ಹೊಗಳಿಕೆ ಹೊನ್ನ
ಶೂಲವಯ್ಯಾ ಅಂತ ಬಲ್ಲವರು ತಮ್ಮ ವಚನಗಳಲ್ಲಿ ಹೇಳಿಕೊಂಡಿದ್ದಾರೆ. ಹೊನ್ನ ಶೂಲದಂತೆ ಅದು
ಸುಂದರವಾಗಿ ಕಾಣುತ್ತದೆ ಪರೋಕ್ಷವಾಗಿ ಅರಿವಿಲ್ಲದಂತೆ ಇರಿಯತೊಡಗುತ್ತದೆ. ವಿಚಿತ್ರವೆಂದರೆ ಹೊನ್ನ
ಶೂಲ ಇರಿದು ಇರಿದು ತನ್ನ ಗಮ್ಯ ಸೇರಿದಮೇಲೆ ಹೊನ್ನಿನ ಬಣ್ಣವನ್ನೇ ಕಳೆದುಕೊಳ್ಳುತ್ತದೆ
ಮಾತ್ರವಲ್ಲ ಹೊಗಳಿಕೆ ಎಂಬುದು ಮಾಯವಾಗಿಬಿಡುತ್ತದೆ. ಆದರೂ ಮಿಥ್ಯವಾದ ಈ ಹೊನ್ನಿನ ಶೂಲಕ್ಕೆ
ಬೇಕೆಂದೇ ಎದೆ ಕೊಡುವುದು ಮಾತ್ರ ಮನಸ್ಸಿನ ವಿಕಲ್ಪಗಳಿಗೆ ಸ್ಪಷ್ಟ ಉದಾಹರಣೆಯಾಗಬಲ್ಲುದು. ಮನುಷ್ಯನ
ಮಹತ್ವಾಕಾಂಕ್ಷೆಯಲ್ಲಿ ಮನ್ನಣೆ ಎಂಬುದು ಮೊದಲ ಸಾಲಿನಲ್ಲಿ ಕಂಡುಬಂದಾಗ ಅದರಹಿಂದೆಯೇ ಈ ಹೊನ್ನ
ಶೂಲ ತನ್ನ ಪ್ರಭೆಯನ್ನು ಬೀರಲಾರಂಭಿಸುತ್ತದೆ. ಅದರಲ್ಲೂ ಸಾರ್ವಜನಿಕ ಜೀವನವಾಗಿದ್ದರಂತೂ ಇದು
ಅನಿವಾರ್ಯವಾಗಿ ಈ ಪ್ರಭೆ ಬೇಡವಾಗಿದ್ದರೂ ಮೈತುಂಬೆಲ್ಲ ತನ್ನ ಪ್ರಭಾವವನ್ನು ಬೀರಿಬಿಡುತ್ತದೆ.
ಆವಾಗ ಭಗವದ್ಗೀತೆಯ ಮಾತು ನೆನಪಿಗೆ ಬರುತ್ತದೆ.
ಯಂ ಹಿ ನ ವೃಥಯಂತ್ಯೇತೇ ಪುರುಷಂ ಪುರುಷರ್ಷಭ |
ಸಮ ದುಃಖಸುಖಂ ಧೀರಂ ಸೋಮೃತತ್ವಾಯ ಕಲ್ಪತೇ ||
( ಶೀತ ಉಷ್ಣಗಳಂತಹ ದ್ವಂದ್ವಗಳಿಗೆ ಯಾರು ಉದಾಸೀನರಾಗಿರುತ್ತಾರೋ, ಇವುಗಳು
ಯಾರನ್ನು ಬಾಧಿಸುವುದಿಲ್ಲವೋ, ಯಾರಿಗೆನೋವು ನಲಿವು ಒಂದೇ ಆಗಿರುತ್ತವೆಯೋ ಅಂತಹ ಧೀರನು ಆತ್ಮನ ಅಮೃತತ್ವವನ್ನು
ತಿಳಿಯುವುದಕ್ಕೆ ಅರ್ಹನಾಗುತ್ತಾನೆ.)
ಭಗವದ್ಗೀತೆಯಲ್ಲಿರುವ
ಶ್ಲೋಕವಿದು. ಸುಖ ದುಃಖ ನೋವು ನಲಿವಿಗೆ ಯಾರು
ಸಮಚಿತ್ತವನ್ನು ಹೊಂದಿರುತ್ತಾರೋ ಅವರು ನಿಜವಾದ
ಪುರುಷನಾಗಿದ್ದು ಅಮೃತತ್ವದ ಹಾದಿಯಲ್ಲಿ ಸಾಗಬಹುದು. ಇದು ಕೇವಲ ಬದುಕಿನ ಸಂಕೇತ ಶಬ್ದಗಳು. ಇದು
ವಿಶ್ಲೇಷಣೆಗೆ ಸಿಲುಕಿದಾಗ ವಿಶಾಲವಾದ ಅರ್ಥಗಳನ್ನು ಬಿಂಬಿಸುತ್ತವೆ.
ಸಮಚಿತ್ತ ಎಂಬುದು
ಸಾರ್ವಜನಿಕ ಜೀವನವನ್ನು ತಬ್ಬಿಕೊಂಡವರಿಗೆ ಅತೀ ಅಗತ್ಯ. ಹೊಗಳಿಕೆ ಮತ್ತು ತೆಗಳಿಕೆ ಇದು
ಸಾರ್ವಜನಿಕ ಜೀವನದ ದ್ವಂದ್ವ ಮುಖಗಳಲ್ಲಿ ಒಂದು. ಸಮುದ್ರ ಮಥನದ ದೇವಾಸುರರಂತೆ ಈ ಹೊಗಳಿಕೆ ಮತ್ತು
ತೆಗಳಿಕೆ ಎರಡೂ ಬದಿಯಲ್ಲಿ ನಿಂತಿರುತ್ತದೆ. ವಿಪರ್ಯಾಸವೆಂದರೆ ಈ ಮಧ್ಯೆ ನಮ್ಮಲ್ಲಿರುವ
ಅಮೃತತ್ವವು ನಮಗೆ ಅರಿವಿಲ್ಲದಂತೇ ಸೋರಿಹೊಗುತ್ತದೆ. ಅಲ್ಲಿ ಮನಸ್ಸು ಹೊಗಳಿಕೆ ಮತ್ತು ತೆಗಳಿಕೆಯ
ಸ್ಪಂದನೆಯಲ್ಲೇ ಮುಳುಗಿರುತ್ತದೆ. ಸಮಚಿತ್ತವೆಂಬುದು ಸ್ಥಿರತೆ ಮತ್ತು ಬೆಳವಣಿಗೆಯ ಸಂಕೇತ.
ಯಾವುದು ಎಲ್ಲಿವರೆಗೆ ಸ್ಥಿರವಾಗಿರಬಲ್ಲುದೋ ಅಲ್ಲಿ ತನಕ ಅದು ಬೆಳವಣಿಗೆಯನ್ನು ಕಾಣುತ್ತದೆ.
ಕಲಾವಿದನಿಗೆ ಇದು ಅತ್ಯವಶ್ಯ.
ಇದೇ ಬಗೆಯಲ್ಲಿ
ಅಭಿಮಾನ. ಯಾವುದೇ ಒಂದು ವಿಚಾರ ಪ್ರಿಯವಾದಾಗ ಜತೆಯಲ್ಲೆ ಅದರ ಬಗ್ಗೆ ಬೆಳೆದು ಬರುವ ಮೋಹ
ಅಭಿಮಾನವಾಗಿ ಬದಲಾಗುತ್ತದೆ. ಅಭಿಮಾನ ಸ್ಥಿರತೆಯನ್ನು ಹೊಂದಿದ್ದರೆ ಅದು ಮನದ ಮೂಲೆಯಲ್ಲಾದರೂ
ಜೀವಂತವಾಗಿರುತ್ತದೆ. ಅನುಕೂಲ ಸಮಯದಲ್ಲಿ ತೃಣವೂ ಚಿಗುರಿದಂತೆ ಅದು ಬೇಕಾದಾಗ ಚಿಗುರಿ ನಂತರ
ಅಂತಸತ್ವವನ್ನು ಜೀವಂತವಾಗಿರಿಸಿ ಅಂತರಂಗದಲ್ಲಿ ಹುದುಗಿಕೊಳ್ಳುತ್ತದೆ. ಆದರೆ ಅಹಂಭಾವದಿಂದ ಕೂಡಿದ
ಅಭಿಮಾನ ಚಂಡ ಮಾರುತಕ್ಕೆ ಸಿಕ್ಕಿದ ಬಳ್ಳಿಯಂತೆ ತನ್ನ ಹೊಲಬನ್ನು ಮರೆತುಬಿಡುತ್ತದೆ. ಅಭಿಮಾನ
ಹುಟ್ಟಿಕೊಂಡಾಗ ಪೂರ್ವಾಗ್ರಹವೂ ಜತೆಯಲ್ಲೇ ಹುಟ್ಟಿಕೊಳ್ಳುತ್ತದೆ. ಈ ಪೂರ್ವಾಗ್ರಹ ಎಲ್ಲವನ್ನೂ
ಕುರುಡಾಗಿಸುತ್ತದೆ. ಆವಾಗಲೇ ಅಭಿಮಾನ ಅಂಧಾಭಿಮಾನವಾಗುವುದು. ಇದು ಅಭಿಮಾನವು ಬೆಳೆಯುವ ಹಾದಿಯನ್ನೇ ಮರೆಸಿಬಿಡುತ್ತದೆ.
ಪೂರ್ವಾಗ್ರಹದಿಂದ ಪ್ರಚೋದಿತ ಅಭಿಮಾನ ಉಳಿದ ಎಲ್ಲಾ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಒಬ್ಬ
ಕಲಾವಿದನಲ್ಲಿ ಅಪರಿಮಿತ ಅಭಿಮಾನವನ್ನು ಪೂರ್ವಾಗ್ರಹದಿಂದ ತೋರಿದಾಗ, ಹಲವು ಸಲ ಅದೇ ಕಲಾವಿದನಲ್ಲಿ ಅದು ಅಹಂಭಾವವನ್ನು ಬೆಳೆಸುತ್ತದೆ.
ಅಹಂಭಾವ ಅಥವಾ ಅಹಂಕಾರ ಎಂಬುದು ಕಲೆಯ ಕಣ್ಣುಗಳನ್ನೇ ಮುಚ್ಚಿಬಿಡುತ್ತದೆ. ಉನ್ನತಿಯ ಹಾದಿಯೇ ಮುಚ್ಚಿಕೊಂಡ ಮೇಲೆ ಕಲೆಯ ಉನ್ನತಿ
ಹೇಗೆ ಸಾಧ್ಯ? ಸಮಚಿತ್ತ ಹೊಂದಿದಲ್ಲಿ ಅಹಂಭಾವ ದೂರವಾಗಿ ಉನ್ನತಿಯ ಹಾದಿ ಸುಗಮವಾಗುತ್ತದೆ.
ಇಂದು ಯಕ್ಷಗಾನದಲ್ಲಿ
ಈ ಎರಡು ವಿಚಾರಗಳು ಬಹಳಷ್ಟು ವೈಷಮ್ಯವನ್ನೇ ಹುಟ್ಟಿಸುತ್ತದೆ. ಸಾಮರಸ್ಯ ಸಮಾಧಾನ ಇಲ್ಲವಾದರೆ
ಚಿತ್ತ ಚಾಂಚಲ್ಯ ಉಂಟಾಗುತ್ತದೆ. ಕ್ಷೋಭೆ ತುಂಬಿದ ಮನಸ್ಸಿನಿಂದ ಪ್ರಾಮಾಣಿಕ ಕಲಾಸ್ವಾದನೆ ಸಾಧ್ಯವಾಗುವುದಿಲ್ಲ.
ಕಲೆಯ ಮೇಲೆ ಅಥವಾ ಕಲಾವಿದನ ಮೇಲೆ ಅಭಿಮಾನ ಹೊಂದುವುದು ಹಲವು ಸಲ ಇನ್ನೊಬ್ಬನಲ್ಲಿ ದ್ವೇಷವನ್ನೇ
ಹುಟ್ಟಿಸುತ್ತದೆ. ಕಲೆ ಎಂಬುದು ಮನಸ್ಸನ್ನು
ನವಿರಾಗಿಸಬೇಕೇ ಹೊರತು ದ್ವೇಷ ಮಾತ್ಸರ್ಯವನ್ನು ಪ್ರಚೋದಿಸುವಂತಾದರೆ ಮೂಲ ಭಾವನೆಯನ್ನೇ ಅಪಹಾಸ್ಯ
ಮಾಡಿದಂತೇ ಅಲ್ಲವೇ?
ಮೇಳದಲ್ಲಿ ಹಿರಿಯ
ಭಾಗವತನೊಬ್ಬನಿರುತ್ತಾನೆ. ಜತೆಗೆ ಈತನ ನಂತರ ಬಂದ, ಈತನ ಮಾರ್ಗದರ್ಶನದಲ್ಲೇ ಬೆಳೆಯುವ ಯುವ ಭಾಗವತ
ಬರುತ್ತಾನೆ. ಹೊಸಚಿಗುರು ಚಿಗುರದೇ ಇದ್ದರೆ ಬೆಳವಣಿಗೆ ಹೇಗೆ ಸಾಧ್ಯ? ಬೆಳೆದ ಯುವ ಭಾಗವತ
ಬೆಳೆಯುತ್ತಾ ಬೆಳೆಯುತ್ತ ಹಿರಿಯನಿಂದಲೂ ಪ್ರಧಾನನಾಗಿಬಿಡುತ್ತಾನೆ. ಹಿರಿಯವನು ಮುಟ್ಟುವ ಗಮ್ಯವನ್ನು ಏರುವ ಎತ್ತರವನ್ನು
ಅದಾವಗಲೋ ಮುಟ್ಟಿಯಾಗಿರುತ್ತದೆ. ಪರಿಪಕ್ವತೆಯ ಪರಮೋಚ್ಚ ಸ್ಥಿತಿಗೆ ತಲುಪಿದವನು ಈ ಯುವ
ಶಕ್ತಿಯನ್ನು ಬೆಳೆಸಿದರೆ ಅದು ಆತನ ನಿಜವಾದ ಕಲಾ ಸ್ನೇಹವನ್ನು ತೋರಿದಂತಾಗುತ್ತದೆ. ತನಗೆ ಬದುಕು
ಕೊಟ್ಟ ಕಲೆಯ ಸೇವಯನ್ನು ಅರ್ಥ ಪೂರ್ಣವಾಗಿ ಮಾಡಿದಂತಾಗುತ್ತದೆ. ಇಲ್ಲಿ ಯುವ ಶಕ್ತಿ
ಪ್ರಖರವಾಗುತ್ತದೆ ಎಂದರೆ ಹಿರಿಯವನು ಮಸುಕಾಗುತ್ತಾನೆ ಎಂದರ್ಥವಲ್ಲ. ತನ್ನ ಸರದಿ ಮುಗಿಸಿದ
ಕೃತಾರ್ಥತೆ ಇಲ್ಲಿರಬೇಕೇ ಹೊರತು ಪರಾಜಯವಲ್ಲ. ಹೊಸಚಿಗುರು ಉತ್ಸಾಹದಲ್ಲಿ ಸೆಟೆದು ನಿಂತಾಗ ಬಲಿತ
ಎಲೆ ಅದಕ್ಕೆ ಬಲವನ್ನು ನೀಡುತ್ತದೆ. ಅದು ಅದರ ಅಪಜಯವಲ್ಲ. ತಂದೆ ಎತ್ತಲಾಗದ ಹೊರೆಯನ್ನು ಮಗ
ಹೊರುತ್ತಾನೆ ಎಂದಾದರೆ ಅದು ತಂದೆಯ ಪರಾಜಯ ಹೇಗಾಗುತ್ತದೆ? ಹಲವು ಸಲ ವಾಸ್ತವದ ಸತ್ಯವನ್ನು
ಸದ್ಬಾವನೆಯಿಂದ ಹಿರಿಯಾತ ಒಪ್ಪಿಕೊಂಡರೂ ಇಂದು ಸುತ್ತಲಿನ ಪರಿಸರ ಆತನನ್ನು ಮಾನಸಿಕವಾಗಿ
ಕುಗ್ಗುವಂತೆ ಮಾಡಿಬಿಡುತ್ತದೆ. ಇದಕ್ಕೆ ಕಾರಣ ಅದೇ ಅಭಿಮಾನ, ಅಂಧಾಭಿಮಾನ. ಕಲೆಯನ್ನು ಕಾಣುವ ದೃಷ್ಟಿಕೋನವೇ ಇಲ್ಲಿ
ಪ್ರಶ್ನಾರ್ಹವಾಗಿಬಿಡುತ್ತದೆ. ಅಭಿಮಾನವೂ ದುರಹಂಕಾರಿಯಾಗಿಬಿಡುತ್ತದೆ.
ಇಂದು ಕಲಾವಿದ
ಕಲಾವಿದರೊಳಗೆ ಅಭಿಮಾನಿ ಅಭಿಮಾನಿಗಳೊಳಗೆ ಈ ದುರಹಂಕಾರೀ ಪ್ರವೃತ್ತಿಯಿಂದ ದ್ವೇಷ ಮಾತ್ಸರ್ಯ
ಹೆಡೆಯಾಡುತ್ತದೆ. ದ್ವೇಷ ಶತ್ರುತ್ವ ಇದ್ದಲ್ಲಿ
ಯಾವುದೇ ಸತ್ಕ್ರಿಯೆಯು ಸತ್ಫಲವನ್ನು ಕೊಡುವುದಿಲ್ಲ. ದುಷ್ಪರಿಣಾಮವೇ ಕಂಡುಬರುತ್ತದೆ.
ಮನೆಯಲ್ಲಿರುವ ನಾಯಿಗಳಿಗೆ ಯಜಮಾನ ತಿನಿಸನ್ನು ಹಾಕಿದಾಗ ಅವು ಎಲ್ಲವನ್ನು ಮರೆತು
ಕಚ್ಚಾಡುವುದಕ್ಕೆ ತೊಡಗುತ್ತವೆ. ಮಾತ್ರವಲ್ಲ ಕಚ್ಚಾಡುತ್ತಾ ಯಜಮಾನ ಹಾಕಿದ ತಿನಿಸನ್ನು ಮೂರಾಬಟ್ಟೆ ಮಾಡಿ
ನಾಶಮಾಡಿಬಿಡುತ್ತವೆ. ಒಂದು ಉತ್ತಮವಾದ ಕ್ರಿಯೆ ಇಲ್ಲಿ ಪರಸ್ಪರ ದ್ವೇಷದಿಂದ ದುಷ್ಪರಿಣಾಮವನ್ನು
ಬೀರುವುದನ್ನು ಕಾಣುತ್ತೇವೆ. ಅದುದರಿಂದ ಯಾವುದೇ ಕ್ಷೇತ್ರದಲ್ಲಿ ನೀವು ಸತ್ಕ್ರಿಯೆಯ
ಬಿತ್ತನೆಯನ್ನು ಮಾಡುವುದಕ್ಕಿಂತಲೂ ಅಲ್ಲಿಯ ದ್ವೇಷವನ್ನು ಹೋಗಲಾಡಿಸಿ ಸ್ನೇಹ ಸೌಹಾರ್ದವನ್ನು
ಕಾಯುವಂತೆ ಮಾಡುವುದು ಮೊದಲು ಆಗಬೇಕಾದ ಕೆಲಸ. ಇಂದು ಸಮಾಜಕ್ಕೆ ವಿದ್ಯಾದಾನ ಮಾಡಬಹುದು, ಆಹಾರ
ನೀಡಬಹುದು ಅಥವಾ ಮನೆಕಟ್ಟಿ ಊರನ್ನೇ ನಿರ್ಮಾಣ ಮಾಡಿಕೊಡಬಹುದು. ಎಲ್ಲದಕ್ಕಿಂತ ಮೊದಲು ಅಲ್ಲಿ
ಸ್ನೇಹ ಸೌಹಾರ್ದವನ್ನು ನಿರ್ಮಾಣ ಮಾಡಬೇಕಾಗುತ್ತದೆ. ಇಲ್ಲವಾದರೆ ನೀಡುವ ಕೊಡುಗೆ
ಸದ್ವಿನಿಯೋಗವಾಗದೆ ಕೆಟ್ಟ ಪರಿಣಾಮವನ್ನೇ ಬೀರುತ್ತದೆ.
ಆದುದರಿಂದ ಈ
ಯಕ್ಷಗಾನ ಕಲಾಪ್ರಪಂಚದಲ್ಲಿ ಪರಸ್ಪರ ದ್ವೇಷ ಆಸೂಯೆಯೆಂಬ ಅಹಂಕಾರವನ್ನು ತೊರೆದಲ್ಲಿ ಕಲೆಗೆ ನೀಡುವ
ಯಾವುದೇ ಕೊಡುಗೆಯು ಸದ್ವಿನಿಯೋಗವಾಗುತ್ತದೆ.
Good Message Rajanna...
ReplyDelete