![]() |
| ಚಿತ್ರಕೃಪೆ : ಶ್ರೀ ಉಲ್ಲಾಸ್ |
ಮಹಾಭಾರತದಲ್ಲಿ ಬರುವ ಅತ್ಯಂತ ವೈಶಿಷ್ಟ್ಯ
ಪಾತ್ರಗಳಲ್ಲಿ ಒಂದು ಕರ್ಣನ ಪಾತ್ರ. ಸ್ವಂತಿಕೆ ಇಲ್ಲದ ಈ ಪಾತ್ರವನ್ನು ತಮ್ಮ ಸ್ವಂತ
ಚಿಂತನೆಗಳಿಂದ ಹಲವು ವಿಧದಲ್ಲಿ ಕಟ್ಟಿ ಬೆಳೆಸಿದ್ದುದನ್ನು
ಯಕ್ಷಗಾನದಲ್ಲಿ ಬಹಳಷ್ಟು ಕಾಣಬಹುದು. ಯಕ್ಷಗಾನದ ವೈಷಿಷ್ಟ್ಯ ಉಲ್ಲೇಖಿಸಲ್ಪಡುವುದೇ ಇಂತಹ
ಹಲವು ಅಂಶಗಳಿಂದ. ಸ್ವಂತ ಚಿಂತನೆ ಇಲ್ಲದ ಪಾತ್ರಗಳಲ್ಲಿ ಇದು ಒಂದು ಅಂತ ಹೇಳುವುದಕ್ಕೆ ಬಲವಾದ
ಕಾರಣ ಆರಂಭದಿಂದ ಅಂತ್ಯದ ವರೆಗೂ ಕರ್ಣನ ಬದುಕು ಕೌರವನ ಪ್ರಾಯೋಜಕತ್ವದಲ್ಲಿ ಸಾಗುತ್ತದೆ. ಕೌರವನ
ಈ ಹಂಗಿನ ಉರುಳು ಅದು ಕೌರವ ಬಿಗಿಯದೇ ಇದ್ದರೂ ಪರೋಕ್ಷವಾಗಿ ಬಿಗಿಸಿಕೊಳ್ಳುತ್ತಾ ಸಾಗುತ್ತದೆ. ಕೌರವನ
ಮನಸ್ಸಿನ ಭಾವನೆಗೆ ಅನುಸಾರವಾಗಿ ಕರ್ಣನ ಕಲ್ಪನೆಗಳು ಅರಳಿಕೊಳ್ಳುತ್ತವೆ. ಕರ್ಣನಲ್ಲಿ ಒಂದು
ಸ್ವಂತ ವ್ಯಕ್ತಿತ್ವ ಇದ್ದರೂ ಅದು ಕೌರವನಿಂದಲೇ ರೂಪೀಕರಿಸಿದಂತೆ ಸಾಗುತ್ತದೆ. ಕರ್ಣನ ಧ್ವನಿ
ಅವನದ್ದಾಗಿದ್ರೆ ಅದರ ಭಾವ ಕೌರವನದ್ದು.
ಇತ್ತೀಚೆಗೆ ಒಂದು ಬ್ಲಾಗ್ ಪುಟಗಳಲ್ಲಿ ಬಂದ ಲೇಖನ ಈ
ಕರ್ಣನ ಬದುಕನ್ನು ನೆನಪಿಗೆ ಬರುವಂತೆ ಮಾಡಿಬಿಟ್ಟಿತು. ಯಕ್ಷಗಾನದ ಬಗ್ಗೆ ಹಲವಾರು ಟೀಕೆಯೊಂದಿಗೆ
ಕೆಲವೊಂದು ಅಂಶಗಳನ್ನು ವಿಮರ್ಶಿಸಿ ಬರೆಯಲಾಗಿತ್ತು.
ಆ ಲೇಖನ ಹೇಗೇ ಇರಲಿ ಅದರ ಬಗೆಗಿನ ವಿಮರ್ಶೆಯಾಗಲೀ ಅಭಿಪ್ರಾಯವಾಗಲೀ ಈ ಚಿಂತನದ
ಉದ್ದೇಶವಲ್ಲ. ಬದಲಾಗಿ ಹೀಗೊಂದು ದೃಷ್ಟಿಕೋನದತ್ತ ಹರಿದ ಚಿಂತನೆಯ ಹೊಲಬುಗಳು ಮಾತ್ರವನ್ನಷ್ಟೆ ತೋರಿಸುವ ಪ್ರಯತ್ನ. ಒಂದು
ರೀತಿಯಲ್ಲಿ ವಾಸ್ತವದಲ್ಲಿ ವಿಡಂಬನೆಯೆಂಬುದು ಪ್ರತಿಯೊಂದು ವಿಷಯಗಳಲ್ಲೂ ಅಡಕವಾಗಿರುತ್ತದೆ
ಎಂಬುದಷ್ಟೆ ಭಾವ.
ಇಂದು ಯಕ್ಷಗಾನ ಪ್ರದರ್ಶನಗಳು ಅದರಲ್ಲೂ ತೆಂಕುತಿಟ್ಟು
ವ್ಯಾಪಾರಿ ಉದ್ಯಮದಂತೆ ಉಳಿದಿಲ್ಲ. ವ್ಯವಸಾಯೀ ಮೇಳಗಳು.. ತಮ್ಮ ಡೇರೆಯನ್ನು ಎಂದೋ ಸುರುಳಿ
ಸುತ್ತಿ ಆಗಿ ಹೋಗಿದೆ. ಆಡೇರೆಯ ಧೂಳಿನ ಕಣಗಳು ಇತಿಹಾಸದ ಗರ್ಭಕ್ಕೆ ಸೇರಿ ಆಗಿಹೋಗಿದೆ. ಹಾಗಾಗಿ
ಇಂದು ಅದನ್ನು ಒಂದು ಕಾಲದಲ್ಲಿದ್ದಂತೆ ಉದ್ಯಮ ಎಂದು ಗುರುತಿಸಿಕೊಳ್ಳುವುದು ಕಷ್ಟವಾಗುತ್ತದೆ.
ಬಡಗುತಿಟ್ಟಿಗೆ ಇದು ಅನ್ವಯವಾಗುತ್ತದೆಯೋ ಎಂದು ಅನುಮಾನ. ಯಾಕಂದರೆ ಅಲ್ಲಿ ಇನ್ನೂ ಅಲ್ಪ ಸ್ವಲ್ಪ
ಉದ್ಯದ ರೂಪದಲ್ಲಿ ಇದು ಉಳಿದುಕೊಂಡಿದೆ ಅಂತ ನನ್ನ ಭಾವನೆ. ಅದಾವುದು ಇಲ್ಲಿನ ವಿಚಾರವಲ್ಲ.
ಬದಲಾಗಿ ಯಕ್ಷಗಾನ ಎಂಬುದರಿಂದ ಆದಾಯದ ಮೂಲ ಹೇಗೆ ಕಳಚಿಕೊಂಡಿತೊ ಯಕ್ಷಗಾನದ ಅಸ್ತಿತ್ವ ಬೇರೆ
ಮೂಲಾಧರವನ್ನೇ ಅಶ್ರಯಿಸ ತೊಡಗಿತು. ಮುಖ್ಯವಾಗಿ ಹಲವಾರು ಕಡೆ ( ಇದು ಬೆಂಗಳೂರಲ್ಲಿ ಅತ್ಯಂತ
ವಾಸ್ತವದ ಸಂಗತಿ.) ಇದು ರಾಜ್ಯದ ಕಲೆ ಎಂಬ ಲೇಬಲ್
ನಲ್ಲಿ ಪ್ರಾಯೋಜಕತ್ವ ಅರಸುವಂತೆ ಮಾಡಿತು. ಹಲವು ಸಲ ರಾಜ್ಯದ ಕಲೆ ಎಂಬ ಈ ಗೌರವ ಅದು ಕಲೆಯ ಮೇಲಿನ
ಅಭಿಮಾನದಿಂದಲ್ಲ, ಅದರಲ್ಲೂ ಒಂದು ಜಾಹೀರಾತಿನ ವಾಸನೆಯನ್ನು ಕಾಣಬಹುದು. ದೇವರಿಗೆ ಜಾಹೀರಾತು
ಕೊಟ್ಟು ಹರಕೆ ಪೂಜೆ ಒಪ್ಪಿಸಿದಂತೆ,,, ಜಾತ್ರ ಉತ್ಸವದ ಫಲಕಗಳಲ್ಲಿ ದೇವರ ಪ್ರತಿಮೆಗಿಂತ
ಮುಖ್ಯವಾಗಿ ತಮ್ಮ ಚಿತ್ರವನ್ನು ಅಚ್ಚು ಹಾಕುವಂತೆ ಇದು ಒಂದು ಕಲಾಸೇವೆ ರೂಪದಲ್ಲಿ
ಕ್ರಿಯಾತ್ಮಕವಾಗುವುದುಂಟು. ಹಾಗಾಗಿ ಯಕ್ಷಗಾನ ಒಂದು ರೀತಿಯಲ್ಲಿ ಪ್ರಾಯೋಜಕತ್ವದಡಿಯಲ್ಲೇ
ಉಸಿರಾಡುವಂತೆ ಭಾಸವಾಗುತ್ತದೆ.
ಮೊದಲೆಲ್ಲ ಹಲವು ಕಲೆಗಳು ಕಲಾವಿದರು
ಬದುಕುತ್ತಿದ್ದದ್ದು ರಾಜಾಶ್ರಯದಿಂದಲೇ ಆದರೂ ಇಂದು ಇದು ಇನ್ನೊಂದು ರೂಪದಲ್ಲಿ
ಮುಂದುವರೆಯುತ್ತಿದೆ ಎಂದು ಭಾವಿಸಿ ತೃಪ್ತರಾಗಬೇಕಷ್ಟೆ. ಆದರೆ ವಾಸ್ತವ ಅದು ಇನ್ನೊಂದು ಚಿಂತನೆಗೆ
ತೆರೆದುಕೂಳ್ಳುವಂತೆ ಮಾಡುತ್ತದೆ. ಯಕ್ಷಗಾನದ ಮೇಲೆ ಅಭಿಮಾನದಿಂದ ಗೌರವ ಪ್ರೀತಿಯಿಂದ ಅದಕ್ಕೆ
ಪ್ರಾಯೋಜಕತ್ವ ಇದ್ದರೆ ಅದು ಯಕ್ಷಗಾನ ಕಲೆಗೆ ಪೂರಕವಾಗಿಯೇ ಉಪಯೋಗವಾಗುತ್ತದೆ. ಆದರೆ ಅದರ
ಗಂಭೀರತೆಯ ಅರಿವಿಲ್ಲದೆ ಹರಿದು ಬರುವ ಸಹಾಯದ ಪರಿಣಾಮ ಅದು ಹಾಗೇ ಪೂರಕವಾಗುತ್ತದೆ ಎಂದು ಹೇಳಬಹುದೇ?
ಇಂದು ಒಂದು ಸಂಘ ಸಂಸ್ಥೆ ಕಟ್ಟಿ ಅದನ್ನು ನೋಂದಾಯಿಸಿ
ಅದರ ಆಶ್ರಯದಲ್ಲಿ ಕಲಾಸೇವೆಯನ್ನು ಮಾಡುತ್ತ ತಾವು ಮಾಡಿದ ಸೇವೆಗೆ ಸಹಾಯವಾಗಿ ಸರಕಾರದಿಂದ
ಅನುದಾನವನ್ನು ಪಡೆಯುತ್ತಾರೆ. ಸರಕಾರದಿಂದ ಸಿಗುವ ಈ ಸಹಾಯಕ್ಕೆ ಸದ್ಯದಲ್ಲಿ ನಿಯಮ ನಿಬಂಧನೆಗಳು
ಅಷ್ಟೊಂದು ಕಠಿಣವಾಗಿಲ್ಲದೇ ಇರಬಹುದು. ಆದರೆ ಮುಂದೊಂದು ದಿನ ಅದು ಬರಲಾರದು ಎನ್ನಲಾದೀತೆ?
ಸರಕಾರೀ ಕೃಪಾಪೋಷಿತರಾಗುವುದು ಇನ್ನಿನ್ನು ಹಲವು ಸಮಸ್ಯೆಗಳನ್ನೂ ಗೊಂದಲಗಳನ್ನು ಸೃಷ್ಟಿಸಬಹುದು. ಈಗಲಂತು ಯಕ್ಷಗಾನಕ್ಕೆ ಒಂದು ಪ್ರತ್ಯೇಕ ಅಕಾಡೆಮಿ
ರೂಪುಗೊಂಡ ಮೇಲೆ ಮುಚ್ಚಿದ್ದ ಕಣ್ಣುಗಳು ಅರೆತೆರೆದು ನಿಧಾನವಾಗಿ ಅರಳಿಕೊಂಡದ್ದು ಮಾತ್ರವಲ್ಲ ಅದು
ತಿಕ್ಕಿ ತಿಕ್ಕಿ ಕೆಂಪಗಾಗುತ್ತಿವೆ. ಕಾರಣಗಳು ಏನೇ ಇರಲಿ ಮುಂದಾಗುವ ಪರಿಣಾಮಗಳು ಯೋಚಿಸುವಂತೆ
ಮಾಡುವುದರಲ್ಲಿ ಅನುಮಾನವಿಲ್ಲ.
ಆರಾಧನಾ ಸ್ಥಳಗಳು
ರಾಷ್ಟ್ರೀಕರಣಗೊಂಡ ಮೇಲೆ ಮನಸ್ಸು ತೆರೆದು ಕಣ್ಣು ಮುಚ್ಚಿ
ಪ್ರಾರ್ಥನೆ ಮಾಡುವುದಕ್ಕೂ ನಿಬಂಧನೆಗಳು ನಿಯಮಗಳು ಬಂದಿವೆ. ಈ ನಿಯಮಗಳಿಗೆ ಭಗವಂತನೂ
ಒಗ್ಗಿಕೊಂಡ ಮೇಲೆ ನ್ಯಾಯ ನಿಬಂಧನೆಯ ಬಾಹುಗಳು ಭಗವಂತನ ಸುತ್ತಲು ಬಿಗಿಯತೊಡಗಿವೆ. ಪ್ರತಿಯೊಂದು
ಹೆಜ್ಜೆಗಳನ್ನು ಯೋಚಿಸಿಯೇ ಮುಂದಡಿಯಿಡಬೇಕಾದಂತಹ ಅನಿವಾರ್ಯತೆಯನ್ನು ಮನುಷ್ಯನೇ ನಿರ್ಮಿಸಿಕೊಂಡು
ಮಾನವೀಯತೆಯ ಆತ್ಮೀಯತೆಯ ಕವಚವನ್ನು ಎಂದೋ ಕಳಚಿಟ್ಟಾಗಿದೆ. ಆ ಕವಚ ಕೈಗೆ ಸಿಗದಷ್ಟು ಮರೆಯಲ್ಲಿ ಈಗ ಅಡಗಿ ಕುಳಿತಿದೆ.
ಎಲ್ಲವು ಮನುಷ್ಯ ನಿರ್ಮಾಣ ಇದರಲ್ಲಿ ಭಗವಂತ ನಿಸ್ಸಹಾಯೀ ಅಂತ ಹೇಳಬಹುದೇ?
ಯಕ್ಷಗಾನಕ್ಕೊಂದು ಅಕಾಡೆಮಿ ಹಲವು
ದಿನದ ಕನಸು ನನಸಾಗಿದೆ. ಯಕ್ಷಗಾನದ ಬೆಳವಣಿಗೆ ಇದರಿಂದ ಬಹಳ ಅನುಕೂಲವಾಗಬಹುದು ಎಂದು ಬಹಳ
ಅಭಿಮಾನಿಗಳ ನಿರೀಕ್ಷೆ. ಇದು ಸುಳ್ಳಲ್ಲ.
ಯಕ್ಷಗಾನದಂತಹ ಕಲೆಗೆ ಇದು ಎಂದೋ ಆಗಬೇಕಿತ್ತು. ಎಲ್ಲ ಅನುಕೂಲಗಳು ಒದಗಿ ಯಕ್ಷಗಾನ ಯಕ್ಷಗಾನವಾಗಿಯೇ
ಉಳಿಯಲಿ ಎಂದು ಹಾರೈಸಬಹುದು. ಎಲ್ಲ ಅನುದಾನವು ಪೂರಕವಾಗಿದ್ದಲ್ಲಿ ಇದು ನಿಜವಾಗಿಯೂ
ಅನುಕೂಲವಾಗಬಹುದು. ಅನುದಾನದೊಂದಿಗೆ ನಿಯಂತ್ರಣದ ವಾಘೆಯೂ ಬಂಧಿಸಲ್ಪಟ್ಟರೆ ... ಹಲವು ವಿಧದ
ಅವಿಷ್ಕಾರ ಕಾದುಕುಳಿತಂತೆ ಬಳಕೆಗೆ ಬರಬಹುದು. ಪ್ರತಿಯೊಂದು ಹೆಜ್ಜೆಗೂ ಎಚ್ಚರಿಕೆವಹಿಸಬೇಕಾದ
ಅನಿವಾರ್ಯತೆ ಬರಬಹುದು. ಹಲವು ಜಿಜ್ಞಾಸೆಗಳು ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ಯಕ್ಷಗಾನ ಮನು ಮಹರ್ಷಿಯ ಸಿದ್ದಾಂತವನ್ನು
ಪ್ರತಿಪಾದಿಸುತ್ತಿದೆ ಅದು ಸರಿಯಲ್ಲ ಅದನ್ನು ಬದಲಾಯಿಸಬೇಕು. ಕೋಮುವಾದ ರಾಜಕೀಯ ಕಾರಣಗಳಿಂದ
ಅರ್ಥಗಾರಿಕೆಗೆ ಸೆನ್ಸಾರ್ ಹಾಕುವ ಅನಿವಾರ್ಯತೆ ಬರಬಹುದು. ಕರ್ಣನನ್ನು “ ಸೂತನ ಮಗ ...” ಎಂದು
ಕರೆದರೆ ಅದು ಜಾತಿ ನಿಂದನೆಯಾಗಬಹುದು. “ದುಷ್ಯಾಸನ ವಧೆ” ಅತ್ಯಂತ ಭೀಭತ್ಸ ಪ್ರಸಂಗ ಎನಿಸಿ ಅದು
ರಂಗದಿಂದ ಮಾಯವಾಗಬಹುದು. ಪ್ರತಿ ಅರ್ಥವಿಲ್ಲದ
ಬದಲಾವಣೆಗಳು ಬಳಕೆಗೆ ಬರಬಹುದು. ಹೀಗೆ ಯೋಚಿಸಿದಾಗ ಎಲ್ಲ ಅನುದಾನವನ್ನು ಪಡೆದುಕೊಂಡ ನಂತರ
ಹೇಗಿರಬಹುದು? ಕೃತಕ ಗೊಬ್ಬರ ಹಾಕಿ ಕಸಿ ಮಾಡಿ ಬೆಳೆಸಿದ ಮಾವಿನ ಮರದಂತೆಯೋ ಇನ್ನಾವುದೊ ಸಸಿಯಂತೆ
ಕಂಗೊಳಿಸಬಹುದು. ಅನುದಾನ ಮೂಗಿಗೆ ಹಚ್ಚಿದ ತುಪ್ಪದಂತೆ ಆಗದೇ ಉಳಿದರೆ ಅದು ಭಾಗ್ಯ ಎಂದೇ
ತಿಳಿಯಬೇಕು. ನಮ್ಮ ಮನೆಯ ಸಮಾರಂಭ ಅದು ನಮ್ಮೊಳಗಿನ ಅತ್ಮಾಭಿಮಾನದ ವಿಷಯವಾಗಿ ಹೇಗೆ ಕಾಣಬಲ್ಲೇವೊ ಹಾಗೆ ನಮ್ಮ ಸಂಸ್ಕೃತಿಯ ಕಲೆ. ಅದು
ಅಭಿಮಾನದ ಸಂಕೇತವಾಗಬೇಕು. ನಮ್ಮ ಅಭಿಮಾನದಲ್ಲಿ ದೂಷಣೆ ಶೋಷಣೆ ಕಲೆಯಲ್ಲಿ ಸುಳಿಯದೆ ಅದು ಭವ್ಯ ಸಂಸ್ಕೃತಿಯ
ಕಲೆಯಾಗಿಯೇ ಉಳಿಯಬೇಕು.
ಆದರೂ ಒಂದು ಆಶಯ ಯಕ್ಷಗಾನ
ಬೆಳಗಬೇಕು. ಅದು ಪ್ರಾಮಾಣಿಕ ಅಭಿಮಾನದಿಂದ ಬೆಳಗಿದರೆ ಆ ಬೆಳಕಿನ ಪ್ರಬೆಯೂ ಹೆಚ್ಚು. ಅನುದಾನದ
ಅಥವಾ ಇನ್ನಿತರ ಸಹಾಯ ನಿರೀಕ್ಷೆಯಿಂದ ಅದು ಬೆಳೆಯುವಂತಾಗಬಾರದು. ನಿಸ್ವಾರ್ಥ ಸೇವೆ ಲಭ್ಯವಾದಲ್ಲಿ
ಯಾವುದೇ ನಿಯಂತ್ರಣವಿಲ್ಲದೆ ಪೂರ್ಣ ಪ್ರಮಾಣದಲ್ಲಿ ನೈಜ ರೂಪದಲ್ಲೇ ಕಲೆ ಅರಳಬಹುದು.
