"ಇದು ವಿಮರ್ಶೆಯಲ್ಲದ ಚಿಂತನ"

Saturday, May 9, 2020

ಹಾಸ್ಯ ಪ್ರಭೇದಗಳು


       ಒಂದು ತಳಿ ವೈಜ್ಞಾನಿಕವಾಗಿ ವಿಕಸನಗೊಂಡು ಹಲವು ಪ್ರಭೇದಗಳು ಹುಟ್ಟುವುದು ಆಧುನಿಕ ಜನಜೀವನದ ಪ್ರತೀಕ ಎನ್ನಬಹುದು. ಇಂದು ಒಂದು ಇದ್ದುದನ್ನು ನಾಳೆ ಹನ್ನೊಂದಾಗಿ ಪರಿವರ್ತಿಸುವ ಮಾನವನ ಹಪಹಪಿಕೆ ಆ ಮೂಲ ಗುಣಗಳನ್ನ ಕಡಿಮೆ ಮಾಡುತ್ತದೆ, ಅಥವಾ ಸಂಪೂರ್ಣ ನಾಶ ಮಾಡುತ್ತದೆ. ಈ ಹಪ ಹಪಿಕೆಯ  ಒಂದು ರೀತಿಯ ಜಾಗತೀಕರಣ ಯಕ್ಷಗಾನದಲ್ಲೂ ಕಾಣಬಹುದು. ಒಂದು ಕಿರೀಟ ಕಟ್ಟಿ ಝಗ ಝಗಿಸುವ ವೇಷ ಧರಿಸಿ ಬಂದರೆ, ಅದನ್ನು ಪರಂಪರೆಯ ಕಲೆ ಯಕ್ಷಗಾನ ಅಂತ ತುತ್ತೂರಿ ಬಾರಿಸುತ್ತಾ ಪರಂಪರೆಯ ಅಭಿಮಾನವನ್ನು ತೋರಿಸುವುದನ್ನು ಕಾಣಬಹುದು,  ಯಥೇಚ್ಛವಾಗಿ ಕಾಣಬಹುದು. ಯಕ್ಷಗಾನ  ಮನಸೋ ಇಚ್ಛೆ  ವಿಕಸನಗೊಂಡು ಯಕ್ಷಗಾನದ ಮೂಲ ಗುಣಗಳೇನಿದೆಯೋ ಅದರ ಛಾಯೆಯನ್ನೂ ಉಳಿಸದೇ ಇದ್ದರೂ ಅದನ್ನು ಶುದ್ದ ಪರಂಪರೆ ಅಂತ ಸ್ವತಹ ಬೆನ್ನು ತಟ್ಟಿಕೊಳ್ಳುತ್ತಾರೆ. ಯಾವುದೋ ಯಕ್ಷಗಾನಕ್ಕೆ ಚಪ್ಪಾಳೆ ಬಡಿದು ನಾವು ಸನಾತನ ಸಂಸ್ಕೃತಿಯನ್ನು ಅನುಸರಿಸುತ್ತಿದ್ದೇವೆ ಅಂತ ಆತ್ಮ ತೃಪ್ತಿ ಪಟ್ಟುಕೊಳ್ಳುವ ಭ್ರಮೆಯಲ್ಲಿ ಇಂದಿನ ಯುವ ಜನಾಂಗವಿದೆ.  ನಿಜವಾಗಿಯೂ ಇದು ಹಾದಿ ತಪ್ಪಿ ವಿಳಾಸ ಕಳೆದು ಹೋಗಿ ಬೀದಿ ಬೀದಿ ಅಲೆದಾಡಿದಂತೆ, ಮೂಲ ಯಕ್ಷಗಾನ ಏನು ಅಂತ ತಿಳಿಯದೇ ಇರುವ ಅತಂತ್ರ ಸ್ಥಿತಿ. 

         ಮೊನ್ನೆ ಹೀಗೆ ಒಬ್ಬರಲ್ಲಿ ವಿಚಾರ ವಿನಿಮಯ ಮಾಡುವಾಗ ಒಂದು ಪ್ರಶ್ನೆ ಬಂತು, ಈಗ ಯಾವ ಯಕ್ಷಗಾನ ಕೇಳಿದರೂ ನೋಡಿದರೂ ಸಂಪ್ರದಾಯವಾದಿಗಳು (ನನ್ನಂತೆ...ಮತ್ತು ನನ್ನನ್ನೇ ಉದ್ದೇಶಿಸಿ ಅವರು ಹೇಳಿದ್ದರು) ಇದು ಯಕ್ಷಗಾನದ ಶುದ್ದ ಪರಂಪರೆ ಅಲ್ಲ ಅಂತ ಹೇಳುತ್ತಾರೆ. ಯಾಕೆ? ಹಾಗಾದರೆ ಯಕ್ಷಗಾನದ ಶುದ್ದ ಪರಂಪರೆ ಯಾವುದು?”  ಅವರು ಅಂತ ಅಲ್ಲ ಎಲ್ಲರೂ ಕೇಳುವ ಪ್ರಶ್ನೆ. ಕೆಲವರು ಕೇಳುವುದಿಲ್ಲ. ಇದ್ದದ್ದನ್ನೇ ಪರಂಪರೆ ಅಂತ ಚಪ್ಪಾಳೆ ತಟ್ಟಿ ಆತ್ಮ ತೃಪ್ತಿ ಪಟ್ಟುಕೊಳ್ಳುತ್ತಾರೆ. ಮೊದಲು ಪರಂಪರೆ ಅಂತ ಕೇಳಿದರೆ ಈಗ ಅದಕ್ಕೂ ಶುದ್ದ ಪರಂಪರೆ ಅಂತ ಸೇರಿಸುವುದೂ ಆರಂಭವಾಗಿದೆ. ಇದು ಕಲಬೆರಕೆ ಯಾವ ರೂಪದಲ್ಲಿ ಆಗಿದೆ ಅಂತ ತೋರಿಸಿ ಕೊಡುತ್ತದೆ.  ಇರಲಿ, ಹಾಗಾದರೆ ಪರಂಪರೆಯ ಯಕ್ಷಗಾನ ಯಾವುದು? ಕೈತೊಳೆಯುವ ಸಾಬೂನಿಗೇ ಕೊಳೆ ಹಿಡಿದರೆ ಅದನ್ನು ಸ್ವಚ್ಛ ಮಾಡುವುದಕ್ಕೆ ಇನ್ನೊಂದನ್ನು ತರಬೇಕು!!
ನನ್ನ ಉತ್ತರ ಬಹಳ ಸರಳವಾಗಿತ್ತು. ಯಾಕೆಂದರೆ ನನ್ನ ಅನುಭವವನ್ನಷ್ಟೇ ನಾನು ಹೇಳಿದೆ. ನಾನು ಸರಳತೆಯನ್ನು ಅವಲಂಬಿಸಿರುವುದರಿಂದ ಉತ್ತರವೂ ಸರಳವಾಗಿತ್ತು. “ ಚೆಂಡೆ ಮದ್ದಲೆ ಕೊನೆಯಲ್ಲಿ ಶ್ರುತಿ ಇವು ಯಾವುದೂ ಕೂಡ ಇಲ್ಲದೆ ಒಂದು ಯಕ್ಷಗಾನ ಪದ ಹಾಡುವುದನ್ನು ಕೇಳುವಾಗ ಮನಸ್ಸಿಗೆ ಯಕ್ಷಗಾನದ ಅನುಭವ ಆಗುತ್ತದೆಯೋ ಅದು ಪರಂಪರೆಯ ಯಕ್ಷಗಾನ ಅಂತ ಸ್ಥೂಲವಾಗಿ ಹೇಳಬಹುದು.” ಇದು ಸಿದ್ದಾಂತ ಅಲ್ಲ. ಕೇವಲ ನನ್ನ ಅನುಭವ. ಯಾಕೆಂದರೆ ಈಗಿನ ಯಕ್ಷಗಾನ ಭಾಗವತಿಕೆ ತಳಿ ವಿಕಸನಗೊಂಡಿದ್ದರ ಪ್ರಭಾವ ಇದು. ಇಂದು ಚೆಂಡೆ ಮದ್ದಲೆ ಶ್ರುತಿ ಜತೆಯಲ್ಲಿ  ಇಲ್ಲವಾದರೆ ಅದನ್ನು ಯಕ್ಷಗಾನ ಪದ ಅಂತ ಹೇಳುವುದಕ್ಕೆ ಗುರುತಿಸುವುದಕ್ಕ ಸಾಧ್ಯವಿಲ್ಲ.

ಬಲಿಪ್ಪಜ್ಜ ನಮ್ಮ ಮನೆಯಲ್ಲಿ ಹೀಗೆ ಒಂದು ಸಲ ವಿಚಾರ ವಿಮರ್ಶೆ ಮಾಡುವಾಗ ಅವರು ಸುಮ್ಮನೆ ಎರಡು ಪದ ಹೇಳಿದರು. ಶ್ರುತಿಯೂ ಇಲ್ಲ ತಾಳವೂ ಇಲ್ಲ ಚೆಂಡೆ ಮದ್ದಲೆಯಂತೂ ಇಲ್ಲವೇ ಇಲ್ಲ. ಆ ಪದ ಹೇಗಿತ್ತೆಂದರೆ ಕೇಳಿದರೆ ಕೇಳುವಾಗಲೇ  ಕಣ್ಣೆದುರು ಆ ಯಕ್ಷಗಾನ ವೇಷಗಳು ಕುಣಿದ ಅನುಭವ ನೀಡಿತ್ತು. ಎತ್ತುಗಡೆ ಆಲಾಪನೆ ಕೊನೆಯಲ್ಲಿ ನಿಲುಗಡೇ...ಛೇ ಅವರ್ಣನೀಯ ಅನುಭವಗಳು. ಪರಂಪರೆಯ ಅನುಭವ ಎಂದರೆ ಅದು. ಇದು ಕೇವಲ ಭಾಗವತಿಕೆಗೆ ಸೀಮಿತವಲ್ಲ. ಚೆಂಡೆ ಮದ್ದಲೆಯ ನಾದ ಕೇಳುವಾಗಲೂ ಹಾಗೆ ಯಕ್ಷಗಾನದ ಅನುಭವ ಎಂದರೆ ಅದು ಭಿನ್ನವಾಗಿರುತ್ತದೆ. ಅದನ್ನು ಹೀಗೆ ಅಂತ ಭಾವನೆಯನ್ನು ವಿವರಿಸುವುದು ಕಷ್ಟ. ಇವುಗಳೆಲ್ಲಾ ಇದ್ದರೂ ಅದನ್ನು ಯಕ್ಷಗಾನ ಅಂತ ಹೇಳುವುದಕ್ಕೆ ಆತಂಕವಾಗುತ್ತದೆ. 


        
          ಯಾವ ವಸ್ತುವಾದರೂ ಅದಕ್ಕೆ ಮೂಲ ಧಾತು ಎಂಬುದಿರುತ್ತದೆ. ಅದರ ಗುಣ. ಮಾವಿನ ಹಣ್ಣು ಯಾವ ರೂಪದಲ್ಲಿ ಬಂದರೂ ಅದರ ರುಚಿಯಲ್ಲಿ ಅರಿವಿಗೆ ಬರುವ ಹಾಗೆ ಯಕ್ಷಗಾನಕ್ಕೂ ಒಂದು ಮೂಲ ಧಾತು ಗುಣ ಇದೆ ಅಂತ ನನ್ನ ಅನಿಸಿಕೆ. ಆದರೆ ಇಂದು ಆ  ಮೂಲ ಗುಣವೇ ಕಳೆದು ಹೋಗಿದೆ ಅಂತ ಅನ್ನಿಸುತ್ತದೆ. ಒಂದು ಯಕ್ಷಗಾನ ಪದ ಕೇಳುವಾಗ ಮನಸ್ಸಿನಲ್ಲೇ ಅದರ ಹಿಮ್ಮೇಳ  ವಿಂಗಡಿಸಿ ಕೇಳಿದರೆ ಇದು ಅರಿವಿಗೆ ಬರುತ್ತದೆ. ಬೆಂಗಳೂರಿನ ಹೊರಗೆ ಒಂದು ದೊಡ್ಡ ಆಲದ ಮರ ಇದೆ. ಶತಮಾನದ ಇತಿಹಾಸ ಇದೆ ಇದಕ್ಕೆ. ಆದರೂ ಮೊದಲಿನ ಮರದ ಬಿಳಲುಗಳನ್ನಷ್ಟೇ ಈಗ ಮರ ಅಂತ ನೋಡುತ್ತೇವೆ. ಮೂಲದ ಮರ  ಎಂದೋ ಮರೆಯಾಗಿದೆ. ಯಕ್ಷಗಾನಕ್ಕೂ ಹೆಚ್ಚುಕಮ್ಮಿ ಅದೇ ಸ್ಥಿತಿ.  ಹೀಗಿದ್ದರೂ ಚೆಂಡೆ ಮದ್ದಲೆಯ ಧ್ವನಿಗೆ ಇದು ನಮ್ಮ ಯಕ್ಷಗಾನ ಅಂತ ಅಭಿಮಾನ ಪಟ್ಟುಕೊಳ್ಳಬೇಕು. 

       ಯಕ್ಷಗಾನ ಕೇಳುವ ಆರಂಭದ ಕಾಲಘಟ್ಟದಲ್ಲಿ ಅಂದರೆ ನಾವು ಚಿಕ್ಕವರಿರುವಾಗ, ಯಕ್ಷಗಾನದ ನಾಲ್ಕು ಭಾಗವತರನ್ನು ನಾಲ್ಕು ಸ್ತಂಭದಂತೆ ನಾಲ್ಕು ಭಾಗವತರು ಅಂತ ಹೇಳುತ್ತಿದ್ದರು. ಅಗರಿ ಬಲಿಪ ಕಡತೋಕ ಮಂಡೆಚ್ಚ . ಅದರಲ್ಲೂ ಅಗರಿ ಬಲಿಪ ಎಂಬುದು ಪರಂಪರೆಯ ಪ್ರಭೇಧವೆಂಬಂತೆ ಪರಿಗಣಿಸಲ್ಪಟ್ಟಿದೆ. ಅದರಲ್ಲಿ ಕಡತೋಕ ಮಂಡೆಚ್ಚರು ಭಾಗವತಿಕೆಯಲ್ಲಿ ಬಹಳಷ್ಟು ಬದಲಾವಣೆ ಮಾಡಿ ತಮ್ಮದೇ ಪ್ರಭೇದವನ್ನು ಹುಟ್ಟು ಹಾಕಿದ್ದರೂ ಅಗರಿ ಬಲಿಪ ಎಂಬುದು  ಪರಂಪರೆಯ ಮೂಲ ಪ್ರಭೇದವಾಗಿದೆ ಎಂದು ವಿದ್ವಾಂಸರು ಹೇಳುತ್ತಾರೆ. ಅದು ಹೇಗೆ ಇರಲಿ. ಭಾಗವತಿಕೆಗೆ ಪ್ರಭೇದವಿದ್ದಂತೆ ಯಕ್ಷಗಾನ ಹಾಸ್ಯಕ್ಕೂ ಪ್ರಭೇದವಿದೆ ಎಂದು ಅನ್ನಿಸುತ್ತದೆ.
ಛಾಯಾ ಚಿತ್ರ....ಅಂತರ್ಜಾಲದ ಮೂಲದಿಂದ 

             ತೆಂಕು ತಿಟ್ಟು ಯಕ್ಷಗಾನದಲ್ಲಿ ಶ್ರೀ ಗೋಪಾಲ ಕೃಷ್ಣ ಜೋಶಿ ವಿಟ್ಲ ಹಾಗೇನೇ ಶ್ರೀ ಮಿಜಾರು ಅಣ್ಣಪ್ಪ ನಾವು ನೋಡುವ ಆರಂಭದ ದಿನಗಳಲ್ಲಿ ಪ್ರಸಿದ್ಧ  ಹಾಸ್ಯಗಾರರಾಗಿದ್ದರು. ಹಾಗೆ ನೋಡಿದರೆ ಪೆರುವೊಡಿ  ನೆಲ್ಲಿಕಟ್ಟೆಯಂತಹ ಹಾಸ್ಯಗಾರರೂ ಸಕ್ರಿಯವಾಗಿ ರಂಗದಲ್ಲಿ ಮಿಂಚುತ್ತಿದ್ದರು.  ಆದರೆ ನನ್ನ ಅನುಭವದಂತೆ ಜೋಶಿ ಮತ್ತು ಮಿಜಾರು ಎರಡು ಪ್ರಭೇದಗಳು ಪ್ರಮುಖವಾಗಿ ಗಮನಾರ್ಹವಾಗಿತ್ತು. 


         ಜೋಷಿ ಮತ್ತು ಮಿಜಾರು ಪರಸ್ಪರ ಹೋಲಿಸುವುದು ಸಾಧ್ಯವಿಲ್ಲ. ಎರಡೂ ಸಹ ದೈವದತ್ತವಾದ  ವಿಭಿನ್ನ ಪ್ರತಿಭೆಗಳು.  ಅಂದು ಇವರ ಹಾಸ್ಯದ ಹೊನಲು ಅನುಭವಿಸಿ ರಸಾನುಭವವನ್ನು ಪಡೆಯದ ಯಕ್ಷರಸಿಕರು ಇರಲಾರರು. ಇಬ್ಬರ ಶರೀರ ಭಾಷೆಯಾಗಲಿ , ಹಾಸ್ಯ ಪ್ರಸ್ತುತಿಯಲ್ಲಿ ಅಗಾಧವಾದ ವೆತ್ಯಾಸಗಳಿದ್ದರೂ ಎರಡನ್ನೂ ಅಂದಿನ ಪ್ರೇಕ್ಷಕಸಮೂಹ ಪರಂಪರೆಯ ಹಾಸ್ಯದಂತೆ ಅನುಭವಿಸುತ್ತಿತ್ತು. 

     ‘ವಿಟ್ಲ ಜೋಷಿ..’.ಹೆಸರು ಕೇಳಿದೊಡನೇ ನವಿರಾದ ನಗು ಮುಖದಲ್ಲಿ ಬಾರದಿದ್ದರೆ ಆತ ಯಕ್ಷರಸಿಕನೇ ಅಲ್ಲ. ಹಾಗಾಗಿಯೇ ಇವರನ್ನು ರಸಿಕ ರತ್ನ ಅಂತ ಅನ್ವರ್ಥವಾಗಿ ಕರೆಯುತ್ತಿದ್ದರು. ಇವರ ಹಾಸ್ಯಗಳಲ್ಲಿ  ಮಾತುಗಳು ಮಿತವಾಗಿದ್ದು ಶರೀರ ಭಾಷೆಯಲ್ಲೇ ಗಮನಾರ್ಹ ಹಾಸ್ಯವಿರುತ್ತಿತ್ತು. ಹಾಸ್ಯದ ದೈತ್ಯ ಪ್ರತಿಭೆ ಇದು.  ನೆರೆದ ಸಮೂಹ ಬಿದ್ದು  ಬಿದ್ದು  ನಕ್ಕರೂ ಸಹ ಇದು ತನಗೆ ಸಂಭಂಧಿಸಿದ್ದೇ ಅಲ್ಲ ಎಂಬಂತೆ ನಿರ್ಲಿಪ್ತ ಮನೋಭಾವದಲ್ಲಿದ್ದು ಬಿಡುವುದು  ಸಾಮಾನ್ಯನಿಗೆ ಸಾಧ್ಯವಿಲ್ಲದ ಕೆಲಸ. ಅಡುಗೆ ಮಾಡಿದವನು ತಾನು ಮಾಡಿದ ಆಡುಗೆಯ ರುಚಿ ನೋಡಬಾರದು. ಅದು ಉಚ್ಚಿಷ್ಠಮಾಡಿದಂತೆ. ಹಾಗೇ ಜೋಷಿಯವರು ತಮ್ಮ ಹಾಸ್ಯಕ್ಕೆ ತಾವೇ ನಕ್ಕು ಸ್ವತಃ ಪ್ರೇಕ್ಷಕನಾಗುವ ಉದಾಹರಣೆಯೇ ಸಿಗದು. ವಿದೂಷಕನಿಗಿರಬೇಕಾದ ಮುಖ್ಯ ಗುಣವೆಂದರೆ ತನ್ನ ಹಾಸ್ಯಕ್ಕೆ  ತಾನು ನಗದಿರುವುದು. ತನ್ನ ಹಾಸ್ಯಕ್ಕೆ ತಾನು ನಗುವುದೆಂದರೆ  ಇದು ಹಾಸ್ಯ ಒಮ್ಮೆ ನಕ್ಕು ಬಿಡಿ ಅಂತ ಪ್ರೇಕ್ಷಕನಿಗೆ ಹೇಳಿದಂತೆ.  ಭಾಷೆಯ  ಶಬ್ದಗಳು ವಿಕಟ ರೂಪದಲ್ಲಿ ಇವರ ನಾಲಗೆಯಲ್ಲಿ ನಿತ್ಯ ಸರ್ಕಸ್ ಮಾಡತ್ತಿದ್ದವು. ಅದರ ಜತೆಯಲ್ಲಿ ಆ ಮ್ಯಾನರಿಸಂ, ಅದು ಹೇಗಿರುತ್ತಿತ್ತೆಂದರೆ,   ನಗುವದನ್ನ ನಿಷೇಧಿಸಿ ಯಾರಾದರೂ ಖಡ್ಗ ಹಿಡಿದು ನಿಂತರೂ ಜೇವ  ಭಯ ಬಿಟ್ಟು ನಕ್ಕುಬಿಡುವಂತಹ ತಾಕತ್ತು ಆ ಶರೀರ ಭಾಷೆಯಲ್ಲಿತ್ತು. ಹತ್ತು ಹಲವು ಪಾತ್ರಗಳಿಗೆ ಮಾದರಿಯನ್ನು ರೂಪಿಸಿದ ಕಲಾವಿದರು ಮಾತ್ರವಲ್ಲ ತನ್ನಿಂದ ನಂತರಕ್ಕೆ ತನ್ನದೇ ಒಂದು ಪ್ರಭೇದವನ್ನು ಸೃಷ್ಟಿಸಿದ ಕಲಾವಿದರು.ಮಾತುಗಳನ್ನು ಒಪ್ಪಿಸುವುದು ಬಹಳ ಕಡಿಮೆ ಎನ್ನುವುದಕ್ಕಿಂತಲೂ ಮಿತವಾಗಿತ್ತು. ಶಬ್ದಗಳ ಉಚ್ಚಾರಗಳಲ್ಲಿ ಆಂಗಿಕ ಅಭಿನಯಗಳಲ್ಲಿ ಎಲ್ಲಕ್ಕಿಂತಲೂ ಹೆಚ್ಚು ಸಮಯ ಪ್ರಜ್ಞೆ ಯಾವುದನ್ನು ಹೇಗೆ ಎಷ್ಟು ಮಾತನಾಡಬೇಕು ಎಂಬುದರ ಪರಿಪೂರ್ಣತೆ ಇವರಲ್ಲಿತ್ತು. ನಾನು ಬಾಲ್ಯದಲ್ಲಿ ಇವರ ಆಟ ನೋಡುವಾಗ ಇವರ ನಾಟ್ಯವನ್ನೂ ನೋಡಿದ ನೆನಪಿದೆ. ಆನಂತರ ಪ್ರಾಯದ ಪರಿಣಾಮವೋ ದೇಹಾರೋಗ್ಯದ ಪರಿಣಾಮವೋ ನಾಟ್ಯ ಬಹಳಷ್ಟು ಕಡಿಮೆಯಾಗಿ ಅಭಿನಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ಆಗಲೂ ಮುಖಭಾವನೆಯ ವೈಶಿಷ್ಟ್ಯತೆಯಲ್ಲೇ ಪಾತ್ರವನ್ನು ರಂಗದ ಮೇಲೆ ತೋರಿಸಿಕೊಡುತ್ತಿದ್ದರು. ಹಾಸ್ಯಕ್ಕಾಗಿ ಹೇಳಿ ಮಾಡಿಸಿದ ದೇಹ ಒಂದು ಸಾಂಪ್ರದಾಯಿಕ ಹಾಸ್ಯ ಹೇಗಿರಬೇಕು ಎಂಬುದಕ್ಕೆ ನಿದರ್ಶನದಂತಿತ್ತು.

       ಜೋಶಿಯವರದು ಯಕ್ಷಗಾನದ ಟಿಪಿಕಲ್ ಹಾಸ್ಯ, ಮಾದರಿ ಹಾಸ್ಯ ಎನ್ನಬಹುದು. ಶಬ್ದಗಳ ವಿಕಟ ಬ್ರಹ್ಮನಾಗಿರುವ ಇವರ ಮಾತುಗಳು ಮುತ್ತಿನಂತೆ ಅದು ಹೊರಬಿದ್ದರೆ ಹಿಡಿದಿಡುವುದಕ್ಕೆ ಪ್ರೇಕ್ಷಕನ ಕಿವಿ ಅಗಲವಾಗಿ ತೆರೆದಿರುತ್ತಿತ್ತು. ಅತ್ಯಂತ ಸರಳ ಸಹಜ ಶುದ್ಧ ಹಾಸ್ಯ. ಶ್ರಮವಿಲ್ಲದ  ನವಿರುತನ ಅದರಲ್ಲಿರುತ್ತಿತ್ತು. ಪೌರಾಣಿಕ ಪ್ರಸಂಗದ ಹಲವು ವೇಷಗಳಿಗೆ ಬ್ರಾಂಡ್ ಮಾಡಿದ ಅವತಾರದ ಹಾಸ್ಯಗಾರ. ಆ ಪರಂಪರೆಯನ್ನು ಹಲವರು ಮುಂದುವರೆಸಿಕೊಂಡು ಬಂದಿದ್ದಾರೆ. 

       
         ಆ ಕಾಲದ ಇನ್ನೊಂದು ಹಾಸ್ಯ ಪ್ರಭೇದವೆಂದರೆ ಅದು ಶ್ರೀ ಮಿಜಾರು ಅಣ್ಣಪ್ಪನವರದ್ದು. ಮಿಜಾರು ಎಂಬ ಊರ ಹೆಸರೇ ಪರ್ಯಾಯ ಹಾಸ್ಯವಾಗಿ ಬದಲಾದದ್ದು ಯಕ್ಷಗಾನ ಚರಿತ್ರೆಯ ಅದ್ಭುತವೆನ್ನಬೇಕು. ಈ ಸಣಕಲೂ ಶರೀರಿಯ ರಂಗ ಪ್ರವೇಶವಾದರೆ ಎಂತಹಾ ಪ್ರೇಕ್ಷಕನೂ ರಂಗದಿಂದ ಆಚೆಗೆ ಹೋಗಲಾರ. 
ತುಳು ಭಾಷೆ ಹಾಸ್ಯಕ್ಕೆ ಅತ್ಯಂತ ಇಷ್ಟವಾದ ಭಾಷೆ. ಇಂತಹಾ ಹ್ಯೂಮರ್  ಲಕ್ಷಣಕ್ಕೆ ಸಾಕ್ಷ್ಯ ಮಿಜಾರು ಹಾಸ್ಯದಲ್ಲಿದೆ.  ಇವರದು ಕುಣಿತ ಕಡಿಮೆ. ಇದ್ದರೂ ಅದು ಸಂಪ್ರದಾಯಕ್ಕೆ ಹೊಂದಿಕೊಂಡು ಮಿತಿಯೊಳಗಿನ ನಾಟ್ಯ. ವಿಡಂಬನೆಯ ಸರಳ ಜಾನಪದ ಹಾಸ್ಯ ಇವರದು.  ಅಲ್ಲಿ ಇಲ್ಲಿ ಕಾಣುವ ವಿಚಾರಗಳು ಅಷ್ಟೇ ಸಲೀಸಾಗಿ ಇವರ ಸಂಭಾಷಣೆಯಲ್ಲಿ ಸೇರಿಕೊಂಡು ಚಿಂತನೆಯನ್ನುಂಟು ಮಾಡುತ್ತಿತ್ತು. ಹಾಸ್ಯಗಳಲ್ಲಿ ಪಂಚಿಂಗ್ ಎನ್ನುವ ಮಾತುಗಳು ಯಥೇಚ್ಚವಾಗಿರುತ್ತಿತ್ತು. ಹಾಸ್ಯದಲ್ಲಿ ಕರುಣೆ ಮಿಶ್ರಿತವಾಗಿ ಹೃದಯಕ್ಕೆ ಹತ್ತಿರವಾಗುವಂತೆ ಮಾತನಾಡುವುದರಲ್ಲೂ ಇವರದು ಅದ್ಭುತ ಪ್ರತಿಭೆ ಎನ್ನಬೇಕು. ಅವರ ಸಂಭಾಷಣೆಗಳು ಅವರಿಗೆ ಮಾತ್ರ ಸೀಮಿತವಾಗಿದ್ದವು. ಅವುಗಳನ್ನು ಬೇರೆಯವರು ಉಪಯೋಗಿಸಿದಲ್ಲಿ ಆ ಪರಿಣಾಮ ಉಂಟಾಗುತ್ತಿರಲಿಲ್ಲ. ಆ ಧ್ವನಿ ಸ್ವರ ಭಾರ ಅದು ಮಿಜಾರು ಅಣ್ಣಪ್ಪನಿಗಷ್ಟೇ ಸಾಧ್ಯ.  ದುಃಖದ ಸನ್ನಿವೇಶದಲ್ಲೂ ಹರಿತವಾದ ಹಾಸ್ಯ ಇವರ ವೈಶಿಷ್ಟ್ಯತೆ ಎನ್ನಬೇಕು. ನೋವಲ್ಲಿದ್ದರೂ ಚಿಮ್ಮುವ   ದಯನೀಯ ಹಾಸ್ಯಗಳು ಮಿಜಾರು ವಿಶೇಷ . ಆ ಸ್ವರಭಾರ ಅದಕ್ಕೆ ಸೂಕ್ತವಾಗಿ ಹೊಂದಿಕೆಯಾಗುತ್ತಿತ್ತು, ಒಂದು ರೀತಿಯ ಜಾನಪದೀಯ ಪ್ರಾತಿನಿಧಿತ್ವ ಇವರ ಹಾಸ್ಯ ಪಾತ್ರಗಳಲ್ಲಿರುತ್ತಿತ್ತು. ಹೊರಗೆ ಕಂಡು ಬರುವ ಪಾತ್ರಗಳು ರಂಗದಲ್ಲಿ ಕಂಡು ರಸಿಕರಿಗೆ ಮಿಜಾರು ಹಾಸ್ಯ ಪಾತ್ರಗಳೆಂದರೆ ತಮ್ಮೊಳಗಿನ ಮಂದಿಯನ್ನು ಕಂಡ ಅನುಭವ. ಅದರಂತೆ ಪರಿಶುದ್ಧ ತುಳು ಭಾಷೆಯ ಜಾನಪದ ಸೌಂದರ್ಯ ನೋಡಬೇಕಾದರೆ ಇವರ ಮಾತುಗಳನ್ನು ಕೇಳಬೇಕು. ಅದು ಮತ್ತೂ ಮತ್ತೂ ಕೇಳುವಂತೆ ಮಾಡುತ್ತದೆ. ತುಳು ಭಾಷೆಯಂತೇ ಕನ್ನಡ ಪೌರಾಣಿಕ ಪಾತ್ರಗಳಲ್ಲೂ ಇವರದೇ ಆದ ವೈಶಿಷ್ಟ್ಯತೆಗಳಿರುತ್ತಿತ್ತು. ಎರಡೂ ಕ್ಷೇತ್ರದಲ್ಲೂ ಏಕ ಪ್ರಕಾರವಾದ ಪ್ರತಿಭೆಯನ್ನು ಹೊಂದಿ ಅಸಾಮಾನ್ಯ ಕಲಾವಿದರು ಇವರು.  ಹಾಸ್ಯಕ್ಕೂ ತಾರಾಮೌಲ್ಯ ಇದೆ. ಅದೂ ಸಹ ಅಂದಿನ ಯಕ್ಷಗಾನದ ವಾಣಿಜ್ಯ ಚಿಂತನೆಗಳಿಗೆ ಅವಕಾಶವನ್ನು ಅರ್ಹತೆಯನ್ನೂ ನೀಡಿತ್ತು. 

         ಇಂದು ಹಾಸ್ಯ ಪ್ರದರ್ಶನಗಳು ಬೇಕೆಂದೇ ತುರುಕಿದಂತೆ ಇರುತ್ತವೆ. ಪ್ರಸಂಗದ ಮೌಲ್ಯ  ಸನ್ನಿವೇಶದ ಗಂಭೀರತೆ ಅರಿವಿಲ್ಲದೇ ಸೃಷ್ಟಿಸಲಾಗುತ್ತದೆ. ಹಾಸ್ಯ ಅದು ಕೇವಲ ನಗಿಸುವುದಕ್ಕಿರುವುದಲ್ಲ. ಕಲೆಯಲ್ಲಿ ಅದರಲ್ಲೂ ಯಕ್ಷಗಾನದಲ್ಲಿ ಹಾಸ್ಯದ ಜವಾಬ್ದಾರಿ ಸಾಕಷ್ಟಿದೆ. ಅದನ್ನು ಮರೆತು ವ್ಯವಹರಿಸುವಾಗ ಯಕ್ಷಗಾನ ರಂಗದಿಂದ ದೂರವಾಗುತ್ತದೆ. ಯಕ್ಷಗಾನದ ಗತಕಾಲದ ಚರಿತ್ರೆಯಲ್ಲಿ ಈ ಎರಡು ಹಾಸ್ಯ ಪ್ರಭೇದಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿರುವುದು ಸುಳ್ಳಲ್ಲ.