ಕೆಲವೊಂದು ಸಂಗತಿಗಳು ನಮ್ಮ ಬದುಕಿನ ರೀತಿ ನೀತಿಗೆ ನಿದರ್ಶನವಾಗಿ ಮುಖಪುಟವಾಗಿಬಿಡುತ್ತದೆ. ನಮ್ಮ ನೆನಪು ಬಂದಾಗ ಪಕ್ಕನೆ ಮನಸ್ಸಿನಲ್ಲಿ ಹಾದುಹೋಗುವ ಭಾವನೆಗಳು ಇದಕ್ಕೆ ಅನುಗುಣವಾಗಿ ಸ್ಪಂದನೆಯನ್ನುಂಟುಮಾಡುತ್ತವೆ.ಬಹುಶಃ ಸಂಸ್ಕಾರ ಎಂಬುದು ಇದನ್ನೆ ಅವಲಂಬಿಸಿ ಉಂಟೇನೋ. ದೇವರು ಪಾಲಿಸಿದ ಪಂಚೇದ್ರಿಯಗಳೊಂದಿಗೆ ಶರೀರವನ್ನು ಪಡೆದು ಜನ್ಮ ತಳೆವ ಮಾನವ ಹುಟ್ಟಿನಿಂದಲೂ ಒಂದು ಬದುಕಿನ ಆಯಾಮವನ್ನು ತನ್ನ ಸುತ್ತಲ ಪರಿಸರಕ್ಕನುಗುಣವಾಗಿ ಪಡೆಯುತ್ತಾನೆ. ಹುಟ್ಟಿದ ಮನೆ ಒಡನಾಟದ ಬಂಧುಬಳಗ ಇದೆಲ್ಲವು ಸಂಸ್ಕಾರದಲ್ಲಿ ಪ್ರತಿಫಲಿಸಿ ಅದೇ ಮುಂದಿನ ಬದುಕಲ್ಲಿ ಸ್ಥಾಯಿಯಾಗಿ ಗುರುತಿಸಲ್ಪಡುತ್ತದೆ. ಬೆಳೆದು ಬಂದು ಎಲ್ಲವು ಅನುಭವದ ಪಕ್ವತೆಯನ್ನು ಪಡೆಯುತ್ತ ಒಂದೊಂದೇ ದಿನವನ್ನು ಕಳೆದು ಮುಂದೇನು ಮುಂದೇನು ಎಂದು ಅನ್ವೇಷಣೆ ನಡೆಸುತ್ತ ಬರುತ್ತದೆ. ಈ ಬದುಕು ಎಂದರೆ ಹೀಗೆ ಪ್ರತಿ ಹಂತದಲ್ಲು ಘಳಿಗೆ ಕಳೆದಂತೆ ಪಕ್ವತೆಯನ್ನು ಪಡೆಯುತ್ತ ಹೋಗುತ್ತದೆ. ಇಂದು ಇರುವ ವಿಚಾರ ಮುಂದೆ ಬದಲಾದ ದಿಶೆಯಲ್ಲೂ ಕೆಲವೊಮ್ಮೆ ಒಳಗಿನ ಗುಣವನ್ನು ಬಿಟ್ಟುಕೊಡಲಾರವು. ಇಲ್ಲಿ ಅನ್ನ ತಿಂದು ಹಸಿವ ನೀಗುವ ಶರೀರ ಇನ್ನೊಂದು ಪರಿಸರದಲ್ಲಿ ಹುಟ್ಟಿ ಬೆಳೆದರೆ ಅನ್ನದ ಬದಲು ಬೇರಿನ್ನೇನನ್ನೋ ರೂಢಿಸಿಕೊಳ್ಳುತ್ತದೆ. ಆಹಾರ ಪರಸರಕ್ಕೆ ಹೊಂದಿಕೊಂಡು ಭಿನ್ನವಾಗಿರುವುದು ತಪ್ಪು ಅಲ್ಲ. ಅದು ಅಪರಾಧವೂ ಅಲ್ಲ. ಇಲ್ಲಿ ಅನ್ನ ತಿನ್ನುವವ ಇನ್ನೊಂದೆಡೆಯ ರೊಟ್ಟಿ ಆಹಾರವನ್ನು ಕೆಟ್ಟದ್ದು ಎನ್ನುವ ಹಾಗೂ ಇಲ್ಲ. ಅಥವಾ ತನಗೆ ಆಗದು ಎಂದ ಮಾತ್ರಕ್ಕೆ ರೊಟ್ಟಿ ಕಳಪೆಯೂ ಅಲ್ಲ. ಇದು ಮನುಷ್ಯ ಜೀವನದ ವೈವಿಧ್ಯತೆಯ ಸಂಕೇತ. ಭೂಗರ್ಭದಿಂದ ಒಸರುವ ನೀರು ಯಾವ ಪಾತ್ರೆಗೆ ಬಿದ್ದು ಅದೇ ಅಕಾರವನ್ನು ಪಡೆಯುತ್ತದೋ ಹಾಗೆ ಈ ಜೀವನ ಎಂದು ಅನ್ನಿಸುತ್ತದೆ. ನೀರು ಮತ್ತೆ ಪಾತ್ರೆ ಬದಲಾದಂತೆ ಬದಲಾವಣೆ ಕಂಡರು ದ್ರವರೂಪದ ಗುಣವನ್ನು ಬಿಡುವುದೇ ಇಲ್ಲ. ಆ ಗುಣವನ್ನು ಬಿಟ್ಟಾಗ ಅದು ಈ ಪ್ರಫಂಚದಲ್ಲಿ ಲೀನವಾಗಿ ಹೋಗಿಬಿಡುತ್ತದೆ.
ಇಂತಹ ಯೋಚನೆಗಳು ಇಲ್ಲಿ ಹುಟ್ಟಿಕೊಂಡು ಈ ರೂಪಕ್ಕೆ ಬರಲು ಕಾರಣವೂ ಇದೆ. ಹುಟ್ಟಿನಿಂದಲೆ ಬೆಳೆದು ಬಂದ ವಾತವಾರಣ ಜೀವನದಲ್ಲಿ ಎಲ್ಲಾ ಕಡೆ ಹಾಸುಹೊಕ್ಕಾಗಿ ಇರುತ್ತದೆ. ಒಂದೊ ತನ್ನದಾಗಿ ಪಡೆದು ಬಂದ ಜೀವನ ಕ್ರಮ ತಮಗೆ ಇಷ್ಟವಲ್ಲವಾದರು ಅದಕ್ಕೆ ಒಗ್ಗಿ ಕೊಂಡು ಹೋಗುವ ಜೀವನ ಕ್ರಮವಾದರೆ ಇನ್ನೋಂದು ಅದನ್ನೇ ಅಭಿಮಾನಿಸಿಕೊಂಡು ಅದು ತನ್ನದು ಎಂದು ಮೈಗೊತ್ತಿ ನಡೆವ ಜೀವನ ಕ್ರಮ. ಇದರಲ್ಲಿ ಯಾವುದು ಎಷ್ಟೆಷ್ಟು ಎಂಬುದು ಸಮಯಕ್ಕೆ ಬಿಟ್ಟವಿಚಾರ. ಅಲ್ಪ ಗೊಂದಲವೂ ಇಲ್ಲದೆ ಇರುವುದಿಲ್ಲ.
ಬಾಲ್ಯದಲ್ಲಿ ಅತ್ಯಂತ ಬಡತನದ ಜೀವನ. ಇನ್ನು ಹತ್ತರಿಂದ ಮೇಲೆ ಮಂದಿ ಇರುವ ಸಮೃದ್ದ ಕುಟುಂಬದ ಬಡತನ ಊಹಿಸಿ. ಏಳೆಂಟು ಮಕ್ಕಳು ಒಟ್ಟಾಗಿ ಬದುಕುವ ದೊಡ್ಡ ಮನೆ. ದೂರದ ಕಂಡು ಕೇಳರಿಯದ ಊರಲ್ಲಿ ಒಂದು ಶ್ರಾಧ್ದವೋ ವೈಕುಂಠ ಸಮಾರಾಧನೆಯೊ ಇದ್ದರೆ (ಆ ಕಾಲದಲ್ಲಿ ಆಮಂತ್ರಣ ಇಲ್ಲದೆ ಹೋಗಬಹುದಾದ ಕಾರ್ಯಕ್ರಮ ಇದುವೆ. ) ಹತ್ತು ಹನ್ನೆರಡು ಮೈಲುಗಳನ್ನು ಹೊಟ್ಟೆತುಂಬ ಊಟದ ಬಯಕೆ ಹೊತ್ತು ನಡೆದುಕೊಂಡೇ ಹೋಗುತ್ತಿದ್ದೆವು. ಆ ನನ್ನ ಐದು ಆರನೇ ವಯಸ್ಸಿನಲ್ಲಿ ನಾವೆಲ್ಲ ಮಕ್ಕಳು ನಡೆದದ್ದು ಇನ್ನೂ ನೆನಪಿದೆ. ಕಾಯರ್ ಕಟ್ಟೇ... (ನಮ್ಮ ಪೈವಳಿಕೆ ಬಾಯಾರು ಮಧ್ಯೆ) ಎಲ್ಲಿ? ದೂರದ ಕನ್ಯಾನದ ಯಾವುದೋ ಮೂಲೆಯ ಬೈಲಿನ ಮನೆ ಎಲ್ಲಿ? ಊಹಿಸಿ. ಈಗ ಅರ್ಧ ಘಂಟೆಯ ದೂರ ಆದರೂ ಆವಾಗ ಗುಡ್ಡೆಯಂತೆ ಇರುವ ಮಣ್ಣಿನ ರಸ್ತೆ.. ಬೆಳಗ್ಗೆ ಒಂದು ಮಧ್ಯಾಹ್ನ ಒಂದು ಎಂದು ಓಡುವ ವಾಹನದ ಕಾಲವದು. ನನ್ನ ಆರನೆಯ ವಯಸ್ಸಿನ ಈ ಊಟದ ಹಸಿವಿನ ನಡೆ ಇಂದು ನೆನಸಿದರೆ ತುತ್ತು ಅನ್ನವೂ ಮೌಲ್ಯಕಂಡುಕೊಳ್ಳುತ್ತದೆ. ಚಪ್ಪಲಿಯಿಲ್ಲದ ಬರಿಗಾಲು ಚಡ್ಡಿ ಮಾತ್ರ ಧರಿಸುವ ಬರಿ ಮೈ... ಎಂತಹ ಬಾಲ್ಯ ಆದರು ಕೆಲವೊಮ್ಮೆ ಅನ್ನಿಸುತ್ತದೆ ಆ ಬಾಲ್ಯ ಬರಬಾರದೇ?
ಇದೆಲ್ಲ ಅನಗತ್ಯ ಅನ್ನಿಸಬಹುದಾದ ಪ್ರವರ ಇಲ್ಲಿ ಕೆಲವೊಮ್ಮೆ ಹೇಳಿಬಿಡುವ ಎಂಬ ಬಯಕೆ. ಹೀಗನ್ನಿಸುವುದು, ಅಂತಹ ಬದುಕಲ್ಲೂ ಕಳೆದ ನಮ್ಮ ರಸಮಯ ದಿನಗಳ ಮಧುರ ಅನುಭವವೇ ಕಾರಣ. ಬಾಲ್ಯದಲ್ಲಿ ಆಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅನಿಶ್ಚತೆಯ ಜೀವನ. ಕೆಲವು ದಿನ ಪೈವಳಿಕೆಯಾದರೆ ಕೆಲವು ದಿನ ಸೋದರ ಮಾವನೊಂದಿಗೆ ಮಂಗಳೂರಲ್ಲಿ. ಅಲ್ಲಿ ಸಾಮಾನ್ಯ ದೊಡ್ಡ ಮನೆ ಎಲ್ಲ ಕಡೆಯೂ ಸಾಮಾನ್ಯ ಮಂದಿಗಳೆ. ಇಲ್ಲಿದ್ದರೂ ಅಲ್ಲಿದ್ದರು ಇದು ನಮ್ಮ ಮನೆ ಎಂಬ ಭಾವನೆ. ಮಂಗಳೂರಲ್ಲಿ ಎನ್ನ ದೊಡ್ಡಮ್ಮ ನ ಮುದ್ದಿನ ಆರೈಕೆ. ಸೋದರ ಮಾವನ ಪ್ರೀತಿಯ ಪಾಲನೆ.
ಆಗಿನ ಮಧುರ ಅನುಭವಗಳಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಮಧುರ ಭಾವನೆಗಳು ಹಲವು. ಇದು ಹಲವು ಸಲ ಹೇಳಿದಂತೆ ಯಕ್ಷಗಾನ ನಮಗೆಲ್ಲ ಸುಲಭದಲ್ಲಿ ಸಿಗುವ ದೊಡ್ಡ ಮನರಂಜನೆ. ಮಾತ್ರವಲ್ಲ ಅದು ಕಟೀಲು ಮೇಳದ ಬಯಲಾಟಕ್ಕೇ ಹೆಚ್ಚಾಗಿ ಸೀಮಿತ. ಮಂಗಳೂರಿನಲ್ಲಿ ಅಲ್ಲಲ್ಲಿ ಆಗುವ ಕಟೀಲು ಮೇಳದ ಅಟಗಳು ಸಾಯಂಕಾಲದಿಂದ ಮುಂಜಾನೆವರೆಗೂ ಬಯಲಲ್ಲೇ ಕಳೆವಂತೆ ಮಾಡಿದೆ. ಎಪ್ಪತ್ತರ ದಶಕದ ಕಟೀಲು ಮೇಳದ ಆಟಗಳು ಈಗಿನಷ್ಟು ಹರಕೆಯಾಗಿ ಇರುತ್ತಿರಲಿಲ್ಲ. ಆವಾಗ ಬಲಿಪ್ಪರು ಇದ್ದ ಒಂದೇ ಮೇಳ ಆರಂಭದಲ್ಲಿ ಇದ್ದದ್ದು. ಪೂರ್ವರಂಗದ ನಂತರ ಪೀಠವೇರುವ ಬಲಿಪ್ಪರು ಮುಂಜಾನೆ ಮಂಗಳದವರೆಗೂ ಕುಳಿತು ರಂಗದಲ್ಲಿ ಮೆರೆಯುವಂತಹ ದಿನಗಳು, ಇಂದು ಯಾವ ಭಾಗವತ ಇದ್ದಾರೆ.? ತಲೆಗೆ ಕೆಂಪು ಪೇಟ ಸುತ್ತಿ (ಮೊದಲೆ ಸಿದ್ದ ಪಡಿಸಿದ ರೆಡಿ ಮೇಡ್ ಪೇಟವಲ್ಲ ಅದು) ಇಂದಿಗೂ ಅದೇ ಬದಲಾಗದ ನಿಲುವು ನೋಡಿದರೆ ಎಂತಹವರಿಗೂ ಗೌರವ ಉಕ್ಕುವ ಕಳೆ, ಇವರ ಜತೆಗೆ ನಿಡ್ಲೆ ಅಜ್ಜನ ಚೆಂಡೆ ಪುರುಷ ಭಟ್ಟರ ದೇವಿ ಇವೆಲ್ಲ ಸಾಮಾನ್ಯ. ಯಕ್ಷಗಾನ ಎಂದರೆ ತೆಂಕು ತಿಟ್ಟು ಮಾತ್ರ ಎಂಬಂತೆ ಇದ್ದ ಬುದ್ಧಿಶಕ್ತಿ. ತೆಂಕು ತಿಟ್ಟಿನ ರಾಜವೇಶ ಪುಂಡುವೇಶ ಬಣ್ಣದವೇಶದ ಬಣ್ಣ ಬಣ್ಣದ ಲೋಕವೆ ನಮ್ಮ ಲೋಕ. ಆದರೂ ಅಗ ಒಮ್ಮೆ ಮನೆಗೆ ತಂದ ಸಿಂಡಿಕೇಟ್ ಭ್ಯಾಂಕ್ ಕ್ಯಾಲೆಂಡರ್ ನಲ್ಲಿ ಬಡಗುತಿಟ್ಟಿನ ಹಲವು ವೇಷದ ಚಿತ್ರಗಳನ್ನು ಗಾಬರಿ ಹಾಗು ಕುತೂಹಲದಿಂದ ನೋಡಿದ್ದು ಇನ್ನೂನೆನಪಿದೆ. ಎಲ್ಲೇಲ್ಲೂ ತೆಂಕು ಯಕ್ಷಗಾನವನ್ನೇ ಕಂಡು ಬೆಳೆದ ನನಗೆ ಅದರಲ್ಲೇ ಅಭಿಮಾನ ಬೆಳೆದು ಬಂದರೆ ಅದು ಈಗ ದುರಭಿಮಾನ ಮತ್ತು ಅಹಂಕಾರದ ಸಂಕೇತವಾಗಿ ಗುರುತಿಸಲ್ಪಟ್ಟದ್ದು ತುಂಬಾ ಖೇದವನ್ನು ತರಿಸಿದೆ. ಅದರೂ ಒಂದು ಪ್ರಶ್ನೆ ಹಾಗೆ ಉಳಿದು ಬಿಡುತ್ತದೆ. ವೈಯಕ್ತಿಕವಾಗಿ ಬರೆದು ನನ್ನ ಯಕ್ಷಗಾನಾಬಿಮಾನದ ಬಗ್ಗೆ ನೇರವಾಗಿ ಕೇಳೀದುದಕ್ಕೆ ಬೇಸರವಿಲ್ಲ. ವೈಯಕ್ತಿಕವಾಗಿ ಬರೆದ ಮೈಲ್ ನ್ನು ನನಗೆ ಅರಿವಿಲ್ಲದೆ ಸಾರ್ವಜನಿಕವಾಗಿ ಬಹಿರಂಗ ಪಡಿಸಿದ ಉದ್ದೇಶ ಕೇವಲ ಅವರ ಯಕ್ಷಗಾನ ಅಭಿಮಾನವನ್ನು ತೋರಿಸುವ ಬದಲಾಗಿ ದುರಹಂಕಾರವನ್ನು ತೋರಿಸುವುದಿಲ್ಲವೇ? ವೈಯಕ್ತಿಕವಾಗಿ ಕೇಳಿ ನಾನು ಸ್ಪಂದಿಸದೆ ಇರುತ್ತಿದ್ದರೆ ಆ ವೇಳೆಯಲ್ಲಿ ಇದು ಯುಕ್ತವಾಗುತ್ತಿತ್ತು. ಎಲ್ಲವೂ ಗೊಂದಲ ಮನಸ್ಸಿನ ಹೇಳಿಕೆಯಂತೆ ಭಾಸವಾಗುತ್ತಿದೆ. ತೆಂಕು ಬಡಗು ಎರಡು ಕಣ್ಣುಗಳ ಹಾಗೆ.. ದೊಡ್ಡ ವೇದವಾಕ್ಯವೆಂಬಂತೆ ನಾನು ಹೊಸದಾಗಿ ಪಾಠಕ್ಕೆ ಕುಳಿತ ವಿದ್ಯಾರ್ಥಿಯ ಭಾವದಲ್ಲಿ ಪರಿಗಣಿಸಬೇಕೆ. ನಾನು ಇನ್ನು ಹೇಳಬಲ್ಲೆ. ಯಕ್ಷಗಾನವೆಂಬ ಮನೆಯಲ್ಲಿ ತೆಂಕು ಬಡಗು ದಂಪತಿಯರಂತೆ. ಪರಸ್ಪರ ಸ್ನೇಹ ಹೊಂದಾಣಿಕೆಯ ಜೀವನವಾಗಬೇಕು. ಕೇವಲ ತೋರಿಕೆಯ ಜಾಹಿರಾತಿನ ಪ್ರೀತಿಯಾಗಬಾರದು. ಇಲ್ಲಿ ಯಾವುದು ಮೇಲು ಎಂಬ ಘರ್ಷಣೆಗೆ ಮೂಲವಾಗದೆ ಸರಸದ ಜೀವನವಾಗಬೇಕು. ಅದು ಇಂದು ಎದೆಯೆಂದು ನನಗನಿಸುವುದಿಲ್ಲ.
ಒಬ್ಬಕಳ್ಳನೋ ಸುಳ್ಳನೋ ಹುಟ್ಟಿನಲ್ಲೇ ಅದೇ ಪರಿಸರವನ್ನು ಅಂಟಿಸಿಕೊಂಡು ಬೆಳೆದು ಅದೇ ಸಂಸ್ಕಾರದಲ್ಲಿ ಬೆಳೆದರೆ ಆವಾಗ ಹೇಳಬಹುದು ಈ ಸಂಸ್ಕಾರ ಸರಿಯಲ್ಲ. ಇದು ಹುಟ್ಟಿನಿಂದಲೇ ಬಂದರೂ ಬದಲಿಸಿಕೊಳ್ಳಬೇಕಾದದ್ದು ಅನಿವಾರ್ಯ. ಯಾಕೆಂದರೆ ಈ ಸಂಸ್ಕಾರ ಪರರಿಗೆ ತೊಂದರೆಯನ್ನೇ ತರುವಂತದ್ದು. ಅದರ ಬಗ್ಗೆ ಅಭಿಮಾನ ಇದ್ದರೆ ಅದು ಸಮಾಜಕ್ಕೇ ಮಾರಕ ಅಲ್ಲವೇ. ಆದರೆ ಹುಟ್ಟಿನಿಂದ ಬಂದ ಈ ಪರರಿಗೆ ತೊಂದರೆಯಾಗದ ಯಕ್ಷಗಾನದ ಅಭಿಮಾನ ತಿದ್ದುವುದಕ್ಕೆ ಪ್ರಯತ್ನಿಸುವ ಮಂದಿಗೆ ಏನು ಹೇಳೋಣ. ಅಭಿಮಾನವು ಒಂದು ಅಹಂಕಾರವೇ? ಪರ ಜೇಬು ಹಿಂಡಿ ನಾವು ನಮ್ಮ ಯಕ್ಷಗಾನದ ಅಭಿಮಾನ ಇಟ್ಟುಕೊಂಡರೆ ಹೇಳಬಹುದು ಈ ಅಭಿಮಾನ ಬದಲಿಸು ಎಂಬುದಾಗಿ. ಎಲ್ಲ ಮೂಢತನದ ಪರಮಾವಧಿ ಅಂತ ಅನ್ನಿಸುವುದು ಆವಾಗ. ವಿವಾದದ ಸೊಲ್ಲು ಬಂದಾಗಲೇ ಅದಕ್ಕೆ ಪ್ರತಿವಾದ ಮಂಡಿಸಿ ನಮ್ಮದಾದ ಚಿಂತನೆಯನ್ನು ಹರಿಯಬಿಟ್ಟರೆ ವೃಥಾವಾಗ್ವಾದ, ಚರ್ಚೆ ಮತ್ತೆ ವೈಷಮ್ಯ.ವಾಗ್ವಾದ ಸಂವಾದವಾಗುವುದು ಸಹೃದಯವಿದ್ದಲ್ಲಿ ಮಾತ್ರ.
ಇತ್ತೀಚಿನ ಸಣ್ಣ ಸಂವಾದ ಒಂದು ವಿವಾದದ ಹಂತ ತಲುಪಿದ್ದು ಮಾತ್ರ ಖೇದಕರ. ಹುಟ್ಟಿನಿಂದಲೇ ಬೆಳೆಸಿಕೊಂಡ ಅಭಿಮಾನ ಯಕ್ಷಗಾನದ್ದು . ಅಂತಹುದೇ ಪರಿಸರ ಸಿಕ್ಕಿದಾಗ ಸಹಜವಾಗಿ ಪರಿಸರದಲ್ಲಿ ಇದ್ದ ಯಕ್ಷಗಾನದ ಒಂದು ಅಂಗವಾದ ತೆಂಕು ತಿಟ್ಟಿನಲ್ಲೇ ಅಭಿಮಾನವಿರಿಸಿ ಆ ಸಂಸ್ಕಾರವನ್ನೆ ಅಳವಡಿಸಿಕೊಂಡು ಸಾಗಿ ಬಂದ ಬದುಕು. ಇತರರಿಗೆ ತೊಂದರೆಯಾಗದ ರೀತಿಯಲ್ಲಿ ಸದ್ಭಾವನೆಯನ್ನು ಇರಿಸಿಕೊಂಡು ಬೆಳೆಸಿಕೊಂಡು ಬಂದ ಅಭಿಮಾನ ಅಹಂಕಾರ ಎಂದು ಗುರುತಿಸಲ್ಪಟ್ಟರೆ ಗುರುತಿಸಿದ ದೃಷ್ಟಿಗೆ ಚಿಕಿತ್ಸೆ ಬೇಕೆ ಬೇಡವೇ? ನನ್ನ ಪರಿಸರ ನನ್ನ ಸಂಸ್ಕಾರ ಎಂಬ ಅಭಿಮಾನ ತಪ್ಪೇ? ನಾನು ಅತಿಯಾಗಿ ಅಭಿಮಾನಿಸುವ ಬಲಿಪ್ಪರ ಅಭಿಮಾನವೇ ನಿಂದನೆಯ ಗುರಿಯಾಗಿ ಬಿಟ್ಟದ್ದು ನಿಜವಾಗಿ ಈ ಕಲಾವಿದರು ಎಂದು ಹೇಳುವವರ ಅಜ್ಞಾನಕ್ಕೆ ಏನೆನ್ನಬೇಕೊ ತಿಳಿಯದಾಗಿದೆ. ನಿಂದನೆಯಾದರು ತಾಳಿಕೊಳ್ಳಬಹುದೇನೊ. ಎಕೆಂದರೆ ಎಲ್ಲವನ್ನು ಸಮಾನ ಚಿತ್ತದಿಂದ ಸ್ವೀಕರಿಸುವ ರೂಢಿಯನ್ನು ಬೆಳೆಸಿಕೊಳ್ಳುವ ಪ್ರವೃತ್ತಿಯನ್ನು ರೂಢಿಸಿಕೊಳ್ಳುವ ಬಯಕೆ ನನ್ನದು. ಆದರೆ ಇಲ್ಲಿ ಕೇವಲ ನಿಂದನೆಯಲ್ಲ ಅದರ ಹಿಂದೆ ಇರುವ ಉದ್ದೇಶ ಮಾತ್ರ ತೀರ ಮೃಗಿಯ ವರ್ತನೆಯಾಗಿ ಗೋಚರಿಸಿತು.ಅನಗತ್ಯ ಮಾರ್ಗ ಹಿಡಿಸುವ ಪ್ರೇರೇಪಣೆ. ಜಗಳ ವೈಶಮ್ಯವನ್ನು ಮತ್ತು ಹೆಚ್ಚಿಸಿಕೊಳ್ಳುವ ಉದ್ದೀಪನೆ. ಅದಕ್ಕೆ ಸಹಾಯಕವಾಗಿ ಎರಗಿಸುವ ಟೀಕಾಪ್ರಹಾರ. ಇಲ್ಲಿ ಹಲವು ಗೊಂದಲಗಳನ್ನು ಆರಂಭದಲ್ಲೇ ಗುರುತಿಸಿದೆ. ಸ್ವಭಾವದಂತೆ ನಾನು ತಣ್ಣನೆಯ ಪ್ರತಿಕ್ರಿಯೆಗೆ ಶರಣಾದೆ. ಟೀಕೆಯನ್ನು ಮಾಡುವಲ್ಲಿಯೂ ಪರರನ್ನೆ ಆಶ್ರಯಿಸಿ ಅದೇ ಉಚ್ಚಿಷ್ಠ ಸವಿಯುವ ಮತ್ತು ಮಾನಸಿಕವಾಗಿಯೂ ಪರಾವಲಂಬಿಯಂತೆ ಕಾಣುವ ಪ್ರವೃತ್ತಿ ಹೇಸಿಗೆ ಹುಟ್ಟಿಸುವುದಿಲ್ಲವೆ? ಎಲ್ಲವೂ ಇರಲಿ ಅದರ ಪಾಡಿಗೆ ಅದು ಇರಲಿ ನಮ್ಮ ಹಾದಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿದ್ದರೆ ಅದೇ ಸಮಾಧಾನ ತಳೆದು ಮೌನವಹಿಸಿದರೂ ಕೆಲವೊಂದು ಚೋದ್ಯಗಳು ಸಿಗದ ಉತ್ತರವನ್ನೇ ಎದುರು ನೋಡುತ್ತದೆ. ಅದು ಹೀಗೆ.
ಕಲೆಯ ವಿಚಾರದಲ್ಲಿ ಸ್ಪರ್ಧೆ ಇರುವುದು ಸಹಜ. ಅದು ಕಲಾವಿದನ ಮಧ್ಯೆಯಾಗಲಿ ಒಟ್ಟು ಪ್ರದರ್ಶನ ರೂಪದಲ್ಲಾಗಲಿ ಹಲವು ವಿಧದ ಸ್ಪರ್ಧೆ ಇರುವುದು ಕೂಡ ಸಹಜ. ಯಕ್ಷಗಾನದ ವಿಚಾರಕ್ಕೆ ಬಂದಾಗ ಇಲ್ಲಿ ಹಲವು ವಿಧದ ಸ್ಪರ್ಧೆಯನ್ನು ಪ್ರತೀ ಪ್ರದರ್ಶನದಲ್ಲೂ ಕಾಣಬಹುದು. ಇಂದು ಸ್ಪರ್ಧೆ ಕೇವಲ ತಿಟ್ಟುಗಳ ಮಧ್ಯೆ ಮಾತ್ರ ಸೀಮಿತವಾಗಿಲ್ಲ. ಅದು ಸಂಘಟಕರ ನಡುವೆಯೂ ಬೆಳೆದು ಬರುವುದು ಸಾಮಾನ್ಯ ವಿಶಯವಾಗಿದೆ. ಎಲ್ಲವೂ ಸಾಮಾನ್ಯ ಎಂದು ತಳ್ಳಿ ಹಾಕಬಹುದಾದರು ಒಂದು ಸಾಹೋದರ್ಯದ ಭಾವ ಇದರಲ್ಲಿ ಹುಡುಕುವಂತಹ ವಾತಾವರಣ ಮಾತ್ರ ಅಸಹನೀಯವೆನ್ನಿಸುವುದಿಲ್ಲವೆ? ಅದು ಸುಸಂಸ್ಕೃತ ಕಲೆಯೆಂದು ನಾವು ಅಭಿಮಾನ ಪಟ್ಟುಕೊಳ್ಳುವ ಈ ಯಕ್ಷಗಾನ ಕಲೆಯಲ್ಲಿ. ಭಿನ್ನಾಭಿಪ್ರಾಯ ಸಹಜವಾದರು ಅದಕ್ಕೆ ಪರಿಹಾರ ಕಂಡುಕೊಳ್ಳುವ ಮಾರ್ಗ ಮಾತ್ರ ತೀವ್ರ ಅಪಾಯಕಾರಿಯಾಗಿ ಗೋಚರಕ್ಕೆ ಬರುತ್ತದೆ. ಕಲೆ- ಕಲೆಯ ಮಧ್ಯೆ, ಕಲಾವಿದನ ಮಧ್ಯೆ ಸ್ಪರ್ಧೆ ಎಲ್ಲರೂ ಬಯಸಬಹುದು. ಆದರೆ ಆ ಸ್ಪರ್ಧೆ ಹೇಗಿರಬೇಕು ಎಂಬ ಚಿಂತನೆ ಮಾತ್ರ ಇರುವುದಿಲ್ಲ. ಸ್ಪರ್ಧೆಯಿಂದ ಉತ್ಕೃಷ್ಟತೆಯನ್ನು ನೀರೀಕ್ಷಿಸಬಹುದಾದರು ಅಲ್ಲಿ ಸ್ಪರ್ಧೆಯ ರೂಪವೇ ಬಿನ್ನವಾಗ ಬಾರದಲ್ಲ?ಒಂದು ವೇದಿಕೆಯಲ್ಲಿ ಕಲಾವಿದನ ನಡುವೆ ಸ್ಪರ್ಥೆ ಪ್ರತಿಸ್ಪರ್ಧಿಯ ದಮನವನ್ನು ಗುರಿಯಾಗಿಸಿ ಇರದಿದ್ದರೆ ಹೇಗನಿಸಬಹುದು? ಪ್ರತಿಸ್ಪರ್ಧಿಯನ್ನು ಸೋಲಿಸಬೇಕೆಂಬುದೇ ಮುಖ್ಯ ಗುರಿಯಾದಲ್ಲಿ ಉತ್ಕೃಷ್ಟತೆ ಹೇಗೆ ಬರಬಹುದು? ಇಲ್ಲಿ ಕೇವಲ ಒಂದು ಸ್ಪರ್ಥೆ ಮಾತ್ರ ಕಾಣಬಹುದಷ್ಟೆ. ಇದು ಎಲ್ಲರಿಗು ತಿಳಿದಿದ್ದರೂ ಕ್ಷಣಿಕ ಗೆಲುವಿಗೆ ಎನೆಲ್ಲ ಪ್ರಯತ್ನಗಳನ್ನು ಮಾಡಿಬಿಡುತ್ತೇವೆ. ಸ್ಪರ್ಧಿಯ ದಮನದಿಂದ ಒಲಿದ ಗೆಲುವು ಅದು ಗೆಲುವಾಗಬಲ್ಲುದೇ? ಒಂದು ಸ್ಪರ್ಧೆ ಸೋಲು ಗೆಲುವಿನ ಸ್ಪರ್ಧೆ ಆಗಬಾರದು. ಗೆಲುವಿನ ಗುರಿಯೇ ಪ್ರಧಾನವಾದರೆ ಪ್ರತಿಸ್ಪರ್ಧಿಯ ದಮನವೆ ಗುರಿಯಾಗಿಬಿಡುತ್ತದೆ. ಒಟ್ಟಿನಲ್ಲಿ ಪ್ರೇಕ್ಷಕನಿಗೆ ಉತ್ತಮವಾದುದನ್ನು ಕೊಡುವ ಸ್ಪರ್ಧೆಯಾಗಬೇಕು. ಪ್ರತಿಸ್ಪರ್ಧಿಯ ಪ್ರತಿಭೆಯನ್ನು ಉತ್ತೇಜಿಸುತ್ತಾ ಅದಕ್ಕೆ ಮನ್ನಣೆ ನೀಡುತ್ತ ಸ್ಪರ್ಧಿಗಳು ಸ್ಪರ್ಥಿಸಿದರೆ ಅದು ಆರೋಗ್ಯಕರ ಸ್ಪರ್ಧೆಯಾಗಬಲ್ಲುದು.
ಇನ್ನು ಅಭಿಮಾನದ ವಿಚಾರವು ಇದಕ್ಕಿಂತ ಭಿನ್ನವಾಗಿಲ್ಲ. ಈ ಅಭಿಮಾನ ಪ್ರೀತಿ ಅದು ಬಲವಂತದಿಂದ ಸೆಳೆದು ಹುಟ್ಟಿಕೊಳ್ಳುವಂತಹುದಲ್ಲ. ಕುದುರೆಯನ್ನು ನೀರಿನ ಹತ್ತಿರ ತಂದು ಬಿಡಬಹುದು ಆದರೆ ಅದನ್ನು ನೀರು ಕುಡಿಯುವಂತೆ ಮಾಡಲು ಸಾಧ್ಯವೆ? ಆ ಪ್ರಚೋದನೆ ಅದಕ್ಕೆ ಮನಸ್ಸಿನಲ್ಲಿ ಹುಟ್ಟಬೇಕು. ಇಷ್ಟೇ ಆದರೆ ಪರವಾಗಿಲ್ಲ. ಆದರೆ ಅದಕ್ಕೆ ನೀರನ್ನು ಕುಡಿವ ಅನಿವಾರ್ಯತೆಯನ್ನು ತಂದು ಇಡುವ ಪ್ರವೃತ್ತಿ ಮಾತ್ರ ವಿಚಿತ್ರವಾಗಿದೆ. ಇದೆಲ್ಲ ತಿಳಿದಿದ್ದರೂ ತನ್ನ ಅಭಿಮಾನವನ್ನೆ ಪುರಸ್ಕರಿಸಲ್ಪಡಬೇಕು ಎಂಬ ಪ್ರವೃತ್ತಿ ಹೇಗೆ ಅಹಂಕಾರವಲ್ಲದೆ ಅಗಿರಲು ಸಾಧ್ಯ? ಕನ್ನಡ ಚಲನ ಚಿತ್ರವನ್ನೇ ನೋಡಬೇಕೆಂದು ಬೇರೆ ಚಲನ ಚಿತ್ರ ಬಹಿಷ್ಕರಿಸಿದಂತೆ ಅಲ್ಲವೆ? ಮನಸ್ಸಿಂದ ಪ್ರೇರಣೆಯಾದದ್ದು ಪರರಿಗೆ ತೊಂದರೆಯಾಗದ ರೀತಿಯಲ್ಲಿ ತಮ್ಮ ಅಭಿಮಾನ ಬೆಳೆಸುವುದು ಅಪರಾಧ ಅಥವಾ ನಿಂದಾರ್ಹ ಎಂದಾದರೆ ವ್ಯಕ್ತಿಸ್ವಾತಂತ್ರ್ಯಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿದೆ? ಅಭಿಮಾನ ಪ್ರೀತಿಯ ಪ್ರವೃತ್ತಿಯಲ್ಲಿ ಹುಟ್ಟಬೇಕು. ಬಲವಂತದ ಸೆಳೆತವಾದಷ್ಟು ಅದು ವ್ಯತಿರಿಕ್ತ ಆಗುವ ಸಂಭವವೇ ಜಾಸ್ತಿ. ಇಂತಹ ಸಾಮಾನ್ಯ ಜ್ಞಾನವು ಇಲ್ಲದಿದ್ದರೆ ಪರರನ್ನೆ ಅಪರಾಧಿಗಳನ್ನಾಗಿ ಚಿತ್ರಿಸುವಲ್ಲಿ ಉದ್ಯುಕ್ತವಾಗುತ್ತದೆ ಮನಸ್ಸು. ನನ್ನ ಅಭಿಮಾನ ಯಾರಿಂದ ಸಾಲಪಡೆದದ್ದು ಅಲ್ಲ .ಎರವಲು ವಸ್ತುವೂ ಅಲ್ಲ. ಅದು ನನ್ನಲ್ಲೇ ಉದ್ದೀಪನಗೊಂಡ ಸಾಮನ್ಯ ಮಾನಸಿಕ ಭಾವನೆ. ಯಾವುದೇ ರೀತಿಯಲ್ಲಿ ಸಮಸ್ಯೆಯಾಗದ ಈ ಅಭಿಮಾನ ಹೀಗೆ ಇರಲಿ ಅಲ್ಲವೆ.?
ಜನನಿಯ ಒಡಲಿನ ಹಾಲಿನ ರುಚಿ ಜನನದಿಂದಲೇ ನೋಡಿ ಮರಣದವರೆಗೂ ಆ ಅನುಭವ ಉಳಿಸುವ ನಮ್ಮ ಸಂಸ್ಕಾರ ಹುಟ್ಟಿನಿಂದಲೆ ಕಂಡು ಅನುಭವಿಸಿದ ಕಲೆಯ ಅಭಿಮಾನವನ್ನು ಸದಾ ಜಾಗ್ರತವಾಗಿರಿಸದೆ?
ಅಭಿಮಾನವು ವಿಬ್ಭಿನ್ನವಾಗಿರಲಿ ಪ್ರೀತಿ ಹಂಚಿಹೋಗಲಿ ಅದರೆ ವೈಷಮ್ಯಮಾತ್ರ ಹುಟ್ಟದಿರಲಿ ಎಂಬ ಸಧ್ಬಾವನೆ ಸದಾಶಯವನ್ನು ಹೊತ್ತು ಸದಾ ಉಲ್ಲಸಿತವಾಗಿರುವ ಶುದ್ದಸಂಸ್ಕಾರದ ಪರಿಸರ ಬೆಳೆಸೋಣ.
ಅಭಿಮಾನವು ವಿಬ್ಭಿನ್ನವಾಗಿರಲಿ ಪ್ರೀತಿ ಹಂಚಿಹೋಗಲಿ ಅದರೆ ವೈಷಮ್ಯಮಾತ್ರ ಹುಟ್ಟದಿರಲಿ ಎಂಬ ಸಧ್ಬಾವನೆ ಸದಾಶಯವನ್ನು ಹೊತ್ತು ಸದಾ ಉಲ್ಲಸಿತವಾಗಿರುವ ಶುದ್ದಸಂಸ್ಕಾರದ ಪರಿಸರ ಬೆಳೆಸೋಣ.
ರಾಜ್, ನಾಟಕ, ಯಕ್ಷಗಾನ, ಮತ್ಯಾವುದೇ ಹವ್ಯಾಸಿ ಕಲೆಯಾದರೂ ಪಾತ್ರ ಪೋಷಕರಲ್ಲಿ ಆರೋಗ್ಯಕರ ಸ್ಪರ್ಧೆ ಕಲೆಗೆ ಪೂರಕ..ಅದೇ ಒಣ ಪ್ರತಿಷ್ಠೆ..ಜಂಭ, ಅಹಮ್ಮುಗಳಾದರೆ ಮಾರಕ...ಈ ಸೂಕ್ಷ್ಮಗಳನ್ನು ಚನ್ನಾಗಿ ಹೆಣೆದು ಲೇಖನ ಮಾಡಿದ್ದೀರಿ..ಇಷ್ಟ ಆಯ್ತು
ReplyDeletethumba chennagide lekhana :) :)
ReplyDelete