ಯಕ್ಷಗಾನ ಕೇಳುವ ಹವ್ಯಾಸ ಹಲವು ದಿಶೆಯಲ್ಲಿ ಯಕ್ಷಗಾನ ಸಂಗ್ರಹಕ್ಕೆ ನಿಮಿತ್ತವಾಗಿದೆ. ಅದರಂತೆ ಹಲವು ಮಿತ್ರ ಬಾಂಧವ್ಯವನ್ನು ಹಿರಿದಾಗಿಸಿದೆ. ಇಂದು ಕೇಳಿದ ಯಕ್ಷಗಾನದ ತುಣುಕು ಮರುದಿನ ಈ ಮೇಲ್ ಮೂಲಕ ಈ ಮಿತ್ರ ಬಳಗದಲ್ಲಿ ಹಂಚಿಕೊಳ್ಳುವ ಒಂದು ವಿಚಿತ್ರ ಹವ್ಯಾಸ ರೂಢಿಸಿಕೊಂಡಮೇಲೆ ಹವ್ಯಾಸಕ್ಕೆ ಹೊಸ ರೂಪು ಕೊಟ್ಟ ಅಲ್ಪ ಸಮಾಧಾನ ನನಗಾಗಿದೆ. ಪ್ರಪಂಚದಾದ್ಯಂತ ಮಿತ್ರ ಬಳಗ ಪಸರಿಸುವುದಕ್ಕೆ ಇದು ಬಲು ಮುಖ್ಯ ಕಾರಣವಾಗಿಬಿಟ್ಟಿತು. ನಿತ್ಯವೂ ತಮ್ಮ ಮೈಲ್ ಪೆಟ್ಟಿಗೆ ತೆರೆಯುವವರಿಗೆ ಇದು ಒಂದು ರೀತಿ ಮುದಕೊಡುತ್ತ ಬಂದಿದೆ ಅಂತ ನನ್ನ ಭಾವನೆ.
ಕೆಲವು ಸಮಯದ ಮೊದಲು ಎಂದೂ ಸಂಪರ್ಕಿಸದ ಒಬ್ಬರು ಚಾಟ್ ಬೊಕ್ಸ್ ನಲ್ಲಿ “ನಮಸ್ಕಾರ ಹೇಳಿ. ದಯಮಾಡಿ ಯಕ್ಷಗಾನಗಳನ್ನು ಮೇಲ್ ಮಾಡಬೇಡಿ ಅಂತ ಬೇಡಿಕೊಂಡಾಗ ಒಂದು ಸಲ ಕಕ್ಕಾಬಿಕ್ಕಿಯಾದೆ.ಅದು ಹೇಗೊ ಯಕ್ಷಗಾನ ಬಳಗದಲ್ಲಿ ಅವರ ಮೈಲ್ ವಿಳಾಸ ಸೇರಿಕೊಂಡು ಬಿಟ್ಟಿತ್ತು. ವಿದೇಶದಲ್ಲಿ ಉದ್ಯೋಗಿಯಾಗಿರುವ ಇವರಿಗೆ ಅದು ಹಲವು ರೀತಿ ಕಿರಿ ಕಿರಿಯನ್ನುಂಟು ಮಾಡಿತ್ತು.
ಹೀಗಿದ್ದರು ಹಲವು ಸಹೃದಯ ಮಿತ್ರರ ಬಳಗವನ್ನು ಇದು ಸೃಷ್ಟಿಸಿದೆ. ಅರಬ್ ರಾಷ್ಟ್ರದ ಮಿತ್ರರು ತಮ್ಮ ಮೇಲ್ ವಿಳಾಸಕ್ಕೆ ಬರುವ ಈ ನಿತ್ಯ ಯಕ್ಷಗಾನ ಪದಗಳನ್ನು ಕೇಳಿ ಮುದಗೊಂಡ ಮನಸ್ಸಿಂದಲೇ ಮುದದಿಂದ ತಮ್ಮ ದಿನವನ್ನು ಆರಂಭಿಸುತ್ತಿದ್ದಾರೆ. ಅದೇ ರೀತಿ ಇಲ್ಲಿಂದಲೂ ವೆತ್ಯಸ್ತ ರೀತಿಯ ವಾತಾವರಣದಲ್ಲಿ ನಿತ್ಯ ಬದುಕನ್ನು ಸವೆಸುವ ಯುವ ಮಿತ್ರರೊಬ್ಬರಿಗೆ ನನ್ನ ಈ ತುಣುಕು ಪದಗಳೇ ಚೈತನ್ಯವನ್ನು ನೀಡುತ್ತದೆ. ತಮ್ಮ ಮೊಬೈಲ್ ಗೆ ರವಾನಿಸಿ ಎಕಾಂತದಲ್ಲಿ ರಾತ್ರಿ ನಿದ್ರಿಸುವ ಸಮಯದಲ್ಲಿ ಕೇಳುವುದನ್ನು ಹವ್ಯಾಸ ಮಾಡಿಕೊಂಡಿರುವ ಇವರು ಆ ಸಮಯದಲ್ಲಿ ಕಲಾವಿದರೊಂದಿಗೆ ನನ್ನ ನೆನಪನ್ನು ಮಾಡುತ್ತಿರುವುದು ನನಗೆ ಒಂದು ಧನ್ಯತೆಯನ್ನು ಒದಗಿಸಿದೆ.
ತನ್ನ ಪ್ರತೀ ಹಾಡು ಕಳಿಸಿದಾಗ ಪ್ರತಿಯೊಂದಕ್ಕೂ ಪ್ರತಿಕ್ರಿಯೆ ನೀಡಿ ಸಂತಸ ಪಡುವ ಮಿತ್ರರೂ ಇದ್ದಾರೆ. ಮುಂಬೈ , ದೆಹಲಿ, ಅಮೇರಿಕ, ಇಂಗ್ಲಂಡ್ ಎಂದು ಸುತ್ತಾಡುತ್ತ ಇದ್ದರೂ ಇವರ ಪ್ರತಿಕ್ರಿಯೆ ತತ್ ಕ್ಷಣ ಬರುವುದನ್ನು ಕಂಡಾಗ ಅಚ್ಚರಿಯ ಜತೆ ಸಂತಸವೂ ಆಗುತ್ತಿದೆ. ನಾನು ಕಳುಹಿಸಿದ ಪದಗಳನ್ನು ಕೇಳಿ ದಿನದ ಕೆಲಸದಲ್ಲಿ ತೊಡಗುವ ಮಿತ್ರರು ಹಲವರು. “ ಇಂದಿನ ಪದ ಲಾಯಿಕ್ಕಿದ್ದು .” ಎಂದು ಸಣ್ಣ ಪ್ರತಿಕ್ರಿಯೆ ಕೊಟ್ಟರೂ ಮನಸ್ಸಿಗೆ ಸಂತಸ.
ಕೆಲವೊಮ್ಮೆ ನನ್ನ ಬಿಡುವಿಲ್ಲದ ಕೆಲಸದಿಂದಲೋ ಅಥವ ಇನ್ನಾವುದೋ ಕಾರಣದಿಂದ ಯಕ್ಷಗಾನದ ಪದಗಳನ್ನು ಕಳುಹಿಸದಿದ್ದಲ್ಲಿ "ಇಂದು ಪದ ಬೈಂದಿಲ್ಲೆ. ಪದ ಕಳಿಸಿ”
“ಕಳಿಸಿದ ಪದವನ್ನೇ ಪುನಃ ಕಳಿಸಿ ಮಾರಯ್ರೆ. ಅಡ್ಡಿಲ್ಲ” ಅಂತ ಬೇಡಿಕೆ ಸಲ್ಲಿಸುವ ಮಿತ್ರರೂ ಇದ್ದಾರೆ.
ಸಾಮಾನ್ಯವಾಗಿ ಮೊದಲ ದಿನ ಕೇಳಿದ ಯಕ್ಷಗಾನದಲ್ಲಿದ್ದ ಪದದ ತುಣುಕನ್ನು ನಾನು ಮೆಲುಕು ಹಾಕಿ ಮರುದಿನ ಮಿತ್ರ ಬಳಗಕ್ಕೆ ರವಾನೆ ಮಾಡುವುದು ಸಹಜ. ಅದನ್ನು ಎಷ್ಟು ಜನ ಕೇಳ್ತಾರೋ? ಯಾವಾಗ ಕೇಳ್ತಾರೊ? ಇದನ್ನು ಯಾರು ಹೇಗೆ ಸ್ವೀಕರಿಸುತ್ತಾರೊ? ಈ ಬಗ್ಗೆ ಈವರೆಗೆ ನಾನು ತಲೆಕೆಡಿಸಿಕೊಂಡಿಲ್ಲ. ನನ್ನ ಗಣಕ ಯಂತ್ರದ ಜ್ಙಾಪಕ ಕೋಶ (ಹಾರ್ಡ್ ಡಿಸ್ಕ್ ಮೆಮೊರಿ)ಯಲ್ಲಿ ಬೆರಳ ತುದಿಯ ಆಣತಿಗೆ ಕಾದು ಕುಳಿತ ಯಕ್ಷಗಾನದ ಸಾಲುಗಳನ್ನು ಕಂಡಾಗ ಹಲವು ಸಲ ಅನ್ನಿಸಿದ್ದಿದೆ ಸುಮ್ಮನೇ ಮರುಳಲ್ಲವೆ? ಏನಿದೆ ಇದರಲ್ಲಿ? ಕಣ್ಣೀಗೆ ಜಡವಾಗಿ ಗೋಚರಿಸದ ಈ ವಸ್ತುಗಳ ಪಂಕ್ತಿಗಳು, ಏನಿವೆ ಇದರಲ್ಲಿ? ಅದರೆ ಇದು ಅಮೂಲ್ಯವೆಂದು ಅನ್ನಿಸುವುದು ನನ್ನಲ್ಲಿಗೆ ಬರುವ ನನ್ನಂತೇ ಇರುವ ಮರುಳರನ್ನು (ಸ್ನೇಹದಿಂದ) ನೋಡುವಾಗ. ಈ ಬಗೆಯಲ್ಲಿ ಚಿತ್ರವಿಚಿತ್ರ ಮರುಳರು ಇದ್ದಾರೆ. ಅದು ನನ್ನ ಗೋಚರಕ್ಕೆ ಬಂದದ್ದು ಮಾತ್ರ ಈ ಸಂಗ್ರಹದಿಂದ.
ನಾನು ಕಳಿಸಿದ ಪದಗಳನ್ನೆಲ್ಲಾ ಸಂಗ್ರಹ ಮಾಡಿ ಅದನ್ನು ಸಿ. ಡಿ. ಗೆ ರವಾನಿಸಿ ಕಾರಿನಲ್ಲಿ ಪ್ರಯಾಣಿಸುವಾಗ ಕೇಳುವ ಹಲವು ಮಿತ್ರರು ಇದ್ದಾರೆ. ಇವರ ಕಂಪ್ಯೂಟರ್ ನಲ್ಲಿ ನಾನು ಕಳಿಸಿದ ಪದಗಳಿಗೆ ಅಂತ ಸ್ಥಳವನ್ನು ಮೀಸಲಿರಿಸಿದ್ದಾರೆ.
ಒಂದು ಸಲ ಊರಿಗೆ ಹೋಗಿದ್ದಾಗ ಅಲ್ಲಿ ಒಬ್ಬರ ಜತೆ ಪ್ರಯಾಣಿಸುತ್ತಿದ್ದೆ. ಯಕ್ಷಗಾನದ ಬಗ್ಗೆ ಮಾತು ಬಂದಾಗ ತಮ್ಮ ಮೊಬೈಲ್ ನಲ್ಲಿದ್ದ ಯಕ್ಷಗಾನ ಪದಗಳನ್ನು ಉತ್ಸಾಹದಿಂದ ಕೇಳಿಸಿದರು. ಆದರೆ ಅದು ನಾನು ಕಳುಹಿಸಿದ ಪದಗಳೇ ಅವು ಎಂದು ಅವರಿಗೆ ಅರಿವಾದಾಗ ಬಹಳ ಆಶ್ಚರ್ಯಗೊಂಡರು. ಯಾರೋ ಅವರ ಮಿತ್ರರೊಬ್ಬರು ಅವರಿಗೆ ಕೊಟ್ಟಿದ್ದರು. ಹೀಗೆ ನನಗೆ ಅರಿವಿಲ್ಲದೆ ಯಕ್ಷಗಾನದ ಕಂಪನ್ನು ಹರಡಿ ಕೃತಾರ್ಥತೆ ನನಗಿದೆ. ಇಂದಿನ ಎಫ್. ಎಮ್ ರೇಡಿಯೋ ಗಲಾಟೆಯ ಮಧ್ಯೆ ಅಲ್ಪವಾದರು ಯಕ್ಷಗಾನ ಪದಗಳು ಚೆಂಡೆ ಮದ್ದಲೆಯ ನಿನಾದ ಕೇಳಿಸುವಾಗ ನನಗೆ ನಿಜಕ್ಕೂ ಅತ್ಮಾನಂದ ವಾಗುತ್ತದೆ.
ಈ ಯಕ್ಷಗಾನದ ತುಣುಕನ್ನು ರುಚಿ ನೋಡಿ ಬೆಂಗಳೂರಿಗೆ ಬಂದರೆ ನಿಮ್ಮಲ್ಲಿಗೆ ಖಂಡಿತ ಬರಬೇಕು ಎಂದವರು ಮತ್ತು ಹಾಗೆ ಬಂದವರು ಹಲವರು.ಹಾಗೆ ಬಂದವರು ತಮ್ಮವರ ಮನೆಗೆ ಹೋಗದೆ ಅಧಿಕ ಸಮಯವನ್ನು ನನ್ನ ಬಳಿಯೇ ಕಳೆದು ಕೌಟುಂಬಿಕ ಸಂಭಂಧಿಗಳ ಮುನಿಸಿಗೆ ಕಾರಣರಾದರೂ ತಮ್ಮ ಹುಚ್ಚಿನ ಬಗ್ಗೆ ತಾವೇ ಅಭಿಮಾನ ಪಟ್ಟುಕೊಳ್ಳುವ ಕಲಾಭಿಮಾನಿಗಳನ್ನು ಕಂಡಾಗ ಏನನಿಸಬಹುದು?
ಹತ್ತು ಹಲವು ಮನೋಭಾವ ಇಲ್ಲಿ ಕಂಡಿದ್ದೇನೆ. ನನ್ನಲ್ಲಿ ಬಂದು ಕೆಲವರು ಬಲಿಪ್ಪರದ್ದು ಮಾತ್ರ ಸಾಕು ಎನ್ನುವವರು ಹಲವರಾದರೆ ಇನ್ನು ಕೆಲವರು ಬಲಿಪ್ಪರು ಹೊಳ್ಳರು ಬಿಟ್ಟು ಬಾಕಿ ನೋಡುವ ಅನ್ನುವ ಅಭಿಮಾನಿಗಳೂ ಇದ್ದಾರೆ ಎನ್ನುವಾಗ ವಿಬ್ಭಿನ್ನ ಮನೋಭಾವ ಕಂಡ ಅನುಭವ. ನಾನು ಸಂಗ್ರಹಿಸುವಾಗ ನನ್ನ ಅಭಿಮಾನ ಇಷ್ಟ ಯಾವುದನ್ನು ನೋಡದೆ ಸಾಮಾನ್ಯ ಎಲ್ಲಾ ಕಲಾವಿದರ, ಬಲಿಪ್ಪರಾಗಲಿ, ನಾವಡರಾಗಲಿ ಹೊಳ್ಳ ಪದ್ಯಾಣವೇ ಆಗಲಿ ಯಾವುದೇ ತಾರತಮ್ಯವಿಲ್ಲದೆ ಸಂಗ್ರಹಿಸಿದ್ದು ಕೇವಲ ಯಕ್ಷಗಾನ ಆಸಕ್ತಿಯಿಂದ. ಎಲ್ಲವನ್ನೂ ತಕ್ಕ ಮಟ್ಟಿಗೆ ಅಚ್ಚು ಕಟ್ಟಾಗಿ ಮನಸ್ಸು ಬೇಕೆಂದು ಬಯಸಿದಾಗ ಸಿಗುವಂತೆ ಜೋಡಿಸಲು ಶ್ರಮವಹಿಸಿದ್ದೇನೆ. ಇದೆಲ್ಲ ಕೇವಲ ಆತ್ಮ ತೃಪ್ತಿಗಾಗಿ ಮಾತ್ರ.
ಅಂದು ಬಾಲ್ಯದ ದಿನಗಳಲ್ಲಿ ಯಕ್ಷಗಾನ ಅಥವಾ ಚೆಂಡೆ ಮದ್ದಳೆ ಕೇಳಬೇಕೆಂದರೆ ,ಬಯಲಾಟ ತಾಳಮದ್ದಲೆ ಅಲ್ಲದೆ ಬೇರೆಲ್ಲೂ ಕೇಳುವಂತೆ ಇರಲಿಲ್ಲ. ಟೇಪ್ ರೆಕಾರ್ಡರ್ ಮಾತಿರಲಿ ಊರಿಗೆ ಒಂದೊ ಎರಡೋ ರೇಡಿಯೋ ಇರುತ್ತಿದ್ದ ಕಾಲವದಲ್ಲವೆ? ವಾರಕ್ಕೊಂದು ಸಲ ಬರುವ ಬುಧವಾರದ ರಾತ್ರಿ, ಅಂದು ಮಂಗಳೂರು ಆಕಾಶವಾಣಿ ಯಲ್ಲಿ ಬರುವ ಒಂದು ಘಂಟೆಯ ಯಕ್ಷಗಾನಕ್ಕೆ ಕಾತರಿಸಿ ಪರರ ಮನೆಯಲ್ಲಿ ಕೂರುವ ಕಾಲವು ಇತ್ತು. ಯಾರದೋ ಮನೆಯಲ್ಲಿ ಯಾರದೋ ರೇಡಿಯೋದಲ್ಲಿ ಕೇಳುವ ಯಕ್ಷಗಾನದ ಕಾಲವೊಂದು, ಇಂದು ಕೈ ಬರಳ ತುದಿಯ ಒತ್ತುವಿಕೆಗೆ ಗಣಕ ಯಂತ್ರದಲ್ಲಿ ಮೊಳಗುವ ಹಲವು ಯಕ್ಷಗಾನಗಳು, ಚೆಂಡೆ ಮದ್ದಲೆಯ ಲಯವಿನ್ಯಾಸ ಕೇಳುವಾಗ ಆಗುವ ಸಂತೋಷ, ಸಿಗುವ ಮನೋಲ್ಲಾಸ ಹಾಗೇ ಅದನ್ನು ಮಿತ್ರರಲ್ಲಿ ಹಂಚಿಕೊಂಡಾಗ ಸಿಗುವ ಆನಂದ ಎಲ್ಲವೂ ಅಪ್ಯಾಯಮಾನ.
maruLu haudo allavo.. nanage laabha aadaddantoo sathya :)
ReplyDeleteನನ್ನ e- mail jagadeesh602@gmail.com.
ReplyDeleteನಿಮ್ಮ 'ಯಕ್ಷಗಾನ'ಬಳಗಕ್ಕೆ ನನ್ನನ್ನೂ ಸೇರಿಸಿ ಕೊಳ್ಳಿ,ಧನ್ಯವಾದಗಳು.
I am one of those who wait for your mails...please keep sending
ReplyDeleteNarayan
ellarigoo dine dine marulu hechchagli ... :P:)
ReplyDelete