"ಇದು ವಿಮರ್ಶೆಯಲ್ಲದ ಚಿಂತನ"

Sunday, April 15, 2012

ನಾದ ಬ್ರಹ್ಮನ ಸೆಳೆತ


ಸೆಳೆತವೆಂದರೆ ಹಾಗೆ. ಅದು ಆಕರ್ಷಿಸುತ್ತಾ ಹೋಗುತ್ತದೆ. ಬೇಡವೆಂದು ಔದಾಸಿನ್ಯ ತಾಳಿದರೂ ಮನಸ್ಸಿನ ಮೂಲೆಯಲ್ಲಿದ್ದ ಬಯಕೆ ತನ್ನ ನೆರಳನ್ನು ಕ್ರಮೇಣವಾಗಿ ವ್ಯಾಪಿಸುವಂತೆ ಮಾಡಿ ಮಿಕ್ಕೆಲ್ಲ ಯೋಚನೆಯನ್ನು ಮುಸುಕಿನೊಳಗೆ ಅಮರಿಸಿಬಿಡುತ್ತದೆ. ಆ ಸೆಳೆತವೆಂಬ ಮೋಹಿನಿಯ  ಬಾಹುಗಳು ವಿಶಾಲವಾದಂತೆ ಭಾಸವಾಗಿ ಬೇಡವೆಂದು ಇದ್ದ ಔದಾಸಿನ್ಯ ಜಡತ್ವ ಸೆಳೆತದ ಬಲಕ್ಕೆ ಪ್ರೇರಣೆಯನ್ನೆ ಒದಗಿಸುತ್ತದೆ. ಆ ಮೋಹಕ ಸೆಳೆತದ ಅನುಭವ ಒಂದಿಒಲ್ಲೊಂದು ಬಗೆಯಲ್ಲಿ ಬಾರದೆ ಇದ್ದವರು ಇರಲಾರರು.


 ಈ ಬಾರಿಯ ಎಡನೀರು ಮೇಳದ ಆಟಗಳತ್ತ  ಸೆಳೆತ ಮೊಳೆತದ್ದು ಆ ಬಗೆಯಲ್ಲಿ. ಬಿಡುವಿಲ್ಲದ ದಿನದ ಕೆಲಸಗಳ ಚಿಂತನೆಯಲ್ಲಿ ಯಾವುದೂ ಬೇಡ, ಒಂದು ಆಟ ನೋಡಿ ಅಷ್ಟಿಷ್ಟು ಸಂತೃಪ್ತವಾಗಿದ್ದ ಮನಸ್ಸಿನ ಆ ತೃಪ್ತಿ ಮರೆಯಾಗಿ ಸಾಯಂಕಾಲ ವಾಗುತ್ತಿದ್ದಂತೆ ಸೆಳೆತದ ಹಸಿವು ಜಾಸ್ತಿಯಾಗಿ  ಮನಸ್ಸಿನ ತುಂಬ ವ್ಯಾಪಿಸುತ್ತ ಮತ್ತದರ ಕಡೆಗೆ ಮುಖಮಾಡುವಂತೆ ಮಾಡಿದ್ದು ವಿಚಿತ್ರ.  ಸಮಯ ಮೀರಿದಂತೆ ಔದಾಸಿನ್ಯ  ಕಡಿಮೆಯಾಗಿ ಚಿತ್ತ ಅತ್ತ ಕಡೆಯೇ ಸೆಳೆದುಬಿಟ್ಟಿತಲ್ಲ? ಒಂದು ಆಟ ನೋಡಿ ಈ ಬಾರಿಗೆ ಇಷ್ಟು ಸಾಕು ಎಂದು ಬಲವಂತವಾಗಿ ಅದುಮಿ ಹಿಡಿದ ಮನಸ್ಸು ಸಾಯಂಕಾಲವಾಗುತ್ತಿದ್ದಂತೆ ಮೆಲ್ಲಗೆ ಆ ಸೆಳೆತ ಸುಳಿಗೆ ಇಣುಕಿ ನೋಡ ಹತ್ತಿತು. ಇಂದು ಯಾವ ಪ್ರಸಂಗ, ಅದು ಹೇಗೆ ಇರಬಹುದು? ಹೀಗೆ ಮಂಡಿಗೆಯ ರುಚಿಯನ್ನು ಸವಿಯತೊಡಗಿತು.


ಇಷ್ಟಕ್ಕೂ ಅಂತಹ ಸೆಳೆತ ಉಂಟಾದ ಕಾರಣವಾದರೂ ಏನು? ಒಂದೆರಡಲ್ಲ ಯೋಚಿಸುತ್ತ ಹೋದಂತೆ  ಹಲವಿದೆ ಅಂತ ನಂತರ ಹೊಳೆದದ್ದು. ಕಳೆದ ಒಂದೆರಡು ಬಾರಿ ಮೇಳದ ಆಟವನ್ನು ನೋಡುವುದು ಸಾಧ್ಯವಾಗಲಿಲ್ಲ. ಆದೇನು ವಿಶೇಷವಲ್ಲ. ಆದರೆ  ಕೊನೆಯದಾಗಿ ನೋಡಿದ ಕೋರಮಂಗಲದ ಎಡನೀರು ಮೇಳದ ಆಟದ ನೆನಪು ಮಾತ್ರ ಮತ್ತು ಮತ್ತು ಮರುಕಳಿಸಿದ್ದು ಸುಳ್ಳಲ್ಲ. ಎರಡು ವರ್ಷದ ಹಿಂದೆ ಇದೇ ರಂಗಸ್ಥಳದಲ್ಲಿ ಮಹಾನ್ ಚೆಂಡೆ ಮದ್ದಲೆ ವಾದಕರಾದ ಚಿಪ್ಪಾರು ಬಲ್ಲಾಳರನ್ನು ಕೊನೆಯದಾಗಿ ನೊಡಿದ್ದ ನೆನಪು ರಂಗ ಸ್ಥಳದ ಮೂಲೆಯನ್ನು ನೋಡುತ್ತಿದ್ದಂತೆ ಮರುಕಳಿಸಿತು. ಕೇವಲ ಅಷ್ಟಕ್ಕೇ ಆ ಪ್ರೇರಣೆ ಉಂಟಾದದ್ದಲ್ಲ. ಅದಕ್ಕೆ ಆದಿನದ ಆ ಯುವಕಲಾವಿದರ ಮದ್ದಲೆ ವಾದನವೂ ಸ್ವಲ್ಪ ಪ್ರೇರಣೆಯಾಗಿತ್ತು. ಯುವ ಕಲಾವಿದರಾದ ಕಡಬ ಶ್ರೀನಿವಾಸ ನಿಜಕ್ಕೂ ಪ್ರಭಾವ ಬೀರಿದರು.  ಅಮ್ಮಣ್ಣಾಯರ ಜತೆ ವಾದನದ ಸುಖವನ್ನು ತನ್ಮಯರಾಗಿ ಸ್ವತಃ ಅನುಭವಿಸುತ್ತ ಬಡಿಯುತ್ತಿದ್ದ ರೀತಿ ಬಹಳ ಪ್ರಭಾವ ಬೀರಿತು ಮಾತ್ರವಲ್ಲ, ನಂತರ ಮುಖತಃ ಭೇಟಿಯಾಗಿ ಆ ಬಗ್ಗೆ ಪ್ರಾಮಾಣಿಕ ಅಭಿನಂದನೆ ಸಲ್ಲಿಸಿದ್ದೆ.

ಅಂದು ಹಲವು ವಿಧದಲ್ಲಿ ಬಲ್ಲಾಳರ ನೆನಪು ಕಾಡಿತು. ೨೦೦೯ ರ ಎಪ್ರಿಲ್ ತಿಂಗಳ ಎಡನೀರು ಮೇಳದ ಪ್ರವಾಸ ಮರೆಯದ ನೆನಪನ್ನು ಆ ಬಗೆಯಲ್ಲಿ ತರುವಂತಾದದ್ದು ಮಾತ್ರ ವಿಷಾದನೀಯ. ಆ ನೆನಪಿನ ಸೆಲೆ ಎಂಬಂತೆ ಮೊನ್ನೆಯೂ ಮೇಳದ ಆಟವಾದಾಗ ಒತ್ತೊತ್ತಿದ ಬಲ್ಲಾಳರ ಛಾಪುಗಳು ಸ್ವರ ಎಬ್ಬಿಸಿ ಅವರ ಅಸ್ತಿತ್ವವನ್ನು ಅನುಮಾನಿಸುವಂತೆ ಮಾಡಿದವು. ನಿರ್ಲಿಪ್ತ ಭಾವದ ನಿಲುಮೆ ಕಣ್ಣಿಗೆ ಕಂಡರೆ  ಆ ರಾಜ ಗಾಂಭೀರ್ಯದ ಮೌನ ಹರಿದು  ಆವ್ಯಕ್ತ ಭಾವಗಳು ಮದ್ದಲೆಯಲ್ಲಿ ಮಾರ್ದನಿಗೊಳಿಸುವ ಬಲ್ಲಾಳ ಶೈಲಿ ಮರೆಯಲಾಗದೆ,  ಅರಿಯದ ಒಂದು ಸೆಳೆತ ಮನದ ಮೂಲೆಯಿಂದ ಆ ಕಡೆಗೇ ಸೆಳೆಯುತ್ತಿತ್ತು. ಮತ್ತೆ ಕನವರಕೆ ಕರಗಿ ವಾಸ್ತವಕ್ಕೆ ಬಂದಾಗ ವಿಷಾದದ ದುಮ್ಮಾನ ಮಾತ್ರ ವ್ಯಕ್ತವಾಗಿಬಿಟ್ಟಿತು. ಯಕ್ಷರಂಗ ಕಳೆದು ಕೊಂಡ ರತ್ನದ ಮೌಲ್ಯ ತುಲನೆ ಮಾಡುವುದು ಅಸಾಧ್ಯವಾದದ್ದು. ಆ ಚೆಂಡೆ ಮದ್ದಲೆಗಳ ಧ್ವನಿ ಮೊಳಗಿ ಮತ್ತೆ ಮೌನ ಆವರಿಸಿರಬಹುದು. ಆದರೆ ಅವುಗಳು ಹೃದಯದಲ್ಲಿ ಎಬ್ಬಿಸಿದ ಆ ನಾದ ತರಂಗದ ಅಲೆಗಳು ಇನ್ನೂ ಹೃದಯದ ಆವರಣಕ್ಕೆ ಮೆತ್ತಗೆ ತಟ್ಟುತ್ತಾ ಇದೆ. ಮರಯ ಬಹುದೇ ಆ ಪೆಟ್ಟುಗಳು? ಇನ್ನು ಆ ತರಂಗಗಳ ಹೊಸ ಉತ್ಪತ್ತಿಯಾಗಬಹುದೇ? ಇನ್ನು ಹಳೆಯ ದ್ವನಿ ಸಂಗ್ರಹದಿಂದ ಆ ಮಧುರ ಸ್ಮರಣಿಕೆಯನ್ನು ಮತ್ತೆ ಮತ್ತೆ ನನಪಿನ ಪೆಟ್ಟಿಗೆಯೊಳಗಿನಿಂದ ತೆಗೆದು ಹೃದಯಕ್ಕೆ ಅಲೆಗಳ ಕಂಪನಗಳನ್ನು ಸೋಕುವಂತೆ ಮಾಡುವುದು ಮಾತ್ರ ಸಾಧ್ಯ. ತಾಯಿ  ಜೋಗುಳದ ಕರತಟ್ಟುವಿಕೆಯ ಬಡಿತಕ್ಕೆ ಮುದುರಿ ಮಲಗಿದ ನಿದ್ರಿಸಿದ ಮಗು,  ಕರ ತಟ್ಟುವಿಕೆ ನಿಲ್ಲಿಸಿದಾಗ ಅರೆ ನಿದ್ರೆಯಲ್ಲಿ ಮಿಸುಕಾಡಿ ಪುನಃ ಆ ಬಡಿತವನ್ನು ಬಯಸುವಂತೆ ಬಲ್ಲಾಳರ ಕರಸ್ಪರ್ಶಕ್ಕೆ ಮಗುವಾಗುವ ಬಯಕೆ. ಆ ಮಟ್ಟಿಗೆ ತಬ್ಬಲಿಯಾದ ಅನುಭವ ಆದರೂ ತಬ್ಬಲಿ ಮನಸ್ಸು ಆ ಧ್ವನಿಯನ್ನೆ ತಬ್ಬಲಿ ಎಂದು ಮನಸ್ಸು ಹಂಬಲಿಸುತ್ತಿರುವುದು ಸುಳ್ಳಲ್ಲ. ಹಂಬಲಿಸಿದ ಮನಸ್ಸಿನ ಸೆಳೆತ ಏನೆಂದು ಅರಿವಾದದ್ದು  ಆನಂತರವವೇ.

ಇದೊಂದು ಬಗೆಯ ನೆನಪಾದರೆ ಎಡನೀರು ಮೇಳದ ಮದ್ದಲೆ ಎಂದರೆ ನೆನಪಾಗುವುದು ಪ್ರಭಾಕರ ಗೋರೆಯವರ ಮುಖ. ಇದು ಹಿಮ್ಮೇಳದ ಆ ಮೂಲೆಯನ್ನು ಅಲಂಕರಿಸಿ ಮನಸ್ಸಿಗೆ  ಒತ್ತಿದ ಅ ಮುದ್ರೆ ಅಚ್ಚಳಿಯದೆ ಇನ್ನೂ ಹಾಗೆ ಉಳಿದಿದೆ. ವೇದಿಕೆಯ ತುದಿಯಂಚಿನಿಂದ ಬರುವ ಧ್ವನಿ ತರಂಗಗಳು ಅಲ್ಲಿಂದ ಅಲೆಯೆಬ್ಬಿಸುವುದನ್ನು ನಿಲ್ಲಿಸಿದರೂ ಆ ನೆನಪಿನ ತರಂಗಗಳು ಇನ್ನೂ ಮಾಸಿಲ್ಲ. ಭಾಗವತರ ಗಾಯನಕ್ಕೆ ಹಿಂಬಾಲಿಸುತ್ತ ಸಾಗಿ ಭಾವತರು ಎಲ್ಲಿ ಅವಕಾಶ ನೀಡುತ್ತಾರೋ .. ಎಲ್ಲಿ ಬಿಡಿತವನ್ನು ನೀಡುತ್ತಾರೋ ಎಂದು ಕಾದು ಆ ಘಳಿಗೆಯಲ್ಲಿ ಮದ್ದಲೆಯ ಮುಖವನ್ನು ಕರದಿಂದ ಸ್ಪರ್ಶಿಸಿ ಬಿಡಿತವನ್ನು ಕಲಾತ್ಮಕ ಗೊಳಿಸುವ ಗೋರೆ ಶೈಲಿ ಮರೆಯಲಾಗದು. ಸ್ವಯಂಚಾಲಿತ ಯಂತ್ರದಂತೆ  ಭಾಗವತರ ಶ್ರುತಿಗೆ ಜತೆಯಾಗಿ ಔದಾಸಿನ್ಯ ಭಾವದಲ್ಲಿ ಬರಿದೇ ನೀಡುವ ಬಲವಾದ ಛಾಪಿನಲ್ಲೂ ಒಂದು ಕಲಾತ್ಮಕತೆ. ಅಲ್ಲಿ ಯಾರು ಬಡಿದರೇನಂತೆ ಅಂದು ನೆನಪಾಗಿ ಕಾಡಿ ಸೆಳೆದದ್ದು ಗೋರೆಯ ಮದ್ದಲೆಯ ನೆನಪುಗಳು. ಅವರು ವಿಶೇಷವಾಗಿ ಬಳಸುತ್ತಿದ್ದ ಆ ತಬಲದ ನೆನಪು. ಈಗ ಅನ್ನಿಸುವುದಿಲ್ಲವೇ ಆ ತಬಲ ಈಗ ಎಲ್ಲಿರಬಹುದು? ಹೇಗಿರಬಹುದು?


ಅಂದು ಯುವ ಮದ್ದಲೆವಾದಕ ಸೆಳೆದ ಪರಿಯೇ ಹಾಗೆ. ಕೆಲವೊಮ್ಮೆ ಅನ್ನಿಸಿದ್ದಿದೆ ಆ ಮೂಲೆಯಲ್ಲಿ ಯಾರು ಕುಳಿತು ಬಡಿದರೂ ಆ ಬಗೆಯ ನಾದ ಹೊರಡುವುದೇ?  ಅದು ಆ ಸ್ಥಾನದ ಮಹಿಮೆ. ಯುವ ಕಲಾವಿದರಲ್ಲಿ ವಿಚಾರಿಸಿದಾಗಲೂ ಇದೇ ಪ್ರತಿಕ್ರಿಯೆ. ನಿಜವಾಗಿ ಆ ಸ್ಥಾನ ವಿಶೇಷವಾದದ್ದು. ಯಾವ ಮದ್ದಲೆಗಾರನೂ ಅನುಭವಿಸಿ ಬಾರಿಸ ಬಹುದಾದ ಭಾಗವತಿಕೆ ಅಮ್ಮಣ್ಣಾಯರದು. ಮದ್ದಲೆಗಾರ ಸ್ವತಃ ತನ್ನೆಲ್ಲ ಕಸುವನ್ನು ತೋರಿಸಲು ಮುಕ್ತ ಅವಕಾಶ ಆಗ ಸಿಗುತ್ತದೆ. ಅತಿ ಬಲವಾದ ಪೆಟ್ಟುಗಳಂತೆ ಮೆತ್ತಗೆ ಸೂಕ್ಷ್ಮವಾಗಿ ಕೇಳುವ ಪೆಟ್ಟುಗಳಿಗೂ ಸಮಾನ ಅವಕಾಶ ಕೊಡುವುದು ಅಮ್ಮಣ್ಣಾಯರು ಮಾತ್ರ. ಅವರ ಜತೆ ಮದ್ದಲೆ ಬಾರಿಸುವುದನ್ನು ಕಲಾವಿದ ಸ್ವತಹ ಅನುಭವಿಸಿ ಸುಖಿಸಬಹುದು.  ಇದನ್ನು ಕೇಳಿದಾಗ ಗೋರೆ ಅಮ್ಮಣ್ಣಾಯ ಜತೆಗಾರಿಕ್  ಯಾಕೆ ಅಪ್ಯಾಯಮಾನ ವಾಗುತ್ತದೆ ಎಂದು ಅರಿವಾಗುತ್ತದೆ. ಸ್ವತಹ ಕಲಾವಿದನೇ ಸುಖಿಸುವಾಗ ಪ್ರೇಕ್ಷಕ ಆ ಸುಖದಲ್ಲಿ ಪಾಲುಗಾರನಾಗದೇ ಇರಲು ಸಾಧ್ಯವೇ?



ಒಂದೆಡೆ ಬಲ್ಲಾಳರು ಅಗಲಿದ ನೋವು ಇನ್ನೊಂದೆಡೆ ಬರಿ ನೆನಪು ಮಾತ್ರವೇ ಅಗಿ ಹೋದ ಗೋರೆ. ಈ ಸಲದ ಎಡನೀರು ಮೇಳದ ಆಟ ಆ ಬಗೆಯಲ್ಲೂ ಒಂದು ವಿಧದ ಸೆಳೆತವನ್ನು ಉಂಟು ಮಾಡಿದೇಯೇ ಎಂಬ ಅನುಮಾನ ಕಾಡುತ್ತಿದೆ. ಕಳೆದ ಬರವಣಿಗೆಯಲ್ಲಿ ಹೇಳಿದ್ದೆ  ಇನ್ನಿಲ್ಲವಾದ ಗೋರೆಯ ಸ್ಮೃತಿ ಮೌನದಲ್ಲಿ ಅಮ್ಮಣ್ಣಾಯರ ವಿಷಾದ ಭಾವ ಸ್ಪುರಿಸುತ್ತಿದೇಯೇ? ಅಲ್ಲವಾದಲ್ಲಿ  ಮನಸ್ಸನ್ನು ಆ ಬಗೆಯಲ್ಲಿ ಎಳೆದು  ಎಳೆದು ಕಟ್ಟಿ ಹಾಕುವ ಅನುಭವವಾದರೂ ಯಾಕೆ? ಇದು ಕೇವಲ ಅನಿಸಿಕೆಯೆ? ಅಮ್ಮಣ್ಣಾಯರ ಆ ಗಾನದ ಸೆಳೆತ,   ಛೇ ಈ ಬಾರಿ ಒಂದು ಆಟ ನೋಡಿ ಮತ್ತೊಂದಕ್ಕೆ ಸೆಳೆದ ಆ ಸೆಳೆತಕ್ಕೆ ಕಾರಣಗಳು,  ಹುಡುಕುತ್ತ ಹೋದಂತೆ ಹಲವು ಸಿಗುತ್ತವೆ. ಅಮ್ಮಣ್ಣಾಯರು ಯಕ್ಷಗಾನ ಕಲೆಗಾಗಿ ಮಾತ್ರವೇ ಸ್ವತಹ ಮೈದುಂಬಿದ ಕಲಾವಿದಾನಾಗಿ ಹಾಡುತ್ತಿದ್ದಾರೆ ಎಂದು ಭಾಸವಾಗುತ್ತಿದೆ. ಇಲ್ಲಿ ಯಾವುದೇ ಪ್ರತಿಫಲದ ಬಯಕೆ ಇದೆ ಎಂದು ಅನ್ನಿಸುವುದಿಲ್ಲ. ಈಗ ಅವರು ದಿವಸಕ್ಕೆ ಒಂದು ಕಾರ್ಯಕ್ರಮವನ್ನು ಮಾತ್ರವೇ ಒಪ್ಪುಕೊಳ್ಳುವುದು. ಅದರಲ್ಲಿ ಮೈದುಂಬಿ ಹಾಡುವುದು.  ಭಾವತುಂಬಿದ ಕಂಠದಿಂದ ರಾಗ ಭಾವಗಳು ಹೊರ ಹೊಮ್ಮುವ ಪರಿಯನ್ನೊಮ್ಮೆ  ಸ್ವತಃ ಅನುಭವಿಸಿದಾಗ ಅದು ಅರಿವಿಗೆ ಬರುತ್ತದೆ. ಸಮಯವಾಗುತ್ತಿದ್ದಂತೆ ದನದ ಕರು ಹಾಲಿಗಾಗಿ ಕರೆದಂತೆ ತನ್ನಮ್ಮ ಬಳಿಗೆ ಬಂದಾಗ ಅಮ್ಮನ ಕೆಚ್ಚಲಿಗೆ ಬಾಯಿ ಹಾಕಿದಂತೆ ಸಮಯವಾಗುತ್ತಿದ್ದಂತೆ ಆಗುವ ಆ ಸೆಳೆತದ ಅನುಭವ ಇಲ್ಲಿಯೂ ಅದದ್ದು ಯಾಕೋ? ಅದು ಈಗ ಸಹಜ ಎಂದು ತೋರುತ್ತದೆ. ಆ ಸೆಳೆತ ಅನುಭವಿಸ ಬೇಕಿದ್ದರೆ ಒಂದು ಸಲ ಮೇಳದ ಆಟ ನೋಡಿ. ಎಡನೀರು ಮೇಳ ಪುನಃ ಬರುತ್ತಿದೆ. ಅಮ್ಮಣ್ಣಾಯರು ಪುನಃ ಬರುತ್ತಿದ್ದಾರೆ. ಆ ಸೆಳೆತದ ಸುಳಿಯಲ್ಲಿ ಸಿಲುಕಲು ನಾವು ಪುನಃ ಕಾಯುತ್ತಿದ್ದೇವೆ. 

2 comments:

  1. Nice article Rajanna.. :) monne ada ondu atakkoo nange barlikke aaglilla.. :( Manassu tumba selitha iththu.. :( next time bandre atleast ondu aatavadroo nodbeku.. :)

    ReplyDelete
  2. haudu..nanoo may thingaLina eDaneeru meLada bengaLooru tirugaatakke kaayuttiddene :)

    ReplyDelete