ನಾವು ಮಗುವನ್ನು ದೇವರಂತೆ ಕಾಣುತ್ತೇವೆ. ನಿಷ್ಕಲ್ಮಷ ಮುಗ್ದ
ಮನಸ್ಸಿನ ಪುಟ್ಟ ಕಂದನನ್ನು ದೇವರಂತೆ ಕಾಣುವುದು ಸಾಮಾನ್ಯ. ಇಲ್ಲಿ ಮಗುವಿನ ದೇಹವಾಗಲಿ ವಯಸ್ಸಾಗಲೀ
ಗೌರವಿಸಲ್ಪಡುವುದಲ್ಲ. ಇಲ್ಲಿ ದೈವೀ ಭಾವ ಅಗೋಚರವಾಗಿ ಪ್ರೇರೇಪಣೆಗೆ ಕಾರಣವಾಗುತ್ತದೆ. ಇಂತಹ ದೈವೀಗುಣ ವಿರಳವಾಗಿ ದರ್ಶನವಾದಾಗ ಅದು ಚಿರಸ್ಥಾಯಿಯಾಗಿ ಉಳಿದು ಬಿಟ್ಟು
ನಮ್ಮೊಳಗಿನ ಸದ್ಭಾವನೆಯನ್ನು ಮೀಟಿ ಜಾಗೃತಗೊಳಿಸುತ್ತದೆ. ಅಂತಹ ಒಂದು ಘಟನೆ ಇದು.
ಅದು ದೂರದರ್ಶನ ಚಂದನವಾಹಿನಿಯಲ್ಲಿ ಸಂದರ್ಶನ ಕಾರ್ಯಕ್ರಮದ
ಚಿತ್ರೀಕರಣ. ಹಿರಿಯ ಭಾಗವತರಾದ ಶ್ರೀ ಬಲಿಪ್ಪ ನಾರಾಯಣ ಭಾಗವತರ ಸಂದರ್ಶನ. ಸಂದರ್ಶಕ ಶ್ರೀ ಮಹಾಬಲ
ಮೂರ್ತಿ ಕೊಡ್ಲೆಕೆರೆ ಮತ್ತು ಭಾಗವತರು ಕ್ಯಾಮೆರಕ್ಕೆ ಅಭಿಮುಖರಾಗಿ ಕುಳಿತಿದ್ದಾರೆ. ಒಂದೆರಡು ಮಂದಿ
ಬಿಟ್ಟರೆ ಅಲ್ಲಿ ಬೇರೆ ಯಾರೂ ಇರಲಿಲ್ಲ. ಇನ್ನೇನು ಸಂದರ್ಶನ ಆರಂಭವಾಗಬೇಕು. ಕ್ಯಾಮೆರ ಮತ್ತು ತಂತ್ರಜ್ಞರು
ಸಿದ್ಧವಾಗಿದ್ದಾರೆ. ಕಾರ್ಯಕ್ರಮದ ನಿರ್ದೇಶಕರು ಮೊದಲೇ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಬೇರೆ ಯಾರೂ
ಮಾತನಾಡಕೂಡದು. ನಿಶ್ಯಭ್ದತೆಯನ್ನು ಪಾಲಿಸಬೇಕು. ಎಲ್ಲವೂ ನೀರವ ಗಂಭೀರ ಮೌನದ ವಾತಾವರಣ. ಕಣ್ಣು ಕೋರೈಸುವ
ಬೆಳಕಿನಡಿ ಇಬ್ಬರು ಕುಳಿತಿದ್ದಾಗ ....ಬಲಿಪ್ಪರು ಕೇಳೀದರು ಅವರಿಗೂ ಸುತ್ತಲಿನ ವಾತವಾರಣ ಒಂದು ರೀತಿಯ ಭಯವನ್ನು ಕುತೂಹಲವನ್ನೂ
ಹುಟ್ಟಿಸಿತ್ತು. ಶಿಸ್ತಿನಲ್ಲಿ ಗಂಭೀರವಾಗಿ ಕುಳಿತಿದ್ದರು. ಹಾಗಾಗಿ ನಿಧಾನವಾಗಿ ಕೇಳಿದರು
" ಇದು.... ಕೈ
ಎಲ್ಲ ತುರಿಕೆ ಆದ್ರೆ ತುರಿಸಬಹುದಲ್ಲಾ? " ಈ ಪ್ರಶ್ನೆ ಅದೆಂತಹ ಮುಗ್ಧತೆಯ ದರ್ಶನವನ್ನು
ಮಾಡಿಸಿತ್ತು ಎಂದರೆ ಕೇಳುವ ಕಿವಿಯೂ ಕಾಣುವ ಕಣ್ಣೂ ನಂಬಲಿಲ್ಲ. ಮತ್ತೂ ಸ್ವಲ್ಪ ಕಳೆದು ಮತ್ತೊಂದು
ಪ್ರಶ್ನೆಯಂತು ಮುಗ್ದತೆಯ ಸಾಕ್ಷಾತ್ ದರ್ಶನವನ್ನು ಮಾಡಿಸಿತ್ತು. ಅಲ್ಲೇ ಅವರೆದುರು ಒಂದು ಟೀಪಾಯ್ ಮತ್ತು ಅದರ ಮೇಲೆ ಎರಡು
ಲೋಟ ನೀರು ಇಟ್ಟಿದ್ದರು. ಅದನ್ನು ನೋಡಿ " ಇದು ನೀರು ಬೇಕಿದ್ರೆ ಕುಡಿಬಹುದಲ್ಲಾ?" ಇದು ಮುಗ್ಧತೆಯ ಪರಮಾವಧಿ !
ಕೇಳುವಾಗ ಇದು
ಹಾಸ್ಯಾಸ್ಪದವಾಗಿ ಕಾಣುವವರು ಇರಬಹುದು. ಆದರೆ ಅದರೊಳಗಿನ ಭಾವ ಗುರುತಿಸುವಾಗ, ಇಂತಹವ್ಯಕ್ತಿಗಳು ಇರುವುದಕ್ಕೆ ಸಾಧ್ಯವೇ? ಆಶ್ಚರ್ಯವಾಗುತ್ತದೆ. ಮಕ್ಕಳನ್ನೂ ಮರಿಮಕ್ಕಳನ್ನು ಒಂದೇ ಮನೆಯಲ್ಲಿ ಇಂದಿಗೂ ಕಾಣುವ
ಅವಿಭಕ್ತ ಕುಟುಂಬದ ಒಬ್ಬ ಹಿರಿಯ ಯಜಮಾನ ವ್ಯಾವಹಾರಿಕ ಪ್ರಪಂಚದಲ್ಲಿ ಯಶಸ್ವೀ ಸಂಸಾರಿಯಾದ ಗೃಹಸ್ಥ
ಹೇಳುವ ಮಾತು. ಹೌದು, ಇವರು ತನ್ನ ಮುಗ್ದತೆ ಸಧ್ಭಾವನೆಯಿಂದಲೇ ಎಲ್ಲವನ್ನು
ಕಂಡವರು ಪಡೆದವರು.. ಆದರೆ ಕಳಕೊಂಡವರು ಎಂದು ನಾನು
ಹೇಳುವುದಿಲ್ಲ. ಕಳಕೊಂಡದ್ದೇನಿದ್ದರೂ ಅದು ಕಳೆದುಕೊಂಡದ್ದಲ್ಲ ಅದು ದೈವೀಗುಣದ ಪ್ರಸಾದರೂಪ. ಮದುವೆಯಾಗಿ
ಕೆಲವು ದಿನಕ್ಕೆ ಬಂಧುವರ್ಗದಿಂದ ದೂರಾಗಿ ಬದುಕುವ
ಇಂದಿನ ಪ್ರಪಂಚದಲ್ಲಿ ಈ ಬಲಿಪ್ಪರದ್ದು ಮಹತ್ಸಾಧನೆ. ಇಂದಿನ ಜನಾಂಗಕ್ಕೆ ಬದಕನ್ನು ಬದುಕಿ ತೋರಿಸುವ
ರೀತಿ ಇದು. ಇದರಲ್ಲಿ ಮುಗ್ಧತೆಯನ್ನು ಕಾಣುವುದು ಸಾಧ್ಯವಿಲ್ಲ. ಇಂತಹ ವ್ಯಕ್ತಿ ಸರಿ ಸುಮಾರು ಎಪ್ಪದರ ದಶಕದ ವಯೋವೃದ್ಧರ ಈ ಸರಳವಾದ ಪ್ರಶ್ನೆಗಳು
ಮೂಕ ವಿಸ್ಮಿತನನ್ನಾಗಿ ಮಾಡಿತ್ತು. ಇದಕ್ಕೆ ಕಾರಣ
ಪ್ರತಿಯೋಂದನ್ನೂ ಗೌರವ ಪೂರ್ಣವಾಗಿ ಮನ್ನಿಸಿ ನೋಡುವ ಈ ವೃದ್ದ ಮನಸ್ಸಿನ ಗುಣ. ಎಲ್ಲಿ ಅಪಚಾರವಾದೀತೋ
ಎಂಬ ಆತಂಕ. ದುರಹಂಕಾರದ ದಾರ್ಷ್ಟ್ಯ ರವಷ್ಟೂ ಇಲ್ಲದ ಸರಳತೆ. ಯಕ್ಷಗಾನವೆಂದೇಕೇ ಎಲ್ಲಿಯೂ ಕಾಣಲಾಗದ
ವ್ಯಕ್ತಿತ್ವವಿದು.
ಇಂದು ಪೂಜ್ಯನೀಯ ಎನ್ನಿಸಿಕೊಂಡವರು
ತಮ್ಮ ದುರಹಂಕಾರಿ ಢಾಂಬಿಕ ವ್ಯಕ್ತಿತ್ವವನ್ನು ತುಂಬಿಕೊಂಡು ಪೂಜನೀಯ ಸ್ಥಾನಕ್ಕೆ ಪ್ರಶ್ನೆಯಾಗಿ ಕಾಡುವಾಗ
ಬಲಿಪ್ಪರ ಈ ಮುಗ್ಧತನ ಪೂಜ್ಯನೀಯ ಸ್ಥಾನದಲ್ಲಿ ಅವರನ್ನು
ಕೂರಿಸುತ್ತದೆ. ತನ್ನ ಹಿಂದೆ ಚೂರಿ ಹಾಕುವುದನ್ನು ತಿಳಿದಿದ್ದರೂ ಅಂತಹಾ ವ್ಯಕ್ತಿಗಳನ್ನು ಇವರು ನಮ್ಮವರು
ಎಂದು ಮುಕ್ತವಾಗಿ ಸೇರಿಸುವ ಗುಣ, ಮಗು ಅತ್ತರೂ ನಕ್ಕರೂ ತಾನು ಮಗುವಾಗಿಯೇ
ಇದ್ದುಬಿಡುವಂತೆ ಇರುವ ಗುಣ, ಇದು ಕೇವಲ ಮನುಷ್ಯ ಸ್ವಭಾವಕ್ಕೆ ದಕ್ಕುವದ್ದಲ್ಲ.
ಇದನ್ನು ಕಂಡಾಗ ನೆನಪಿಗೆ ತಂದುಕೊಂಡಾಗ ಎಂತಹ ಉದ್ರಿಕ್ತ ಮನಸ್ಸು ಶಾಂತವಾಗಿ ಬಿಡುತ್ತದೆ. ಹೌದು ಏನೂ
ತಿಳಿಯದೇ ಇರುವಲ್ಲೂ ಕಲಿಯುವಂಥದ್ದು ಬಹಳಷ್ಟಿದೆ ಎಂದನ್ನಿಸುತ್ತದೆಯಲ್ಲವೆ?