ಕೀಲಾರು ಪ್ರತಿಷ್ಠಾನದ
ರಜತಮಹೋತ್ಸವದ ಅಂಗವಾಗಿ ಸರಣಿ ತಾಳಮದ್ದಲೆ ಆಯೋಜನೆಯ ಸುದ್ದಿ ಸಿಕ್ಕಿದಾಗಲೇ ನಿರೀಕ್ಷೆಗಳು
ಮೊಳಕೆಯೊಡೆದಿದ್ದವು. ಆ ಸರಣಿಯಲ್ಲಿ ಒಂದು ತುಣುಕಾದರೂ ಬೆಂಗಳೂರಿಗೆ ಚಿಮ್ಮದೇ ಇರಲಾರದು. ಅದರಂತೇ ಬಹು ನಿರೀಕ್ಷಿತ ತಾಳ ಮದ್ದಲೆ ಬೆಂಗಳೂರಿನ
ಪುರಭವನದಲ್ಲಿ ನಡೆದೇ ಬಿಟ್ಟಿತು. ಅಂಗದ ಸಂಧಾನ ಮತ್ತು ಕರ್ಣ ಪರ್ವ. ಯಕ್ಷಗಾನದಲ್ಲಿ ಬಹಳ
ಜನಪ್ರಿಯ ಪ್ರಸಂಗಗಳು. ಆಯೋಜಕರ ಯೋಜನೆಯಂತೆ ಸಹಜವಾಗಿ ಪ್ರಸ್ತುತ ಯಕ್ಷಗಾನ ರಂಗದ ಬಹುದೊಡ್ಡ
ಕಲಾವಿದರ ಸಮೂಹವೇ ಇದರಲ್ಲಿ ಭಾಗಿಯಾಗುವ ನಿರೀಕ್ಷೆಯೂ ಸುಳ್ಳಾಗಲಿಲ್ಲ.
ಹೊಳ್ಳಣ್ಣನ ಸ್ತುತಿ ಪದ್ಯದ
ನಂತರ ಶಂಕರಣ್ಣನ ಚೆಂಡೆಯ ಪೀಠಿಕೆ ಅಚ್ಚುಕಟ್ಟಾಗಿ ಮೂಡಿ ಬಂದರೆ ಔಪಚಾರಿಕತೆಯ ವ್ಯರ್ಥ ಕಾರ್ಯಕ್ರಮವಾದ
ಸಭಾಕಾರ್ಯಕ್ರಮದ ರಗಳೆ ಇಲ್ಲಿರಲಿಲ್ಲ. ಆರಂಭದಲ್ಲಿ ವಾಸುದೇವ ರಂಗ ಭಟ್ಟರಿಂದ ಅತ್ಯಂತ ಚೊಕ್ಕ
ಸುಂದರ ಪ್ರಸ್ತಾವಿತ ಮಾತುಗಳು. ಆನಂತರ, ದೀಪ ಜ್ವಲನ ಇಷ್ಟಕ್ಕೇ ಸೀಮಿತಗೊಳಿಸಿ ಅಂಬುರುದಳನೇತ್ರೆ
ರಂಗದಲ್ಲಿ ಅರಳಿತು.
ಅಂಗದಸಂಧಾನದ ಉಳಿದೆಲ್ಲ
ಭಾಗವನ್ನು ಬಿಟ್ಟು ಅತಿ ಮುಖ್ಯವಾದ ಅಂಗದ ಪ್ರಹಸ್ತ ಸಂಭಾಷಣೆಗಷ್ಟೇ ಪ್ರಸಂಗವನ್ನು
ಸೀಮಿತಗೊಳಿಸಲಾಯಿತು. ಅಂಗದನಾಗಿ ಶ್ರೀ ವಾಸುದೇವ ರಂಗ ಭಟ್ಟರು ಸಮಕಾಲೀನ ಯುವ ಪ್ರತಿಭಾವಂತರು,
ಪ್ರಹಸ್ತನಾಗಿ ಹಿರಿಯ ಕಲಾವಿದ ವಾಗ್ಮಿ ಲೇಖಕ
ಶ್ರೀ ಮೂಡಂಬೈಲು ಗೋಪಾಲ ಕೃಷ್ಣ ಶಾಸ್ತ್ರಿಗಳು ಭಾಗವಹಿಸಿದರೆ, ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ
ಪುತ್ತಿಗೆ ರಘುರಾಮ ಹೊಳ್ಳ, ಮದ್ದಲೆ ಶ್ರೀ ಚೈತನ್ಯ ಕೃಷ್ಣ ಪದ್ಯಾಣ, ಚೆಂಡೆ ಪದ್ಯಾಣ ಶ್ರೀ
ಶಂಕರನಾರಾಯಣ ಭಟ್ ಭಾಗವಹಿಸಿದರು.
ಕೇವಲ ಎರಡು ಪಾತ್ರಕ್ಕೇ
ಪ್ರಸಂಗವನ್ನು ಸೀಮಿತಗೊಳಿಸಿದರೂ ಸಹಜವಾಗಿ ಎರಡು ಎರಡುವರೆ ಘಂಟೆಗೆ ಸೀಮಿತಗೊಳ್ಳಬೇಕಾದ ಪ್ರಸಂಗ
ಲಂಬಿಸಿ ಮೂರುವರೆ ತಾಸು ಎಳೆದು ಹೋಯಿತು. ಕೇವಲ ಇಬ್ಬರ ವಾಕ್ಚಾತುರ್ಯದಲ್ಲಿ ಮೂರುವರೆ ಘಂಟೆ
ಎಳೆಯುದುವುದು ನಿಜಕ್ಕೂ ಶ್ಲಾಘಿಸಬೇಕಾದರೂ ಇದು ಅತಿಯಾದದ್ದು ಮಾತ್ರ ಸುಳ್ಳಲ್ಲ. ಷಡ್ರಸ ಭೋಜನದ
ಮೊದಲು ಉಪಾಹಾರ ಸೇವಿಸಿದಂತೆ ನಂತರ ಷಡ್ರಸದ ರುಚಿ ಸವಿಯುವ ಸಾಮಾರ್ಥ್ಯ ಮತ್ತು ಸಮಯ ಮನಸ್ಸಿಗೆ
ಇರಲಿಲ್ಲ. ಇಬ್ಬರೂ ತಂತಮ್ಮ ಕುಶಲತೆಯನ್ನು ಸುಂದರವಾಗಿ ಸಾದರ ಪಡಿಸಿದರು ಅದು ಆ ಸಮಯದಲ್ಲಿ
ಅಪ್ರಸ್ತುತವಾಗಿ ಸಮಯ ಸರಿದೇ ಬಿಟ್ಟಿತು. ಆದರೂ ಸಮಯ ಸರಿದದ್ದು ಅರಿವಿಗೆ ಬಂದದ್ದು ಮನಸ್ಸು
ತುಂಬಿದಂತೆ ಹೊಟ್ಟೆ ಖಾಲಿಯಾದಾಗ. ಆವಾಗ
ಅನ್ನಿಸಿದ್ದು ಪ್ರಸಂಗವನ್ನು ಸ್ವಲ್ಪ ಮಟ್ಟಿಗೆ ಹಿಡಿದಿಡಬಹುದಿತ್ತು. ತಾಳ ಮದ್ದಲೆ ಎಂದರೆ ಅದು
ಕೇವಲ ಚರ್ಚಾ ಕೂಟವಲ್ಲ ಅದರಲ್ಲಿ ಇನ್ನೂ ವಿಚಾರಗಳು ಹಲವಿದೆ. ಆದರೂ ಪರವಾಗಿಲ್ಲ ಅಂಗದ ಸಂಧಾನ
ಯಶಸ್ವಿ ಎನ್ನಬಹುದು. ಹಿಮ್ಮೇಳ ಸುಶ್ರಾವ್ಯವಾಗಿತ್ತು, ಕೆಲವು ಪದ ಕೇಳುವಾಗ ಬಲಿಪ್ಪರ ಹೊಳ್ಳರ ದ್ವಂದ್ವದ ಹಳೆಯ ತಾಳಮದ್ದಲೆಯೊಂದು ನೆನಪಿಗೆ ಬಂದದ್ದು ಸುಳ್ಳಲ್ಲ.
ಮದ್ದಲೆಯಲ್ಲಿ ಯಕ್ಷಗಾನದ
ಭರವಸೆಯ ಕಲಾವಿದ ಚೈತನ್ಯ ಕೃಷ್ಣ ಉತ್ತಮ ಪ್ರತಿಭಾವಂತ ಎರಡು ಮಾತಿಲ್ಲ. ಹಾಗೆ ನೋಡಿದರೆ ಪ್ರಸ್ತುತ
ಯಕ್ಷಗಾನದಲ್ಲಿ ಮದ್ದಲೆವಾದನಕ್ಕೆ ಯುವ ಪ್ರತಿಭಾವಂತರ ದಂಡೇ ಇದೆ ಎನ್ನಬಹುದು. ಇದಕ್ಕೆ
ಸಾಕ್ಷಿಯಾಗುವಂತೆ ನಿನ್ನೆಯ ತಾಳಮದ್ದಲೆಯ ಹಿಮ್ಮೇಳ ಮೇಳವಿಸಿತ್ತು. ಆದರೂ ಮದ್ದಲೆಯಲ್ಲಿ ಸಂಗೀತದ
ಪೆಟ್ಟುಗಳೇ ಕೇಳಿಬಂದು ಶುದ್ದ ಯಕ್ಷಗಾನದ ಮಟ್ಟುಗಳು ಬಹಳ ಅಪರೂಪವಾಗಿತ್ತು. ಕೇಳುವುದಕ್ಕೆ
ಅನುಭವಿಸುವುದಕ್ಕೆ ಸುಂದರವಾಗಿ ರಂಜನೀಯ ಎನಿಸಿದರೂ ಯಕ್ಷಗಾನದ ಮಟ್ಟುಗಳೂ ಅವಶ್ಯವೇ ತಾನೇ. ಹಾಗಾಗಿ ಎರಡು ಮೇಳವಿಸಿ ಒಟ್ಟಾಗಿ ಅನುಭವಿಸುವಂತಾದರೂ
ಆಗಬೇಕು. ಇಲ್ಲವಾದರೆ ಇದನ್ನು ಅನುಭವಿಸುವಲ್ಲಿ ಕೆಲವೊಮ್ಮೆ ತ್ರಾಸವಾಗಿಬಿಡುತ್ತದೆ. ಇದು ನನ್ನ ಅನುಭವ.
ಯಕ್ಷಗಾನದ ಆಟವಾಗಲೀ
ಕೂಟವಾಗಲಿ ಕರ್ಣ ಪರ್ವ ಪ್ರಸಂಗ ಒಂದು ಜನಪ್ರಿಯ ಪ್ರಸಂಗ ಎಂಬುದರಲ್ಲಿ ಅನುಮಾನವಿಲ್ಲ. ’ಕರ್ಣ
ಪರ್ವ’ ’ವಾಲೀ ಮೋಕ್ಷ’ ಇದು ಪ್ರಸಂಗ ಕೇಳಿದಾಗಲೇ ಅರ್ಥಧಾರಿಗಳು ಕಲಾವಿದರು ನಿಟ್ಟು
ಸಿರುಬಿಡುತ್ತಾರೆ. ಆದರೂ ಇಲ್ಲಿ ಪ್ರೇಕ್ಷಕ
ತುದಿಗಾಲಲ್ಲಿ ಕಾದು ಕುಳಿತದ್ದು ಪ್ರಸಂಗದ ಜನಪ್ರಿಯತೆಗೆ ಸಾಕ್ಷಿ. ಎಲ್ಲ ಸರಕುಗಳನ್ನು
ತುಂಬಿಸಿಕೊಂಡ ಈ ಪ್ರಸಂಗ ಆರಂಭದಲ್ಲೇ ಮೈಕ್ ಹೆದರಿ ಕಂಗೆಟ್ಟದ್ದು ಇರುಸು ಮುರುಸಾಗುವಂತೆ ಆದರೂ ನಂತರ ಎಲ್ಲರೂ ಹೊಂದಿಸಿಕೊಂಡರು ಎನ್ನಬೇಕು. ಈ ಪ್ರಸಂಗದ ಮಧ್ಯೆ ಮೈಕ್
ಹಲವು ಬಾರಿ ತನ್ನ ಅಸ್ತಿತ್ವವನ್ನು ಸಾರಿ ಹೇಳುತ್ತಿತ್ತು. ಅದರ ಮೇಲ್ವಿಚಾರಣೆಯ ಬಗ್ಗೆ ತುಸೂ
ಯೋಚಿಸುವ ಹಾಗಾಯಿತು. ಇದೆಲ್ಲ ಒಂದು ಕಾರ್ಯಕ್ರಮದಲ್ಲಿ ಸಹಜವೇ ...ಹಾಗಾಗಿ ಇತ್ತಲು
ಕರ್ಣಾರ್ಜುನರಿಗೆ ಹತ್ತಿತು ಎನುವಾಗ ಪ್ರೇಕ್ಷಕ ಮತ್ತೆ ಆಕಡೆಗೆ ತಿರುಗಿಬಿಟ್ಟ.
ಹಿಮ್ಮೇಳದಲ್ಲಿ ಪದ್ಯಾಣ
ಗಣಪತಿ ಭಟ್ ಮತ್ತು ಪುತ್ತಿಗೆ ರಘುರಾಮ ಹೊಳ್ಳರ ದ್ವಂದ್ವ ಭಾಗವತಿಕೆ ಮೆರುಗನ್ನು ತರುವಲ್ಲಿ
ಉತ್ತಮ ಪ್ರಯತ್ನವನ್ನೇ ಮಾಡಿತು. ಮದ್ದಲೆಯಲ್ಲಿ
ಮತ್ತೊಬ್ಬ ಯುವ ಪ್ರತಿಭೆ ಶ್ರೀ ಕಡಬ ವಿನಯ ಆಚಾರ್ಯ ಉತ್ತಮ ಜತೆಗಾರಿಕೆಯನ್ನು ನೀಡಿತು. ಮೈಕ್ ನ
ಕಾರಣದಿಂದಲೋ ಏನೋ ಚೆಂಡೆ ನಿಜಸ್ವರವನ್ನು ಹೊರಡಿಸಲೇ ಇಲ್ಲ.
ಕರ್ಣ ಪರ್ವದ
ಮೊದಲ ಕರ್ಣಾರ್ಜುನ ಭಾಗದ ಕರ್ಣನಾಗಿ ಹೆಸರಾಂತ ಕಲಾವಿದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್
ಅರ್ಜುನನಾಗಿ ವಿಟ್ಲ ಶಂಭುಶರ್ಮ ತುರುಸು ಮುರುಸಾದ ವಾಗ್ವಾದಕ್ಕೆ ತೊಡಗಿ ಪ್ರೇಕ್ಷಕ ನನ್ನು
ರೋಮಾಂಚನಗೊಳಿಸಿದರು. ಆದರೂ ಶಂಭು ಶರ್ಮರ ನಿರೀಕ್ಷಿತ ಮಾತುಗಾರಿಕೆ ಬರಲಿಲ್ಲ ಎನ್ನಬಹುದು. ವಿಶ್ವಣ್ಣನದ್ದು ಎಂದಿನಂತೆ ಸಹಜತೆಯ ಎಲ್ಲೆ ಮೀರದ
ಮಾತುಗಾರಿಕೆ ಸ್ವರಭಾರದಿಂದಲೂ ಶಬ್ದಾಲಂಕಾರದಿಂದಲೂ ಆಕರ್ಷಣೀಯವಾಗಿತ್ತು ಎನ್ನಬಹುದು. ಅದೇ ಹಳೆಯ ಪ್ರಖರತೆ.
ಶ್ರೀಕೃಷ್ಣನಾಗಿ ಹಿರಿಯ ಶ್ರೀ ಕುಂಬಳೆ ಸುಂದರ್ ರಾವ್
ಯಥೋಚಿತವಾಗಿ ಅರ್ಥಗಾರಿಕೆಯನ್ನು ಮೆರೆದರು. ಇದು
ಅವರ ಎಷ್ಟನೇ ಕೃಷ್ಣನೋ ಯೋಚಿಸಿದರೆ ಗಾಬರಿಯಾಗಿಬಿಡುತ್ತದೆ. ಇದರಲ್ಲೂ ಯಕ್ಷಗಾನದ ಸೌಂದರ್ಯ ಅಡಗಿದೆ.
ಈ ತಾಳ ಮದ್ದಲೆಯ ಅತ್ಯಂತ
ಸುಂದರ ಸನ್ನಿವೇಶ ಎಂದರೆ ಕರ್ಣ ಶಲ್ಯ ಸಂಭಾಷಣೆ ಎಂದರೆ ಅತಿಶಯವವಲ್ಲ. ಬಹಳ ವಿದ್ವತ್ ಪೂರ್ಣ ಸಂದರ್ಭೋಚಿತ
ಮಾತುಗಾರಿಕೆ . ಸಮಯ ಮೀರಿ ಸ್ವಲ್ಪ ಲಂಬಿಸಿದರು ಸ್ವಾರಸ್ಯವಾಗಿ ಸಾಗುತ್ತಿದ್ದುದರಿಂದ ಪ್ರೇಕ್ಷಕ ತಡವಾದರೂ
ಏಳಲಾರದೇ ದ್ವಂದ್ವದಲ್ಲಿ ಸಿಲುಕಿದ ಎನ್ನಬೇಕು. ತಾಳ ಮದ್ದಲೆಯ ನಿಜ ಸೊಗಡು ಅನುಭವಾದ ಸನ್ನಿವೇಶ ಇದು.
ಯಾಕೆಂದರೆ ತಾಳ ಮದ್ದಲೆ ಎಂದರೆ ಅದು ಕೇವಲ ಚಪ್ಪಾಳೆಯನ್ನು ಗಿಟ್ಟಿಸುವ ಚರ್ಚಾಕೂಟ ಆಗಬಾರದು. ಅಲ್ಲಿ
ಸಂಭಾಷಣೆ ಹೊಸೆದುಕೊಂಡು ಬೆಳೆಯಬೇಕು. ವಾದ ಪ್ರತಿವಾದವನ್ನು ಖಂಡಿಸಬೇಕೆ ಹೊರತು ಮಲಗಿಸಬಾರದು. ಪಾತ್ರ
ಪಾತ್ರಗಳು ಒಂದಾಗಿ ಬೆಳೆದಾಗ ಸುಂದರ ತಾಳಮದ್ದಲೆಯ ಆವಿಷ್ಕಾರವಾಗುತ್ತದೆ. ಇದನ್ನು ತಿಳಿಯದೆ ಅದ್ಭುತ
ಅದ್ಭುತ ಎಂದು ಚಪ್ಪಾಳೆ ತಟ್ಟಿದರೆ ಕಲಾವಿದನೂ ಅದೇ ನೀರಿಗೆ ಕೈ ಅದ್ದಿಬಿಡುವ
ಮನೋಭಾವ ತೋರಿಸುತ್ತಾನೆ. ಇದು ವಾಸ್ತವ. ಪ್ರತಿಯೊಂದು ಪಾತ್ರದ ಅರ್ಥಗಾರಿಕೆ ತೊಡಗುವಾಗ ಪ್ರೇಕ್ಷಕ
ಚಿಂತಿಸಬೇಕು ಇದು ಯಾವ ಪದದ ಅರ್ಥ, ಇದರ ಪರಮೊನ್ನತಿಗೊಂಡು ಇದು ಮುಂದಿನ ಪದಕ್ಕೆ ಹೇಗೆ ಪ್ರಚೋದಿಸುತ್ತದೆ.
ಇಲ್ಲ ಮುಂದಿನ ಕಲಾವಿದನಿಗೆ ಹೇಗೆ ಅವಕಾಶವನ್ನು ಕಲ್ಪಿಸುತ್ತದೆ. ಹೇಳಿ ಕೇಳಿ ಇದು ಅಶು ಸಾಹಿತ್ಯ.
ಇದರ ಸೌಂದರ್ಯ ಕೇವಲ ವಾದ ಪ್ರತಿವಾದಕ್ಕೆ ಮತ್ತೆ ಚಪ್ಪಾಳೆಗೆ ಸೀಮಿತವಾಗಬಾರದು. ಈ ಎಲ್ಲ ಅಂಶಗಳನ್ನು
ಗಣಿಸಿದಾಗ ಶಲ್ಯ ಕರ್ಣ ಮತ್ತೂ ಮತ್ತೂ ನೆನಪಾಗುತ್ತಾರೆ. ಇದೇ ಭಾಗದಲ್ಲಿ ಬರುವ ಶ್ರೀರಾಮ ಜೋಯಿಸರ ಸರ್ಪಾಸ್ತ್ರದ ಬಗ್ಗೆ
ಹೇಳದೇ ಉಳಿಯಲು ಸಾಧ್ಯವಿಲ್ಲ. ಸಣ್ಣದಾದ ಪಾತ್ರವೂ ಎಷ್ಟು ಗಮನಾರ್ಹವಾಗಿಬಿಡುತ್ತದೆ ಎಂದು ತನ್ನ ಚಿಂತನ
ಮಂಥನಗಳಿಸಿಂದ ತೋರಿಸಿಕೊಟ್ಟ ಅರ್ಥಗಾರಿಕೆ.
ಕೊನೆಯ ಭಾಗದ
ಅವಾಸನದ ಕರ್ಣ ನೋಡುವ ಅವಕಾಶವಿದ್ದರೂ ಸಮಯವಿಲ್ಲದೆ ವಂಚಿತನಾದೆ ಎನ್ನಬೇಕು. ಸಂಪಾಜೆಯ ಯಕ್ಷೋತ್ಸವದಂತೆ ಪ್ರತಿ ಕಲಾವಿದನೂ ತನ್ನ
ಮಹತ್ತಾದ ದೇಣಿಗೆಯನ್ನು ನೀಡುವ ಪ್ರಯತ್ನವನ್ನು ಸ್ಪರ್ಧಾತ್ಮಕವಾಗಿ ಇಲ್ಲಿಯೂ ಮಾಡಿದ ಎನ್ನಬೇಕು.
ಎಲ್ಲವನ್ನು ಒಂದೆ ಮಾನದಂಡದಿಂದ ಅಳೆಯುವುದು ಹಾಸ್ಯಾಸ್ಪದವಾಗಿಬಿಡುತ್ತದೆ. ಆದಿನದ ಕಲಾವಿದನ
ಮನಸ್ಥಿತಿ ಮತ್ತು ಪರಿಸರ ಅಂದಿನ ನಿರ್ವಹಣೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಹಾಗಾಗಿ
ಅಭಿಪ್ರಾಯ ಅನಿಸಿಕೆಗಳು ಕೇವಲ ಆದಿನಕ್ಕೆ ಮಾತ್ರವೇ ಸೀಮಿತವಾಗಿಬಿಡಬೇಕು. ಇದು ಕೇವಲ ನನ್ನ
ಮನಸ್ಸಿನ ಅನಿಸಿಕೆ. ಅದು ಅದಕ್ಕಷ್ಟೆ ಸೀಮಿತ.
ಒಂದು ಉತ್ತಮ
ಎನ್ನಬಹುದಾದ ಕಾರ್ಯಕ್ರಮ ಆಯೋಜನೆ. ಒಂದೇ ಸವನೆ ಸುರಿಯುತ್ತಿದ್ದ ಮಳೆಗೆ ಬಿಸಿಬಿಸಿ ಉಪಾಹಾರ, ಯಕ್ಷಗಾನ ಆಸ್ವಾದನೆಯೊಂದಿಗೆ ಮನಸ್ಸಿಗೆ ಬಹಳ ಮುದವನ್ನು
ನೀಡಿತ್ತು. ಇದಕ್ಕಾಗಿ ಡಾ|| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಭಾರವಾಹಿಗಳಿಗೂ
ಪೋಷಕ ವರ್ಗದವರಿಗೂ ಕೃತಜ್ಞತೆಯನ್ನು ಸಲ್ಲಿಸಬೇಕು.
ಎಂದು ಅನ್ನಿಸುವ ಕೊನೆಯ ಒಂದು
ಮಾತಿದೆ ಅದೇ ” ಯಕ್ಷಗಾನಂ ಗೆಲ್ಗೆ”


No comments:
Post a Comment