"ಇದು ವಿಮರ್ಶೆಯಲ್ಲದ ಚಿಂತನ"

Sunday, December 9, 2012

ರಂಗಸ್ಥಳದಲ್ಲಿ ಚಪ್ಪರಮಂಚ

          ರಸ್ತೆಯ ಬದಿಗೆ ಬೆಳೆದ ಮರವೊಂದು ಹೊರಲೋಕಕ್ಕೆ ತನ್ನ ನಿಜ ಬಣ್ಣವನ್ನು ತೋರದೆ ಸ್ಥಿತ ಪ್ರಜ್ಞನಂತೆ ನಿಂತು ಬಿಟ್ಟಿದೆ. ಅದೆಷ್ಟು ಸ್ಥಿತ ಪ್ರಜ್ಞತೆಯೆಂದರೆ ತನ್ನ ಪರಿಚಯವನ್ನೂ ಅದು ಹೊರಲೋಕಕ್ಕೆ . ತೋರಗೊಡುವುದಿಲ್ಲ.. ಇದೊಂದು ಕಾರಣವಷ್ಟೇ. ಮರ ಹೇಗಿದ್ದರೇನು? ಅದರ ಪರಿಚಯದಿಂದ ಆಗಬೇಕೇನು? ಹೊರ ಪ್ರಪಂಚದ ಈ ಅಸಡ್ಡೆಗೆ ಮರ ಸ್ಥಿತಪ್ರಜ್ಞನಾಗಿ ಬೆಳೆದದ್ದರಲ್ಲಿ ಆಶ್ಚರ್ಯವೂ ಇಲ್ಲ. ಈ ಅಸಡ್ಡೆ ಮತ್ತು ಸ್ಥಿತ ಪ್ರಜ್ಞತೆಯ ನಡುವೆ ಕಳೆದು ಹೋಗುವ ವಿಷಯಗಳು ಕೆಲವೊಮ್ಮೆ ಅಚಾನಕ್ಕಾಗಿ ಪ್ರಕಾಶಕ್ಕೆ ಬರುತ್ತದೆ. ಮರ ತನ್ನ ಇರವನ್ನು ತಿಳಿಸದೇ ಇದ್ದರೂ ಮರದ ತುದಿಯಲ್ಲಿ ಬಿಟ್ಟ ಕುಸುಮವೊಂದು ಅರಳಿ ಪರಿಮಳ ಬೀರಿ ತನ್ನ ಇರವಿನ ಜತೆ ಮರದ  ಅಸ್ತಿತ್ವವನ್ನೂ  ಲೋಕಕ್ಕೆ ಸಾರಿಬಿಡುತ್ತದೆ. ಲೋಕದ ತಳ್ಳಿಯೇ ಬೇಡ ಎಂದು ತನ್ನ ಮೈ ಅಡಗಿಸಿ ಕುಳಿತ ಮರದ ಮೌಲ್ಯ ಆಗ ಅರಿವಿಗೆ ಬರುತ್ತದೆ. ಹಾಗೆಂದು ಆ ಮರಕ್ಕೆ ಕುಸುಮ ಹೊಸತೇನೂ ಅಲ್ಲ...  ಅದು ಹೂವರಿಳಿಸುವುದು ಸಹ  ಹೊಸತೇನೂ ಅಲ್ಲ. ಆದರೆ ಜನ ಅದನ್ನು ಮರೆತಿದ್ದಾರೆ. ಅರಳಿ ಹೂವು ಕಂಪು ಪಸರಿಸಿದಾಗ ಮರದ ಬಗ್ಗೆ ಯೊಚಿಸ ತೊಡಗುವುದು.

          ಈ ವರ್ಷ ಯಕ್ಷಗಾನದ ಯುಗ ಪುರುಷ ಎನ್ನಿಸಿಕೊಂಡ ಕುರಿಯ ವಿಠಲ ಶಾಸ್ತ್ರಿಗಳ ಜನ್ಮ ಶತಮಾನೋತ್ಸವದ ಅಂಗವಾಗಿ ಹಲವಾರು ದಾಖಲಾರ್ಹ ಕಾರ್ಯಕ್ರಮಗಳು ಏರ್ಪಾಡಾದುವು. ಪ್ರತೀಯೋಂದು ಕೆಲವು ವಿಚಾರಗಳಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಹೀಗೆ ಇತ್ತೀಚೆಗಷ್ಟೇ ಉಜಿರೆಯಲ್ಲಿ ನಡೆದ ಕುರಿಯ ಜನ್ಮ ಶತಮಾನೋತ್ಸವದ ಅಮೂಲ್ಯ ವೀಡಿಯೋ ತುಣುಕೊಂದು ನೋಡುವ ಅವಕಾಶ ಲಭ್ಯವಾಯಿತು. ಹಿರಿಯ ಕಲಾವಿದರು ನಡೆಸಿಕೊಟ್ಟ ಯಕ್ಷಗಾನ ಪೂರ್ವ ರಂಗದ ಅಪೂರ್ವ ಸನ್ನಿವೇಶ. ಬಹುಶಃ ಯಕ್ಷಗಾನದಲ್ಲಿ ಇಂದಿನ ತಲೆಮಾರು ಕಂಡು ಕೇಳರಿಯದ ಭಾಗ. “ ಚಪ್ಪರ ಮಂಚ”  ಪೂರ್ವ ರಂಗವೇ ಪಶ್ಚಿಮದತ್ತ ಚಲಿಸಿ ಅಸ್ತಮಾನಕ್ಕೆ ಸಿದ್ಧವಾಗಿರುವಾಗ ಪೂರ್ವ ರಂಗದ ಅಪೂರ್ವ ಭಾಗ ಕಾಣುವುದಕ್ಕೆ ಉಂಟೇ ಕೇಳುವುದಕ್ಕೆ ಉಂಟೇ? ಆದರೂ ಮರದ ತುದಿಯಲ್ಲಿ ಅರಳಿದ ಕುಸುಮ ಪರಿಮಳ ಬೀರಿದಂತೆ ಆ ಪೂರ್ವ ರಂಗದ ಹಿತವಾದ ಅನುಭವ ಕಂಡಂತಾಯಿತು.
          ಯಕ್ಷಗಾನ ಪೂರ್ವ ರಂಗ ಎಂದೊಡನೆ ಇಂದು ಜ್ಞಾಪಕಕ್ಕೆ ಬರುವ ಮೊದಲ ಹೆಸರು ಶ್ರೀ ಬಲಿಪ್ಪ ನಾರಾಯಣ ಭಾಗವತರು. ಎಲ್ಲರೂ ರಸ್ತೆಯನ್ನು ಹೆದ್ದಾರಿಯನ್ನಾಗಿಸಿ ಚತುಷ್ಪಥವಾಗಿಸಿ ಇಂದಿನ ಸಮಯವಿಲ್ಲದ ಆದ್ಭಾನಕ್ಕೆ ಉತ್ತರ ಕಂಡುಕೊಂಡಂತೆ ಯಕ್ಷಗಾನದಲ್ಲೂ ಚತುಪ್ಷಥದ ಪ್ರಯಾಣದ ನೆನಪು ಬರುವಂತೆ ಮಾಡಿದ್ದಾರೆ. ಸಾಂಪ್ರದಾಯಿಕವಾದುವುಗಳನ್ನೆಲ್ಲ ಬದಿಗೆ ಸರಿಸುತ್ತ ಮೌಲ್ಯವನ್ನು ಅಣಕವಾಡುತ್ತ ಓಡುವಾಗ ಈ ಓಟಕ್ಕೆ ಒಂದು ಸಲ ತಡೆಯೊಡ್ಡಿದ ಹಾಗೆ ಈಗ ಪೂರ್ವರಂಗ. ಇಲ್ಲಿಯೂ ಪೂರ್ವರಂಗ ನೆನಪಾಗುವಾಗ ಬಲಿಪ್ಪರ ಮನೆಯಂಗಳದ ತುದಿಗೆ ಬಂದು ನಿಲ್ಲಬೇಕು.

          ಇಲ್ಲಿ  ಉಳಿದ   ಪೂರ್ವರಂಗದ ಭಾಗವನ್ನು ನಡೆಸಿಕೊಟ್ಟವರು ಶ್ರೀಪ್ರಸಾದ ಬಲಿಪರು.  ಹೆಚ್ಚಿನ ಯುವ ಭಾಗವತರು ಸಾಂಪ್ರದಾಯಿಕತೆಯನ್ನು ಬದಿಗೆ ತಳ್ಳಿ ಏಣಿ ಇಟ್ಟು ಮರ ಹತ್ತುವ ಜಾಣತನವನ್ನು ತೋರುತ್ತಾರೆ. ಹೇಗಾದರೇನು ಭಾಗವತರ ಪೇಟ ಧರಿಸಿದರಾಯಿತು. ಭಾಗವತ ಪಟ್ಟ ಸಿದ್ದಿಸಿದ ಹಾಗೆ. ಆದರೆ ಅದು ಕೇವಲ ಪೇಟ ಧರಿಸಿದ ಭಾಗವತ ವೇಷ ಎಂಬುದು ಅರಿವಿಗೆ ಬರುವುದು ಇಂತಹ ಸಂದರ್ಭದಲ್ಲಿ.   ಹಾಗೇಯೇ ಈ ಪೂರ್ವ ರಂಗದಲ್ಲಿ ಅತ್ಯಪೂರ್ವವೆನಿಸಿದ ಚಪ್ಪರ ಮಂಚ ಏರಿ ತೋರಿಸಿದ್ದು ಶ್ರೀ ಬಲಿಪ್ಪ ನಾರಾಯಣ ಭಾಗವತ ಮತ್ತು  ಶ್ರೀ ಸೂರಿಕುಮೇರು ಗೋವಿಂದ ಭಟ್ಟರು ಜತೆಗೆ ಹಿರಿಯ ಮದ್ದಲೆವಾದಕರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್.

          ಯಕ್ಷಗಾನ ಪೂರ್ವ ರಂಗ ಒಂದು ಸಾಂಪ್ರದಾಯಿಕ ಆರಾಧನಾ ಕ್ರಮದಂತೆ. ಮೇಲ್ನೋಟಕ್ಕೆ ಕಾಲಯಾಪನೆ ಎಂದು ಭಾಸವಾದರೂ ಅದಕ್ಕೆ ಅದರದ್ದೇ ಆದ ಮಹತ್ವ ಇದೆ. ಇದನ್ನು ಮನಗಂಡು ಹಲವರು ಇದರ ಮಹತ್ವವನ್ನು ಅರಿತು ವಿವರಿಸಿದ್ದಾರೆ. ಪೂರ್ವರಂಗದಲ್ಲಿ ಮೊದಲ ಭಾಗ ಕೇಳಿಕೆ ಕೇಳಿ ಬಡಿಯುವುದು ಇದು ರಂಗಸ್ಥಳದ ಹೊರಗೆ. ನಂತರ ಕೋಡಂಗಿ ಕುಣಿತ (ಇದೂ ಈಗಿನ ಪೂರ್ವರಂಗದಲ್ಲಿ ಕಡಿತಕ್ಕೊಳಗಾಗಿದೆ).  ಕೋಡಂಗಿ ಕುಣಿತ ಮತ್ತು ಬಾಲಗೋಪಾಲ ಕುಣಿತ ಒಂದೇ ಹಂತದಲ್ಲಿ ನಡೆಯುತ್ತದೆ. ಆನಂತರ  ಸ್ತ್ರೀ ವೇಷಗಳು ಮತ್ತು ಹಾಸ್ಯಗಾರನ ವೇಷ. ಈಗ ಕೆಲವು ಕಡೆ ಇಲ್ಲಿಗೆ ಯಕ್ಷಗಾನ ಪ್ರಸಂಗ ಅರಂಭವಾಗುತ್ತದೆ. ಸ್ರೀ ವೇಷ ಆದ  ನಂತರ ಅರ್ಧ ನಾರೀಶ್ವರ ಆ ಮೇಲೆ ಷಣ್ಮುಖ ಸುಬ್ರಾಯ ಈ ಭಾಗ ಇಂದು ಪ್ರಾತ್ಯಕ್ಷಿಕೆಯಲ್ಲಿ ಪ್ರದರ್ಶಿಸಿ ಪರಿಚಯವಾದರೂ ಸಹ ಇದರ ನಂತರದ “ಚಪ್ಪರ ಮಂಚ” ಕುಣಿತದ ಬಗ್ಗೆ ಯಾರಿಗೂ ತಿಳಿಯದು. ಹಿರಿಯ ಕಲಾವಿದರಲ್ಲಿ ಇದರ ಬಗ್ಗೆ ಗೊತ್ತಿದ್ದವರು ಬಲಿಪ್ಪರು ಮಾತ್ರ!  ಈ ಚಪ್ಪರ ಮಂಚ ನೋಡಿದಾಗ ಆಶ್ಚರ್ಯವಾಗುವುದು, ಹೀಗೆ ಅದೆಷ್ಟು ಅನುಭವದ ಪುಟಗಳು ಬಲಿಪ್ಪರ ಭಂಡಾರದಲ್ಲಿ ತೆರೆಯದೆ ಉಳಿದು ಬಿಟ್ಟಿದೆ?

          ಬಹಳ ಹಿಂದಿನ ನೃತ್ಯ ಸಂಪ್ರದಾಯ ಚಪ್ಪರಮಂಚ. ಇದರಲ್ಲಿ ಮುಖ್ಯವಾಗಿ ಒಂದು ಸ್ತ್ರೀ ವೇಷ. ಆವಾಗ  ವೇಷದ ಆಭರಣಗಳನ್ನು ಒಂದು ಸ್ಥಳದಿಂದ ಇನ್ನೊಂದು ಕಡೆಗೆ ದೊಡ್ಡ ಗಾತ್ರದ ಬೆತ್ತದ ಪೆಟ್ಟಿಗೆಯನ್ನು ಸುರಕ್ಷಿತವಾಗಿ ಹೊತ್ತುಕೊಂಡು ಸಾಗಿಸುವುದಕ್ಕಾಗಿ ಉಪಯೋಗಿಸುತ್ತಿದ್ದರು. ಅತ್ಯಂತ ಹಗುರವಾದ ಈ ಪೆಟ್ಟಿಗೆ ಕಿರೀಟ ಆಭರಣಗಳ ಸಾಗಾಣಿಕೆಗೆ ಅತ್ಯಂತ ಸೂಕ್ತವಾಗಿತ್ತು. ನನಗೆ ಈ ಪೆಟ್ಟಿಗೆಯನ್ನು ನೋಡಿದ ನೆನಪಿದೆ. ಈ ಪೆಟ್ಟಿಗೆಯ ಮುಚ್ಚಳವನ್ನು ಚಪ್ಪರ ಮಂಚದಲ್ಲಿ ಸ್ತ್ರೀ ವೇಷದವರು ಸೊಂಟಕ್ಕೆ ಕಟ್ಟಿ ಅದನ್ನು ಚಪ್ಪರ ಮಂಚದ ಸಂಕೇತವಾಗಿಸಿ ವಿಶೇಷ ನೃತ್ಯವನ್ನು ಪ್ರದರ್ಶಿಸುತ್ತಿದ್ದರು. ಇಲ್ಲಿ ಬಲಿಪ್ಪರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಲ್ಪಟ್ಟ ಚಪ್ಪರ ಮಂಚ ನೃತ್ಯದಲ್ಲಿ ಮೂರು ಪದಗಳು ಹಾಡಲ್ಪಟ್ಟಿವೆ. ಬಾಯಿ ತಾಳಗಳಿಂದ ಕೂಡಿದ ಈ ಪದಗಳು ಅತ್ಯಂತ ವಿಶಿಷ್ಟವಾಗಿದೆ. ಬಲಿಪ್ಪರ ಜತೆಗೆ ಸೂರಿಕುಮೇರಿಯವರು ಅಪರೂಪದ ನೃತ್ಯವನ್ನು ಪ್ರದಶಿಸಿದರೆ ಶಂಕರಣ್ಣನ ಮದ್ದಲೆ ಅದ್ಭುತವಾಗಿ ಮೂಡಿ ಬಂದಿದೆ. ಕೇವಲ ಮೂರು ಪದಕ್ಕಾಗಿ ರಂಗ ಸ್ಥಳ ಏರಿದ್ದು ಒಂದು ವಿಶೇಷತೆ ಎನ್ನಿಸುತ್ತದೆ.  

          ಕುರಿಯ ವಿಠಲ ಶಾಸ್ತ್ರಿ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಇಂತಹ ಒಂದು ಪ್ರಾಕಾರವನ್ನು ನೆನಪಿಗೆ ತಂದು ಕೊಂಡದ್ದು ಸಹ ಪ್ರಾಮುಖ್ಯವೆನಿಸಲ್ಪಡುತ್ತದೆ. ಇಲ್ಲವಾದರೆ ಇದನ್ನು ದೈರ್ಯವಾಗಿ ಮತ್ತು ಆಸಕ್ತಿಯಿಂದ ನಡೆಸುವವರು ಇಲ್ಲದೆ ಮುಂದಿನ ಜನಾಂಗಕ್ಕೆ ಇಂತಹದ್ದೊಂದು ಇತ್ತು ಎನ್ನುವುದಕ್ಕೆ ಯಾವುದೇ ದಾಖಲೆಯೂ ಉಳಿಯುತ್ತಿರಲಿಲ್ಲ. ಇದಕ್ಕಾಗಿ ಶತಮಾನೋತ್ಸವ ಸಮಿತಿಯ ಭಾರವಾಹಿಗಳ ಆಸಕ್ತಿಗೆ ಮತ್ತು ಕರ್ತೃತ್ವ ಶಕ್ತಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಇಪ್ಪತ್ತು ನಿಮಿಷದ ಈ ವಿಡಿಯೋ ತುಣುಕು ನೋಡಿ ಆದ ಮೇಲೆ ಭೇಷ್ ಬಲಿಪ್ಪಜ್ಜ.. ಬೇಷ್ ಗೋವಿಂದಣ್ಣ ಎನ್ನುವುದಲ್ಲದೆ ಶಂಕರಣ್ಣನ ಮಾಂತ್ರಿಕ ಸ್ಪರ್ಶಕ್ಕೆ  ಮನಸ್ಸು ಆ ಹಿಂದಿನ ಕಾಲವನ್ನು ಕಲ್ಪಿಸುವುದಾರೊಂದಿಗೆ  ಒಂದು ನಿಟ್ಟುಸಿರು ಹೊರಬರುತ್ತದೆ. ಪರಂಪರೆಯ ಪುಟಗಳಲ್ಲಿ ಇನ್ನು ಇಂತಹ ಪುಟಗಳೆಷ್ಟಿವೆಯೋ..? ತರೆದು ನೋಡುವ ಭಾಗ್ಯವಾದರೂ ನಮಗಿದೆಯೇ?                    

         



2 comments:

  1. ಇಂತಹ ಕಾರ್ಯಕ್ರಮಗನ್ನು ಆಯೋಜಿಸಿ ಈ ಚಪ್ಪರಮಂಚವೇ ಮೊದಲಾದ ಪೂರ್ವರಂಗದ ವಿಷಯಗಳನ್ನು ಈಗಿನ ಕಾಲಕ್ಕೂ ಪ್ರಸ್ತುತಪಡಿಸಬೇಕು. ಈ ಆಯೋಜಕರಿಗೆ ತುಂಬು ಧನ್ಯವಾದ. ಒಳ್ಳೆಯ ಲೇಖನ ರಾಜಣ್ಣ. ಧನ್ಯವಾದಗಳು.

    ReplyDelete
  2. ನಾನು ಈ ಚಪ್ಪರಮಂಚವನ್ನು ಕೇಳಿಯೂ ಇರಲಿಲ್ಲ. ಏನಿದರ ಔಚಿತ್ಯ?

    ReplyDelete