ಇದು
ಕಳೆದ ಲೇಖನದ ಮುಂದುವರಿದ ಭಾಗ ಎನ್ನಬೇಕೋ
ಎಂದನಿಸುತ್ತದೆ. ಘಟನೆಗಳು ಹಾಗೆ
ದೂರದರ್ಶನದ ಸರಣಿಯಂತೆ ಒಂದನ್ನೊಂದು ಹೊಂದಿಕೊಂಡಿದ್ದರೆ ಅದೇ ಮುಂದುವರಿದಂತೆ ಭಾಸವಾಗುತ್ತದೆ. ಹಾಗೇ ಆಸಕ್ತಿ ಇದ್ದಲ್ಲಿ ಮುಂದುವರೆಸಿ.....
ಇತ್ತೀಚೆಗೆ
"ಅತಿಕಾಯ ಮೋಕ್ಷ" ಎಂಬ ಯಕ್ಷಗಾನ ಪ್ರಸಂಗದ ಧ್ವನಿಮುದ್ರಣ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಾ ನನ್ನ ಮೊಬೈಲ್ ಗೂ ಬಂತು.
ಸುಮಾರು ಮೂರು ನಾಲ್ಕು ಘಂಟೆಯ ತಾಳಮದ್ದಲೆ ಇಷ್ಟು ಸಂಕೀರ್ಣವಾಗಿ ಹರಿದಾಡಿ ನನ್ನ ಬಳಿಗೆ ಬರುತ್ತದೆ
ಎಂದರೆ ತಂತ್ರಜ್ಞಾನವನ್ನು ಹೊಗಳಬೇಕೋ ಅಲ್ಲ ಅವಿಷ್ಕಾರದ ಬಗ್ಗೆ ವ್ಯರಾಗ್ಯವನ್ನು ವ್ಯಕ್ತಪಡಿಸಬೇಕೋ
ತಿಳಿಯಲಿಲ್ಲ. ಉತ್ತರಕನ್ನಡದ ಗಡಿಗೆಹೊಳೆಯಲ್ಲಿ ಬಹಳ ಹಿಂದೆ ದಶಕಗಳ ಕೆಳಗೆ ಆದ ತಾಳ ಮದ್ದಲೆಯದು. ಹೊಸ್ತೋಟ ಶೇಣಿ ಪೆರ್ಲ ತೆಕ್ಕಟ್ಟೆ ಹೀಗೆ ಶ್ರೇಷ್ಠ ಕಲಾವಿದರ
ನೈಪುಣ್ಯತೆಯಿಂದ ಕೂಡಿದ ಸುಂದರ ಧ್ವನಿಮುದ್ರಣವದು.
ಆದರೆ ಇದರಲ್ಲಿ ಅಚ್ಚರಿ ಪಡುವಂತಹುದು ಏನಿದೆ ಎಂದು ಅಚ್ಚರಿಯೇ?
ಬಂದ
ದ್ವನಿ ಮುದ್ರಣದ ಕಡತವನ್ನು ಇಳಿಸಿ ಕೇಳಿದೆ. ಕೇಳಿದಾಗ ಅನುಮಾನಗೊಂಡು ಪರಿಶೀಲಿಸಿದಾಗ ಅರಿವಿಗೆ ಬಂತು.
ಇದು ನನ್ನ ಸಂಗ್ರಹದಲ್ಲಿದ್ದ ಒಂದು ಯಕ್ಷಗಾನ. ಇದರಲ್ಲಿ ವಿಚಿತ್ರವೇನು. ಸಂಗತಿ ಇರುವುದು ಇಲ್ಲೇ.
ಮಹನೀಯರೊಬ್ಬರಿಂದ ವಿನಿಮಯದ ರೂಪದಲ್ಲಿ ಸಂಗ್ರಹಿಸಿದ್ದ ಅಮೂಲ್ಯ ಸಂಗ್ರಹವದು. ಅದರಂತೆ ನನ್ನಲ್ಲಿದ್ದ
ಅಮೂಲ್ಯ ಸಂಗ್ರಹ
, ಸಮಯ ಮತ್ತು ಶ್ರಮವನ್ನು ಇದಕ್ಕಾಗಿ ವಿನಿಯೋಗಿಸಿದ್ದೆ. ಇದರ ಬಗ್ಗೆ ಖೇದವಿಲ್ಲ. ಆದರೆ ಒಂದು ವಸ್ತು ಸಂಗ್ರಹಿಸಲ್ಪಡುವುದು
ಅದರ ಮೌಲ್ಯದ ಯೋಗ್ಯತೆಯಿಂದ. ಅತ್ಯಮೂಲ್ಯವಾಗಿರುವಂತಹುದು ಅದು ಸಂಗ್ರಾಹ್ಯವಾಗಿರುತ್ತದೆ. ಇಲ್ಲವಾದರೆ ಸಂಗ್ರಹಕ್ಕೆ ಅರ್ಥವೆಲ್ಲಿಯದು?
ಇನ್ನು ಮೌಲ್ಯ
ಮಾಪನ ಅದು ನಮ್ಮಲ್ಲೇ ಇರುತ್ತದೆ. ನಮ್ಮ ಸಂಗ್ರಹಕ್ಕೆ
ನಾವು ಮೊದಲು ಮೌಲ್ಯವನ್ನು ಗೌರವವನ್ನು ಕೊಡಬೇಕು. ನಾವೇ ಅದನ್ನು ನೀಡದೆ ಇದ್ದಲ್ಲಿ ಮೌಲ್ಯರಹಿತವಾದ
ಸಂಗ್ರಹವಾಗುತ್ತದೆ. ವರ್ತಕ ತನ್ನ ಅಂಗಡಿಯಲ್ಲಿ ಸಂಗ್ರಹಿಸಿಡುವ
ಪ್ರತಿವಸ್ತುವಿನ ಮೌಲ್ಯವನ್ನು ಅರಿಯಬೇಕು. ಹಾಗಿದ್ದಲ್ಲಿ ವರ್ತಕನಾಗಿ ಯಶಸ್ಸನ್ನು ಗಳಿಸುವುದಕ್ಕೆ
ಇದು ಮೊದಲ ಆದ್ಯತೆಯಾಗಿರುತ್ತದೆ. ಹೆಣ್ಣನ್ನು ಮದುವೆ ಮಾಡಿಕೊಡುವಾಗ ಮಗಳ ಮೇಲೆ ತಂದೆಗೆ ಪ್ರೀತಿ
ಮಮಕಾರ ಗೌರವ ಇದ್ದಲ್ಲಿ ಆಕೆಯ ಗಂಡನ ಆಯ್ಕೆಯಲ್ಲೂ ಆತ ಕಾಳಜಿವಹಿಸುತ್ತಾನೆ. ಇಲ್ಲವಾದರೆ ಅದು
ಅಸ್ಥಾನಕ್ಕೆ ಸಲ್ಲುವ ದಾನವಾಗಿ ಪರಿಣಮಿಸುತ್ತದೆ.
ಹೀಗೆ
ನಮ್ಮಲ್ಲಿರುವ ಮೌಲ್ಯಯುತ ವಸ್ತು, ಅದು ಅದರ ಬೆಲೆಯನ್ನು ತಿಳಿದವರ ಕೈಸೇರಬೇಕೆಂದು
ಬಯಸುತ್ತಾರೆ. ಮಂಗನ ಕೈಗೆ ಮಾಣಿಕ್ಯ ಕೊಟ್ಟರೇನು ಬಂತು. ಮಂಗ ಒಂದು ಸಲ ಅದನ್ನು ನೋಡಿ ಮತ್ತೆ ಸ್ಥಳ
ನೋಡದೆ ಎಸೆದುಬಿಡುತ್ತದೆ. ಹಾಗೆಂದು ಅದೇ ವಸ್ತು ಮೌಲ್ಯ
ತಿಳಿದ ವ್ಯಾಪರಿಯ ಕೈ ಸೇರುವುದನ್ನು ಬಯಸಬಹುದೇ? ವ್ಯಾಪಾರಿಯಾದವನು ವಸ್ತುವಿನ ಮೌಲ್ಯವನ್ನು
ಅರಿಯುವಲ್ಲಿ ಮತ್ತು ಅದನ್ನು ಹೊಂದುವುದರಲ್ಲಿ ಆತನ ವ್ಯಾಪಾರಿ ಸ್ವಾರ್ಥವಿರುತ್ತದೆ. ಸುಂದರವಾದ ದೇವರ ಮೂರ್ತಿ ಅಂಗಡಿಯಲ್ಲಿದ್ದರೆ
, ಅಂಗಡಿಯಾತನಿಗೆ ಅದಕ್ಕೆ ನಮಸ್ಕರಿಸುವ
ಅಥವಾ ಪೂಜಿಸುವ ಆವಶ್ಯಕತೆ ಇರುವುದಿಲ್ಲ. ಅದೇ ಭಕ್ತನೊಬ್ಬ ಅದನ್ನು ಒಯ್ಯುವಾಗ ಅವನು ಕಟ್ಟುವ ಮೌಲ್ಯ
ಬೇರೆಯದೇ ಆಗಿರುತ್ತದೆ. ಆ ಮೌಲ್ಯವನ್ನು ಆತ ಎಲ್ಲಿಯವರೆಗೆ ಗೌರವಿಸುತ್ತಾನೊ ಅಲ್ಲಿಯ ತನಕ ಆ ಮೂರ್ತಿ
ಆತನಲ್ಲಿ ಸುರಕ್ಷಿತವಾಗಿರುತ್ತದೆ.
ಅಂದಿನ
ವೃತ್ತ ಪತ್ರಿಕೆಯ ಬೆಲೆ ಅಂದು ರಾತ್ರಿಕಳೆಯುವವರೆಗೆ ಸೀಮಿತ. ಮರುದಿನದ ಪತ್ರಿಕೆ ಬಂದಾಗ ಇದು ನಿನ್ನಯ
ಮೌಲ್ಯವಿಲ್ಲದ ಸಂಗ್ರಹದ ಮೇಲೆ ರದ್ದಿಯಾಗಿ ಬಿದ್ದಿರುತ್ತದೆ. ಅದರಂತೆ ನಮ್ಮ ಭಾಷೆಯ ಪತ್ರಿಕೆಯ ಮೌಲ್ಯವನ್ನು ಅನ್ಯಭಾಷಿಕ ನೀಡಬೇಕೆಂದೇನೂ ಇಲ್ಲ. ಇಂದಿನ ಪತ್ರಿಕೆಯಾದರೂ ಆತನಿಗೆ ಅರ್ಥವಿಲ್ಲದ ರದ್ದಿಯಾಗಿರುತ್ತದೆ.
ಒಂದು ವಸ್ತುವಿನ ಯೋಗ್ಯತೆ ಗುರುತಿಸಲ್ಪಡುವುದಕ್ಕೆ ಸ್ಥಾನದ ಅವಶ್ಯಕತೆಯೂ ಇರುತ್ತದೆ ಎಂಬುದನ್ನು ಇದು
ತೋರಿಸುತ್ತದೆ. ರಸ್ತೆ ಬದಿಯಲ್ಲಿ ಕರಪತ್ರ ಹಂಚುವವನ
ಕೈಯ್ಯಲ್ಲಿ ಇರುವವರೆಗೆ ಕರಪತ್ರ ಸುಂದರವಾಗಿ ಕಾಣುತ್ತದೆ. ಒಂದು ಸಲ ಆತನ ಕೈಯಿಂದ ಅದು ವಿತರಿಸಲ್ಪಟ್ಟಿತೋ
ಆಮೇಲೆ ಎಲ್ಲೆಂದರಲ್ಲಿ ಕಸದ ತೊಟ್ಟಿಯಲ್ಲೂ ಬಿದ್ದಿರುತ್ತದೆ. ಹಂಚಿಕೊಳ್ಳುವುದು ತಪ್ಪಲ್ಲ. ಆದರೆ ಅದು ಗೌರವವಯುತವಾಗಿರಬೇಕು. ಮೌಲ್ಯವನ್ನು ಉಳಿಸಬೇಕು. ಬೆಲೆ ಬಾಳುವ ವಸ್ತು ಒಂದನ್ನು
ನಾವು ಅಂಗಡಿಯಿಂದ ಹಣತೆತ್ತು ತರುತ್ತೇವೆ. ಆದರೆ ಮನೆಗೆ ತಂದಾಗ ಅಂತಹುದೇ ವಸ್ತುವನ್ನು ಪಕ್ಕದ
ಮನೆಯವನೋ ಸ್ನೇಹಿತನೋ ತನಗೆ ಉಪಯೋಗವಿಲ್ಲವೆಂದು ಉಚಿತವಾಗಿ ಮನೆಯಲ್ಲಿ ತಂದಿಟ್ಟಿರುತ್ತಾನೆ. ಕೈ
ಹಿಸುಕಿಕೊಳ್ಳುವಂತಾಗುವುದಿಲ್ಲವೆ? ಹೀಗೆ ಯಾವುದೇ
ವಸ್ತುವು ಸುಲಭವಾಗಿ ಧಾರಾಳವಾಗಿ ಸಿಗುತ್ತದೆ ಎಂದಾದರೆ ಅದರ ಮೌಲ್ಯ ಉಳಿಯುವುದಕ್ಕೆ ಸಾಧ್ಯವೇ?
ಮಂಗಳೂರಿನ
ಪುರಭವನದಲ್ಲಿ ಯಕ್ಷಗಾನ ಬಯಲಾಟವೊಂದು ನಡೆಯುತ್ತಿರುತ್ತದೆ. ಹಿರಿಯ ಕಲಾವಿದರೊಬ್ಬರಲ್ಲಿ
ಜಾಗವಿಲ್ಲವೆಂದು ಅಲವತ್ತುಕೊಂಡಾಗ ಅವರು ಹೇಳಿದ ಮಾತು ಬಹಳ ಅರ್ಥಪೂರ್ಣವಾಗಿ ಕಾಣುತ್ತದೆ. “ ಆಟ
ನೋಡುವವರು ಸ್ಥಳವಿಲ್ಲದೇ ಕಿಟಿಕಿ ಬಾಗಿಲುಗಳಲ್ಲಿ ಇಣುಕಿ ತುದಿಗಾಲಲ್ಲಿ ನಿಂತು ನೋಡುವಂತಿರಬೇಕು.
ಹಾಗೆ ಕಷ್ಟ ಪಟ್ಟು ನೋಡುವಾಗ ನಮಗೂ ನಮ್ಮ ಕಾಳಜಿಯ ಅರ್ಥವಾಗುತ್ತದೆ . ಉತ್ಸಾಹ ನೂರ್ಮಡಿಸುತ್ತದೆ.”
ಹೀಗೆ ಯಕ್ಷಗಾನವನ್ನು ಕಷ್ಟ ಪಟ್ಟು ಕಾಣುವಾಗ ಅದರ ಮೌಲ್ಯ ವೃದ್ದಿಯಾಗುತ್ತದೆ.
ಹೀಗಾಗಿ ಮೊಬೈಲ್ ನಿಂದ ಮೊಬೈಲ್ ಗೆ ಹಗುರವಾಗಿ ಹರಿದಾಡುವ
ಯಕ್ಷಗಾನವನ್ನು ಕಂಡಾಗ ಇಲ್ಲಿ ಅಚ್ಚರಿಯೊಂದಿಗೆ ಮನಸ್ಸು ತಳಮಳವನ್ನು ಅನುಭವಿಸುತ್ತದೆ. ಕಾರಣವಿಷ್ಟೆ.
ಹಗಲು ರಾತ್ರಿ ಪರಿಶ್ರಮಪಟ್ಟು ಅಭಿಮಾನದಿಂದ ಗಳಿಸಿದ್ದನ್ನು ಸಹೃದಯದಿಂದ ಹಂಚಿಕೊಂಡಾಗಿದೆ. ಇಲ್ಲಿರುವ ಸಂಗ್ರಹಕ್ಕೆ ಅನ್ಯರು ಮೌಲ್ಯವನ್ನು ನೀಡುತ್ತಾರೆ
ಎನ್ನುವಾಗ ಆ ಸಂಗ್ರಹಕ್ಕೆ ಮತ್ತಷ್ಟೂ ಅರ್ಥವಿರುತ್ತದೆ ಎಂಬ ಭಾವನೆ. ಆದರೆ ಆ ಮೌಲ್ಯದ ಸ್ವರೂಪ ನಿಸ್ವಾರ್ಥತೆಯಿಂದ ಕೂಡಿರಬೇಕು.
ಇದೇ ಭಾವದಲ್ಲಿ ನನ್ನ ಬಳಿಯಿಂದ ಹಲವರು ಅಮೂಲ್ಯ ಸಂಗ್ರಹವನ್ನು ಸಂಕೋಚವಿಲ್ಲದೇ ಕೇಳಿ ಪಡೆದಿರುತ್ತಾರೆ.
ಅದರಲ್ಲೂ ಕೆಲವರು ಹೆತ್ತ ತಾಯಿಯ ಮೇಲೆ ಆಣೆಇಟ್ಟ ಭಾವದಲ್ಲಿ ಯಾರಿಗೂ ಕೊಡುವುದಿಲ್ಲ ಎಂಬ ವಾಗ್ದಾನವನ್ನು
ಆಧರಿಸಿ ನನ್ನಿಂದ ಪಡೆದದ್ದಿದೆ. ವಾಸ್ತವದಲ್ಲಿ ಹೆತ್ತ ತಾಯಿ ಎನ್ನುವುದಕ್ಕೆ ಇಲ್ಲಿ ವಿಶಾಲವಾದ ಅರ್ಥವಿದೆ.
ಹೇಳಿ ಕೇಳಿ ಯಕ್ಷಗಾನವನ್ನು ಅತಿಯಾದ ಪ್ರೀತಿ ಅಭಿಮಾನದಿಂದ ಕಾಣುವವರಿಗೆ ಯಕ್ಷಗಾನ ಕೇವಲ ಕಲೆಯಾಗದೆ
ಅದು ಹೆತ್ತತಾಯಿಗೆ ಸಮಾನವಾಗಿರುತ್ತದೆ. ಅದಕ್ಕೆ ಆ ಗೌರವವನ್ನು ಮೌಲ್ಯವನ್ನು ಹೃದಯದಿಂದ ನೀಡುತ್ತಾರೆ. ಹೀಗೆ ನಂಬಿಕೆ ವಿಶ್ವಾಸದಿಂದ ಪಡೆದವರು ತಮ್ಮ ತಾಯಿಯನ್ನೇ
ಸಾರ್ವಜನಿಕವಾಗಿ ಮೌಲ್ಯರಹಿತವಾಗಿ ಕಾಣುತ್ತಾರೆ ಎಂದ ಮೇಲೆ ಇಲ್ಲಿ ಯಕ್ಷಗಾನಕ್ಕಾಗಲೀ ಅದರಂಗಗಳಾದ ಕಲಾವಿದರಿಗಾಗಲೀ
ಗೌರವವೆಲ್ಲಿ ಬಂತು?
ತಮ್ಮ ಹೆಸರು ದುಡ್ಡು ಮಾಡುವ ಸ್ವಾರ್ಥಕ್ಕೆ ಹೆತ್ತತಾಯಿಯನ್ನಾದರೂ ಪರಭಾರೆ ಮಾಡುವ
ಈ ಮನೋಭಾವದಿಂದ ಮೌಲ್ಯವನ್ನು ನಿರೀಕ್ಷಿಸುವುದು ನನ್ನಂತಹವನಿಗೆ ಮೂರ್ಖತನವಾಗಿ ಕಾಣುತ್ತದೆ. ಮನೆಯ ಹೆಣ್ಣುಮಗಳನ್ನು ಹೆತ್ತವರು ಧಾರೆ ಎರೆದು ಮದುವೆ
ಮಾಡಿ ಕೊಟ್ಟ ನಂತರ ತಾವಿತ್ತ ಪ್ರೀತಿ ಗೌರವ
ಸೇರಿದ ಮನೆಯಲ್ಲೂ ಸಿಗಬೇಕೆಂದು ಅವರು ಬಯಸುತ್ತಾರೆ. ಆಗಲೇ ಆ ಹೆಣ್ಣಿನ ಬದುಕಿಗೆ ಅರ್ಥ ಮತ್ತು
ಮೌಲ್ಯ ಪ್ರಾಪ್ತಿಯಾಗುತ್ತದೆ. ಬದಲಿಗೆ ಆ ಹೆಣ್ಣು
ಬೀದಿಗೆ ಬಂದು ನಿಂತರೆ ಹೇಗಾಗ ಬೇಡ. ಇದರ ಅಂತರಾರ್ಥ
ಸಂಸ್ಕಾರವಂತ ಮನಸ್ಸಿಗೆ ಮಾತ್ರವೇ ಅರ್ಥವಾಗಬಹುದು.
ಹಂಚಿ
ಹೋದದ್ದರಲ್ಲಿ ಖೇದವಿಲ್ಲ. ಆದರೆ ಅದನ್ನೆ ತಮ್ಮ ಪಿತ್ರಾರ್ಜಿತ ವಸ್ತುವಿನಂತೆ ಭಾವಿಸಿ
ಮಾರಾಟಕ್ಕಿಟ್ಟು ಹಣಮಾಡುವ ಮನೋಭಾವ ತೋರಿದರೆ ನಾವು ಅಭಿಮಾನಿಸುವ ಯಕ್ಷಗಾನದ ಮೌಲ್ಯ ಎಲ್ಲಿ
ಉಳಿಯಿತು? ನಮ್ಮ ಮೌಲ್ಯ ಮಾಪನದಲ್ಲಿ ಬೆಲೆಗೆ
ನಿಲುಕಲಾಗದ ಯಕ್ಷಗಾನ ಒಂದು ಐವತ್ತು ಅರುವತ್ತು ರುಪಾಯಿಯ ಸಿ ಡಿ ಯಲ್ಲಿ ಹೊರಗೆ ಸಿಗುತ್ತದೆ
ಎಂದಾದರೆ ಇದನ್ನು ತೆವಲು ಎನ್ನದೆ ಬೇರೆ ಎನಾದರು ಗೌರವಯುತ ಮಾತುಗಳಲ್ಲಿ ಕೊಂಡಾಡಬೇಕೆ? ಇದನ್ನೇ
ಹೆತ್ತವ್ವೆಯ ಪ್ರೀತಿಯನ್ನು ಮಾರಾಟಕ್ಕಿಡುವುದು ಎನ್ನಬಹುದು. ನಿಮಗೆ ಹೇಗನ್ನಿಸುತ್ತದೆ. ಇದನ್ನು ಓದಿ ಪರಿವರ್ತನೆಯಾಗುತ್ತದೆ ಎಂಬ
ವಿಶ್ವಾಸವಿಲ್ಲ. ಆದರೆ ಮನದಿಂಗಿತ ಅದರಂತೆ ಹಂಚಿ ಹೋಗಲಿ ಎಂಬ ಸಮಾಧಾನ ಅಷ್ಟೆ.
No comments:
Post a Comment