ಯಾವುದೇ ಕಾರ್ಯಕ್ರಮವಾಗಲೀ ಆ ಕಾರ್ಯಕ್ರಮದ ವಿಷಯಕ್ಕೆ ಸಂಬಂಧಿಸಿದ ಧ್ವನಿ ಮುದ್ರಣಗಳೋ, ಪುಸ್ತಕಗ ಅಥವ ಪತ್ರಿಕೆಗಳೋ ಕಾರ್ಯಕ್ರಮ ನಡೆಯುವ ಪರಿಸರದಲ್ಲೇ ಪ್ರದರ್ಶನ ಮತ್ತು ಮಾರಾಟ ಮಾಡುವಂತಹುದು ಸರ್ವೇ ಸಾಮಾನ್ಯ. ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಾಗಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಧ್ವನಿ ಮುದ್ರಣಗಳು ಸಂಗೀತ ಕಲಾವಿದರ ವಿಶೇಷ ಮಾಹಿತಿಯನ್ನು ಹೊತ್ತ ಪುಸ್ತಕಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿರುತ್ತಾರೆ. ಕೆಲವೊಮ್ಮೆ ಅತ್ಯಮೂಲ್ಯವಾದ ಸಂಗ್ರಾಹ್ಯ ವವಸ್ತುಗಳು ಸಿಗುತ್ತವೆ. ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಇದರದ್ದೇ ಆದ ಪಾತ್ರ ಅಥವ ಸೇವೆ ಶ್ಲಾಘನೀಯ. ಇದಕ್ಕೆಂದೇ ಬರುವ ಆಸಕ್ತರೂ ಇರುತ್ತಾರೆ. ಈ ಬಗೆಯ ಪ್ರವೃತ್ತಿ ಯಕ್ಷಗಾನ ಕಾರ್ಯಕ್ರಮಗಳಲ್ಲೂ ಕಂಡುಬರುತ್ತದೆ. ಧ್ವನಿ ಮುದ್ರಣ ವಿನ್ಯಾಸದಲ್ಲಿ ಕ್ಯಾಸೆಟ್ ಯುಗ ಕಳೆದು ಸುಲಭ ರೀತಿಯ ಅನುಕೂಲಕರವೂ ಆದ ಸಿ. ಡಿ. ಅಥವಾ ಡಿ.ವಿ.ಡಿ ರೂಪಕ್ಕೆ ಬದಲಾಗಿ ಉಂಟು ಮಾಡಿದ ಕ್ರಾಂತಿ ಸಾಮಾನ್ಯವಾದುದೇನೂ ಅಲ್ಲ. ಯಾವುದೇ ಕಾರ್ಯಕ್ರಮವಾದರೂ ಈ ದ್ವನಿ ಮುದ್ರಣಗಳ ಮಾರುಕಟ್ಟೆ ಈ ಬಗೆಯಲ್ಲಿ ತೆರೆದುಕೊಂಡ ರೀತಿ ಕೆಲವೊಮ್ಮೆ ಕುತೂಹಲಕರವೂ ಆಶ್ಚರ್ಯಕರವೂ ಆಗಿರುತ್ತದೆ.
ಇತ್ತೀಚೆಗೆ ಹಲವು ಭಾಗವತರ ಅಥವಾ ಇನ್ನಿತರ ಕಲಾವಿದರ ವಿಶೇಷಣವನ್ನು ಒಳಗೊಂಡ ಧ್ವನಿಮುದ್ರಣ ಹಲವಾರು ಇರುವುದನ್ನು ಕಾಣಬಹುದು. ಇವುಗಳ ಬಗ್ಗೆ ಕುತೂಹಲದಿಂದ ಗಮನಿಸಿದರೆ ಇದು ಯಾವೂದೋ ಕಾಲದ ಕ್ಯಾಸೆಟ್ ನ ಪದಗಳನ್ನು ತುಂಡು ತುಂಡು ಮಾಡಿ ನಂತರ ಅವುಗಳನ್ನು ಹೊಸೆದು ಆಕರ್ಷಕ ರಕ್ಷಾಕವಚದೊಂದಿಗೆ ಸಿ ಡಿ ಅಥವಾ ಡಿ. ವಿ. ಡಿ ರೂಪದಲ್ಲಿ ಮಾರುಕಟ್ಟೆಗೆ ಬಿಟ್ಟಿರುತ್ತಾರೆ. ಕೆಲವೆಲ್ಲ ಹೊಸ ನಿರ್ಮಾಣಗಳೂ ವಿಶೇಷವಾಗಿ ನಿರ್ಮಿಸಲ್ಪಟ್ಟಿರುತ್ತವೆ. ಒಂದು ಸಲ ಕಲಾಕ್ಷೇತ್ರದ ಕಾರ್ಯಕ್ರಮಕ್ಕೆ ಹೋಗಿದ್ದವನು ಇದರ ಬಗ್ಗೆ ಕುತೂಹಲದಿಂದ ಗಮನಿಸಿದೆ. ಹೆಸರಾಂತ ಭಾಗವತರ ಅದು ಯಾರೋ ಆಗಿರಬಹುದು ಅವರ ಆಕರ್ಷಕ ಪೋಟೋ ಮುದ್ರಿಸಿ ಸುಂದರವಾಗಿ ವಿನ್ಯಾಸಗೊಳಿಸಿ ಸಿ. ಡಿ. ಯನ್ನು ಮಾರಾಟಕ್ಕೆ ಇಟ್ಟಿದ್ದರು. ಅದಕ್ಕೆ ಆಕರ್ಷಕ ಹೆಸರಿನ ನಾಮಕರಣವೂ ಆಗಿರುತ್ತದೆ. ಆಸಕ್ತಿ ಮೂಡಿ ಅವುಗಳನ್ನು ತೆಗೆದು ನೋಡಿದರೆ ಅಧಿಕವೂ ಹಿಂದೆ ಬಂದ ಕ್ಯಾಸೆಟ್ ನ ಪದಗಳನ್ನು ಪುನಃ ಭಟ್ಟಿ ಇಳಿಸಿ ನಿರ್ಮಿಸಲಾಗಿತ್ತು. ಅದಕ್ಕೆ ಅಪವಾದವೆಂಬಂತೆ ಹೊಸ ನಿರ್ಮಾಣಗಳು ಇಲ್ಲದಿರಲಿಲ್ಲ. ಆದರೆ ಇವುಗಳ ಸಂಖ್ಯೆ ಮಾತ್ರ ತೀರ ಅಲ್ಪ. ಆವಾಗ ಅನ್ನಿಸಿಬಿಟ್ಟದ್ದು ನಮ್ಮಗಳ ಬೌದ್ದಿಕ ದಾರಿದ್ರ್ಯದ ಬಗ್ಗೆ.ಕೆಲವೆಲ್ಲ ಕ್ಯಾಸೆಟ್ ನಿರ್ಮಿಸಿದವರೇ ಪುನಃ ಸಿ.ಡಿ ರೂಪದಲ್ಲಿ ನಿರ್ಮಿಸಿ ಮಾಡುವುದು ಔಚಿತ್ಯಪೂರ್ಣವಾಗಿದ್ದರೂ ಇದರಲ್ಲಿ ವ್ಯಾಪಾರೀ ಬುದ್ದಿಯ ಚಾಣಾಕ್ಷತೆ ಇಲ್ಲದಿಲ್ಲ.
ಹಾಗಾಗಿ ಕುತೂಹಲ ಮೂಡಿ ಒಂದು ಸಿ.ಡಿ. ಯ ಬಗ್ಗೆ ಅದರ ಮುಖ್ಯ ಭಾಗವತ ಕಲಾವಿದರಲ್ಲಿ ಈ ಬಗ್ಗೆ ಕೇಳಿದಾಗ ಬಹಳ ಕಳವಳ ಉಂಟಾಯಿತು. ಅವರ ಆಕರ್ಷಕ ಭಾವಚಿತ್ರವನ್ನು ವಿನ್ಯಾಸಗೊಳಿಸಿ ಅ ದ್ವನಿ ಮುದ್ರಣವನ್ನು ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ತಳ್ಳಿದ್ದರು. ಅದರ ಬಗ್ಗೆ ಅವರಲ್ಲಿ ವಿಚಾರಿಸಿದೆ, “ ಇವುಗಳಲ್ಲಿ ನಿಮಗೆ ಎನಾದರೂ ಸಿಗುತ್ತಿದೆಯೆ?” ನಸುನಗುತ್ತ ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ಅವರು ಹೇಳಿದ್ದರು ಅದು ಪುನಹ ರಚನೆಗೊಂಡು ಮಾರುಕಟ್ಟೆಗೆ ಹಾಕಿದ್ದೇ ಅವರಿಗೆ ತಿಳಿದಿಲ್ಲ. ಒಂದು ಕಾಲದಲ್ಲಿ ಸ್ವ ನೈಪುಣ್ಯತೆಯಿಂದ ನೀಲಾಂಬರಿಯೋ ಸಾವೇರಿಯೋ ಹಾಕಿ ಆಲಾಪಿಸಿದ್ದು, ಹೊರಗೆ ಅವರ ಪೋಟೋವನ್ನೇ ತೋರಿಸಿ ಮಾರಾಟಕ್ಕಿಟ್ಟದ್ದು ಅಲ್ಲೇ ಒಳಗಿದ್ದ ಇವರ ಅರಿವಿಗೆ ಬಂದಿರಲಿಲ್ಲ. ಅದರ ಬಗ್ಗೆ ಅವರಿಗೆ ಆಸಕ್ತಿಯೂ ಇದ್ದಿರಲಾರದು. ಅದಕ್ಕೂ ಹಲವು ಕಾರಣಗಳೂ ಇರಬಹುದು. ಯಾವುದೋ ಕಾಲದಲ್ಲಿ ಮಾಡಿದ ಕ್ಯಾಸೆಟ್ ನ ಬಗ್ಗೆ ಸಂಭಾವನೆ ತೆಗೆದುಕೊಂಡು ನಿರ್ಮಾತೃಗಳು ಋಣಮುಕ್ತರಾಗಿರುತ್ತಾರೆ. ಹಾಗಾಗಿ ಸಭ್ಯತೆಯ ಕಲಾವಿದರೂ ಯಾರು ಆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದೂ ಇಲ್ಲ. ನಮ್ಮ ಯಕ್ಷಗಾನ ಕಲಾವಿದರು ಯಾರು ಆ ಬಗ್ಗೆ ವ್ಯವಹಾರ ಕುಶಲಿಗರಲ್ಲ. ಯಾವುದೋ ಬಗೆಯ ಕಲಾವಿದ ಕೇವಲ ತನ್ನ ಹಕ್ಕುಗಳಿಗಾಗಿ ಹಲವಾರು ಲಕ್ಷಗಳಷ್ಟು ತೆಗೆದುಕೊಂಡು ತೃಪ್ತಿಯಾಗದೆ ಮತ್ತೂ ನ್ಯಾಯಾಲಯದ ಕಟ್ಟೆ ಏರುವ ಪ್ರಮೇಯವನ್ನು ನೋಡುತ್ತೇವೆ. ಆಬಗೆಯಲ್ಲಿ ನೋಡುವಾಗ ಯಕ್ಷಗಾನ ಕಲಾವಿದರು ನಿಜಕ್ಕೂ ಹೃದಯವೈಶಾಲ್ಯರು. ಸೌಜನ್ಯತೆಗಾಗಿ ಒಂದು ವಾಕ್-ಮೂಲಕ ಅಪ್ಪಣೆಯಲ್ಲ ಭಿನ್ನವಿಸಿಕೊಂಡರೂ ಸಾಕಲ್ಲವೆ? ಸೌಜನ್ಯತೆ ಸೌಹಾರ್ದತೆಗೆ ವಿಶೇಷವಾಗಿ ಗುರುತಿಸಲ್ಪಡುವವರು ನಾವು. ಇಂದು ಇವುಗಳೆಲ್ಲ ವಾಸ್ತವದಲ್ಲಿ ಅಪರೂಪವಾಗಿಬಿಟ್ಟದ್ದು ಖೇದವನಿಸುವುದಿಲ್ಲವೆ?
ಕಿಸೆಯಲ್ಲಿ ದುಡ್ಡಿಲ್ಲದಾಗ ಯಕ್ಷಗಾನ ಆಟವಾಡಿಸುವ ಯಕ್ಷಗಾನ ಪ್ರೇಮದಂತೆ ಈ ಸೇವೆಯೂ ದಿಶೆಯಲ್ಲಿ ಸಾಗುವುದು ಬಹಳವಾಗಿ ನಿಟ್ಟುಸಿರಿಗೆ ಕಾರಣವಾಗಿಬಿಡುತ್ತದೆ. ಇಂದು ಕಲಾ ಸೇವೆಯ ಮುಖದಲ್ಲಿ ಇದನ್ನು ಧನಾದಾಯದ ಮೂಲವಾಗಿ ಸಿ. ಡಿ. ನಿರ್ಮಿಸುವುದೋ ಇಲ್ಲ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸುವುದನ್ನು ಕಂಡಾಗ ಎಲ್ಲವೂ ಬಹುಕೃತವೇಶಂನಂತೆ ತೋರಿಬಿಡುತ್ತದೆ.ಇದರ ನಡುವೆ ನಿಸ್ವಾರ್ಥವಾಗಿರುವ ನಿಷ್ಕಾಮ ಕರ್ಮಿಗಳ ಶ್ರಮ ವಿಡಂಬನೆಯ ವಸ್ತುವಾಗಿ ಭ್ರಮಿಸುವಂತಾಗುತ್ತದೆ. 1970-80 ರ ದಶಕದಲ್ಲಿ ಯಕ್ಷಗಾನ ಮೇಳಗಲ ಪರ್ವಕಾಲ. ಹೆಚ್ಚಿನ ಎಲ್ಲಾ ವ್ಯವಸಾಯೀ ಮೇಳಗಳು ವ್ಯಾಪಾರಿ ದೃಷ್ಟಿಯಲ್ಲಿ ಡೇರೆಯ ಒಳಗೆ ನುಸುಳಿಕೊಂಡವು ಮತ್ತು ಅದರಲ್ಲೆ ಚೆನ್ನಾಗಿ ದುಡಿದವು ಎನ್ನಬಹುದು. ಆವಾಗ ಅದು ವಿಮರ್ಷೆಗೆ ಒಳಗಾದರೂ ಗಂಬೀರವಾಗಿ ಪರಿಗಣಿಸಲ್ಪಡಿಲಿಲ್ಲ. ಯಕ್ಷಗಾನಕ್ಕೆ ಸಂಬಂದಿಸಿದಂತೆ ಆಗಿನ ಕಾಲ, ಈಗ ಅದೇ ಅಗಿ ಉಳಿದಿಲ್ಲ. ದುಡ್ಡು ತೆತ್ತು ಬಿಡಿ ಪುಕ್ಕಟೆಯಾದರು ಪ್ರೇಕ್ಷಕರ ಕೊರತೆ ಬಹಳಷ್ಟಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಕೈ ಖಾಲಿಯಾದಾಗ ಹಣಗಳಿಕೆಯ ಸಾಧನವಾಗಿ ಯಕ್ಷಗಾನ ಕಾರ್ಯಕ್ರಮ ಮಾಡಿದಂತೆ ಈ ಧ್ವನಿ ಮುದ್ರಣದ ಸಿ. ಡಿ. ಅವಿಷ್ಕಾರವು ವಿಪರೀತದ ಹಂತ ತಲುಪಿದೆ. ಅದು ನಮ್ಮ ಕಲಾವಿದರ ಗಂಟಲದ್ವನಿಯಾಗಲಿ ಕೈಬಡಿತದ ಶ್ರಮವಾಗಲೀ ಬೆವರು ಸುರಿಸಿದ ಕುಣಿತವಾಗಲಿ.. ಅದನ್ನು ಉಪಯೋಗಿಸಿ ಅದರ ಮೂಲಕ ಬಂದ ಹಣ ಇನ್ನಾವುದೋ ಉದ್ದೇಶಕ್ಕೆ ವಿನಿಯೋಗವಾಗುವುದು ಸರಿಯೇ? ಹೊಟ್ಟೇ ಪಾಡಿಕೆ ಒಬ್ಬ ಬಡ ಕಲಾವಿದ ಇದನ್ನು ಮಾಡಿದರೆ ಸಂದರ್ಭಾನುಸಾರ ಕ್ಷಮಾರ್ಹ ಎಂದೆನಿಸಿದರೂ ಅದು ಸಾರ್ವತ್ರಿಕವಾಗಬಾರದಲ್ಲ? ಮೊದಲು ನಿರ್ಮಿಸಿದವುಗಳನ್ನೆ ಬೇರೆ ಇನ್ನಾವುದೋ ಹೆಸರಿಟ್ಟು ಒಂದುವಿಧದ ನಕಲಿಯನ್ನೇ ಹೊಸತಾಗಿ ಭ್ರಮಿಸುವಂತೆ ಮಾಡುವ ಉದ್ದೇಶವಾರೂ ಏನು? ಕೇವಲ ವಿತ್ತಾಕರ್ಷಣೆಯಲ್ಲವೆ? ಯಾವುದೋ ಒಂದು ಕಾಲದಲ್ಲಿ ನಾವೆಲ್ಲ ಮಿತ್ರರು ಆಸಕ್ತರು ಪರಸ್ಪರ ಹಂಚಿಕೊಂಡ ಯಕ್ಷಗಾನ ಪದಗಳು ಸಿ. ಡಿ. ರೂಪದಲ್ಲಿ ಬಂದಾಗ ಮನುಷ್ಯನ ದುರಾಸೆಗೆ ದಿಗಿಲಾಗುತ್ತದೆ. ಮೊದಲೆಲ್ಲ ಯಕ್ಷಗಾನ ಕ್ಯಾಸೆಟ್ ಹೊರತರಬೇಕಿದ್ದರೆ ಸ್ವಲ್ಪ ಮೂಲಧನ ಹಾಗೂ ಅಪಾರ ಶ್ರಮ ಸಮಯ ವ್ಯಯ ಮಾಡಬೆಕಿತ್ತು. ಕಲಾವಿದರ ಸಾಮಾರ್ಥ್ಯ ಒರೆಗೆ ಹಚ್ಚಿ ಅದನ್ನೆ ಭಂಡವಾಳದಂತೆ ಬಳಸಬೇಕಾಗುತ್ತಿತ್ತು. ಈಗೀಗ ತಂತ್ರಜ್ಞಾನ ಬದಲಾದಂತೆ ಎಲ್ಲವು ಸುಲಭವಾಗಿದೆ. ನಕಲಿ ಮಾಡುವುದಾಗಲಿ ಆ ಮೂಲಕ ಲಜ್ಜೆಯಿಲ್ಲದ ಅಮಾನವೀಯ ಪ್ರವೃತ್ತಿಯನ್ನು ತೋರಿಸುವುದಾಗಲೀ ಒಂದು ರೀತಿಯ ಪತನವನ್ನೇ ಉತ್ಥಾನವೆಂದು ತೋರಿಸುವುದು ನಮ್ಮ ಸಾಂಸ್ಕೃತಿಕ ದಾರಿದ್ರ್ಯದ ಸಂಕೇತ. ಯಾವ ಕಲೆ ನಮ್ಮ ಮನಸ್ಸಿನ ಚೇತನಕ್ಕೆ , ಭಾವಶುದ್ದಿಗೆ ಜ್ಞಾನವೃದ್ದಿಗೆ ಅಥವ ಇನ್ನಾವುದೋ ಸತ್ಕರ್ಮಗಳ ಪ್ರೇರಣೆಗೋ ಕಾರಣವಾದ ಕಲೆ, ಜನನಿಯ ಸ್ಥಾನದಲಿ ಸ್ತನ್ಯ ಪಾನ ಸಮಾನವನ್ನು ಕೊಡಬಲ್ಲ ಕಲೆಯನ್ನು ಕೇವಲ ಕ್ಷುಲ್ಲಕ ಸ್ವಾರ್ಥ ಸಾಧನೆಗೆ ಬಳಸುವುದು ಜನನಿಯನ್ನೆ ಅಡವಿಟ್ಟು ಜೂಜಾಡಿದಂತೆ ಅಲ್ಲವೆ? ಪ್ರತೀಯೊಂದರಲ್ಲೂ ಹಣ ಅಥವಾ ಅದಾಯದ ಮೂಲವನ್ನಾಗಿ ಬಿಂಬಿಸುವುದು ಅಕ್ಷಮ್ಯವೆಂದೇಕೆ ಅನ್ನಿಸುವುದಿಲ್ಲ? ಇಂತಹ ಸ್ವಾರ್ಧಿಗಳ ನಡುವೆ ನಿಜ ಆಸ್ವಾದಕ ಸತ್ವಪರೀಕ್ಷೆಗೆ ಗುರಿಯಾಗುತ್ತ ಪರಿತಪಿಸಬೇಕೆ? ಒಟ್ಟಿನಲ್ಲಿ ಈ ಕಲೆಯನ್ನು ಇವರು ಕಾಣುವ ದೃಷ್ಟಿಕೋನ ಸುಸ್ಪಷ್ಟ ಅದು ಬದಲಾಗಬೇಕಿದೆ.
.
No comments:
Post a Comment