“ಬಾರಯ್ಯ ಭಾನು ಸುಕುಮಾರ ಎನ್ನಯ
ರಥವನೇರು …………………………” ಶ್ರೀ ಕೃಷ್ಣ ಹಸ್ತಿನಾವತಿಯಿಂದ ಧುರವೀಳ್ಯವನ್ನು
ತೆಗೆದುಕೊಂಡು ಹಿಂತಿರುಗುವಾಗ ಕರ್ಣನನ್ನು ಹತ್ತಿರಕ್ಕೆ ಕರೆಯುವ ಪದವಿದು. ದಶಕಗಳ ಹಿಂದೆ ಸಂಗೀತಾ ಸಂಸ್ಥೆ ಧ್ವನಿ ಮುದ್ರಿಸಿದ ಅತ್ಯಂತ ಜನಪ್ರಿಯ ಧ್ವನಿಸುರುಳಿಯ ನೆನಪಾಗುತ್ತದೆ.
ಬಹುಶಃ ಆ ಮಧುರ ಸ್ಮೃತಿಯಲ್ಲೇ ಹೆಚ್ಚು ಕಮ್ಮಿ ಅದೇ ಕಲಾವಿದ ಶ್ರೇಷ್ಠರಿಂದ ಇತ್ತೀಚೆಗೆ
ಕರ್ಣ ಭೇದನ ಪ್ರಸಂಗ ಅನೀರೀಕ್ಷಿತವಾಗಿ ರಂಗದಲ್ಲಿ ಕಾಣುವಂತಾಯಿತು. ಬಲಿಪ
ನಾರಾಯಣ ಭಾಗವತರ ಜತೆಗೆ ಕುಂಬಳೆ ಸುಂದರ್ ರಾವ್, ಕೋಳ್ಯೂರು ರಾಮಚಂದ್ರ ರಾವ್,
ಎಂ ಪ್ರಭಾಕರ ಜೋಷಿ ಮಾತ್ರವಲ್ಲ ಉಡುವೇಕೋಡಿಯವರು ಮುಂತಾದವರ ಸೇರುವಿಕೆಯಲ್ಲಿ ಮುದ್ರಣಗೊಂಡ
ಧ್ವನಿ ಸುರುಳಿ ಈಗ ಇತಿಹಾಸವಾದರೆ ಆ ಇತಿಹಾಸವನ್ನು ಇನ್ನೂ ಸ್ಮೃತಿ ಪಟಲದಲ್ಲಿ ಉಳಿಸಿಕೊಂಡು ಆ ನೆನಪಿನಲ್ಲೇ
ಅನಿರೀಕ್ಷಿತವಾಗಿ ಕಾರ್ಯಕ್ರಮವೊಂದು
ಮೂಡಿಬಂತು.
![]() |
| ಚಿತ್ರ ಕೃಪೆ : ಲಾನ |
ಕರ್ನಾಟಕ ಕಲಾದರ್ಶಿನಿ ಬೆಂಗಳೂರು ಇವರ ಆಶ್ರಯದಲ್ಲಿ
ಡಾ ಶಿವರಾಮ ಕಾರಂತ ಉತ್ಸವ ಸಂದರ್ಭದಲ್ಲಿ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತ ಇವರನ್ನು ಶಿವರಾಮ ಕಾರಂತ ಪ್ರಶಸ್ತಿಯನ್ನು
ನೀಡಿ ಸನ್ಮಾನಿಸಲಾಯಿತು. ಇಲ್ಲಿ ಪೂರ್ವ
ನಿಗದಿಯಂತೆ ಶ್ರೀಕೃಷ್ಣ ಸಂಧಾನ ತಾಳ ಮದ್ದಲೆ ತೆಂಕು ಬಡಗು ಹಿಮ್ಮೇಳದೊಂದಿಗೆ ನಡೆಯಬೇಕಿತ್ತು.
ಆದರ ಬದಲಾಗಿ ಕರ್ಣ ಭೇದನ ತಾಳ ಮದ್ದಲೆ ಅದೂ ಪೂರ್ಣ ವಾಗಿ ಬಲಿಪ್ಪರ ಭಾಗವತಿಕೆಯೊಂದಿಗೆ
ನೆರವೇರಿಸಲ್ಪಟ್ಟಿತು. ಈ ಮೂಲಕ ಹಿರಿಯ ಭಾಗವತರಿಗೆ ಅರ್ಥ ಪೂರ್ಣವಾಗಿ ಗೌರವ ಸಲ್ಲಿಕೆಯಾಯಿತು.
ಇದಕ್ಕೆ ಸಂಘದ ಭಾರವಾಹಿಗಳನ್ನು ಅಭಿನಂದಿಸಲೇಬೇಕು.
ಅತ್ಯಂತ
ಸರಳವಾಗಿ ನಡೆದ ತಾಳ ಮದ್ದಲೆ ಇದು. ಕುಂಬಳೆ ಕೋಳ್ಯೂರು ಜತೆಯಲ್ಲಿ ಬಲಿಪ್ಪರನ್ನು ಕಂಡಾಗ ಹಳೆಯ
ಸಂಗೀತಾ ಧ್ವನಿಸುರುಳಿಯ ನೆನಪಿನ ಸುರುಳಿ ಹೀಗೆ ಬಿಚ್ಚಿಕೊಂಡು ಈ ರೂಪ ಪಡೆದುಕೊಂಡದ್ದು ವಿಶೇಷವಾಗಿ
ಕಂಡಿತು. ಕೃಷ್ಣ , ಮತ್ತು ಕುಂತಿ ಕರ್ಣನನ್ನು ಯುದ್ದಕ್ಕೆ ಪೂರ್ವದಲ್ಲೇ ಭೇದಿಸುವ ಪ್ರಸಂಗವಿದು.
ಸಂಧಾನ ಭಂಗವಾಗಿ ಸಮರ ನಿರ್ಣಯವಾದಮೇಲೆ ಕೃಷ್ಣ ಹಸ್ತಿನಾವತಿಯ ಆಸ್ಥಾನದಿಂದ ನಿರ್ಗಮಿಸುವಾಗ “
ಬಾರಯ್ಯ ಭಾನು ಸುಕುಮಾರ...” ಎಂದು ಕರ್ಣನನ್ನು ಹತ್ತಿರಕ್ಕೆ ಕರೆದು ಅವನ ಜನ್ಮ ವೃತ್ತಾಂತವನ್ನು
ಹೇಳುವ ಭಾವುಕ ಸನ್ನಿವೇಶ ನಂತರ ಕುಂತೀ ದೇವಿ ತನ್ನ ತಾಯಿ ಎಂದು ತಿಳಿದ ನಂತರ ತಾಯಿ ಕುಂತಿ ಮಗನ
ಬಳಿಗೆ ಬಂದು ಮಗನಲ್ಲಿ ವರಗಳನ್ನು ಕೇಳುವ ಹೃದಯಸ್ಪರ್ಶೀ ಸನ್ನಿವೇಶ ಎಲ್ಲವೂ ಅಚ್ಚುಕಟ್ಟಾಗಿ
ಮೂಡಿಬಂತು. ಶ್ರೀಕೃಷ್ಣನಾಗಿ ಶ್ರೀವಸಂತ
ಭಾರದ್ವಾಜ್ ಕಬ್ಬಿನಾಲೆ, ಕರ್ಣನಾಗಿ ಶ್ರೀಕುಂಬಳೆ ಸುಂದರ್ ರಾವ್, ಕುಂತಿಯಾಗಿ ಶ್ರೀ ಕೋಳ್ಯೂರು ರಾಮಚಂದ್ರ ರಾವ್ ಪಾತ್ರನಿರ್ವಹಣೆ ಮಾಡಿದರು. ಬಹಳಷ್ಟು ಸಂಭಾಷಣೆ ಧ್ವನಿ
ಸುರುಳಿಯ ಪುನರಾವರ್ತನೆಯಾದರೂ ಆಕರ್ಷಕವಾಗಿದ್ದು ಸಭಿಕರ ನಿಶ್ಯಬ್ಧದ ಸ್ಪಂದನೆ ಉತ್ತಮ ಆಸ್ವಾದನೆಗೆ
ಸಾಕ್ಷಿಯಾಯಿತು. ಕಬ್ಬಿನಾಲೆಯವರು ಹೊಸ ದೃಷ್ಟಿಕೋನದಿಂದ ಕೃಷ್ಣನ ಪಾತ್ರವನ್ನು ಪ್ರಸ್ತುತ ಪಡಿಸಿದರೆ,
ಕುಂತಿಯಾಗಿ ಕೋಳ್ಯೂರರ ಪರಕಾಯ ಪ್ರವೇಶ ಅದ್ಭುತವಾಗಿತ್ತು. ಹಂತ ಹಂತವಾಗಿ ಅವರು ಪಾತ್ರದಲ್ಲಿ ಲೀನವಾಗುವ
ಪರಿ ಕಲೆಯ ಬಗೆಗಿನ ಶ್ರಧ್ದೆಯನ್ನು ಬಿಂಬಿಸುತ್ತಿತ್ತು.
ಕೇವಲ ಕೆಲವೇ ಪದಗಳು ಮಾತ್ರ ಬಲಿಪ್ಪರು ಹಾಡುತ್ತಾರೆ
ಎಂದು ನೀರೀಕ್ಷೆಯಲ್ಲಿದ್ದಾಗ ಅವರಿಂದ ಪೂರ್ಣ ತಾಳಮದ್ದಲೆಗೆ ಹಾಡಿಸಿದ್ದು ಬಲಿಪ್ಪರಿಗೆ ಸೂಕ್ತ ಗೌರವಾದರವನ್ನು
ಸಲ್ಲಿಸಿದಂತೆ ಭಾಸವಾಯಿತು. ಯಾವುದೇ ಆಡಂಬರವಿಲ್ಲದ ಸರಳ ಹಿಮ್ಮೇಳ ಯಕ್ಷಗಾನದ ಸಿರಿವಂತಿಕೆಯನ್ನು ಬಿಂಬಿಸುತ್ತಿತ್ತು.
ಬಲಿಪ್ಪರಿಗೆ ಹಿಮ್ಮೆಳದಲ್ಲಿ ಮದ್ದಲೆಗೆ ಸಾಥ್ ನೀಡಿದವರು ಮಿತ್ರರಾದ ಶ್ರೀ ಅವಿನಾಶ್ ಬೈಪಡಿತ್ತಾಯ.
ಮದ್ದಲೆ ವಾದನದಲ್ಲಿ ಹಿಂದಿಗಿಂತಲೂ ಬಹಳಷ್ಟು ಪ್ರಾವಿಣ್ಯತೆಯನ್ನು ಗಳಿಸಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ.
ಬಹಳ ಸಮಯದ
ನಂತರ ನಮಗೆಲ್ಲ ಬಲಿಪ್ಪರ ಕಂಠದ ಒಂದೆರಡು ಪದಳನ್ನು ಕೇಳುವ ಅವಕಾಶ ಒದಗಿಬಂದದ್ದು ರೋಮಾಂಚನವನ್ನು
ಉಂಟುಮಾಡಿತ್ತು. ಬಲಿಪ್ಪರ ಕಂಠದ ಪ್ರತಿಯೊಂದು ಪದಕ್ಕೂ ಅವಿನಾಶರ ಮದ್ದಲೆಯಂತೆ ನಮ್ಮ
ಹೃದಯವೂ
ಮದ್ದಲೆಯ ಧ್ವನಿಗೆ ಸಾಥ್ ಒದಗಿಸಿದ್ದು ಪ್ರತಿಯೊಬ್ಬರ ಮುಖದಲ್ಲು ಎದ್ದು ಕಾಣುತ್ತಿತ್ತು. ತಾಳ
ಮದ್ದಲೆ ಮುಗಿಸಿ ಸಭಾ ಭವನದಿಂದ ಹೊರಬಂದಾಗ ಯಾರೋ
ಹೇಳುವುದು ಕಿವಿಗೆ ಅಪ್ಯಾಯಮಾನವಾಗಿ ಕೇಳಿಸಿತು. “ ಭಾಗವತರದ್ದು ಎಂತಾ ಸ್ವರ ಮಾರಾಯ್ರೆ.. ಇದಕ್ಕೆ
ತೆಂಕು ಬಡಗು ಭೇದವೇ ಇಲ್ಲ. ಇದು ಯಕ್ಷಗಾನದ ಸ್ವರ.”
ಇದು ಉತ್ಪ್ರೇಕ್ಷೆಯಲ್ಲ. ಅದೇಕೋ ಆನಂತರ ಸಭಾಂಗಣದೊಳಗೆ ಹೋಗಿ ಬೇರೆ ಯಾವುದೇ ಪದವನ್ನು ಕೇಳುವ ಮನಸ್ಸಾಗಲಿಲ್ಲ. ಚಿಕ್ಕಂದಿನಲ್ಲಿ ಬಡತನದ ಮಧ್ಯೆ ಅಪರೂಪವಾಗಿ ಸಿಗುವ
ಪಾಯಸದ ಊಟ ಉಂಡನಂತರ ಏನನ್ನೂ ಬಡಿಸಿಕೊಳ್ಳದೇ, ತಿನ್ನದೇ ಆ ಪಾಯಸದ ಸವಿಯನ್ನು ಹಾಗೇ ನಾಲಗೆಯಲ್ಲಿ
ಉಳಿಸುವ ಪ್ರಯತ್ನ ಮಾಡುತ್ತಿದ್ದೆವು. ಹಾಗೇ ಅನೀರೀಕ್ಷಿತವಾಗಿ ಬಲಿಪ್ಪರ ಧ್ವನಿ ಪಾಯಸದ ಸಿಹಿಯಾಗಿ
ಪರಿಣಮಿಸಿತು. ಇನ್ನು ಬೇರೆ ಎಲ್ಲ ಧ್ವನಿಗೂ ಅಂತರಗದ ಕರ್ಣ ಮುಚ್ಚಿಕೊಂಡು ಆದಷ್ಟು ಆ ಮಧುರ
ಧ್ವನಿಯನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದು ಸುಳ್ಳಲ್ಲ. ಒಟ್ಟಿನಲ್ಲಿ ಕರ್ಣ ಭೇದನ
ಕೇಳಿ ಕರ್ಣಪಾವನವಾಯಿತು.
![]() |
| ಚಿತ್ರ ಕೃಪೆ ಲಾನ. |
![]() |
| ಚಿತ್ರಕೃಪೆ: ಮಿಥುನ್ ಸುಣ್ನಂಗುಳಿ |
ಸಾಯಂಕಾಲ
ಪ್ರಶಸ್ತಿ ಪುರಸ್ಕಾರಗಳೊಂದಿಗೆ ಹೊರಟು ನಿಂತ ಬಲಿಪ್ಪಜ್ಜನನ್ನು ಬೀಳ್ಕೊಡುವಾಗ ಮನಸ್ಸು ಬಹಳಷ್ಟು
ತೃಪ್ತಿಯನ್ನು ಅನುಭವಿಸಿತ್ತು. “ಮರುಳು ಮಾಧವ ಮಹಿಯ ರಾಜ್ಯದ ಸಿರಿಗೆ ಸೋಲುವನಲ್ಲ…..”
ಎಂಬ ಪದ ಕಿವಿಯಲ್ಲಿ ಇನ್ನೂ ಮಾರ್ದನಿಸುತ್ತಾ ಇತ್ತು.
.



No comments:
Post a Comment