
ಈ ವೈಶಾಖದ ಅಂತ್ಯದೊಂದಿಗೆ ಬೆಂಗಳೂರಿನಲ್ಲಿ ಎರಡು ಬಯಲಾಟಗಳನ್ನು ನೋಡುವ ಅವಕಾಶ ಬಂತು.ಅಲ್ಲಿಗೆ ತಾತ್ಕಾಲಿಕವಾಗಿ ಯಕ್ಷಗಾನ ಮೇಳಗಳ ತಿರುಗಾಟ ಮುಗಿಯಿತು. ಕೊನೆಯ ಈ ಎರಡು ಆಟಗಳ ಅನುಭವ ಸವರಿದಂತೆ ಹಂಚಿಕೊಳ್ಳುವ ತುಡಿತ ಮಾತ್ರ ಇಲ್ಲಿ.
ಒಂದು ಆಟ ಎಡನೀರು ಮೇಳದ ಈ ವರ್ಷದ ಮೂರನೇ ಬೆಂಗಳೂರು ಪ್ರವಾಸದ ಒಂದು ದಿನದ ಪ್ರದರ್ಶನ. ಒಂದು ಮರೆಯಲಾರದ ಮರೆಯಲಾಗದ ಅನುಭವವನ್ನು ಕೊಟ್ಟಿತು. ಅನೇಕ ನಿರೀಕ್ಷೆಯೊಂದಿಗೆ ಮೊದಲ ದಿನದ ಆಟಕ್ಕೆ ಹೋಗಿದ್ದೆ. ಮೇಳದ ಪ್ರಧಾನ ಹಿಮ್ಮೇಳದವರು ರಜೆ ಎಂದು ತಿಳಿದು ನಿರುತ್ಸಾಹಿತನಾಗಿ ಕುಳಿತರೂ ಆದಿನದ ಮಟ್ಟಿಗೆ ಅದ್ಭುತ ಅನುಭವವನ್ನೇ ಕೊಟ್ಟಿತು. ೧೫ ಕಿಲೋ ಮೀಟರು ವಾಹನ ದಟ್ಟಣೆಯಲ್ಲಿ ಹೋದುದು ವ್ಯರ್ಥವಾಗದಷ್ಟು ಅನುಭವ. ಒಂದು ವಿಶೇಷ ಹಿರಿಯ ಕಲಾವಿದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಚೆಂಡೆ ಮದ್ದಲೆ ವಾದನ. ಜೀವನದ ವಾನಪ್ರಸ್ಥ ಸಮಯದಲ್ಲಿ ಬಲ್ಲಾಳರ ಕೈಚಳಕ ಕಂಡ ಭಾಗ್ಯವಂತ ನಾನು.ಪೂಜ್ಯ ಎಡನೀರು ಸ್ವಾಮಿಜಿಗಳ ಸಾಮನ್ಯ ಹಾಡುಗಾರಿಕೆ ಇವರ ಸ್ಫೂರ್ತಿಯಿಂದ ಅದ್ಭುತ ಯಶಸ್ಸು ಕಂಡಿತು. ಬಹುಶಃ ಅವರಿಗೂ ಅದು ಮರೆಯಲಾರದ ಅನುಭವ ಕೊಟ್ಟಿತೇ ? ಬಹುಶಃ ಆ ಮೇಳದ ಹಿಮ್ಮೇಳದ ಸ್ಥಾನದ ಮಹಿಮೆ ಅಂತ ತಿಳಿದುಕೊಂಡಿದ್ದೇನೆ. ಅದರಂತೆ ಮುಮ್ಮೇಳ ಕೂಡ. ಆದಿನ ಕೃಷ್ಣಾರ್ಜುನ ಪ್ರಸಂಗ. ಯುವ ಪ್ರತಿಭಾವಂತ ದೀಪಕ್ ಪೇಜಾವರ ಅವರ ಕೃಷ್ಣ ಹಾಗು ಮಧೂರು ನಾವಡ ಅವರ ಅರ್ಜುನ

ಉತ್ತಮವಾದ ನಿರ್ವಹಣೆಯಿಂದ ಜನಮನ ಸೆಳೆಯಿತು. ಕೇವಲ ಹೋದುದಕ್ಕೆ ೨ ದಿಗಿಣ ನೋಡಿ ಹೋಗುವಂತ ಆಲಸ್ಯದಿಂದ ಕುಳಿತ ನಾನೂ ೧೦ ಗಂಟೆಯ ತನಕ ಕುಳಿತದ್ದು ನನಗೆ ಸೋಜಿಗ ಅನ್ನಿಸಲೇ ಇಲ್ಲ. ಸಮಯಾವಕಾಶದಿಂದ ಪೂರ್ಣವಾಗಿ ನೋಡಲು ಸಾಧ್ಯವಾಗದೆ ಹೋಯಿತು. ಅದರ ಪ್ರಭಾವವೋ ಚಿಪ್ಪಾರು ಕೈಚಳಕ ವನ್ನು ಪುನಃ ಸವಿಯುವ ಮನಸ್ಸಿಂದ ಒಂದು ದಿನ ಬಿಟ್ಟು ಮೂರನೇ ಆಟಕ್ಕೆ ಹೋದರೆ ದೇವರ ಆಟ ಬೇರೆಯೇ ನಿಗದಿಯಾಗಿತ್ತು. ಜೀವನದ ಕೊನೆಯ ಕ್ಷಣದವರೆಗೂ ಯಕ್ಷಗಾನಕ್ಕಾಗಿ ಬಾಳಿದ ಬಲ್ಲಾಳರು ಇತಿಹಾಸವಾದದ್ದು ಮರೆಯದ ಒಂದು ಘಟನೆಯಾಯಿತು.

ಎಡನೀರು ಮೇಳ ಇಲ್ಲ ಇನ್ನು ಎಂದು ಅಭಿಮಾನಿಗಳು ನಿರಾಶೆಯಿಂದ ಈ ವರ್ಷದ ಅವಧಿಯನ್ನು ಎದುರುಗೊಂಡರೆ, ಅಭಿಮಾನಿಗಳ ನಿರೀಕ್ಷೆಯನ್ನು ತಕ್ಕಮಟ್ಟಿಗೆ ನೀಗಿಸಿ ಈ ವರ್ಷದ ಯಶಸ್ವಿ ತಿರುಗಾಟದ ಕೊನೆಯ ಕ್ಷಣದಲ್ಲಿದೆ. ದೈವಬಲ ಎಂದರೆ ಇದುವೆಯೋ ಏನೋ.. ಏನಿದ್ದರೂ ಚಿಪ್ಪಾರು ಅಜ್ಜನ ಮದ್ದಳೆಯ ಛಾಪನ್ನು ಚಪ್ಪರಿಸುವಂತೆ ಮಾಡಿದ ಎಡನೀರು ಹಿಮ್ಮೇಳಕ್ಕೆ ಆ ಯಕ್ಷಪಿತನ ಹಾರೈಕೆ ಖಂಡಿತ ಇದೆ ಎಂದೇ ನನ್ನ ಗ್ರಹಿಕೆ. ಅಮ್ಮಣ್ಣಾಯರ ಸಾರಥ್ಯ ಗೋರೆ ದೆಲಂಥಮಜಲು ಅವರೊಂದಿಗೆ ಉಪಾಧ್ಯಾಯರ ಸಹಕಾರ ಹಿಮ್ಮೇಳವನ್ನು ಗಟ್ಟಿಗೊಳಿಸಿದೆ. ಹಾಗೆಂದು ಎಡನೀರು ಮೇಳ ಪರಿಪೂರ್ಣ ಎಂದು ಹೇಳುವುದಲ್ಲ. ಅದಕ್ಕೆ ಅದರದ್ದೇ ಆದ ಕೆಲವು ತೊಡಕುಗಳು ಇವೆ. ಹಾಗೂ ಅದಕ್ಕೆ ಅದರದ್ದೇ ಆದ ಕಾರಣಗಳು ಇದೆ. ಪರಿಪೂರ್ಣವಾದ ಬಣ್ಣದ ವೇಷ ಇಲ್ಲ, ಎಡಬಲ ವೇಷಗಳು ರಂಗವನ್ನು ತುಂಬುವಲ್ಲಿ ತುಂಬಾ ಶ್ರಮ ಪಡಬೇಕಾಗುತ್ತದೆ. ಒಳ್ಳೆಯ ಪಳಗಿದ ಕಲಾವಿದರಾಗಿ ಕೆಲವರನ್ನು ಮಾತ್ರವೇ ಹೆಸರಿಸಬಹುದು. ಆದರೂ ಇದೆಲ್ಲವನ್ನೂ ಮೀರಿ ಒಂದು ತಂಡವಾಗಿ ಭೇದವಿಲ್ಲದೆ ಅವರಿಗೆ ರಂಗದಲ್ಲಿ ವ್ಯವಹರಿಸುವ ಕಲೆ ತಿಳಿದಿದೆ. ಇಂದಿನ ಕಾಲಮಿತಿಯೋಳಗಣ ಪ್ರದರ್ಶನದಲ್ಲಿ ಬಣ್ಣದ ವೇಷವಾಗಲಿ ಪಳಗಿದ ಕಲಾವಿದರ ಸಂಖ್ಯೆಯಾಗಲಿ ನಗಣ್ಯ. ಒಟ್ಟಂದದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದ ಸಂಯೋಜನೆ ಹೇಗೆ ಸಂವಹನ ಹೇಗೆ ಇದರಿಂದಲೇ ಪ್ರದರ್ಶನ ಯಶಸ್ಸನು ಕಾಣಬಹುದು. ಇದು ಎಲ್ಲರೂ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ವಿಚಾರ. ಆದುದರಿಂದಲೇ ನೀವು ಒಂದು ಸಲ ಆಟ ನೋಡುವ ಎಂದು ಕುಳಿತರೆ ಅದು ಎಂತಹುದೇ ಪ್ರಸಂಗವಾಗಲಿ ನಿಮ್ಮನ್ನು ಅಲ್ಲಿಂದ ಕದಲಲು ಬಿಡುವುದಿಲ್ಲ.ಕಲಾವಿದರ ಸಂಖ್ಯೆ ಸೀಮಿತವಾಗಿರುವುದರಿಂದ ಹಲವು ಗುಣಗಳು ಈ ತಂಡಕ್ಕೆ ಆಗಿವೆ. ಮೊದಲನೆಯದಾಗಿ ಆರ್ಥಿಕವಾದ ವಿಚಾರ ಉದ್ವೇಗ ರಹಿತ ಪ್ರದರ್ಶನ ಮತ್ತು ಇದ್ದ ಕಲಾವಿದರಲ್ಲಿ ಸುಲಭದಲ್ಲಿ ಸಮನ್ವಯ ಸಾಧನೆ. ಇದು ಹೊರನೋಟಕ್ಕೆ ಕಂಡುಕೊಳ್ಳಬಹುದು.ಈ ಮೇಳದ ಮುಖ್ಯ ಇನ್ನೊದು ಆಕರ್ಷಣೆ ಇದರ ವೇಷ ಭೂಷಣಗಳು ನಿತ್ಯ ಹೊಸದರಂತೆ ಕಂಗೊಳಿಸುತ್ತವೆ.ಹೀಗೆ ಕೆಲವೆಲ್ಲ ಗುಣಗಳಿಂದ ಒಟ್ಟಂದದಲ್ಲಿ ಆಟ ಒಳ್ಳೆದಾಗಿದೆ ಅಂತ ಹೇಳುವಲ್ಲಿ ತಪ್ಪಿಲ್ಲ.
ಅದರ ನಂತರ ಮೊನ್ನೆ ಅಂದರೆ ಮೇ ೨ ನೇ ದಿನಾಂಕದಂದು ದಾಸರಹಳ್ಳಿ ಪ್ರತಿಷ್ಟಾನದವರ ಆಟ ನೋಡುವ ಉತ್ಸಾಹದಿಂದಲೇ ಹೋಗಿದ್ದೆ. ನಿತ್ಯವೂ ಯಕ್ಷಗಾನವನ್ನು ಆಲಿಸುವ ಆದಷ್ಟು ಅದರಲ್ಲೇ ಆನಂದವನ್ನು ಕಾಣುತಿದ್ದ ನನಗೆ ಒಂದೆರಡು ದಿನ ಚಿಪ್ಪಾರು ನಿಧನದಿಂದ ಆ ಯಕ್ಷಗಾನವನ್ನು ಸವಿಯುವ ಮನಸ್ಸಾಗಲಿಲ್ಲ. ನಿತ್ಯವೂ ಒಂದಲ್ಲ ಒಂದು ಯಕ್ಷಗಾನ ಕೇಳುವ ನನಗೆ ಚೆಂಡೆ ಮದ್ದಲೆ ಸ್ವರ ಕೇಳಿದಾಗ ಚಿಪ್ಪಾರು ಮುಖ ಎದುರುಬಂದು ನಿಂತು ಬಿಡುತ್ತಿತ್ತು. ಹಾಗಾಗಿ ಈ ಗುಂಗಿನಿಂದ ಹೊರಬರಲು ಒಂದು ಸಮಯ ಅಂತ ಭಾವಿಸಿಯೇ ಉತ್ಸಾಹದಿಂದಲೇ ಯಕ್ಷ ಸಪ್ತಮಿ ಪರ್ವಕ್ಕೆ ಹೋಗಿದ್ದೆ. ದಾಸರ ಹಳ್ಳಿಯ ಯಕ್ಷಗಾನ ವಾತಾವರಣ ಪ್ರತಿಸಲದಂತೆ ಇಸಲವೂ ಕಂಗೊಳಿಸುತ್ತಿತ್ತು. ಅಧಿಕವಾಗಿ ಕರಾವಳಿ ಪ್ರದೇಶದವರೇ ಇರುವ

ಈ ತಾಣ , ಬೆಂಗಳೂರಿನ ನನಿಗೆ ಸ್ವಲ್ಪ ದೂರದ ತಾಣ, ಸಡಗರದಿಂದ ಯಕ್ಶೋತ್ಸವವನ್ನು ಆಚರಿಸುತ್ತಿತ್ತು.ಇಲ್ಲಿನ ಯಕ್ಷಗಾನೀಯ ವಾತವರಣ ಪ್ರತಿಸಲದಂತೆ ಈ ಸಲವೂ ಮನಸ್ಸಿಗೆ ಖುಷಿಯನ್ನು ಕೊಟ್ಟಿತು. ನಮ್ಮೂರಿನ ದೆರೆ ಮೇಳದ ವ್ಯವಸ್ಥೆಯನ್ನು ನೆನಪಿಸುವಂತಹ ವ್ಯವಸ್ಥೆ. ಬೆಂಗಳೂರಿನಲ್ಲಿ ಅಪಾರೂಪ ಎನ್ನಬಹುದಾದ ವಾತಾವರಣ. ಮೇಳದ ಅಧಿಕೃತ ವೇದಿಕೆಯಲ್ಲಿ ಆಟ ನಡೆದರೆ ಅದು ಒಂದು ಸೊಗಸು. ಮುಖ್ಯವಾಗಿ ಕೆಲವೊಮ್ಮೆ ಭಾಗವತರಿಗೆ ಜಾಗವಿಲ್ಲದಂತ ವೇದಿಕೆಯನ್ನು ಬೆಂಗಳೂರಲ್ಲಿ ನೋಡಬಹುದು. ಹಾಗಿರುವಾಗ ಮೇಳದ ಸುಸಜ್ಜಿತ ರಂಗಸ್ಥಳದಲ್ಲಿ ಆಟ ನೋಡುವುದು ಒಂದು ಹಿತವಾದ ಅನುಭವ.ತೆಂಕು ತಿಟ್ಟು ಪ್ರತಿಷ್ಠಾನದವರು ಪ್ರತಿ ಸಲದಂತೆ ಅತ್ಯುತ್ತಮ ವ್ಯವಸ್ಥೆಯನ್ನೇ ಮಾಡಿದ್ದರು. ಧೂಮ ಪಾನ, ಗುಟ್ಕ ಮತ್ತು ಚಪ್ಪಲಿಗೆ ಒಳಗೆ ಪ್ರವೇಶವೇ ಇಲ್ಲ. ಇದೊಂದು ಪರಿಸರವನ್ನು ಗೌರವ ಪೂರ್ಣವಾಗಿ ನೋಡುವಂತೆ ಮಾಡುತ್ತದೆ. ಡೇರೆಯ ಒಳ ಹೊಕ್ಕರೆ ಕತ್ತಲಿನಲ್ಲಿ ಜಗಮಗಿಸುವ ಬೆಳಕಿನ ರಂಗಸ್ಥಳ ನಿಜಕ್ಕೂ ಒಂದು ಉತ್ತಮ ಅನುಭವ.

ನಾನು ಹೋದಾಗ ಸ್ವಲ್ಪ ಆಟದ ಭಾಗ ಮುಗಿದಿತ್ತು.. ಸ್ವಯಂ ಪ್ರಭಾ ಪರಿಣಯ ಮತ್ತು ರಕ್ತ ರಾತ್ರಿ ಪ್ರಸಂಗ. ಯುವಭಾಗವತ ಪ್ರಪುಲ್ಲ ಕುಮಾರ ಅವರ ಭಾಗವತಿಕೆ, ಪದ್ಯಾಣ ಅವರನ್ನೇ ಅನುಕರಿಸಿ ಹಾಡಿದಂತೆ ಇತ್ತು. ಕುಳಿತ ಹಾಡುವ ಭಂಗಿ ಎಲ್ಲವನ್ನು ಅನುಕರಿಸಿದಂತೆ ಭಾಸವಾಯಿತು. ಕೆಲವು ಸಮಯದ ಮೊದಲು ADA ರಂಗಮಂದಿರದ ಸೇವೆ ಆಟದಭಾಗವತಿಕೆಗೂ ಇದಕ್ಕೂ ತುಂಬಾ ವೆತ್ಯಾಸ ಕಂಡಿತು. ಬಹುಶ ಅನುಕರಣೆಯ ಪ್ರಭಾವವೋ ಏನೋ.ನನ್ನ ಪ್ರಾಮಾಣಿಕ ಅನಿಸಿಕೆ ಅಷ್ಟೇ.

ಒಟ್ಟು ಮೊದಲಿನ ಪ್ರಸಂಗ ನೋಡಿದಾಗ ಹಾಸ್ಯಕ್ಕೆ ತುಂಬಾ ಪ್ರಾಧಾನ್ಯತೆ ಕೊಟ್ಟಂತೆ ಅನಿಸಿತು. ಪ್ರತಿ ಕಲಾವಿದನು ಹಾಸ್ಯದ ತುಣುಕು ಉದುರಿಸುವವರೇ. ಬಣ್ಣದ ವೇಷದ ಅಸುರ ಪಾತ್ರಧಾರಿಯ ಮಾತುಕೂಡ ಹಾಸ್ಯಗರನಂತೆ ಇತ್ತು. ಇನ್ನು ಗಂಭೀರವಾದ ನಾರದನ ಪಾತ್ರ ಕೂಡ ಹಾಸ್ಯದಿಂದಲೇ ಕೂಡಿತ್ತು. ಒಟ್ಟು ಸನ್ನಿವೇಶಕ್ಕೆ ಇದು ಹೊಂದಾಣಿಕೆ ಆಗುತ್ತದೋ ಇಲ್ಲವೊ ನಾನು ಹೇಳಲಾರೆ. ಆದರೆ ಜನರಂಜನೆ ಆದದ್ದು ಮಾತ್ರ ಸತ್ಯ.ಮೊದಲಿನ ಸ್ವಯಂ ಪ್ರಭೆ ಲವ ಲವಿಕೆಯಿಂದ ಕೂಡಿತ್ತು. ಶೂರ ಸಾಹಸದಿಂದ ಕೂಡಿದ ಈ ಪಾತ್ರ ಅಂಬ ಪ್ರಸಾದ ಪಾತಾಳ ಮೊದಲಾರ್ಧದಲ್ಲಿ ಚೆನ್ನಾಗಿ ನಿರ್ವಹಿಸಿದ್ದರೂ ತಮ್ಮ ದೇಹ ಪ್ರಕೃತಿಯಿಂದ ದಿಗಿಣವನ್ನು ಅಲ್ಲಿಂದ ಅಲ್ಲಿಗೆ ಸುಧಾರಿಸಿಕೊಂಡರೆ., ನಂತರ ದ ಆ ಪಾತ್ರ ಮಾಡಿದ ಯಲಗುಪ್ಪ ತೀರ ವೈಫಲ್ಯವನ್ನು ಕಂಡರು. ಥಳುಕು ಬಳುಕು ಈ ಪಾತ್ರಕ್ಕೆ ಒಗ್ಗದೆಯೋ ಅಥವಾ ತೆಂಕು ತಿಟ್ಟಿನ ಶೈಲಿಯ ಕುಣಿತ ಇರದೇ ಆ ಕಡೆ ಬಡಗು ಕೂಡ ಆಗದೆ ತೀರ ಪೇಲವ ವಾಯಿತು. ಜೋಗಿಯವರ ಪಾತ್ರ ಮಾತ್ರ ಎಂದಿನಂತೆ ಇತ್ತು. ತಮ್ಮ ಕಂಠ ಹಾಗು ಅಚ್ಚು ಕಟ್ಟಿನ ವೇಷಗಾರಿಕೆ ಮತ್ತು ಗಾಂಭೀರ್ಯದಿಂದ ಮೆರೆಯುತ್ತಿದ್ದ ಜೋಗಿಯವರು ಆದಿನ ಅವರ ವೇಷಗಾರಿಕೆಯಲ್ಲಿ ಮೊದಲಿನ ಅಚ್ಚುಕಟ್ಟು ಇರಲಿಲ್ಲ. ಅದರೂ ಒಟ್ಟಿನಲ್ಲಿ ಎಂದಿನಂತೆ ತಮ್ಮ ಪಾತ್ರವನ್ನು ಉತ್ತಮವಾಗಿ ಪ್ರಸ್ತುತ ಪಡಿಸಿದ್ದಾರೆ.
ಎಲ್ಲಕ್ಕಿಂತ ನಾನು ಈ ಮೇಳದಲ್ಲಿ ಎದುರು ನೋಡುವುದು ಶೀನಪ್ಪ ರೈ ವೇಷವನ್ನು. ಎಂದಿಗೂ ಪ್ರೇಕ್ಷಕನನ್ನು ವಂಚಿಸದ ಇವರ ಲಯಬದ್ದ ಪಾತ್ರ ಪೋಷಣೆ ಮೇಳದ ದೊಡ್ಡ ಆಸ್ತಿ ಎಂದೇ ನನ್ನ ಭಾವನೆ. ತುಂಬಾ ಸೌಮ್ಯ ಸ್ವಭಾವದ ಕಲಾವಿದ ರಕ್ಕಸನಾಗಿ ಮೊನ್ನೆ ತಮ್ಮ ಸಹಜ ಕುಣಿತದಿಂದ ನನ್ನ ಮನಸ್ಸಿಗೆ ಮುದನೀಡಿದರು. ಒಂದೇ ಒಂದು ಬೇಸರದ ವಿಚಾರವೆಂದರೆ ಇವರನ್ನು ನನಗೆ ರಂಗದಲ್ಲಿ ನೋಡುವಂತೆ ಆದದ್ದು ಆದಿನ ಕೇವಲ ೯ ನಿಮಿಷ. ಅಷ್ಟರಲ್ಲಿ ಅವರ ಪಾತ್ರ ಕೊನೆಗೊಂಡಿತ್ತು. ಇದು ತುಂಬಾ ನಿರಾಶೆಯ ವಿಚಾರ. ಬಹುಶಃ ಪ್ರಾಯದ ತೊಂದರೆಯೋ ಆರೋಗ್ಯದ ತೊಂದರೆಯೋ ಅಂತು ಅವರ ಅಳಕ್ಕೆ ರಾಮ ರೈ ಯಿಂದ ನಂತರ ರಾಜವೇಶಕ್ಕೆ ಹೆಸರುವಾಸಿಯಾದ ಮತ್ತು ತನ್ನದೇ ಛಾಪನ್ನು ಮೂಡಿಸಿದ ಒಬ್ಬ ಸಮರ್ಥ ಕಲಾವಿದ ರಂಗದಿಂದ ಕೇವಲ ಬೆರಳೆಣಿಕೆ ನಿಮಿಷದಲ್ಲಿ ನಿರ್ಗಮಿಸುವುದು ಮತ್ತು ಅಂತ ಪಾತ್ರಗಳನ್ನು ನಿರ್ವಹಿಸುವುದು ನನ್ನಂಥ ಅಭಿಮಾನಿಗೆ ಕಸಿವಿಸಿಯಾಗುತ್ತದೆ. ಅದರೂ ಅಂದು ಮಿಂಚಿನಂತೆ ಬೆಳಗಿದರು ಶೀನಪ್ಪರೈಗಳು.
ಇನ್ನು ಎರಡನೇ ಪ್ರಸಂಗ ರಕ್ತ ರಾತ್ರಿ.ಮೊದಲೇ ಅರ್ಭಟೆಯ ಹಿಮ್ಮೇಳ ಇನ್ನೂ ಮೊಳಗುವ ಲಕ್ಷಣ. ಅಬ್ಬರದ ಚೆಂಡೆ ಇನ್ನೂ ಅಬ್ಬರಿಸುವ ಸನ್ನಾಹದಲ್ಲಿತ್ತು !!!. ಅಶ್ವತ್ಥಾಮನ ಪ್ರವೇಶದ ಪದ ಹೇಳುವಾಗ ಪ್ರವೇಶದ ಮೊದಲೇ ಕೆಲವರು ಕೇಕೆ ಚಪ್ಪಾಳೆ ಶಿಳ್ಳೆಯಿಂದ
.jpg)
ಸ್ವಾಗತಿಸಿದರು!. ಇದು ಅತಿರೇಕ ಎಂದು ಕಂಡಿತು. ಅದರೂ ಇಂತಹ BLIND ಅಭಿಮಾನಿಗಳನ್ನು ಗಳಿಸುವುದು ಒಂದು ಸಾಧನೆಯೇ ಸರಿ . ರುದ್ರ ಗಂಭೀರವಾಗಿ ಪರಮೇಶ್ವರನ ಅಪರಾವತಾರ ಎಂದು ಕರೆಸುಕೊಳ್ಳುವ ಅಶ್ವತ್ಥಾಮ ಇಲ್ಲಿ ನಗುತ್ತ ಪ್ರತ್ಯಕ್ಷ. ಆ ಕುಣಿತ ಆ ಪಾತ್ರ ಪೋಷಣೆಗೆ ಆ ಪಾತ್ರ ಮಾನಸಿಕ ಸ್ವಭಾವಕ್ಕೆ ಎಷ್ಟು ಹೊಂದಿಕೊಳ್ಳುವುದೋ ದೇವರೇ ಬಲ್ಲ. ಹಾಗಾಗಿ ಮುಂದಿನ ಕಥಾನಕ ನೋಡುವ ವ್ಯವಧಾನ ನನ್ನಲ್ಲಿ ಇರಲಿಲ್ಲ. ಮರುದಿನದ ಕೆಲಸದ ಹೊರೆ ಆವಾಗ ನೆನಪಿಗೆ ಬಂತು ಈ ವರ್ಷದ ನನ್ನ ಯಕ್ಷಗಾನ ತಿರುಗಾಟ ಮುಗಿಸಿದೆ ಅಂತ ಭಾವಿಸಿದ್ದೇನೆ.
ಈ ಸಲ ಎಡನೀರ್ ಮೇಳದ ಆಟವನ್ನು ನೋಡಬೇಕೆಂದು ಬಹಳ ಆಸೆಯಿಂದ ತೆರಳಿದಾಗ ಬಲ್ಲಾಳರ ನಿಧನದ ಆಘಾತಕಾರಿ ವಿಚಾರ ತಿಳಿದು ಬಂತು. ಹಾಗಾಗಿ ಈ ಸಲದ ಪ್ರದರ್ಶನ ನೋಡಲು ಸಾಧ್ಯವಾಗದೆ ಹೋಯಿತು. ಹಾಗಿದ್ದರೂ ನನ್ನ ಮಿತ್ರರೆಲ್ಲರ ಅಭಿಮತದಂತೆ ಎಡನೀರ್ ಮೇಳ ಉತ್ತಮ ಪ್ರದರ್ಶನ ನೀಡಿದೆ ಎಂದು ತಿಳಿಯಿತು.
ReplyDeleteಇನ್ನು ನಿರೀಕ್ಷೆ ಇಡದೆ ಹೋದ ಹೊಸನಗರ ಮೇಳದ ಶ್ರೀನಿವಾಸ ಕಲ್ಯಾಣ ಪ್ರಸಂಗ ನೋಡಿ ಮತ್ತಷ್ಟು ನಿರಾಸೆಯಾಯಿತು . ಉತ್ತಮ ಕಲಾವಿದರಿದ್ದರೂ ಅವರಿಗೆ ಅವಕಾಶ ನೀಡದೆ "ಸರ್ಕಸ್ " ಕಲಾವಿದರನ್ನು ಮನಬಂದಂತೆ ಕುಣಿಸಿ ಪೂರ್ತಿ ಪ್ರಸಂಗವನ್ನು ಗಬ್ಬೆಬ್ಬಿಸಿದ್ದು ಅತ್ಯಂತ ವಿಷಾದಕರ . ಅದರ ಬಗ್ಗೆ ಹೆಚ್ಚು ವಿಲಮ್ಬಿಸಬೇಕಾದ ಅಗತ್ಯವಿಲ್ಲವೆಂದೆ ಭಾವನೆ.
ಒಟ್ಟಿನಲ್ಲಿ ಬೆಂಗಳೂರಿನ ಹಾಗೂ ಸುತ್ತಮುತ್ತಲ ಆಟಗಳು ಕೊನೆಯದರೂ ನಿಡ್ಲೆ ಸೆಟ್ ನಿರೀಕ್ಷೆಯಲ್ಲಿ ನಾವಿರಬಹುದಲ್ಲ ?
This comment has been removed by the author.
ReplyDeleteಇಲ್ಲಿ ಬರೆದಿರ ತಕ್ಕಂತ ಎಲ್ಲ ವಿಚಾರಗಳು ಕೇವಲ ನನ್ನ ಒಬ್ಬನ ಅನಿಸಿಕೆ ಮಾತ್ರ. ನನ್ನ ಮನಸ್ಸಿನಲ್ಲಿ ಉದ್ಭವಿಸಿದ
ReplyDeleteಅನಿಸಿಕೆಗಳನ್ನಷ್ಟೇ ನಾನು ಉಲ್ಲೇಖಿಸಿದ್ದೇನೆ.ನನ್ನ ಮನಸ್ಸಿನ ಅನಿಸಿಕೆಗಳು ಅದು ನನ್ನ ಮಟ್ಟಿಗೆ ಪ್ರಾಮಾಣಿಕ ಅನಿಸಿಕೆಗಳು.
i saw one show by Hosanagara mela. It was not good as the same team performed last year. day by day its quality is coming down. i felt they gave more importance to Jokers than the other characters. The one performs Banna ( mostly Mr.Sadashiv) is less utilized in the team.
ReplyDeleteany how i wish best of luck to that team.