ಪುರಾಣ
ಗರ್ಭದಲ್ಲಿ ಬರುವ ಅಸುರೀ ಪಾತ್ರಗಳು ಭಗವಂತನ ಜತೆ ಸಂಘರ್ಷಕ್ಕೇ ಇಳಿದುಬಿಡುತ್ತವೆ. ಜೀವನ
ಅಂತ್ಯದವರೆಗೆ ಪರೋಕ್ಷವಾಗಿ ಮೋಕ್ಷಗಮ್ಯದತ್ತವೇ ಸಾಗುತ್ತದೆ. ಸಾಯುವತನಕವೂ ಅಸಹನೀಯತೆಯನ್ನೇ
ಅನುಭವಿಸುತ್ತ, ಕ್ರೌರ್ಯವನ್ನೇ ತೋರುತ್ತ ಒಂದು ಬಿಂದುವಿನಲ್ಲಿ ಅದಾವ ಪರಿಯೋ ಭಗವಂತನೊಡನೆ ಮುಖಾಮುಖಿಯಾಗಿ ಅಸಹನೀಯತೆಯಲ್ಲೇ ಅಂತ್ಯವನ್ನು ಕಾಣುತ್ತದೆ. ಈ ಮಧ್ಯೆ ಕ್ರೌರ್ಯದ ಪರಮಾವಧಿಯಲ್ಲಿ ತಾವೆಷ್ಟು
ಮೋಕ್ಷಕ್ಕೆ ಹತ್ತಿರವಾಗುತ್ತೇವೆ ಎಂಬುದನ್ನೂ ತೋರಿಸುತ್ತವೆ. ಬಹಳಷ್ಟು
ಅಸುರೀ ವ್ಯಕ್ತಿತ್ವಗಳು ಸಂಘರ್ಷದ ಮೂಲ ಕಾರಣವೇನೆಂದು ತಿಳಿಯದೆ ಬದುಕಿನ ಕೊನೇ ಹಂತದಲ್ಲಿ
ಜ್ಞಾನೋದಯವನ್ನು ಪಡೆಯುತ್ತದೆ. ಆದರೆ ರಾವಣನಿಗೆ ತನ್ನ ದಾರಿಯಬಗ್ಗೆ ಸ್ಪಷ್ಟ ನಿಲುವು ಇತ್ತು ಅಂತ
ಅನ್ನಿಸುತ್ತದೆ. ಯಕ್ಷಗಾನದ ಈ ಪ್ರಸಂಗದಲ್ಲಿ ಅದು ಅಲ್ಲಲ್ಲಿ ವ್ಯಕ್ತವಾಗುತ್ತ ಸಾಗುತ್ತದೆ.
ಮಂಡೋದರಿಯೊಂದಿಗಿನ
ಸಂವಾದ ರಾವಣನಿಗೆ ತನ್ನಾಂತರ್ಯವನ್ನೆಲ್ಲವನ್ನೂ ಬಿಚ್ಚಿಡುವ ವೇದಿಕೆಯಂತಾಗುತ್ತದೆ.
ಪತಿವಿಯೋಗದಿಂದ ಶೂರ್ಪನಖಿ ಅಣ್ಣನೊಡನೆ ದ್ವೇಷವನ್ನು ತಾಳುತ್ತಾಳೆ ಮಾತ್ಸರ್ಯದಿಂದ ಅವನ ನೆಮ್ಮದಿಯನ್ನೇ ಹಾಳು ಮಾಡುವಾಗ ತಾನು ಪರಿಹಾರಕ್ಕಾಗಿ ಪರ್ಯಾಯ ಮಾರ್ಗವನ್ನು ಅನುಸರಿಸಬೇಕಾದ ಅನಿವಾರ್ಯತೆಯನ್ನು ಹೇಳುತ್ತಾನೆ. ಆ ಸಂದರ್ಭವನ್ನು ಅದೆಷ್ಟು ಮಾರ್ಮಿಕವಾಗಿ ಮಾತಿನಲ್ಲೇ ಚಿತ್ರಿಸುವ ಪರಿಯನ್ನು ನೋಡೋಣ.
ಯಾವುದೇ ರೂಪವಿಲ್ಲ ಕೇವಲ ಸ್ತ್ರೀತ್ವದ ಸಂಕೇತದಿಂದ ಮಾತ್ರ ಸ್ತ್ರೀ ಎಂದು ಗುರುತಿಸಬಹುದಾಂತಹ ಕ್ಷುದ್ರ ಹೆಣ್ಣು ಶೂರ್ಪನಖಿ. ಅಕಾಲದಲ್ಲಿ ಪತಿವಿಯೋಗವನ್ನು ಅನುಭವಿಸುತ್ತಿದ್ದಾಳೆ.
ಮುಂದೆ
ರಾವಣ ಹೇಳುತ್ತಾನೆ, ಶೂರ್ಪನಖಾ ಕಲ್ಯಾಣವನ್ನು.
“
ಮಂಡೋದರಿ, ಏನನ್ನು ನೋಡಿ ಅವಳನ್ನು ಮದುವೆಯಾಗುವುದು. ಕೊನೆಗೆ ಕನ್ನಡಿಯನ್ನು ತೋರಿಸಿ ಮದುವೆ
ಮಾಡುವಲ್ಲಿಗೆ ಮುಟ್ಟಿತು. ಅಕಾಲದಲ್ಲಿ ವೈಧವ್ಯ ಬಂತು, ಆಗ ಮತ್ಸರ ಹುಟ್ಟಿತು ನಮ್ಮನ್ನು
ನಿದ್ರಿಸಿಲಿಕ್ಕೆ ಬಿಡ್ತಿರಲಿಲ್ಲ..ಹಲವು ಸಲ ತಲೆಯೇ ಕಡಿದು ಬಿಡೋಣ ಅನ್ನಿಸಿತ್ತು ಆದರೆ ತಾಯಿ
ಬದುಕಿದ್ದಾಳಲ್ಲ. ಅವಳು ಬಯಸಿ ಬಯಸಿ ಹೆಣ್ಣು ಮಗಳನ್ನು ಪಡೆದದ್ದು. ಅಕಾಲದಲ್ಲಿ ನಮ್ಮ ಅಮ್ಮನಿಗೆ
ಸ್ವಜಾತಿಯ ಪ್ರೇಮ ಬಂದು ಬಿಟ್ಟದ್ದು, ಆಯ್ತು ಕೊನೆಗೆ ನಮಗೆ ಈ ರಗಳೆ ಬೇಡ ಅಂದುಕೊಂಡು
ಅಲ್ಲಿದೆಯಲ್ಲಾ ನಮ್ಮ ಉತ್ತರದಗಡಿ., ನಮಗದು
ಉತ್ತರದ ಗಡಿ. ಉತ್ತರದವರಿಗೆ ಅದು ದಕ್ಷಿಣದ ಗಡಿ. ದಂಡಕಾರಣ್ಯ. ನಮ್ಮವರೇ ತಾನೇ ಅಲ್ಲಿರೋದು.
ನನ್ನ ಚಿಕ್ಕಮ್ಮನ ಮಕ್ಕಳು. ಖರ ದೂಷಣ ಇತ್ಯಾದಿಗಳು.”
“ನಮ್ಮ ಪ್ರದೇಶವನ್ನು ರಕ್ಷಿಸಿಲಿಕ್ಕೆ ನಮ್ಮವರನ್ನು ಅಲ್ಲಿಟ್ಟಿದ್ದಲ್ಲವೆ?”
“ ಅದೂ
ಹೌದು, ನನ್ನ ರಾಜಕೀಯವೂ ಹೌದು. ನನ್ನ ಚಿಕ್ಕತಾಯಿ ಮಕ್ಕಳು ಅವರು. ನನ್ನ ಜ್ಞಾತಿಗಳು. ದೂರವೇ
ಇರ್ಲಿ ಅಂತ ಮಾಡಿದ್ದು. ಇಲ್ಲಿ ಇದ್ರೆ ಈ ಅಧಿಕಾರದಲ್ಲಿ ಸ್ವಲ್ಪ ಸ್ವಲ್ಪವೇ ಕೈ ಕಾಲು ತೂರಿಸಿ
...ಯಾವ ಅಧಿಕಾರಿಯೂ ಜ್ಞಾತಿಯನ್ನು
ದಾಯಾದಿಗಳನ್ನು ಬಯುಸುವುದಿಲ್ಲ. ದೂರವೇ ಇರಿಸುತ್ತಾನೆ, ಹಾಗೇ...............ಶೂರ್ಪನಖಿ
ಅಲ್ಲಿಗೆ ಹೋಗು, ಅವಳು ಅಲ್ಲಿ ಏನು ಮಾಡ್ತಾ ಇದ್ದಳು ಅಂತ ನನಗೆ ವರದಿ ಬಂದಿದೆ. ಕೇಳ್ತಾ ಇದ್ದೇನೆ. ಋಷಿಮುನಿಗಳನ್ನು ಮಂತ್ರ
ಹೇಳುವುದಕ್ಕೆ ಬಿಡ್ತಿರಲಿಲ್ಲ. ಅವಳಿಗೆ ಅದನ್ನು ಕೇಳುವುದಕ್ಕೆ ಆಗ್ತಿರಲಿಲ್ಲ. ಹಾಗಾಗಿ ಇದ್ದ
ಅಷ್ಟು ರಕ್ಕಸರಿಗೆ ಇವಳ ಅಪ್ಪಣೆ ಹೋಗಿ ಬೊಬ್ಬೆ ಹಾಕಿ.
ಮೊದಲೇ ರಾಕ್ಷಸರು ಭೋರ್ಗರೆವ ರಕ್ಕಸರು. ಅವರ ಹುಟ್ಟುಗುಣ ಅದು. ಯಾಕೆ ಈ ದೊಡ್ದ ಬೊಬ್ಬೆಯಲ್ಲಿ ಋಷಿಗಳದ್ದು
ಎಲ್ಲವೂ ಅಡಗಬೇಕು. ಜತೆಯಲ್ಲಿ ಇವಳದ್ದು..ನಿರ್ಘೋಷದ ಅಬ್ಬರ. ಈ ನಿರ್ಘೋಷದ ಅಬ್ಬರ ಅಂದ್ರೆ
ಎಂತದ್ದು? ಪತನದಿಂದ ಉಂಟಾಗುವ ಶಬ್ದ ಅದು. ದೊಡ್ಡದಾದ ಬಂಡೆಕಲ್ಲನ್ನು ಮೇಲೆ ಕೊಂಡು ಹೋಗಿ ಪ್ರಪಾತಕ್ಕೆ
ತಳ್ಳಿದರೆ ಪ್ರಪಾತಕ್ಕೆ ಬಿದ್ದಾವಾಗ ಶಬ್ದ ಉಂಟಾಗ್ತದೆ. ಅದು ನಿರ್ಘೋಷದ ಅಬ್ಬರ. ಪತನದಿಂದ
ಉಂಟಾಗುವದ್ದು. ಹಾಗಾಗಿ ನಿರ್ಘೋಷದ ಅಬ್ಬರದ
ಶೂರ್ಪನಖಿ ಕಾನನಕೆ ಬಂದಳು... ಅದು ಕುಲಗೇಡಿಯಾಗಿ. ತಿರುಗುತ್ತಿದ್ದಳು ಅಂತ ನನಗೆ ಸುದ್ದು ಉಂಟು”
“
ಆದರೆ ಈಗಲೂ ಕುಲಗೇಡಿಯೇ ಅದ್ಲಲ್ಲ..?”
“
ಆಗಲಿ. ಇವಳು ಕುಲಗೇಡಿಯೇ ಆಗಲಿ ನನ್ನ ಪ್ರಶ್ನೆ
ರಾಮನಲ್ಲಿ. ಹಾಗೆ ಹೋದ್ಲು. ನೀನು ಹೇಳಿದ್ದು
ಸತ್ಯ. ರಾಮನನ್ನು ನೋಡಿದ್ಲಂತೆ. ನೋಡಿ ಮಾತಾಡಿದ್ಲಂತೆ. ಇವನ ಕೊಂಡು ಪೋಗಿ ಗಂಡನಾಗಿ
ಮಾಡ್ಪೆ, ಅವಳ ಉದ್ದೇಶ ಅರ್ಥ ಆಗ್ತದೆ ನನಗೆ.
ಒಂದು ರಾಮನಂತಹ ಸೂರ್ಯವಂಶದ ರಾಜನಾದವನು ಗಂಡನಾದ. ಮೈಯ ಸುಖ ಮನದ ಸುಖ. ಇನ್ನೊಂದು...ಅಂತಹ
ರಾಮನನ್ನು ಗಂಡನಾಗಿ ಮಾಡಿ, ಅವಳ ಗಂಡನನ್ನು ಕೊಂದ ನನ್ನನ್ನು..ಅರ್ಥ ಆಯ್ತಲ್ಲ? ಅದಕ್ಕೆ ನಾನು ಪ್ರಾಮಾಣಿಕವಾಗಿ ಹೇಳುದು, ತಂಗಿಯೇ ಕುಲಕೆ
ಕೇಡಾದಳು....”
“ಮಗನನ್ನು
ಬೆಳೆಸ್ತಿದ್ದಳಂತೆ...ಹೇಳ್ತಾ ಇದ್ದರು.”
“ಇರಲಿ..ನಿನ್ನದ್ದೂ
ನನ್ನದ್ದೂ ಆದ ಅಭಿಪ್ರಾಯ ಇಲ್ಲಿಗೆ ಕೂಡಿ ಬಂತು. ಆದರೆ ರಾಮ ಯಾಕೆ ಇದಕ್ಕೆ ಪರಿಹಾರ ಮಾಡ್ಲಿಕ್ಕೆ
ಹೊರಟದ್ದು? ನನ್ನ ಪ್ರಶ್ನೆ ಅವನಲ್ಲಿ. ಹಂದಿ ಮರಿ ಕೊಳಚೆ ಬೀದಿಯಲ್ಲೇ ಹೋಗ್ಲಿ. ಅದು ಹುಟ್ಟಿದ್ದೇ
ನಮ್ಮಲ್ಲಿ . ಅದು ಅಲ್ಲಿ ಹೋಗ್ಲಿಕ್ಕೆ ಇದ್ದದ್ದು
ಅಂತ ನಮಗೆ ಗೊತ್ತುಂಟು. ನಿತ್ಯ ಪೂಜೆ ಮಾದುವ ಗೋಮಾತೆ ಅದು ಯಾಕೆ ಆ ಕೊಳಚೆ ಬೀದಿಯಲ್ಲಿ ಹೋಯ್ತು?
ಆವಾಗ ನಮ್ಮಂಥವರಿಗೆ ಸಿಟ್ಟು ಬರುವುದು. ಅದು ಹೋಗ್ಲಿ ಹಂದಿ. “ದನವೇ ನೀನ್ಯಾಕೆ ಅಲ್ಲಿಗೆ ಹೋದಿ?’
ಎರಡು ಏಟು ಬಿಗಿಯುದು ಗೂಟಕ್ಕೆ ಕಟ್ಟುದು. ರಾಮನಲ್ಲಿ ನನಗೆ ಬಂದ ಸಿಟ್ಟು ಅದು. ಹೌದಲ್ಲ? ತಣ್ಣೀರನ್ನಾದರೂ ತಣಿಸಿಕುಡಿವ ಜನ ರಾಮ.ಯಾರಲ್ಲ ಅಂತ
ಹೇಳಿದ್ರು? ನಡೆಯಲ್ಲಿ ನುಡಿಯಲ್ಲಿ ಆದರ್ಶ ಆದರ್ಶ...ರಾಮನ ಜಾಗದಲ್ಲಿ ನಾನಿದ್ರೆ.. ಯಾವ ತಮ್ಮನಿಗೆ ಬೇಕಾಗಿಯೂ ಯಾವ ಅಪ್ಪ ಹೇಳಿದ್ರು ಅಂತ ಪಟ್ಟ ಬಿಟ್ಟು ಕೊಟ್ಟು, ಊರಿನಲ್ಲಿ ತಿರುಗಾಡಲಿಕ್ಕೆ ಬರ್ತಿರಲಿಲ್ಲ. ಯಾರಲ್ಲಾ ಅಂತ ಹೇಳಿದ್ರು. ಅಂಥಂವಾ...ಒಬ್ಬನಲ್ಲಿ ತಪ್ಪಿ
ನಡೆವಾಗ ಅವನಿಗೆ ಬರುವ ಸಂಕಟ. ಎಲಾ ಊರೆಲ್ಲ
ಶುದ್ದ ಮಾಡ್ಲಿಕ್ಕೆ ನಿಂಗೆ ಕೂಡ್ತದೆ, ನನ್ನಲ್ಲಿ ಆಗುವಾಗ ಅಶುದ್ದವನ್ನೇ ಯಾಕೆ ಮುಂದಿಟ್ಟೆ? ಇದನ್ನು
ಬಗೆಹರಿಸ್ಲಿಕ್ಕೆ ಬೇರೆನೂ ಮಾರ್ಗ ಸಿಕ್ಕಿಲಿಲ್ವ ರಾಮನಿಗೆ. ಈ ಸುಟ್ಟವಳು ಈ ಸುಟ್ಟ ಮುಖ
ತೆಕ್ಕೊಂಡು ಹೋಗಿ ಕಾಮ ಸನ್ನಿಭ ಅಂತ ಹೇಳುವಾಗ ರಾಮನಿಗೆ ಯಾಕೆ ಹಾಸ್ಯಪ್ರವೃತ್ತಿ ಬರಬೇಕು.?
ಪತಿತೆಯಾದಂತಹ ಅಹಲ್ಯೆಯನ್ನು ಸಕಲ ಶಾಸ್ತ್ರ ಕೋವಿದ ಸ್ಮೃತಿಕಾರನಾದಂತಹ ಗೌತಮನೇ
ತಿರಸ್ಕರಿಸಿದ್ರೆ ಅಂತಹ ಒಡೆದ ದಾಂಪತ್ಯವನ್ನು ಕೂಡಿಸುವುದಕ್ಕೆ ರಾಮನಿಗೆ ಔದಾರ್ಯ ಉಂಟು. ರಾವಣನ
ತಂಗಿ ದಾರಿ ತಪ್ಪಿದ್ರೆ ..,,” ತಂಗಿ ಇದೆಲ್ಲ ಹೇಸಿಗೆ. ದೊಡ್ಡ ಮನೆತನದವರಿಗೆ ಹೇಳಿಸಿದ್ದಲ್ಲ.
ನೀನಾಗಿ ಮರ್ಯಾದೆಯಲ್ಲಿ ಹೋಗ್ತಿಯೋ ಅಲ್ಲ ನಿನ್ನ ಬಗ್ಗೆ ಅಣ್ಣನಿಗೆ ಹೇಳಿಸಲೋ? ಒಂದು ಮಾತು ಅವನು
ನನ್ನ ಬಗ್ಗೆ ಮರ್ಯಾದಿಯಾಗಿ ಆಡ್ಲಿಲ್ಲ. ಅವನು ಹಾಸ್ಯ ಪ್ರವೃತ್ತಿಯನ್ನೇ ಮಾಡಿದನಂತೆ. ಹೇಳಿ ಕೇಳಿ ಅಹಾ ಏಕಪತ್ನೀ ವೃತಸ್ಥ ನಾನು
ಯಾಕೆ ಅವಳ ಮುಂದೆ ಅವನು ಯಾರು ಅಂತ ಒಪ್ಪಿಸ್ಬೇಕೊ? ’ ಏಕ ಪತ್ನೀ ವೃತಸ್ಥ. ಆವಾಗ ಇವಳು
ಸ್ವಾಭವಿಕವಾಗಿ ಹೇಳಿದ್ಲು.. ’ ಹೌದಾ ಒಂದು ಆಗ್ಯದಲ್ವೋ? . ಅವಳನ್ನು ನಾನು ತಿಂದು ಬಿಡ್ತೇನೆ.
ಆವಾಗ ಸೀತೆ ಬೊಬ್ಬೆ ಹೊಡೆದ್ಲು ರಾಮ ಲಕ್ಷ್ಮಣನಿಗೆ ಕಣ್ಣಸನ್ನೆ ಮಾಡಿದ ಲಕ್ಷ್ಮಣ ಬಂದು ಕರ್ಣ ನಾಸಾಚ್ಛೇದನ
ಮಾಡಿದ. ಇಷ್ಟು ಹೌದೋ? ಇದರಿಂದ ನಾನು ಅರ್ಥ ಮಾಡಿಕೊಂಡದ್ದು ಹೀಗೆ. ಇದು ಕೇವಲ ಶೂರ್ಪನಖಿಗೆ ಅವನು
ಮಾಡಿದ ಅವಮಾನವಲ್ಲ. ಇದು ಮುಸುಕಿನ ಗುದ್ದು ತ್ರಿದಶದಲ್ಲಣನಾದಂತಹ ರಾವಣನಿಗೆ. ಆದರೂ ಶೂರ್ಪನಖಿ
ಹೇಳಿದ ಮಾತಿಗೆ ಮರುಕ್ಷಣದಲ್ಲಿ ಹುಚ್ಚುಕಟ್ಟಿ ಸೀತಾಪಹಾರ ಮಾಡಿದ್ದೇನೋ ನಾನು. ನಿನ್ನಲ್ಲಿ
ಕೇಳಿದ್ದು ಹೌದಲ್ಲ. ಮಾವ ಮಾರಿಚನ ಬಳಿಗೆ ಮೂರು ಸಲ ಹೋದದ್ದ ಹೌದಲ್ಲ. ಪ್ರತೀಸಲ ಹೋಗುವಾಗ ಮಾವ
ಹೇಳುವುದು ಏನೇ ಆಗ್ಲಿ ದೊಡ್ದವ ನೀನು. ಇಂತಹ
ಸಣ್ನ ಕೆಲಸ ಮಾಡಬಾರದು. ರಾಮನು ಬಲವಂತ, ಬರ್ಲಿಲ್ವೋ? ಮೂರು ಸಲ ಹೋಗಿ ಬಂದೆ. ನಾಲ್ಕನೇ ಸಲ ಇವಳು
ಏನು ಮಾಡಿದ್ಲು. “ಹಾ ಇನ್ನೂ ಬದುಕಿ ಬಂದಿದ್ದಿಯಾ ಇನ್ನೂ ಮೀಸೆ ಬೆಳೆಸು...” ನಾನು ಸಾಯ್ಬೇಕ ಬದುಕುಬೇಕಾ
ಹೇಳು. ಬದುಕಿದ್ರೆ ಗಂಡಸಾಗಿ ಬದುಕಬೇಕು. ಸತ್ರೆ ಗಂಡುಸಾಗಿ ಸಾಯ್ಬೇಕು. ಹೀಗೆ ಪರಿಸರದ
ಒತ್ತಡಕ್ಕೆ ಸಿಲುಕಿ ಏನಾದ್ರು ಮಾಡೋಣ ಅಂತ ನನ್ನ ಛಲವನ್ನು ಸಾಧಿಸ್ಲಿಕ್ಕೆ ತೊಡಗಿದ್ದು.
ಸೀತಾಪಹಾರ ಮಾಡಿದ್ದು. ಆದ್ರು ಒಂದು ಹೇಳ್ತೇನೆ ಇದು ನನ್ನ ಸ್ವಕೀಯ ಅಂತರಂಗ. ಸೀತೆಯನ್ನು ಕದ್ದು
ತಂದದ್ದು ತಪ್ಪು. ಮೊತ್ತೊಬ್ಬನ ಹೆಂಡತಿಯನ್ನು
ಕದ್ದು ತರುದು ಸರಿ ಅಂತಾದ್ರೆ ನನ್ನ ಹೆಂಡತಿಯನ್ನು ಕದ್ದುಕೊಂಡು ಹೋದ್ರೆ ನಾನು ಬಯಿ ಮುಚ್ಚಿ ಸುಮ್ನೆ ಕುಳಿತುಕೊಳ್ಳಬೇಕಾಗ್ತದೆ.
ಈ ಲಂಕೆಯಲ್ಲಿ ಹಾಗೆ ಒಬ್ಬ ಮಾಡಿದ ಅಂತಾದ್ರೆ ಅವನಿಗೆ ವಿಚಾರಣೆ ಇಲ್ಲದೆ ತಲೆ ಕಡಿವ ಶಾಸನ
ನನ್ನದು. ಆದ್ರೆ ಉಪಾಯ ಇಲ್ಲದ್ದಕ್ಕೆ ನಾನು ಹಾಗೆ
ಮಾಡಬೇಕಾಯಿತು. “
“ ರಾಮನಿಗೆ ನನ್ನಲ್ಲಿ ಛಲ ಉಂಟು ಅಂತ
ಹೇಳುವುದಕ್ಕೆ ಒಂದು ಸಣ್ನ ನಿದರ್ಶನ ಹೇಳ್ತೇನೆ..ಸೀತೆಯನ್ನು ತಂದು ಅಶೋಕವನದಲ್ಲಿ
ಇಟ್ಟೇನೋ..ಅಲ್ಲಿಗೆ ಆ ಬುದ್ದಿವಂತ ಹನುಮಂತ ಬಂದನೋ. ಬಂದವನು ಹೇಳಿದ ..ಅಮ್ಮ ನೀವು ಹೂಂ ಅಂತ
ಹೇಳಿ ಈಗಲೇ ನಿಮ್ಮನ್ನು ಹೆಗಲಿಗೇರಿಸಿ ರಾಮನ ಎದುರು ತಂದು ನಿಲ್ಲಿಸ್ತೇನೆ. ಆವಾಗ ಸೀತೆ ಏನು
ಹೇಳೀದ್ಲು? ನಾನು ಕ್ಷತ್ರಿಯರಮಣೀ. ನನ್ನ ಗಂಡ ಕ್ಷಾತ್ರ ಯೋಚಿತ ರೀತಿಯಲ್ಲೇ ಕರೆದು ಕೊಂಡು
ಹೋಗ್ಲಿ. ಇಲ್ಲದೇ ಇದ್ರೆ ನಾನು ಕುಳಿತಲ್ಲಿ ಕದಲುವುದಿಲ್ಲ. ಇಷ್ಟು ಉಂಟಂತೆ ಆ ಮೂರು ಸಂಕ್ರಮಣ
ದಾಟದ ಹುಡುಗಿಗೆ. ನನಗೆ ಅಷ್ಟೂ ಇಲ್ವೇನೆ . ಇದು ನನ್ನ ಛಲ..ಇದು ಅಚಲ. “
ತನ್ನ ಪತಿ
ಛಲವನ್ನು ಬಿಡದಾದಾಗ ಮಂಡೋದರಿ ಮತ್ತಷ್ಟು ಕಂಗಾಲಾಗುತ್ತಾಳೆ. ಯಕ್ಷಗಾನ ತಾಳಮದ್ದಲೆಯಲ್ಲಿ
ನಾಟಕದಂತೆ ದೃಶ್ಯಗಳು ಬದಲಾಗುವುದಿಲ್ಲ. ಮುಂದಿನ ದೃಶ್ಯ ಏನು ಎಂಬ ಕುತೂಹಲವೂ ಇರುವುದಿಲ್ಲ.
ಕಥಾಭಾಗ ಮುಂದೆ ಹೋಗುವುದಿಲ್ಲವಲ್ಲ ಎಂಬ ತುಡಿತವನ್ನು ಹೊಂದುವ ಹಾಗಿಲ್ಲ. ಇಲ್ಲಿ ಸಂವಾದವೇ
ಪ್ರಧಾನ. ಅದನ್ನು ಕಥೆಗೆ ಹೊಂದುವ ರೀತಿಯಲ್ಲಿ ಬೆಳೆಸಿಕೊಂಡು ಹೋಗುವುದೇ ಪ್ರಧಾನ. ಹಾಗಾಗಿ ರಾವಣ
ಮಂಡೋದರಿ ಸಂವಾದ ಮತ್ತು ಮುಂದೆ ಹೋಗುತ್ತದೆ.
ಮಂಡೋದರಿ ಸುಲಭದಲ್ಲೇ ಗಂಡನನ್ನು
ಒಡಂಬಡಿಸಬಹುದೆಂಬ ನಿರೀಕ್ಷೆ ಇಟ್ಟವಳು ಈಗ ಆಕೆ ತನ್ನ ಛಲವನ್ನು ಬಿಡದೆ ಮತ್ತಷ್ಟು ಗೋಗರೆಯುತ್ತಾ
ಮುಂದಿನ ಪದ..
“ಇನ್ನು ಬಿಡು ಬಿಡು ಛಲವನೀಗ ಎನ್ನ ನುಡಿಯ ಮನ್ನಿಸಿ ರಾಘವನ ಪದಕೆರಗು ಮುನ್ನ....ಸಾಕೋರ್ವ ಮಗ ವಿರೂಪಾಕ್ಷ ...”
“ ಛಲಕ್ಕಾಗಿ
ಈರೀತಿ ಮಾಡ್ತೇನೆ ಅಂತ ಹೇಳ್ತೀರಿ. ಶೂರ್ಪನಖಿಯಂತೂ
ಕುಲಗೇಡಿ. ನೀವು ಮಾಡಿದ ಕ್ರಿಯೆಯಂತೂ ಕೆಟ್ಟದ್ದೆ. ಇಷ್ಟಕ್ಕೆಲ್ಲ
ಬಂದು ಈಗ ಛಲ ಅಂತ ಹೇಳ್ತಾ ಇದ್ದೀರಿ. “
“ ಹೌದು
ಚಲವೇ ಹಗುರವಾದ ಉಧಾಹರಣೆ ಹೇಳಲಾ...ಪ್ರಬಲರಾದ
ವ್ಯಕ್ತಿಗಳು ಅಕ್ಕ ಪಕ್ಕದಲ್ಲಿ, ಗಡಿಯಲ್ಲಿ ಕಟ್ಟಿಗೆಗೂ ಆಗದೇ ಇದ್ದಂತಹ ಒಂದು ಮರ ಅಂತಿಟ್ಟುಕೋ, ಅದು ನನ್ನದು ನನ್ನದೂ ಅಂತ ಇಬ್ರೂ ವಾದಕ್ಕೆ ಹೊರಟರೆ, ಆ ಒಂದು ಮರ ಇವರ ಎರಡೂ ಆಸ್ತಿಯನ್ನು ಮುಗಿಸ್ತದೆ
ಯಾಕೆ?”
“ಅದು ಛಲಕ್ಕಾಗಿ ಹಟಕ್ಕಾಗಿ..”
“ ವಿಷಯ ಸಣ್ಣದು ಮರ.. ಆದರೆ ಜನಗಳು ಇಬ್ಬರೂ ದೊಡ್ಡವರು. ಉತ್ತರದಲ್ಲಿ ರಾಮ ದೊಡ್ದವ..,
ದಕ್ಷಿಣದಲ್ಲಿ ನಿನ್ನ ಗಂಡ ರಾವಣ ದೊಡ್ಡವ. ಶೂರ್ಪನಖಿ ಒಂದು ಕುಂಬು ಮರವೇ. ಎನು ಮಾಡುವ ಹೇಳು? ಈಗ
ಯಾರು ಇದರಲ್ಲಿ ಹಿಂದೆ ಬಿಡುವುದು? ಮೊದಲು ಯಾರು ಕೈ ಹಿಂದೆ ತೆಗಿಯುದು? ರಾಮನೋ?”
“ಯಾರು ಹಿಂದೆ ತೆಗಿಯುದು ಅಂತ ನಾನು ಹೇಳಿದ್ರೆ ತಮಗೆ
ಸಿಟ್ಟಾದಿತು...ಒಂದು ವಿಚಾರ ಹೇಳ್ತೇನೆ. ಈಗ ಸೀತೆಯನ್ನು ತಂದದ್ದು ನಾವು ತಪ್ಪೂ ಅಂತ ನಮಗೆ
ಅನ್ನಿಸ್ತದೆ ಅಂತಾದ್ರೆ, ಈ ಸೀತೆಗಾಗಿ ನಾವು
ಹೋರಾಟ ಮಾಡುವಾಗ ತಪ್ಪನ್ನು ಸಾಧಿಸುವಕ್ಕೆ ಮತ್ತೂ ತಪ್ಪೇ ಮಾಡಿದಂತೇ ಅಲ್ಲವೇ? “
“ಸೀತೆಯನ್ನು ತಂದ ತಪ್ಪು ಆದದ್ದು ರಾಮ ಮಾಡಿದ ತಪ್ಪಿನ ಮೂಲಕ. ಅದನ್ಯಾಕೆ ಮರೆಸ್ತಿ? ತಪ್ಪೂ ಮೊದಲು ರಾಮನಿಂದ ಆಯಿತು. ಶೂರ್ಪನಖಿಯಿಂದ ಆಯಿತು ಅಂತ ನಾನು ಹೇಳುವುದಿಲ್ಲ.”
“ವಿಶ್ಲೇಷಣೆ ಪುನಃ ಹಿಂದಕ್ಕೆ ಹೋಗಬೇಕಾದೀತು ಹಾಗಾದರೆ”
“ ಬೇಡ,
ರಾಮನಿಗಿಂತ ಮೊದಲು ನಮ್ಮಿಂದ ಆಕಡೆಗೆ ತಪ್ಪಾದದ್ದು ಉಂಟಾ? ಇಲ್ವಲ್ಲ? ’”
“ ಉಂಟೋ ಏನೋ? “”
“ ಸದ್ಯ ತಿಳಿದ
ಹಾಗೆ. ಮತ್ತೆ ಹಾಗೆ ಏನುಂಟು ಅಂತ ಅವನು ಕಂಡಾಗ ಕೇಳ್ಬೇಕು. ಈ ರೋಗ ನಿಮ್ಮ ಕುಟುಂಬದ್ದೋ ಅಲ್ಲ
ಹುಟ್ಟಿದ ಮೇಲೆಯೋ. ಸದ್ಯ ತಿಳಿದಂತೆ ರಾವಣ ಸೀತೆಯನ್ನು ತಂದ ಮೇಲೆ ಅಲ್ವೋ ರಾವಣನಲ್ಲಿ ಶತ್ರುತ್ವ?
“
“ ಅಲ್ಲಿಂದಲೇ ತೊಡಗುವುದಾದ್ರೂ ನನಗೆ ಕಾಣಿಸುವುದು ಇಷ್ಟು. ಬಹಳಷ್ಟು ಕಾಮಾತುರೆಯಾದ ಶೂರ್ಪನಖಾ ಹೋದಾಗ, ಶ್ರೀರಾಮ ಹೇಳಿದನಂತಲ್ಲ, ನಿನಗೆ ಸವತಿಯೊಬ್ಬಳು ಇರಬಾರದು. ನನಗೆ ಮೊದಲೇ ಮದುವೆಯಾಗಿದೆ. ಆದುದರಿಂದ ನನ್ನನ್ನು ನೀನು ಬಯಸುಬೇಡಾಂತ. ಹಾಗೆ ಇವಳು ಮತ್ತೆ ಮತ್ತೆ ಕೇಳಿದುದಕ್ಕೆ ಅಲ್ವ ತಮ್ಮನನ್ನು ತೋರಿಸಿದ್ದು?”
“ಹಾಗೆ ಹೇಳಿದುದೇ
ಅಪದ್ದ ಅಂತಲ್ವ ನಾನು ಹೇಳುದು. ನೋಡು ವಿಷಯ ಗ್ರಹಿಸು. ರಾಮನಂಥವನು ಹಾಗೆ ಹೇಳಬೇಕಾದ್ದೋ?
ಶೂರ್ಪನಖಿಯಲ್ಲ.. ಅಥವಾ ಇನ್ನೊಬ್ಬಳು. ಆಗದಿರುವುದನ್ನು ಆಗಿಸುವುದಕ್ಕೋಸ್ಕರವಾಗಿ ಸಂಭಾವಿತನಾದ
ರಾಮನಲ್ಲಿಗೆ ಬರುತ್ತಾಳೆ. ಸಂಭಾವಿತನಾದವನಾದರೆ ಏನು ಹೇಳಬೇಕು? ಹೆಣ್ಣೇ ನಿನ್ನ ಕೃತಿಯೇ
ಸರಿಯಲ್ಲ. ಹಾಗೆ ಹೇಳಿದನೋ ರಾಮ? ಹಾಗೆ ಹೇಳಿ ಅಲ್ಲಿಂದಲ್ಲಿಗೆ ಅದನ್ನು ಮುರೀಬೇಕೋ? ಅದು ಬಿಟ್ಟು
ನಾನು ಏಕಪತ್ನಿ ವೃತಸ್ಥ. ಆಗ ಅವಳಿಗೆ ತೋರಿತು ಏಕ ಪತ್ನಿ ವೃತ ಇಲ್ಲದಿದ್ದರೆ ನನ್ನು ಸ್ವೀಕರಿಸಲಿಕ್ಕೆ
ತಯಾರಾಗ್ತಾನೋ ಏನೋ? ಆದರೆ ಹುಚ್ಚಿಗೆ ಔಷಧಿ ಕೊಡೋದು ಮತ್ತಷ್ಟು ಮತ್ತೇರಿಸುವಂತಹದ್ದಲ್ಲ.
ಹೌದಲ್ಲ. ಆದಕಾರಣ ನನಗೆ ತೋರುವುದು. ಸಂಭಾವಿತನಾದ ರಾಮ – ತಂಗೀ .... ಹೀಗೆಲ್ಲ ಮಾಡಬಾರದು. ಇಲ್ಲಿ ನಿನಗೆ ಅವಕಾಶ ಇಲ್ಲಾಂತ ಹೇಳ್ಬೇಕೋ? ಮತ್ತೆ ಕೆಲವರೆಲ್ಲ ಹೇಳಿದ್ರು. ಮದನನ ಪಟ್ಟದಾನೆ ನೀ ಮೊದಲೆ ಬಂದುದಿಲ್ಲ? ಚದುರೆ ಸಣ್ಣವಳೊಬ್ಬಳ ಮದುವೆಯಾದೆನಲ್ಲ.? ಆವಾಗ ನನಗೂ
ಪ್ರಶ್ನೆ ಹುಟ್ಟುವುದು, “ ಅಯ್ಯಾ ರಾಮ ಚಂದ್ರನೇ, ನನ್ನ ತಂಗಿ ಮೊದಲೇ ಬಂದುದಿಲ್ಲ ಹೌದು. ಮೊದಲೇ
ಬರ್ತಿದ್ರೆ ನೀನವಳಿಗೆ ತಾಳಿ ಕಟ್ಟುತ್ತಿದ್ದಿಯೋ?” ಅಂತ ಕೇಳ್ಬೇಕು. ಆವಾಗ ಅವನು ಮೊದಲೂ
ಶೂರ್ಪನಖೀ ಮದುವೆಗೆ ತಯಾರಾದವನಲ್ಲ. ಇಂತಹ ಸಂದರ್ಭದಲ್ಲಿ ಎಲ್ಲ ಅರಸು ಮಕ್ಕಳು ತಮ್ಮ
ನಿಲುಮೆಯನ್ನು ಹೇಗೆ ಹೇಳ್ಬೇಕು. ಟ ಠ ಡ ಢ ಣ...ಅಂತ. ಅಲ್ಲಿ ಕಾವ್ಯ ಯಾಕೆ? ಆಗ ಅವನು ಲಕ್ಷ್ಮಣನಲ್ಲಿ ಹೇಳಿದ್ದನಂತೆ, ಏನೇ ಹೇಳು, ಈ ಅನಾಗರಿಕರಲ್ಲಿ ಅಸಭ್ಯರಲ್ಲಿ ಈ ಹಾಸ್ಯ
ಪ್ರವೃತ್ತಿ ಸುಖಕ್ಕೆ ಇದ್ದದ್ದಲ್ಲ. ಹಾಗಾದರೇ ಅವನೇ ಒಪ್ಪಿಕೊಂಡ ಹಾಗಾಯಿತು. ಅದನ್ನೇ ಅವನು
ಪ್ರತ್ಯಕ್ಷ ನನ್ನಲ್ಲಿ ಹೇಳಿಬಿಡಲಿ. ಅಲ್ಲಿ ಅವನತ್ರ ಹೇಳುವುದು ಬೇಡ. “ ಏನೋ
ರಾವಣೇಶ್ವರ..ಏನೋ ಹುಡುಗಾಟಿಕೆ ನಾನು ಸ್ವಲ್ಪ ಹುಚ್ಚು ಕಟ್ಟಿದೆ ಹೌದು. ನಿನ್ನ ತಂಗಿಯ
ಕುರಿತಾಗಿ” ಹೀಗೆ ಹೇಳಿದ್ರೆ ಏನು
ಮಾಡಬೇಕೋ ಮತ್ತೆ ಅಲೋಚನೆ ಮಾಡ್ತಿದ್ದೆ. ಈಗಲೂ ಅದನ್ನು ಅವನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ.
ತಾನು ಮಾಡಿದ್ದೇ ಸರಿ. ಅದು ಎಲ್ಲಿವರೆಗೆ ಬಂದಿದೆ ಗೊತ್ತೋ? ಶೂರ್ಪನಖಿ ಪುರುಷಾತಿಕ್ರಮಣ
ಮಾಡಿದ್ಲು. ನಿನ್ನಲ್ಲಿ ನಾನು ಕೇಳುವುದು ಪುರುಷಾತಿಕ್ರಮಣ ಮಾಡಿದ್ದಾಳೋ??”
“ ಮಾಡುವುದಕ್ಕೆ
ಮನ ಮಾಡಿದ್ದಾಳೆ ಅಂತ ಹೇಳಬಹುದು...”
“ ಕೊಲೆ ಮಾಡುವುದಕ್ಕೆ ಮನ ಮಾಡಿದವರಿಗೂ ಕೊಲೆ ಮಾಡಿದವರಿಗೂ ಒಂದೇ ಶಿಕ್ಷೆಯೋ ರಾಮ ರಾಜ್ಯದಲ್ಲಿ. ? ಪ್ರಶ್ನೆ ಅದು. ಪುರುಷಾತಿಕ್ರಮಣ ಮಾಡಿದರೆ...ಮಾಡಿದರೆ ಕರ್ಣನಾಸಾಚ್ಛೇದನ ಒಪ್ಪಿಕೊಳ್ಳೋಣ. ಮಾಡುವುದಕ್ಕೆ ಪ್ರಯತ್ನ ಪಟ್ಟರೆ ಕರ್ಣನಾಸಾಚ್ಛೇದನ ಮಾಡ್ತಾನೆ ಅಂತಾದ್ರೆ, ನಿನ್ನಲ್ಲಿ ಹೇಳ್ತೇನೆ ನನ್ನ ತಂಗಿ ದಾರಿಯಲ್ಲಿ ಬಿದ್ದಬಳು ಅಂತ ಪ್ರಚಾರ ಮಾಡುವ ಒಂದು ದುರ್ಬುದ್ಧಿ ಆ ಉದ್ದೇಶವೂ ಉಂಟವನಿಗೆ. ವ್ಯಭಿಚಾರ ಮಾಡದೇ ಒಬ್ಬಳಿಗೆ ವ್ಯಭಿಚಾರದ ಶಿಕ್ಷೆ ಕೊಡಕೂಡದು. ಈಗ ಆಯ್ತಲ್ಲ ಕರ್ಣನಾಸಾಚ್ಛೇದನ ಮಾಡಿದಮೇಲೆ ಪುರುಷಾತಿಕ್ರಮಣ ಮಾಡಿದ್ದಾಳೆ ಅಂತ ಆಯ್ತಲ್ಲ? ಬಹುಷಃ ರಾಮನಲ್ಲಿ ಅಲ್ಲ, ಲಕ್ಷ್ಮಣನಲ್ಲಿ ಅಲ್ಲ, ಬೇರೆ ಧಾರಾಳ ಮಾಡಿದ್ದಾಳೆ ಅಂತ ಆಯ್ತಲ್ಲ? ನನ್ನ ಮನೆತನದಲ್ಲಿ ಹುಟ್ಟಿದ ನನ್ನ ತಂಗಿಯನ್ನು ಹಾಗೆ ಪ್ರಪಂಚ ಮುಖಕ್ಕೆ ಎತ್ತಿ ತೋರಿಸುವಾಗ, ಅವನ ಹೆಂಡತಿ ಎಷ್ಟರ ಮಟ್ಟಿಗಿನ ಮಡಿವಂತಿಕೆಯವಳು? ಅಂತ ನಾನೂ ನೋಡಬೇಕಾಗ್ತದಲ್ಲ? ಇದೆಲ್ಲ ನನಗೆ ಅವನೇ ಕಲಿಸಿದ್ದು.
“ ಆದ್ರೆ ಒಂದಾಗ್ತದಲ್ಲ...? ಆ ಶೂರ್ಪನಖ ಇಷ್ಟನ್ನೆಲ್ಲ ಹೊತ್ತುಕೊಂಡು ಖರಾಸುರನಲ್ಲಿ ಹೋಗಿ ಹೇಳಿದಳಲ್ಲ. ಖರಾಸುರ ನೇರಾಗಿ ಹೋಗಿ ವಿಚಾರಿಸಿದನಂತಲ್ಲ? ಅದು ಅವನ ಎದೆಗಾರಿಕೆ. ನೇರಾಗಿ ಎದುರಿಸಿದ ಖರಾಸುರನನ್ನು ಇವತ್ತು ಜಗತ್ತು ಅವಹೇಳನ ದೃಷ್ತಿಯಿಂದ ಕಾಣ್ತಾ ಇಲ್ಲ. ಅವನು ವೀರಾಗ್ರಣಿಯಾಗಿ ಹೋರಾಡಿದ ಅಂತ ಹೇಳ್ತದೆ. ಆದ್ರೆ ನಿಮ್ಮನ್ನು ಹಾಗೆ ಹೇಳ್ತದ? ಅವಹೇಳನ ದೃಷ್ಟಿಯಿಂದ ಕಾಣುವುದಲ್ವ?” ಸೀತೆಯನ್ನು ಮಾಯದಿಂದ ಅಪಹರಿಸಿ ತಂದುದನ್ನು ಉದ್ದೇಶೀಸಿಯೇ ಮಂಡೋದರಿ ಈ ಮಾತನ್ನು ಹೇಳುತ್ತಾಳೆ. ಖರದೂಷಣಾದಿಗಳು ಹತರಾದಾಗ ರಾವಣ ನೇರಾಗಿ ದಂಡೆತ್ತಿ ಹೋಗಬೇಕಿತ್ತು. ಯಾಕೆ ಹೋಗಲಿಲ್ಲ? ರಾಮನಿಗೆ ಹೆದರಿ ವಂಚನೆಯೇ ಎಸಗಿಬಿಟ್ಟ. ಪರೋಕ್ಷವಾಗಿ ರಾಮನ ಬಗ್ಗೆ ಇರುವ ಆ ಭಯ ಈಗಲೂ ಇದ್ದಲ್ಲಿ ಶರಣಾಗತಿ ಅತ್ಯಂತ ಸೂಕ್ತ ಅಂತ ಎಚ್ಚರಿಸುವುದೇ ಇದರ ತಾತ್ಪರ್ಯ.
ಆದರೆ ರಾವಣ ಇದನ್ನು ಸಮರ್ಥಿಸುವುದೇ ಬೇರೆ ರೀತಿಯಲ್ಲಿ.
“ ಹಾಗೆ ಹೇಳುವುದಿದ್ದರೆ ಈ ನಿನ್ನ ಶೂರ್ಪನಖಿಯ ಒಟ್ಟಿಗೆ ಅವರೂ ಅಧಿಕ ಪ್ರಸಂಗ ಮಾಡಿದರು. ಶೂರ್ಪನಖಾ ಪ್ರಕರಣವನ್ನು ವಿಚಾರಿಸುವುದಕ್ಕೆ ಖರ ದೂಷಣಾದಿಗಳು ಹೋದರು. ಹೋಗಿ ಸತ್ತರು. ಆವಾಗ ಮತ್ತಷ್ಟೂ ನನ್ನ ಅಭಿಮಾನಕ್ಕೊಂದು ಸವಾಲಾಯಿತೋ ಇಲ್ವೊ? ಮತ್ತೆ ನಾನು ಸುಮ್ಮನೆ ಕೂತುಕೊಳ್ಳುವುದಕ್ಕೆ ಸಾಧ್ಯವೋ? ಮತ್ತೆ ನೀನು ಹೇಳ್ತಿ ನೇರಾಗಿ ದಂಡೆತ್ತಿ ಹೋಗಬಹುದಿತ್ತಲ್ಲ? ನಾನು ರಾಜ ಪುರುಷ. ನನ್ನ ಯೋಜನೆ ತಯಾರಿಸಬೇಕಿದ್ದರೆ ಹಿಂದೆ ಮುಂದೆ ಆಲೋಚನೆ ಮಾಡಬೇಕಾಗುತ್ತದೆ. ಖರದೂಷಣಾದಿಗಳಿಗೆ ಏನು? ಅದಕ್ಕಾಗಿ ಆಲೋಚಿಸಿದೆ. ಆಲೋಚಿಸುವಾಗ ನಮ್ಮದ್ದಾದ ಜಾಗದಲ್ಲಿ ಈಗ ರಾಮ ಪ್ರಬಲನಾಗಿದ್ದಾನೆ. ಅಕಂಪನಂತಹ ವರದಿಗಾರರು ಹೇಳಿದ್ದಿದು. ಇನ್ನೂ ಒಂದು ಉಂಟು. ಪಿತೃ ವಾಕ್ಯ ಪರಿಪಾಲನೆಗಾಗಿ ಅಧಿಕಾರವನ್ನು ಬಿಟ್ಟು ದಂಡಕಾರಣ್ಯಕ್ಕೆ ರಾಮ ಬಂದರೂ ಅಪ್ಪ ಸತ್ತಮೇಲೆ ಭರತ ಬಂದು ಒಡಂಬಡಿಕೆಯಲ್ಲಿ ಅವನೇ ಅಯೋಧ್ಯೆಯ ರಾಜ. ನಾಮ ಮಾತ್ರಕ್ಕೆ ಭರತ. ಆಢಳಿತಕ್ಕೆ ರಾಮನೇ. ಇದರ ದ್ಯೋತಕವಾಗಿ ಪಾದುಕಾ. ಇಷ್ಟಾದ್ರೆ ರಾಮನ ಮೇಲೆ ನಾವು ದಂಡೆತ್ತಿ ಹೋಗ್ತೇವೆ ಅಂತಾದ್ರೆ, ಅಯೋಧ್ಯೆಯಿಂದ ಸೈನ್ಯವೂ ಬಂದರೆ, ಏನಾದೀತು?”
“ಆ ಕ್ಷೇತ್ರದಲ್ಲಿ ದೊಡ್ದ ಹೋರಾಟವೇ ನಡಿದೀತು”
“ಹೆಚ್ಚು ನಷ್ಟ ನಮಗೂ ಆದೀತು. ಅದು ಕೈಬಿಟ್ಟು ಹೋದ ಸ್ಥಳ. ಅದಕ್ಕಿಂತ, ಆದದ್ದಾಯ್ತಲ್ಲ. ನಿದ್ದೆಗಣ್ಣಿನಲ್ಲಿ ಏನೋ ಅಗಿ ಹೋಯಿತು ಇನ್ನು ನಾವು ಜಾಗೃತರಾಗಬೇಕು. ಆದಕಾರಣ ಒಂದು ಗಾದೆ ಮಾತು ಉಂಟು, ಮೊಸಳೆಗೆ ನೀರಿನಲ್ಲಿ ಶಕ್ತಿ, ಆನೆಗೆ ನೆಲದಲ್ಲಿ ಶಕ್ತಿ. ಆನೆ ನೀರು ಕುಡಿಲಿಕ್ಕೆ ಬರಲಿ. ಇದಕ್ಕೆ ಏನಾದರೂ ಸಂವಿಧಾನವನ್ನು ತಯಾರಿಸೋಣ ಎನ್ನುವ ಮೊಸಳೆಯ ರಾಜಕೀಯದಂತೆ ಸೀತೆಯನ್ನು ತರುವ. ರಾಮ ಇಲ್ಲಿಗೆ ಬರಲಿ. ಮತ್ತೆ ಅವನ ಅಪ್ಪನದ್ದು ಅಯೋಧ್ಯೆಯಿಂದ ಎಷ್ಟು ಬರುತ್ತದೆ ನೋಡುವ. ಯೋಜನೆಯಲ್ಲಿ ತಪ್ಪಿ ಬೀಳಿಲ್ಲ. ಮತ್ತೇನಾಯಿತು....ಕೆಲವು ಸಲ ಯೋಜನೆ ಫಲಕಾರಿಯಾಗ್ತದೆ. ಫಲಪೂರ್ತಿಯಾಗೋದಿಲ್ಲ. ನೀರಿಲ್ಲದೇ ಇದ್ದಲ್ಲಿ ಎಲ್ಲರಿಗೂ ನೀರು ಉಣಿಸೋಣ ಅಂತ, ಎನನ್ನಾದರೂ ನಾವು ತಯಾರಿಸಬಹುದು ಜಲಾಶಯ. ಆದರೆ, ಜಲಾಶಯ ತಯಾರಿಯಾಗಿ ಹನ್ನೆರಡುವರ್ಷ ಗುಡುಗದೇ ಇದ್ದರೆ? ಮಳೆ ಸುದ್ದಿ ಬಿಡು. ಯೋಜನೆಯ ದೋಷ ಅಂತ ಹೇಳ್ಳಿಕ್ಕೆ ಬರ್ತದಾ? ಆದುದರಿಂದ ಹೀಗೆಲ್ಲ ಯೋಜನೆ ಹಾಕಿ ಸೀತೆಯನ್ನು ತಂದದ್ದಾಯಿತು. ರಾಮನು ಸ್ತ್ರೀಮೂಲದಿಂದಲೇ ತೊಡಗಿದ್ದು ಯುದ್ದ. ನಾವು ಸ್ತ್ರೀ ಮೂಲದಿಂದಲೇ ಯುದ್ದಕ್ಕೆ ಆಹ್ವಾನ ಕೊಟ್ಟದ್ದು. “
“ ಹಾಗಾದರೆ ರಾಮ ಸಮರ್ಥ ಎಂಬ ಕಾರಣಕ್ಕಾಗಿ ರಾವಣನ ತಂಗಿಯನ್ನು ತಿರಸ್ಕರಿಸಿದ್ದಿರಬೇಕು.”
“ಆವಾಗಲೇ ನನಗೆ ಬಂದದ್ದು ನೀನು ಸಮರ್ಥ ಎಲ್ಲಿ? ರಾವಣ ಇಲ್ಲದೇ ಇದ್ದ ಜಾಗದಲ್ಲಿ ಅಲ್ವ? ಇದ್ದಲ್ಲಿಗೆ ಬಾ ತಪ್ಪೇನು?”
“ಆದರೂ ಇಲ್ಲಿಗೆ ಬಂತಲ್ಲ.? ಈಗ ಎಲ್ಲರೂ ತೀರಿದರಲ್ಲ. ಇನ್ನು ಹೀಗೆ ಮುಂದುವರೆಸಿದರೆ ನಮ್ಮದೂ ಮುಗೀತದಲ್ಲ? ಒಬ್ಬ ಮಗ ಇದ್ದಾನೆ ಕರುಳ ಕುಡಿ ವಿರೂಪಾಕ್ಷ. ಅವನಿಗಾಗಿಯಾದರೂ. ಅವನೊಬ್ಬನಾದರೂ ಉಳಿದರೆ ಅವನಿಂದ ದಾನವ ಸಾಮ್ರಾಜ್ಯ ಮತ್ತೆ ಚಿಗುರೊಡೆದು ನಳ ನಳಿಸುವುದಕ್ಕೆ ಸಾಧ್ಯವಿದೆ.” ಇದು ಮಂಡೋದರಿಯ ಕೊನೆಯ ಅಸ್ತ್ರ. ಇಂದ್ರಜಿತು ಹೋದ. ಇರುವ ಒಬ್ಬ ಮಗ ವಿರೂಪಾಕ್ಷನ ಮೇಲೆ ಮಮತೆ. ಆದರೆ ಇದೆಲ್ಲದರಿಂದ ಅತೀತವಾಗಿ ರಾವಣನ ಚಿಂತನೆ ಹರಿಯುತ್ತಿರುವುದು ಅವಳ ಗಮನಕ್ಕೆ ಬಂದಂತಿಲ್ಲ,
ರಾವಣ ಹೇಳ್ತಾನೆ...,
“ಓ ಮಂಡೋದರೀ ಇಂದ್ರಜಿತುವಿನಂತಹ ಮಗನನ್ನು ಹೆತ್ತ ವೀರಗರ್ಭೆ ಆಡುವ ಮಾತೇನೆ ಇದು.?ಇಂದ್ರಜಿತುವಿನ ತಮ್ಮ ವಿರೂಪಾಕ್ಷನಿಗಾಗಿ ನೀನು ಭಿಕ್ಷೆ ಬೇಡುವುದೇನೆ? ಅವನನ್ನಾದರೂ ಉಳಿಸೋಣ. ಉಳಿಯುವುದಕ್ಕು ಅಳಿಯುವುದಕ್ಕೂ ಅವನಿಗುಂಟು ಸ್ವಾತಂತ್ರ್ಯ. ಮೀಸೆ ಬಂದ ಮಗ ಅವನು. ನಿನಗೆ ಸೊಸೆ ಬಂದಿದ್ದಾಳೆ ಅವನ ಹೆಸರಿನಲ್ಲಿಅವನಿಗಾಗಿ ಬೇಡ್ತಾ ಇದ್ದೀಯಲ್ಲ? ಹಾಗಾಗಿ ಅವನ ಪರವಾಗಿ ನೀನಿಲ್ಲಿ ಒಬ್ಬ ಮಗನನ್ನು ಉಳಿಸೋಣ ಅಂತ ಅಂದ್ರೆ ಅವನಿಗೆ ಅಪಮಾನ ಅಲ್ವೇನೆ? ಪ್ರಾಯ ಬಂದ ಮಗನಿಗಾಗಿ ನೀನು ಪ್ರಾರ್ಥಿಸುವುದೇನೆ. ಇಷ್ಟು ದೊಡ್ಡ ರಾಮಾಯಣ ಆದದ್ದೇ ನಿನ್ನ ಹಾಗೆ ಒಂದು ಹೆಣ್ಣಿಗೆ ಮೀಸೆ ಬಂದ ತನ್ನ ಮಗನ ಮೇಲೆ ಬಂದ ವ್ಯಾಮೋಹದಿಂದ. ಭರತ ಮೀಸೆ ಬಂದ ಮಗ. ಒಂದು ಮದುವೆಯಾದವನು. ಆ ಮಗನಿಗಾಗಿ ಗಂಡ ದಶರಥನಲ್ಲಿ ರಾಜ್ಯವನ್ನು ಬೇಡಿದಳು. ಉತ್ತರದಲ್ಲಿ ಒಂದು ಹೆಣ್ಣಿಗೆ ತನ್ನ ಮಗ ಪಟ್ಟಕ್ಕೇರಬೇಕೆಂಬ ಆಲೋಚನೆ ಇಷ್ಟು ಜನರ ಪಟ್ಟ ಅಲುಗಾಡಿಸಿತು ನೋಡು. ಅದೇ ಅಗ್ಬೇಕಾ ಇಲ್ಲಿ?”
ಮಂಡೋದರಿಯ ಬೇಡಿಕೆಯನ್ನು ತಿರಸ್ಕರಿಸುವ ರಾವಣ ಕೊನೆಯಲ್ಲಿ ಕೇಳುತ್ತಾನೆ. ಮಗನಿಗಾಗಿ ಕೇಳುವುದನ್ನು ಬಿಟ್ಟು ತನಗಾಗಿ ಏನಾದರೂ ಕೇಳು. ಸಾವಿರಾರು ಸವತಿಯರನ್ನು ನಿರ್ಮಾಣ ಮಾಡಿದರೂ ಪತಿಯ ಬಗ್ಗೆ ಚಕಾರವೆತ್ತದ ಮಂಡೋದರಿಯ ಪತಿ ಭಕ್ತಿಯ ಬಗ್ಗೆ ಅಭಿಮಾನವ್ಯಕ್ತವಾಗುತ್ತದೆ ರಾವಣನಿಗೆ.
nice one sir, I put it in facebook
ReplyDelete