ನಮ್ಮ ಊರಿನ ಯಕ್ಷಗಾನ ಬಯಲಾಟ. ಪ್ರಸಂಗ ಬಪ್ಪನಾಡು
ಕ್ಷೇತ್ರ ಮಹಾತ್ಮೆ. ಸುಂಕದ ಕಟ್ಟೆಮೇಳ ಇಲ್ಲಾ
ಶ್ರೀ ಭಗವತೀ ಮೇಳ ಇರಬೇಕು. ಅದು ನೆನಪಿಲ್ಲ. ದಾರುಕಾಸುರ ಸಂಹಾರವಾಗಿ ದುರ್ಗಾ ಪರಮೇಶ್ವರಿ ಒಂದು
ಕ್ಷೇತ್ರದಲ್ಲಿ ನೆಲೆಯಾಗುವಂತಹ ಸನ್ನಿವೇಶ. ವಿಷ್ಣುವಿನ ಅಶ್ರುವಿನಿಂದ ಅವತರಿಸಿದ ದುರ್ಗೆಯ ಒಂದು
ಶಕ್ತಿ ಮೂಲ್ಕಿ ಬಳಿಯಲ್ಲಿ ನೆಲೆಯಾಗುವ ಮುನ್ನ ವರ್ತಕ ಬಪ್ಪನಿಗೆ ಕಾಣಿಸಿಕೊಳ್ಳುತ್ತಾಳೆ. ತನಗಾಗಿ
ಕ್ಷೇತ್ರವನ್ನು ನಿರ್ಮಿಸುವಂತೆ ಆತನಲ್ಲಿ ಅಭೀಷ್ಟವನ್ನು ವ್ಯಕ್ತಪಡಿಸುತ್ತಾಳೆ. ಬಪ್ಪ ಭಾವಾವೇಶದಿಂದ ದೇವಿಯನ್ನು ಕಂಡು ಕೈಮುಗಿದು ಆಕೆಯ
ಆಶಯದಂತೆ ಕ್ಷೇತ್ರ ನಿರ್ಮಾಣ ಮಾಡುತ್ತಾನೆ. ದೇವಿ ನೆಲೆಯಾಗುತ್ತಾಳೆ. ಸಾಮಾನ್ಯವಾಗಿ ಮುಂಜಾನೆಯ
ಹೊತ್ತಿನಲ್ಲಿ ಈ ಸನ್ನಿವೇಶ ರಂಗದಲ್ಲಿ ಕಾಣಿಸಿಕೊಳ್ಳುತ್ತದೆ. ಅಂದು ಮುಂಜಾನೆಯ ನಮಾಜ್ ಗೆ
ರಸ್ತೆಯಲ್ಲಿ ಹೊರಟ ಮುಸ್ಲಿಂ ವ್ಯಕ್ತಿಗೆ ರಸ್ತೆಯ ಬದಿಯಲ್ಲೇ ಇರುವ ರಂಗಸ್ಥಳದ ಸನ್ನಿವೇಶದಲ್ಲಿ ಬೇಡದೇ ಇದ್ದರೂ ಗಮನ ಹರಿಯುತ್ತದೆ. ಒಂದೆರಡು ಘಳಿಗೆ ನೋಡುತ್ತಾನೆ ನಂತರ ತನ್ನ ಪಾಡಿಗೆ ತಾನು
ಮಸೀದಿಯೆಡೆಗೆ ಮೌನವಾಗಿ ಹೆಜ್ಜೆ ಹಾಕುತ್ತಾನೆ. ಮತೀಯವಾದಂತಹ
ಯಾವ ಗೊಂದಲವೂ ಹುಟ್ಟಿಕೊಳ್ಳದೆ ಸಹಜವಾಗಿ ತನ್ನ ಪಾಡಿಗೆ ಮುಂದುವರೆಯುತ್ತಾನೆ. ಆತನಿಗೆ ಅಷ್ಟರ ಮಟ್ಟಿಗೆ ಯಕ್ಷಗಾನದ ಮೇಲೆ ವಿಶ್ವಾಸವಿದೆ. ಇಂದು ಈ ವಿಶ್ವಾಸದ ಕೊರತೆಯೇ ವಿವಾದಕ್ಕೆ
ಮೂಲ ಕಾರಣ.
ಮೇಲೆ ಹೇಳಿದಂತಹ ಸನ್ನಿವೇಶ ಅದೆಷ್ಟು ಕಡೆಯಲ್ಲಿ
ನಡೆದಿರುತ್ತದೋ ಊಹನೆಗೆ ಸಿಕ್ಕುವುದಿಲ್ಲ. ಅದರ ಬಗ್ಗೆ ಯಾವ ಜಿಜ್ಞಾಸೆಯಾಗಲೀ ಸಮಸ್ಯೆಯಾಗಲಿ
ಅನಪೇಕ್ಷಿತ ಪ್ರಚೋದನೆಯಾಗಲಿ ಬೆಳೆದು ಬರುವುದಿಲ್ಲ. ವಿವಾದ ರಹಿತವಾಗಿ ಆ ಪ್ರಸಂಗ ಇನ್ನೂ
ಪ್ರದರ್ಶನವಾಗುವುದೇ ಇದಕ್ಕೆ ಸಾಕ್ಷಿ. ಸರಳವಾಗಿ ಯೋಚಿಸುವ ಪ್ರೇಕ್ಷಕನಿಗೆ ಯಾವ ವಿವಾದದ
ಅವಶ್ಯಕತೆಯೂ ಇರುವುದಿಲ್ಲ. ಯಾಕೆಂದರೆ ಆತ ಕೆಲವರಂತೆ ಪ್ರಚಾರಪ್ರಿಯನಲ್ಲ. ಹೆಸರು ಗಳಿಸುವ
ಮಹತ್ವಾಕಾಂಕ್ಷೆಯ ಸ್ವಾರ್ಥವಿರುವುದಿಲ್ಲ. ಯಕ್ಷಗಾನ ಅದರ ಚೌಕಟ್ಟಿನೊಳಗೆ ಅನುಭವಿಸುವುದಷ್ಟೇ ಆತನ
ಉದ್ದೇಶ. ಹಾಗಿದ್ದರೆ ವಿವಾದ ಹುಟ್ಟಿಕೊಳ್ಳುತ್ತದೆ. ಬೃಹದಾಕಾರವಾಗಿ ಬೆಳೆದಿದೆ ಎಂಬ ಭ್ರಮೆಯನ್ನು
ತರಿಸುತ್ತದೆ. ಇದಕ್ಕೆ ಅನೂಕೂಲವಾಗಿ ಹಲವು ವಿಧದದ ಮಾಧ್ಯಮಗಳು ತಮಗರಿವಿಲ್ಲದೆ ಅಥವ ಉದ್ದೇಶ
ಪೂರ್ವಕವಾಗಿಯೂ ಸಹಕರಿಸುತ್ತದೆ.
ಅನ್ಯಧರ್ಮದ ಕಥೆಯೊಂದು ಯಕ್ಷಗಾನದಲ್ಲಿ ಪ್ರಸಂಗವಾಗಿ
ಬಹಿರಂಗವಾಗುತ್ತದೆ. ನಿಜಕ್ಕಾದರೆ ಇಲ್ಲಿ ಬಹಿರಂಗದ ಮಾತು ಬಹಳ ಹಳೆಯದು. ಸವೆದು ಹೋದ ಕೊರಡಿನಂತೆ
ಅದರ ರೂಪವೂ ಬದಲಾಗಿ ಈಗ ಕೇವಲ ಅಸ್ತಿತ್ವ ಮಾತ್ರವಿದೆ. ಆದರೂ ಉದ್ದೇಶ ಪೂರ್ವಕವಾಗಿ ವಿವಾದ ಹುಟ್ಟಿಕೊಂಡಿದೆ.
ವಿವಾದ ಎಬ್ಬಿಸುವಲ್ಲಿ ಮೂರು ಭಾವಗಳು ಕಾರಣೀ ಭೂತವಾಗಿರಬೇಕಿತ್ತು. ಒಂದು ಯಕ್ಷಗಾನ ಕಲೆಯ ಬಗ್ಗೆ ಅತೀವ ಕಾಳಜಿ. ಇನ್ನೊಂದು
ಮತೀಯ ಭಾವನೆಯ ಬಗ್ಗೆ ಅಭಿಮಾನ. ಮತ್ತೊಂದು ಸಮಾಜದ ಸ್ವಾಸ್ಥ್ಯದ ಬಗ್ಗೆ ಇರುವಂತಹ ಆಸಕ್ತಿ. ಆದರೆ
ಹುಟ್ಟಿಕೊಂಡ ವಿವಾದದಲ್ಲಿ ಈ ಮೂರು ಇಲ್ಲದಿರುವುದು ವಿವಾದದ ಉದ್ದೇಶವನ್ನು ಸ್ಪಷ್ಟವಾಗಿಸುತ್ತದೆ.
ಯಕ್ಷಗಾನ ಯಾವುದೇ ಮತಕ್ಕೆ ಧರ್ಮಾಚರಣೆಗೆ ಸೀಮಿತವಲ್ಲ
ಎಂಬುದು ಯಕ್ಷಗಾನದ ಭವ್ಯ ಇತಿಹಾಸ ತಿಳಿಸುತ್ತದೆ. ಯಕ್ಷಗಾನ ಎಂದೇನು ಯಾವುದೇ ಕಲೆಯೂ ಧರ್ಮಕ್ಕೆ
ಸೀಮಿತವಾಗಿ ಉಳಿದರೆ ಅದು ಕಲೆ ಎಂದೆನಿಸಲ್ಪಡುವುದಿಲ್ಲ. ಬದಲಾಗಿ ಧರ್ಮಾಚರಣೆಯ ಅಂಗವಾಗುತ್ತದೆ. ಆವಾಗ ಅದು ಧರ್ಮಕ್ಕೆ ಸೀಮಿತವಾಗಿರಿಸಬಹುದು. ಆದರೆ
ಅದನ್ನು ಕಲೆ ಎಂದು ಸಮಾಜ ಸ್ವೀಕರಿಸುವುದಿಲ್ಲ.
ಇನ್ನು ಯಕ್ಷಗಾನದ ಬಗ್ಗೆ ಕಾಳಜಿ ಇದ್ದಲ್ಲಿ ಯಕ್ಷಗಾನ
ಮೌಲ್ಯವನ್ನು ಕಳೆದುಕೊಳ್ಳುತ್ತದೆ. ತನ್ನ ಪರಂಪರೆಯ ಸೊಗಡನ್ನು ಉಳಿಸಿಕೊಳ್ಳುವುದಿಲ್ಲ ಎಂಬ ಕಾರಣ
ವಿವಾದದೊಂದಿಗೆ ಥಳುಕು ಹಾಕಿದ್ದರೆ ಅದು ನಿಜಕ್ಕೂ ಹಾಸ್ಯಾಸ್ಪದ ಮಾತ್ರವಲ್ಲ ವಿವಾದದ ಉದ್ದೇಶದ
ಹಿಂದೆ ಮಹಾ ಸ್ವಾರ್ಥವೊಂದು ಹೆಡೆಯಾಡುತ್ತದೆ ಎಂದುಕೊಳ್ಳಬೇಕು.
ಇಂದು ಬದುಕುಳಿದಂತಹ ಹಿರಿಯರಾದ ಮಹಾನ್ ಕಲಾವಿದರಲ್ಲಿ,
ಯಕ್ಷಗಾನಕ್ಕೆ ಸರ್ವಸ್ವವನ್ನು ಅರ್ಪಿಸಿದಂತಹ ಮಹನೀಯರಲ್ಲಿ ಯಕ್ಷಗಾನದ ಆಗು ಹೋಗುಗಳ ಬಗ್ಗೆ,
ಸ್ಥಿತಿಗತಿಯ ಬಗ್ಗೆ ಒಮ್ಮೆ ವಿಚಾರಿಸಿದರೆ ದೊಡ್ಡ
ನಿಟ್ಟುಸಿರು ಬಿಡದೇ ಇರುವಂತಹ ಕಲಾವಿದ ಇರುವುದಕ್ಕೆ ಸಾಧ್ಯವಿಲ್ಲ. ಕೆಲವರಂತೂ ಯಕ್ಷಗಾನದ ಬಗ್ಗೆ
ಹೇಳುವುದನ್ನೇ ಬಿಟ್ಟು ಸ್ಥಿತಪ್ರಜ್ಞರಾಗಿ ಕಾಲಗಳು ಸಂದು ಹೋಗಿದೆ. ಅಷ್ಟು ಕೆಟ್ಟು ಹೋದ ಯಕ್ಷಗಾನ
ಕೆಡುವುದಕ್ಕೆ, ಈಗಿನ ವಿವಾದಕ್ಕೆ ಹೇತುವಾದ
ಪ್ರಸಂಗ ಕಾರಣವಂತು ಖಂಡಿತಾ ಅಲ್ಲ. ಹಾಗಾದರೆ ಯಕ್ಷಗಾನದ ಬಗ್ಗೆ ಕಾಳಜಿಯಿದ್ದಲ್ಲಿ ಹಾಳಾದ
ಮತ್ತು ನಶಿಸಿ ಹೋಗುತ್ತಿರುವ ಕಲೆಯ ಬಗ್ಗೆ ವಿವಾದ ಹುಟ್ಟಿಕೊಳ್ಳಬೇಕಿತ್ತು. ಹೊರಾಟದ ಕಿಚ್ಚು
ಹೊತ್ತಿಕೊಳ್ಳಬೇಕಿತ್ತು. ಪರಂಪರೆಯ ಧ್ವನಿ ಹುಟ್ಟಿದಲ್ಲಿ ಅದನ್ನು ದಮನಮಾಡುವ ಕೈಗಳೇ ಇಂದು
ವಿವಾವದವನ್ನು ಕೈಗೆ ಎತ್ತಿಕೊಂಡಿರುವಲ್ಲಿ ಯಕ್ಷಗಾನದ ಹಿತ ಅಥವಾ ಕಲೆಯ ಹಿತ ಇರುವುದಕ್ಕೆ
ಸಾಧ್ಯವಿಲ್ಲ.
ವಿಪರ್ಯಾಸವೆಂದರೆ ಯಕ್ಷಗಾನದಲ್ಲಿ ಹಾಸ್ಯದ ಹೆಸರಲ್ಲಿ
ಮಾನಾಹಾನಿಯಾಗಿ ಹಾಸ್ಯ ಅಪಹಾಸ್ಯವಾಗುವಾಗ ವಿವಾದವಾಗುವುದಿಲ್ಲ. ಯಕ್ಷಗಾನದ ಹೆಸರಲ್ಲಿ ಅಸಂಭದ್ದ
ದರ್ಶನವಾಗುವಾಗ ವಿವಾದವಾಗುವುದಿಲ್ಲ. ಕೇವಲ ಮನರಂಜನೆಗಾಗಿಯೋ ವ್ಯಕ್ತಿನಿಷ್ಠವಾಗಿಯೋ ಯಕ್ಷಗಾನದ
ಹೊರಾವರಣ ಇಟ್ಟು ಇನ್ನೇನೋ ಸರಕು ತುಂಬಿಸಿ ಅದನ್ನು ಯಕ್ಷಗಾನ ಎಂದು ಬಿಂಬಿಸುವಾಗ
ವಿವಾದವಾಗುವುದಿಲ್ಲ. ಆಗ ಇದೇ ಕೈಗಳು ಚಪ್ಪಾಳೆ
ಬಡಿಯಲು ಸಿದ್ಧವಾಗಿರುತ್ತದೆ. ಅನಾವಶ್ಯವಾಗಿ ಲಕ್ಷಗಟ್ಟಲೆ ಖರ್ಚು ಮಾಡಿ ರಂಗಸ್ಥಳ ಕಟ್ಟುವಾಗ
ಔಷಧಿಗೆ ದುಡ್ಡಿಲ್ಲದೇ ಸ್ವಂತ ಕುಟುಂಬವನ್ನೂ ಪೋಷಿಸುವುದಕ್ಕೆ ಅಸಮರ್ಥನಾದ ಬಡ ಕಲಾವಿದ ಅದೇ
ರಂಗಸ್ಥಳದಲ್ಲಿ ಸಿಗುವ ಬಿಡಿಗಾಸಿಗೆ ಕುಣಿಯುತ್ತಿರಬೇಕಾದರೆ ವಿವಾದವಾಗುವುದಿಲ್ಲ. ಲಕ್ಷಗಟ್ಟಲೇ ಖರ್ಚು ಮಾಡಿದ ಆಡಂಬರ ದರ್ಶನವೇ ಯಕ್ಷಗಾನ
ಅಭಿಮಾನ ಎಂದು ಬಿಂಬಿಸಿ ಸಮಾಜವನ್ನು ಮೂರ್ಖರನ್ನಾಗಿಸುವಾಗ ವಿವಾದ ಹುಟ್ಟಿಕೊಳ್ಳುವುದಿಲ್ಲ. ಇಷ್ಟೆಲ್ಲ ಯಕ್ಷಗಾನದ ಬಗ್ಗೆ ಅಭಿಮಾನ ವ್ಯಕ್ತ
ಪಡಿಸುವುದಕ್ಕೆ ಈಗ ಯಕ್ಷಗಾನದ ಮೌಲ್ಯ ಎಷ್ಟು ಉಳಿದಿದೆ. ಆ ಉಳಿದಂತಹ ಮೌಲ್ಯ ರಕ್ಷಣೆಯ ಭಾಗ ಈ
ವಿವಾದ ಎಂದು ತಿಳಿದುಕೊಳ್ಳಬಹುದೇ? ಪ್ರಾಮಾಣೀಕವಾಗಿ ಒಪ್ಪಿಕೊಳ್ಳುವುದು ಕಷ್ಟವಾದೀತು.
ಈಗ ವಿವಾದ ಹುಟ್ಟಿಕೊಂಡಿದೆ. ಮತೀಯವಾದ ಬಣ್ಣ ಬಳಿಯುವ
ಪ್ರಯತ್ನವೂ ನಡೆಯುತ್ತಿದೆ. ಆದರೆ ಸರ್ವ ಧರ್ಮ ಸಮನ್ವಯವನ್ನು ಯಕ್ಷಗಾನದಲ್ಲಿ ತೋರಿಸಿದಷ್ಟು
ಮಾರ್ಮಿಕವಾಗಿ ಬೇರೆ ಇನ್ನಾವುದೇ ಕಲೆಯಲ್ಲಿ ತೋರಿಸಿಲ್ಲ ಎಂಬುದು ಯಕ್ಷಗಾನವನ್ನು ಪ್ರಾಮಾಣಿಕವಾಗಿ
ಪ್ರೀತಿಸುವವರಿಗೆ ಅದರ ಸಾರವನ್ನುಆರ್ಥವಿಸುವವರಿಗೆ ತಿಳಿದಿರುತ್ತದೆ. ವಿವಾದ ಹುಟ್ಟಿಸುವಲ್ಲಿ
ಇಂತಹ ವಿಚಾರಗಳು ತಲೆಗೆ ಹತ್ತುವಷ್ಟು ವಿಷಯ ತಲೆಯೊಳಗೂ ಇರಬೇಕಲ್ಲ. ಹಾಗಾಗಿ ವಿವಾದ
ಹುಟ್ಟಿಕೊಳ್ಳುತ್ತದೆ. ಮತ್ತದನ್ನು ಬೆಳೆಸುವ ಯತ್ನ ನಡೆಯುತ್ತಾ ಇರುತ್ತದೆ. ಪ್ರತಿಯೊಂದು ಧರ್ಮವೂ ಆಚರಣೆಯ ಮೂಲಕ ಭಗವಂತನೊಡನೆ
ಐಕ್ಯವಾಗುವುದನ್ನು ಸಾರುತ್ತವೆ. ತನ್ನ ಧರ್ಮ ಶ್ರೇಷ್ಠ ಎಂದು ಅನ್ಯ ಧರ್ಮವನ್ನು ನಿಂದಿಸುವುದು
ಅದಾವುದೇ ಧರ್ಮವಾಗಲೀ ಅದು ಮತಾಂಧತೆಯಾಗುತ್ತದೆ. ಇಂತಹ ತತ್ವಗಳು ಹಲವು ಯಕ್ಷಗಾನ
ಪ್ರಸಂಗಗಳಲ್ಲಿ ಹಲವು ಪಾತ್ರಗಳಲ್ಲಿ ಶ್ರೇಷ್ಠ
ಕಲಾವಿದರು ಪ್ರತಿಪಾದನೆ ಮಾಡಿ ಯಕ್ಷಗಾನ ಪರಿಪಕ್ವ ಧರ್ಮ ಕಲೆ ಎಂದು ಸಾಬೀತು ಮಾಡಿರುತ್ತಾರೆ. ಇಂತಹ ಸೂಕ್ಷವಿಚಾರವನ್ನು ಮರೆತು ಮತೀಯವಾದ ಬಣ್ಣ ಮೆತ್ತಿ
ರಂಜನೆಯನ್ನು ನೋಡುವುದು ಮಾನಸಿಕ ದೌರ್ಬಲ್ಯವನ್ನು ತೋರಿಸುತ್ತದೆ. ಯಕ್ಷಗಾನ ಪ್ರಸಂಗಕ್ಕೆ ಅನ್ಯಧರ್ಮದ ಕಥೆಯೊಂದು ಅಥವಾ ಅದರ
ತತ್ವವೊಂದು ಆಧಾರವಾಗುವುದರಲ್ಲಿ ಅಪಾರಾಧವಾದರೂ ಏನು? ಉತ್ತಮವಾದುದನ್ನು ಸ್ವೀಕರಿಸುವುದು ಶುದ್ದ
ಸಂಸ್ಕಾರದ ಗುಣ. ಇದು ತಪ್ಪಾಗಿದ್ದರೆ ಯಕ್ಷಗಾನದಲ್ಲಿ ಸ್ವೀಕೃತವಾಗಿರುವುದರಲ್ಲಿ ಸ್ವಧರ್ಮದ
ವಿಚಾರಳು ಮಾತ್ರವೇ ಇರುವುದು ಎಂದು ಖಡಾಖಂಡಿತವಾಗಿ ಹೇಳುವುದಕ್ಕೆ ಸಾಧ್ಯವಿದೆಯೇ?
ವಿವಾದಗಳು ಹುಟ್ಟಿಕೊಳ್ಳುತ್ತವೆ. ಅಭಿವ್ಯಕ್ತಿ
ಸ್ವಾತಂತ್ರ್ಯದ ಹೆಸರಲ್ಲಿ ಫೇಸ್ ಬುಕ್ ವಾಟ್ಸಪ್ ಮತ್ತು ವಾರ್ತಾ ಮಾಧ್ಯಮಗಳ ದುರುಪಯೋಗವೇ ಇಂದಿನ
ಸ್ಥಿತಿಗೆ ಕಾರಣ. ವಿವಾದಗಳನ್ನು ಹಿನ್ನೆಲೆಯಲ್ಲಿ ದೂಷಿಸುತ್ತಾ ಮುನ್ನೆಲೆಯಲ್ಲಿ ರಂಜನೆಯನ್ನು
ಪಡೆಯುವಲ್ಲಿ ಸಮಾದ ಸ್ವಾಸ್ಥ್ಯ ಹಾಳಾಗಿದೆ ಎಂದು ಅನ್ನಿಸುವುದಿಲ್ಲ.
ವಿವಾದ ಪ್ರತಿಯೊಂದು ಕಾರ್ಯದ ಹಿಂದೆಯೂ
ಹುಟ್ಟಿಕೊಳ್ಳುತ್ತದೆ. ಆದರೆ ಸದುದ್ದೇಶದಿಂದ ಸತ್ ಸಂಕಲ್ಪದ ಪ್ರಾಮಾಣಿಕ ಯತ್ನ ಅದು
ಮುಂದುವರಿಯುವಾಗ ಯಾವ ವಿವಾದವೂ ಅರ್ಥವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ
ಪ್ರಾಮಾಣಿಕನಾಗಿದ್ದವನು ವಿವಾದದ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ಆತನ
ಪ್ರಯತ್ನಕೆ ಸತ್ಫಲ ಒಂದಲ್ಲ ಒಂದು ವಿಧದಲ್ಲಿ ಸಿಕ್ಕಿಯೇ ಸಿಗುತ್ತದೆ. ಯಾಕೆಂದರೆ ಅಲ್ಲಿ
ಸ್ವಾರ್ಥವಿರುವುದಿಲ್ಲ. ಕೇವಲ ಉದ್ದೇಶಮಾತ್ರವೇ ಇರುತ್ತದೆ. ಅದುವೆ ಸತ್ ಸಂಕಲ್ಪ. ತಾವು ಮಾಡುವ ಕಾರ್ಯದಲ್ಲಿ ಸತ್ ಸಂಕಲ್ಪ ಸದುದ್ದೇಶ
ಪ್ರಾಮಾಣಿಕವಾಗಿದ್ದಲ್ಲಿ ಆ ಸಂಕಲ್ಪ ಶುದ್ದಿಯೇ ಆ ಕಾರ್ಯವನ್ನು ಯಶಸ್ಸಿನ ತುದಿಯಲ್ಲಿ
ನಿಲ್ಲಿಸುತ್ತದೆ.