"ಇದು ವಿಮರ್ಶೆಯಲ್ಲದ ಚಿಂತನ"

Friday, February 26, 2010

ವೇಷ ಕಳಚಿದ ಸಮಯ. ಭಾಗ 3

ಯೋಚಿಸುತ್ತ ಭಟ್ಟರು ನಿದ್ರಾಯಸವನ್ನೇ ಮರೆತಂತೆ ಕುಳಿತೆ ಇದ್ದರು.ಮಗನ ಮದುವೆಯಾಗಿ ಆತ ಸಂಪೂರ್ಣ ಬದಲಾಗಿ ಬಿಟ್ಟ ಎಂಬ ಚಿಂತೆ ಅರಗಿಸಿಕೊಳ್ಳಲಾಗದೆ ಹೋದರು. ತನಗೆ ಬೇಕಾದ ಹಾಗೆ ನಡೆಯದೆ ಅವನ ಪ್ರತಿಯೊಂದು ಹೆಜ್ಜೆಗೂ ತಪ್ಪನ್ನು ಗುರುತಿಸುವಂತಾಯಿತು. ಅವನಿಗೆ ಬೇಡದೆ ಇರುವಂತಹುದು ತಾನು ಮಾಡಬಹುದಾದದ್ದು ಏನಿದೆ ಎಂದು ಅದನ್ನೇ ಮಾಡುತ್ತಾ ಅದರಲ್ಲೇ ಸಮಾಧಾನ ಕಂಡುಕೊಂಡಾಗ ಬಾಂಧವ್ಯದ ನಡುವಿನ ಅಂತರ ಮೀರಿತೆ ಹೊರತು ಯಾವುದೇ ಮನ:ಶ್ಯಾಂತಿ ಸಿಗದೇ ಹೋಯಿತು . ಇದರ ನಡುವೆ ನಿಜವಾದ ಮಾನಸಿಕ ವೇದನೆ ಅನುಭವಿಸುವಂತೆ ಆದದ್ದು ಭಾಗಿರಥಿಗೆ. ಅದರ ಅರಿವು ಇಬ್ಬರಿಗೂ ಇತ್ತು. ಆದರೇನು ?

ಮೊನ್ನೆ ತಾನೆ ಪದವಿನಲ್ಲಿ ಆಟ. ಮನೆಯಿಂದ ಹೊಗಿಬರುವಂತಹ ಗಡಿಬಿಡಿಯ ಚೈತನ್ಯ ಶರೀರದಲ್ಲಿ ಇಲ್ಲದೆ ಮೇಳದ ಬಿಡಾರದಲ್ಲೇ ವಿಶ್ರಾಂತಿಯಲ್ಲಿದ್ದರು. ನಡು ಮಧ್ಯಾಹ್ನದ ಹೊತ್ತು.ಹಾಗೆ ನಿದ್ದೆಯಿಂದ ಎದ್ದು ತಲೆದಿಂಬಿನ ಅಡಿಯಲ್ಲಿದ್ದ ಮೊಬೈಲ್ ನ್ನು ಆನ್ ಮಾಡಿದರು.ಇತ್ತೀಚಿಗೆ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾದ ಈ ಸಾಧನ ಬೇಡವೆಂದರೂ ಭಟ್ಟರು ತಮ್ಮದಾಗಿ ಅಂಗೀಕರಿಸಿದ್ದರು. ಮತ್ತು ಇಂದಿನ ಕಾಲ ಗುಣಕ್ಕೆ ಅದು ಅನಿವಾರ್ಯವೂ ಆಗಿತ್ತು. ಮನೆಗೆ ನಿತ್ಯವೂ ಇದೆ ಸಮಯದಲ್ಲಿ ಒಂದು ಕರೆ ಮಾಡುವ ವಾಡಿಕೆ ಅಂತೆಯೇ.ಆಕಳಿಸುತ್ತಾ ಮನೆಯ ನಂಬರ್ ಗೆ ಕರೆ ಕೊಟ್ಟರು. ಸ್ವಲ್ಪ ಉದಾಸಿನ ಭಾವ ನಿದ್ದೆಯ ಜಡತ್ವ ಕರೆ ಮಾಡಿದ ಮರುಘಳಿಗೆಯಲ್ಲೇ ಹಾರಿ ಹೋಯಿತು.ಆಕಡೆಯಿಂದ ಫೋನ್ ತೆಗೆದ ಭಾಗಿರಥಿ, ಮಗನ ಮಾವ ಮನೆಗೆ ಬಂದಿದ್ದ ವಿಚಾರನ್ನು ಹೇಳಿದಾಗ ಮೊದಲು ಔದಾಸಿನ್ಯವೇ ಇದ್ದರೂ ನಂತರ ಹೇಳಿದ ವಿಚಾರ ತಿಳಿದಾಗ ಮನಸ್ಸು ಕ್ಷಣಕಾಲ ಗಲಿಬಿಲಿಗೊಳಗಾಯಿತು. ತನ್ನ ಮಗ ಪುತ್ರವಂತನಾದ ಸುದ್ದಿ ಸಂತಸದಿಂದಲೇ ಹೇಳಿದಳು. ಮತ್ತಿನ ಅವಳ ಮಾತಿನಲ್ಲಿ ನನ್ನ ಮನದ ಭಾವ ಓದುವ ಜಿಜ್ಞಾಸೆ ಕಂಡುಬಂದರೂ ಭಟ್ಟರು ಮೌನವಾಗಿಯೇ ಸ್ಪಂದಿಸಿದರು.ಅತ್ತಿತ್ತ ಒಂದು ಸಲ ದಿಟ್ಟಿಸಿದರು. ಕೆಲವರು ಮಲಗಿ ನಿದ್ರಾವಶವಾದರೆ ಇನ್ನು ಕೆಲವರು ನಿಶ್ಯಬ್ಧವಾಗಿ ಯಾವುದೋ ಕೆಲಸದಲ್ಲಿ ಮಗ್ನರಾಗಿದ್ದರು. ಏನೂ ತೋಚದೆ ಭಟ್ಟರು ಮಡಿಸಿಟ್ಟ ಬಟ್ಟೆಯ ಮೇಲೆ ತಲೆ ಒರಗಿಸಿ ನಿಸ್ತೇಜರಾದರೂ ,ಪುನಃ ನಿದ್ರಿಸುವುದು ಅಸಾಧ್ಯವಾಗಿ ಬಿಟ್ಟಿತು. ರಜೆ ಹೇಳಿ ಮನೆಗೆ ಹೋಗಿಬಿಡೋಣವ? ಹೋಗಿ ಏನು ಮಾಡುವುದು. ಮಗನ ಮನೆಯತ್ತ ಹೋಗುವುದು ಅಸಾಧ್ಯವಾದ ಕೆಲಸವಾಗಿ ತೋರಿತು. ಇತ್ತೀಚಿಗೆ ಮಗನಿಂದ ದೂರವಿರುವುದನ್ನೇ ಬಯಸಿದವರಿಗೆ ಇನ್ನು ಪುನಃ ಮನೆಗೆ ಹೋದರೆ ಪತ್ನಿಯ ಒತ್ತಾಯ ,ಪ್ರೇರಣೆಗೆ ಮನಸ್ಸು ಮತ್ತೂ ಅಸಮಾಧಾನಕ್ಕೆ ತಳ್ಳಿಸಿಕೊಳ್ಳುವುದು ಇಷ್ಟವಾಗದು. ದುಡ್ಡಿನ ಅಗತ್ಯವೋ ಮಾನಸಿಕ ನೆಮ್ಮದಿಯ ಬಯಕೆಯೋ ಬದುಕಿನಲ್ಲಿ ಮೇಳದ ಚೌಕಿ ,ರಂಗಸ್ಥಳ ಅನಿವಾರ್ಯವಾಗಿ ಹೋಗಿತ್ತು. ಇದನ್ನು ಬಿಟ್ಟ ದಿನ ಎಂಬುದು ತನಗಿದೆಯೇ. ? ಹೀಗೆ ಅನಿವಾರ್ಯವಾಗಿಸಿಕೊಳ್ಳುವುದರಲ್ಲಿ ಮಗನ ನಡುವಿನ ಸಂಭಂಧ ಕೇವಲ ನಿಮಿತ್ತವೆ, ಅನ್ನಿಸಿದ್ದರೂ ಯಾವುದೂ ಬೇಡ ಎಂಬ ಭಾವ ಹಲವುಸಲ ಅನಿಯಂತ್ರಿತವಾಗಿ ಬಂದು ಬಿಡುತ್ತಿತ್ತು. ಹಲವರು ಕೇಳಿದ್ದರು ಕಲಾ ಬದುಕಿನಲ್ಲಿ ತೃಪ್ತಿ ಸಿಕ್ಕಿದೆಯೇ? ಮಹತ್ವಾಕಾಂಕ್ಷೆ ಒಂದೂ ಇರಿಸಿಕೊಳ್ಳದ ಎನಗೆ ಇಂತಹ ಪ್ರಶ್ನೆಗಳು ತೀರ ಅಸಂಗತ ಅನ್ನಿಸಿಬಿಡುತ್ತಿತ್ತು. ಇಂತಹ ಮನೋಭಾವ ಮಗನ ನಡುವಿನ ಸಂಬಂಧದಲ್ಲೂ ಬಾರದಿರಲಿಲ್ಲ.ಕಳೆದ ಬದುಕಿನ, ನೆನಪಿನಲ್ಲಿ ಉಳಿದ ಘಟನೆಗಳು ಮನಸ್ಸಿನಲ್ಲಿ ಹಲವು ಸಲ ಬಂದಾಗ ಅರಿವಿದ್ದೋ ಇಲ್ಲದೆಯೋ ಬದುಕಿನ ಸಂಧ್ಯೆ ಹತ್ತಿರವಾಗುವಾಗ ಎಲ್ಲ ದುಮ್ಮಾನಗಳಿಂದ ದೂರವಾಗಿ ಮನಸ್ಸನ್ನು ನಿರಾಳವಾಗಿಸೋಣ ಅನ್ನಿಸಿಬಿಡುತ್ತದೆ.

ಅದರೂ ಮನಸ್ಸು ಕೆಲವೊಮ್ಮೆ ಸ್ವಾಭಿಮಾನಿಯಾಗಿ ವರ್ತಿಸುತ್ತಿತ್ತು. ಹೆಂಡತಿ ಮನೆಯವರು ಹತ್ತಿರವಾದಂತೆ ನಾವೇಕೆ ಮಗನಿಗೆ ದೂರವಾದೆವು.?ಹಲವು ಘಟನೆಗಳ ನೆನಪು ಎದುರಾಗಿ ಮನಸ್ಸು ಹಿಂದಡಿಯಿಡುವಂತೆ ಮಾಡುತ್ತಿತ್ತು. ಅಲ್ಲವೇ? ಹಲವು ಸಂದರ್ಭಗಳಲ್ಲಿ ಹೆಂಡತಿಯ ಮನೆ ನೆನಪಾದಂತೆ ತನ್ನ ಮನೆ ನೆನಪಾಗಲಿಲ್ಲವೇಕೆ?ಇಗಲೂ ಅಷ್ಟೇ ಮಗು ಹೆತ್ತು ಎರಡು ದಿನ ಸರಿದ ಮೇಲೆ ಸುದ್ದಿ ಬಂದಿದೆ. ತಪ್ಪು ಯಾರದು ? ಛೇ. ಇರುವ ಮೂರುದಿನದ ಬದುಕಿನಲ್ಲಿ ತಪ್ಪು ಒಪ್ಪುಗಳನ್ನೇಕೆ ಚಿಂತಿಸಬೇಕು. ಇದ್ದಷ್ಟು ದಿನ ಯಾವ ದುಮ್ಮಾನಕ್ಕೆ ಒಳಗಾಗದೆ ಜೀವನ ನಡೆಸಬೇಕು. ಇರಲಿ ಇಲ್ಲಿನ ಆಟ ಮುಗಿಸಿ ಮನೆಕಡೆ ತೆರಳೋಣ ಎಂದು ಸಮಾಧಾನ ಪಟ್ಟುಕೊಂಡರು.

ಜಗಲಿಯ ಮೂಲೆಯಲ್ಲಿದ್ದ ಆರಾಮ ಕುರ್ಚಿಯಲ್ಲಿ ಮೈಭಾರ ಹಾಕಿ ಕುಳಿತಲ್ಲಿಗೆ ಬಂದ ಗತಕಾಲದ ನೆನಪುಗಳನ್ನು ಮರೆಸಲೆಂಬಂತೆ ಸಣ್ಣದಾದ ನಿದ್ದೆಯ ಜೋಂಪು ಆವರಿಸಿತು. ಗಡ ಗಡ ಜೀಪಿನ ಸದ್ದಿಗೆ ಎಚ್ಚರವಾಗಿ ಇಹಲೋಕಕ್ಕೆ ಬಂದರು. ಭಾಗಿರಥಿ ಸಣ್ಣದಾದ ಲಗೇಜೆನೊಂದಿಗೆ ಸಿದ್ದವಾಗಿದ್ದಳು. ತುಂಬಾ ಕುಶಿಯಲಿದ್ದಂತೆ ಅನ್ನಿಸಿತು. ಬಡಪಾಯಿ ಹೆಂಗಸು ಎಂದುಕೊಂಡರು ಭಟ್ಟರು. ಅವಳಿಗಿದ್ದ ನಿರ್ಲಿಪ್ತತೆ ತನಗೇಕೆ ಬರಲೊಲ್ಲದು.?

ಜೀಪು ತೋಟದ ಬದುವನ್ನು ತೆವಳುತ್ತ ಹತ್ತಿಕೊಂಡು ಮುಖ್ಯ ರಸ್ತೆಯತ್ತ ತೆರಳಿತು.ಹೊರಗೆ ಬಿಸಿಲಿನ ಝಾಳ ಏರುತ್ತಿತ್ತು. ಮುಖ್ಯ ರಸ್ತೆಗೆ ಜೀಪು ಬರುತ್ತಿದ್ದಂತೆ ದೇಹವೂ ಮನಸ್ಸು ಬಳಲಿದ ಭಟ್ಟರು ಬಸವಳಿದು ಕುಳಿತಲ್ಲಿಗೆ ತೂಕಡಿಸುತ್ತಾ ಅಲ್ಲಿಗೆ ಒರಗಿ ಬಿಟ್ಟರು.

ಜೀಪು ಆಸ್ಪತ್ರೆಯ ಮುಂದೆ ನಿಂತಾಗಲೇ ಎಚ್ಚರ ಗೊಂಡ ಭಟ್ಟರು ಒಂದು ಸಲ ಮೈ ಕೊಡವಿ ನಿಧಾನವಾಗಿ ಜೀಪಿಂದ ಇಳಿದು ಭಾಗಿರಥಿಗೆ ಕೈ ಕೊಟ್ಟು ಇಳಿಸಿದರು. ಕಣ್ಣು ಕಿರಿದು ಗೊಳಿಸಿ ಸುತ್ತಲೂ ಒಂದು ಸಲ ನೋಡಿದರು. ನಗರದ ದೊಡ್ಡ ಆಸ್ಪತ್ರೆ ಯದು. ಜೀಪಿನ ಬಾಡಿಗೆ ಇಟ್ಟು ನಿಧಾನವಾಗಿ ಆಸ್ಪತ್ರೆಯ ಮೆಟ್ಟಿಲನ್ನು ಒಂದೊಂದಾಗಿ ಏರುತ್ತ ಹೋಗಿ ಒಳಗೆ ಬಾಗಿಲಲ್ಲೇ ಇದ್ದ ರಿಸೆಪ್ಶನ್ ಬಳಿಗೆ ಹೋಗಿ ವಿಚಾರಿಸಿದಾಗ ಸೊಸೆ ಇರುವ ಜಾಗ ತಿಳಿದು ಬಂತು. ಅತ್ತ ತಾವು ನಿಧಾನವಾಗಿ ನಡೆದರೆ ಭಾಗಿರಥಿ ತುಸು ಗಡಿಬಿಡಿಯ ಹೆಜ್ಜೆ ಹಾಕುತ್ತ ವಾರ್ಡ್ ಸಮೀಪ ಹೋದಳು. ವಾರ್ಡ್ ವೆರಾಂಡವನ್ನು ಪ್ರವೇಶಿಸುತ್ತಿದ್ದಂತೆ ಸೊಸೆ ಅಮ್ಮ ನಿಂತಿರುವುದು ಕಣ್ಣಿಗೆ ಬಿತ್ತು.ಅತ್ತ ಹೋಗಿ ಉಭಯ ಕುಶಲೋಪಹರಿ ವಿಚಾರಿಸಿ, ಬಟ್ಟರು ನಿಧಾನವಾಗಿ ಒಳಗೆ ಇಣುಕಿದರು. ಭಾಗಿರಥಿ ಒಳ ಹೊಕ್ಕರೂ ದೂರದಲ್ಲೇ ನಿಂತು ಬಿಟ್ಟಳು. ಭಟ್ಟರು ಒಂದು ಬಾರಿ ಪೆಚ್ಚಾಗಿಬಿಟ್ಟರು. ಅದಾಗಲೇ ಬಂಧುಬಳಗ ಸೊಸೆಯ ಮಂಚದ ಸುತ್ತ ಮುತ್ತಿಕೊಂಡು ಬಿಟ್ಟಿದ್ದರು.

ನೆಂಟರು ಬಳಗ ಗುಂಪು ಕೂಡಿದರೆಂದರೆ ಭಟ್ಟರು ಒಂದಿಷ್ಟು ದೂರವೆ ಉಳಿದು ಬಿಡುವ ಸಂಕೋಚ ಪ್ರವೃತ್ತಿ. ಬಾಲ್ಯದಿಂದಲೇ ಬಳಗವನ್ನು ಬಿಟ್ಟಿದ್ದ ಪರಿಣಾಮವೋ ಉಳಿದ ಮಂದಿ ಸೇರಿಸಿಕೊಳ್ಳದೆಯೋ,ಅಥವಾ ಮುಂದಾಗಿ ಸೇರಿಕೊಳ್ಳುವ ಜಾಣ್ಮೆ ಇವರಿಗೆ ಇರದೇ ಇದ್ದುದರಿಂದಲೋ ಭಾಂಧವರಸಂಖ್ಯೆ ಅಧಿಕವಿದ್ದಲ್ಲಿ ತಣ್ಣಗೆ ದೂರವೇ ಉಳಿದು ಬಿಡುತ್ತಿದ್ದರು.ಕೆಲವು ಆತ್ಮೀಯರು, ಅಥವ ಆಟದ ಹುಚ್ಚಿನವರು ಇವರನ್ನು ಸೇರಿಸಿಕೊಂಡರೂ ಒಂದು ವಿಧದ ಅಸಹನೀಯತೆಯನ್ನು ಅನುಭವಿಸುತ್ತಿದ್ದರು.ಗುಂಪಿನಲ್ಲಿ ಸೇರಿಕೊಂಡು ಕೆಲವೊಮ್ಮೆ ಒದ್ದಾಡಿದ್ದು ಇದೆ. ರಂಗದಲ್ಲಿ ಎಂತಹ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿ ಮಾತಿನ ಸರಪಣಿಯನ್ನು ಬೆಳೆಸುತ್ತ ಹೋಗುವವರಿಗೆ ಇಲ್ಲಿ ಮಾತಿಗೆ ಬರಗಾಲ ಬಂದು ಬಿಡುತ್ತದೆ. ಅವಾಗೆಲ್ಲ ತಮ್ಮ ಸಹಕಲಾವಿದ ಮಿತ್ರ ನೊಬ್ಬ ಹೇಳಿದ್ದು ಹಲವುಬಾರಿ ನೆನಪು ಬರುವುದುಂಟು.
" ಭಟ್ರೇ ಈ ವೇಷದವರನ್ನು ಎಷ್ಟು ಜನ ಇದ್ರೂ ಗೊತ್ತಾಗಿಬಿಡುತ್ತದೆ. ಯಾರೊಟ್ಟಿಗೂ ಸೇರಿಕೊಳ್ಳಲಾಗದ ಗುಂಪು ಬಿಟ್ಟ ಮಂಗನ ಹಾಗೆ. ಪ್ರತ್ಯೇಕ ಆಗಿಬಿಡ್ತದೆ. " ಅಲ್ಲವೇ. ಮೇಳ ಬಿಟ್ಟು ಹಲವು ವರ್ಷ ಕಳೆದು ವೇಷ ಹಾಕುವುದನ್ನು ಬಿಟ್ಟರೂ ಅಂತಹ ಹಲವರನ್ನು ಇವರು ಕಂಡಿದ್ದಾರೆ .ಮುಖ್ಯವಾಹಿನಿಯಿಂದ ದೂರವಾದಂತೆ, ಎಲ್ಲಿ ಹೇಗೆ ಕಂಡರೂ ಇವರು ಆಟದ ವೇಷದವರು ಎಂದು ಕೂಗಿ ಹೇಳುವ ಹಾಗೆ ಇರುವುದು. ಇಲ್ಲೂ ಅಷ್ಟೇ ಅಷ್ಟೆಲ್ಲ ಗುಂಪಿನಲ್ಲಿ ಏನೇನೋ ಮಾತುಕತೆ ನಡೆದರೂ ಭಾಗಿರಥಿ ಏಕೆ ದೂರ ಉಳಿದಳು. ನನ್ನ ಹಾಗೆ ಇವಳೂ ಆಗಿ ಬಿಟ್ಟಳೇ?ಒಂದೊಂದು ವಿಧದ ಮಾತುಗಳು. ಇಂತಹ ಮಾತುಗಳು ಇಂತಹ ಜಾಗದಲ್ಲಿ ಆಡಲೇ ಬೇಕು ಎಂಬ ವಾಡಿಕೆಗೆ ಕಟ್ಟುಬಿದ್ದ ಹಾಗಿತ್ತು. ಸುತ್ತಲಿನ ಬಂಧುವರ್ಗ ತಾವಂದ ಮಾತುಗಳಿಗೆ ತಾವೇ ಪ್ರತಿಕ್ರಿಯಿಸುತ್ತ ನಗುತ್ತ ಇರುವಾಗ ಭಟ್ಟರಿಗೆ ಈ ವಾತಾವರಣವೇ ಬೇಸರ ಮೂಡಿಸಿತು. ಒಬ್ಬಾಕೆ ಅಪ್ಪನ ಚೆಹರೆ ಯನ್ನು ಕಂಡರೆ ಇನ್ನೊಬ್ಬಾಕೆ ಮಗುವಿನ ಅಮ್ಮನ ಅಮ್ಮ ಅಜ್ಜಿಯ ಚೆಹರೆಯನ್ನು ಮಗುವಿನಲ್ಲಿ ಕಂಡಳು. ಎಲ್ಲರ ಗಲ ಗಲ ಸದುಗದ್ದಲದ ನಡುವೆ ತಮ್ಮ ಆಗಮನದ ಅರಿವು ಸೊಸೆಗೆ ಆಗಿಲ್ಲವೋ ಎಂದು ಸಮಾಧಾನ ಪಟ್ಟುಕೊಳ್ಳುವ ಅನಿವಾರ್ಯತೆ ಭಟ್ಟರಿಗೂ ಹಾಗೂ ಭಾಗಿರಥಿಗೆ ಇದ್ದಿತ್ತು.ಮತ್ತೆ ಭಟ್ಟರಿಗೆ ಅಲ್ಲಿ ನಿಲ್ಲಲಾಗದೆ ನಿಧಾನವಾಗಿ ಕಾಲೆಳೆದುಕೊಂಡು ಹೊರ ಬಂದು ಹೊರಗಿದ್ದ ಕುರ್ಚಿಗಳತ್ತ ನಡೆದು ಕುಳಿತುಕೊಂಡರು. ಯೋಚಿಸುತ್ತ ಮನಸ್ಸನ್ನು ರಾಡಿ ಮಾಡಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಸುತ್ತಲೂ ಒಂದು ಸಲ ನೋಡಿದಾಗ ತುಸು ದೂರದಲ್ಲೇ ಕುಳಿತ ವ್ಯಕ್ತಿ ಪರಿಚಿತ ನಗುವನ್ನು ಬೀರಿ ಮಾತಿಗೆ ತೊಡಗಿತು.