"ಇದು ವಿಮರ್ಶೆಯಲ್ಲದ ಚಿಂತನ"

Wednesday, August 6, 2014

ಯಕ್ಷೋಪಾಸಕನ ಜತೆಯಲ್ಲಿ


ನೋಡಿರಿ ಧರ್ಮಜ ಫಲುಗುಣಾದಿಗಳು |
ರೂಢಿಯೊಳನಿಲಜ ಬಿದ್ದ ಚಂದಗಳು      ||
ಕಪಟನಾಟಕ ರಂಗ | ಗುಪಿತವೇನೊ ನಿನ್ನಂಗ |
ನಿಪುಣ ಭೀಮನ ನೋಡು | ಚಪಳತ್ವದಿ ಮಾತಾಡು || ನೋಡಿರಿ ||


ಛಾಯಾ ಚಿತ್ರ: ಶ್ರೀ ಉಲ್ಲಾಸ್

ಇದು ಗಧಾಪರ್ವ ಪ್ರಸಂಗದ ಪದ.  ತಮ್ಮ ಕೌರವನ ಪಾತ್ರದಿಂದ ಈ ಪದಕ್ಕೆ ಹೊಸ ಒಂದು ಆಕರ್ಷಣೆಯನ್ನು ತಂದುಕೊಟ್ಟವರು  ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರು. ಕೌರವವನ ವಿರಾಟ್ ಸ್ವರೂಪವನ್ನು ಬಗೆ ಬಗೆಯಲ್ಲಿ ಬಹಳಷ್ಟು ಪ್ರಸಂಗಗಳಲ್ಲಿ ತೆರೆದಿಟ್ಟ ಮಹಾನ್ ಕಲಾವಿದ. ಕೌರವನ ಮತ್ಸದ್ಧೀ ತನವನ್ನು ತನ್ನ ರಾಜವೇಷದಲ್ಲಿ ಬಹಳ ಸಹಜವಾಗಿ ರಂಗದಲ್ಲಿ ತರುತ್ತಿದ್ದ ಅಭಿಜಾತ ಕಲಾವಿದ. ಕುರು ಸಾಮ್ರಾಜ್ಯದ ಅನಭಿಷಿಕ್ತ ಚಕ್ರವರ್ತಿ ಎಂದು ಕರೆಸಲ್ಪಟ್ಟವ ಕೌರವ. ಆ ಅನಭಿಷಿಕ್ತ ಚಕ್ರವರ್ತಿಯನ್ನು ಯಕ್ಷ ಚಕ್ರವರ್ತಿಯಂತೆ ರಂಗದ ಮೇಲೆ ಮೆರೆಸಿದ ಆ ವೈಭವ ಯಕ್ಷರಂಗ ಮರೆಯುವುದುಂಟೆ. ಅದೆಂತಹ ಗಾಂಭೀರ್ಯದ ರಾಜವೇಷ.!
 ರಾಜ ವೇಷ.....!!
ಛಾಯಾ ಚಿತ್ರ: ಶ್ರೀ ಉಲ್ಲಾಸ್

ಯಕ್ಷಗಾನದಲ್ಲಿ ಅದರಲ್ಲೂ ತೆಂಕುತಿಟ್ಟು ಯಕ್ಷಗಾನದಲ್ಲಿ ರಾಜವೇಷಕ್ಕೆ ಅದರದ್ದೇ ವೈಶಿಷ್ಟ್ಯ,  ಗಾಂಭೀರ್ಯವಿದೆ. ಯಕ್ಷಗಾನದ ರಾಜವೇಶದಲ್ಲಿ ಬಹಳಷ್ಟು ಹಿರಿಯ ಕಲಾವಿದರು ತಮ್ಮದೇ ಛಾಪನ್ನು ಒತ್ತಿ ಇದನ್ನು ಸಾರಿದ್ದಾರೆ. ಅಂತೆಯೇ ಯಕ್ಷಗಾನದ ರಾಜವೇಶಕ್ಕೆ ಒಂದು ಆಯಾಮವನ್ನು ಸೃಷ್ಟಿಸಿದವರು ಶ್ರೀ ಸೂರಿಕುಮೇರಿ ಗೋವಿಂದ  ಭಟ್ಟರು. ಯಕ್ಷಗಾನದ ರಾಜವೇಶದ ಕಲ್ಪನೆ ಬಂದಾಗ ಇಂದಿಗೂ ಚಿತ್ತಭಿತ್ತಿಯಲ್ಲಿ ಸುಳಿಯುವ ಮೊದಲ ಮುಖ ಗೋವಿಂದಣ್ಣನದ್ದು. ಅಚ್ಚುಕಟ್ಟಾದ ಸಮ ಆಯದ ವೇಷ ಅದು. ರಂಗ ತುಂಬುವ ನಡೆ, ಹರಿತವಾಗಿ ಹರಿಯುವ ಮಾತುಗಾರಿಕೆ, ಕ್ಷಣ ಕ್ಷಣವೂ ಭಿನ್ನವಾಗಿ ಪ್ರಕಟಗೊಳ್ಳುವ ತುಡಿತ ಇದೆಲ್ಲ ಇವರ ಬಗ್ಗೆ ಧ್ವನಿಯಾಗುವ ಸಹಜ ಮಾತುಗಳು. ಒಂದೇ ವೇದಿಕೆಯಲ್ಲಿ ಹತ್ತು ಬಗೆಯ ಕೌರವನಾದ ಆ ಹುಮ್ಮಸ್ಸು ಇಂದಿಗೂ ಉಳಿದುಕೊಂಡಿದೆ. ಇತ್ತೀಚೆಗೆ ಇವರೊಡನೆ ಕಳೆದ ಒಂದೆರಡು ಘಳಿಗೆಯ ಭಾವ ಚಿತ್ರಣವಿದು.
ಇತ್ತೀಚೆಗೆ ತಾಳ ಮದ್ದಲೆಯ ಕಾರ್ಯಕ್ರಮವೊಂದರಲ್ಲಿ ಈ ಕಲಾ ಮಹನೀಯ ವ್ಯಕ್ತಿ ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರನ್ನು ಬೇಟಿಯಾಗುವ ಅವಕಾಶ ಒದಗಿಬಂತು.  ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ಕಾರ್ಯಕ್ರಮವದು. ಬಸವನಗುಡಿ ಎಂದರೆ ಬೆಂಗಳೂರಿನ ಸುಶಿಕ್ಷಿತ ಮತ್ತು ಸುಸಂಸ್ಕೃತ ಬಡಾವಣೆ. ನಾನು ಹೋದಾಗ ಅಲ್ಲಿ ಶಾಂತರೀತಿಯಲ್ಲಿ ತಾಳ ಮದ್ದಲೆ ನಡೆಯುತ್ತಿತ್ತು. ಗೋವಿಂದ ಭಟ್ಟರು ವೇದಿಕೆ ಏರುವ ಸನ್ಹಾಹದಲ್ಲಿ ಒಂದು ಬದಿಯಲ್ಲಿ ಸಹಜವಾಗಿ ತಣ್ಣಗೇ ಕುಳಿತಿದ್ದರು.  ಗೋವಿಂದಣ್ಣನದ್ದು ಒಂದು ಸೆಳೆಯುವ ವಿಶಿಷ್ಟ ವ್ಯಕ್ತಿತ್ವ. ಅನುಭವದಿಂದ ಮಾಗಿದ ಕೂದಲು, ಸದಾ ಪ್ರಜ್ವಲಿಸುವಂತಿರುವ ಕಣ್ಣುಗಳು. ಪ್ರಸನ್ನವಾಗಿ ಸ್ವ ಪ್ರಭೆಯಿಂದ ಬೆಳಗುತ್ತಿರುವ ಮುಖ. ಇದು ಗೋವಿಂದಣ್ಣನನ್ನು ತೀರಾ ಅಪರಿಚಿತರೂ ಗ್ರಹಿಸುವಂತಹ ಒಂದು ವ್ಯಕ್ತಿ ಚಿತ್ರಣ. ದೂರದದ ಪ್ರಯಾಣದ ಕಾರಣವೋ ತಿಳಿಯದು ಬಹಳಷ್ಟು ಬಸವಳಿದ ಹಾಗೆ ಕಂಡರು. ಆದರೂ ವೇದಿಕೆ ಏರಿದ ಮೇಲೆ ತಮ್ಮ ಉಳಿದ ಅಲ್ಪ ಅವಧಿಯಲ್ಲಿ ಎಂದಿನ ಶಾರೀರತೆಯಿಂದ ಆದಿನ ಕರ್ಣನನ್ನು ಮೆರೆದಾಡಿಸಿಬಿಟ್ಟರು.
ಪ್ರಸಂಗ ಮುಗಿದು ಸಂಘಟಕರು ಕೃತಜ್ಞತೆ ಸೂಚಿಸಿ ಭಾಗವತರು ಮಂಗಳ ಹಾಡಿದರೂ ಗೋವಿಂದಣ್ಣ ಅದೇ ಜಾಗದಲ್ಲಿ ಕುಳಿತೇ ಇದ್ದರು. ಆಸನ ಬಿಟ್ಟು ಎದ್ದು ಹೋಗುವ ಮಂದಿ, ಚೆಂಡೆ ಮದ್ದಲೆಯ ಮುಸುಕನ್ನು ಬಿಗಿಯುವ ಹಿಮ್ಮೇಳ ಕಲಾವಿದರು ಇವರನ್ನೆಲ್ಲ ಕುಳಿತಲ್ಲಿಂದಲೇ ನಿರ್ವಿಕಾರ ಭಾವದಲ್ಲಿ ಗಮನಿಸುತ್ತಾ ಇದ್ದರು. ಹಿಂದೆ ಕುಳಿತಿದ್ದ ನಾನು ನಿಧಾನವಾಗಿ ಹೋಗಿ ಮೆಲು ದನಿಯಲ್ಲಿ ’ನಮಸ್ಕಾರ’ ಎಂದೆ, ಕತ್ತೆತ್ತಿ ತಿರುಗಿ ನನ್ನತ್ತ ನೋಡಿದವರೇ ಅದೇ ಮಂದಹಾಸ ಮುಖತುಂಬ ಅರಳಿಸಿದರು. ಹತ್ತಿರ ಕರೆದು ಹೆಗಲಿಗೆ ಕೈ ಇಕ್ಕಿ ಕುಶಲ ವಿಚಾರಿಸಿದರು. ನಾನು ಅಲ್ಲೇ ಕರಗಿ ಹೋದೆ. ಅವರ ಕ್ಷೇಮದ ಬಗ್ಗೆ ಕೇಳುವ ನನ್ನ ಸ್ವರ ಗಂಟಲಿನ ಮೂಲೆಯಲ್ಲಿ ಎಲ್ಲೋ ಅಡಗಿ ಕುಳಿತಿತ್ತು. ಎಲ್ಲ ಬಾರಿಯಂತಲ್ಲ ಈ ಬಾರಿ ಗೋವಿಂದಣ್ಣ ವಯೋ ಭಾರದಿಂದಲೂ ಸ್ವಲ್ಪ ಬಸವಳಿದಿದ್ದರು ಎಂದೇ ಹೇಳಬಹುದು. ಸರಿ ಸುಮಾರು ಎಪ್ಪತ್ತೈದು ಅಲ್ಲವೇ? ಕಳೆದು ಹೋದ ಕಾಲವನ್ನು ಚಿಂತಿಸ ಬಾರದು ಆದರೂ ಇಂತಹ ವ್ಯಕ್ತಿತ್ವ ಕಣ್ಣೆದುರು ನಿಂತಾಗ ನಾವೆಂತಹ ದಿನಗಳನ್ನು ದಾಟಿ ಬಂದಿದ್ದೇವೆ ಎಂದು ಅನಿಸದೇ ಇರಲು ಸಾಧ್ಯವೇ? ಗೋವಿಂದಣ್ಣ ನನ್ನ ಕೈ ಹಿಡಿದಾಗ ಯಕ್ಷಗಾನದ ರಾಜವೇಶ ನನ್ನ ಕೈತಡವಿದ ಅನುಭವ. ರಂಗವೆಲ್ಲ ತುಂಬಿಕೊಂಡ ಯಕ್ಷಗಾನದ ಕೆಚ್ಚನ್ನು ಅಂಗಾಂಗಗಳಲ್ಲಿ ತುಂಬಿಕೊಂಡ ರಾಜವೇಷವದು. ಎಂದಿಗೂ ಅದುವೇ  ಸೂಕ್ಷ್ಮ ರೋಮಾಂಚನ !! ಆದರೆ ಕೈ ಪ್ರಾಯದ ಭಾರವನ್ನು ಹೇಳುತ್ತಿತ್ತು. ಆ ಭಾರಕ್ಕೆ ನಿಜಕ್ಕೂ ಭಾರವಾದದ್ದು ನನ್ನ ಮನಸ್ಸು ಛೇ ಗೋವಿಂದಣ್ಣನಿಗೆ ಪ್ರಾಯವಾಯಿತಲ್ಲ…?
ಎರಡು ದಿನ ಬಿಟ್ಟು ಮಲ್ಲೆಶ್ವರಂನ ಮನೆಯೊಂದರಲ್ಲಿ ತಾಳ ಮದ್ದಲೆ.  ಗ. ನಾ . ಭಟ್ಟರ ಯಕ್ಷಕೌಮುದಿ ಟ್ರಸ್ಟ್ ನ ಯಕ್ಷ ಸಂಚಾರದ ತಾಳ ಮದ್ದಲೆಯದು. ಅದಿನ ಪ್ರಸಂಗ ಶ್ರೀರಾಮ ನಿರ್ಯಾಣ.  ಬಹಳ ಭಾವನಾತ್ಮಕ ಪ್ರಸಂಗದ ಶ್ರೀರಾಮನ ಪಾತ್ರದಲ್ಲಿ ಅದಾಗಲೇ ತುಸು ಅವೇಶಗೊಂಡಿದ್ದರು ಗೋವಿಂದಣ್ಣ.  ಕೊನೆಯ ಲಕ್ಷ್ಮಣನೊಡನೆ ಭಾವನಾತ್ಮಕ ಸನ್ನಿವೇಶವದು. ಬಹುಶಃ ಇಡೀ ರಾಮಾಯಣದಲ್ಲೇ ಇಂತಹ ಸನ್ನಿವೇಶ ಸಿಗಲಾರದೋ ಏನೋ? ತನ್ನ ತಮ್ಮನಿಗೆ ರಾಜ್ಯ ಬಹಿಷ್ಕಾರ ವಿಧಿಸುತ್ತಾನೆ ಶ್ರೀರಾಮ. ಆತನ ಮುಖವನ್ನೂ ತನಗೆ ತೋರಿಸದಂತೆಯೂ ರಾಜ ದಂಡನೆಯನ್ನು ವಿಧಿಸುತ್ತಾನೆ. ಆದರೆ  ಲಕ್ಷ್ಮಣ ಅಲ್ಲಿಂದ ತೆರಳುವಾಗ ರಾಮ ಕುಳಿತಲ್ಲಿಂದ ಎದ್ದು ಹೊರಗೆ ಬಂದು ಲಕ್ಷ್ಮಣನ್ನು ಎರಡೂ ಕೈಗಳಿಂದ ತಬ್ಬಿ ಹಿಡಿಯುತ್ತಾನೆ. ರಾಮ ದುಃಖತಪ್ತನಾಗುತ್ತಾನೆ. ಆಗಲೂರ್ ಮುಖ ತೋರಿಸಲಾಗದ ಲಕ್ಷ್ಮಣನ ಕಣ್ಣುಗಳು ರಾಮನ ಪಾದಗಳನ್ನೇ ನೋಡುತ್ತಿರುತ್ತದೆ. ಅರ್ಥ ಸನ್ನಿವೇಶ ವಿಶ್ಲೇಷಿಸುತ್ತಿದಂತೆ ಗೋವಿಂದಣ್ಣನ ಸ್ವರ ಗದ್ಗದವಾಗುತ್ತದೆ. ಆ ದಿನದ ಕೊನೇಯ ಒಂದೆರಡು ಪದಗಳ ರಾಮ ನಾನಂತೂ ಮರೆಯುವಂಥದ್ದಲ್ಲ.
ತಾಳ ಮದ್ದಲೆ ಮುಗಿದು ಮಂಗಳ ಹಾಡುವಾಗ ಗೋವಿಂದಣ್ಣ ಕುಳಿತಲ್ಲಿಗೆ ಹೋಗಿ ನಮಸ್ಕಾರ ಹೇಳಿದೆ. ತಾಂಬೂಲದ ಪೆಟ್ಟಿಗೆಯ ಮುಚ್ಚಳವೆಳೆದು ನನ್ನಲ್ಲಿ ಕುರ್ಚಿ ಎಳೆದುಕೊಂಡು ಅವರ ಬಳಿಯಲ್ಲೇ ಕೂರುವಂತೆ ಹೇಳೀದರು. ಅವರ ಬಳಿ ಕುಳಿತಾಗ ಎಂದಿನಂತೆ ಒಂದು ಆತ್ಮೀಯತೆಯ ವಲಯವೊಂದು ನಿರ್ಮಾಣವಾಗುತ್ತದೆ. ಅದರೊಳಗೆ ತನ್ಮಯವಾಗಿಬಿಡುವ ಕ್ಷಣ. ಅದಾಗಲೇ ಸಂಘಟಕರು ಊಟದ ವ್ಯವಸ್ಥೆ ಮಾಡುತ್ತಿದ್ದರು. ಗೋವಿಂದಣ್ನ ಅದಾರೋ ಮಹನೀಯರೊಬ್ಬರಿಗೆ ನನ್ನನ್ನು ಪರಿಚಯಿಸಿದರು.  ಮತ್ತೂ ಇನ್ನೇನೋ ಅತಿಶಯದ ಮಾತುಗಳಾಡುತ್ತಿದ್ದಂತೆ ನನ್ನ  ದೇಹ ಹಿಡಿಯಷ್ಟಾಗಿ ಮನಸ್ಸು ಆಕಾಶವಾಯಿತು.
ಊಟ ಮಾಡುತ್ತಿದ್ದಂತೆ ಕೇಳಿದೆ “ ಈಗ ಹೇಗೆ ವೇಷ ಮಾಡುವುದಕ್ಕೆ ಸಾಧ್ಯವಾಗುತ್ತದೆಯೇ?” 
“ಆಗ್ತದೆ. ಹಾಗೇನೂ ಇಲ್ಲ, ಮೇಳ ಬಿಡುವ ಬಗ್ಗೆ ಯೋಚಿಸುತ್ತಿದ್ದೇನೆ. ಸ್ವಲ್ಪ ಕಷ್ಟವಾಗ್ತದೆ. ಅರ್ಧ ಗಂಟೆ ವೇಷ ಮಾಡಿದರೂ ಸಾಕು... ಆದರೂ ಬಿಡುವ ಯೋಚನೆ.   ಕಣ್ಣಿಗೆ ರಂಗ ಸ್ಥಳದ ಅ ಬದಿಯಲ್ಲಿ ನಿಂತವರನ್ನು ಕಾಣಿಸುವುದಿಲ್ಲ. ಲೈಟಿನ ಬೆಳಕು ನೋಡಿ ನೋಡಿ ಸಾಕಾಗ್ತದೆ.”
ಮಹಾನ್ ಕಲಾವಿದರ ಅಂತರಂಗದ ಧ್ವನಿಯಿದು. ಇರುಳಿಡೀ ಪ್ರಖರವಾದ ಬೆಳಕಿನಲ್ಲಿ ದುಡಿದ ಪರಿಣಾಮವಿದು   ರಂಗಸ್ಥಳದ ಪ್ರಖರತೆ ಗಾಢವಾದಂತೆ ಕಲಾವಿದರ ಬಾಳ ಸಂಜೆಯ ದಿನಗಳು ಪ್ರಖರತೆಯನ್ನು ಕಳೆದುಕೊಳ್ಳುತ್ತದೆ. ಅವೈಜ್ಞಾನಿಕ ರೀತಿಯಲ್ಲಿ  ಏನೇನೂ ಯೋಚಿಸದೆ ರಂಗಸ್ಥಳದಲ್ಲಿ ಗಾಢವಾದ ವಿದ್ಯುದ್ದೀಪಗಳನ್ನು ಬೆಳಗಿಸುವಾಗ ಇದನ್ನು ಯೋಚಿಸುವುದೇ ಇಲ್ಲ  ಇದರ ಪರಿಣಾಮ ಕಲಾವಿದರಲ್ಲಿ ಪರೋಕ್ಷವಾಗಿ ಆಗುತ್ತಿದ್ದು,  ಕಲಾವಿದರ ಬದುಕನ್ನು ಒಂದು ರೀತಿಯ ಅಂಧತ್ವಕ್ಕೆ ತಳ್ಳುವುದನ್ನು ಕಾಣುವಲ್ಲಿ ನಾವು ಕಣ್ಣಿದ್ದೂ ಅಂಧರಾಗಿಬಿಡುತ್ತೇವೆ. ಹೀಗಿದ್ದರೂ ಯಕ್ಷಗಾನಕ್ಕೆ ಇಂತಹ ಪ್ರಖರವಾದ ಬೆಳಕಿನ ಆವಶ್ಯಕತೆ ಇಲ್ಲದೇ ಇರುವಾಗ ರಂಗಸ್ಥಳವನ್ನು ವೈಭವೀಕರಿಸುವಲ್ಲಿ ವಾಸ್ತವದ ಪರಿಣಾಮವನ್ನು ಕಡೆಗಣಿಸುತ್ತೇವೆ.
ಛಾಯಾ ಚಿತ್ರ: ಶ್ರೀ ಉಲ್ಲಾಸ್
ಯಕ್ಷರಂಗದ ಸುಯೋಧನ ಇದೀಗ ನನ್ನ ಪಕ್ಕ ಕುಳಿತ್ತಿದ್ದಾರೆ. ನನ್ನೊಂದಿಗೆ ಅದೂ ಇದು ಮಾತನಾಡುತ್ತಾರೆ. ಕೆಲವರಿಗೆ ನನ್ನ ಪರಿಚಯವನ್ನು ಮಾಡಿಸುತ್ತಾರೆ. ನನ್ನ ತಂದೆಯವರ ಬಗ್ಗೆ ಹೇಳುತ್ತಾರೆ.  ನನ್ನ ಯಕ್ಷಗಾನದ ಬಗ್ಗೆ ವಿಶೇಷವಾಗಿ ನನ್ನ ಯಕ್ಷಗಾನ ಸಂಗ್ರಹದ ಬಗ್ಗೆ ಹೇಳುತ್ತಾರೆ. ಈ ಸರಳ ಸಜ್ಜನಿಕೆಯನ್ನು ಕಂಡಾಗ ನನ್ನ ಕೈ ನನ್ನ ಎದೆಯನ್ನು ತಾನೆ ನೇವರಿಸುತ್ತದೆ. ಹೃದಯದ ಧನ್ಯತೆಯ ಭಾವ ವ್ಯಕ್ತವಾಗುವುದು ಹೀಗೇ ಇರಬೇಕು.
          ಕಾರ್ಯಕ್ರಮದ ಮುಕ್ತಾಯದ ಸಹಜತೆಯಂತೆ ಒಬ್ಬೊಬ್ಬರೇ ವಿದಾಯ ಹೇಳಲಾರಂಭಿಸಿದರು. ಗೋವಿಂದಣ್ಣನೂ ತಮ್ಮ ತಾಂಬೂಲ ಪೆಟ್ಟಿಗೆಯನ್ನು ಕೈಚೀಲಕ್ಕೆ ಸೇರಿಸಿ ಸಿದ್ಧರಾದರು.  ಸಂಘಟಕರು ವ್ಯವಸ್ಥೆ ಮಾಡಿದ ವಾಹನದಲ್ಲಿ ನಿಧಾನವಾಗಿ ಏರಿ ಹೋದಾಗ ಕಿರು ನಗಿವಿನಲ್ಲೇ ವಿದಾಯ ಹೇಳಿದರು.  ನಾನು ನನ್ನ ಮನೆಕಡೆ ತಿರುಗಿದೆ. ಮನಸ್ಸು ಹೇಳಿತು “ ಒಂದು ರೀತಿಯಲ್ಲಿ ಈ ದಿನ ಒಂದು ಚೆನ್ನಾಗಿ ಕಳೆದೆ ಸಂಶಯವಿಲ್ಲ ”  ಗಧಾಯುದ್ಧ ನೋಡಿ ಕೌರವನ ಹಾವ ಮನಸ್ಸಿನಲ್ಲಿ ಅಚ್ಚೊತ್ತಿಕೊಂಡು ಹೋಗುವ ಯಕ್ಷಗಾನ ಅಭಿಮಾನಿಯಂತೆ,  ವಾಸ್ತವದ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಮನಸ್ಸಿನಲ್ಲಿ ಅಚ್ಚೊತ್ತಿಕೊಂಡ ಅನುಭವ ನನ್ನದು.

                    



2 comments:

  1. ಪ್ರಭಾಕರ ಜೋಶಿಯವರು ಸಂದರ್ಶನವೊಂದರಲ್ಲಿ ಈ ರೀತಿಯಾಗಿ(ಅರ್ಥ ಬರುವಂತೆ) ಹೇಳಿದ ನೆನಪು- "ಗರ್ಭಗುಡಿಯೊಳಗಿರುವ ದೇವರ ಮೂರ್ತಿ ಮಂದಬೆಳಕಿನಲ್ಲಿ ಕಾಣುವಾಗ ಯಾವ ರೀತಿಯ ತಾದಾತ್ಮ್ಯ ಭಾವ ಉಂಟಾಗುತ್ತದೋ. ಅದೇ ರೀತಿಯಲ್ಲಿ ಯಕ್ಷಗಾನದ ವೇಷಗಳನ್ನು ಪ್ರಕಟಿಸಿದಾಗ ಮಾತ್ರ ದಿವ್ಯ ಅಲೌಕಿಕತೆಯ ದರ್ಶನವಾಗುತ್ತದೆ".
    ಹೌದು ಪ್ರಖರವಾದ ಬೆಳಕಿನಲ್ಲಿದ್ದರೂ ಕಲಾವಿದ ಕತ್ತಲೆಯಲ್ಲೇ ಇದ್ದಂತಿರುತ್ತಾನೆ. ಒಮ್ಮೆ ಪ್ರೇಕ್ಷಕನಾದವ ರಂಗದ ಮೇಲೆ ಹತ್ತಿ ಅಲ್ಲಿ ಒಂದು ಹತ್ತು ನಿಮಿಷ ನಿಲ್ಲುವ ಸಾಹಸ ಮಾಡಿದಲ್ಲಿ ಕಲಾವಿದರ ನಿಜವಾದ ನಿರ್ವಹಣೆಯ ಬೆಲೆ ಖಂಡಿತಾ ಅರಿವಾದೀತು. ಕಲಾವಿದರಿಗೆ ನಿರಂತರ ದುಡಿತದಿಂದ ಇದು ಅಭ್ಯಾಸವೇ ಆಗಿದ್ದರೂ ಪರೋಕ್ಷವಾಗಿ ಅವರ ಮೇಲುಂಟಾಗಬಹುದಾದ ಪರಿಣಾಮಗಳು ನಿಜಕ್ಕೂ ಗಂಭೀರವೇ.

    ReplyDelete
  2. ಪ್ರತಿದಿನ ರಂಗಸ್ಥಳದ ಗಾಢ ವಿದ್ಯುತ್ ದೀಪ ನೋಡಬೇಕಾದ ಅನಿವಾರ್ಯತೆ ವೃತ್ತಿ ಮೇಳದವರಿಗೆ ಅನಿವಾರ್ಯ. ಪರ್ಯಾಯವನ್ನು ಹುಡುಕುವುದಕ್ಕೆ ಸಾದ್ಯವಿಲ್ಲವೇ ? ಆ ದೀಪಗಳನ್ನು ರಂಗಸ್ಥಳದ ಮೇಲಿನಿಂದ ಅಳವಡಿಸಲಾಗುವುದಿಲ್ಲವೇ ? ಪ್ರೇಕ್ಷಕರಾಗಿ ಮೈಮರೆತು ಕುಳಿತು ಆಟ ನೋಡುವ ನಮಗೆ ಕಲಾವಿದರ ಸಮಸ್ಯೆಗಳ ತೀವ್ರತೆ ಗೊತ್ತೇ ಆಗುವುದಿಲ್ಲ. "ಆ ಕಡೆ ನಿಂತ ಕಲಾವಿದ ಕಾಣುವುದಿಲ್ಲ" ಎಂಬ ಗೋವಿಂದಣ್ಣನ ಮಾತು ಒಂದು ವಯಸ್ಸು ದಾಟಿದ ಮೇಲೆ ಎಲ್ಲ ಕಲಾವಿದರದ್ದೂ ಆಗದಿರಲಿ. ಮೇಳದ ಯಜಮಾನರಿಗೆ ಈ ಬಗ್ಗೆ ಗಮನ ಸೆಳೆಯೋಣ.

    ReplyDelete