ಮೊನ್ನೆ ದಿನಾಂಕ ನವೆಂಬರ್ ಒಂದರಂದು ಮಂಗಳೂರಿಂದ ಬೆಂಗಳೂರಿಗೆ ಬರುವಾಗ, ರಾತ್ರಿ ಪುತ್ತೂರಿಗೆ ತಲುಪುತ್ತಿದ್ದಂತೆ ಬೆಂಗಳೂರಿಂದ ಬಂದ ಕರೆಗೆ ಉತ್ತರಿಸಿ ಬಲಿಪ್ಪರೊಂದಿಗೆ ಮಾತನಾಡಿ ಮುಗಿಸಿದಾಗ ಒಂದು ದೊಡ್ಡ ನಿಟ್ಟುಸಿರು ಬಂದು ಮನಸ್ಸು ಭಾವ ಪರವಶವಾಗಿಬಿಟ್ಟಿತು. ಆಗ ತಾನೇ ಬಲಿಪ್ಪರು ಸನ್ಮಾನಿತರಾಗಿ ಹೊರಬಂದು ಅತ್ಯುತ್ಸಾಹದಲ್ಲಿ ಮಾತಾಡಿದರು. ಸಹಜವಾಗಿ ಯಕ್ಷಗಾನದ ವಿಚಾರ ಬಂದರೆ ಬಲಿಪ್ಪರ ಉತ್ಸಾಹ
| ಪ್ರಶಸ್ತಿಫಲಕದೊಂದಿಗೆ ಶ್ರೀ ಬಲಿಪ ನಾರಾಯಣ ಭಾಗವತರು |
ಎಲ್ಲರಿಗೂ ತಿಳಿದ ವಿಚಾರ. ಅವರ ಸಮರ್ಪಣ ಭಾವ ತೊಡಗಿಸಿಕೊಳ್ಳುವ ರೀತಿ ಎಲ್ಲವೂ ವಿಶಿಷ್ಟ. ಆ ವೈಶಿಷ್ಟ್ಯದ ಮೌಲ್ಯಗಳಿಗೆ ಅಂಗೀಕಾರದ ಸರಕಾರಿ ಮುದ್ರೆ ಬಿದ್ದಂತೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಬಂದು ಬಿಟ್ಟಿತು. ಬಲಿಪ್ಪರ ಸಂತೋಷ ಕೇವಲ ಪೋನಿನಲ್ಲಿ ಧ್ವನಿ ಮೂಲಕ ಅನುಭವಿಸುವ, ಕಾಣುವ ಯೋಗ ಮಾತ್ರವೇ ನನಗೆ ಇದ್ದುದು. ನಾನಲ್ಲಿ ದೂರದ ಊರಿನಲ್ಲಿದ್ದೆ. ನಮ್ಮ ಕರಾಡ ಭಾಷೆಯಲ್ಲಿ ದಣಿವರಿಯದೆ ಮಾತಡಿದ ಬಲಿಪ್ಪರ ಧ್ವನಿ ಈಗಲೂ ಕೇಳುತ್ತಿದೆಏನೋ ಎಂಬ ಭ್ರಮೆ ಇನ್ನೂ ಬಿಟ್ಟಿಲ್ಲ.
ಊರಿನ ಕಲಾವಿದ ವರ್ಗದಲ್ಲಿ ಸಂಪೂರ್ಣ ಯಕ್ಷಗಾನ ಕ್ಷೇತ್ರದಲ್ಲಿ ಯಾರಿಗೂ ಮಾತ್ಸರ್ಯ ವಿಲ್ಲದೆ ಎಲ್ಲರ ಅಭಿಪ್ರಾಯದಲ್ಲಿ ಸಹಮತವಿತ್ತು. ಈ ಪ್ರಶಸ್ತಿ ಬಲಿಪ್ಪರಿ ತುಂಬ ತಡವಾಗಿ ಬಂದಿದೆ. ಮತ್ತು ಇವರು ಎಂದೋ ಇದಕ್ಕೆ ಅರ್ಹವ್ಯಕ್ತಿಯಾಗಿ ಬಿಟ್ಟಿದ್ದರು. ಮತ್ತೊಂದು ಸೋಜಿಗವೆಂದರೆ ಬಲಿಪ್ಪರಿಗೆ ಮಾತ್ರವಲ್ಲ ಅವರ ಅಭಿಮಾನಿಗಳಿಗೂ ತೀರಾ ಅನಿರೀಕ್ಷಿತ. ಮನೆಯಲ್ಲಿ ಆರಾಮ ಆಸನದಲ್ಲಿ ಕುಳಿತು ಸಾಯಂಕಾಲ ಟಿ. ವಿ. ವಾರ್ತೆ ನೋಡುತ್ತಿದ್ದವರಿಗೆ ತಮ್ಮ ಹೆಸರನ್ನು ಅಲ್ಲಿ ಕಂಡು ಅಚ್ಚರಿಯಾಯಿತು. ಬಹುಶಃ ಈ ಅನುಭವ ಕೆಲವೇ ವ್ಯಕ್ತಿಗಳಿಗೆ ಅಗುವುದಕ್ಕೆ ಸಾಧ್ಯ. ಎಂದೂ ಪ್ರಶಸ್ತಿಯ ಹಿಂದೆ ಹೋಗದ ಬಲಿಪ್ಪರಿಗೆ ಸ್ವತಃ ಅವರ ಆಯ್ಕೆ ಅವರಿಗೇ ಅಚ್ಚರಿಯಾದದ್ದರಲ್ಲಿ ವಿಶೇಷವೇನೂ ಇಲ್ಲ.ಪ್ರಶಸ್ತಿಗೆ ಅರ್ಜಿ ಹಾಕಿ ಅದರ ಹಿಂದೆ ಪುಸಲಾವಣೆಗೆ ಮಾರ್ಗ ಹುಡುಕುವ ಪ್ರವೃತ್ತಿ ಬಲಿಪ್ಪರಿಗೆ ಕನಸಲ್ಲು ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಈ ಬಗೆಯ ಪ್ರಶಸ್ತಿಯಲ್ಲಿ ಅವರಿಗೆ ಔದಾಸಿನ್ಯ, ಸರಕಾರೀ ಅದೇಶದ ಬಗ್ಗೆ ಏನೊಂದು ಅರಿವಿರದ ಮುಗ್ಧ ಬಲಿಪ್ಪರಿಗೆ ಯಾರನ್ನು ಸಂಪರ್ಕಿಸಬೇಕು ಎಂದು ತಿಳಿಯದಾಗ ಅವರ ಅಭಿಮಾನಿಗಳ ಉತ್ಸಾಹದ ಸಹಕಾರ ಮಾತ್ರ ಇಲ್ಲಿ ಸ್ಮರಣಾರ್ಹ. ಊರಿನ ಪಯಣದಲ್ಲಿದ್ದ ನನಗೆ ಕರೆ ಬಂದು ಅದರ ವ್ಯವಸ್ಥೆಗೆ ಹಲವಾರು ಕಡೆ ಕರೆ ಮಾಡುವ ಕೆಲಸ ನನ್ನದಾಯಿತು. ಹೆಚ್ಚಿನ ಎಲ್ಲ ಮಿತ್ರರು ಊರಲ್ಲಿದ್ದುದರಿಂದ ಬೆಂಗಳೂರಲ್ಲಿ ವ್ಯವಸ್ಥೆ ಮಾಡುವುದಕ್ಕೆ ಸ್ವಲ್ಪ ಹೆಣಗಾಡಬೇಕಾಯಿತು. ಉಳಕೊಳ್ಳುವ ವ್ಯವಸ್ಥೆ ಯಿಂದ ಸರಕಾರಿ ಪಾಸು ಕೊಳ್ಳುವ ಮುಂತಾದ ವ್ಯವಸ್ಥೆಗಳಿಗೆ ಅವರ ಅಭಿಮಾನಿವೃಂದ ನೀಡಿದ ಸಹಾಯ ಹಸ್ತ ನಾನು ಸ್ಮರಿಸಲೇಬೇಕು. ಎಲ್ಲ ಕಾರ್ಯಕ್ರಮ ನಿರೀಕ್ಷೆಯಂತೆ ಸಂಪನ್ನವಾದಾಗ ಬಲಿಪ್ಪರೊಂದಿಗಿನ ಉತ್ಸಾಹದ ಸಂಭಾಷಣೆ ನನ್ನನ್ನು ನಿರಾಳ ಮನಸ್ಸಿನವನನ್ನಾಗಿ ಮಾಡಿತು.
| ರಾಜ್ಯಪ್ರಶಸ್ತಿಪತ್ರ ಹಾಗು ಸ್ವರ್ಣಪದಕ |
ಮೊದಲದಿನ ಮೂಡಬಿದ್ರೆ ಆಳ್ವಾಸ್ ನುಡಿಸಿರಿ ಸಮಾರಂಭದಲ್ಲಿ ತಡ ಸಾಯಂಕಾಲದವರೆಗೂ ಸನ್ಮಾನ ಸ್ವೀಕರಿಸಿ ಅಲ್ಲಿಂದ ಬೆಳ್ಳಾರೆ ಸಮೀಪದ ಕಲ್ಮಡ್ಕದ ಕಾರ್ಯಕ್ರಮದಲ್ಲಿ ಭಾಗವಹಿಸಿ.ಅಲ್ಲಿನ ಜನತೆ ಅದ್ಭುತ ಕರತಾಡನದಿಂದ ಸಮಾರಂಭಕ್ಕೆ ಸ್ವಾಗತಿಸಿದ್ದು ಎಲ್ಲರು ಬಲಿಪ್ಪರಿಗೆ ಸಂದ ಪ್ರಶಸ್ತಿಯನ್ನು ಸಂಭ್ರಮಿಸಿದ್ದು ವಿಶೇಷ. ಯಾರಿಗೂ ನೋವುಂಟು ಮಾಡದ ಬಲಿಪ್ಪರು ಕಲ್ಮಡ್ಕದಿಂದ ಒಪ್ಪಿಕೊಂಡ ಯಕ್ಷಗಾನ ಬಯಲಾಟದ ಭಾಗವತಿಕೆಯನ್ನು ಸಂಘಟಕರ ಕೇಳಿಕೆಯಂತೆ ಬಿಟ್ಟು ಬೆಂಗಳೂರಿಗೆ ಬಂದು ಇಲ್ಲಿ ಪ್ರಶಸ್ತಿ ಸ್ವೀಕರಿಸುವುದೆಂದರೆ ಬಲಿಪ್ಪರು. ಮೂಡಬಿದ್ರೆ , ಕಲ್ಮಡ್ಕ, ಹೀಗೆ ಹಲವು ಸಮಾರಂಭದಲ್ಲಿ ಅಭಿಮಾನದ ಅಭಿನಂದನೆ ಸ್ವೀಕರಿಸಿ ಅಂತೇ ಹಲವೆಡೆ ಒಂದೇ ದಿನದ ಅವಧಿಯಲ್ಲಿ ಸನ್ಮಾನಿತರಾದ ಬಲಿಪ್ಪರ ಸಾಧನೆ ಅಮೋಘವಲ್ಲವೆ?
ಈ ಸಲದ ರಾಜ್ಯೋತ್ಸದಲ್ಲಿ ಹಲವಾರು ಅರ್ಹರು ಪ್ರಶಸ್ತಿಗೆ ಆರ್ಹರಾದದ್ದು ವಿಶೇಷವಾಗಿದೆ. ಇದರಲ್ಲಿ ಶ್ರೀ ಕೊಡಕ್ಕಲ್ಲು ಗೋಪಲಕೃಷ್ಣ ಹಾಸ್ಯಗಾರರದ್ದು ಸೂಕ್ತ ಅಯ್ಕೆ. ಕಡು ಬಡತನದಲ್ಲಿ ದುರ್ಭರ ಜೇವನ ನಡಸುವ ಇವರಿಗೆ ಈ ಇಳಿ ವಯಸ್ಸಿನಲ್ಲಿ ಇದು ಸ್ವಲ್ಪ ತುಸು ಸಹಕಾರಿಯಾಗಿ ಬದುಕನ್ನು ಅಧರಿಸೀತು. ನಿಜಕ್ಕೂ ಇವರ ಮಟ್ಟಿಗೆ ಸಕಾಲಿಕ ಪ್ರಶಸ್ತಿ. ಹಾಗೆಯೆ ಬಡಗಿನ ನೆಬ್ಬೂರು ನಾರಯಣ ಭಾಗವತರು, ಇವರಿಗೆ ಎಂದೋ ಬರಬೇಕಾದ ಪ್ರಶಸ್ತಿ ಇಂದು ಬಂದಿದೆ. ಬಡಗಿನಲ್ಲಿ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ತನ್ನದೇ ಸ್ಥಾನ ಮಾನದಿಂದ ಗುರುತಿಸಲ್ಪಡುವ ಇವರಿಗೆ ಈ ಕೊಡುಗೆ ಸ್ತುತ್ಯರ್ಹ, ಹಾಗೆ ಇನ್ನೊಬ್ಬ ಮಹನೀಯರೆಂದರೆ, ಉಡುಪಿ ಯಕ್ಷಗಾನ ಕೇಂದ್ರದ ಶ್ರೀ ಸಂಜೀವ ಸುವರ್ಣರು. ಇವರ ಯಕ್ಷಗಾನ ಚಟುವಟಿಕೆ, ಸಾಧನೆ ಸರಕಾರ ಈಗಲಾದರು ಗುರುತಿಸಿದ್ದು ಸೂಕ್ತವಾಗಿದೆ. ಇವರ ಮುಂದಿನ ಚಟುವಟಿಕೆಗೆ ಇದು ಅತ್ಯುತ್ತಮ ಚೈತನ್ಯವನ್ನು ನೀಡುವುದರಲ್ಲಿ ಅನುಮಾನವಿಲ್ಲ. ನಿಸ್ವಾರ್ಥ ಕಲಾಸೇವೆಗೆ ಸಂದ ಗೌರವ. ಈ ಎಲ್ಲ ಮಹನೀಯರಿಗೂ ಹೃದಯತುಂಬಿ ಅಭಿನಂದನೆ ಸಲ್ಲಿಸೋಣ.
ಹೀಗೆ ಈ ಸಲದ ರಾಜ್ಯೋತ್ಸವದಲ್ಲಿ ಸರಿ ಸುಮಾರು ೧೮೦ ಪ್ರಶಸ್ತಿ ವಿಜೇತರಿದ್ದರು ಶೇಕಡವಾರು ಎಷ್ಟು ಜನ ಪ್ರಶಸ್ತಿಗೆ ಅರ್ಹರೋ ಆ ಪಟ್ಟಿ ನೋಡಿದರೆ ಗಾಬರಿಯಾದರೂ ಅದೆಲ್ಲವನ್ನು ಮರೆಸುವಂತೆ ಯಕ್ಷಗಾನದ ಹಲವು ಸಾಧಕರಿಗೆ ಈ ಪ್ರಶಸ್ತಿ ಸಂದು ಈ ಪ್ರಶಸ್ತಿಗೆ ನಿಜ ಮೌಲ್ಯ ಬಂದಂತಾಗಿದೆ.
ಮತ್ತೊಮ್ಮೆ ಶ್ರೀ ಬಲಿಪ್ಪ ನಾರಾಯಣ ಭಾಗವತರಿಗೆ ಮಾತ್ರವಲ್ಲ ಜತೆಗೆ ಶ್ರೀ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರೀ ಕೊಡಕ್ಕಲ್ಲು ಗೋಪಾಲ ಕೃಷ್ಣ ಹಾಸ್ಯಗಾರರಿಗೆ ಮತ್ತು ಶ್ರೀ ಸಂಜೀವ ಸುವರ್ಣರಿಗೆ ಹ್ರಿತ್ಪೂರ್ವಕ ಅಭಿನಂದನೆಗಳು. ಇನ್ನೂ ಹೆಚ್ಚಿನ ಕಲಾ ಸೇವೆಯನ್ನು ಮಾಡುವಲ್ಲಿ ಭಗವಂತನು ಚೈತನ್ಯ ರೂಪವಾಗಿ ಇವರೆಲ್ಲರಿಗೆ ಕರುಣಿಸಲಿ ಎಂಬ ಹಾರೈಕೆಗಳು.
ನಿಮ್ಮ ಮಾತುಗಳು ನೂರಕ್ಕೆ ನೂರು ನಿಜ. ತಡವಾಗಿಯೇ ಹೆಸರು ಸೇರ್ಪಡೆಗೊಂಡ ಬನ್ನಂಜೆ ಸಂಜೀವ ಸುವರ್ಣರಿಗೆ ನಾನು ದೂರವಾಣಿ ಕರೆ ಮಾಡಿದಾಗ ಹೇಳಿದ ಮಾತು "ನನಗೆ ಸಂತೋಷ, ದುಃಖ ಏಕಕಾಲಕ್ಕೆ ಆಗಿದೆ. ಯಾಕೆಂದರೆ ಯಕ್ಶಗಾನವನ್ನು ಪ್ರತಿನಿಧಿಸುವ ನಿಮ್ಮಂಥವರಿಗೆ ನಿಜಕ್ಕೂ ಇದು ಸಲ್ಲಬೇಕಾದದ್ದೇ - ಸಂತೋಷ. ಆದರೆ ಅರ್ಜಿ ಗುಜರಾಯಿಸಿ, ಯಾರ ಯಾರದೋ ಕಾಲು ಹಿಡಿದು,ಕಮಿಶನ್ ಕೊಟ್ಟು (ನಂಬಲರ್ಹ ಮೂಲದಿಂದ ತಿಳಿದುಬಂದಂತೆ ಈ ವರ್ಷ ಗೌರವಧನದಲ್ಲಿ ಶೇಕಡಾ ಎಂಬತ್ತು ತಲೆಹಿಡುಕನಿಗಂತೆ!!) ‘ಪ್ರಶಸ್ತಿ ವಿಜೇತ’ರ ನಡುವೆ ನೀವು ‘ಪುರಸ್ಕೃತ’ಗೊಳ್ಳುವುದು ಅವಮಾನಕಾರಿ." ಇಲ್ಲಿ ‘ನಿಮ್ಮಂಥ’ ಎಂದದ್ದರಲ್ಲಿ ನಿಸ್ಸಂದೇಹವಾಗಿ ನೀವು ಉಲ್ಲೇಖಿಸಿದ ಬಲಿಪರು, ಕೊಡಕ್ಕಲ್ಲಿನವರು ಮತ್ತು ನೆಬ್ಬೂರರೂ ಸೇರುತ್ತಾರೆ. ಅವರಿಗೆಲ್ಲ ನನ್ನದೂ ಹಾರ್ದಿಕ ಅಭಿನಂದನೆಗಳು.
ReplyDeleteಅಶೋಕವರ್ಧನ
ಅರ್ಹ ವ್ಯಕ್ತಿಗೆ ಸಂದ ಯೋಗ್ಯ ಗೌರವ .ಪ್ರಶಸ್ತಿಯ ಗೌರವ ಇದರಿಂದ ಹೆಚ್ಚಾಯಿತು .
ReplyDelete