಡುವಾಗ ಈ ರೀತಿಯ ಪ್ರಚೋದನೆ ಆಗಿ ಭಯ ಗೌರವ ಹುಟ್ಟಿಕೊಳ್ಳುವುದಕ್ಕೆ ಸಾಧ್ಯವೇ?  ಎಲ್ಲವನ್ನೂ ಸಾರಾ ಸಗಟಾಗಿ ತಿರಸ್ಕಾರದಿಂದ ಕಾಣುತ್ತೇವೆ ಎಂದರ್ಥವಲ್ಲ. ನಾವು ಯಾವುದನ್ನು ಗೌರವದಿಂದ ನಮ್ಮದೂ ಎಂಬ ಜತನದಿಂದ ಕಾಣಬೇಕೋ ಅದನ್ನು ನಾವು ಕಾಣುವುದಿಲ್ಲ. ಬದಲಾಗಿ ನಮ್ಮ ಸ್ವಾರ್ಥಕ್ಕೆ ಇನ್ನಾವುದೋ ಅಭಿರುಚಿಯನ್ನು ಹಿಂಬಾಲಿಸಿ ಭವ್ಯ ಪರಂಪರೆಗೆ ಕೊಡಲಿಯನ್ನು ಇಡುತ್ತಿದ್ದೇವೆ. ಇಲ್ಲಿ ಹಳೆಯದು ನಮಗೆ ಯಾವೂದೂ ಅಮೂಲ್ಯವೆನಿಸುವುದಿಲ್ಲ. ಅದಕ್ಕಾಗಿ ಎಲ್ಲವನ್ನು ಮುಲಾಜಿಲ್ಲದೇ  ಕಿತ್ತೆಸೆದು ಬಿಡುತ್ತೇವೆ.  ಅನ್ಯರು ಹಳೆಯದನ್ನು ನೋಡಬೇಕೆಂದು ಬಯಸಿದರೂ ನಮ್ಮಲ್ಲಿ ಅದು ನೀಡುವುದಕ್ಕೆ ಸಾಧ್ಯವಾಗುವುದಿಲ್ಲ ನಮಗೇ ಗೌರವ ಇಲ್ಲದೇ ಇದ್ದಮೇಲೆ ಇನ್ನೊಬ್ಬ ಸಂಭಂಧಿಸದೇ ಇದ್ದವನಿಂದ ಅದನ್ನು ನಿರೀಕ್ಷಿಸುವುದು ಎಷ್ಟು ವಸ್ತು ನಿಷ್ಠತೆಯನ್ನು ಹೊಂದಿದೆ ಎಂದು ಯೋಚಿಸಬೇಕು.

      ಯಕ್ಷಗಾನ ಜನಪ್ರಿಯವಾಗಿದೆ. ಅದು ಇನ್ನೂ ನೂರ್ಕಾಲ ಉಳಿಯುತ್ತದೆ. ಅದಕ್ಕೆ ಅಳಿವಿಲ್ಲ. ಹೀಗೆ ಮನಸ್ಸಿಗೆ ತೋಚಿದಂತೆ, ತೇಪೆ ಹಾಕಿದಂತೆ ಹೇಳುವಲ್ಲಿ ಯಾವ ಆತ್ಮವಿಶ್ವಾಸವನ್ನು ಗುರುತಿಸುವುದಕ್ಕೆ ಸಾಧ್ಯವಾಗುವುದಿಲ್ಲ.  ಯಾಕೆಂದರೆ,  ಯಾವ ರೂಪದಲ್ಲಿ ಉಳಿಯುತ್ತದೆ ಎಂಬುದೇ ಬೃಹತ್ ಪ್ರಶ್ನೆಯಾಗಿ ಉಳಿಯುತ್ತದೆ. ಪ್ರದರ್ಶನದ ಸಂಖ್ಯೆ ಹೆಚ್ಚಿರಬಹುದು. ಯುವಜನತೆ ಹೆಚ್ಚು ಹೆಚ್ಚು ಆಕರ್ಷಿತರಾಗಿರಬಹುದು. ಹಲವಾರು ಆವಿಷ್ಕಾರಗಳು ಆಗಿರಬಹುದು. ಕಲಾವಿದರ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಿ ವರಮಾನ ಹೆಚ್ಚಾಗಿರಬಹುದು.  ಇವುಗಳು ಯಾವುದೂ ನಿಜವಾದ ಯಕ್ಷಗಾನದ ಸಾಕ್ಷ್ಯವನ್ನು ಕಂಡಿಲ್ಲ ಎಂದೇ ಹೇಳಬೇಕು. ಯಕ್ಷಗಾನದ ಹಿಮ್ಮೇಳದಿಂದ ತೊಡಗಿ ಸರ್ವಾಂಗದಲ್ಲೂ ವಿಪರೀತ ಎನ್ನುವಷ್ಟು ಧಾಳಿಯಾಗಿ ಕೇವಲ ಧಾಳಿಯಲ್ಲ ಅದಕ್ಕಿಂತ ಆಚೆಗಿನ ಅತ್ಯಾಚಾರವೇ  ಸಂಭವಿಸಿ ಮೂಲ ಯಕ್ಷಗಾನದ ರೂಪ ಸಂಪೂರ್ಣ ಎನ್ನುವಂತೆ ಬದಲಾಗಿ ಹೋಗಿದೆ. ಖಂಡಿತವಾಗಿಯೂ ಇದನ್ನು ಯಾರೋ ಹೊರಗಿನವರು ಬಂದು ಬದಲಿಸಿದ್ದಲ್ಲ.  ಗಮನಿಸಿ ಬೆಂಗಳೂರಿನಂತಹ ನಗರಗಳಲ್ಲಿ ಯಕ್ಷಗಾನಕ್ಕೆ ಹಲವು ಕಡೆ ಸಭಾಭವನವನ್ನೇ ಕೊಡುವುದಿಲ್ಲ. ಕಾರಣವೇನು? ಇದು ಯಕ್ಷಗಾನಕ್ಕೆ ಅಗುವ ಅವಮಾನ ಎಂದು ಯಾಕೆ ಅನಿಸುವುದಿಲ್ಲವೋ ತಿಳಿಯುವುದಿಲ್ಲ. ಯಕ್ಷಗಾನವೆಂದರೆ ಕಠಿಣವಾದ ನಿಯಮಗಳು ಇಲ್ಲದ ಕಲೆ ಎಂಬ ಭಾವನೆ ಬೆಳೆದು ಬಂದು ಬಿಟ್ಟಿದೆ. ಝಗಮಗಿಸುವ ವೇಷ ಚೆಂಡೆಯ ಪೆಟ್ಟು ರಕ್ಕಸರ ಆರ್ಭಟ ಯಕ್ಷಗಾನವೆಂದರೆ ಇಷ್ಟೇ ಎಂಬ ಧೋರಣೆ ಸಾರ್ವಜನಿಕವಾಗಿ ಇದೆ. ಹೊರಗೆ ಬಂದು ಅಪರಿಚಿತರಲ್ಲಿ ಯಕ್ಷಗಾನದ ಬಗ್ಗೆ ಕೇಳಿ. ಕೇವಲ ದೇವಿ ಮಹಿಷಾಸುರ ಜಗಮಗಿಸುವ ವೇಷ ಭೂಷಣ ಇಷ್ಟೇ ಹೇಳುತ್ತಾರೆ. ಯಾಕೆಂದರೆ ಹೆಚ್ಚಿನದನ್ನು ಕೊಟ್ಟು ತೋರಿಸುವ ಕಟಿಬದ್ಧತೆ ಇಲ್ಲಿ ಇಲ್ಲ.

           ಯಕ್ಷಗಾನಕ್ಕೆ ಕಠಿಣವಾದ ನಿಯಮಗಳನ್ನು ಕಟ್ಟು ನಿಟ್ಟಾಗಿ ಅಲವಡಿಸಬೇಕಿದೆ. ಕಥಕ್ಕಳಿ ಅಥವಾ ಇನ್ನಿತರ ಹಲವು ಪ್ರಾಕಾರಗಳಲ್ಲಿ ಗಮನಿಸಿ, ಅದನ್ನು ಸಂಪೂರ್ಣವಾಗಿ ಕಲಿಯದೇ ರಂಗಸ್ಥಳ ಏರುವುದಕ್ಕೆ ಅವಕಾಶ ಇರುವುದಿಲ್ಲ. ಯಕ್ಷಗಾನದಲ್ಲಿ ಹೆತ್ತವರಿಗೆ ಹೆಗ್ಗಣ ಮುದ್ದು, ಕಲಿಸಿದವರಿಗೆ ನಮ್ಮ ಶಿಷ್ಯರೂ ಎನ್ನುವ ದಾಕ್ಷಿಣ್ಯ.  ಒಂದರಡು ದಿನದ ತರಬೇತಿಯಲ್ಲಿ ವೇಷ ರಂಗಸ್ಥಳ ಪ್ರವೇಶಿಸುತ್ತದೆ.  ಯಕ್ಷಗಾನ ಎಂದರೆ ಇಷ್ಟು ಸುಲಭವಾ ಅಂತ ಭಾವನೆ ಬಂದು ತಾತ್ಸಾರವಾದರೆ ಅದಕ್ಕೆ ಯಾರು ಹೊಣೆ? ಒಂದೆರಡು ಪದಗಳನ್ನು ಕಲಿತ ಕೂಡಲೇ ಭಾಗವತನಾಗಿ ರಂಗವೇರುವ ತವಕ, ಒಂದೆರಡು ತಾಳ ಕಲಿತ ಕೂಡಲೇ ಮದ್ದಲೆಗಾರನಾಗಿಬಿಡುವ ಆತುರ ಇಲ್ಲಿ ಭವ್ಯ ಯಕ್ಷಗಾನದ ಸ್ಥಾನಮಾನವನ್ನು ಯಾವ ಮನಸ್ಸೂ ಯೋಚಿಸುವುದಿಲ್ಲ. ಮುಂದಿನ ತಲೆಮಾರಿಗೆ ಯಕ್ಷಗಾನವೆಂದರೆ ಸಂಪೂರ್ಣ ದಿಕ್ಕು ತಪ್ಪಿಸುವುದೇ ಆಗಿದೆ. ಒಂದೆರಡು ರಾಗ ತಾಳಗಳು ಬಿಟ್ಟರೆ ಇಂದಿನ ಪಳಗಿದ ಭಾಗವತರಿಗೇ ಸಂಪೂರ್ಣ ಅರಿವಿಲ್ಲ.  ಯಾಕೆಂದರೆ ಅದರ ಬಗ್ಗೆ ಕೇಳುವಷ್ಟೂ ಪ್ರೇಕ್ಷಕನೂ ಸಮರ್ಥನಾಗಿಲ್ಲ.


ಯಕ್ಷಗಾನದಲ್ಲಿ ಕಠಿಣ ನಿಯಮಾವಳಿಗಳು ಆಚರಣೆಯಲ್ಲಿ ತರಬೇಕು.

ಸಂಪೂರ್ಣವಾಗಿ ತರಬೇತಿ ಗಳಿಸಿದ ನಂತರವೇ ರಂಗಸ್ಥಳವನ್ನು ಏರುವುದಕ್ಕೆ ಆಸ್ಪದವಿರಬೇಕು. ಇಂತಹ ವೇಷಕ್ಕೆ ಇಷ್ಟು ಕಲಿಕೆ ಅಭ್ಯಾಸ ಅನಿವಾರ್ಯ ಎಂಬ ಕಠಿಣ ನಿಯಮ ಜಾರಿಗೆ ಬರಬೇಕು. ಇಷ್ಟಕ್ಕೆ ಇಷ್ಟು ಸಾಕು ಒಂದು ದಿನ ಅಲ್ವಾ ಎಂಬ ಉಡಾಫೆ ಧೋರಣೆಯನ್ನು ಸಂಪೂರ್ಣವಾಗಿ ದೂರವಿಡಬೇಕು.

ರಂಗಸ್ಥಳದ ಪರಿಕರಗಳು ಸಿಂಹಾಸನ..ಇತ್ಯಾದಿಗಳು ಇಲ್ಲದೆ ಏನೋ ಒಂದು ಹೊಂದಿಸಿ ಸುಧಾರಿಸುವಂತೆ ಇರಬಾರದು. ಹೇಗಿದ್ದರೂ ಆಟ ಆಡಬಹುದು ಎಂಬ ತಾತ್ಸಾರಕ್ಕೆ ಇಂದು ಯಕ್ಷಗಾನ ಒಳಗಾಗಿದೆ. ಯಕ್ಷಗಾನದ ಪರಂಪರೆಯ ವಿಚಾರಗಳು ಖಡ್ಡಾಯವಾಗಿ ಪಾಲಿಸುವಂತಿರಬೇಕು.

ಅಂದು ಭಾಗವಹಿಸದ ಅನಧಿಕೃತರು ಚೌಕಿಗೆ ಬಾರದಂತಿರಬೇಕು. ಸಾರ್ವಜನಿಕವಾಗಿ ಪೋಟೋಕ್ಕೆ ಪೋಸು ಕೊಡುವುದನ್ನು ಕಲಾವಿದರು ನಿಲ್ಲಿಸಬೇಕು. ತಮ್ಮ ವೇಷದ ಬಗ್ಗೆ ತಾವೆ ಗಂಭೀರವಾಗಬೇಕು. ತಮ್ಮ ವೇಷ ಎಲ್ಲಿ ಬೇಕೆಂದಲ್ಲಿ ತೆರೆದುಕೊಳ್ಳುವ ಮಾಧ್ಯಮಗಳು ಇರುವಾಗ ತಮ್ಮ ವೇಷದ ಬಗ್ಗೆ ತುಸುವಾದರೂ ಸ್ವಾಭಿಮಾನ ಹೊಂದಬೇಕು. ವೇಷಗಳು ರಂಗಸ್ಥಳದಲ್ಲಿ ಅಲ್ಲದೇ ಬೇರೆ ಕಡೆ ಕಾಣುವಂತಹ ಪೋಟೊಗಳೂ ಸಹ ಸಿಗಬಾರದು. ದೇವರ ಮೂರ್ತಿ ದೇವಾಲಯದಲ್ಲಿದ್ದರೆ ಮಾತ್ರ ಅದಕ್ಕೆ ಗೌರವ. ಗಮನಿಸಿ ಬೇರೆ ಕಲೆಯ ಹಲವು ಕಲಾವಿದರು ತಮ್ಮ ಕಾರ್ಯಕ್ರಮದ ವಿಡಿಯೋ ಆಡಿಯೊವನ್ನೂ ನಿಷೇಧಿಸುತ್ತಾರೆ. ಅದು ಸುಲಭದಲ್ಲಿ ಕೈಗೆ ಸಿಗುವ ತುತ್ತಾಗಬಾರದು ಎಂಬುದೇ ಆಶಯ.

ಒಂದು ಯಕ್ಷಗಾನ ಪ್ರದರ್ಶನಕ್ಕೆ ಕನಿಷ್ಠ ಇಷ್ಟು ಸಮಯ  ಇರಲೇಬೇಕೆಂಬ ನಿಯ ಅತೀ ಅಗತ್ಯ. ಮಾತ್ರವಲ್ಲ ಸಮಯದ ಪರಿಪಾಲನೆ ಅತೀ ಮುಖ್ಯ ನಿಗದಿತ ಸಮಯದಲ್ಲಿ ತೊಡಗಿ ನಿಗದಿತ ಸಮಯದಲ್ಲಿ ಸಂಪನ್ನ ಗೊಳ್ಳಬೇಕು.  ಸಮಯಾವಕಾಶ ಮೀರಿ ಸಭಾಭವನದವರು ಹಸ್ತಕ್ಷೇಪ ಮಾಡಿ ಪ್ರದರ್ಶನ ಮೊಟಕು ಗೊಳ್ಳಿಸುವಂತಹ ಪ್ರಮೇಯ ಒದಗಬಾರದು. ಉತ್ತಮ ಸಭಾಭವನ ಮತ್ತದರ ಸಹಕಾರವು ಯಕ್ಷಗಾನದ ಗೌರವವನ್ನು ಹೆಚ್ಚಿಸುತ್ತದೆ. ಯಾರಿಗೋ ಒಬ್ಬರಿಗೆ  ಆರ್ಥಿಕ ನೆಲೆಗಟ್ಟಿನ ಅವಶ್ಯಕತೆಯನ್ನು ಇಲ್ಲಿ ಪರಿಹರಿಸುವ ಕ್ಷೇತ್ರವಾಗಬಾರದು.

     ಇವುಗಳೆಲ್ಲ ಮೇಲ್ನೋಟಕ್ಕೆ ಕಾಣುವ ನಿಯಮಗಳು. ಇನ್ನು ತಜ್ಞ ವಿದ್ವಾಂಸರಲ್ಲಿ ಕೇಳಿದರೆ ಯಕ್ಷಗಾನ ಅಮೂಲಾಗ್ರವಾಗಿ ಬದಲಾಗಬೇಕೆಂದು ಹೇಳಬಹುದು. ಯಾಕೆಂದರೆ ಪರಂಪರೆಯ ಯಕ್ಷಗಾನದಲ್ಲಿ ಯಕ್ಷಗಾನದ ಅನಿವಾರ್ಯ ಅಂಶಗಳೇ ಮಾಯವಾಗಿ ಯಕ್ಷಗಾನದ ನಿಜ ಸ್ವರೂಪವೇ ಬದಲಾಗಿ ವಿಕಾರವಾಗಿದೆ. ಅದು ಮೊದಲು ಬದಲಾಗಬೇಕಿದೆ. ಬೇರೆ ಕಲೆಗಳ ಆಮದನ್ನು ಅನುಕರಣೆಯನ್ನು ಸಂಫೂರ್ಣವಾಗಿ ನಿಷೇಧಿಸಬೇಕು. ಯಾಕೆಂದರೆ ಯಕ್ಷಗಾನದ ಸಂಪೂರ್ಣ ವಿಚಾರಗಳನ್ನೇ ಬಳಕೆಗೆ ತರಲಾಗದೇ ಇರುವಾಗ ಇನ್ನೊಂದು ಕಲೆಯನ್ನು ಇಲ್ಲಿ ಅನುಕರಣೆ ಮಾಡಿ ಆ ಕಲೆಯ ಮಾನವನ್ನು ಕಳೆಯುವಂತಿರಬಾರದು. ಭರತನಾಟ್ಯವೋ ಶಾಸ್ತ್ರೀಯ ಸಂಗೀತವೋ ಹೀಗೆ ಯಾವುದೋ ಕಲೆಯ ಯಾವುದೋ ಭಾಗವನ್ನು ಇಲ್ಲಿ ಬಳಕೆ ತಂದಲ್ಲಿ ಆಲೆಯ ಅಧಿಕೃತರು ತಮ್ಮ ಕಲೆಗೆ ಅವಮಾನವಾಗಿದೆ ಎಂದು ಹೋರಾಟಕ್ಕೆ ಇಳಿದರೆ ಏನಾಗಬಹುದು? ಯಕ್ಷಗಾನ ಸ್ವಯಂ ಪರಿಪೂರ್ಣ ಕಲೆ. ಇದಕ್ಕೆ ಅವಶ್ಯವಿರುವದ್ದು ಇಲ್ಲಿ  ಧಾರಾಳವಾಗಿ ಲಭ್ಯವಿದೆ. ಅದರ ಸಂಪನ್ಮೂಲವನ್ನು ಉಳಿಸಿ ಗೌರವಿಸಬೇಕೇ ಹೊರತು ಮತ್ತೊಂದು ಕಲೆಯಿಂದ ಇಲ್ಲಿಗೆ ಹೊಂದಿಕೆ ಯಾಗದೇ ಇದ್ದುದನ್ನು ಎರವಲು ತರುವುದಲ್ಲ.

     ಮೇಲೆ ಹೇಳಿದ ವಿಚಾರಗಳು ನಿಯಮಗಳು ಬಾಲಿಷವಾಗಿ ಕಾಣಬಹುದು. ಅದನ್ನು ಆಚರಣೆಗೆ ತರುವುದಕ್ಕೆ ಮನ್ನಿಸುವುದಕ್ಕೆ ಆಸಾಧ್ಯ ಎಂದನಿಸಬಹುದು. ಇವುಗಳೆಲ್ಲ ಸಾಧ್ಯವಿಲ್ಲ ಎಂದಾದರೆ ಯಕ್ಷಗಾನಕ್ಕೆ ಅವಮಾನವಾಗಿದೆ ಎಂದು ಹುಯಿಲೆಬ್ಬಿಸುವುದರಲ್ಲಿ ಖಂಡಿತವಾಗಿ ಅರ್ಥವಿಲ್ಲ. ಯಕ್ಷಗಾನಕ್ಕೆ ಅವಮಾನವಾಗಿದೆ ಎಂಬ ನಮ್ಮ ಧ್ವನಿಯಲ್ಲಿ ಆತ್ಮ ವಿಶ್ವಾಸದ ನಿಶ್ವಾಸ ಇರಬೇಕು. ಈಗ ಯಕ್ಷಗಾನದ ಬಗ್ಗೆ ತಿಳಿಯದವರು ಅವಮಾನ ಮಾಡುತ್ತಿದ್ದಾರೆ. ಮುಂದೊಂದು ದಿನ ಯಕ್ಷಗಾನದ ಅಭಿಮಾನಿ ಪ್ರೇಕ್ಷಕನೇ ಮೈಕ್ ಕಿತ್ತೆಸೆದರೆ ಆಶ್ಚರ್ಯವಿಲ್ಲ. ಯಕ್ಷಗಾನ ಲೋಕ ಸ್ವಯಂ ಗೌರವ ಪ್ರಾಪ್ತಿಸುವಲ್ಲಿ ಹೆಜ್ಜೆಇಡಲಿ ಎಂಬ ಆಶಯ.



Friday, January 4, 2019

ಕರದೊಳಗಿನ ವಿಮರ್ಶೆ


           
ಅಬ್ಬರದ ರಕ್ಕಸನ ವೇಷ ಕೈಯಲ್ಲಿ ಖಡ್ಗ ಹಿಡಿದು ರಂಗ ಪ್ರವೇಶ ಮಾಡುತ್ತದೆ. ತೋಳುದ್ದದ ಖಡ್ಗ ಆ ಬೆಳಕಿನಲ್ಲಿ ಮಿರ ಮಿರ ಹೊಳೆಯುತ್ತದೆ. ರಕ್ಕಸನ ವೇಷಕ್ಕೆ ಮತ್ತಷ್ಟು ಭೀಕರತೆಯನ್ನು ಆ ಖಡ್ಗ ತಂದುಕೊಡುತ್ತದೆ. ಅಮ್ಮನ ಮಡಿಲಲ್ಲಿ ಕುಳಿತ ಕಂದಮ್ಮ ಅಪ್ಪನಲ್ಲಿ ಕೇಳುತ್ತದೆ.   “ ಆ ಕತ್ತಿ ತಾಗುತ್ತದ? “  ಕಂದಮ್ಮನ ಬೆರಗು ಕಣ್ಣಿನ ಪ್ರಶ್ನೆಗೆ ಅಪ್ಪ ಕಿರು ನಗು ನಗುತ್ತಾ ಹೇಳುತ್ತಾನೆ.,  “ಆ ಕತ್ತಿ ಹರಿತವಿಲ್ಲ. ಅದು ಕೇವಲ ಕಾಣುವುದಕ್ಕೆ ಮಾತ್ರ.”  ಅದಾಗಲೇ ದೇವತೆಯೊಂದಿಗೆ ರಕ್ಕಸ ಹೋರಾಡುತ್ತಾನೆ. ಖಡ್ಗ ಬೀಸುವುದು ಮಾತ್ರ. ಆದರೆ ದೇವತೆಗೆ ಆ ಕತ್ತಿ ತಾಗುವುದೇ ಇಲ್ಲ. ಆಗ ಮಗುವಿಗೆ ಅರ್ಥವಾಗುತ್ತದೆ ಅದು ಹೊಡೆದಂತೆ ಮಾಡಿ ಸತ್ತಂತೆ ಮಾಡುವ ಕೇವಲ ಅಭಿನಯ ಮಾತ್ರ. ಇಲ್ಲಿ ಕತ್ತಿಯನ್ನು ಅಥವಾ ಖಡ್ಗವನ್ನು ಹೇಗೆ ಬೇಕಾದರೂ ಕಂಡು ಸ್ವೀಕರಿಸುವ ಮನೋಭಾವ ಇರಬೇಕು. ಅದು ನಿಜವಾದ ಪ್ರೇಕ್ಷಕ ಧರ್ಮ. ಮಾತ್ರವಲ್ಲ ರಂಗ ತತ್ವವೂ ಹೌದು.  ಖಡ್ಗವನ್ನು ಹೇಗೆ ಬೇಕಾದರೆ ಹಾಗೆ ಪ್ರೇಕ್ಷಕ ಸ್ವೀಕರಿಸುತ್ತಾನೆ ಎಂಬ ವಿಶ್ವಾಸದಲ್ಲೇ ರಕ್ಕಸ ಪಾತ್ರಧಾರಿ ಉದ್ದ ಖಡ್ಗದ ಆಕೃತಿಯನ್ನಷ್ಟೇ ತಂದಿರುತ್ತಾನೆ. ನಿಜವಾದ ಖಡ್ಗವನ್ನಲ್ಲ.  ಅದು ಕೇವಲ ಭ್ರಮೆಯನ್ನು ಸೃಷ್ಟಿಸಲು.
            ವಿಚಿತ್ರವೆಂದರೆ ಇಲ್ಲಿ ಭ್ರಮೆಯನ್ನು ಸೃಷ್ಟಿಸುವ ಪಾತ್ರಧಾರಿ ತಾನು ಭ್ರಮೆಯಲ್ಲಿ ಲುಪ್ತನಾಗಿ ಮುಳುಗೇಳುವುದು ಸ್ವತಃ ಅವನಿಗೇ ಅರಿವಿರುವುದಿಲ್ಲ.
            ಅಂದರೆ, ಒಂದು ಕತ್ತಿಯೋ ಖಡ್ಗವೋ ಅಥವಾ ಇನ್ನಾವುದೋ ವಸ್ತುವಿದೆ. ಅದನ್ನು ಮನಸ್ಸು ಒಪ್ಪಿಕೊಂಡು ಸ್ವೀಕರಿಸಬೇಕು. ಕತ್ತಿಯ ಉಪಯೋಗದತ್ತ ಒಂದು ಸಲ ದೃಷ್ಟಿ ಹರಿಸಿದರೆ, ಅದರಲ್ಲಿ ಹಣ್ಣುತರಕಾರಿ ತುರಿದು ತುಂಡು ಮಾಡಿ ತಿನ್ನಬಹುದು. ಅಥವಾ ಅದೇ ಕತ್ತಿಯಲ್ಲಿ ಮತ್ತೊಬ್ಬನ ಕೊರಳನ್ನು ತರಿದು ಹೊಟ್ಟೆಯನ್ನು ಬಗೆಯಲೂ ಉಪಯೋಗಿಸಿಕೊಳ್ಳಬಹುದು. ಅದು ಮನೋಭಾವಕ್ಕೆ ಅಥವಾ ಕಾಣುವ ದೃಷ್ಟಿಕೋನಕ್ಕೆ ಸಂಬಂಧಿಸಿರುತ್ತದೆ. ಜಗತ್ತಿನ ಹಲವು ವಿಚಾರಗಳೂ ವಸ್ತುಗಳೂ ಅಷ್ಟೇ,  ನಾವು ಹೇಗೆ ಸ್ವೀಕರಿಸುತ್ತೇವೋ ಅದರ ಮೇಲೆ ಆ ವಸ್ತುಗಳ ಸ್ವಭಾವವನ್ನು ಅಳೆಯಲಾಗುತ್ತದೆ.  ನಮ್ಮ ಸ್ವಭಾವಗುಣಗಳನ್ನು ವಸ್ತುವಿನಲ್ಲಿ ಆರೋಪಿಸಲಾಗುತ್ತದೆ. ಒಬ್ಬ ಕೃಷಿಕ ಕೈಯಲ್ಲಿರುವ ಕತ್ತಿ ಕೊಲೆಗಡುಕನ ಕೈಗೆ ಹೋದಾಗ ಕತ್ತಿಯ ಸ್ವಭಾವವೂ ಬದಲಾಗಿಬಿಡುತ್ತದೆ. ರಂಗದಲ್ಲಿ  ರಕ್ಕಸನ ಕೈಯಲ್ಲಿರುವ ಅದೇ ಕತ್ತಿ,  ದೇವಿಯ ಕೈಯ್ಯಲ್ಲಿ ಬಂದಾಗ ಅದನ್ನು ನೋಡುವ ದೃಷ್ಟಿಯೇ ಬದಲಾಗಿಬಿಡುತ್ತದೆ. ಕಲಾವಿದನ ಸೃಷ್ಟಿಯೇ ದೃಷ್ಟಿಯನ್ನು ಬದಲಿಸುತ್ತದೆ.   ಕಲಾವಿದ ಭ್ರಮೆಯನ್ನು  ಸೃಷ್ಟಿಸುತ್ತಾನೆ. ಮತ್ತು ಪ್ರೇಕ್ಷಕ ಭ್ರಮಾಧೀನನಾಗುತ್ತಾನೆ. ಇದು ತತ್ವ.
            ಖಡ್ಗವನ್ನು ಹಿಡಿದು ಬರುವ ಪಾತ್ರಧಾರಿ ತನ್ನ ಪ್ರಕಟನೆಯಿಂದ ಪ್ರೇಕ್ಷಕ ಭ್ರಮೆಗೊಳ್ಳಬೇಕು ಎಂದು ಬಯಸುತ್ತಾನೆ. ಆದರೆ ವಾಸ್ತವದಲ್ಲಿ  ಪ್ರೇಕ್ಷಕ ವಸ್ತುಸ್ಥಿತಿ ತಿಳಿಯುತ್ತಾನೆ. ಭ್ರಮೆಗೊಂಡಂತೆ ತೋರುತ್ತಾನೆ. ಒಂದರ್ಥದಲ್ಲಿ ಭ್ರಮೆಗೊಳಗಾದಂತೆ ಅಭಿನಯಿಸುತ್ತಾನೆ. ರಕ್ಕಸನ ಅಭಿನಯಕ್ಕೆ ವ್ಯತಿರಿಕ್ತವಾಗಿ ಪ್ರೇಕ್ಷಕ ಅಭಿನಯಿಸುವುದು ಒಂದು ರೀತಿಯಲ್ಲಿ ವಿಚಿತ್ರವಾಗಿ ಅನ್ನಿಸಬಹುದು.  ವಸ್ತು ಸ್ಥಿತಿಯ ವಾಸ್ತವದ ಸತ್ಯ ಇದು. ಈಗ ಒಂದು ಖಡ್ಗವನ್ನು ನಮಗೆ ಬೇಕಾದಂತೆ ಸ್ವೀಕರಿಸುವ ಅಥವಾ ಹಾಗೆ ಬಯಸುವ ಈ ರಂಗ  ಇಲ್ಲಿ  ಸೃಷ್ಟಿಯಾಗುವ ಅನಿಸಿಕೆಗಳನ್ನು ಆ ರೀತಿಯಲ್ಲಿ ಸ್ವೀಕರಿಸುವುದಿಲ್ಲ. ಅನಿಸಿಕೆ ಅಭಿಪ್ರಾಯ ವಿಮರ್ಶೆ ಇವುಗಳ ವೆತ್ಯಾಸ ತಿಳಿಯುವುದು ಬಿಡಿ ಅದನ್ನು ಹೇಗೆ ಸ್ವೀಕರಿಸಬೇಕು ಎಂಬ ಪರಿಜ್ಞಾನವೂ ಇರುವುದಿಲ್ಲ. ಅಭಿಪ್ರಾಯಗಳು ಪರವಾಗಿ ಬಂದಾಗ ಅವು ಸ್ವೀಕೃತವಾಗುತ್ತದೆ.
            ಅನಿಸಿಕೆ, ಅಭಿಪ್ರಾಯ ಮತ್ತು ವಿಮರ್ಶೆ ಇವುಗಳೆಲ್ಲ ವೆತ್ಯಸ್ತವಾದ ವಿಷಯಗಳು. ನಮಗೆ ತಿಳಿಯದ ವಿಚಾರಗಳಲ್ಲೂ ನಮ್ಮ ಅನಿಸಿಕೆ ವ್ಯಕ್ತವಾಗಬಹುದು. ಅದು ಭ್ರಮೆಗೊಳ್ಳುವ ಮನಸ್ಸಿನ ಪ್ರತಿಕ್ರಿಯೆ. ಅಭಿಪ್ರಾಯವೂ ವಸ್ತುವಿನ ಬಗ್ಗೆ ತಿಳಿದುಕೊಂಡು ವ್ಯಕ್ತವಾಗುವ ಪ್ರತಿಕ್ರಿಯೆ. ಆದರೆ ವಿಮರ್ಶೆ ಎಂದರೆ ಆ ವಸ್ತುವಿನ ಗಾತ್ರ ಗುಣಸ್ವಭಾವನ್ನು ತಿಳಿದು ಸರಿ ತಪ್ಪನ್ನು ಸರಿಯಾಗಿ ಅಳೆದು ತೂಗಿಸಿಕೊಳ್ಳುತ್ತದೆ. ಇವುಗಳ ವೆತ್ಯಾಸವನ್ನೆ ಮೂಲತಃ ತಿಳಿಯದ ಕಲಾವಿದ ಎಲ್ಲದಕ್ಕೂ ಒಂದೇ ಬಣ್ಣವನ್ನು ಬಳಿದು ಅದನ್ನೇ ಕಾಣುವುದು ಮಾತ್ರವಲ್ಲ ಅದನ್ನು ಸ್ವೀಕರಿಸುವ ರೀತಿಯನ್ನೂ ತಿಳಿದಿರುವುದಿಲ್ಲ. ಎಲ್ಲವನ್ನೂ ವಿಮರ್ಷೆಯ ಒಂದೇ ಬುಟ್ಟಿಗೆ  ಎಸೆದು ಬಿಡುವುದು ಸೂಕ್ತವಲ್ಲ. ಅನಿಸಿಕೆ ಅಭಿಪ್ರಾಯಗಳು ಎಂದಿಗೂ ಪರಿಪಕ್ವವಾಗುವುದಿಲ್ಲ. ಹಾಗಾಗಿಯೆ ನನ್ನ ಲೇಖನಗಳು ಕೇವಲ ಅನಿಸಿಕೆಗಳೆಂದೇ ನನ್ನ ಪ್ರತಿಪಾದನೆ. ಅದು ವಿಮರ್ಷೆಯ ಮಟ್ಟಕ್ಕೆ ಏರುವುದೂ ಇಲ್ಲ. ಅವುಗಳನ್ನು ಏರಿಸುವ ನಿರೀಕ್ಷೆಯೂ ಇಲ್ಲ. ಅವುಗಳು ಕೇವಲ ಅನಿಸಿಕೆಗಳು. ಸರಿಯೋ ತಪ್ಪೋ ಸ್ವೀಕರಿಸುವ ರೀತಿಯಲ್ಲಿ ನಿರ್ಧರಿತವಾಗುತ್ತದೆ.
            ಯಕ್ಷಗಾನ, ನಾಟಕದಂತಹ ಸಮೂಹ ಕಲೆಯನ್ನು ಪ್ರೇಕ್ಷಕ ಕಾಣುತ್ತಾನೆ. ಆತ ಅನಿಸಿಕೆಯನ್ನು ಹೊರ ಹಾಕುತ್ತಾನೆ ಎಂದಾದರೆ ಅದರಿಂದ ಅವನ ಮನಸ್ಸು ಪ್ರಚೋದಿಸಲ್ಪಟ್ಟಿದೆ ಎಂದರ್ಥ. ಅದರ ಗುಣಾವಗುಣಗಳನ್ನು ಆನಂತರ ಗಮನಿಸಬೇಕಾಗುತ್ತದೆ. ನೋಡುವ ಎಷ್ಟೊ ಮಂದಿ ಪ್ರೇಕ್ಷಕ ಶೂನ್ಯ ಪ್ರತಿಕ್ರಿಯೆಯಿಂದ ಹೊರಗುಳಿದರೆ ಆ ಪ್ರದರ್ಶನ ಪ್ರಭಾವವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದೇ ತಿಳಿಯಬೇಕು.  ’ಪ್ರೇಕ್ಷಕ ಪ್ರಚೋದನೆ ’   ಅದು  ಕಲೆಯ ಉಸಿರನ್ನು ಹೇಳುತ್ತದೆ.
 ಒಂದು ತಂಡದ ಯಾವುದೋ ಒಬ್ಬ ಕಲಾವಿದ ಒಂದು ಸಣ್ಣ ಪಾತ್ರವನ್ನು ನಿರ್ವಹಿಸುತ್ತಾನೆ. ಯಕ್ಷಗಾನವೆಂದರೆ ಹಾಗೆ ಬಂದು ಹೀಗೆ ಹೋಗುವ ದೇವೇಂದ್ರನ ಬಲ ವೇಷವೇ ಇರಲಿ, ಆ ವೇಷದ ಬಗ್ಗೆ ಒಬ್ಬ ಪ್ರತಿಕ್ರಿಯಿಸುತ್ತಾನೆ ಎಂದಾದರೆ ಅದು ಅವನ ಮನಸ್ಸಿಗೆ ತಟ್ಟಿದೆ ಎಂದರ್ಥ. ಅವನ ಗಮನವನ್ನು ಆ ಮಟ್ಟಿಗಾದರೂ ಅದು ಸೆಳೆಯುತ್ತದೆ ಎಂದಾದರೆ ಆ ಪಾತ್ರ ಗಮನಾರ್ಹ ಎಂದಾಗುತ್ತದೆ. ಪ್ರೇಕ್ಷಕನ ಅಭಿಪ್ರಾಯವೋ ಅನಿಸಿಕೆಯೋ ಅಥವಾ ವಿ ವಿಮರ್ಷೆಯೋ ಏನೇ ಆಗಲಿ ಒಂದು ವೇಳೆ ಆ ಕಲಾವಿದನ ಪಾತ್ರ ನಿರ್ವಹಣೆಯಲ್ಲಿನ  ಆಕ್ಷೇಪವೇ ಆಗಿರಲಿ, ಮೊದಲು ಆತ ಏನು ಹೇಳಿದ್ದಾನೆ ಎನ್ನುವುದಕ್ಕಿಂತಲೂ ಆತ ತನ್ನ ಪಾತ್ರವನ್ನು ನೋಡಿದನಲ್ಲ ಎಂದು ಕಲಾವಿದ ತಿಳಿದುಕೊಳ್ಳಬೇಕು. ಆ ಮಟ್ಟಿಗೆ ಪ್ರೇಕ್ಷಕನಿಗೆ ಆತ ಕೃತಜ್ಞನಾಗಿರಬೇಕು. ಗುರುವಿನಿಂದ ನಂತರ ನನ್ನ ತಪ್ಪನ್ನು ಕಂಡುಕೊಂಡ ಪ್ರೇಕ್ಷಕನ ಧ್ವನಿಗೆ ಕಿವಿಯಾಗಬೇಕು. ಕಲಾವಿದನಿಗಾಗಿ ಒಂದಷ್ಟು ಹೊತ್ತು ತನ್ನ ಪಂಚೇಂದ್ರಿಯವನ್ನೂ ಒತ್ತೆ ಇಡುವ ಪ್ರೇಕ್ಷಕನ ಧ್ವನಿಗೆ ಒಂದಷ್ಟು ಹೊತ್ತು ಕಿವಿಯನ್ನಾದರೂ ಕೊಡುವುದಕ್ಕೆ ಮನಸ್ಸು ಮಾಡಬೇಕು.  ಅದು ಬಿಟ್ಟು ಆತ ಹೇಳಿದ ಹಿನ್ನೆಲೆಯನ್ನು ವಿಮರ್ಶಿಸಿ ನೀವಾಳಿಸುವುದಲ್ಲ. ಅಭಿಪ್ರಾಯದ ಸತ್ಯಾಸತ್ಯತೆಯನ್ನು ತಿಳಿಯಬೇಕು. ಈ ವೈಶಾಲ್ಯತೆ ಇಲ್ಲವಾದಲ್ಲಿ ಆತ ಕಲೆಯ ಸಾರ್ವಜನಿಕ ವಿನಿಮಯಕ್ಕೆ ತಕ್ಕವನಲ್ಲ ಎಂದೇ ಅರ್ಥ.  ಆದರೆ ಇಂದು ಈ ಮನೋಭಾವ ಬಹುತೇಕ ಇಲ್ಲವೇ ಇಲ್ಲ ಎಂಬುದು ವಿಷಾದನೀಯ. ಪ್ರೇಕ್ಷಕನ ಸ್ಪಂದನೆಗೆ ಕಲಾವಿದ ಕಾಯುತ್ತಾನೆ. ಅದು ನಿರೀಕ್ಷಿತವಾಗಿ ಅಪೇಕ್ಷಿತವಾಗಿ ಇಲ್ಲವಾದರೆ ರಕ್ಕಸ ನಿಜವಾಗಿಯೂ ರಕ್ಕಸನಾಗುವುದನ್ನು ಕಾಣಬೇಕಾಗುತ್ತದೆ. ಹಾಗಾಗಿಯೆ ಕತ್ತಿಯನ್ನು ಹೇಗೆ ಬೇಕಾದರೂ ಉಪಯೋಗಿಸಬಹುದು. ಅದು ಉಪಯೋಗಿಸುವವನ ಮನೋಭಾವದಲ್ಲಿದೆ.  ವಿಮರ್ಷೆಯನ್ನೂ ಕತ್ತಿಯ ಅಲಗಿಗೆ ಹೋಲಿಸುವುದು ಇದಕ್ಕೆ ಆಗಿರಬೇಕು. ಮುಖ್ಯವಾಗಿ ವಿಮರ್ಶೆ ಅಭಿಪ್ರಾಯಗಳನ್ನು ಅದರ ವಸ್ತುಸ್ಥಿತಿಯನ್ನು ನಂಬಿಕೊಂಡು ಸ್ವೀಕರಿಸಬೇಕು. ವಿಮರ್ಶೆಯ ಹರಿತವೆಂಬುದು ಕಲಾವಿದನ ಕಲೆಗೆ ರೂಪವನ್ನು ಕೊಡುವಲ್ಲಿ ಸಹಕರಿಸುವಂತಾಗಬೇಕು. ಇಲ್ಲವೇ ಕಲಾವಿದ ಅದಕ್ಕಾಗಿ ಅದನ್ನು ಉಪಯೋಗಿಸುವ ಮನೋಭಾವ ತೋರಬೇಕು.

ಭೋಜನವನ್ನು ಮಾಡಿ ಬಡಿಸುವ ಅಡುಗೆ ಭಟ್ಟನಿಗೆ ಆತ ಮಾಡಿದ ಅತೀ ಸಣ್ಣ ಖಾದ್ಯವಾದರೂ ಸರಿ ಅದರ ಬಗ್ಗೆ ಪ್ರತಿಕ್ರಿಯೆ ಬರುವಾಗ ಆತ ಕೃತಾರ್ಥನಾಗುತ್ತಾನೆ. ಹಾಗೆ ಬಂದು ಹೀಗೆ ತಿಂದು ಹೋಗುವವರಿಗಿಂತ ಅವನ ಗಮನ ಹಾಗೆ ಹೇಳಿದವನ ಮೇಲೆ ನೆಟ್ಟಿರುತ್ತದೆ.  ತನ್ನ ಲಾಭವನ್ನು ಮಾತ್ರ ಕಾಣುವ ಅಡುಗೆಯವನು ಯಾವ ಪ್ರತಿಕ್ರಿಯೆಯನ್ನು ಗೌರವಿಸುವುದಿಲ್ಲ. ಆತನ ದೃಷ್ಟಿ ಮಾಡುವ ವೃತ್ತಿಗಿಂತಲೂ ಗಳಿಸುವ ವಿತ್ತದಲ್ಲೇ  ನೆಟ್ಟಿರುತ್ತದೆ. ಇದು ವ್ಯಾವಹಾರಿಕ ಚಿತ್ತ. ಆದರೆ  ಸತ್ಯದ ನೆಲೆಯನ್ನು ತಿಳಿಯದ ವ್ಯವಹಾರ ಶಾಶ್ವತವಲ್ಲ.
ಅಂತರಂಗ ಬಹಿರಂಗ ಶುದ್ದವಾಗಿರುವವರು ಸತ್ಯಕ್ಕೆ ಎಂದೂ ಹೆದರುವುದಿಲ್ಲ. ಯಾಕೆಂದರೆ ಅಂತರಂಗದ ಆತನದ್ದಾದ ಸತ್ಯಕ್ಕೆ ಆತ ಮೊದಲು ಗೌರವಿಸುತ್ತಾನೆ. ಆತ್ಮ ಸ್ಥೈರ್ಯ ಎಂದರೆ ನಿರ್ಮಲವಾದ ಮತ್ತು ನಿರ್ಭಯವಾದ ಅಂತರಂಗ. ಅಂತರಂಗದಲ್ಲೂ ಬಹಿರಂಗದಲ್ಲೂ ವೆತ್ಯಾಸಗಳಿದ್ದರೆ ಬಹಿರಂಗದ ಸತ್ಯವನ್ನು ಅಂತರಂಗ ಒಪ್ಪಿಕೊಳ್ಳುವುದಿಲ್ಲ. ವಿಮರ್ಷೆ ಅಭಿಪ್ರಾಯ ವ್ಯತಿರಿಕ್ತವಾಗಿ ಎದುರಾದಾಗ ಎರಡೂ ಶುದ್ದವಾಗಿದ್ದರೆ ಅದನ್ನು ಉದಾರತೆಯಿಂದಲೇ ಸ್ವೀಕರಿಸುತ್ತಾರೆ. ಒಂದುವೇಳೆ ಸ್ವೀಕರಿಸುವುದಕ್ಕೆ ಶ್ರಮವಹಿಸುತ್ತಾರೆ ಎಂದಾದರೆ ಎದುರಾದ ಅಭಿಪ್ರಾಯಗಳು ಸತ್ಯವೇ ಆಗಿರುತ್ತದೆ ಎಂಬುದನ್ನು ಅವರ ವರ್ತನೆಯೇ ಹೇಳಿಬಿಡುತ್ತದೆ.  ಇಲ್ಲಿ ಯಾವಾಗಲು ಸತ್ಯ ಭಯವನ್ನು ನಿರ್ಮಿಸುತ್ತದೆ.  ವಿಮರ್ಶೆ ಅಭಿಪ್ರಾಯಗಳು ವಿರುದ್ಧವಾಗಿ ಬಂದಾಗ ಅದನ್ನು  ಸಹಜವಾಗಿ ಸ್ವೀಕರಿಸುವುದಕ್ಕೆ ಮೇಲೆ ಹೇಳಿದ ಅಂತರಂಗ ಬಹಿರಂಗ ಶುದ್ಧವಾಗಿರಬೇಕು. ಅಭಿಪ್ರಾಯ ಸತ್ಯವಿರಲಿ ಸುಳ್ಳೇ ಇರಲಿ  ಮುಕ್ತವಾಗಿ ಸ್ವೀಕರಿಸುವಾಗ ಯಾವುದೇ ವಿವಾದಗಳಿಗೆ ಎಡೆ ಇರುವುದಿಲ್ಲ. ಸಹಜವಾಗಿ ಸ್ವೀಕರಿಸದೇ ಇದ್ದಲ್ಲಿ ಸಂಶಯ ಬೇಡ ಅಲ್ಲಿ ವ್ಯಕ್ತವಾದ ಅಭಿಪ್ರಾಯ ಸತ್ಯವೇ ಆಗಿರುತ್ತದೆ. ಹಾಗಾಗಿಯೇ ಮನಸ್ಸು ಭಯಗೊಳ್ಳುವುದು.  ಅಭಿಪ್ರಾಯಗಳು ಸುಳ್ಳಾಗಿರಲಿ ಸತ್ಯವಾಗಿರಲಿ ಅದನ್ನು ಸಹಜವಾಗಿ ಸ್ವೀಕರಿಸಬೇಕಾದರೆ ಅಂತರಂಗದ ಮತ್ತು ಬಹಿರಂಗದ ವ್ಯವಹಾರಗಳು ಒಂದೇ ಆಗಿರಬೇಕು.

ವಿಮರ್ಷೆ ಅಭಿಪ್ರಾಯಗಳನ್ನು ಅಥವಾ ಅನಿಸಿಕೆಗಳನ್ನು ವೈಯಕ್ತಿಕವಾಗಿ ಹೇಳಬೇಕು ಎಂಬ ಧೋರಣೆ ಇರುತ್ತದೆ. ದೇಶದ ಪ್ರಧಾನಿಯೋ ರಾಜ್ಯದ ಮುಖ್ಯ ಮಂತ್ರಿಯೋ ರಾಜಧಾನಿಯಲ್ಲಿದ್ದರೆ ನಾವು ಎಲ್ಲೋ ಮೂಲೆಯಲ್ಲಿ ಕುಳಿತು ನಮ್ಮ ಅನಿಸಿಕೆಗಳನ್ನು ಹೇಳುತ್ತೇವೆ. ಮುಖತಃ ಪ್ರಧಾನಿಯಲ್ಲಿ ಹೇಳುವುದಿಲ್ಲ. ಯಾಕೆ?  ಸಾರ್ವಜನಿಕ ಸಮಾಜಕ್ಕೆ ಅವರು ಪ್ರಧಾನಿಯೋ ಮುಖ್ಯಮಂತ್ರಿಯೋ ಆಗಿರುವುದು. ಹಾಗೆ ಸಾರ್ವಜನಿಕ ಜೀವನದಲ್ಲಿ ನಾವು ತೆರೆದುಕೊಳ್ಳುವಾಗ ಸಾರ್ವಜನಿಕ ಪ್ರತಿಕ್ರಿಯೆಗೆ ಬದ್ಧರಾಗಿರಬೇಕು. ಒಂದು ವೇಳೆ ಕಿವಿಯಾಗಿರದೇ ಇದ್ದರು ಅದಕ್ಕೆ ಕಲ್ಲಾಗಬಾರದು. ಕಲೆ ಸಾರ್ವಜನಿಕವಾದಾಗ ಕಲಾವಿದನೂ ಸಾರ್ವಜನಿಕನಾಗಲೇಬೇಕು. ಕಲೆಗಿಂತ ಕಲಾವಿದ ಗಾತ್ರ ಹಿರಿದಾಗುವುದಿಲ್ಲ.   ಸಾರ್ವಜನಿಕವಾಗಿ ಕಲೆಯ ಮಾನ ಹರಾಜಾದರೆ, ಪ್ರತಿಕ್ರಿಯೇಯೂ ಸಾರ್ವಜನಿಕವಾಗಿ ಬಂದೇ ಬರುತ್ತದೆ. ಕಲೆಯ ಮಾನಕ್ಕಿಂತಲೂ ಕಲಾವಿದನ ಮಾನ ಹಿರಿದಾಗುವುದಕ್ಕೆ ಸಾಧ್ಯವಿಲ್ಲ.

ಕಲಾತ್ಮಕ ಮನಸ್ಸು ಎಸೆದ ವಸ್ತುವಿನಲ್ಲೂ ಕಲೆಯನ್ನು ಸೃಷ್ಟಿಸುವುದಕ್ಕೆ ಯತ್ನಿಸುತ್ತದೆ.  ಸಾಧ್ಯವಿಲ್ಲದೇ ಹೋದರೆ ಅದನ್ನುಎಸೆದು ಬಿಡುತ್ತದೆ. ವಿಮರ್ಶೆಯೂ ಹಾಗೇ ರಸ್ತೆಯಲ್ಲಿ ಸಾಗುವಾಗ ಎದುರಾಗುವ ಎಸೆದ ವಸ್ತುಗಳಂತೆ,  ಬೇಕಾದರೆ ಸ್ವೀಕರಿಸುತ್ತದೆ. ಬೇಡವಾದರೆ ಎಸೆದು ಬಿಡುತ್ತದೆ. ಇಲ್ಲಾ ನಮಗೆ ಸಂಬಂಧಿಸಿದ್ದಲ್ಲ ಎಂದು ಬದಿಗೆ ಸರಿಸಿ ಮುಂದೆ ಸಾಗುತ್ತದೆ.  ಅನಿಸಿಕೆ ಅಭಿಪ್ರಾಯಗಳು ಅದು ಹೃದಯದಲ್ಲಿರುತ್ತದೆ. ಅದನ್ನು ಪ್ರೇಕ್ಷಕ್ಕ ಕೈಯಿಂದ ಎತ್ತಿ ಕೊಡುವಾಗ ಅದಕ್ಕೆ ತನ್ನ ಕರಗಳನ್ನು ನೀಡುವುದು ಕಲಾವಿದ ಧರ್ಮ. ಕರದೊಳಗಿನ ವಿಮರ್ಶೆ ಕತ್ತಿಯಾಗಿ ಕಮಲವಾಗಿ ಕಾಣುವುದು ಕಲಾವಿದ ಮನೋಧರ್ಮದಲ್ಲಿ ಅಡಗಿದೆ.