"ಇದು ವಿಮರ್ಶೆಯಲ್ಲದ ಚಿಂತನ"

Saturday, May 12, 2012

ಪ್ರವೃತ್ತಿ ಮತ್ತು ನಿವೃತ್ತಿ

          ಪಾತ್ರಧಾರಣೆ ಮುಗಿಸಿ ರಂಗ ಬಿಟ್ಟು ಚೌಕಿ ಸೇರಿದಾಗ ತಿರುವಿ ತಿರುವಿ ಕುಣಿದು ಕುಣಿದು ಕುತ್ತು ಹಾರಿದ ಪರಿಣಾಮ, ಅಂಗಾಂಗಗದಲ್ಲೆಲ್ಲ ಉಸಿರ ಬಿಸಿಗೆ ಬಿಸಿಯಾದ ರಕ್ತ ಹರಿದಾಡಿ ಬೆವರಾಗಿ ಚರ್ಮಕ್ಕಂಟಿದ ಅನುಭವ. ಅವಸರವಸರವಾಗಿ ಧರಿಸಿದ ವೇಷದ ಉಡುಗೆಗಳನ್ನು ಕಿತ್ತೊಗೆಯುತ್ತಿರುವಾಗಲೂ ಕಿಕ್ಕಿರಿದ ಪ್ರೇಕ್ಷಕರ ಕರತಾಡನದ ಘೋ ಎಂಬ ಶಭ್ದದಲ್ಲಿ ಅಂತ್ಯವಾಗುವ ಸದ್ದಿಗೆ ದಣಿವಿನ ಅರಿವಾಗುವುದಿಲ್ಲ. ಅದು ಅರಿವಾಗಬೇಕಾದರೆ ಈ ಕಲಾವಾತಾವರಣದಿಂದ ಕ್ಷಣ ಹೊತ್ತಾದರೂ ದೂರವಾಗಬೇಕು. ಕಡಲ ಕಿನಾರೆಯಲ್ಲಿ ಬಹು ಹೊತ್ತು ನಡೆದಾಡಿ ಸಮುದ್ರ ಘೋಷದ ಸದ್ದನ್ನು ಮನಸ್ಸಿನಲ್ಲಿ ಮಾರ್ದನಿಸಿ ಕಿನಾರೆ ಬಿಟ್ಟು ದೂರ ಬಂದಾಗ ಅ ಧ್ವನಿ ತಂರಂಗಗಳು ಮನಸ್ಸಿನಲ್ಲಿ ಬಹು ಹೊತ್ತು ಶಭ್ದ ಮಾಡುತ್ತಿರುತ್ತವಂತೆ ಈ ಪ್ರೇಕ್ಷಕರ ಕರತಾಡನ. ರಂಗದ ಮೇಲೆ ಕುಣಿಯುತ್ತಿರಬೇಕಾದರೆ ಸಮುದ್ರದಲ್ಲಿ ಇಳಿದು ಸಮುದ್ರದ ಅಲೆಗಳೊಂದಿಗೆ ಚೆಲ್ಲಾಟವಾಡಿದ ಅನುಭವವಾದರೆ ಚೌಕಿಗೆ ಬಂದು ನಿಂತಾಗ ಸಮುದ್ರ ಬದಿಯಲ್ಲಿ ನಿಂತ ಅನುಭವ. ಈ ಪರಿಸರದಿಂದ ದೂರವಾಗಿ ಹೋದರೂ ಸಮುದ್ರ ಘರ್ಜನೆಯಂತೆ ಈ ಕರತಾಡನ ಮತ್ತೂ ಮತ್ತೂ ಮಾರ್ದನಿಸುತ್ತಿರುತ್ತದೆ. ಆಗ ಮುಷ್ಠಿಯೊಳಗಿದ್ದ ಸಂಭಾವನೆಗಿಂತ ಅತ್ಮದಲ್ಲಿ ತುಂಬಿದ ತೃಪ್ತಿಯೇ ಹಿರಿದಾಗುತ್ತದೆ. ದೈಹಿಕವಾದ ನೋವು ದಣಿವು ಎಲ್ಲವೂ ತೃಣಮಾತ್ರವಾದ ಅನುಭವ.

          ಬಹುಷಃ ಯಕ್ಷಗಾನದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬ ವೇಷಧಾರಿಯ ಅದರಲ್ಲೂ ಪುಂಡುವೇಷಧಾರಿಯ ಅನುಭವ ಇದಕ್ಕಿಂತ ಭಿನ್ನವಾಗಿರುವುದು ಅಸಾಧ್ಯ. ಬದುಕಿ ಜೀವನಕ್ಕೆ ಅನಿವಾರ್ಯವೋ ಅಥವಾ ಬದುಕಿನ ಅರ್ಥದ ಒಂದು ಪರಿಯೋ ಈ ರಂಗವನ್ನು ಅಂಟಿಸಿಕೊಂಡು ಅದರಲ್ಲಿ ಲೀನವಾದ ಬದುಕು ಮೆತ್ತನೆಯ ಪಲ್ಲಂಗವಾಗುವುದು ಸಾಧ್ಯವೇ ಇಲ್ಲ ಎಂಬ ಅನುಭವವಾಗಿರುವಾಗ, ವಾಸ್ತವದಲ್ಲಿ ಎಲ್ಲೆಂದರಲ್ಲಿ ಒರಗಿಕೊಂಡು ಸಮಯ ಕಳೆದು ನಂತರ ರಂಗಕ್ಕೆ ಸಜ್ಜಾಗುವ ನಡುವಿನ ಜೀವನದಲ್ಲಿ ಪಲ್ಲಂಗ ಎಂತಿದ್ದರೂ ಕನಸೇ ಸರಿ. ಮನೆ, ಕುಟುಂಬ, ಸಂಸಾರ ವಂಚಿತವಾದ ಜೀವನದ ಅಂಗಗಳು ಹಲವಾರು.ಆದರೂ ಕಲಾ ಜೀವನದ ಹಾದಿಯಲ್ಲಿ ಕಂಡ ನಿಲುಮೆ ಎಂತಹುದು ಎಂದು ಯೋಚಿಸುತ್ತ ಹೋದರೆ ಅದ್ಭುತ ಎನ್ನಿಸುತ್ತದೆ.



          ಆದರೂ ಇಲ್ಲಿ ಅಧೀರನಾಗುವ ಹಂತ ಎಂದರೆ ನಿವೃತ್ತಿ. ಸಹಜವಾಗಿ ಇದು ಮನುಷ್ಯ ಜೀವನದ ಒಂದು ಗತಿ, ಪ್ರವೃತ್ತಿ... ಪ್ರವೃತ್ತಿ ..ಹೀಗೆ ಒಂದು ಹಂತದ ಅತ್ಯುನ್ನತಿಗೆ ಏರಿದ ನಂತರ ಮತ್ತೆ ನಿವೃತ್ತಿ. ಕೆಲವೊಂದು ಸಲ ಸ್ವತಃ ಮನುಷ್ಯ ಇದನ್ನು ಅರಗಿಸಿಕೊಳ್ಳುವುದಕ್ಕೆ ಮತ್ತು ವಸ್ತುಸ್ಥಿತಿಯನ್ನು ಒಪ್ಪಿಕೊಳ್ಳುವುದಕ್ಕೆ ಕಷ್ಟಪಡುತ್ತಾನೆ. ಹೇಗಿದ್ದರೂ ಪ್ರಕೃತಿ ಮಾತ್ರ ಅದನ್ನು ಅನಿವಾರ್ಯವಾಗಿಸುತ್ತದೆ ಇದು ಪರಮ ಸತ್ಯ. ಮಾತ್ರವಲ್ಲ ಅದು ಪ್ರಕೃತಿ ಧರ್ಮವೂ ಹೌದು.ಕೇವಲ ವೈಯಕ್ತಿಕ ಬದುಕನ್ನು ಮಾತ್ರವೇ ಅವಲಂಬಿಸಿರುವವನಿಗೆ ಈ ನಿವೃತ್ತಿ ಎಂಬುದು ಕೇವಲ ವೈಯಕ್ತಿಕವಾಗಿ ಸೀಮಿತವಾಗಿದ್ದರೆ ಈ ಸಾರ್ವಜನಿಕ ಜೀವನವನ್ನು ಅವಲಂಬಿಸುವವರಿಗೆ ಹಾಗಲ್ಲ ಸಾರ್ವಜನಿಕವಾಗಿ ಒಂದನ್ನೊಂದು ಅವಲಂಬಿಸಿರುವಾಗ ಈ ನಿವೃತ್ತಿ ಎಂಬುದು ಹಲವು ಕಡೆ ಸಂಚಲನವನ್ನು ಉಂಟುಮಾಡುತ್ತದೆ. ವೈಯಕ್ತಿಕವಾದ ಚಿಂತನೆ ಅನಿಸಿಕೆ ಹೇಗೂ ಇರಲಿ ಆದರೆ, ಸಾರ್ವಜನಿಕ ಬದುಕು ಮತ್ತು ಆ ಪರಿಸರ ಪ್ರವೃತ್ತಿಯಿಂದ ಆಚೆಗಿನ ಬದುಕನ್ನು ಯೋಚಿಸುವುದಕ್ಕೆ ಬಿಡುವುದಿಲ್ಲ. ಆವಾಗ ವಸ್ತುಸ್ಥಿತಿಯನ್ನು ಸರಿಯಾಗಿ ಗ್ರಹಿಸಿ ಆ ಬಗೆಯಲ್ಲಿ ಪ್ರಾಮಾಣಿಕವಾಗಿ ನಡಕೊಂಡವನು ಪರಿಸ್ಥಿತಿಗೆ ಬೇಗನೇ ಹೊಂದಿಕೊಳ್ಳುತ್ತಾನೆ. ಇದನ್ನೇ ಅನಿವಾರ್ಯ ಎಂದು ಒಪ್ಪಿಕೊಳ್ಳುತ್ತಾನೆ. ನಿವೃತ್ತಿಯೆಂದರೆ ರೈಲು ಬಂಡಿಯಿಂದ ಭೋಗಿಯೊಂದನ್ನು ಕಳಚಿ ದೂರ ಇಟ್ಟ ಹಾಗೆ. ಅಲ್ಲಿಯ ತನಕ ಎಲ್ಲ ಭೋಗಿಯ ಜತೆ ಒಂದಾಗಿ ಚಲಿಸುತ್ತಿದ್ದ ಭೋಗಿಯೊಂದು ಕಳಚಿ ದೂರ ಇಟ್ಟಾಗ ಮಿಕ್ಕುಳಿದ ಭೋಗಿಗಳು ನಿಂತಿರಲು ಸಾಧ್ಯವೇ . ನಿಧಾನವಾಗಿ ತಮ್ಮ ಚಲನೆಯನ್ನು ಆರಂಭಿಸುತ್ತದೆ. ಆದರೆ ಹಳಿಯಿಂದ ಸರಿದು ನಿಲ್ಲುವ ಅನಿವಾರ್ಯತೆ ಪ್ರತಿಯೊಂದು ಭೋಗಿಗೂ ಇರುತ್ತದೆ. ಹಳಿಯಿಂದ ಸರಿದು ನಿಂತ ಭೋಗಿ ಉಳಿದ ಭೋಗಿಯ ಚಲನೆಯನ್ನಷ್ಟೇ ನೋಡಲು ಸಾಧ್ಯ.

           ಇದೆಲ್ಲ ಪ್ರಕೃತಿ ಸಹಜವಾಗಿ ನಡೆದು ಹೋದರೆ ಎಲ್ಲ ಅನಿವಾರ್ಯತೆ ಎಂದು ಒಪ್ಪಿಕೊಳ್ಳಬಹುದು. ವಯೋಮಾನಕ್ಕೆ ಅನುಗುಣವಾಗಿ ಮನಸ್ಥಿತಿಯು ಬದಲಾಗಿಬಿಡುತ್ತದೆ. ಆದರೆ ಇದು ಅನೀರೀಕ್ಷಿತವಾದಾಗ ಮಾತ್ರಾ ನಿಜ ಬದುಕನ್ನು ಒಪ್ಪಿಕೊಳ್ಳುವಲ್ಲಿ ಹೆಣಗಾಡಬೇಕಾಗುತ್ತದೆ.



          ಸಾರ್ವಜನಿಕ ಬದುಕನ್ನು ಅನುಭವಿಸುವ ಒಬ್ಬ ಕ್ರೀಡಾಳು ಇರಬಹುದು ಅಥವಾ ಕಲಾವಿದ ಇರಬಹುದು ಆತ ಅತನಿಗಾಗಿ ಮಾತ್ರ ಬದುಕುವುದಲ್ಲ. ಆತನ ಏರು ಪೇರು ಅವಲಂಬಿಸಿಕೊಂಡು ಸಾರ್ವಜನಿಕ ಪ್ರಪಂಚ ಇರುತ್ತದೆ. ಜೀವನದ ಗತಿಯನ್ನು ನಿರ್ಧರಿಸುವುದೇ ಈ ಪ್ರಪಂಚ. ಆದರೆ ಒಬ್ಬ ಕ್ರೀಡಾಳುವಿಗೆ ಆತನ ಕ್ರೀಡಾಜೀವನವನ್ನು ನಿರ್ವಶಿಸುವುದಕ್ಕೆ ಯುಕ್ತವಾಗುವಂತೆ ತರಬೇತುದಾರ ಒಬ್ಬ ಜತೆಗೇ ಇರುತ್ತಾನೆ. ದೈಹಿಕವಾಗಿ, ಮಾನಸಿಕವಾಗಿ, ಸಾಂಸಾರಿಕವಾಗಿ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಸಲಹೆ ಸೂಚನೆಗಳನ್ನಿತ್ತು ಆತನ ಕ್ರೀಡಾ ಜೀವನವನ್ನು ಸುಲಭವಾಗಿ ಮಾಡುವುದು ಮಾತ್ರವಲ್ಲ ಕ್ರೀಡಾ ಜೀವಿತದ ಅವಧಿಯನ್ನು ವಿಸ್ತರಿಸುವುದಕ್ಕು ಕಾರಣೀಭೂತನಾಗಿರುತ್ತಾನೆ. ಕ್ರೀಡಾಳುವಿನ ಸಂಪೂರ್ಣ ದಿನಚರಿಗೆ ಒಂದು ರೂಪು ರೇಷೇಯನ್ನು ಕೊಡುತ್ತಾ... ಆಟಗಾರ ಎಷ್ಟು ಹೊತ್ತು ಅಡಬಹುದು.. ಯಾವಾಗ ತರಬೇತಿ ತಾಲೀಮು ನಡೆಸಬಹುದು...ಯಾವುದು ಬದ್ಧ ಯಾವುದು ನಿಷಿದ್ದ..ಹೀಗೆ ಎಲ್ಲದರಲ್ಲು ಸಲಹೆ ಸೂಚನೆಯನ್ನು ಕೊಡುತ್ತ ಕ್ರೀಡಾಳು ಏಕಾಂಗಿ ಎಂಬ ಭಾವನೆ ಬಾರದಂತೆ ನೋಡಿಕೊಳ್ಳುತ್ತಾನೆ. ಕೆಲವೊಂದು ವಿಭಾಗದ ಕಲಾವಿದರೀಗೂ ಈ ಬಗೆಯ ಸೌಕರ್ಯಗಳಿರುತ್ತದೆ. ಈ ಬಗೆಯ ಯಾವುದೇ ಸೌಕರ್ಯಗಳಾಗಲೀ ತರಬೇತಿಯಾಗಲೀ ಆತನ ವಿದ್ಯಾರ್ಥಿ ಜೀವನದಲ್ಲಿ ಆವಶ್ಯಕವೆನಿಸುವುದಿಲ್ಲ. ಬದಲಾಗಿ ವೃತ್ತಿ ಜೀವನವಾಗಿ ಆ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಸ್ವತಂತ್ರನಾಗಿ ಪ್ರವೃತ್ತನಾದಾಗ ಇದು ಅವಶ್ಯವೆನಿಸಲ್ಪಡುತ್ತದೆ. ಶಿಕ್ಷಣ ಮತ್ತು ಶಿಸ್ತು ಬದ್ದ ಜೀವನ ಆಯಾಚಿತವಾಗಿ ರೂಢಿಗೆ ಬರುತ್ತದೆ.



          ಸಾಮಾನ್ಯವಾಗಿ ಎಲ್ಲಾ ಕಲಾವಿದರ ಜೀವನ ಬಹಳ ದುರ್ಭರವಾಗಿರುತ್ತದೆ. ಕಲೆಗೆ ಸಂಬಂಧಿಸಿ ಎಲ್ಲಾ ಸಾಮಾರ್ಥ್ಯಗಳಿದ್ದರೂ ವ್ಯವಹಾರ ಚಾತುರ್ಯ ಬೇಕಾದಷ್ಟಿರುವುದಿಲ್ಲ. ಯೋಜನಾಬದ್ಧವಾದ ಜೀವನ ಎಂದರೇನೆಂದೇ ಅರಿವಿಲ್ಲದಿರುವಾಗ ಕಲಾ ಜೀವನ ಕೇವಲ ಕಲಾ ಜೀವನವಾಗಿಯೇ ಉಳಿಯುತ್ತದೆ. ಕಲಾಸಾಧನೆಯೇ ಎಲ್ಲಕ್ಕಿಂತ ಹಿರಿದಾಗಿ ಕಂಡರು ಅದು ಕೇವಲ ತಾತ್ವಿಕ ಯಶಸ್ಸಾಗಿಯಷ್ಟೇ ಉಳಿಯುತ್ತದೆ. ನಿಜ ಜೀವನದ ವಾಸ್ತವಕ್ಕೆ ಇಳಿದಾಗ ಯಾವ ಸಾಧನೆಯತ್ತ ನೋಡಬೇಕು ಎಂಬುದೇ ಗೊಂದಲ. ರಂಗದ ಮೇಲೆ ದಿನಕ್ಕೊಂದು ಬಗೆಯಲ್ಲಿ ಕಲೆಯನ್ನು ಪ್ರದರ್ಶಿಸುವಾಗ ದೈಹಿಕ ಶ್ರಮ ಮತ್ತು ಸಮಯ ಹೀಗೆ ಸ್ವರ್ವಸ್ವವನ್ನೂ ವಿನಿಯೋಗಿಸಿದರೂ ಆದಿನದ ಪ್ರದರ್ಶನ ಆದಿನದ ಕಲಾಜೀವನಕ್ಕೆ ಮಾತ್ರ ಮೀಸಲಾಗಿರುತ್ತದೆ. ಅಂದರೆ ಕಳೆದು ಹೋದ ಅಂದಿನ ಪ್ರದರ್ಶನವನ್ನು ಪುನಃ ತೋರಿಸುವುದಕ್ಕಾಗುವುದಿಲ್ಲವಲ್ಲ. ಒಂದು ವೇಳೆ ತೋರಿಸಿದರೂ ಅದು ಜೀವಂತ ಪ್ರದರ್ಶನದ ಮಹತ್ವವನ್ನು ಉಳಿಸಿಕೊಂಡಿರುವುದಿಲ್ಲ. ಹೀಗಾಗಿ ಯಕ್ಷಗಾನದ ಒಂದು ದಿನದ ಪ್ರದರ್ಶನವಾದರೂ ಅದು ನಿತ್ಯ ನೂತನ ದರ್ಶನವೇ ಆಗಿರುತ್ತದೆ. ಒಂದೊಂದು ಪ್ರದರ್ಶನವೂ ಸಿನಿಮಾದಂತೆ ಕಂಪ್ಯೂಟರ್ ಕಾಪಿ ಯಾಗಿರದೆ ಪರಿಶ್ರಮದ ಕೈಬರಹದ ಹಾರ್ಡ್ ಕಾಪಿಯೇ ಆಗಿರುತ್ತದೆ. ಇದು ಕಲಾವಿದನ ಬದುಕಿನಲ್ಲೂ ಪರಿಣಾಮ ಬೀರುತ್ತದೆ. ಅದರಲ್ಲು ರಾತ್ರಿಯನ್ನು ಹಗಲಾಗಿಸುವ ಈ ಕಲಾಜೀವನ ಒಂದು ರೀತಿಯಲ್ಲಿ ಪ್ರಕೃತಿ ವಿಧಾನ ವಿರುದ್ದವಾಗಿರುತ್ತ ಒಟ್ಟಿನಲ್ಲಿ ಕಲಾವಿದನ ಜೀವನವನ್ನು ಆಯ್ಕೆ ಮಾಡಬೇಕಿದ್ದರೆ ಅತ್ಯಂತ ಕಲಾಬದ್ದತೆ ಅತ್ಯವಶ್ಯ. ಇಲ್ಲಿ ಪ್ರವೃತ್ತಿ ಯಾಗಲೀ ನಿವೃತ್ತಿಯಾಗಲೀ ತೀರ ಭಿನ್ನ. ಅದು ಅನಿರೀಕ್ಷೀತ ಸ್ಥಿತಿಯಾದಲ್ಲಿ ಜೀವನ ಕಲಿಸುವ ಪಾಠವನ್ನು ಕಲಿಯುವುದಕ್ಕೇ ಸಾಧ್ಯವಿಲ್ಲ.



           ಯಕ್ಷಗಾನದಲ್ಲಿ ವಯೋಮಾನದ ಪ್ರಭಾವ ಪಾತ್ರಗಳಲ್ಲಿ ಆಗುತ್ತಿದ್ದರು ಕೆಲವೊಮ್ಮೆ ಅದಕ್ಕೆ ವ್ಯತಿರಿಕ್ತವಾದುದು ಕಂಡುಬಾರದೆ ಇರುವುದಿಲ್ಲ. ಯಾರೂ ಯಾವುದೇ ಪಾತ್ರವನ್ನು ಮಾಡಲು ಸಾಧ್ಯವಿರುವ ಒಂದು ಕಲೆ. ವಯಸ್ಸಿನ ಭೇದವಿಲ್ಲದೇ ಯಾರೂ ಯಾವುದೇ ಬಗೆಯ ಪಾತ್ರ ಮಾಡಬಹುದಾದ ಒಂದು ಸ್ಠಿತ್ಯಂತರದ ವೈಶಿಷ್ಟ್ಯ ಈ ಕಲೆಯಲ್ಲಿದೆ. ಇದರ ವೇಷಗಾರಿಕೆ ವರ್ಣ ವೈವಿಧ್ಯತೆ ಇವುಗಳೆಲ್ಲದರಿಂದ ಅಸಲೀ ವೇಷದೊಳಗಿನ ವ್ಯಕ್ತಿ ಯಾರು ಎಂದು ಪತ್ತೆ ಹಚ್ಚುವುದು ಸುಲಭವಲ್ಲ. ಹಾಗಾಗಿ ವಯೋ ಮಾನಕ್ಕೆ ವ್ಯತಿರಿಕ್ತವಾಗಿ ಪಾತ್ರವನ್ನು ನಿಭಾಯಿಸುವುದು ಸರ್ವೇ ಸಾಮನ್ಯ. ಗಂಡು ನಿಜ ಹೆಣ್ಣಿಗಿಂತ ಚೆನ್ನಾಗಿ ಬಳುಕುತ್ತ ನರ್ತಿಸುವುದು,, ಅತಿ ಸೌಮ್ಯ ವ್ಯಕ್ತಿ ಭಯಂಕರ ರಕ್ಕಸನಾಗಿ ಅಬ್ಬರಿಸುವುದು,, ಇಲ್ಲಿ ದೇಹಕ್ಕೂ ವಯಸ್ಸಿಗೂ ಮಾಡುವ ವೇಷಕ್ಕೂ ಸಂಬಂಧವೇ ಇರುವುದಿಲ್ಲ. ತನ್ನ ಸಾಮಾರ್ಥ್ಯಕ್ಕನುಗುಣವಾಗಿ ವೇಷಧಾರಿ ರಂಗಸ್ಥಳ ಏರುತ್ತಾನೆ. ಅತ್ಯಂತ ಸಕ್ರಿಯನಾಗಿ ರಂಗದಲ್ಲಿ ವ್ಯಹರಿಸುವ ವ್ಯಕ್ತಿ ಒಮ್ಮಿಂದೊಮ್ಮೆಗೆ ಸಹಜ ಪ್ರವೃತ್ತಿಯಿಂದ ನಿವೃತ್ತನಾಗಿ ರಂಗದಿಂದ ದೂರ ಉಳಿಯುವಾಗ ಮಾತ್ರ ಎಲ್ಲ ಕಡೆ ಒಂದು ಶೂನ್ಯತೆ ಕವಿದ ಹಾಗೆ. ಕಲಾವಿದನ ಮನಸ್ಸು ಸಮುದ್ರದಡ ದಿಂದ ದೂರ ಬಂದು ನಿಂತ ಅನುಭವ. ಆ ಘೋಷ ಅದರ ರೋಮಾಂಚನದಲ್ಲಿ ವಾಸ್ತವಕ್ಕೆ ಹೊಂದಿಕೊಳ್ಳಲು ಬಹಳ ಮಾನಸಿಕ ಸ್ಥಿರತೆಯನ್ನು ತಂದುಕೊಳ್ಳಬೇಕಾಗುತ್ತದೆ.



           ಕಲಾವಿದ ತನ್ನ ಜೀವನವನ್ನು ಯೋಜನಾಬದ್ದವಾಗಿ ರೂಪಿಸಿಕೊಳ್ಳುವಲ್ಲಿ ವ್ಯವಹಾರ ಕುಶಲಿಯಾಗದೇ ಇರುವುದೇ ಕೆಲವೊಂದು ಸಲ ಕಾರಣವೇ ಅಂತ ಅನ್ನಿಸುವುದುಂಟು. ಮಿತಿಮೀರಿದ ಪ್ರೇರೇಪಣೆಯಿಂದ ದಣಿವರಿಯದ ಕುಣಿತ, ವಯಸ್ಸನ್ನು ಕಾಲವನ್ನು ಮೀರಿ ರಂಗದಲ್ಲಿ ಕುಣಿಯುವಾಗ ಆತನಿಗರಿಯದೇ ದೇಹ ಆಂತರಿಕವಾಗಿ ಸೊರಗಿ ಹೋಗುತ್ತದೆ. ಯಾವ ಭದ್ರತೆಯೂ ಇಲ್ಲದ ಜೀವನ ದಿನಳಿಗೊಂದು ದಿನವನ್ನು ಸೇರಿಸುತ್ತಾ ಕಳೆದು ಹೋಗುತ್ತದೆ. ಆದರೂ ಕಲಾವಿದನ ಕಲೆಗೆ ಅಂಟಿಕೊಂಡು ಕಲೆಗಾಗಿ ತನ್ನ ಜೀವನವನ್ನೇ ಮೌಲ್ಯವಾಗಿಸುವ ಆ ನಿಲುಮೆ ಭಾವನಾತ್ಮಕವಾಗಿ ಚಿಂತಿಸುವಾಗ ಮಾತ್ರವೇ ಅರಿಯಲು ಸಾಧ್ಯ.

1 comment:

  1. ರಾಜ್ ಕುಮಾರ್ ಸರ್, ಬಹಳ ಚನ್ನಾಗಿ ಅದರಲ್ಲೂ ಯಕ್ಷಗಾನದಂತಹ ಮನಮೋಹಕ ಜಾನಪದ ಕಲೆಯ ಕಲಾವಿದನ ಹಿನ್ನೆಲೆಯಲ್ಲಿ ಕಥನ ಮತ್ತು ಚಿಂತನಗಳನ್ನು ಮೇಳೈಸಿ ಬರೆದಿದ್ದೀರಿ...ಇಷ್ಟ ಆಯ್ತು ಲೇಖನ.

    ReplyDelete