"ಇದು ವಿಮರ್ಶೆಯಲ್ಲದ ಚಿಂತನ"

Friday, July 16, 2010

ದೊಂದಿ ಬೆಳಕಿನ ಯಕ್ಷಗಾನ...ಹೀಗೊಂದು ಚಿಂತನ



ಯಕ್ಷಗಾನ ಅತೀ ಪುರಾತನ ಕಲೆ. ಹಲವು ನೂರು ವರ್ಷಗಳ ಇತಿಹಾಸ ಈ ಸುಂದರಗೆ ಕಲೆಗೆ ಇದೆ.ಈಗಿನ ಈ ಅಧುನಿಕ ಯುಗಕ್ಕೂ ಇದು ಹಲವು ರೀತಿಯಲ್ಲಿ ಹೊಂದಿಕೊಳ್ಳುತ್ತ ತನ್ನ ಅಂತರ್ಗತ ಸತ್ವಗಳಿಂದ ಸೆಳೆತವನ್ನು ಉಳಿಸಿಕೊಳ್ಳುತ್ತಾ ಈ ವರೆಗು ಹಲವು ಬಗೆಯಲ್ಲಿ ಬದಲಾವಣೆ ಕಂಡರೂ ಇಂದಿಗೂ ಹಲವು ವಿಧದಲ್ಲಿ ಮೂಲ ಸತ್ವವನ್ನು ಉಳಿಸುತ್ತಾ ಬಂದಿದೆ. ಅತೀ ಪುರಾತನ ಕಲೆ, ಹಲವು ಬದಲಾವಣೆ ಆವಿಷ್ಕಾರಗಳಿಗೆ ಒಳಗಾದರೂ ಇಂದಿಗೂ ಅದೇ ಪ್ರಾಚೀನ ಪರಂಪರೆಯ ತಳಹದಿಯನ್ನೆ ಮುಖ್ಯವಾಗಿರಿಸಿಕೊಂಡು ಹಲವು ಬದಲಾವಣೆಯ ದಿಕ್ಕಿನಲ್ಲಿ ಸಾಗುತ್ತ ಬಂದಿದೆ. ಹಲವು ಬಗೆಯ ಸಾಧನೆಗೆ ಗುರಿಯಾಗಿ ಬದಲಾವಣೆಯನ್ನು ಕಂಡರೂ ಇನ್ನು ಹಳೆಯಕಾಲದ ಸೊಗಡನ್ನು ತೊರುವ ಪ್ರಯತ್ನಕ್ಕೆ ಮತ್ತು ಆ ದಿನಗಳನ್ನು ಮರೆಯದಂತೆ ಮಾಡುವ ಯತ್ನಕ್ಕೆ ಸಾಕ್ಷಿಯಾಗುತ್ತ ಬಂದಿದೆ. ಈ ನಿಟ್ಟಿನಲ್ಲಿ ಉತ್ತಮ ಪ್ರಯುತ್ನ ಫಲರೂಪವಾದ ಯಕ್ಷಗಾನ ದಾಖಲೀಕರಣದ ಚಿತ್ರಣ ಕಾಣುವ ಯೋಗ ನನಗಾಯಿತು.

ಯಕ್ಷಗಾನದ ಎರಡು ಮುಖ್ಯ ಪ್ರಾಕಾರಗಳ ಹಳೆಯ ಕಾಲದ ಪ್ರದರ್ಶನ ಹೇಗಿರಬಹುದೆಂಬ ಪ್ರಶ್ನೆಗೆ ತಕ್ಕಮಟ್ಟಿಗೆ ಉತ್ತರವಾಗುವಂತೆ ಅದರ ದಾಖಲೀಕರಣದ ಪ್ರಯತ್ನಕ್ಕೆ ಯತ್ನಿಸಿ ಎರಡು ಪೂರ್ಣ ಯಕ್ಷಗಾನ ಬಯಲಾಟವನ್ನು ಸಂಪೂರ್ಣ ದೊಂದಿ ಬೆಳಕಿನ ಪ್ರಭೆಯಲ್ಲೇ ಚಿತ್ರಿಸುವ ಸಾಹಸಕ್ಕೆಶ್ರೀ ಅಶೋಕ ವರ್ಧನ ಹಾಗು ಬಳಗದವರು   ಕೈ ಹಾಕಿದರು. ಅಧುನಿಕ ನಗರದ ವಾತಾವರಣದಿಂದ ದೂರವಾಗಿ ತುಂಬ ಸರಳ ಹಾಗು ಅರ್ಥಪೂರ್ಣವಾಗಿ ನಡೆಸಿ ಅದನ್ನು ಅದೆ ಮೂಲ ರೂಪಕ್ಕೆ ಧಕ್ಕೆಯಾಗದ ಹಾಗೆ ದಾಖಲಿಸುವ ಕೆಲಸ ನಡೆಯಿತು. ಇದರ ಹಿಂದಿನ ಶ್ರಮ, ಕಾಳಜಿ ಮತ್ತು ಶ್ರದ್ದೆ ಗಮನಾರ್ಹ. ಊರಿಂದ ದೂರ ಹೋಗಿ ಕಾಡಿನ ಮದ್ಯೆ ಪುರಾತನ ಕಾಲಮಾನದ ಮಬ್ಬು ಬೆಳಕಿನಲ್ಲಿ ದೊಂದಿಬೆಳಕಿನ ಯಕ್ಷಗಾನದ ದಾಖಲಿಕರಣ ನಡೆಯಿತು. ಯಕ್ಷಗಾನದಂತಹ ಪುರಾತನ ಕಲೆಗೆ ಇಂತಹ ಒಂದು ದಾಖಲೀಕರಣ ತುಂಬ ಆವಶ್ಯಕ. ಅದೂ ಇಂದಿನ ಅಧುನಿಕ ಕಾಲಮಾನಕ್ಕೆ ತೀರ ಆವಶ್ಯಕ.

ದಾಖಲೀಕರಣದ ಸುದ್ದಿ ಕೇಳಿಯೇ ನಾವು ಮಿತ್ರರೆಲ್ಲ ಅದೆಂದು ಕೈಸೇರುವುದೋ ಎಂಬ ತವಕದಲ್ಲಿ ಇದ್ದೆವು. ಮೊನ್ನೆಯೊಂದು ದಿನ ಅತ್ರಿಯವರ ಬ್ಲಾಗ್ ಪುಟದಲ್ಲಿ ಯಕ್ಷಗಾನ ವೀಡಿಯೋ ಲಭ್ಯತೆಯ ವಿವರ ದಾಖಲಾದದಿನವೇ ತರಿಸುವಲ್ಲಿ ಉದ್ಯುಕ್ತನಾದೆ. ಹಾಗೆ ತರಿಸುವಾಗ ಬಡಗು ಯಕ್ಷಗಾನ ರೂಪದಲ್ಲಿ ಬಂದ ವೀಡಿಯೊ ಪ್ರಸಂಗ ಹಿಡಿಂಬಾವಿವಾಹ ಅಥವಾ ಅರಗಿನ ಮನೆ ಯಕ್ಷಗಾನ ಮೊದಲಾಗಿ ಕೈ ಸೇರಿದರೆ ನಂತರ ತೆಂಕು ಯಕ್ಷಗಾನ ಕುಂಭಕರ್ಣ ಕಾಳಗ ಕೈಸೇರಿತು. ಆಸಕ್ತಿಯಿಂದ ನೋಡಿ ಅನುಭವಗಳನ್ನು ಯಥಾವತ್ತಾಗಿ ಹಂಚಿಕೊಳ್ಳುವ ಯತ್ನವಿದು.

ಮೂರು ಘಂಟೆ ಅವಧಿಯ ಪ್ರತಿಯೊಂದು ಯಕ್ಷಗಾನದಲ್ಲಿ ಪ್ರಥಮಾರ್ಧದಲ್ಲಿ ತೆಂಕುತಿಟ್ಟಿನ ಕೇಳಿಕೆ ಅದರ ಜತೆ ಮಹನೀಯರ ಅಭಿಪ್ರಾಯಗಳ ವಿನಿಮಯದ ಚಿತ್ರಣ. ರಂಗಸ್ಥಳದ ನಿರ್ಮಾಣದ ಪ್ರತಿಹಂತದ ಚಿತ್ರಣ . ತುಂಬ ಸರಳವಾದ ರಂಗಸ್ಥಳವಾದರೂ ಕಾಡಿನ ನಡುವೆ ಎಲ್ಲವು ಸಜ್ಜುಗೊಳಿಸುವುದು ಸುಲಭದ ಕಾರ್ಯವಲ್ಲ. ಚೌಕಿ ಪೂಜೆಯೊಂದಿಗೆ ಆರಂಭಗೊಳ್ಳುವ ಯಕ್ಷಗಾನ ಬಡಗು ಹಿಡಿಂಬಾವಿವಾಹ.. ದೊಂದಿ ಬೆಳಕಿನಲ್ಲಿ ಪ್ರದರ್ಶಿಸುವುದಕ್ಕೆ ಅರ್ಹ ಪ್ರಸಂಗ. ಪೂರ್ವರಂಗದೊಂದಿಗೆ ಸಂಪ್ರದಾಯದಂತೆ ಶುರುವಾಗುವ ಯಕ್ಷಗಾನ ಹಿಡಿಂಬ ವಿವಾಹ ಸದ್ಯ ನಾನು ಕಂಡ ಬಡಗು ಯಕ್ಷಗಾನಕ್ಕಿಂತ ತುಂಬ ಭಿನ್ನ ಅನುಭವ ನೀಡಿತು. ಯಕ್ಷಗಾನ ವೀಡೀಯೋ ನಿರ್ಮಿಸುವುದರಲ್ಲಿ ಬಡಗು ಸ್ವಲ್ಪ ಮುಂದು ಅಂತಲೇ ಹೇಳಬಹುದೇನೋ. ಅತೀಯಾಗಿ ವಿಡಿಯೊಗಳು ಬರುವುದರಿಂದಲೋ ಏನೊ ಹವ್ಯಾಸಿ ಕಲಾವಿದರಾದರು ಬೇಗ ಹೊಂದಿಕೊಂಡಂತೆ ಭ್ಹಾಸವಾಗುತ್ತದೆ. ಪಾಂಡವರ ಒಡ್ಡೋಲಗ   ಮಂದ ಬೆಳಕಿನಲ್ಲಿ ಸುಂದರವಾಗಿದೆ. ಅಂತೆಯೇ ಹಿಡಿಂಬಾಸುರ... ಹಿಡಿಂಬೆ ಹೀಗೇ ಇತ್ತೀಚೆಗೆ ಅಪರೂಪವಾದ ಬಡಗಿನ ಬಣ್ಣದ ವೇಷಗಳು ಸಾಂಪ್ರದಾಯಿಕವಾಗಿ ಮೂಡಿದೆ. ಎಲ್ಲ ಪಾತ್ರಗಳು ಮಿತಿಯೊಳಗೆ ಔಚಿತ್ಯ ಪೂರ್ಣವಾಗಿ ಮೂಡಿಬಂದಿದೆ. ಭೀಮನ ಪಾತ್ರ ತುಂಬ ಭಾವುಕ ಅಭಿನಯಕ್ಕೆ ಒತ್ತುಕೊಟ್ಟಂತೆ ಅನಿಸಿಬಿಡುತ್ತದೆ. ಶ್ರವ್ಯವೆನಿಸುವ ಹಿಮ್ಮೇಳ ತುಂಬ ಉತ್ತಮವಾಗಿದ್ದರೂ ಇಳಿ ಶ್ರುತಿಯಿಂದ ಕೆಲವೊಮ್ಮೆ ಮಕ್ಕಳ ಶಾಲೆ ವಾರ್ಷಿಕೋತ್ಸವವನ್ನು ನೆನಪಿಗೆ ತರುತ್ತದೆ. ಹೆಚ್ಚಿನ ಎಲ್ಲಾ ದೃಶ್ಶಗಳಿಗೆ ಬರೀ ಅಲಾಪನೆಯನ್ನೇ ಹೋರಡಿಸುವುದು ಕೆಲವೊಮ್ಮೆ ಹೊಂದಿಕೊಳ್ಳದಿದ್ದರೂ ಮಿಕ್ಕವುಗಳಲ್ಲಿ ಒಟ್ಟು ಸಾಂಘ್ಹಿಕ ಯತ್ನ ಗಮನ ಸೆಳೆಯುತ್ತದೆ. ಅರಗಿನ ಮನೆಯ ದಹನ ದೃಶ್ಯ ಮಂದಬೆಳಕಿನಲ್ಲಿ ಸುಂದರಾವಾಗಿ ಕಂಡರೂ ಅದು ಈ ಪರಂಪರೆಯ ದಾಖಲೀಕರಣ ಯಕ್ಷಗಾನಕ್ಕೆ ಹೊಂದಿಕೊಳ್ಳುವುದಿಲ್ಲ ಎಂದು ನನ್ನ ಅಭಿಪ್ರಾಯ. ರಂಗಸ್ಥಳದಿಂದ ತುಸುದೂರದಲ್ಲಿ ಒಣ ಹುಲ್ಲಿನಿಂದ ಮನೆಯಂತೆ  ನಿರ್ಮಿಸಿ, ಅದಕ್ಕೆ ಬೆಂಕಿ ಕೊಟ್ಟು ಮಿರು ಮಿರುಗುವ ಯಕ್ಷಗಾನದ ವೇಷಗಳೂ ಅದರ ನಡುವೆ ಓಡಾಡುವುದು ಇಂತಹ ಯಕ್ಷಗಾನದಲ್ಲ ಆಭಾಸದಂತೆ ಕಾಣುವುದಿಲ್ಲವೇ ಎಂಬ ಚೋದ್ಯ ನನಗೆ. ಬದಲಾಗಿ ಅದನ್ನೇ ಭಾವಾಭಿನಯದಿಂದ ರಂಗದ ಮೇಲೆಯೆ ಅಭಿವ್ಯಕ್ತೀಕರಿಸುತ್ತಿದ್ದರೆ ತುಂಬ ಉತ್ತಮವಾಗುತ್ತಿತ್ತೋ ಏನೋ? ಇದನ್ನು ಯಾಕೆ ಸಂಯೋಜಿಸಿದರೋ ತಿಳಿಯದು. ರಂಗ ಬಿಟ್ಟ ಯಕ್ಷಗಾನ ಸಂಪ್ರದಾಯದೊಳಗೆ ಇದೆಯೋ ತಿಳಿಯದು. ಅಲ್ಲದೆ ಶುದ್ದವಾದ
.ಕಲಾತ್ಮಕ ಯಕ್ಷಗಾನದಲ್ಲಿ ಇಂತಹ ದೃಶ್ಯವೈಭವ ಚಿತ್ರೀಕರಿಸುವ ಅಗತ್ಯವಾದರೂ ಏನು?

ಕೆಲವು ಕಡೆ ಪದ (ಹಾಡುಗಾರಿಕೆ) ಪುನರಾವರ್ತನೆ..ಒಂದು ರೀತಿಯ ಚಾಲು ಕುಣಿತ ಗಮನಕ್ಕೆ ಬಾರದಂತೆ ನುಸುಳುವ ಪ್ರಯತ್ನ ಮಾಡುತ್ತದೆ ಅಂತ ನನ್ನ ಅನುಮಾನ. ಹೇಳಿದ ಪದ ಸಾಲುಗಳನ್ನು ಭಾಗವತರು ಎರಡಕ್ಕಿಂತ ಹಲವು ಸಲ ಹೇಳುವಾಗ ಹಳೆಯ ಪರಂಪರೆಯಲ್ಲಿ ಹೀಗಿತ್ತೆ? ಎಂಬ ಪ್ರಶ್ನೆ ಮೂಡುತ್ತದೆ. ಸಾಂಪ್ರದಾಯಿಕವಾಗಿ ಸಂಭಾಷಣೆ ನಡೆಸುವ ಪಾತ್ರ ರಂಗಸ್ಠಳದ ಬಲಭಾಗದಲ್ಲಿ ಕುಣಿತ ಸಂಭಾಷಣೆ ಒಪ್ಪಿಸುವ ಕ್ರಮ ಭೀಮ ಹಿಡಿಂಬ ಸನ್ನಿವೇಶದಲ್ಲಿ ಇದನ್ನು  ಪಾಲಿಸಲೇ ಇಲ್ಲ.ಎಲ್ಲವೂ ಬರೆದಿಟ್ಟ ನಾಟಕದ ದೃಶ್ಯಗಳಂತೆ ನಿಗದಿ ಪಡಿಸಿದ ಸಂಭಾಷಣೆ ಒಪ್ಪಿಸಿದಂತೆ ಕೆಲವೊಮ್ಮೆ ಭಾಸವಾಗುತ್ತದೆ. ಆದರು ಇಂತಹ ಕಾರ್ಯಕ್ರಮಕ್ಕೆ ಇಂತಹ ಸಂಕಲನಗಳು ಅನಿವಾರ್ಯ ಎಂದು ಒಪ್ಪಿಕೊಳ್ಳಬಹುದು. ಹಿಡಿಂಬ ವಧೆಯ ತನಕ ಯಕ್ಷಗಾನದ ನಿಜ ಶೈಲಿಯಲ್ಲೇ ಮುಂದುವರೆದರೂ ಕೊನೆಯ ದೃಶ್ಯ ತೀರ ನಾಟಕದ ಸಂಭಾಷಣೆಯನ್ನು ನೆನಪಿಗೆ ತರುತ್ತದೆ. ಆದರು  ಎಲ್ಲರ ಸಾಂಘಿಕ ಯತ್ನ ಮಾತ್ರ ಗಮನ ಸೆಳೆಯದೆ ಇರುವುದಿಲ್ಲ. ಯಕ್ಷಗಾನದ ಕೊನೆಯಲ್ಲಿ ಭಾಗವತರು “ ರಾಮಕೃಷ್ಣರು ಮನೆಗೆ ಬಂದರು ಮನೆಗೆ ಬಂದರು ಬಾಗಿಲ ತೆರೆಯಿರೊ... ಎಂದು ಮಂಗಲ ಪದದೊಂದಿಗೆ ಹಾಡಿದದು ಹೀಗೆ ಪ್ರತಿಯೊಂದು ಅಂಶವನ್ನು ಗಮನವಿರಿಸಿದ್ದು ಎಲ್ಲವೂ ಉತ್ತಮದಾಖಲೀಕರಣ ಕಾರ್ಯ ಮಾಡುವ ಯತ್ನ ಶ್ಲಾಘನೀಯ.
ಇನ್ನು ತೆಂಕುತಿಟ್ಟು ವೀಡಿಯೊ ನೋಡಿದ ಇದರಬಗ್ಗೆ ಬರೆಯೋಣ ಅನ್ನಿಸಿದ್ದು. ಮೊದಲೇ ವರದಿಯಾದಂತೆ ತೆಂಕಣ ಕಲಾವಿದರ ಅಸಹಕಾರ ಪೂರ್ವ ರಂಗದಲ್ಲೆ ಅನುಭವಕ್ಕೆ ಬರುತ್ತಿತ್ತು. ಯಾವ ಭಾಗ ಎಲ್ಲಿ ಆರಂಭಿಸಬೇಕು ಮತ್ತು ಮುಗಿಸಬೇಕು ಎನ್ನುವ ಅನುಮಾನದಲ್ಲೆ ಹಾಗೋ ಹೀಗೊ ಪೂರ್ವರಂಗ ಹರಕೆ ಸಲ್ಲಿಸಲಾಗಿದೆ. ಸಂಪ್ರದಾಯದಂತೆ ಮುಖ್ಯ ಭಾಗವತರು ಪೀಠಿಕೆ ಆದ ಕೂಡಲೆ ತೊಡಗಿ ಉತ್ತಮವಾದ ಆರಂಭ ಸಿಕ್ಕರೂ. ಒಡ್ಡೋಲಗದಲ್ಲಿ ಎಲ್ಲ ಆಯೋಮಯ..ಹಿರಿಯ ಪಾತ್ರಧಾರಿ ರಾಮನ ಮುಖ ರಂಗದಲ್ಲಿ ಗೋಚರಿಸುವುದೇಇಲ್ಲ. ಇನ್ನು ರಂಗ ಕ್ರಮ ಮತ್ತು ನಡೆಗಳು ಅವುಗಳ ಬಗ್ಗೆ ನಾನು ಬರೆಯಲು ಅಸಮರ್ಥ ಆದರು ಎಲ್ಲವು ಗೊಂದಲದಿಂದ ಕೂಡಿದಂತೆ ಭಾಸವಾಗುತ್ತದೆ.ರಾಮ ಲಕ್ಷಮಣರಂತಹ ಜೀವಾಳದ ಪಾತ್ರಗಳೂ ಕೊನೆವರೆಗೊ ಕಳೆ ಕಟ್ಟುವುದಿಲ್ಲ. ಆರಂಭದಲ್ಲಿ ಹಲವು ಹಿರಿಯರು ತಮ್ಮ ಅಭಿಪ್ರಾಯ ಮಂಡಿಸುವಾಗ ಅಭಿಮಾನವಿರಿಸಿದ್ದ ಕಲಾವಿದರು ಒಂದು ವಿಧಧಲ್ಲಿ ಪೂರ್ಣ ಕಾರ್ಯಕ್ರಮದ ಬಗ್ಗೆ ಟಿಪ್ಪಣಿ ಮಾಡಿದಂತೆ ,ಭಂಡಾಯದ ಧ್ವನಿಯನ್ನು  ಬೇಕೊ ಬೇಡವೋ ಎಂಬಂತೆ ತಮ್ಮ ಮಾತಿನಲ್ಲಿ ವ್ಯಕ್ತ ಪಡಿಸಿದ್ದರು. ಇದೆಲ್ಲ ಆನಂತರದಲ್ಲಿ ಪರಿಣಾಮ ಬಿರಿತೊ ಏನೋ? ಅವರ ಮಾತು ಹೇಗೆ ಇರಲಿ ಒಂದು ತಂಡವಾಗಿ ಆಡುವಾಗ ಅಲ್ಲಿ ಪೂರ್ಣ ಕಾರ್ಯಕ್ರದ ಯಶಸ್ಸಿಗೆ ಸದಸ್ಯನಾದವ ತೊಡಗಿಕೊಳ್ಳದೆ ಇದ್ದರೆ, ಅನುಸರಿಸುವ ಕಿರಿಯ ಸದಸ್ಯರಿಗೆ ತಪ್ಪು ಸಂದೇಶ ಕೊಟ್ಟಂತೆ ಅಲ್ಲವೆ? ಇದು ಯಾವುದು ತಪ್ಪು ಯಾವುದು ಸರಿ ಎಂದು ವಿಶ್ಲೇಷಣೆಯಲ್ಲ. ಎಲ್ಲ ಅತ್ಯಂತ ಸಂಪನ್ನರು ಹೀಗೆ ವರ್ತಿಸಿದಾಗ ನಿಜಕ್ಕೂ ತುಂಬ ಬೇಸರವಾಗುತ್ತದೆ. ಹೀಗಿದ್ದ ಒಂದು ಯೋಜನೆ ಯೋಚಿಸುವುದೇ ಕಷ್ಟ , ಇದರ ಹಿನ್ನೆಲೆಯಾಗಿ ಶ್ರಮವಹಿಸಿ ದುಡಿವಾಗ ಆ ದುಡಿಮೆಗೆ ಕೇವಲ ಆರ್ಥಿಕ ಬೆಂಬಲದ ಬಯಕೆ ಮಾತ್ರವಲ್ಲ ಎಲ್ಲ ಸಂಪೂರ್ಣ ಸಹಕಾರವೂ ಬಹಳ ಅಗತ್ಯ. ಇದನ್ನು ಅವಗಣನೆ ಮಾಡಿದಲ್ಲಿ ಮೊದಲೇ ಯಾವುದೇಬೆಂಬಲ ಪ್ರೋತ್ಸಾಹ ಇಲ್ಲದ ಕಲೆಯೂ ಅವಗಣನೆಗೆ ಒಳಗಾಗುವುದಿಲ್ಲವೇ?

ಹೀಗಿದ್ದರು ಕೆಲವೊಂದು ಅಂಶಗಳು ಅತ್ಯುತ್ತಮ ಮಾದರಿಯಂತಿದೆ. ಎಲ್ಲದರಲ್ಲೂ ಸರಳತೆ, ಎಲ್ಲಿಯು ಅದ್ಧೂರಿಯ ಪ್ರದರ್ಶನ ಇಲ್ಲ. ಸರಳವಾದ ಹಳ್ಳಿಯ ಬಯಲಾಟದಂತೆ ಉತ್ತಮ ಅನುಭವ ನೀಡುತ್ತದೆ. ದೊಂದಿ ಬೆಳಕಲ್ಲಿ ತೆಂಕಿನ ಯಕ್ಷಗಾನ ಬಡಗಿನ ಯಕ್ಷಗಾನಕ್ಕಿಂತ ಉತ್ತಮವಾಗಿ ಕಂಡಿದೆ.ತೆಂಕು ತಿಟ್ಟಿನ ಭಾಗವತರು ಪರಂಪರೆಯ ರಾಗ -ತಾಳಗಳನ್ನು ಕ್ರಮಬದ್ಧವಾಗಿ ಬಳಸಿ ಪದ್ಯವನ್ನು ಕೇಳಲು ಹಿತವಾಗಿಸಿದ್ದರೆ, ಯಕ್ಷಗಾನ ರಂಗದ ಪ್ರಥಮ ಮಹಿಳಾ ಭಾಗವತರನ್ನು ಪೂರ್ವರಂಗಕ್ಕೆ ಬಳಸಿಕೊಂಡದ್ದು ಸಾರ್ವಕಾಲಿಕ ದಾಖಲೆಗೆ ಒಂದು ಹೆಮ್ಮೆಯ ವಿಷಯವೇ ಸರಿ. ಹನುಮಂತ ಒಡ್ಡೊಲಗ ಮಾತ್ರ ಅದ್ಭುತವಾಗಿ ಮೂಡಿಬಂದಿದೆ. ಯುವ ಪಾತ್ರಧಾರಿ ಅದನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ರಾವಣ , ಕುಂಭಕರ್ಣ ಬಣ್ಣದ ಪಾತ್ರಗಳೂ ಉತ್ತಮವಾಗಿ ಮೂಡಿಬಂದಿದೆ. ಇಲ್ಲಿ ಕೆಲವು ಕಡೆ ಉತ್ತಮ ಸಹಕಾರದಿಂದ ರಂಗ ಕಳೆ ಕಟ್ಟುತ್ತದೆ. ಅದರಂತೆ ತೆಂಕುವಿನ ಛಾಯಾಗ್ರಹಣ  ತುಂಬ ಸ್ಪಷ್ಟ ಗೋಚರಿಸುತ್ತದೆ. ಅಗಾಗ ಕ್ಯಾಮರವನ್ನು ಹತ್ತಿರ ಕೊಂಡೊಯ್ದು ಹತ್ತಿರದಿಂದ ದರ್ಶನ ಕೊಡುವುದು ಯಕ್ಷಗಾನದ ಮಟ್ಟಿಗೆ ಸರಿಹೊಂದುವುದಿಲ್ಲ. ಒಂದು ಸರಿಯಾದ ನೆಲೆಯಲ್ಲಿ ನೆಲೆಗೊಳಿಸಿ ಅಲ್ಲೆ ಒಂದೇ ದೂರದಿಂದ ಚಿತ್ರಿಸಿದರೆ ಪರಿಣಾಮ ಚೆನ್ನಾಗಿರಬಹುದು. ಬಣ್ಣದ ವೇಶಗಳನ್ನು ಹೀಗೆ ತೋರಿಸಿದಾಗ ದೊಂದಿ ಬೆಳಕಿನ ಪ್ರಭಾವವೇ ಇಲ್ಲದಂತಾಗುವುದು. ಚೌಕಿಯನ್ನು ನೇರ ವೇದಿಕೆ ಹಿಂಭಾಗಕ್ಕೆ ಬರುವ ಹಾಗೆ ವ್ಯವಸ್ಥೆ ಮಾಡಿದ್ದಿದ್ದರೆ ವೇಶ ಪ್ರವೇಶ ಆಗುವ ಮೊದಲು ಗೋಚರಿಸುವ ಪ್ರಮೇಯ ಬರುತ್ತಿರಲಿಲ್ಲ. ಇದು ಸ್ವಲ್ಪ ಪರಿಣಾಮಕಾರಿಯಾಗಬಹುದು.

ಇದನ್ನು ನಿರ್ಮಿಸುವಲ್ಲಿನ ನಿರ್ಮಾಪಕ ತಂಡದ ಸದಸ್ಯರ ಸಾಧನೆ ಪ್ರತಿ ಹಂತದಲ್ಲು ಕಾಣಬಹುದು. ಆ ಕಾಳಜಿಗೆ ನಾವೆಲ್ಲ ಸ್ವಲ್ಪ ಪ್ರೋತ್ಸಾಹದ ಕಾಳಜಿ ತೋರಿಸಿದಲ್ಲಿ ಇನ್ನೂ ಮುಂದಕ್ಕೆ ಇಂತಹ ಕಾರ್ಯಕ್ರಮಗಳು ಇನ್ನೂ ವ್ಯವಸ್ಥಿತವಾಗಿ ಮಾಡುವಲ್ಲಿ ಚೈತನ್ಯ ಬರುವುದು.ಆ ಚೈತನ್ಯ ಭಗವಂತನು ಅನುಗ್ರಹಿಸಲಿ ಎಂದು ಆಶಿಸೋಣ.







.

4 comments:

  1. ಪ್ರಿಯರೇ
    ದಾಖಲೀಕರಣ ಯೋಜನೆಯ ಪೂರ್ಣ ಕಲ್ಪನೆ - ಗೆಳೆಯ ಡಾ| ಮನೋಹರ ಉಪಾಧ್ಯರದ್ದು. ಮತ್ತೆ ಆರ್ಥಿಕವಾಗಿ ಅರ್ಧಕ್ಕರ್ಧ ಪಾಲುದಾರನೂ ಅವರೇ. ಪ್ರಾಯದ ಹಿರಿತನ ಮತ್ತು ವಾಚಾಳಿತನ (ಬ್ಲಾಗ್ ಬರಹ ಸೇರಿ)ನೋಡಿ ನನ್ನೊಬ್ಬನನ್ನೇ ಇಲ್ಲಿ ಹೆಸರಿಸಿದ್ದು ತುಸು ಹೆಚ್ಚಾಯ್ತು. ಏನೇ ಇರಲಿ ಒಟ್ಟಾರೆ ಕೆಲಸವನ್ನು ಮೆಚ್ಚಿ, ಎತ್ತಿ ಆಡಿದ್ದಕ್ಕೆ, ಎಲ್ಲಾ ಒಳ್ಳೆಯ ಮಾತುಗಳಿಗೆ ಕೃತಜ್ಞತೆಗಳು.

    ತೆಂಕಿನಲ್ಲಿ ಹಲವು ರಾಕ್ಷಸರು ಪ್ರೇಕ್ಷಾಂಗಣದ ಹಿಂದಿನಿಂದ ಬೆಂಕಿಯುಗುಳುತ್ತ ಅಬ್ಬರದಿಂದ ಬರುವುದು, ದುಶ್ಶಾಸನವಧೆಯಲ್ಲಿ ಭೀಮ ಸಭಿಕರ ನಡುವೆ ದುಶ್ಶಾಸನನ ಬೇಟೆಗಿಳಿಯುವುದು ಇದ್ದಂತೆ ಬಯಲಾಟದಲ್ಲಿ ‘ಅರಗಿನಮನೆ’ ರಚಿಸಿ, ಈ ದೃಶ್ಯ ವೈಭವ ಮೆರೆಸುವುದೂ ಬಡಗಿನ ರಂಗಸಂಪ್ರದಾಯದಲ್ಲಿ ಇದ್ದದ್ದೇ ಆಗಿದೆ ಎಂದು ಸಾಕ್ಷಾತ್ ಗುರು ಬನ್ನಂಜೆ ಸಂಜೀವ ಸುವರ್ಣರು ಹೇಳಿಯೇ ಈ ಪ್ರಸಂಗವನ್ನು ಆಯ್ದುಕೊಂಡರು. ಈ ಕುರಿತು ಹೆಚ್ಚಿನ ಮಾಹಿತಿ, ಸ್ಪಷ್ಟೀಕರಣಕ್ಕೆ ನಾನು ಶಕ್ತನಲ್ಲ. ಶಕ್ತರಲ್ಲಿ ಎಷ್ಟು ಜನಕ್ಕೆ ಈ ಬ್ಲಾಗ್ ಮಾಧ್ಯಮ ಎಟುಕುತ್ತದೆ ಎಂದೂ ನಾನು ಹೇಳಲಾರೆ. ಹಾಗಾಗಿ ದಯವಿಟ್ಟು ಈ ಲೇಖನದ ಒಂದು ಮುದ್ರಿತಪ್ರತಿ ತೆಗೆದು ಬನ್ನಂಜೆಯವರಿಗೆ ಕಳಿಸಿದರೆ, ವಿಷಯದ ಮೇಲೆ ಹೆಚ್ಚಿನ ಬೆಳಕು ಚೆಲ್ಲಲು ಅವಕಾಶವಾದೀತು ಎಂದು ನನ್ನ ನಮ್ರ ಅನಿಸಿಕೆ.
    ಅಶೋಕವರ್ಧನ

    ReplyDelete
  2. 1)Ashokavardhana's comments are correct.1)I have seen the live show & the CD.Both were good because of the dim light mainly of generator.If it had been only "dondi belaku",the effect perhaps would not have been so attractive to the eyes.We might have needed different orientation--ML SAAMAGA

    ReplyDelete
  3. ಮಾನ್ಯರೇ,

    ಈ ಎರಡೂ ದಾಖಲೀಕರಣದ ತಾಂತ್ರಿಕ ಅಂಶಗಳನ್ನು ನಾನು ನೋಡಿಕೊಂಡಿರುವೆ. ತಮ್ಮ ಅಭಿಪ್ರಾಯಗಳಿಗೆ, ಸಲಹೆಗಳಿಗೆ ಧನ್ಯವಾದಗಳು. ಇನ್ನು ಯಕ್ಷಗಾನದ ದಾಖಲೀಕರಣದಲ್ಲಿ, ಸಾಧಾರಣವಾಗಿ ಮೂರು ಕ್ಯಾಮರಾ ಬಳಸುತ್ತಾರೆ. ಅದರ ತಪ್ಪು-ಒಪ್ಪುಗಳ ಬಗ್ಗೆ ಸಾಕಷ್ಟು ಯೋಚಿಸಿದಾಗ, ಈ ಎರಡು ಕ್ಯಾಮರಾ ಪ್ರಯೋಗದ ನಿರ್ಧಾರಕ್ಕೆ ಬಂದೆ ನಾನು. ನೀವು ಹೇಳಿರುವ ವಿಷಯ ನಿಜವಾದದ್ದೇ. ಈ ತೊಂದರೆಯನ್ನು ಆದಷ್ಟು ಕಡಿಮೆ ಮಾಡಲಿಕ್ಕಾಗಿ, ಎರಡೂ ಕ್ಯಾಮರಾಗಳನ್ನೂ ಒಂದರ ಪಕ್ಕದಲ್ಲಿ ಒಂದರಂತೆ ಇಟ್ಟಿದ್ದೆವು. (ಇದರಿಂದ ಪ್ರೇಕ್ಷಕನ ಸ್ಥಾನ ಒಂದೇ ಕಡೆ ಇದ್ದಂತಾಗುತ್ತದೆ - ಮೂರು ಕ್ಯಾಮರಾದಲ್ಲಿ ಈ ನೋಟದ ಕೋನ ಬದಲಾಗುತ್ತಿರುತ್ತದೆ ಹಾಗೂ ಅದು ಅಸ್ವಾಭಾವಿಕ) ಇನ್ನು ಹತ್ತಿರಕ್ಕೆ ಹೋಗಿ ತೋರಿಸುವುದು (close up) ನಮ್ಮ ಕಣ್ಣು ಕೂಡಾ ಮಾಡುವಂಥಾ ಪ್ರಕ್ರಿಯೆಯೇ ಆಗಿದೆಯಲ್ಲವೇ? ನಾವೂ ನಮಗೆ ಬೇಕಾದ ಅಂಶಗಳನ್ನು ಸಾಪೇಕ್ಷವಾಗಿ ಹಿಗ್ಗಿಸಿ (ಮನಸ್ಸಿನಲ್ಲಿ) ನೋಡಿಕೊಳ್ಳುತ್ತೇವೆಯಲ್ಲಾ... ಇಲ್ಲೂ ಸಂಕಲನ ಮಾಡುವಾಗ ಇದೇ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಸಂಕಲಿಸಲಾಯಿತು. ಇದೇ ಕಾರಣಕ್ಕಾಗಿ spot editing ಕೈಬಿಟ್ಟು, ಸಾಂಪ್ರದಾಯಿಕ ಸಂಕಲನವನ್ನೇ ಬಳಸಿಕೊಂಡಿದ್ದೇವೆ. ಆದರೂ, ನಿಮ್ಮ ಅಭಿಪ್ರಾಯ ಸರಿಯೇ ಹೌದು. ಯಕ್ಷದಾಖಲೀಕರಣದ ಕುರಿತಾಗಿ ನಾವು ಇನ್ನಷ್ಟು ಚಿಂತನೆ, ಯೋಚನೆ, ಯೋಜನೆಗಳನ್ನು ಮಾಡುವುದು ಅಗತ್ಯವೇ ಸರಿ. ತಮಗೆ ಮತ್ತೊಮ್ಮೆ ಧನ್ಯವಾದಗಳು.

    - ಅಭಯ ಸಿಂಹ

    ReplyDelete