"ಇದು ವಿಮರ್ಶೆಯಲ್ಲದ ಚಿಂತನ"

Monday, July 26, 2010

ಅನುಭವದ ಸಿಂಚನ





ಮಿತ್ರರಾದ ಶ್ರೀ ಉಲ್ಲಾಸ್ ಧ್ವನಿ ಮುದ್ರಿಸಿ ಕೊಟ್ಟ ಧ್ವನಿ ಮುದ್ರಣವನ್ನು ಇಲ್ಲಿ ಅಳವಡಿಸಿದ ತತ್ರಾಂಶವನ್ನು ಪೂರ್ಣವಾಗಿ ಕೇಳಿ.ಇಲ್ಲಿ ಶ್ರೀ ಬಲಿಪ ನಾರಾಯಣ ಭಾಗವತರ ಅಪರೂಪವೆನಿಸುವಂತಹ ಭಾಷಣದ ಧ್ವನಿ ಮುದ್ರಣ ಕೇಳಬಹುದು. ಕೇಳುತ್ತ ಹೋದಂತೆ ಏನನಿಸಬಹುದು. ಬಲಿಪ್ಪರು ಹೊಸ ಸ್ಪೂರ್ತಿಯಲ್ಲಿದ್ದಂತೆ ಭಾಸವಾಗುವುದಿಲ್ಲವೇ? ಬಲಿಪ್ಪರು ಮಾತಾಡಿದರೆಂದರೆ ಅದು ಮಗುವಿನ ಮಾತಿನಂತೆ ಮುಗ್ಧ ಎಂದು ಹಾಗೇ ಸುಮ್ಮನಿರುವ ಹಾಗಿಲ್ಲ.ಅವರೇ ಹೇಳುವಂತೆ ಬಲಿಪ್ಪರು ಮಾತುಗಾರರಲ್ಲ. ಆದರೆ ಅವರೊಂದಿಗೆ ಮಾತಾಡಲು ಕುಳಿತರೆ ನಮಗೆ ಮಾತೆ ಇರುವುದಿಲ್ಲ..!! ಅವರೆ ಮಾತಿನ ಹರಿಕಾರರಾಗಿಬಿಡುತ್ತಾರೆ. ಇಲ್ಲಿಯೂ ಬಲಿಪ್ಪರು ಅವರ ಮಟ್ಟಿಗೆ ನಿರರ್ಗಳ ಮಾತಿನ ಪ್ರವಾಹವನ್ನೇ ಹರಿಸಿದ್ದಾರೆ. ಇದರಲ್ಲಿ ಹುರುಳಿಲ್ಲದ್ದು ಅಂತ ಯಾವುದಾದರು ಉಲ್ಲೇಖಿಸಿಯಂತೆ...ಅದೇ ಬಲಿಪ್ಪರ ವಿಶೇಷತೆ.

ಇದು ಸದ್ಯ ಸುರತ್ಕಲ್ ನಲ್ಲಿ ಆದ ಕಾರ್ಯಕ್ರಮದಲ್ಲಿನ ಬಲಿಪ್ಪರ ಭಾಷಣದ ಧ್ವನಿಮುದ್ರಣ. ತುಂಬ ಆಸಕ್ತಿಯಿಂದ ಅದನ್ನು ಕೇಳಿದ ಮೇಲೆ ಅದನ್ನು ಅರಗಿಸಿಕೊಳ್ಳುವುದಕ್ಕೆ ಕಷ್ಟವಾಗಿಬಿಟ್ಟಿತು. ಹಲವು ಸಲ ಕೇಳಿದೆ. ಆಗ ಅನಿಸಿದ್ದು ಬಲಿಪ್ಪರು ಹೊಸ ಹುರುಪು ಉತ್ಸಾಹದಲ್ಲಿದ್ದಾರೆಯೇ? ಇತ್ತೀಚೆಗೆ ಅವರ ಹಲವು ಕಾರ್ಯಕ್ರಮಗಳನ್ನು ಹತ್ತಿರದಿಂದ ಗಮನಿಸಿದಾಗ ಹೀಗೆ ಅನ್ನಿಸಿದ್ದಿದೆ. ಈ ವಯಸ್ಸಿನಲ್ಲೂ ಬಲಿಪ್ಪರು ಹಾಡುವ ರೀತಿ ನೋಡಿದಾಗ, ಯಾವೊಂದೂ ಕಾರ್ಯಕ್ರಮವೂ ಬಲಿಪ್ಪರ ಪದದಲ್ಲಿ ಸೊರಗಿದೆ ಎಂದು ಹೇಳದಂತೆ ಅದೇ ಸ್ವರ ಸ್ಥಾಯಿ ಕಾಯ್ದುಕೊಂಡು ಬಂದಿದ್ದಾರೆ.ಈ ಭಾಷಣದಲ್ಲಿ ಎಂದು ತೋರದ ವಿಚಾರ ತೀಕ್ಷ್ಣತೆಯನ್ನು ತೋರಿದ್ದಾರೆ. ಸಮಕಾಲೀನ ಯಕ್ಷಗಾನ ಕಲೆಯ ಹೊಲಬನ್ನು ತನ್ನದೇ  ರೀತಿಯಲ್ಲಿ ವಿಮರ್ಶಿಸಿದ್ದಾರೆ. ಬಲಿಪ್ಪರು ಆಕ್ರಮಣ ಶೀಲ ಮನೋಭಾವವಲ್ಲ. ಯಾವುದರ ಬಗ್ಗೆಯು ತುಂಬ ಸಮಧಾನದಿಂದ , ಮತ್ತು ತಣ್ಣನೆಯ ಮಾತುಗಳಿಂದ  ಯಾರಿಗೂ ನೋವಾಗದಂತೆ  ಸರಳವಾಗಿ ಹೇಳುವ ಸ್ವಭಾವದವರು. ಸ್ವ- ಗೌರವವನ್ನು ತನ್ನೆಡೆಗೆ ಎಳೆದು ತರುವಂತಹ ವ್ಯಕ್ತಿತ್ವ. ಹೀಗಿದ್ದರು ಈ ಭಾಷಣದ ಮಾತುಗಳು ಕೆಲವೊಂದು ಎಷ್ಟು ಮುಗ್ಧವೋ ಅಷ್ಟೇ ತೀಕ್ಷ್ಣವೂ ಆಗಿದೆ.ಇದೊಂದು ಸಂಗ್ರಾಹ್ಯ ಮಾತುಗಳು ಎನ್ನುವುದಕ್ಕೆ ಹಲವು ಪುರಾವೆಗಳನ್ನು ಅಲ್ಪಾವಧಿಯ ಭಾಷಣದಲ್ಲಿ ಹೇಳಿದ್ದಾರೆ. ಓರ್ವ ಪಳಗಿದ ಭಾಷಣಕಾರನಂತೆ ಒಂದೆಡೆ ತೋರಿದರೆ..ಇನ್ನೋಂದೆಡೇ ಸರಳವಾಗಿ “ಇಲ್ಲ ನಾನು ಏನು ಹೇಳುವುದಿಲ್ಲ” ಹೇಳುವ ರೀತಿಯಲ್ಲಿ ಒಂದು ವಿಧದ ಮುಗ್ಧತೆಯನ್ನು ಮೆರೆಯುತ್ತಾರೆ. ಕಲೆಯನ್ನು ತಪಸ್ಸೆಂದು ತಿಳಿದು ಆ ಹಾದಿಯಲ್ಲಿ ಮಹಾತಪಸ್ವಿಯಂತೆ ಸಾಧನೆಯನ್ನು ತೋರಿದವರು. ಇದನ್ನು ಸಿದ್ದಿಸಬೇಕಾದಲ್ಲಿ,  ಇಂದಿನ ಯುವಕಲಾವಿದರು ಅನುಸರಿಸಬೇಕಾದ ಕ್ರಮವನ್ನು ಹೇಳುವ ರೀತಿ,  ಯುವ ಕಲಾವಿದರು ಕೇಳುವ ಸ್ಥಿತಿಯಲ್ಲಿ ಇಲ್ಲ ಅದು ತಿಳಿದೂ ತನ್ನ ಕರ್ತವ್ಯ ಅದರಲ್ಲೂ ತೋರಿದ್ದಾರೆ. ಅವರ ಒಂದೊಂದು ಅನುಭವವೇದ್ಯ ಮಾತುಗಳು ಒಂದು ಬೃಹತ್ ಪ್ರಂಬಂಧಕ್ಕೆ ವಿಷಯವಾಗಬಲ್ಲುದು. ಅದನ್ನು ಇಂದಿನ ತಲೆಮಾರು ಎಷ್ಟರವರೆಗೆ ಅರಗಿಸಿಕೊಳ್ಳಬಹುದೋ ಅದು ಊಹಿಸುವುದು ಕಷ್ಟ. ತಾನು ನಂಬಿದ ಕ್ರಮ ಸಿದ್ದಾಂತಗಳಿಗೆ ಅಂಟಿಕೊಂಡು ಒಂದೆ ಹಾದಿಯಲ್ಲಿ ಅರ್ಧ ಶತಕವನ್ನು ಈ ಕಲಾ ಜಗತ್ತಿನಲ್ಲಿ  ಬಾಳುವುದು ಎಂದರೆ ಕಲ್ಪಿಸಿಕೊಳ್ಳುವುದು ಅಸಾಧ್ಯ. ಇಲ್ಲಿ ಇವರ ಕ್ರಮವನ್ನು ಇವರು ಜಾಹೀರಾತು ಮಾಡಲಿಲ್ಲ ಆಷ್ಟೇ. ಆದರೆ ಬಲಿಪ್ಪಜ್ಜನ ಕ್ರಮಗಳು ಕಲೆಗೆ ಬೇಕು , ಕಲಾಭಿಮಾನಿಗಳಿಗೆ ಬೇಕು ,ಅದುದರಿಂದಲೇ ಇದು ಸಾಧ್ಯವಾಯಿತು. ಯಾಕೆಂದರೆ ಎಲ್ಲಿಯೂ  ಬಲಿಪ್ಪರ ಹೇರಿಕೆಯ ಗುಣ ಅಕ್ರಮಣ ಪ್ರವೃತ್ತಿ ಕಾಣುವುದು ಸಾಧ್ಯವಿಲ್ಲದ ಮಾತು. ಒಂದೇ ಗುರು, ಒಂದೇ ಕ್ರಮ, ಒಂದೇ ಹಾದಿ ,, ಯೋಚಿಸಿದರೆ ಅಚ್ಚರಿಯಾಗದೆ ಇದ್ದೀತೇ?

ಇಂದು ಕಲಾವಿದನಿಗೆ ಇಲ್ಲವಾದುದು ಅಷ್ಟೆ. ತನ್ನ ಹಾದಿಯಲ್ಲಿ ನಂಬಿಕೆ ಇಲ್ಲದ ಚಂಚಲತೆ. ಹಲವು ದಾರಿಗಳನ್ನು ಒಂದೆ ಸಲ ತುಳಿಯುವ ಚಪಲ. ತಾಳಕ್ಕೆ ಒಬ್ಬ ಗುರು, ರಾಗಕ್ಕೆ ಇನ್ನೊಬ್ಬ ಗುರು. ನಡೆಯುವ ಹಾದಿಯೋ ಇದೆರಡಕ್ಕಿಂತಲೂ ತೀರ ಭಿನ್ನ. ಅಪೂರ್ಣತೆಯ ಸಾಧನೆಯನ್ನೇ ಪೂರ್ಣತೆ ಎಂದು ತಿಳಿದು ಅದನ್ನೇ ಹೇರುವ ಪ್ರವೃತ್ತಿ. ಕಲೆ ಅಸ್ವಾದಿಸುವವರಿಗೂ ಒಂದು ವಿಧದಲ್ಲಿ ಅನಿವಾರ್ಯತೆಯನ್ನು ತಂದಿಡುವ ರೀತಿ ಎಲ್ಲವೂ ಗೊಂದಲಮಯ.

ತನ್ನ ಹಲವು ಅನುಭವಗಳನ್ನು ಅತ್ಯಂತ ಸೂಕ್ಷ್ಮವಾಗಿ ಸರಳವಾಗಿ ತಮ್ಮದೆ ರೀತಿಯಲ್ಲಿ ಹಂಚಿಕೊಂಡರೂ ಅದನ್ನು ಅಷ್ಟೇ ತಾಳ್ಮೆಯಲ್ಲಿ ಅರ್ಥೈಸುವುದು ಬಲಿಪ್ಪರನ್ನು ಅರ್ಥೈಸಿದಷ್ಟೇ  ಕಷ್ಟ. ಅತೀ ಸಣ್ಣ ಸೂಕ್ಷ್ಮ ವಿಷಯಗಳೂ ಅವರಿಗೆ ಇತ್ತೀಚೆಗೆ ನಡೆದಂತೆ ನೆನಪಿನಲ್ಲಿದೆ. ಇವರು ದಂಡಕ ವಾಚನದ ಬಗ್ಗೆ ಹೇಳಿದಾಗ, ನಮ್ಮ ಬಾಯಾರು ಗ್ರಾಮದ ಆವಳ ಮಠದಲ್ಲಿ ಇಂತಹ  ಹಲವು ಕಾರ್ಯಕ್ರಮ ಆಗಿದೆ ಎಂದು  ಬಾಲ್ಯದಲ್ಲಿ ಹಿರಿಯರು ಹೇಳುತ್ತಿದ್ದ ನೆನಪು ಪುನಃ ಮರುಕಳಿಸಿತು. ಹೀಗೆ ಹೇಳಿದಷ್ಟು ಮತ್ತೂ ಕೇಳಬೇಕು, ಇನ್ನೇನಿದೆ ಬಲಿಪ್ಪಜ್ಜನ ಸಂಗ್ರಹ ಎಂದು ತಿಳಿಯುವ ಕುತೂಹಲ ನಮಗಿದ್ದರೆ,  ಆದರೆ ಆ ನೆನಪಿನ ಜ್ಞಾನವನ್ನು ಎಷ್ಟರ ಮಟ್ಟಿಗೆ ಇಂದಿನವರು ಉಪಯೋಗಿಸಿ ಸಾರ್ಥಕಗೊಳಿಸುವವರು ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದುಬಿಡುತ್ತದೆ. ಯಾರಿಗೂ ಮಾಗಿದ ಅನುಭವ ಬೇಕಾಗಿಲ್ಲ. ಕೇವಲ ಜನಪ್ರಿಯತೆ , ಅರ್ಥ ಮತ್ತು ಸ್ವಾರ್ಥ ಇಷ್ಟರಲ್ಲೇ ಗಮನ. ಬಲಿಪ್ಪರು ಹೇಳಿದ ಮೂವತ್ತೈದು ತಾಳಗಳು,ಇಂದು ಯಾರಿಗೆ ತಿಳಿದಿದೆ? ಉತ್ತರ ಮಾತ್ರ ಸಿಗಲಾರದು. ಪ್ರಧಾನ ಭಾಗವತ ಅಂತ ಕರೆಯಿಸಿಕೊಳ್ಳುವುದರಲ್ಲೇ ಧಾವಂತ. ಅದರೂ ಇಂತಹವರೇ ಮನ್ನಣೆಗೊಳಗಾಗುವುದು ದೊಡ್ಡ ದುರಂತ.

ಅದೇನೆ ಇದ್ದರು ಬಲಿಪ್ಪರ ಅಪಾರವಾದ ಅನುಭವ  ದಾಖಲಿಸುವಂತಹ ಕೆಲಸವಾಗಬೇಕು. ಬಲುದೀರ್ಘವಾದ ಕಲಾಬದುಕಿನ ಒಂದೊಂದು ಅನುಭವವನ್ನು ಅವರಿಂದ ಸಂಗ್ರಹಿಸುವುದು ತುಂಬ ಕಷ್ಟ. ಮೊದಲಾಗಿ ಅದರ ಮೌಲ್ಯ ಇಂದಿನ ಪೀಳಿಗೆಗೆ ಅರ್ಥಮಾಡಿಸುವ ಕೆಲಸ ಆಗಬೇಕು. ಕ್ಷಣಿಕ ಮನರಂಜನೆಯಿಂದ ತೃಪ್ತರಾಗುವ ಹಾಗಿಲ್ಲ.ಇವರೊಂದಿಗೆ ಒಡನಾಡುವ ಒಡನಾಡಿದ ಹತ್ತು ಹಲವು ಕಲಾವಿದರಾಗಲೀ ವ್ಯಕ್ತಿಗಳಾಗಲೀ , ಬಲಿಪ್ಪರ ಬಗೆಗಿನ ಅವರ ಅಂತರಾಳ ಹೇಗಿರುತ್ತದೆ ಎಂದು ಪ್ರಶ್ನೆ ಮಾಡಿದರೆ ಅವರೊಂದಿಗಿನ  ಪ್ರತೀ ಘಳಿಗೆಯೂ ಅದ್ಭುತ ಜ್ಞಾನ ಸಿದ್ದಿಗೆ ಅವಕಾಶವನ್ನು ಒದಗಿಸಿ ಕೊಡಬಲ್ಲುದು ಎಂಬುದು ಅವರ ಅಂಬೋಣ.  

ಅದರೆ ಇಂದು ಕಾಲ ಮಾತ್ರ ತೀರ ಭಿನ್ನವಾಗಿದೆ. ಅವರ ಪ್ರತೀ ಮಾತಿನ ಆಂತರ್ಯದ ಧ್ವನಿ ಅದೇ ಅಗಿದೆ.ನಕಲಿ ಚಿನ್ನದ ಹೊಳಪಿಗೂ ಅಪ್ಪಟ ಬಂಗಾರದ ಹೊಳಪಿಗೂ ವೆತ್ಯಾಸ ಗುರುತಿಸದ ಪೀಳಿಗೆ ಇಂದು. ಪ್ರತಿಯೊಂದು ಯಕ್ಷಗಾನ, ತಾಳ ಮದ್ದಲೆ ಕೂಟದ ಆಹ್ವಾನ ಪತ್ರಿಕೆ ನನ್ನ ಗಮನಕ್ಕೆ ಬಂದಾಗ ಮೊದಲು ಗಮನ ಹೋಗುವುದು ಹಿಮ್ಮೇಳದ ಕಡೆಗೆ. ಅಲ್ಲಿ ಬಲಿಪ್ಪರ ಹೆಸರಿದ್ದರೆ ಅದಕ್ಕೆ ಹೊಸತೊಂದು ಮೌಲ್ಯ ಕಂಡಂತೆ ಭಾಸವಾಗುತ್ತದೆ. ಈ ಬೆಂಗಳೂರಿನಲ್ಲಂತೂ ಹಲವು ಯಕ್ಷಗಾನದ ಕೂಟದಲ್ಲಿ ಬಲಿಪ್ಪರ ಹೆಸರು ಕಾಣುವುದೇ ಅಸಾಧ್ಯ. ಕೋಗಿಲೆ ಎಂತಿದ್ದರೂ ಮಾಮರದಲ್ಲೇ ಹಾಡುವುದಲ್ಲವೆ? ಇಲ್ಲಿ ಆ ಮಾಮರವ ಹುಡುಕಾಟದಲ್ಲಿ ನಾನಿದ್ದೇನೆ.  





3 comments:

  1. "ಕಲಿಯಬೇಕಾದ್ದನ್ನು ಮೊದಲು ಸರಿಯಾಗಿ ಕಲಿಯಿರಿ ಆಮೇಲೆ ಹೊಸ ಪ್ರಯೋಗ ಮಾಡಲು ಹೊರಡಿ " ಎಂದ ಬಲಿಪರ ಮಾತುಗಳು ಎಲ್ಲ ರಂಗಕ್ಕೂ ಸಾರ್ವಕಾಲಿಕವಾಗಿ ಅನ್ವಯವಾಗುತ್ತದೆ . basic concepts ಸರಿ ಗೊತ್ತಿಲ್ಲದವರೇ ಹೆಚ್ಚಿರುವಾಗ ಹೊಸತೇನು ಮಾಡುವುದು ?
    ಅನುಭವಿಗಳ ಮಾತು ನಿಜವಾಗಿಯೂ ಅರ್ಥಪೂರ್ಣ .ಮೊದಲ ಬಾರಿ ಬಲಿಪರಿಂದ ಸುಧೀರ್ಘ ವಿದ್ವತ್ಪೂರ್ಣ ಭಾಷಣ . ಚೆನ್ನಾಗಿದೆ.

    ReplyDelete
  2. ಬಲಿಪರು ಹೇಳಬೇಕಾದ್ದನ್ನು ಸ್ಪಶ್ಟವಾಗಿ ಹೇಳಿದ್ದಾರೆ.. ಕೇಳಿ ಅನುಸರಿಸುವವರು ಯಾರೂ ಕ೦ಡು ಬರುತ್ತಿಲ್ಲ...

    ReplyDelete
  3. balipara jeevananubhavada dakhaleekarana maadi idabekdaadu bahala mukhya

    ReplyDelete