ಕಳೆದ ಭಾನುವಾರ ಬೆಂಗಳೊರಿನ ಗಿರಿನಗರ ರಾಮಾಶ್ರಮದ ಸುಂದರ ಪರಿಸರದ ರಾಮ ಸನ್ನಿಧಾನದಲ್ಲಿ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಸಾರಥ್ಯದಲ್ಲಿ ಯಕ್ಷಗಾನ ತಾಳಮದ್ದಲೆ ಜಾಂಬವತಿ ಕಲ್ಯಾಣ ನಡೆಯಿತು. ಕೇವಲ ಅವರನ್ನೇ ಲಕ್ಷ್ಯ ವಿರಿಸಿ ಕಾರ್ಯಕ್ರಮ ರೂಪಿಸಿದರೂ ಅದು ಅಷ್ಟಕ್ಕೆ ಸೀಮಿತವಾಗದೆ ಉತ್ತಮವಾಗಿ ಮೂಡಿಬಂತು. ಶ್ರೀ ದುರ್ಗಾಂಬ ಕಲಾ ಸಂಗಮದ ಸದಸ್ಯರ ಶ್ರಮ ಸಾರ್ಥಕ್ಯವನ್ನು ಪಡೆಯಿತು.
ಕೆಲವು ಪದಗಳು ಅದ್ಭುವಾಗಿ ಶಾಸ್ತ್ರಿಗಳ ಕಂಠಶ್ರಿಯಲ್ಲಿ ಮೊಳಗಿದುವು. ಪರಿಸರವೆಲ್ಲ ತೆಂಕಬೈಲುಮಯವಾಗಿ ಹೊಸ ಯಕ್ಷ ರಾಗದ ಆಲಾಪನೆಗೆ ಕಿವಿಗೊಟ್ಟು ತನ್ಮಯವಾಗಿತ್ತು. ಅದರಲ್ಲೂ ಕೆಲವು ಪದಗಳು... ಅರಿಯೆ ಪ್ರಸೇನ ಪೋದುದನು, ಶರದ ರಿತು ಪೌರ್ಣಿಮ , ರಾಮ ರಾಘವ ಎಂಬ ಪದಗಳು ಕಾರ್ಯಕ್ರಮ ಮುಗಿದು ಎರಡು ದಿನ ಕಳೆದರೂ ಗುನುಗುತ್ತ ಇರವಂತೆ ಮಾಡಿದೆ. ಅವದು ಕಚ್ಚಿ ಆಲಾಪಿಸುವ ತೆಂಕ ಬೈಲು ಶೈಲಿ ಎಂಥ ಕಲಾವಿದನನ್ನು ಕ್ಷೇತ್ರಕ್ಕೆ ನೀಡಿದೆ ಎಂದು ಹುಬ್ಬೇರಿಸುವ ಹಾಗೆ ಮಾಡುತ್ತದೆ.
ಹಲವು ದಿನಗಳಿಂದ ತೆಂಕಬೈಲು ಪದದ ತ್ರಿಷೆ ತಕ್ಕ ಮಟ್ಟಿಗೆ ನೀಗಿದ ಅನುಭವ. ಮಿತ್ತನಡ್ಕದ ಜಾಂಬವತಿ ಕಲ್ಯಾಣ ನೋಡುವುದರಲ್ಲಿ ಕಾರಣಾಂತರದಿಂದ ವಂಚಿತನಾದ ನಾನು ಇಷ್ಟು ಸುಲಭ ಹಾಗು ಸುಂದರವಾಗಿ ತೆಂಕಬೈಲು ರಸಾಸ್ವಾದನೆ ಆಗುತ್ತದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಹವ್ಯಾಸಿ ಕಲಾವಿದರ ಅರ್ಥಗರಿಕೆ ಕೂಡ ಪರವಾಗಿಲ್ಲ ಅನ್ನಿಸಿತು. ಸುಧನ್ವ ಅವರ ಶ್ರೀಕೃಷ್ಣ ಉತ್ತಮ ರೀತಿಯಲ್ಲಿ ಮೂಡಿತು.
ಬೆಂಗಳೊರಿನಲ್ಲಿ ಯಕ್ಷಗಾನ ಬಯಲಾಟಕ್ಕಿಂತ ಹವ್ಯಾಸಿಗಳು ತಾಳಮದ್ದಲೆ ನಡೆಸಿದರೆ ಹೆಚ್ಚು ಸೂಕ್ತ ಅಂತ ಅನ್ನಿಸುತ್ತದೆ. ಬಯಲಾಟದಲ್ಲಿ ಹಲವು ಅಭಾಸಗಳನ್ನು ಕಂಡ ನಾನು ಬೆಂಗಳೂರು ಹವ್ಯಾಸಿಗಳ ಯಕ್ಷಗಾನ ಎಂದರೆ ಸ್ವಲ್ಪ ದೂರವೇ ಉಳಿಯುತ್ತಿದ್ದೇನೆ. ಬಯಲಾಟವಾದರೆ ವೇಷ ಕುಣಿತ ಎಲ್ಲದರಲ್ಲೂ ಸರ್ವಾಂಗೀಣ ಪ್ರಭುದ್ದತೆಯನ್ನು ತೋರಿಸುವುದು ಇಲ್ಲಿನ ಹವ್ಯಾಸಿಗಳಿಗೆ ತುಂಬಾ ಕಷ್ಟ. ಹಾಗಾಗಿ ಅಂತಹ ಆಭಾಸಗಳಿಗೆ ಇಲ್ಲಿ ಅವಕಾಶ ಲಭ್ಯತೆ ತುಂಬಾ ಕಡಿಮೆ. ಹೀಗಿದ್ದರು ತಾಳ ಮದ್ದಲೆ ಯಕ್ಷಗಾನಕ್ಕಿಂತ ಕಠಿಣ ಅಂತ ನನ್ನ ಭಾವನೆ. ಹಾಡುಗಾರಿಕೆ ಅರ್ಥಗಾರಿಕೆ ಇದರಿಂದ ಪ್ರೇಕ್ಷಕರನ್ನು ಸೆಳೆದು ಹಿಡಿವುದು ತುಂಬಾ ಕಷ್ಟದ ಕೆಲಸ. ಕೇವಲ ಬೆರಳೆಣಿಕೆಯ ಪ್ರೆಕ್ಷಕರಾದರೂ ( ಬಹುಶಃ ಉತ್ತಮ ಅರ್ಥ ಪೂರ್ಣ ಕಾರ್ಯಕ್ರಮದ ಸಂಕೇತ ಹಾಗೆಯೇ ಇರಬೇಕು ) ಸಭ್ಯ ಸಭೆಯಿಂದ ಒಂದು ಸಾಯಾನ್ನ ಪುಳಕಗೊಂಡಿತು.
ಸಾಧಾರಣ ಆದಿನದ ಹೆಚ್ಚಿನ ಎಲ್ಲ ಪದಗಳನ್ನು ಧ್ವನಿ ಮುದ್ರಿಸಿಕೊಂಡು ಗೆಳೆಯರಲ್ಲಿ ಹಂಚಿಕೊಂಡು ಸಂತಸ ಪಟ್ಟಿದ್ದೇನೆ. ಇಂಥ ಕಾರ್ಯಕ್ರಮ ಅಸ್ವಾದನೆಯಿಂದ ಮೈಮನಗಳು ಉಲ್ಲಸಿತವಾಗಿಬಿಡುತ್ತವೆ. ಆದಿನ ಕಾರ್ಯಕ್ರಮ ಮುಗಿಸಿ ಹೊರಬಂದಾಗ ಜಿಟಿ ಜಿಟಿ ಮಳೆ ಶುರುವಾಗಿತ್ತು.. ದೇಹಕ್ಕೆ ಹನಿ ಹನಿಯಾಗಿ ಮಳೆ ತಂಪೆರೆದರೆ ಮನದೊಳಗೆ ಶಾಸ್ತ್ರಿಗಳ ಮೇಘವರ್ಷ ಭೋರ್ಗರೆದು ಸುರಿದು ತಂಪೆರೆದಿತ್ತು. ಹೊರ ಬಂದು ನೋಡ್ತೇನೆ ಸ್ಥಳೀಯ ಬೆಂಗಳೂರಿಗರನ್ನು ನೋಡಿದಾಗ , ಎಂತಹ ರಸಾಸ್ವಾದನೆಯ ರುಚಿಯನ್ನು ಇಲ್ಲೇ ಇದ್ದು ಕೊಂಡು ಸವಿಯದೆ ವಂಚಿತರಾದಿರಲ್ಲ, ಎಂದು ಅನ್ನಿಸಿತು.
ಯಕ್ಷಗಾನ ಉನ್ನತಿಗಾಗಿ ಹುಟ್ಟಿಕೊಂಡ ಸಂಘ ಸಂಸ್ಥೆಗಳು ಇಂಥ ಕಾರ್ಯಕ್ರಮಗಳ ಕಡೆಗೆ ಗಮನ ಹರಿಸಿದರೆ ನಿಜವಾದ ಕಲೆ ಜೀವಂತವಾಗಿರುವುದರಲ್ಲಿ ಸಂಶಯವಿಲ್ಲ.
No comments:
Post a Comment