"ಇದು ವಿಮರ್ಶೆಯಲ್ಲದ ಚಿಂತನ"

Monday, March 30, 2026

ಶ್ರೀ ಸೂರಿಕುಮೇರಿ ಗೋವಿಂದ ಭಟ್ ನಾನು ಕಂಡಂತೆ.....



(ಕೆಲವು ದಿನಗಳ ಹಿಂದೆ ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ಇದರ ಆಶ್ರಯದಲ್ಲಿ ಯಕ್ಷಗಾನ ಹಿರಿಯ ಕಲಾವಿದ ಇತ್ತೀಚೆಗೆ ದಿವಂಗತರಾದ, ಶ್ರೀ  ಗೋವಿಂದ ಭಟ್ ಸೂರಿಕುಮೇರಿ ಇವರ ಸಾಕ್ಷಚಿತ್ರ ಸಂದರ್ಶನ ಪ್ರಸಾರ ಮಾಡಲಾಗಿತ್ತು. ಆ ಸಂದರ್ಶನದ ಭಾಗವಾಗಿ ಶ್ರೀ ಕಟೀಲು ಸಿತ್ಲ ರಂಗನಾಥ ರಾವ್ ಇವರು ಸೂರಿಕುಮೇರಿ ಗೋವಿಂದ ಭಟ್ ಕುರಿತಾಗಿ ಒಂದು ಲೇಖನ ಬರೆಯುವುಂತೆ ನನ್ನಲ್ಲಿ ಆಗ್ರಹಿಸಿದ್ದರು.  ತಮ್ಮ ಸಾಕ್ಷ್ಯಚಿತ್ರದಲ್ಲಿ ಅದನ್ನು ಮೊದಲಿಗೆ ಅಳವಡಿಸಿಕೊಂಡಿದ್ದರು. ಆ ಲೇಖನದ ಪ್ರತಿಯನ್ನು ಇಲ್ಲಿ ಹಾಕಿರುವೆ. ಗೋವಿಂದ ಭಟ್ ರವರ ಈ ಪರಿಚಯಾತ್ಮಕ ಕಾರ್ಯದಲ್ಲಿ ನನ್ನಿಂದ ಈ ಮಹತ್ಕಾರ್ಯವನ್ನು ಮಾಡಿಸಿದ ಶ್ರೀ ಕಟೀಲು ಸಿತ್ಲ ರಂಗನಾಥ ರಾವ್ ರವರಿಗೆ ಧನ್ಯವಾದವನ್ನು ಅರ್ಪಿಸುತ್ತಾ, ಅಗಲಿದ ಹಿರಿಯ ಚೇತನ ಶ್ರೀ ಗೋವಿಂದ ಭಟ್ಟರ ಸ್ಮರಣೆಯೊಂದಿಗೆ ಈ ಲೇಖನ. )


 

ಹಸಿವು ಇದು ವ್ಯಾವಹಾರಿಕ ಪ್ರಪಂಚದ ಅಸ್ತಿತ್ವದ ಸಂಕೇತ. ಎಷ್ಟೇ  ದೊಡ್ಡ ಖಜಾನೆಯನ್ನಾದರೂ ತುಂಬಿಸಿ ಸಂಗ್ರಹಿಸಿ ಇಡಬಹುದು. ಆದರೆ ಹೊಟ್ಟೆಯನ್ನು ತುಂಬಿಸಿ ಇಡುವುದು ಸಾಧ್ಯವಿಲ್ಲ. ಹಸಿವು ಯಾವುದೇ ಪ್ರಾಣಿ ಹುಟ್ಟಿದಾಕ್ಷಣ ಜತೆಯಾಗುವ ಪ್ರವೃತ್ತಿ. ಹಸಿವು...ಹಸಿವು ಇದು ಜೀವ ಜಗತ್ತಿನ ಆರೋಗ್ಯದ ಲಕ್ಷಣ. ಹಾಗಾಗಿ ವ್ಯಾವಹಾರಿಕ ಪ್ರಪಂಚದ ಮೂಲ ಇರುವುದೇ ಹಸಿವಿನಲ್ಲಿ. ಈ ಹಸಿವಿನ ಪರಿಮಾರ್ಜನೆಯೇ ಎಲ್ಲ ಪ್ರವೃತ್ತಿಗೂ ಮೂಲ ಕಾರಣ. ಹಸಿವು ಎಂದಿನ ವರೆಗೆ ಇರುತ್ತದೋ ಅಂದಿನವರೆಗೆ ಪ್ರಪಂಚ ಚಲನ ಶೀಲವಾಗಿರುತ್ತದೆ. ಮನುಷ್ಯ ಪ್ರಾಣಿಗಳೂ  ಹಾಗೆ ಹಸಿವು ಇರುವ ತನಕ ಸದಾ ಪ್ರವೃತ್ತಿಯಲ್ಲಿರುತ್ತವೆ. ಅಥವಾ ಹಸಿವು ಎಲ್ಲವನ್ನೂ ಜೀವಂತವಾಗಿರಿಸುತ್ತದೆ. ಇದು ವ್ಯಾವಹಾರಿಕ ಪ್ರಪಂಚದ ಸತ್ಯ. ಈ ಸತ್ಯದ ಬೆನ್ನಟ್ಟಿ ಹೋದ   ಹಲವರು  ಇಂದು ನಮ್ಮ ನಡುವೆ ಮಹಾನ್ ವ್ಯಕ್ತಿಗಳಾಗಿ ಈ ಪ್ರಪಂಚದ ಸತ್ಯವನ್ನು ತೆರೆದು ತೋರಿಸುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಶ್ರೀ ಸೂರಿಕುಮೇರಿ ಗೋವಿಂದ ಭಟ್.

ಸೂರಿಕುಮೇರಿ ಎಂದಾಗ ಯಕ್ಷಗಾನ ಲೋಕದಲ್ಲಿ ಒಂದು ಸ್ಪಷ್ಟ ಕಲ್ಪನೆ ಮೂಡುತ್ತದೆ. ಸೂರಿಕುಮೇರಿ ಎಂಬ ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮ ಎಲ್ಲಿದೆಯೋ ಎಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲ. ಆದರೆ ಸೂರಿಕುಮೇರಿ ಜತೆಗೆ ಗೋವಿಂದ ಭಟ್ಟರ ಹೆಸರು ತಳುಕು ಹಾಕಿಕೊಂಡಾಗ ಸ್ಪಷ್ಟ ಮುಖವೊಂದು ಮನಸ್ಸಿನಲ್ಲಿ ತೇಲಿ ಬರುತ್ತದೆ. ಅದೇ ಪ್ರಶಾಂತ ಮುಖ. ರಂಗದ ಮೇಲೆ ನವರಸಗಳನ್ನು ಕ್ಷಣದಲ್ಲೇ ಚಿಮ್ಮಿಸಬಲ್ಲ ಅದೇ ಮುಖ.  ಯಕ್ಷಗಾನ ಲೋಕದ ಅತ್ಯಂತ ಜನಪ್ರಿಯ ವ್ಯಕ್ತಿ ಸೂರಿಕುಮೇರಿ ಗೋವಿಂದ ಭಟ್.

ಬಡ ಪುರೋಹಿತ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಶ್ರೀ ಭಟ್ಟರ ಜನ್ಮದಿಂದಲೇ ಬಡತನ ಬೆಂಬತ್ತಿ ಬಂದಿತ್ತು. ಕೌಟುಂಬಿಕ ಸಾಮಾಜಿಕ ಹೀಗೆ ಹಲವು ಕಾರಣಗಳಿದ್ದರೂ ಜೀವನದ ಹಲವು ಪರೀಕ್ಷೆಗಳಿಗೆ ಎಳವೆಯಲ್ಲೇ ತನಗರಿವಿಲ್ಲದೇ ಎದೆಯೊಡ್ಡಿದವರು. ತನಗರಿವಿಲ್ಲದೇ ಎಂದು ಹೇಳುವುದಕ್ಕೆ ಕಾರಣವಿದೆ. ಬಾಲ್ಯದಲ್ಲಿ ಅವರನ್ನು ಬಾಧಿಸಿದ್ದು ಎಂದರೆ ಹಸಿವು. ಹಸಿದವನಿಗೆ ಮೊದಲ ಸಮಸ್ಯೆಯೇ ಹಸಿವು. ಅದು ಪರಿಹರಿಸುವವರೆಗೂ ಬೇರೇ ಯಾವ ದುರಿತಗಳೂ ಕಣ್ಣಿಗೆ ಕಾಣಿಸುವುದಿಲ್ಲ. ಆ ಹಸಿವಿನ ಪರಿಹಾರಕ್ಕಾಗಿ ಇವರು ಜೀವನದ ಹಲವು ಸಮಸ್ಯೆಗಳನ್ನು ದಾಟುವ ಪ್ರಯತ್ನ ಅನಿವಾರ್ಯವಾಗಿ ಮಾಡಲೇ ಬೇಕಾಯಿತು. ಹಾಗಾಗಿ ಹಸಿವು ಅವರನ್ನು ಎಲ್ಲೆಲ್ಲೆ ಕರೆದುಕೊಂಡು ಹೋಯಿತೋ ಅಲ್ಲೆಲ್ಲ ಗೋವಿನಂತೆ ಗೋವಿಂದ ಭಟ್ಟರು ಸಂಚರಿಸಿದರು. ಈ ಸಂಚಾರದ ದಿಕ್ಸೂಚಿ ಯಕ್ಷಗಾನ ರಂಗಸ್ಥಳವನ್ನೇ ತೋರಿಸಿದ್ದು ಯಕ್ಷಗಾನದ ಜನಪ್ರಿಯ ಕಲಾವಿದನ ಸೃಷ್ಟಿಗೆ ಕಾರಣವಾಯಿತು. ಇದನ್ನು ಗೋವಿಂದ ಭಟ್ಟರು ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಾರೆ. ಕಲೆಯೇ ಜೀವ. ಕಲೆಯೇ ಸರ್ವಸ್ವ ಎಂದು ಹೇಳಿಕೊಳ್ಳುವ ಆಷಾಢಭೂತಿ ತನವಿಲ್ಲ.

ಸಾಮಾನ್ಯವಾಗಿ ಹಸಿವಿನಲ್ಲಿ ಕ್ರಿಯಾಶೀಲವಾಗುವ ಮನಸ್ಸು ಹೊಟ್ಟೆ ತುಂಬಿದಾಗ ಆಲಸ್ಯವನ್ನು ಅನುಭವಿಸುತ್ತದೆ. ಹೊಟ್ಟೆ ಹಸಿವು ಎಂದು ಬೇಡಿಕೊಂಡು ಬರುವ ಭಿಕ್ಷುಕ ಅಥವಾ ಇನ್ನಾರೋ ಅನ್ನ ಹಾಕುವವರೆಗೆ ಬೇಕಾದದ್ದನ್ನು ಮಾಡುವ ಮನಸ್ಸು ಮಾಡುತ್ತಾನೆ. ಹೊಟ್ಟೆ ತುಂಬಿತೋ ಆನಂತರ ಮಾಡಬೇಕಾದ ಕೆಲಸದಲ್ಲಿ ಔದಾಸಿನ್ಯ ಅರಿವಿಲ್ಲದೇ ಬಂದು ಬಿಡುತ್ತದೆ. ಆದರೆ ಗೋವಿಂದ ಭಟ್ಟರು ಯಾವ ಹಸಿವಿಗಾಗಿ ರಂಗಸ್ಥಳವೇರಿದರೋ ಹಸಿವು ನೀಗಿ ಹೊಟ್ಟೆ ತುಂಬಿದಾಗ ಆಲಸಿಗಳಾಗಲಿಲ್ಲ. ಅನ್ನ ಕೊಟ್ಟ ಕಸುಬಿಗೆ ಪ್ರಾಮಾಣಿಕತೆಯನ್ನು ತೋರಿಸಿದರು. ಅದಕ್ಕಾಗಿ ಸಹಜ ಕಲಾವಿದನಿಗಿಂತಲೂ ಅಧಿಕ ತಾದಾತ್ಮ್ಯವನ್ನು ತೋರಿಸಿದರು.  ಈ ಪ್ರಾಮಾಣಿಕತೆ ಅರ್ಪಣಾ ಭಾವ ಭಟ್ಟರನ್ನು ಯಕ್ಷಗಾನ ರಂಗದ ಅದ್ವಿತೀಯ ಕಲಾವಿದನನ್ನಾಗಿಸಿದೆ. ಇಂದಿಂಗೂ ಗೋವಿಂದ ಭಟ್ಟರು ಅದೇ ಭಾವದಿಂದ ರಂಗದಲ್ಲಿ ಕ್ರಿಯಾ ಶೀಲರಾಗಿದ್ದಾರೆ ಎಂದರೆ ವೃತ್ತಿಯಲ್ಲಿ ಅವರ ಬದ್ದತೆಯನ್ನು ತೋರಿಸುತ್ತದೆ. ಇಷ್ಟಾಗಿಯೂ ಅವರು ಹೇಳುವ ಮಾತು ಒಂದೇ “ನಾನು ಕಲಾಪ್ರೇಮದಿಂದ,  ಯಕ್ಷಗಾನದ ಹುಚ್ಚಿನಿಂದ ವೇಷ ಹಾಕಿದವನಲ್ಲ. ಜೀವನದ ಪಾಠವೇ ನನಗೆ ಬಣ್ಣವನ್ನು ಬಳಿಯಿತು.”  ಅದೆಂತಹಾ ಪ್ರಾಮಾಣಿಕತೆ?

ಯಕ್ಷಗಾನ ಲೋಕ ಕೊಟ್ಟ ಅನ್ನವನ್ನು ಅವರೆಂದೂ ಮರೆಯಲಿಲ್ಲ. ಹಾಗಾಗಿಯೇ ಅವರ ಮುಖದಲ್ಲಿ ಅಳಿಯದ ಪ್ರಸನ್ನತಾ ಭಾವ ಸದಾ ಹಸಿರಾಗಿರುತ್ತದೆ. ಇಂದಿಗೂ ಇಷ್ಟು ದೀರ್ಘವಾದ ಕಲಾ ಜೀವನವನ್ನು ಜತೆಗೆ ವಾಸ್ತವ ಬದುಕನ್ನು ಕಂಡ ಅವರಲ್ಲಿ ಸಂತೃಪ್ತಿಯ ಭಾವವಿದೆ. ಮನುಷ್ಯನಿಗೆ ಸಂತೃಪ್ತಿ ಮೂಡವುದು ಭಗವಂತನಲ್ಲಿ  ವಿಶ್ವಾಸವಿರಿಸಿದಾಗ ಮಾತ್ರ. ಭಗವಂತನಲ್ಲಿ ವಿಶ್ವಾಸ ಅಚಲವಾಗಿ ಉಳಿಯಬೇಕಾದರೆ ಆತ ನಿತ್ಯಾಹ್ನಿಕಗಳನ್ನು, ಕರ್ಮ ಅನುಷ್ಠಾನಗಳನ್ನು ಪಾಲಿಸಬೇಕು.  ಇವುಗಳು ಯಾವುದೇ ಫಲಾಫಲದ ನಿರೀಕ್ಷೆಯಿಲ್ಲದೇ ಸಂಕಲ್ಪಿಸುವ ಪರಮಾತ್ಮ ಸ್ಮರಣೆಗಳು. ಕರ್ಮಾನುಷ್ಠಾನಗಳಲ್ಲಿ ಅಚಲವಾದ ನಿಷ್ಠೆಯನ್ನು ಪಾಲಿಸುವ ಇವರು ಯಾವತ್ತೂ ಸ್ಥಿರಮಾನಸ ಚಿತ್ತರಾಗಿ ವ್ಯವಹರಸುತ್ತಾರೆ. ವಾಸ್ತವದ ಬದುಕಿನ ಬಗ್ಗೆ ನಿರ್ದಿಷ್ಟವಾಗಿ ಯೋಚಿಸುತ್ತಾರೆ. ಹಾಗಾಗಿ ನಿತ್ಯ ಶಾಂತರಾಗಿ ಬಾಸವಾಗುತ್ತಾರೆ ಮಾತ್ರವಲ್ಲ ಶಾಂತವಾಗಿರುತ್ತಾರೆ.   ಯಾವ ಉದ್ವೇಗವಿದ್ದರೂ ಇವರ ಮುಖವನ್ನು ನೋಡಿದರೆ ಆ ಉದ್ವೇಗ ಪರಿಹರಿಸಲ್ಪಡುತ್ತದೆ.

ಇವರ ಬಗ್ಗೆ ನನಗಿಂತಲೂ ಹೆಚ್ಚು ತಿಳಿದವರು ಬಹಳಷ್ಟು ಇರಬಹುದು. ಆದುದರಿಂದ ನಾನು ಹೇಳುವ ಈ ಪರಿಚಯ ಲೇಖನ ನನ್ನ ಅರಿವಿಗಷ್ಟೆ ಸೀಮಿತ. ನನಗರಿಯದ ಗೋವಿಂದ ಭಟ್ಟರ ಪುಸ್ತಕದ ಪುಟಗಳು ಇನ್ನೂ ಬಹಳಷ್ಟಿವೆ.

ಯಕ್ಷಗಾನದ ಹಲವು ದಿಗ್ಗಜರ ವಿದ್ವಾಂಸರ ಸಂದರ್ಶನವನ್ನು ದಾಖಲಿಸಿದ ಮಿತ್ರ ರಂಗಣ್ಣನಿಗೆ ಗೋವಿಂದ ಭಟ್ಟರ ಸಂದರ್ಶನ ಮಾಡಬೇಕೆಂಬ ಬಯಕೆ ಮೊದಲಿನಿಂದಲೇ ಇತ್ತು. ನನ್ನಿಂದ ಅದಕ್ಕೆ ಚಿಕ್ಕ ಮಟ್ಟಿನ ಪ್ರೋತ್ಸಾಹವೂ ದೊರಕಿದಾಗ ರಂಗನಾಥರು ಹತ್ಯಾರ ಹೆಗಲಿಗೇರಿಸಿ ಹೊರಟೇ ಬಿಟ್ಟರು. ಸಾಮಾನ್ಯವಾಗಿ ಸಂದರ್ಶನಕ್ಕೆ ಹೋಗುವಾಗ ಒಂದಲ್ಲ ಸಾವಿರ ಕುತೂಹಲ ವಿರುತ್ತದೆ. ಇಂತಿಂತಹ ಪ್ರಶ್ನೆಗಳಿಗೆ ಹೇಗೆ ಉತ್ತರ ಸಿಗಬಹುದು? ಯಾವ ಪ್ರತಿಕ್ರಿಯೆ ಇರಬಹುದು? ಇದು ಸಹಜ. ಆದರೆ ಗೋವಿಂದ ಭಟ್ಟರ ಸಂದರ್ಶನಕ್ಕೆ ಇವರು ಹೊರಟು ನಿಂತಾಗ ಪ್ರಶ್ನೆಗಳು ಅದಕ್ಕೆ ಉತ್ತರವೂ ನಮ್ಮ ಕೈಯಲ್ಲಿತ್ತು. ಅಂದರೆ ಯಾವುದೇ ಪ್ರಶ್ನೆಗಳಿಗೂ ಗೋವಿಂದ ಭಟ್ಟರ ಉತ್ತರ ಹೀಗೆ ಇರುತ್ತದೆ ಎಂಬ ಖಚಿತ ನಿಲುವು ಅಲ್ಲಿತ್ತು. ಯಾಕೆಂದರೆ ಭಟ್ಟರ ವ್ಯಕ್ತಿತ್ವ ಆ ರೀತಿಯದ್ದು. ಅಲ್ಲಿ ಆಷಾಢ ಭೂತಿ ತನವಿಲ್ಲ. ರಂಗದ ಮೇಲಿರುವ ಅಭಿನಯ ಅಲ್ಲಿ ಇಲ್ಲ. ಎಲ್ಲವೂ ನೇರ ಸ್ಪಷ್ಟ. ಖಚಿತವಾದವುಗಳು. ಹಾಗಾಗಿ ಸಂದರ್ಶನ ಮಾಡಿದ ಸಾಧನೆಯ ತೃಪ್ತಿ ಮಾತ್ರ ಇಲ್ಲಿರುತ್ತದೆ.  ಅಂದಿನಿಂದ ಇಂದಿನವರೆಗೂ ಗೋವಿಂದ ಭಟ್ಟರ ನಿಲುವು ಬದಲಾದದ್ದನ್ನು ನಾನು ನೋಡಿಲ್ಲ. ಯಾವುದೇ ಪ್ರಶ್ನೆಗೆ ಹೀಗೆ ಉತ್ತರಿಸುತ್ತಾರೆ ಎಂಬ ಸ್ಪಷ್ಟ ನಂಬಿಕೆ ನನಗಿತ್ತು. ಅದು ಪರಮ ಸತ್ಯವಾದ ವಿಚಾರ. ಇದೊಂದು ಭಟ್ಟರ ವ್ಯಕ್ತಿತ್ವದ ವೈಶಿಷ್ಟ್ಯತೆ.

ಗೋವಿಂದ ಭಟ್ಟರಲ್ಲಿ ನಾನು ಕಂಡದ್ದು ಜೀವನದ ವಾಸ್ತವಿಕ ಸತ್ಯಗಳನ್ನು. ಅವರೊಂದಿಗೆ ಹೃದ್ಯವಾಗಿ ಮಾತಿಗಿಳಿದರೆ ಇದು ಅರ್ಥವಾಗುತ್ತದೆ. ಹಾಗಾಗಿ ಅವರು ಯಕ್ಷಗಾನವನ್ನು ಕೇವಲ ಕಲೆಯಾಗಿ ಕಾಣಲಿಲ್ಲ. ತನ್ನ ಜೀವನದ ಸತ್ಯಗಳಿಗೆ ಉತ್ತರವಾಗಿ ಅದನ್ನು ಕಂಡರು.  ಆ ಸತ್ಯಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಿದರು. ಅದುದರಿಂದಲೇ  ಒಬ್ಬ ಕಲಾವಿದನಾಗಿ ಭಟ್ಟರು ಬಹಳ ಸ್ವಾವಲಂಬಿಗಳು. ಚೌಕಿಯಲ್ಲಿ ಇದನ್ನು ಕಾಣಬಹುದು.  ಅವರ ವೇಷ ಭೂಷಣಗಳನ್ನು ಸ್ವತಃ ಅವರೇ ಮಡಚಿ ಒಪ್ಪವಾಗಿ ಇಡುತ್ತಾರೆ. ಇದು ವೃತ್ತಿಯಲ್ಲಿನ  ಶ್ರದ್ದೆ.  ಹಸಿವಿನ ಋಣ. ಯಾರು ಯಾವಾಗ ಈ ಹಸಿವನ್ನು ಮರೆಯುತ್ತಾರೋ ಅವರು ಈ ರಂಗದಲ್ಲಿ ಮಾತ್ರವಲ್ಲ ಜೀವನ ರಂಗದಲ್ಲಿಯೂ ಇರತಕ್ಕವರಲ್ಲ. ಸ್ಥಿರ ಆರೋಗ್ಯವಿರುವುದರಿಂದ ಇವರಿಗೆ  ಹಸಿವು ಸಮಯಾ ಸಮಯದಲ್ಲಿ ಹಾಜರಾಗುತ್ತದೆ. ಮತ್ತದೇ ಪ್ರವೃತ್ತಿಯನ್ನು ಜ್ಞಾಪಿಸುತ್ತದೆ.  ಅದಕ್ಕೆ ಕಾರಣ ಅನ್ನ ಕೊಟ್ಟು ಹಸಿವು ನೀಗಿದ ಕೈಗಳು. ಹಾಗಾಗಿ ಇನ್ನೂ ವಿರಮಿಸದ ಪ್ರವೃತ್ತಿ.   ಬಹುಷಃ ಹೊಟ್ಟೆ ಹಸಿವು ನೀಗಿದರೂ ಇವರ ಹಸಿವು ಶಮನವಾಗುವುದಿಲ್ಲ.  ಈ ಹಸಿವಿನ ರೂಪ ಬೇರೆಯೇ ಇರಬಹುದು.

ಗೋವಿಂದ ಭಟ್ಟರ ಜತೆ ಒಂದಷ್ಟು ಸಮಯವನ್ನು ಹಲವು ಸಲ ಕಳೆದಿದ್ದೇನೆ. ಆದರೆ ಅಷ್ಟೂ ಹೊತ್ತು ನಾನು ಯಕ್ಷಗಾನದ ಬಗ್ಗೆ ಅವರ ಕಲಾಜೀವನದ ಬಗ್ಗೆ ಮಾತನಾಡಿದ್ದು ಕಡಿಮೆ. ಯಾಕೆಂದರೆ ಜೀವನದ ವ್ಯಾವಹಾರಿಕ ಸತ್ಯಗಳು ಅವರನ್ನು ಕಂಡಾಗ ಯೋಚನೆಗೆ ಬರುತ್ತವೆ. ಅದರ ಬಗ್ಗೆ ಮಾತನಾಡಿದಾಗ ಅವರು ಅತ್ಯಂತ ಪ್ರಾಮಾಣಿಕವಾಗಿ ಬಿಡುತ್ತಾರೆ. ಮನಸ್ಸಿನ ಅನಿಸಿಕೆಗಳನ್ನು ಸರಳವಾಗಿ ಹೇಳಿಬಿಡುತ್ತಾರೆ. ಕೇಳುವವರು ಏನೇ ತಿಳಿಯಲಿ ತನ್ನ ಜೀವನದಲ್ಲಿ ಕಂಡ ಸತ್ಯಗಳ ಬಗ್ಗೆಅವರು ನಿಷ್ಠೂರರಾಗಿ ಬಿಡುತ್ತಾರೆ. ತತ್ವ ಸಿದ್ದಾಂತಗಳ  ಬಗ್ಗೆ ತಲೆಕೆಡಿಸಿಕೊಳ್ಳುವ ಜಾಯಮಾನವಿಲ್ಲ. ಅವರು ಕಂಡುಕೊಂಡ ಜೀವನ ಸತ್ಯಗಳಲ್ಲಿ ಅಚಲವಾದ ವಿಶ್ವಾಸ. ಅದನ್ನು ಅಲ್ಲಗಳೆಯುವ ಅನುಭವ ನಮ್ಮದಲ್ಲ.

ಇವರು ಎಂದಿಗೂ ತನ್ನ ಬಗ್ಗೆ ಹೇಳಿಕೊಂಡವರಲ್ಲ. ಹಾಗಾದುದರಿಂದಲೇ ರಂಗನಾಥರು ಸಂದರ್ಶನ ಮಾಡಿ  ಇವರ ಸ್ವ ಪರಿಚಯ ( ಬಯೋಡಾಟ)  ವನ್ನು ಕೇಳಿದರು. ಅದಕ್ಕವರು ಮತ್ತೆ ಯೋಚಿಸದೆ ಒಂದೇ ಮಾತು ಅದನ್ನು ರಾಜಕುಮಾರ ನಲ್ಲೇ ಕೇಳಿಬಿಡಿ. ಎಲ್ಲಾ ವಿವರ ಸಿಗುತ್ತದೆ. ತಮ್ಮ ಸಮೀಪ ವರ್ತಿಗಳಲ್ಲಿ ಅದೊಂದು ವಿಶ್ವಾಸ. ನಾನೇನು ಹೇಳಿಯೇನು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತನ್ನ ಬಗ್ಗೆ ವ್ಯತಿರಿಕ್ತವಾಗಿ ಹೇಳಿದರೂ  ಅದಕ್ಕೆ ಯೋಚಿಸುವುದಿಲ್ಲ.  ಪ್ರಾಮಾಣಿಕನಾದವನಿಗೆ ವ್ಯತಿರಿಕ್ತದ ಭಯವಿರುವುದಿಲ್ಲ. ಇದು ಮಾರ್ಮಿಕ. ಅಭಿಮಾನದ ಅರ್ಥ ತಿಳಿಯದೇ  ಹಿಂಬಾಲಿಸುವವರು ಇದನ್ನು ಅರ್ಥವಿಸಿಕೊಳ್ಳಬೇಕು.  ಸಾಮಾನ್ಯವಾಗಿ ಇಂತಹ ವಿಚಾರಗಳಲ್ಲಿ ತಮ್ಮದಲ್ಲದೇ ಇದ್ದದ್ದನ್ನು ಸೇರಿಸಿ ಹೇಳುವವರೇ ಅಧಿಕ. ಹಾಗಿರುವಾಗ ತಾವೇನೂ ಆಡದೆ ಅದನ್ನು ನನ್ನ ತಲೆಗೆ ರವಾನಿಸಿಬಿಟ್ಟರು.  

ಇವರಲ್ಲಿ ನಾನು ಕಂಡ ಅತ್ಯಂತ ಶ್ರೇಷ್ಠ ಗುಣವೆಂದರೆ, ಬ್ರಾಹ್ಮಣನಾಗಿ ಇವರು ಕರ್ಮ ನಿಷ್ಠರಾಗಿ ಅನುಷ್ಠಾನವನ್ನು ಸದಾ ಕಾಯ್ದುಕೊಂಡಿರುವುದು.  ಇವರ ವೃತ್ತಿ ಪ್ರವೃತ್ತಿ   ನಿತ್ಯಾಹ್ನಿಕಗಳನ್ನು ಬಾಧಿಸುವುದಿಲ್ಲ. ವ್ಯಾವಹಾರಿಕ ಪ್ರಪಂಚದ ವಾಸ್ತವಗಳೊಂದಿಗೆ ಸದಾ ಸ್ಪಂದಿಸುತ್ತಾರೆ.  ಯಕ್ಷಗಾನವಲ್ಲದೇ ಇದ್ದರೆ ಪೌರೋ ಹಿತ್ಯವನ್ನೂ ಮಾಡಬಲ್ಲರು, ಪಾಜಕರಾಗಿ ಸೌಟನ್ನೂ ಹಿಡಿಯಬಲ್ಲರು. ವ್ಯಾವಹಾರಿಕ ಜೀವನದ ಪ್ರವೃತ್ತಿಯನ್ನು ಎಂದಿಗೂ ಬಿಡದ ಚಲನ ಶೀಲ ವ್ಯಕ್ತಿತ್ವ. ಜೀವನಕ್ಕೆ ಯಾವುದನ್ನಾದರೂ ದುಡಿಯಬೇಕು. ಅದರಲ್ಲಿ ಇರುವ ಶ್ರದ್ದೆ. ಬಹುಶಃ ಬಾಲ್ಯದ ಬವಣೆಗಳು ಇದನ್ನು ಕಲಿಸಿರುತ್ತದೆ.

ವ್ಯಾವಹಾರಿಕ ಪ್ರಪಂಚದ ಪರಮ ಸತ್ಯವನ್ನು ಚೆನ್ನಾಗಿ ಅರಿತವರು. ಹಾಗಾಗಿ ಇವರು ನಿರ್ಲಿಪ್ತರಾಗಿಯೂ ಇರಬಲ್ಲರು. ಅವರ ಪ್ರವೃತ್ತಿಯಲ್ಲಿ ಇದು ಅವರಿಗೆ ಪ್ರಿಯವಾದ ನಿಲುವು.. ಬಹಳಷ್ಟು ಯೋಚಿಸಿ ಮಥಿಸಿ ಪ್ರಪಂಚವನ್ನು ಅವಲೋಕಿಸಿ ಅವರು ತನ್ನ ನಿಲುಮೆಯನ್ನು ತಳೆಯುತ್ತಾರೆ. ಯಾರೇನೇ ಹೇಳಿದರೂ ತನ್ನ ನಿಲುಮೆಯ ಬಗ್ಗೆ ಅಚಲವಾದ ವಿಶ್ವಾಸ. ಸೌಮ್ಯವಾಗಿಯೇ ಪರಿಣಾಮವನ್ನೂ ಬೀರ ಬಲ್ಲ ವ್ಯಕ್ತಿತ್ವ.

ಇಂದಿನ ಯುವಕರನ್ನೂ ನಾಚಿಸಬಲ್ಲ ಚಲನ ಶೀಲತೆ. ಚಟುವಟಿಕೆ. ರಂಗದ ಮೇಲಿನ ಪ್ರವೃತ್ತಿ, ಇದೆಲ್ಲವೂ ಅವರಿಗೆ ಒಲಿದದ್ದು ಅವರ ಯೋಗಾಭ್ಯಾಸದಿಂದ. ಅದರಿಂದ ಇನ್ನೊಬ್ಬರಿಗೆ ಸ್ಫೂರ್ತಿಯಾಗಬಲ್ಲರು. ಈ ಸ್ಫೂರ್ತಿಯಿಂದಲೇ  ಯಕ್ಷಗಾನದಲ್ಲಿ ಹಲವಾರು ಶಿಷ್ಯವರ್ಗವನ್ನು  ಹೊಂದಿದವರು ಇವರು.

ಬಹಳ ಸರಳ ಮತ್ತು ನೇರ ವ್ಯಕ್ತಿತ್ವ. ಶಾಂತ ಸ್ವಭಾವವಾದರೂ ಇವರ ತೀಕ್ಷ್ಣ ಅವಲೋಕನ ಸದಾ ಹಿಂಬಾಲಿಸುತ್ತಿರುತ್ತದೆ.  ಬಹಳ ಬೇಗನೇ ಆತ್ಮೀಯರಾಗಿ ಬಿಡುತ್ತಾರೆ.  ಕಲಾಜೀವನದಲ್ಲಿ ಗೌರವವನ್ನು ಕಾಯ್ದುಕೊಂಡವರು. ನಿರ್ಭಿಡೆಯ ನಡೆ. ಅದಕ್ಕೆ ಅವರದ್ದೆ ಆದ ಕಾರಣಗಳನ್ನು ನಿದರ್ಶನಗಳನ್ನು ಸುಲಭವಾಗಿ ಒದಗಿಸಬಲ್ಲರು. ವ್ಯಯಕ್ತಿವಾಗಿ ಸದ್ಭಾವನೆ ಸಹಕರಣ ಇದೆಲ್ಲದಕ್ಕೂ ಪ್ರತೀಕವಾಗಬಲ್ಲರು. ಒಂದು ಸಲ ಯಕ್ಷಗಾನ ತಾಳ ಮದ್ದಲೆಗೆ ಆಹ್ವಾನಿಸುವ ಅವಕಾಶ ನನಗೆ ಒದಗಿ ಬಂತು. ಕರೆ ಮಾಡಿದೆ. ದಿನ ವಿವರ ಎಲ್ಲ ಕೇಳಿದ ಮೇಲೆ ಬರುತ್ತೇನೆ ಎಂದಷ್ಟೇ ಹೇಳಿ ದಿನಚರಿಯಲ್ಲಿ ಗುರುತು ಮಾಡಿಕೊಂಡರು.  ಬರುತ್ತೇನೆ ಎಂದಷ್ಟೇ ಹೇಳಿದವರು ಮತ್ತೆ ಯಾವ ವಿವರವನ್ನು ಕೇಳಲಿಲ್ಲ. ಸಾಮಾನ್ಯವಾಗಿ ತಾಳ ಮದ್ದಲೆಗೋ ಆಟಕ್ಕೊ ಕರೆದಾಗ ಕಲಾವಿದರು, ಅದರಲ್ಲೂ ತಾರಾಮೌಲ್ಯ ಇದ್ದವರು ಬಹಳಷ್ಟು ಚೌಕಾಶಿಗೆ ಇಳಿಯುವುದುಂಟು. ತಮಗೆ ಇಂತಹುದೇ ಪಾತ್ರವಾಗಬೇಕು, ಇಲ್ಲ ಇಂತಹವರೇ ಪ್ರತಿ ಪ್ರಾತ್ರದಲ್ಲಿ ಇರಬೇಕು. ಇಷ್ಟೇ ಸಂಭಾವನೆ ಸಿಗಬೇಕು. ಇದನ್ನೆಲ್ಲ ಮೊದಲೇ ಮಾತನಾಡಿ ನಿರ್ಧರಿಸಿ ಬಿಡುವ ತವಕ. ಆದರೆ ಗೋವಿಂದ ಭಟ್ಟರು ಎಷ್ಟೇ ವ್ಯಾವಹಾರಿಕವಾಗಿ ಚಿಂತಿಸುವುದಿದ್ದರು ಬರುತ್ತೇನೆ ಎಂಬ ಒಂದು ಒಪ್ಪಿಗೆ ಬಿಟ್ಟರೆ ಬೇರೆ ಮಾತಿಲ್ಲ. ಚೌಕಾಶಿ ಇಲ್ಲ. ಸಂಭಾವನೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕರೆದ ನನ್ನ ಬಗ್ಗೆ ವಿಶ್ವಾಸವೋ ಇಲ್ಲ ಅವರ ಪ್ರವೃತ್ತಿಯೇ ಆ ರೀತಿಯೋ ನನಗೆ ಇಂದಿಗೂ ಕೌತುಕವಾಗಿಯೇ ಉಳಿದಿದೆ. ಕೊನೆಗೆ ನಾನೇ ಕೇಳಿದೆ ಇಂತಹ ಪಾತ್ರ ಮಾಡಬಹುದೇ?  ಆಗ ಶಾಂತವಾದ ಸ್ವರದಲ್ಲಿಯೇ ಹೇಳಿದರು,

“ನನಗೆಂಥದ್ದೋ? ಎಂಥದ್ದೂ ಅದೀತು? ಯಾವ ಪ್ರಸಂಗವೂ ಯಾವ ಪಾತ್ರವೂ ಅಲ್ಲಿ ಬಂದಾಗ ಹೇಳೀದರೂ ತೊಂದರೆ ಇಲ್ಲ. ಯಾವದೂ ಅದೀತು“.

ಯಕ್ಷಗಾನ ಸಂಘಟಕರಿಗೆ ಇಂತಹ ಕಲಾವಿದರ ಆವಶ್ಯಕತೆ ಈಗ ಬಹಳಷ್ಟಿದೆ ಎನ್ನಿಸಿತು. ಇಷ್ಟು ಹೊಂದಿಕೊಳ್ಳುವ ಕಲಾವಿದರು ಇಂದು ಯಕ್ಷಗಾನದಲ್ಲಿ ಬೆರಳೆಣಿಕೆಯಷ್ಟೇ ಇರುವುದು. ಅಗಾಧವಾದ ಅನುಭವ ಯಾವುದನ್ನೂ ಮಾಡಬಲ್ಲೆ ಎಂಬ ಆತ್ಮ ವಿಶ್ವಾಸ ಇದು ಯಕ್ಷಗಾನ ಅಲ್ಲ ಅವರಿಗೆ ಬದುಕು ಕಲಿಸಿದ ಪಾಠಗಳು. ಅದು ಯಕ್ಷಗಾನದಲ್ಲೂ ವ್ಯಕ್ತವಾಯಿತು.  ಯಕ್ಷಗಾನ ರಂಗದ ಮೇಲೆ ಇವರ ಬದುಕು ಅತೀ ದೀರ್ಘ ಬದುಕು, ಇಷ್ಟು ದೀರ್ಘ ಬದುಕು ಅತ್ಯಂತ ವಿರಳಾತಿ ವಿರಳ ಎನ್ನಬಹುದು. ವಿಶೇಷವೆಂದರೆ ಇವರ ಶಿಷ್ಯಂದಿರು ನಿವೃತ್ತಿ ಪಡೆದುಕೊಂಡು ಮೇಳ ಬಿಟ್ಟು ಹೊರನಡೆದರೂ ಗುರುಗಳಾದ ಇವರು ಇನ್ನೂ ರಂಗದಲ್ಲಿ ಪ್ರವೃತ್ತರಾಗಿಯೇ ಇದ್ದಾರೆ.

ಯಕ್ಷಗಾನದ ವೃತ್ತಿ ಬದುಕಿನಲ್ಲಿ ಇವರು  ಪ್ರವರ್ತಕ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಾರೆ. ಅದಕ್ಕೆ ಅವರದೇ ಆದ ತಾತ್ವಿಕ ಆಧಾರಗಳನ್ನೂ ಸರಳವಾಗಿ ಒದಗಿಸುತ್ತಾರೆ.  ಶ್ರೀ ಕಡತೋಕ ಮಂಜುನಾಥ ಭಾಗವತರ ಸಾರಥ್ಯದಲ್ಲಿ ಗೋವಿಂದಣ್ಣನ ನೈಜ ಪ್ರತಿಭೆ ಪ್ರಕಾಶಕ್ಕೆ ಬಂತು. ಯಾವಾಗ ಕಲಾವಿದನಾದವನು ಪಾತ್ರಕ್ಕೆ ಮಾದರಿಯಾಗುತ್ತಾನೋ ವೃತ್ತಿಜೀವನದ ಪರಮೋತ್ಕರ್ಷ ಸ್ಥಾನವನ್ನು ತಲುಪಿದ ಎಂದೇ ಆಗುತ್ತದೆ.. ಆ ಕಾಲಾದಲ್ಲಿ ಶ್ರೀ ಧರ್ಮಸ್ಥಳ ಮೇಳದ ಗಜ ಪಡೆಯಲ್ಲಿ ಒಂದು ಸೇನಾನಿಯಾಗುವುದು ಮಾತ್ರವಲ್ಲ ಸೇನಾಪತಿ ಸ್ಥಾನಕ್ಕೆ ಸ್ಪರ್ಧಿಯಾಗುವುದು ಸಾಮಾನ್ಯ ಮಾತಲ್ಲ. ಅದರಲ್ಲೂ ಕಡತೋಕ ಭಾಗವತರಾಗಲೀ ಮೇಳಕ್ಕೆ  ಅನೇಕ ಯಶಸ್ವೀ ಪ್ರಸಂಗವನ್ನು ರಚಿಸಿದ ಶ್ರೀ ಅಮೃತ ಸೋಮೇಶ್ವರರಾಗಲೀ ಇವರನ್ನು ಗಮನಿಸಿಯೇ ಪ್ರಸಂಗ ನಡೆ ರೂಪಿಸಲ್ಪಡುತ್ತಿತ್ತು. ಆಗ ಮೇಳದಲ್ಲಿ ಮೂರು ಜನ ಅಗ್ರಗಣ್ಯ ಕಲಾವಿದರು. ಒಬ್ಬರು ಶ್ರೀ ಕುಂಬಳೆ ಸುಂದರ್ ರಾವ್, ಇನ್ನೊಬ್ಬರು ಪುತ್ತೂರು ಶ್ರೀ ನಾರಾಯಣ ಹೆಗ್ಗಡೆಯವರು, ಮತ್ತೊಬ್ಬರು ಇವರು ಶ್ರೀ ಗೋವಿಂದ ಭಟ್ಟರು. ಇಡೀ ರಾತ್ರಿಯ ಪ್ರಸಂಗದಲ್ಲಿ  ಈ ಮೂವರಲ್ಲಿ ಯಾರಾದರೊಬ್ಬರು ರಂಗದಲ್ಲಿ ಇರುವಂತೆ ಪ್ರಸಂಗ ಸಂಯೋಜನೆಯಾಗುತ್ತಿತ್ತು. ಈ ಮೂರು ಜನರಲ್ಲಿ ಒಬ್ಬರಲ್ಲ ಒಬ್ಬರು ರಂಗಸ್ಥಳದಲ್ಲಿದ್ದರೆ ಪ್ರೇಕ್ಷಕನನ್ನು ಹಿಡಿದುಕೊಳ್ಳುವುದು ಕಷ್ಟವಲ್ಲ. ಇದು ಕಡತೋಕರ ತಂತ್ರಗಾರಿಕೆ. ಪ್ರಸಂಗಗಳು ಯಶಸ್ವಿಯಾಗುವುದಕ್ಕೆ ಇದೂ ಒಂದು ಪ್ರಧಾನ ಕಾರಣವಾಗಿತ್ತು.  ಸಮರ್ಥ ನಿರ್ದೇಶನಕ್ಕೆ ಗೋವಿಂದ ಭಟ್ಟರೂ ಸಾಕ್ಷಿಯಾಗಿದ್ದು ಆ ಕಾಲದಲ್ಲಿ ಯುವಕ ಭಟ್ಟರ ಸಾಧನೆ ಎನ್ನಬೇಕು. ಇವರು ನಿರ್ವಹಿಸಿದ ಪಾತ್ರಗಳನ್ನು ಇವರ ಗೈರು ಹಾಜರಿಯಲ್ಲಿ ಮತ್ತೊಬ್ಬನಿಗೆ ನಿರ್ವಹಿಸುವುದು ಅತ್ಯಂತ ದೊಡ್ಡ ಸವಾಲಾಗಿತ್ತು. ಸವಾಲಾಗಿತ್ತು ಮಾತ್ರವಲ್ಲ ಅದು ಅಸಾಧ್ಯವೂ ಆಗಿತ್ತು.

 ಅದೇನಿದ್ದರೂ ಯಕ್ಷಗಾನದ ವಿಚಾರಕ್ಕೆ ಬಂದಾಗ  ನಾನು ಇವರನ್ನು ಕೆಲವು ಪಾತ್ರವಾಗಿಯೇ ಕಾಣುತ್ತೇನೆ.. ಮಹಾ ಬ್ರಾಹ್ಮಣದ ಕೌಶಿಕ ಅಥವಾ ವಿಶ್ವಾ ಮಿತ್ರನಾಗಿರಬಹುದು, ಪಾದುಕಾ ಪ್ರದಾನದ ಶ್ರೀ ರಾಮನಾಗಿರಬಹುದು ಚಕ್ರವರ್ತಿ ದಶರಥದ ವಾಲ್ಮೀಕಿಯಾಗಿರಬಹುದು ಇಂತಹ ಯುಗ ಪ್ರವರ್ತಕ ಪಾತ್ರಗಳಲ್ಲಿ ಗೋವಿಂದ ಭಟ್ಟರ ಅಂತಃ ಸತ್ವ ಅವರಿಗೆ ಅರಿವಿದ್ದೋ ಇಲ್ಲದೆಯೋ ಅದು ಪ್ರಕಟವಾಗುತ್ತದೆ. ಹಾಗಾಗಿ ಇಲ್ಲಿ ಕಾಣುವ ಅಂತರಂಗದ ಗೋವಿಂದಣ್ಣ ಉಳಿದ ಕೌರವನಲ್ಲೋ,  ಕಂಸನಲ್ಲೋ ಜರಾಸಂಧನಲ್ಲೋ ಕಾಣುವುದಕ್ಕೆ ಸಾಧ್ಯವಿಲ್ಲ.  ಅದರಲ್ಲೂ ಮಹಾಬ್ರಾಹ್ಮಣದ ಕೌಶಿಕನ ಪಾತ್ರದ ಅಂತೀಂದ್ರಿಯದ  ಕಸುವು ಅದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಮೊದಲಿಗೆ ರಾಜವೇಷದ ಕೌಶಿಕ ಆನಂತರ ತ್ರಿಶಂಕು ಪ್ರಕರಣದ ವಿಶ್ವಾಮಿತ್ರ ಇವೆರಡನ್ನೂ ಒಂದೇ ಎಸೆತಕ್ಕೆ ನಿರ್ವಹಿಸುತ್ತಿದ್ದ ಇವರ ಚೈತನ್ಯ ಅದ್ಭುತ. ರಂಗಸ್ಥಳವನ್ನು ವಿಶ್ವಾಮಿತ್ರನಾಗಿ ಇವರು ಆಕ್ರಮಿಸಿದ ರೀತಿ ನಂತರ ಆ ಪಾತ್ರವನ್ನು ಮುಂದುವರೆಸುವುದೂ ದೊಡ್ಡ ಸವಾಲಾಗಿತ್ತು. ಪ್ರೇಕ್ಷಕ ವಿಶ್ವಾಮಿತ್ರನ ಗುಂಗಿನಿಂದ ಹೊರಬರುವುದು ಸಾಧ್ಯವಿಲ್ಲದ ಮಾತು.   ಬಹುಶಃ ನಿತ್ಯ ಅನುಷ್ಠಾನದ ಪ್ರಭಾವ ಇರಬಹುದು, ಜತೆಗೆ ಸಂಸ್ಕ್ರತ ಭಾಷಾ ಪರಿಣತಿ,  ಆ ಮೂಲಕ  ಗಳಿಸಿದ ಜ್ಞಾನದ ಸತ್ವವೂ ಇರಬಹುದು, ಇದರಿಂದ  ಈ ಪಾತ್ರಗಳಾಗಿ ಗೋವಿಂದ ಭಟ್ಟರು ರಂಗವೇರಿದಾಗ ಅವರ ಅಂತರಂಗದ ಮುಖ ಅಲ್ಲಿ ತೆರೆದುಕೊಳ್ಳುತ್ತದೆ. ಅದು ಕೇವಲ ಪಾತ್ರವೂ ಆಗುವುದಿಲ್ಲ, ಕೇವಲ ಗೋವಿಂದಣ್ಣನೂ ಆಗುವುದಿಲ್ಲ. ಅಲ್ಲಿ ಇನ್ನೇನೋ ವಸ್ತು ಅಂತರ್ಧಾರೆಯಾಗಿ ಪ್ರವಹಿಸಿದಂತೆ ಭಾಸವಾಗುತ್ತದೆ. ಇಲ್ಲಿ ಕಂಡುಬರುವ ಈ ಅವ್ಯಕ್ತ ಹರಿವು ಏನಿದೆಯೋ  ಅದು ಇವರ ಕೌರವ, ಋತುಪರ್ಣ ತಾಮ್ರಧ್ವಜಂತಹ ರಾಜಸ ಪಾತ್ರಗಳಲ್ಲಿ ಕಂಡುಬರುವುದಿಲ್ಲ. ಹಾಗಿದ್ದರೂ ಇವರ ರಾಜವೇಷಗಳು ತೆಂಕುತಿಟ್ಟು ಯಕ್ಷಗಾನದ ಮಾದರೀ ವೇಷಗಳಂತೆ ವಿಜ್ರಂಭಿಸುವುದು ಇವರ ಪ್ರವರ್ತಕ ಗುಣಗಳಿಂದಲೇ. ಅಲ್ಲಿ ಪ್ರತೀ ಸಲವೂ ಸೂಕ್ಷವಾಗಿಯಾದರೂ ಒಂದು ಅವಿಷ್ಕಾರ ಕಂಡುಬರುತ್ತದೆ.  ಇದಕ್ಕೆ ಸಾಕ್ಷಿ ಒಂದೇ ಕಡೆಯಲ್ಲಿ ಗಧಾಯುದ್ದದ  ಕೌರವವನಾಗಿ  ಹತ್ತು ಸಲ ರಂಗಸ್ಥಳ ವೇರಿದ್ದರು.

 ದೇವಿ ಮಾಹಾತ್ಮೆ ಎಂಬ ಪ್ರಸಂಗದಲ್ಲಿ ಇವರು ಮಾಡದೇ ಇದ್ದ ಪಾತ್ರಗಳೇ ಇಲ್ಲ ಮತ್ತು  ರಾಮಾಯಣದ ಯಕ್ಷಗಾನ ಪ್ರಸಂಗಗಳಲ್ಲಿ ಇವರು ಎಲ್ಲಾ ಪಾತ್ರಗಳನ್ನು ನಿರ್ವಹಿಸಿದವರಿದ್ದಾರೆ. ಅದು ವೃತ್ತಿ ಬದುಕಿನಲ್ಲಿ ಅನಿವಾರ್ಯವಾಗಿತ್ತೇ ಹೊರತು ಅದೊಂದು ಸಾಧನೆ ಎಂದು ಪರಿಗಣಿಸುವ ಹಾಗಿಲ್ಲ ಎಂದು ಪ್ರಾಮಾಣಿಕವಾಗಿ ಹೇಳುತ್ತಾರೆ.

ಯಕ್ಷಗಾನವನ್ನು ಇವರು ಕಲೆಯಾಗಿ ಕಂಡು ಮೋಹಿಸಿದವರಲ್ಲ. ವ್ಯವಸ್ಥಿತ ವಿವಾಹದ ರೀತಿಯಂತೆ ವಿವಾಹವಾದ ಮೇಲೆ ಸಹಧರ್ಮಿಣಿಯನ್ನು ಪ್ರೀತಿಸಿದಂತೆ, ಆ ಪ್ರೀತಿಗೆ ಬದ್ಧರಾಗಿ ಕೌಟುಂಬಿಕ ಜೀವನ ವ್ಯವಸ್ಥಿತವಾಗಿ ನಡೆಸುವಂತೆ ಯಕ್ಷಗಾನದೊಂದಿಗೆ ತಾದಾತ್ಯ್ಮವನ್ನು ತೋರಿದವರು. ಯಕ್ಷಗಾನದಲ್ಲಿ ಅನ್ನ ಬ್ರಹ್ಮನನ್ನೇ ಕಂಡ ಇವರು ಅಲ್ಲಿ ಉಂಡ ಅನ್ನದಿಂದ ತಣಿದ ಹಸಿವವನ್ನು ಎಂದಿಗೂ ಮರೆಯಲಿಲ್ಲ. ಆ ಕಾರಣಕ್ಕೆ ಈಗಲೂ ರಂಗದಲ್ಲಿ ಸದಾ ಪ್ರವೃತ್ತರು. ಆ ಅನಿಟ್ಟಿನಲ್ಲಿ ಈಗಲೂ ಅವರ ಹಸಿವು ಇಂಗಿದಂತೆ ಭಾಸವಾಗುವುದಿಲ್ಲ. 

          ಯಾರನ್ನೇ ಆಗಲಿ ಅವರು ನಿಕೃಷ್ಟವಾಗಿ ಕಾಣುವುದಿಲ್ಲ. ಬಾಲ್ಯದಲ್ಲಿ ತಾನು ಅನುಭವಿಸಿದ ಭರ್ತ್ಸನೆ, ಅವಹೇಳನೆ, ಹಿಂಸೆ ಇವುಗಳೆಲ್ಲದರ ಪರಿಣಾಮ ಅನುಭವ ಮಾಗಿದಾಗ ಅವರ ವ್ಯಕ್ತಿತ್ವದಲ್ಲೂ ಪಕ್ವತೆಯನ್ನು ತಂದಿದೆ. ತಾತ್ವಿಕವಾಗಿ ಸೈದ್ದಾಂತಿಕವಾಗಿ ತನ್ನದೇ ವೆತ್ಯಸ್ಥ ಸಿದ್ಧಾಂತವನ್ನು ಹೊಂದಿದ್ದರೂ ಮನಸ್ಸಿನಿಂದ ಯಾರಲ್ಲೂ ವೈಷಮ್ಯವನ್ನು ತೋರಿದವರಲ್ಲ. ಸಿದ್ದಾಂತ ಬೇರೆ, ವಾಸ್ತವದ ಜೀವನ ಧರ್ಮ ಬೇರೆ. ಆದರೆ ಇಂದು ಬಾಹ್ಯ ಜಗತ್ತಿನಲ್ಲಿ ಸಿದ್ದಾಂತವನ್ನು ವಿರೋಧಿಸಿದವನು ಎಲ್ಲದರಲ್ಲೂ ಜನ್ಮ ವಿರೋಧಿಯಾಗಿ ಕಾಣುವುದೇ ಹೆಚ್ಚು. ಇಲ್ಲಿ ಬರುವ ತತ್ವ ಭೇದವಾಗಲಿ ಸಿದ್ದಾಂತ ವೆತ್ಯಾಸಗಳಾಗಲಿ ಇವರಿಗೆ ಅರ್ಥವಾಗುತ್ತದೆ. ಆದರೆ ಕಲಾವಿದನ ತತ್ವ ಸಿದ್ದಾಂತಗಳೇನೆ ಇರಲಿ ಅದನ್ನು ವ್ಯಯಕ್ತಿಕ ನೆಲೆಗೆ ತಳುಕು ಹಾಕಿ ನೋಡುವುದೇ ಅಧಿಕ. ಹಾಗಾಗಿ ಕಲಾವಿದನ ಮೇಲೆ ಅಂಧಾಭಿಮಾನ ಬೆಳೆಯುತ್ತದೆ. ಅಲ್ಲಿ ತತ್ವ ಸಿದ್ದಾಂತಗಳ ಬಗ್ಗೆ ಗಮನವೇ ಇರುವುದಿಲ್ಲ. ಅವುಗಳನ್ನು ಅರ್ಥೈಸಿಕೊಳ್ಳುವ ಮನೋಭಾವವೇ ಇರುವುದಿಲ್ಲ. ಕೇವಲ ಅಭಿಮಾನ. ಈ ಅಭಿಮಾನಕ್ಕೆ ಸ್ಪಷ್ಟ ರೂಪು ರೇಷೆ ಏನು ಇರುವುದಿಲ್ಲ. ಈ ಅಭಿಮಾನ ಆಕ್ಷೇಪಗಳನ್ನು ಸಹಿಸುವುದಿಲ್ಲ. ಆದರೆ ಅಭಿಮಾನವೋ ಪ್ರೀತಿಯೋ ಗೋವಿಂದ ಭಟ್ಟರು ಯಾವುದಕ್ಕೂ ತಲೆ ಕೆಡಿಸಿಕೊಂಡವರಲ್ಲ. ತಾನು ನಡೆವ ಹಾದಿ ತಾನು ತಳೆವ ನಿಲುವು ಎಲ್ಲದರಲ್ಲೂ ಪ್ರಾಮಾಣಿಕವಾಗಿ ವ್ಯವಹರಿಸಿದವರು.

          ಕಲಾವಿದನಾದವನು  ವಿಮರ್ಶೆಯನ್ನು  ಒಪ್ಪಿಕೊಳ್ಳಬೇಕು ಎಂದೇ ಹೇಳುತ್ತಾರೆ. ಒಬ್ಬ ವಿಮರ್ಶಕನಿಗೆ ಪರಿಧಿಗಳು ಅರ್ಹತೆಗಳು ಇರುವ ಅಗತ್ಯವಿಲ್ಲ. ಊಟ ಮಾಡುವವನಿಗೆ ಅಡುಗೆ ಮಾಡುವುದಕ್ಕೆ ಗೊತ್ತಿರಬೇಕೆಂದೇನು ಇಲ್ಲ. ಇದು ರುಚಿಯಾಗಿಲ್ಲ ಎಂದರೆ ಮಾಡಿ ತೋರಿಸು ಎನ್ನುವುದು ಮೂರ್ಖತನ.  ಇದನ್ನು ಸ್ಪಷ್ಟವಾಗಿ ಸಂದರ್ಶನದಲ್ಲಿ ಉಚ್ಚರಿಸಿದ್ದಾರೆ. ಯಾವುದೇ ವಿವಾದವಿರಲಿ  ವಿಮರ್ಶಕರನ್ನು ಯದ್ವಾತದ್ವ ಹೀಯಾಳಿಸಿ ಚಪಲ ತೀರಿಸಿಕೊಳ್ಳುವ ಅವಕಾಶವಾದಿಗಳು ಇದನ್ನು ಅರ್ಥವಿಸಿಕೊಳ್ಳುವುದಿಲ್ಲ. ಯಾಕಂದರೆ ಇವೆಲ್ಲ ಚಲಾವಣೆಯಾಗದ ಸವಕಲು ನಾಣ್ಯಗಳು

          ಸಂದರ್ಶನಕ್ಕಾಗಿ ನಾನು ಕರೆ ಮಾಡಿದಾಗ ಅದಕ್ಕೊಂದು ಅವಧಿಯನ್ನು ನಿರ್ಣಯಿಸಿ ತಿಳಿಸಿದರು. ಇಂತಹವರು ಈ ಅವಧಿಯಲ್ಲಿ ಸಂಪರ್ಕಿಸುತ್ತಾರೆ ಎಂದು ರಂಗನಾಥನ ಹೆಸರನ್ನು ಸೂಚಿಸಿದ್ದೆ. ಮೊದಲು ರಂಗನಾಥರು ಯಾರೋ ಅಂತ ಆತಂಕ ಕೌತುಕವನ್ನು ತೋರಿದರೂ ರಂಗನಾಥರನ್ನು ಕಂಡ ಮೇಲೆ ಹೋ ಇವನು ನಮ್ಮವನೇ ಅಂತ ಆತ್ಮಿಯತೆಯನ್ನು ತೋರಿ ಸಹಕರಿಸಿದರು. ಆನಂತರ ಅವರು ಪ್ರಶಸ್ತಿ ಸ್ವೀಕಾರಕ್ಕೆ ದೆಹಲಿಗೆ ಹೋಗುವವರಿದ್ದರು. ಆದರೆ ನನಗೆ ಆಶ್ಚರ್ಯವಾದದ್ದು ಇದು ಕಳೆದು ಸುಮಾರು ಹತ್ತು ದಿನಗಳಾದ ಮೇಲೆ ಗೋವಿಂದ ಭಟ್ಟರು ನನಗೆ ಕರೆ ಮಾಡಿ ನಡೆದ ಸಂದರ್ಶನದ ವಿವರಗಳನ್ನು ಕೇಳಿ  “ಹೇಗಾಯಿತೋ ಏನೋ ಅವರಿಗೆ ಸಮಾಧಾನವಾದರೆ ಸಾಕು”. ಇದನ್ನು ದೆಹಲಿಯಿಂದ ಊರಿಗೆ ಬಂದೊಡನೆ ನೆನಪಿಟ್ಟು ನನಗೆ ಕರೆ ಮಾಡಿ ವಿಚಾರಿಸಬೇಕಿದ್ದರೆ ಅದರ ಗಂಭೀರತೆ ಅವರು ಸಲ್ಲಿಸಿದ ಗೌರವ ನಿಜಕ್ಕೂ ಆಶ್ಚರ್ಯ ತಂದಿತು.  ಈ ಒಂದು ಕಾರ್ಯಕ್ಕೆ ಅವರು ಕೊಟ್ಟ ಗೌರವ ಆದರ ಅದು ಗೋವಿಂದಣ್ಣನೆಂಬ ವ್ಯಕ್ತಿತ್ವದ ರೂಪವಾಗಿ ಕಂಡಿತ್ತು. ರಂಗಸ್ಥಳದಲ್ಲಿ ಕಿವಿಯನ್ನು ಸೀಳಿ ಮನಸ್ಸಿಗೆ ನಾಟುವ ಇವರ ಹರಿತ ಸ್ವರ ಶಾರೀರ ಹೀಗೆ ಮಾತನಾಡಿದಾಗ ಮಂದ ಮಂದ ಶಾಂತ ಸ್ವರವಾಗುತ್ತದೆ. ಆ ಶಾಂತ ಸ್ವರದಲ್ಲಿ ನಮಸ್ಕಾರ ಎಂದು ಕೇಳುವಾಗ ಮನಸ್ಸು ಭಾರವಾಗುತ್ತದೆ. ಆ ಒಂದು ಘಳಿಗೆ ಒಂದು ಧನ್ಯತಾಭಾವ ಆವರಿಸಿಬಿಡುತ್ತದೆ.


Sunday, March 29, 2026

ಯಥಾ ಪ್ರೇಕ್ಷಕ ತಥಾ ದರ್ಶನ

  ಯಥಾ ಪ್ರೇಕ್ಷಕ ತಥಾ ದರ್ಶನ ...ಅಥವಾ ಯಥಾ ಪ್ರದರ್ಶನ, ಈಗಿನ ಪರಿಸ್ಥಿತಿಗೆ ಹೀಗೆ ಹೇಳಬಹುದೇನೋ? ಪ್ರತಿಯೊಂದು ಕಲೆಯೂ ಸಂಕ್ರಮಣ ಸ್ಥಿತಿಗೆ ತಲುಪುವುದು ಈ ಚಿಂತಾಗತಿಯಿಂದಲೇ. ಅದು ಯಕ್ಷಗಾನವಾಗಲಿ ಸಂಗೀತವಾಗಲಿ ಸಿನಿಮಾವಾಗಲೀ ಎಲ್ಲವೂ ಈ ಎರಡು ಸಂಬಂಧಗಳ ಒಳಗೇ ಒಳಿತು ಕೆಡಕು ಬದಲಾವಣೆಗಳು ಅಡಗಿಕೊಂಡಿದೆ. 



ನೀವು ಕ್ರಿಕೇಟ್ ಟೆನಿಸ್ ಆಟಗಳನ್ನು ಟೀವಿಯಲ್ಲಿ ನೋಡಿರಬಹುದು. ಅದು ಆಸ್ಟ್ರೇಲಿಯ ಇಂಗ್ಲೆಂಡ್ ನಂತಹ ದೇಶಗಳಲ್ಲಿ ಆಡುವಾಗ ಅಲ್ಲಿಯ ಪ್ರೇಕ್ಷಕ ವರ್ಗವನ್ನು ಗಮನಿಸಿ ಒಂದು ಉತ್ತಮ ಹೊಡೆತಕ್ಕೆ ಆ ಕ್ಷಣಕ್ಕೆ ಮಾತ್ರ ಒಂದೆರಡು ಚಪ್ಪಳೆಯ ಹನಿ ಬಿದ್ದು ಬಿಡುತ್ತದೆ. ಮಿಕ್ಕೆಲ್ಲ ಶಾಂತ. ಯಾಕೆಂದರೆ ಆ ಕ್ರೀಡೆಯಲ್ಲಿ ಆವರು ತಲ್ಲೀನರಾಗಿ ಆಸ್ವಾದಿಸುವ ರೀತಿ. ಭಾವೋದ್ವೇಗ ಇದ್ದರೂ ಅದು ಕೆಲವು ಕ್ಷಣಗಳಿಗೆ ಮಾತ್ರ ಪ್ರಕಟವಾಗುತ್ತದೆ. ಅದೇ ನಮ್ಮ ಏಷ್ಯಾ ಖಂಡದ ರಾಷ್ಟ್ರಗಳಲ್ಲಿ ಕೇಕೆ ಕಲರವ ಬ್ಯಾಂಡು ವಾದ್ಯ ಎಲ್ಲ ಒಂದು ಜಾತ್ರೆಯ ಸಂತೆಯಂತೆ ಭಾಸವಾಗುತ್ತದೆ. ಇದು ತಪ್ಪು ಅಂತ ಅಲ್ಲ. ಪ್ರೇಕ್ಷಕವರ್ಗದ ಅಭಿರುಚಿ ಅದನ್ನು ಆಸ್ವಾದಿಸುವ ರೀತಿ ಆ ಬಗೆಯಲ್ಲಿರುತ್ತದೆ.  ಸಂಗೀತ ಕಛೇರಿಗೆ ಹೋದರೂ ಅಲ್ಲಿ ಸುಸಂಸ್ಕೃತ ಪ್ರೇಕ್ಷಕವರ್ಗವಿರುತ್ತದೆ. ಇದು ಸಿನಿಮಾ ಸಂಗೀತಕ್ಕೆ ಅನ್ವಯವಾಗುವುದಿಲ್ಲ. ಸಂಗೀತಗಾರ ಯಾವುದೋ ರಾಗ ಹಿಡಿದು ಪ್ರಸ್ತಾರ ಹಾಕಿ ಒಂದು ಉತ್ತುಂಗ ಸ್ಥಿತಿಗೆ ತಲುಪಿದಾಗ ಅದನ್ನು ಅದುವರೆಗೆ ಶಾಂತ ರೀತಿಯಲ್ಲಿ ಅನುಭವಿಸಿದ ಪ್ರೇಕ್ಷಕರು ಚಪ್ಪಾಳೆ ಹೊಡೆಯುವುದುಂಟು. ಮೊದಲೆಲ್ಲ ಇದು ಕೇವಲ ಚಪ್ಪಾಳೆಗೆ ಸೀಮಿತವಾದರೆ, ಇತ್ತೀಚೆಗೆ ನಾನು ಹೋದ ಸಂಗೀತ ಕಾರ್ಯಕ್ರಮದಲ್ಲಿ ಶಿಳ್ಳೆಯತನಕವೂ ಹೋಗಿತ್ತು. ಯಾಕೋ ಪ್ರೇಕ್ಷಕನ ಅಭಿರುಚಿಯ ಪ್ರಕಟರೂಪ ಬದಾಲಾಗಿದೆಯೋ ಅನ್ನಿಸುತ್ತದೆ. ಇನ್ನು ರಸಮಂಜರಿಯಂತಹ ಕಾರ್ಯಕ್ರಮಗಳಲ್ಲಿ ಜನ ಹುಚ್ಚೆದ್ದು ಕುಣಿಯುವುದೇ ಉತ್ತಮ ಪ್ರತಿಕ್ರಿಯೆ ಎಂಬಂತಾಗಿದೆ. 

ಯಕ್ಷಗಾನದ ವಿಚಾರ ಬಂದಾಗ ಇಲ್ಲೂ ಕಾಲ ಕಾಲಕ್ಕೆ ಪ್ರದೇಶಕ್ಕೆ ಹೊಂದಿಕೊಂಡು ಬದಲಾಗಿ ಬಿಟ್ಟಿದೆ. ಕೆಲವು ಸಮಯದ ಹಿಂದೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಆಟಕ್ಕೆ ಹೋಗಿದ್ದಾಗ ಒಂದು ಸೂಪರ್ ಸ್ಟಾರ್ ನ ಸಿನಿಮಾ ನೋಡಿದ ಅನುಭವವಾಗಿತ್ತು.ಭಾಗವತರ ಪದವೂ ಕೇಳುವುದಿಲ್ಲ, ಚೆಂಡೆಮದ್ದಲೆಯೂ ಅವಶ್ಯಕತೆ ಇಲ್ಲ ಎಂಬಂತೆ. ಅದರ ನಡುವೆ ಪ್ರೇಕ್ಷಕರೊಬ್ಬರು ಕುಣಿಯುತ್ತಿರುವ ಕಲಾವಿದನಿಗೆ ನೋಟಿನ ಮಾಲೆ ಹಾಕುವ ತನಕವೂ ಭಾವ ಪ್ರಕಟವಾಗಿ ರಸಭಂಗಕ್ಕೆ ಕಾರಣವಾಗಿತ್ತು. ನಿಜವಾಗಿ ಕಲೆಯ ಮಟ್ಟಿಗೆ ಭಾವ ಪ್ರಕಟನೆ ರಸೋತ್ಪಾನೆಗೆ ಪೂರಕವಾಗಿದ್ದರೆ ಚೆಂದ. ಅದು ರಸಭಂಗಕ್ಕೆ ಕಾರಣವಾದರೆ ಅಲ್ಲಿ ರಸಾಸ್ವಾದನೆ ಹೇಗೆ ಸಾಧ್ಯ. ಊಟಕ್ಕೆ ಕುಳಿತವನು ಊಟ ರೂಚಿಯಾಗಿದೆ ಎಂದು ಹುಚ್ಚೆದ್ದು ತಟ್ಟೆಯ ಮುಂದೆ ಎದ್ದು ಕುಣಿದರೆ ಏನಾದಿತು? ಅದೇ ಬಗೆಯಲ್ಲಿ ಯಕ್ಷಗಾನದಲ್ಲಿ ಸಂಭವಿಸುತ್ತಿದೆ. ಇನ್ನು ಯಕ್ಷಗಾನ ಪ್ರಪಂಚವೂ ಈಗ ಅದನ್ನೇ ಬಯಸುತ್ತದೆಯೋ ಇಲ್ಲ ಅದನ್ನು ಪ್ರಚೋದಿಸುತ್ತದೆಯೋ ಅಂತ ಅನಿಸಿಬಿಡುತ್ತದೆ.  ತರಗೆಲೆ ಕಸದ ನಡುವೆ ಜೀವಿಸುವ ಹುಳ ಹಾವುಗಳು ತರಗೆಲೆಯ ಬಣ್ಣದಲ್ಲೇ ಮೈ ಬಣ್ಣವನ್ನು ಹೊಂದಿರುತ್ತವೆ. ಅದೇ ಬಗೆಯಲ್ಲಿ ಯಕ್ಷಗಾನ ಪ್ರದರ್ಶನ ಹೇಗಿರುತ್ತದೋ ಅದೇ ಬಗೆಯಲ್ಲಿ ಪ್ರೇಕ್ಷಕನೂ ಬೆಳೆದು ಬರುತ್ತಾನೆ. ಅಥವಾ ಪೋಷಿಸಲ್ಪಡುತ್ತಾನೆ. ಇದು ವಿಷಾದದಿಂದ ಹೇಳಬೇಕು. ಇಲ್ಲಿ ಏನಾದರೂ ಸಲ್ಲುತ್ತದೆ ಎಂಬ ಭಾವ ಇರುವುದರಿಂದ ಪ್ರೇಕ್ಷಕನೂ ಚಪ್ಪಾಳೆಯಿಂದ ಶಿಳ್ಳೆಗೆ ಶಿಳ್ಳೆಯಿಂದ ಪೀಪಿಗೆ ಬದಲಾಗಿಬಿಟ್ಟಿದ್ದಾನೆ. ಪರಿಜ್ಞಾನ ಇದ್ದವರು ಈ ಘಟನೆಗಳನ್ನು ಹೆಚ್ಚು ಬೆಳೆಯಲು ಬಿಡದೆ ಅಲ್ಲಿಂದ ಅಲ್ಲಿಗೆ ಅದನ್ನು ಮುಗಿಸಿಬಿಡುವುದು ಉತ್ತಮ ಅನ್ನಿಸುತ್ತದೆ. ಇದಕ್ಕೆ ಪೂರಕವಾಗಿಯೋ ವಿರೋಧವಾಗಿಯೋ ಪ್ರತಿಕ್ರಿಯಿಸಿದಲ್ಲಿ ಇದೇನೂ ನಿಲ್ಲುವುದಿಲ್ಲ. ಮುಂದೆಯೂ ಇದು ನಡೆದೇ ನಡೆಯುತ್ತದೆ. 

ಪ್ರೇಕ್ಷಕರಿಂದ ಯಕ್ಷಗಾನವೋ, ಯಕ್ಷಗಾನದಿಂದ ಪ್ರೇಕ್ಷಕರೋ ನಿರ್ಧರಿಸುವುದು ಕಷ್ಟ. ಯಾಕೆಂದರೆ ಇವರಡೂ ಇಲ್ಲದೇ ಇದ್ದರೂ ನಡೆಯುವುದು ನಡೆದೇ ನಡೆಯುತ್ತದೆ. ಹರಕೆ ಮೇಳದ ಆಟಗಳು ನಡೆಯುತ್ತದೆ. ಅಲ್ಲಿ ಆಟ ಆಡಿಸುವವರೂ ಕೆಲವೊಮ್ಮೆ ಇರುವುದಿಲ್ಲ. ಆದರು ಕಂಬಕ್ಕೆ ಕಟ್ಟಿದ ಮೈಕ್ ನಂತೆ ಅದು ಹಾಡುತ್ತಲೇ ಇರುತ್ತದೆ. 

ಯಕ್ಷಗಾನ ಯಕ್ಷಗಾನವಾಗಿ ಉಳಿದಿಲ್ಲ.  ಅದಕ್ಕೆ ಕಾರಣವನ್ನು ಹುಡುಕಿ ನಾವು ಮೂರ್ಖರಾಗುವುದಕ್ಕಿಂತ ಏನು ಸಂಭವಿಸುತ್ತದೋ ಅದಕ್ಕೆ ಸಾಕ್ಷೀ ಭೂತ ಪ್ರೇಕ್ಷಕರಾಗಿ ಉಳಿಯಬೇಕು ಅಷ್ಟೇ. ಹಾಗಾಗಿ ಹೇಳುವುದು ಯಕ್ಷಗಾನ ಹೇಗಿರುತ್ತದೋ ಪ್ರೇಕ್ಷಕ ಅದೇ ಬಗೆಯಲ್ಲಿದ್ದಾನೆ. ಮೊದಲೆಲ್ಲ ಕರಪತ್ರದಲ್ಲಿ ನೋಡಿರಬಹುದು. ಇಂತವರ ಈ ಪಾತ್ರವನ್ನು ನೋಡುವುದಕ್ಕೆ ಮರೆಯದಿರಿ. ಅದು ಬಪ್ಪ ಬ್ಯಾರಿಯೋ ವಿಕ್ರಮಾದಿತ್ಯನೋ ಕಂಸನೋ ಕೌರವನೋ ಹೀಗೆ...ಜನರು ಮುಗಿಬಿದ್ದು  ಮುಂಗಡ ಟಿಕೆಟ್ ಪಡೆದು ಬರುತ್ತಿದ್ದರು. ಅದು ಬೆಂಗಳೂರಿನಿಂದ ಊರಿಗೆ ಹೋಗಿ ಆಟನೋಡಿ ಬರುವ ಅಭಿಮಾನಿಗಳು ಇದ್ದರು. ಈಗ ಅನಿವಾರ್ಯ ಕೆಲಸನೆನಪು ಮಾಡಿ ಸುಮ್ಮನೆ ದಂಡ ಅಂತ ಕುಳಿತು ಬಿಡುತ್ತಾರೆ. ಮುಖ್ಯವಾಗಿ ಆಕರ್ಷಣೆ ಲುಪ್ತವಾಗಿದೆ. ಹಾಗಾಗಿ ಬರುವ ಪ್ರೇಕ್ಷಕರಿಗಾಗಿ ಊಟದ ವ್ಯವಸ್ಥೆ ಅಲ್ಲದಿದ್ದರೂ..ಚಟ್ಟಂಬಡೆ ಬನ್ಸ್ ಚಹ ಮಾಡಿಕೊಡುವ ಸ್ಥಿತಿ ಇದೆ. ಯೋಚಿಸಿ ಒಂದು ಕಾಲದಲ್ಲಿ ಊಟ ತಿಂಡಿ ಪ್ರೇಕ್ಷಕರ ಮಾತು ಬಿಡಿ ಕಲಾವಿದರಿಗೇ ಊಟದ ಭರವಸೆ ಇರುತ್ತಿರಲಿಲ್ಲ. ಆದರೂ ಅವರು ಯಕ್ಷಗಾನ ಮಾಡಿ ಬಿಡುತ್ತಿದ್ದರು. ಹಾಗೆ ಕಟ್ಟಿದ ಯಕ್ಷಗಾನದ ಸ್ಥಿತಿ ಹೇಗಾಗಿದೆ ಅಂತ ಬೇರೆ ಹೇಳಬೇಕಾಗಿಲ್ಲ. ಹೆಚ್ಚಿನ ಎಲ್ಲಾ ಮೇಳದ ಆಟಗಳಲ್ಲಿ ಊಟ ತಿಂಡಿ ಆದನಂತರ ಜಾಗ ಖಾಲಿ ಮಾಡುವವರು ಇದ್ದಾರೆ. ಆಟಕ್ಕೆ ಬರುತ್ತಾರೋ ತಿಂಡಿಗೆ ಬರುತ್ತಾರೋ. ಅದಕ್ಕಾಗಿ ಮತ್ತೊಂದು ಆಕರ್ಷಣೆ, ಯಕ್ಷಗಾನದಲ್ಲಿ ಸಿನಿಮಾ ಸಂಗೀತ ದೃಶ್ಯ ಎಲ್ಲ ಅಳವಡಿಕೆ. ಪ್ರೇಕ್ಷಕನ ಕಾಲು ಹಿಡಿದಾದರೂ ಎಳೆದು ತರುವಷ್ಟರ ಮಟ್ಟಿಗೆ ಕಾಲ ಬದಲಾಗಿದೆ.  


ಇನ್ನು ಪ್ರೇಕ್ಷಕರಿಂದ ಯಕ್ಷಗಾನ ಅಂತ ಹೇಳುವಾಗ, ಹಾಗೆ ಹೇಳುವ ಪ್ರೇಕ್ಷಕರು ಯಕ್ಷಗಾನದ ಅಭಿಮಾನದಿಂದ ಹೇಳುತ್ತಾರೆ ಎಂದು ನಂಬುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಕಲಾವಿದರ ಅಥವಾ ವ್ಯಕ್ತಿಯ ಪೂರ್ವಾಪರದ ಮೇಲೆಯೆ ವೈಯಕ್ತಿಕ ಧಾಳಿ ಮಾಡುವವರು ಕಲೆಯ ಬಗ್ಗೆ ಚಿಂತಿಸಿ ಅದರ ಒಳಿತಿನ ಬಗ್ಗೆ ಯೋಚಿಸುತ್ತಾರೆ ಎಂಬುದು ಕಷ್ಟದ ಮಾತು. 


ಇವುಗಳ ಬಗ್ಗೆ ಚರ್ಚಿಸಿದೆ ವಿವಾದ ಎಬ್ಬಿಸದೆ ಮೌನವಾಗಿ ಇರುವುದರಲ್ಲಿ ಈಗ ಸಭ್ಯತೆ ಇದೆ ಅಂತ ಅನ್ನಿಸಿಬಿಟ್ಟಿದೆ. 


Friday, March 27, 2026

ಅತಿಕ್ರಮಣ

ಬಹಳ ಹಿಂದೆ ಕಟೀಲು ಮೇಳದ ಆಟದ ಸಂದರ್ಭ. ಶ್ರೀ ದೇವಿ ಮಹಾತ್ಮೆ ಪ್ರಸಂಗ. ಆಟ ಆಡಿಸುವವರು ಮಹಾನ್ ದೇವಿಭಕ್ತರು.  ಪ್ರತಿವರ್ಷವೂ ಯಕ್ಷಗಾನದ ಹರಕೆ ಆಟ ಅಡಿಸುವವರು. ಒಂದು ಸಲ ರಂಗದಲ್ಲಿ ದೇವಿ ಪ್ರವೇಶವಾಗುವಾಗ ದೇವಿಗೆ ಮಾಲೆ ಹಾಕುವುದಕ್ಕೆ ಬಂದರೆ. ಆಗ ಆದಿನ    ಭಾಗವತಸ್ಥಾನದಲ್ಲಿದ್ದ ಶ್ರೀ ಬಲಿಪ ನಾರಾಯಣ ಭಾಗವತರು, ಮಾಲೆ ಹಾಕುವುದನ್ನು ವಿರೋಧಿಸಿದ್ದರು. ದೇವಿಯೇ ಆಗಿರಲಿ ರಂಗದಲ್ಲಿ ಭಾಗವತನ ಸ್ಥಾನ ಹಿರಿದು, ಭಾಗವತರಿಗೆ ಮೊದಲು ಅಂಗೀಕಾರ ಅಥವಾ ಭಾಗವತರ ಅನುಮತಿ ಇಲ್ಲದೆ ಮಾಲೆ ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಬಿಟ್ಟರು.  ಅದು ಯಕ್ಷಗಾನ ರಂಗಸ್ಥಳದಲ್ಲಿ ಭಾಗವತರಿಗಿರುವ ಸ್ಥಾನ. ಇದನ್ನು ಅತಿಕ್ರಮಿಸುವುದು ಸಾಧ್ಯವಿಲ್ಲ. ಭಾಗವತರು ಸ್ಥಾನ ಗೌರವವನ್ನು ಎತ್ತಿ ಹಿಡಿದಿದ್ದರು. ಆನಂತರ ಆ ಸಂಘಟಕರು ತಮ್ಮ ಆಟಗಳಲ್ಲಿ ಬಲಿಪರ ಮೇಳವನ್ನು ಆಡಿಸುತ್ತಿರಲಿಲ್ಲ. ಈ ಘಟನೆಯನ್ನು ನಮ್ಮ ಮನೆಯಲ್ಲಿ ಹಿರಿಯರು ಹೇಳುತ್ತಿರುವುದನ್ನು ಕೇಳಿದ್ದೇನೆ. ಬಲಿಪ್ಪರು ಒಂದು ಸಲ ಇದನ್ನು ಪ್ರಸ್ತಾಪ ಮಾಡಿದ್ದರು. 

ಸುರತ್ಕಲ್ ಮೇಳದ ಆಟಗಳು ಆಡುತ್ತಿದ್ದ ಸಂದರ್ಭ, ಹಿರಿಯ ಕಲಾವಿದ ತೆಕ್ಕಟ್ಟೆ ಆನಂದ ಮಾಸ್ತರ್  ಮರುದಿನದ ಮೇಳದ ಆಟಗಳ ಪರಿಚಯವನ್ನು ನಂತರ ಧನ್ಯವಾದ ಸಮರ್ಪಣೆಯನ್ನು ಮಾಡುತ್ತಿದ್ದುದನ್ನು ಹಲವು ಸಲ ನೋಡಿದ್ದೇನೆ. ಅಂತ ಸಂದರ್ಭಗಳಲ್ಲಿ ಹಿರಿಯ ಕಲಾವಿದರಾಗಿದ್ದೂ ಅವರು ಭಾಗವತರ ಅನುಮತಿಯನ್ನು ಹಲವು ಸಲ ಸಂಜ್ಞೆಯಿಂದಲಾದರೂ ಕೇಳುವುದನ್ನು ನೋಡಿದ್ದೇನೆ.  

ಇವುಗಳೆಲ್ಲ ರಂಗದ ಮೇಲೆ ಭಾಗವತರ ಸ್ಥಾನದ ಮಹತ್ವವನ್ನು ತೋರಿಸುತ್ತದೆ. ರಂಗವೆಂದರೆ ಅದು ಭಾಗವತ ನಿಯಂತ್ರಣದಲ್ಲಿರುತ್ತದೆ. ಅಲ್ಲಿ ಏನೇ ಆಗುವುದಿದ್ದರೂ ಅದು ಭಾಗವತನ ಅಂಗೀಕಾರದಿಂದಲೇ ನಡೆಯಬೇಕು. ದುರ್ದೈವ ಎಂದರೆ ಇದು ಆಗಾಗ ಉಲ್ಲಂಘಿಸಲ್ಪಡುತ್ತದೆ. ಹಲವು ಹಿರಿಯ ಕಲಾವಿದರೂ ತಾಳಮದ್ದಲೆಯಲ್ಲಿ ಆಟಗಳಲ್ಲಿ ಇದನ್ನು ಅತಿಕ್ರಮಿಸಿ ತಮ್ಮ ಹಿರಿಮೆಯನ್ನು ತೋರಿಸುವುದಕ್ಕೆ ತೊಡಗಿಬಿಡುತ್ತಾರೆ. ಯಕ್ಷಗಾನ ಎಂಬುದು ಸಭ್ಯಕಲೆ. ಪರಂಪರೆಯಲ್ಲಿ ಇದಕ್ಕೊಂದು ಶಿಸ್ತು ಇದೆ. ಆದರೆ ಈಗ ಯಕ್ಷಗಾನಕ್ಕೆ ಗೌರವ ಇಲ್ಲ ಎನ್ನುವ ಸನ್ನಿವೇಶದಲ್ಲಿ ಇವುಗಳಿಗೆಲ್ಲ ಲೆಕ್ಕವೇ ಇಲ್ಲ ಎಂಬಂತಾಗಿದೆ. ಕಾರ್ಯಕ್ರಮದ ನಡುವೆ ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಏನಾದರೋಂದು ಅಭಿಪ್ರಾಯ ಹೇಳುವುದಕ್ಕೆ ಇರುವುದು ತಪ್ಪೇನಲ್ಲ. ಆದರೆ ಅಂತ ಸನ್ನಿವೇಶಗಳಲ್ಲಿ ಭಾಗವತರ ಅನುಮತಿಯೊಂದಿಗೆ, ಯಾಕೆಂದರೆ ಮುಂದೆ ಏನು ನಡೆಯುತ್ತದೆ ಎಂಬುದು ಭಾಗವತನಿಗೆ ಅರಿವಿರಬೇಕಾಗುತ್ತದೆ. ಅದು ಅವರ ಜವಾಬ್ದಾರಿ. ಆಗ ಒಂದೆರಡು ಮಾತುಗಳನ್ನಾಡುವಾಗಲೂ ಪರಿಮಿತಿಯನ್ನು ಅರಿತಿರಬೇಕಾಗಿರುವುದು, ಮಾತನಾಡುವವರ ಜವಾಬ್ದಾರೆ. ಅಲ್ಲಿ ತಮ್ಮ ಮಾತಿನ ಪರಿಣಾಮಕಾರಿತ್ವಕ್ಕೆ ಯಾವುದೋ ಜನಾಂಗವನ್ನೋ ಧರ್ಮವನ್ನೋ ಹೊಲಿಸಿ ಅಥವಾ ನಿಂದಿಸಿ ಮಾತನಾಡುವುದು ನಿಯಮ ಬಾಹಿರ ಮಾತ್ರವಲ್ಲ ಯಕ್ಷಗಾನದ ಮಾತ್ರವಲ್ಲ ಒಂದು ಕಲೆಗೆ ಕಾರ್ಯಕ್ರಮದ ಸಭ್ಯತೆಗೆ ಅನುಸರಿಸಿಕೊಂಡು ಅದು ಸೂಕ್ತವಲ್ಲ ಮಾತ್ರವಲ್ಲ ಆಕ್ಷೇಪಾರ್ಹ.  ಕೊನೆಗೆ ಯಾರೊ ಒಬ್ಬ ಮೈಕಿನ ಮುಂದೆ ಏನೋ ಒದರಿದರೂ ರಂಗದಲ್ಲಿದ್ದ ಭಾಗವತನೂ ಅದರ ಅನಾವಶ್ಯಕವಾಗಿ ಅದರ ಹೊಣೆ ಹೊರಬೇಕಾಗುತ್ತದೆ. ಈ ಸಾಮಾನ್ಯ ಜ್ಞಾನದ ಅರಿವು ತಮ್ಮ ಹೆಗ್ಗಳಿಕೆ ಹಿರಿಮೆಯನ್ನು ಮೆರೆಸುವಾಗ ಇರಬೇಕಾಗುತ್ತದೆ. 

ವಿಪರ್ಯಾಸವೆಂದರೆ, ಈಗೀಗ ಇದೆಲ್ಲ ಅರಿತಿರುವ ಹಿರಿಯರೇ ಇದನ್ನೆಲ್ಲ ಅತಿಕ್ರಮಿಸುತ್ತಾರೆ. ವೈಯಕ್ತಿಕ ಘನತೆ ಎಂಬುದು ಯಕ್ಷಗಾನದ ಕಲೆಯ ಘನತೆಗಿಂತಲೂ ಮುಖ್ಯವಾಗುತ್ತದೆ. ಇದು ಆಗಬಾರದು. ಆದರು ಸಂಭವಿಸುತ್ತದೆ. ಯರೋ ಹೇಳಿದ್ದರು,  ಮೇಳಗಳು ಉಳಿಯುತ್ತವೆ, ಕಲಾವಿದರು ಉಳಿಯುತ್ತಾರೆ ಆದರೆ ಯಕ್ಷಾಗಾನ ಕಲೆ ಉಳಿಯುವುದಿಲ್ಲ ಎಂದು.  ವಾಸ್ತವದಲ್ಲಿ ಈ ಮಾತು ಪದೇ ಪದೇ ಸತ್ಯವಾಗುತ್ತದೆ. 

    ಯಾಕೋ ಈ ಅನಿಸಿಕೆಗಳನ್ನು ವ್ಯಕ್ತ ಪಡಿಸಬೇಕು ಎನಿಸಿತು. ತಪ್ಪು ಒಪ್ಪು ಏನೇ ಇರಲಿ ಸಾರ್ವತ್ರಿಕ ನಿಯಮ ಶಿಸ್ತು ಎಲ್ಲರಿಗೂ ಅನಿವಾರ್ಯವಾಗಬೇಕು. 

Monday, March 23, 2026

ಯಕ್ಷಕೌಶಿಕ ಗೋವಿಂದಣ್ಣ

 




"ಅಪಸವ್ಯಗಳು ಯಕ್ಷಗಾನದಲ್ಲಿ ಮಾತ್ರ ಯಾಕೆ ಮನುಷ್ಯನ ಜೀವನ ಶೈಲಿಯಲ್ಲೂ ಹೆಚ್ಚಾಗಿದೆ. ಬೇಕಾದದ್ದನ್ನು ಮಾತ್ರ  ಮನುಷ್ಯ ಎಲ್ಲಿ ಮಾಡುತ್ತಾನೆ? ಅದು ಸಹಜ. "

ಯಕ್ಷಗಾನದಲ್ಲಿ ಅಪಸವ್ಯಗಳೇ ಯಾಕೆ ಹೆಚ್ಚಾಗಿದೆ?  ಇದನ್ನು ಒಂದು ಸಲ ಶ್ರೀ ಸೂರಿಕುಮೇರಿ ಗೋವಿಂದಭಟ್ಟರಲ್ಲಿ ಕೇಳಿದ್ದೆ. ಅತೀವ ಅಭಿಮಾನ ಸ್ನೇಹ ಆದರಗಳನ್ನು ನನಗೆ ಅವರಲ್ಲಿದ್ದ ಕಾರಣ ಭೇಟಿಯಾದಾಗ ಕೇಳಿದ್ದೆ. ಅದಕ್ಕೆ ಬಹಳ ಸಹಜವಾಗಿ ಯಾವುದೇ ಆತಂಕವಿಲ್ಲದೆ ಈ ರೀತಿ  ಪ್ರತಿಕ್ರಿಯೆ ಕೊಟ್ಟದ್ದು ಅವರ ಸರಳ ವ್ಯಕ್ತಿತ್ವದ ಪ್ರತೀಕವಾಗಿ  ಕಂಡಿತ್ತು.  ನಿಜಕ್ಕಾದರೆ ನನಗೆ ಈ ಉತ್ತರ ಅಷ್ಟು ಸರಿ ಎಂದೆನಿಸಲಿಲ್ಲ. ಆದರೂ ಅದು ಕೇವಲ ಅವರ ಪ್ರತಿಕ್ರಿಯೆಗೆ ಕೇಳಿದ ಪ್ರಶ್ನೆಯಾಗಿತ್ತು. 

ಗೋವಿಂದ ಭಟ್ಟರು ಇರುವುದೇ ಹಾಗೆ. ಅಭಿಪ್ರಾಯ ವೆತ್ಯಾಸ ಏನೇ ಇರಲಿ, ಅವರ ಸ್ನೇಹ ಆದರಕ್ಕೆ ಅವರ ವ್ಯಾವಹಾರಿಕತೆಗೆ ಅದು ತೊಡಕಾಗುವುದಿಲ್ಲ. ಅಭಿಪ್ರಾಯ ವೆತ್ಯಾಸ ಇದ್ದವರಷ್ಟೇ ಆತಂಕ ಪಡಬೇಕು. ಅವರು ಎಂದಿನ ಹಾಗೆ ಸಹಜ ಸಾಮನ್ಯವಾಗಿ ಇರಬಲ್ಲರು ಅದು  ಗೋವಿಂದ ಭಟ್ಟರಲ್ಲಿ ನಾನು ಗಮನಿಸಿದ ವಿಶೇಷತೆ. ಹಾಗೆ  ನೋಡಿದರೆ ಅವರಿತ್ತ ಪ್ರತಿಕ್ರಿಯೆಯಲ್ಲಿ ನನಗೂ ಅಭಿಪ್ರಾಯ ವೆತ್ಯಾಸವಿತ್ತು. ಅದು ಅವರಿಗೆ ಅರಿವಿದ್ದರೂ ಒಳಗಿನ ಅಂತರಂಗದ ವ್ಯವಹಾರಕ್ಕೆ ಅದೆಂದೂ ಪರಿಣಾಮ ಬೀರಲಿಲ್ಲ.ಯಾವುದನ್ನು ಆಯಾಯ ಕ್ರಮದಲ್ಲೇ ಅವಲೋಕಿಸಿ ಸ್ವೀಕರಿಸುವ ವ್ಯಾವಹಾರಿಕತೆ ಇಷ್ಟವಾಗಿಬಿಡುತ್ತದೆ.ಎಷ್ಟು ವಿಮರ್ಶೆ ಟೀಕೆಗೆ ಎರವಾದರೂ ಸ್ಥಿತ ಪ್ರಜ್ಞೆ ಕಳೆದು ಕೊಳ್ಳದ ಸೌಮ್ಯತೆ ಇಲ್ಲಿದೆ. ಹಾಗಾಗಿ ನನ್ನಂತಹ ಸಾಮನ್ಯನೂ ಇವರನ್ನು‌ ಪ್ರಶ್ನಿಸಬಲ್ಲ. ಗೋವಿಂದಣ್ಣ ಕೇವಲ ಕಲಾವಿದನಾಗಿ ಮಾತ್ರವಲ್ಲ ಒಬ್ಬ ಸ್ಥಿತ ಪ್ರಜ್ಞ ವ್ಯಕ್ತಿತ್ವದ ಪ್ರತೀಕವಾಗಿ ನನಗೆ ಕಂಡರು.  ಸೂರಿಕುಮೇರಿ ಗೋವಿಂದ ಭಟ್ಟರು ಅಗಲಿದ ವಾರ್ತೆ ಕೇಳಿದಾಗ ಮೊದಲಿಗೆ ಬಂದ ಸ್ಮರಣೆ ಇದು. 

ಹಿಂದೆ ನನ್ನ ತಂದೆಯವರ ಬಗ್ಗೆ ತಿಳಿದನಂತರ ತೀವ್ರ ಆಸಕ್ತಿಯಿಂದ  ನನ್ನ ಮನೆಗೆ ಬಂದು ಶುಭಹಾರೈಸಿದ ಆ ದಿನದಿಂದ ತೊಡಗಿ ಆಗಾಗ ಆತ್ಮೀಯವಾಗಿ ಕರೆ ಮಾಡುತ್ತಿದ್ದರು.‌ವಿಶೇಷವೆಂದರೆ ಪ್ರತಿ ಬಾರಿ ಕರೆದಾಗಲೂ ತಮ್ಮ ಪರಿಚಯವನ್ನು ಅವರು ಒಪ್ಪಿಸುವ ರೀತಿಯೇ ಗೌರವ ಪೂರ್ಣ. ತಮ್ಮ ಪೂರ್ಣ ಹೆಸರನ್ನು ಸೌಮ್ಯವಾಗಿ ಹೇಳುವಾಗ ನಾನು ಬಹಳ ಕುಬ್ಜನಾಗಿ ಬಿಡುತ್ತಿದ್ದೆ. ನನಗೆ ಅವರ ಸರಳತೆ ಸೌಮ್ಯ ಮಾತು ಅತ್ಯಂತ ವಿಶಿಷ್ಟವಾಗಿ ಕಂಡಿತ್ತು.  ಇನ್ನು ಅದು ನೆನಪು ಮಾತ್ರ. ಮನೆಗೆ ಬಂದಾಗ ಅವರಲ್ಲಿ ಹೀಗೆ ಮಾತನಾಡುವಾಗ ನಾನು ಹೇಳಿದೆ ಬಾಲ್ಯದಲ್ಲಿ ಧರ್ಮಸ್ಥಳ ಮೇಳದ ಮಹಾ ಬ್ರಾಹ್ಮಣ ಪ್ರಸಂಗದ ಒಡ್ಡೋಲಗದ  ಕೌಶಿಕ ಮಹಾರಾಜನ ಪಾತ್ರದಿಂದ ತೊಡಗಿ ಶಂತನು ಸ್ವರ್ಗಾರೋಹಣದ ವರೆಗಿನ ಅವರ ವಿಶ್ವಾಮಿತ್ರನ ಪಾತ್ರ ನೋಡಿದ್ದು ಈಗಲೂ ರೋಮಾಂಚನ ತರುತ್ತದೆ. ಅಷ್ಟೊಂಡು ಚೈತನ್ಯ ಆ ಕೃಶ ಶರೀರದಲ್ಲಿ ಎಲ್ಲಿ ಉದ್ಭವವಾಗುತ್ತದೆ ಎಂದು ಅಚ್ಚರಿಯಾಗಿತ್ತು. ಆನಂತರ ಒಂದು ದಿನ ಅವರು ಅದೇ ವೇಶವನ್ನುಎಲ್ಲೋ ಮಾಡಿದ್ದರು. ಅದನ್ನುಖುದ್ದಾಗಿ ಕಂಡ ಒಬ್ಬ ಮಿತ್ರ ಗೋವಿಂದಣ್ಣನ ವಿಶ್ವಾಮಿತ್ರ ಪಾತ್ರ ವಿಜ್ರಂಭಿಸಿದ್ದನ್ನು ವಿಶೇಷವಾಗಿ ಹೇಳಿದ್ದ. ಬಹುಶಃ ನನ್ನ ಮಾತುಗಳ ಪ್ರೇರಣೆಯಾಗಿದೇಯೇನೋ ಎಂದು ಆಗ ಅನಿಸಿತ್ತು. ಆನಂತರ ಅವರ ಬಗ್ಗೆ ಲೇಖನದಲ್ಲಿ ಅದನ್ನು ಉಲ್ಲೇಖಿಸಿ "ಯಕ್ಷಕೌಶಿಕ"  ಅಂತ ಅವರನ್ನು ಕರೆದಿದ್ದೆ, ಈಗ ಅದೇ ಹೆಸರಿನಲ್ಲಿ ಅವರನ್ನು ಹಲವು ಕಡೆ ಕರೆದಿರುವುದು ಮಾತ್ರವಲ್ಲ ಅದೇ ಬಿರುದು ಪ್ರಾಪ್ತವಾಗಿದ್ದು ಒಂದು ವೈಶಿಷ್ಟ್ಯವಾಗಿತ್ತು.  ಪದ್ಯಾಣ ಎಂಬ ಪದ ಪದಯಾನ ಎಂದು ನಾನು ಕರೆದು ಅದು ಪ್ರಸಿದ್ಧವಾದಂತೆ ಯಕ್ಷ ಕೌಶಿಕ ಎಂಬ ಹೆಸರು ಕೂಡ ಬಳಕೆಯಾಗಿದ್ದು ವೈಶಿಷ್ಟ್ಯವಾಗಿದೆ. 

  ತೀವ್ರ ಬಡತನದಲ್ಲಿ ಹೊಟ್ಟೆಯ ಹಸಿವು ಯಕ್ಷಗಾನದತ್ತ ಸೆಳೆಯಿತು. ಯಕ್ಷಗಾನದಲ್ಲಿ ಹೋರಾಟದ ಬದುಕು ಅವರದಾಗಿತ್ತು. ಯಕ್ಷಗಾನವನ್ನು ಬಯಸಿ ಅವರು ಬಂದದ್ದಲ್ಲಎಂದು ಅವರು ಪ್ರಾಮಾಣಿಕತೆಯಿಂದ  ಹೇಳಿದರೂ  ಯಕ್ಷಗಾನ ಮಾತ್ರ ಅವರನ್ನು ಬಿಡಲಿಲ್ಲ. ಯಾವುದೋ ಕಾರಣಕ್ಕೆ  ಒಂದು ಸಲ ಯಕ್ಷಗಾನವೇ ಬೇಡ ಅಂತ ನೀಳವಾದ ಶಿಖೆಯನ್ನು ಕಳೆದು ಎಲ್ಲವನ್ನು ತ್ಯಜಿಸಿದರೂ ಯಕ್ಷಗಾನ ಅವರನ್ನು ಮತ್ತೆ ತೆಕ್ಕೆ ಎಳೆದು ತಂದಿತ್ತು.  ಹೀಗೆ ಬೇಡದೇ ಇದ್ದ ಯಕ್ಷಗಾನ ಅವರನ್ನು ಮತ್ತೂ ಮತ್ತೂ ಕರೆದು ಅವರ ಆವಶ್ಯಕತೆಯನ್ನು ಸಾರಿದ್ದು ಒಂದು ವೈಶಿಷ್ಟ್ಯ. 

ಸಮಗ್ರ ಯಕ್ಷಗಾನವನ್ನು ತೆಗೆದು ಕೊಂಡರೆ ಅವರು ಮಾಡದ ಪಾತ್ರಗಳಿಲ್ಲ. ಅದರಂತೆ ನಿಜ ಜೀವನದಲ್ಲೂ ಅವರೇ ಹೇಳುವಂತೆ ಪುರೋಹಿತನಾಗಿ ಪಾಜಕವ್ಯಕ್ತಿಯಾಗಿ ಹಲವು ವೇಷಗಳನ್ನು ನಿರ್ವಹಿಸಿದ ಅಪ್ರತಿಮ ಸಾಹಸಿ. ಜೀವನ ಎಂದರೆ ಜಯಿಸಿ  ಬದುಕುವುದಕ್ಕಿರುವ ಅವಕಾಶ. ಅದು ಯಾವ ಬಗೆಯಲ್ಲಾದರೂ ಸರಿ.  ರಂಗದ ಮೇಲೆ ಅವರ ಪಾತ್ರ ನಿರ್ವಹಣೆಯಲ್ಲಿ ಈ ಪ್ರಭಾವ ದಟ್ಟವಾಗಿದೆ.  ಎಲ್ಲವನ್ನೂಮುಕ್ತವಾಗಿ ಸ್ವೀಕರಿಸುವ ಗೋವಿಂದಣ್ಣ ಬದುಕನ್ನು ಸಾಹಸಮಯವಾಗಿ ಸ್ವೀಕರಿಸಿಗೆದ್ದವರು. ಅವರ ದೀರ್ಘಾಯುಷ್ಯಕ್ಕೆ ಇದೇ ಕಾರಣ. ಶಿಸ್ತು ಬದ್ದ ಜೀವನ, ಯಾರಿಗೂ ತಲೆಬಾಗದ ಧೀಮಂತ ನಿಲುವು ಎಲ್ಲವೂ ಅವರು ನಿರ್ವುಹಿಸುವ ರಾಜವೇಶದಂತೆ ಘನ ಗಂಭೀರ. ಅಂತಹ ಗೋವಿಂದಣ್ಣ ಇನ್ನಿಲ್ಲ.  ಯಕ್ಷಗಾನ ಕ್ಷೇತ್ರದಲ್ಲಿ ನನಗೆ ಅತ್ಯಂತ ಹೆಚ್ಚು ಆತ್ಮೀಯರಾಗಿ ಹಿತೈಷಿಯಾಗಿ ಇದ್ದವರು ಗೋವಿಂದ ಭಟ್ಟರು. ಆಟವಾಗುವಲ್ಲಿ ಚೌಕಿಗೆ ಹೋದರೆ ಬಾ ರಾಜ ಅಂತ ಹತ್ತಿರ ಕರೆದು ಬಣ್ಣದ ಪೆಟ್ಟಿಗೆಯ ಮೇಲೆ ಕುಳ್ಳಿರಿಸಿ ಉಭಯ ಕುಶಲ ವಿಚಾರಿಸುತ್ತಿದ್ದ ಸರಳತೆ ಹೃದಯಕ್ಕೆ ಹತ್ತಿರವಾದ ಅನುಭವವನ್ನು ಕೊಡುತ್ತಿತ್ತು. ಭೇಟಿಯಾದಾಗಲೆಲ್ಲ ಯಕ್ಷಗಾನದ ಬಗ್ಗೆ ಮಾತನಾಡಿದ್ದು ಬಹಳ ಕಡಿಮೆ. ಅವರ ವೇಷದ ಬಗ್ಗೆ ಹೇಳಿದರೆ ಅದನ್ನು ಎಂದಿಗೂ ಗಂಭೀರವಾಗಿ ಕೇಳಿಸಿಕೊಳ್ಳುತ್ತಿರಲಿಲ್ಲ. ಬಹುಶಃ ಅವುಗಳನ್ನು ಕೇಳಿ ಕೇಳಿ ಅವರಿಗೆ ಸಾಕು ಎಂದೆನಿಸಿರಬೇಕು. ಯಕ್ಷಗಾನದ ಬಗ್ಗೆ ಮಾತನಾಡುವುದೇ ಬಹಳ ಕಡಿಮೆ ಏನೋ ಅಂತ ಹಲವು ಸಲ ಅನ್ನಿಸಿದ್ದಿದೆ. ಸುಮಾರು ಅರುವತ್ತು ವರ್ಷಗಳಿಗಿಂತಲೂ ಅಧಿಕ ರಂಗದಲ್ಲಿ ಕಳೆದ ಜೀವನಾನುಭವ ಇರಬೇಕು. ಎಲ್ಲದರ ಬಗ್ಗೆಯೂ ಅಪರಿಮಿತ ತಿಳುವಳಿಕೆ ಮಾಗಿ ಮಾಗಿ ಅದರ ಬಗ್ಗೆ ಮಾತನಾಡುವ ಪ್ರತಿಕ್ರಿಯೆ ಕೊಡುವ ಆಸಕ್ತಿಯನ್ನೇ ಕಳೆದುಕೊಂಡಂತೆ ಅನ್ನಿಸುತ್ತಿತ್ತು. ಹಾಗಾಗಿಯೇ ಯಾರೇ ಸಂಘಟಕರು ಕಾರ್ಯಕ್ರಮಕ್ಕೆ ಕರೆದಾಗ ಅವರು ಪ್ರಸಂಗವನ್ನಾಗಲೀ ಪಾತ್ರವನ್ನಾಗಲೀ ವಿಚಾರಿಸುವುದು ಬಹಳ ಕಡಿಮೆ. ಸಂಘಟಕರೇ ಗಂಭೀರರಾಗಿ ಹೀಗೆ ಹೀಗೆ ಅಂತ ವಿವರಿಸಿದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಸ್ವಭಾವವಲ್ಲ. ಪಾತ್ರ ಪ್ರಸಂಗದ ಬಗ್ಗೆ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಹೇಳಿದರೂ ಅವರು ಯಾವ ತಕರಾರು ಆತಂಕ ಮುಂದಿಟ್ಟವರಲ್ಲ. ಯಾವ ಪಾತ್ರವನ್ನೂ ಲೀಲಾಜಾಲವಾಗಿ ನಿರ್ವಹಿಸಬಲ್ಲ ಚಾಣಾಕ್ಷತನವೇ ಇದಕ್ಕೆ ಕಾರಣ. 

ಒಂದು ಬಾರಿ ಮಿತ್ರರಾದ ಕಜೆ ಸುಬ್ರಹ್ಮಣ್ಯ ಭಟ್ಟರು ಕರೆ ಮಾಡಿ ಗೋವಿಂದ ಭಟ್ಟರನ್ನು ತಾಳಮದ್ದಲೆಗೆ ಕರೆಯಬೇಕು, ಯಾವ ಪ್ರಸಂಗವಾದೀತು ಅಂತ ನನ್ನಲ್ಲಿ ಸಲಹೆ ಕೇಳಿದ್ದರು. ಆಗ ನಾನು ಹೇಳಿದೆ ಕೀಚಕ ವಧೆ ಮಾಡಿ ಅವರಿಂದ ಕೀಚಕನ ಪಾತ್ರ ನಿರ್ವಹಿಸುವಂತೆ ಮಾಡಿ. ಜತೆಗೆ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಕೋಳ್ಯೂರು ಇದ್ದರೆ ಒಳ್ಳೆಯದು ಎಂದು ಸಲಹೆ ಹೇಳಿದ್ದೆ. ಹಾಗೆ ಆ ಸಲ ಸತೀ ಸಂರಕ್ಷಣೆ ಅಂತ ಅದೇ ಪ್ರಸಂಗ ಮಾಡಿದರು. ಗೋವಿಂದ ಭಟ್ಟರ ಕೀಚಕ ಅದ್ಭುತವಾಗಿ ಮೂಡಿ ಬಂತು. ಆಗ ಅವರನ್ನು ಕೇಳಿದೆ ನಿಮಗೆ ಕೀಚಕನ ಪಾತ್ರ ಆದೀತೋ ಅಂತ. ಆಗ ಅವರು ಹೇಳಿದರು ನಾನು ಪಾತ್ರ ಪ್ರಸಂಗದ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಬಂದಲ್ಲಿ ಯಾವುದೇ ಆದೀತು ನನಗೆ ಅಭ್ಯಂತರವಿಲ್ಲ ಅಂತ ನಿರಾಳವಾಗಿ ಹೇಳಿದ್ದರು. ಗೋವಿಂದ ಭಟ್ಟರ ರಂಗದ ನಿರ್ವಣೆಯ ಚಾಣಾಕ್ಷತನವದು. 

ಅವರ ಆತ್ಮೀಯ ಒಡನಾಟ, ಅಕ್ಕರೆ ಎಲ್ಲವನ್ನೂ ನೋಡಿದ ನನಗೆ ಯಾಕೋ . ಕುಟುಂಬದ ಹಿರಿಯರೊಬ್ಬರು ಅಗಲಿದಂತೆ ಎಲ್ಲವನ್ನು ಕಳೆದುಕೊಂಡ ಅನುಭವ. ನಾನೂ ಎಂದಲ್ಲ, ನನ್ನಂತೆ ಅಪಾರ ಅಭಿಮಾನಿಗಳು ಇದ್ದಾರೆ. ಹಲವರಲ್ಲಿ ಕೇಳಿದರೂ..ಅವರುಚಿಕ್ಕಪ್ಪ ಮಾವ ಅಜ್ಜ ಹೀಗೆ ತಮ್ಮ ಸಂಭಂಧಗಳ ಕುರಿತು ಹೇಳುತ್ತಾರೆ. ಯಕ್ಷಗಾನ ಕ್ಷೇತ್ರದಲ್ಲಿ ಕೇವಲ ಯಕ್ಷಗಾನವಲ್ಲದೇ ಇತರ ಕ್ಷೇತ್ರಗಳಲ್ಲೂ ವಿಶಾಲವಾಗಿ ಬೆಳೆದ ವಟವೃಕ್ಷ ಧರೆಗುರುಳಿದೆ. ಇನ್ನು ಅದರ ನೆರಳಿನ ಕಲ್ಪನೆಯಲ್ಲಿ ಕಳೆಯಬೇಕು. ಗೋವಿಂದ ಭಟ್ಟರು ಇನ್ನಿಲ್ಲ ಎಂದರೆ ಯಕ್ಷಗಾನದ ಒಂದು ಅಂಗವನ್ನು ಕಳೆದುಕೊಂಡ ಅನುಭವ.  ಅವರ ಆತ್ಮೀಯ ಅಕ್ಕರೆಯ ಮಾತು ಈಗಲೂ ಪ್ರತಿಧ್ವನಿಸುತ್ತಿದ್ದರೆ ಅದರ ಆಳವನ್ನು ಗುರುತಿಸುವುದು ಕಷ್ಟ. ಅಗಲಿದ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ.