ಭಗವಂತನಿಗೂ ಭಾಗವತನಿಗೂ ಮೇಲ್ನೋಟಕ್ಕೆ ಕಾಣುವ ಒಂದು ವೆತ್ಯಾಸ ಶೂನ್ಯ, ಇದರ ಅರ್ಥ ಇಬ್ಬರಲ್ಲೂ ವೆತ್ಯಾಸವೇ ಇಲ್ಲ. ಅದು ಶೂನ್ಯ ಎಂತಲೂ, ಬರಣಿಗೆಯಲ್ಲಿ ಅಥವಾ ಉಚ್ಚಾರದಲ್ಲಿ ಭಗವಂತನಲ್ಲಿರುವ ಶೂನ್ಯ ಬೇರ್ಪಡಿಸಿದರೆ ಅದು ಭಗವತ ಅಥವಾ ಭಾಗವತ. ಭಗವಂತ ಸರ್ವಾಂತರ್ಯಾಮಿ. ಎಲ್ಲೆಲ್ಲೂ ಅವನ ಅಸ್ತಿತ್ವವಿದೆ. ಹಾಗಾದರೆ ಶೂನ್ಯದಲ್ಲೂ ಅಸ್ತಿತ್ವ ಗುರುತಿಸಬಹುದಾದಲ್ಲಿ ಶೂನ್ಯದಿಂದ ಭಗವಂತನನ್ನು ಬೇರ್ಪಡಿಸಬೇಕು. ಅದನ್ನು ಹೀಗೆ ವಿಶ್ಲೇಷಣೆ ಮಾಡಿದರೆ ಶೂನ್ಯದಲ್ಲಿರುವ ಭಗವಂತನನ್ನು ಹೊರತೆಗೆದು ಅಂದರೆ ಭಗವಂತನ ದರ್ಶನವನ್ನು ಮಾಡಿಸುವ ಕಾರ್ಯ ಭಾಗವತನದ್ದು. ಈ ಶಭ್ದ ಮೌಲ್ಯ ತುಲನೆಯನ್ನು ಹಲವಾರು ವಿದ್ವಾಂಸರು ಮಾಡುತ್ತಾ ಭಾಗವತ ಎಂಬ ಪದಕ್ಕೆ ಅನ್ವರ್ಥವನ್ನು ಯಕ್ಷಗಾನದಲ್ಲಿ ಕಂಡುಕೊಂಡ ಹಾಗೆ ಗ್ರಹಿಕೆಯಾಗುತ್ತದೆ. ಹೀಗಿರುವಾಗ ಭಾಗವತನ ಜವಾಬ್ದಾರಿ ಅತ್ಯಂತ ಗಂಭೀರವಾದದ್ದು ಮತ್ತು ಗುರುತರವಾದದ್ದು.ಶೂನ್ಯ ಎಲ್ಲಿದೆಯೋ ಅಲ್ಲಿ ಭಾಗವತನನ್ನು ಬರಿಸಿದರೆ ಅಲ್ಲಿ ಭಗವಂತನ ದರ್ಶನವಾಗುತ್ತದೆ. ಎಷ್ಟು ಸುಂದರ ಕಲ್ಪನೆ.!!
ಯಕ್ಷಗಾನದಲ್ಲಿ ಆದ್ಯ ಸ್ಥಾನ ನೀಡುವ ಮೂಲಕ ಭಾಗವತ ಶಬ್ದ ಮತ್ತು ಸ್ಥಾನ ಮಹತ್ವದ ಅರ್ಥ ಕಲ್ಪಿಸಲಾಗಿದೆ. ಭಾಗವತ ಎಂಬ ಶಬ್ದಕ್ಕೆ ಭಗವತ್ ಭಕ್ತ ಅರ್ಥವಿದ್ದರೆ ಗಾಯಕ ಎಂಬ ಅರ್ಥವೂ ಇದೆ. ಹಾಗಾಗಿ ಯಕ್ಷಗಾನದಲ್ಲೂ ಗಾಯನವೇ ಪ್ರಧಾನವಾಗಿರುವ ಸ್ಥಾನಕ್ಕೆ ಭಾಗವತ ಎಂಬ ಶಬ್ದ ಬಳಕೆಗೆ ಬಂದುದಿರಬಹುದು. ಯಕ್ಷಗಾನದಲ್ಲಿ ಅನಾದಿಕಾಲದಿಂದಲೂ ಭಾಗವತರಿಗೆ ಪರಮೋಚ್ಚ ಸ್ಥಾನ. ಯಕ್ಷಗಾನದ ಪ್ರತಿಯೊಂದು ವಿಭಾಗದಲ್ಲೂ ಪರಿಣತಿ ಮತ್ತು ಅಪಾರವಾದ ಜ್ಞಾನ ಅನುಭವ ಪಡೆದಾಗಲೇ ಈ ಪದವಿ ಪ್ರಾಪ್ತಿಯಾಗುವುದು.
ಯಕ್ಷಗಾನದಲ್ಲಿ ಭಾಗವತ ಸ್ಥಾನ ಅತ್ಯಂತ ಗೌರವಯುತವಾದುದು. ಭಾಗವತರ ನಿಲುಮೆಯೇ ಅಂತಿಮ. ಆ ಸ್ಥಾನಕ್ಕೆ ತಕ್ಕುದಾದ ನ್ಯಾಯ ಒದಗಿಸಲು ಭಾಗವತರು ಬಹಳ ನಿಷ್ಠೂರವಾಗಿಯೂ ಇರಬೇಕಾಗುತ್ತದೆ. ಭಾಗವತರು ನಿಷ್ಠೂರವಾಗಿ ನಡೆದುಕೊಂಡ ಹಲವು ಉದಾಹರಣೆಗಳು ಕಥೆಗಳು ಯಕ್ಷಗಾನದಲ್ಲಿ ಭಾಗವತ ಎಷ್ಟು ಪ್ರಧಾನವಾಗುತ್ತಾರೆ ಎಂಬುದಕ್ಕೆ ನಿದರ್ಶನವಾಗಿದೆ. ಬಹಳ ಹಿಂದೆ ಮಂಗಳೂರಿನ ಉರ್ವಸ್ಟೋರಿನಲ್ಲಿನ ಕಟೀಲು ಮೇಳದ ಹರಕೆ ಆಟ. ಹರಕೆ ಸಲ್ಲಿಸುವರು ದೇವಿಯ ಪರಮ ಭಕ್ತರು. ಅತ್ಯಂತ ಅನುಕೂಲವಂತರೂ ಸಾರ್ವಜನಿಕವಾಗಿ ಗಣ್ಯವ್ಯಕ್ತಿಗಳೂ ಆಗಿದ್ದರು. ಅಂದು ಆಟ ನಡೆಯುತ್ತಿತ್ತು. ವಾಡಿಕೆಯಂತೆ ದೇವಿ ಮಹಾತ್ಮೆ ಪ್ರಸಂಗ. ಬಹಳ ಅದ್ಧೂರಿಯಾಗಿ ನಡೆಯುತ್ತಿದ್ದ ಪ್ರದರ್ಶನ. ಅಸಂಖ್ಯ ಸಂಖ್ಯೆಯಲ್ಲಿ ನೆರೆದ ಪ್ರೇಕ್ಷಕರು. ಸೇವೆ ಸಲ್ಲಿಸುವ ಗಣ್ಯವ್ಯಕ್ತಿಗಳಿಗೆ ದೇವಿ ಭಕ್ತಿ ಅವೇಶ ಮನಸ್ಸಿನಲ್ಲಿ ಮೂಡಿತು. ಹಾಗಾಗಿ ದೇವಿ ಪ್ರತ್ಯಕ್ಷವಾಗುವ ಸಂದರ್ಭವೊಂದರಲ್ಲಿ ಹೂವಿನ ಮಾಲೆಯೋ ನೋಟಿನ ಮಾಲೆಯೊ ಜ್ಞಾಪಕವಿಲ್ಲ, ದೇವಿಯ ಕೊರಳಿಗೆ ಹಾಕುವುದಕ್ಕಾಗಿ ವೇದಿಕೆಗೆ ಪ್ರವೇಶಿಸುವವರಿದ್ದರು. ಆದರೆ ಅಂದು ಭಾಗವತರು ನಿಷ್ಠೂರವಾಗಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಭಾಗವತನಿಗೆ ಮೊದಲು ಗೌರವ ಸಲ್ಲಿಸಿ ಆಮೇಲೆ ವೇಶಕ್ಕೆ ಗೌರವ ಸಲ್ಲಿಸಿ. ರಂಗಸ್ಥಳದಲ್ಲಿ ಪಾತ್ರ ಯಾವುದಾದರೂ ಭಾಗವತನೇ ದೊಡ್ಡವ ಎಂದು ಬಿಟ್ಟರು.
ಯಕ್ಷಗಾನ ತಾಳಮದ್ದಲೆಯಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ. ಹಿರಿಯ ಭಾಗವತರೊಬ್ಬರು ಮೊದಲೆ ಕಾರ್ಯಕ್ರಮದ ಸ್ಥಳದಲ್ಲಿದ್ದರು. ನಂತರ ಬಂದ ಆದಿನದ ಪ್ರಸಿದ್ದ ಅರ್ಥಧಾರಿಗಳೊಬ್ಬರು ಬಂದವರೇ ಹಿರಿಯ ಭಾಗವತರನ್ನು ತಮ್ಮ ಬಳಿಗೆ ಬರುವಂತೆ ಕರೆ ಕಳುಹಿದರು. ಸ್ವಭಾವತಹ ಸಾಧುವಾದರೂ ರಂಗದ ಮೇಲೆ ನಿರ್ದಾಕ್ಷಿಣ್ಯವಾಗಿ ವರ್ತಿಸುವ ಸ್ವಭಾವದ ಭಾಗವತರು..” ಅವರೇ ನಾನಿದ್ದಲ್ಲಿಗೆ ಬರಲಿ. ಇವತ್ತಿನ ಕಾರ್ಯಕ್ರಮಕ್ಕೆ ನಾನೇ ಭಾಗವತ. ಯಾರೇ ಆದರೂ ನಾನಿದ್ದಲ್ಲಿಗೇ ಬರಲಿ.” ಎಂದು ಬಿಟ್ಟು ಭಾಗವತ ಸ್ಥಾನದ ಹಿರಿಮೆಯನ್ನು ತೋರಿಸಿಕೊಟ್ಟರು.
ಇತ್ತೀಚೆಗೆ ಹಲವು ಕಡೆ ಭಾಗವತರ ಶ್ರಮ ಕಡಿಮೆ ಮಾಡುವುದಕ್ಕೋ ಅಥವ ಭಾಗವತ ಕಾರ್ಯವ್ಯಾಪ್ತಿಯನ್ನು ಕುಂಠಿತಗೊಳಿಸುವುದನ್ನು ಕಾಣಬಹುದು. ಅದರ ಸ್ವರೂಪವೇ ನಿರ್ದೇಶಕ ಎಂಬ ಸ್ವತಂತ್ರ ಹುದ್ದೆಯ ಸೃಷ್ಟಿ. ಈ ಸಂದರ್ಭದಲ್ಲಿ ಭಾಗವತರು ಕೇವಲ ಸಾಮಾನ್ಯ ಅಂಗವಾಗಿ ಕೇವಲ ಹಾಡುವುದಷ್ಟಕ್ಕೇ ಸೀಮಿತವಾಗಿಬಿಡುತ್ತಾರೆ. ಯಾವ ರೀತಿಯಲ್ಲಿ ಹಾಡುವುದಕ್ಕೆ ಮಾತ್ರ ಸೀಮಿತ ಗೊಂಡರೂ ಭಾಗವತರಿಗೆ ಅನಿವಾರ್ಯ ಕರ್ಮಗಳು ಸುತ್ತಿಕೊಂಡು ಅವರು ಪರೋಕ್ಷವಾಗಿ ಪ್ರಧಾನವಾಗಿಯೇ ಬಿಡುತ್ತಾರೆ. ಇದು ಕೆಲವೊಂದು ಸಲ ಭಾಗವತರ ಸಾಮಾರ್ಥ್ಯವನ್ನು ತೋರಿಸಿಬಿಡುತ್ತದೆ. ನಿರ್ದೇಶಕನ ಪದವಿಯೇ ಗೌಣವಾಗುವ ಸಂದರ್ಭವೇ ಅಧಿಕ. ಯಕ್ಷಗಾನಕ್ಕೆ ಸಂಬಂಧಿಸಿ ಅಷ್ಟೊಂದು ತಾದಾತ್ಮ್ಯ ಸಂಬಂಧ ಮತ್ತು ಸ್ಥಾನ ಭಾಗವವತರದ್ದು. ಭಾಗವತ ಸ್ಥಾನದ ಗೌರವವನ್ನು ಭಾಗವತರು ರಕ್ಷಿಸುವುದು ಎಷ್ಟು ಅನಿವಾರ್ಯವೋ ಅಷ್ಟೇ ಅನಿವಾರ್ಯತೆ ಪ್ರತಿಯೊಂದು ಅಂಗಗಳಿವೆ. ಹಿಮ್ಮೇಳದ ಸಹಕಲಾವಿದರಾಗಲೀ, ವೇಶಧಾರಿಗಳಾಗಲೀ ಆ ಸ್ಥಾನವನ್ನು ಗೌರವಿಸುವುದು ಅನಿವಾರ್ಯ ಮಾತ್ರವಲ್ಲ ಅದು ಪ್ರಮಾಣರೂಪವು ಹೌದು. ಯಾರು ಹೇಗೆ ಸ್ವತಂತ್ರ ಪ್ರವೃತ್ತರಾದರು, ಇನ್ನಿತರರು ಬಾಲ ಬಿಚ್ಚಿದಂತೆ ಭಾಸವಾದರೂ ಯಾವುದಾದರೂ ಮುಖ್ಯ ಹಂತದಲ್ಲಿ ಬಾಲದ ತುದಿ ಭಾಗವತರ ಕೈಯಲ್ಲೇ ಇರುತ್ತದೆ. ಇದು ಸರ್ವ ವಿದಿತ. ಅದುವೇ ಯಕ್ಷಗಾನದ ವೈಶಿಷ್ಟ್ಯ. ಇದನ್ನು ಅರಿತಾಗಲೇ ಭಾಗವತರಿಗೆ ಭಾಗವತರ ಮೌಲ್ಯ ಅರಿವಾಗುವುದು. ನಿಜವಾದ ಪದವಿಗೌರವ ಲಭ್ಯವಾಗುವುದು. ಅದಕ್ಕಾಗಿ ಪ್ರತೀ ಕ್ಷಣ ರಂಗಸ್ಥಳವನ್ನೂ ಗಮನಿಸುತ್ತಾ ಇರಬೇಕು. ಭಾಗವತರು ರಂಗದ ಮೇಲೆ ಶಿಸ್ತಿನಿಂದ ಇದ್ದರೆ ಬಾಲವೂ ಶಿಸ್ತಿನಿಂದ ಇರಬೇಕಾದುದು ಅನಿವಾರ್ಯವಾಗಿಬಿಡುತ್ತದೆ. ಪದೇ ಪದೇ ಪಕ್ಕದವರತ್ತ ಮಾತನಾಡುವುದು, (ಇತ್ತೀಚೆಗಿನ ಅಸಹ್ಯವೆಂದರೆ ಮೊಬೈಲ್ ಬಳಸುವುದು) ಅಗಾಗ ಚೌಕಿಯತ್ತ ಎದ್ದು ಹೋಗಿ ಇಣುಕುವುದು , (ಮರಿ ಭಾಗವತರೆಂದು ಕರೆಸಿಕೊಳ್ಳುವುವರು ಇದನ್ನೂ ಅನುಕರಿಸಿಬಿಡುತ್ತಾರೆ...!!!) ಇದೆನ್ನೆಲ್ಲಾ ಅಶಿಸ್ತು ಎಂದು ಪರಿಗಣಿಸುವುದಕ್ಕೆ ಮಾಹಾಜ್ಞಾನದ ಅವಶ್ಯಕತೆ ಏನು ಬೇಕಾಗಿಲ್ಲ. ಯಕ್ಷಗಾನಕ್ಕೇ ತೀರ ಅಪರಿಚಿತನಾದವನೂ ಇದನ್ನು ಹೇಳಬಲ್ಲ.
ಭಾಗವತರಲ್ಲಿ ಕರ್ತವ್ಯ ಪ್ರಜ್ಞೆ ಹೇಗೆ ಸದಾ ಇರಬೇಕೋ ಅದರ ಅರಿವು ಸಹಕಲಾವಿದರಲ್ಲಿಯೂ ಇರಬೇಕು. ನಮ್ಮ ಮನೆಯ ಹಿರಿಯರನ್ನು ನಾವು ಗೌರವ ಪ್ರೀತಿಯಿಂದ ಕಂಡರೆ ಊರವರೂ ಕಾಣುವರು. ಗೌರವವನ್ನು ಉಳಿಸಿಕೊಳ್ಳುವುದು ಹಿರಿಯರಿಗೆ ಎಷ್ಟು ಅನಿವಾರ್ಯವೋ ಅದನ್ನು ಗಳಿಸಿಕೊಳ್ಳುವುದು ಅಷ್ಟೇ ಅನಿವಾರ್ಯ. ಈ ಅನಿವಾರ್ಯತೆ ಕೇವಲ ಹಿರಿಯರಿಗೆ ಸಂಬಂಧಿಸಿ ಮಾತ್ರ ಉಳಿಯುವುದಿಲ್ಲ ಕಿರಿಯರೆಲ್ಲರಿಗೂ ಇದು ಅನಿವಾರ್ಯವಾಗಿ ಬಿಡುತ್ತದೆ. ಇದು ಮಹತ್ವದ ಅರಿವೂ ಆಗಿರುತ್ತದೆ. ಭಾಗವತ ಪದವಿ ಅದು ಬರೀದೇ ಬರುವುದಲ್ಲ. ಬರಿದೇ ಬಂದರು ಅದು ಉಳಿಯುವುದೂ ಇಲ್ಲ. ಮಾತ್ರವಲ್ಲ ಅದನ್ನು ತಾಳಿಕೊಂಡು ನಿರ್ವಹಿಸುವ ಸಾಮಾರ್ಥ್ಯವೂ ಇರುವುದಿಲ್ಲ. ಬರೀದೆ ಎರಡು ಪದ ಹೇಳಿದಲ್ಲಿ ಭಾಗವತನೂ ಆಗಲಾರ. ಅದಕ್ಕೆ ಅವಿರತ ಶ್ರಮದಿಂದ ಸಾಧಿಸಿದ ಜ್ಞಾನವನ್ನು ನಿಧಿಯಾಗಿ ಹೊಂದಬೇಕು. ಅಥವಾ ಹೊಂದುವಲ್ಲಿ ಉದ್ಯುಕ್ತನಾಗಿ ಅದನ್ನು ಸಾಧಿಸುವ ಕಲಿಯುವ ಮನೋಭಾವವಾದರೂ ಇರಬೇಕು. ಹಾಗಿದ್ದರೆ ಮಾತ್ರ ಶೂನ್ಯದಲ್ಲಿ ಭಾಗವತನ್ನು ತಂದು ಭಗವಂತನನ್ನಾಗಿಸಬಹುದು.
No comments:
Post a Comment