“ತನ್ನಲ್ಲಿ ಇದ್ದುದರ ಅರಿವಿಲ್ಲದೆ ತನ್ನಲ್ಲಿ ಇಲ್ಲದೇ ಇರುವುದರ
ಹಿಂದೆ ತಿರುಗುವುದು ಮನುಷ್ಯ ಸಹಜ ಗುಣ”
ತನ್ನಲ್ಲಿದ್ದ ಸಂಪತ್ತಿನ ಬಗ್ಗೆ ಯೋಚಿಸುವುದರ ಬದಲು.
ಪರರ ಸಂಪತ್ತಿನ ಬಗ್ಗೆ ಯೋಚಿಸುವಾಗ ಮನಸ್ಸಿನ ನೆಮ್ಮದಿಯನ್ನು ತಾನೆ ಬಲಿಕೊಟ್ಟ ಹಾಗೆ. ಮೊನ್ನೆ ಬೆಂಗಳೂರಲ್ಲಿ
ಆದ ಯಕ್ಷಗಾನ ಕಾರ್ಯಕ್ರಮವನ್ನು ಕಂಡಾಗ ಈ ತತ್ವ ಮತ್ತೂ ಮತ್ತೂ ಸ್ಪುರಣೆಗೆ ಬಂತು. ಅದು ಪಲ್ಲವಿ
ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಜರಗಿದ ಕಾರ್ಯಕ್ರಮ. ಈ ವೇದಿಕೆಯ ಮೂಲ ಬೆನ್ನೆಲುಬಿನಂತೆ ದುಡಿಯುವ
ಮಹನಿಯರೆಂದರೆ ಅದು ನರಸಿಂಹ ಭಟ್ಟರು. ತಮ್ಮ ದೈಹಿಕ ದೌರ್ಬಲ್ಯಗಳೆಲ್ಲವನ್ನೂ ನಗಣ್ಯವಾಗಿಸಿಕೊಂಡು
ಅಪ್ಪಟ ಕಲಾಭಿಮಾನದಿಂದ ದುಡಿಯುವ ಶ್ರಮಜೀವಿ. ಇವರು ತನ್ನಲ್ಲಿ ಇಲ್ಲದುದರ ಬಗ್ಗೆ ಯೋಚಿಸದೆ ತನ್ನಲ್ಲಿ
ಇದ್ದ ಸಂಪನ್ಮೂಲದಿಂದ ಅದೇನೋ ಸಾಧಿಸುವ ಛಲ ಹೊಂದಿದವರು. ಬುದ್ದಿವಂತ ವರ್ತಕನ ಹಾಗೆ,,
ತನ್ನಲ್ಲಿದ್ದ ಭಂಡವಾಳವನ್ನು ಮೊದಲು ಯೋಚಿಸಿ ಅದರ ಮೇಲೆ ಮೊದಲು ವಿಶ್ವಾಸವಿರಿಸುತ್ತಾನೆ.
ಯಕ್ಷ ಸೌರಭ ಎಂಬ ಈ ಕಾರ್ಯಕ್ರಮದಲ್ಲಿ ಆರಂಭದಲ್ಲಿ
ಯಕ್ಷಗಾಯನ ವೇಣುವಾದನ ಜುಗಲ್ಪಂದಿ. ಸುಮಾರು ಒಂದುವರೆ ತಾಸಿನ ಈ ಕಾರ್ಯಕ್ರಮ ರಂಜನೆಯನ್ನು
ಒಂದಗಿಸಿತು. ತೆಂಕು ಬಡಗು ಖ್ಯಾತಿಯ ಭಾಗವತ ಶ್ರೀ ಸತ್ಯನಾರಾಯಣ ಪುಣಿಚಿತ್ತಾಯರ ಯಕ್ಷ
ಗಾಯನಕ್ಕೆ ವಿದ್ವಾನ್ ಶ್ರೀ ಗಣೇಶ್ ಕೆ. ಎಸ್ ಅವರ
ಕೊಳಲು ವಾದನ. ಯುವ ಮದ್ದಲೆಗಾರ ಶ್ರೀಶ ನಿಡ್ಲೆ ಮತ್ತು ಶ್ರೀ ಅವಿನಾಶ್ ಬೈಪಡಿತ್ತಾಯರ ಮದ್ದಲೆ ವಾದನ.
ಚೆಂಡೆಯಲ್ಲಿ ಮಿತ್ರ ವೇಣುಗೋಪಾಲ್ ಪಡ್ರೆ ಮತ್ತು
ಪುಟ್ಟ ಕುಮಾರ ಮಾ | ನಿನಾದ ಕೆ ಜಿ. ಈ ಪುಟ್ಟ
ಕಂದ ವಿದ್ವಾನ್ ಗಣೇಶ್ ಕೆ ಎಸ್ ಅವರ ಪುತ್ರ.
ಚೆಂಡೆಯ ಗಾತ್ರದ ಪುಟ್ಟ ಕಿಶೋರನ ಚೆಂಡೆ ವಾದನ ಬಹಳ ಆಕರ್ಷಣೀಯವಾಗಿತ್ತು. ಉಳಿದಂತೆ ಒಂದುವರೆ
ಘಂಟೆಗಳ ಕಾಲ ಸಂಗೀತ ಸುಧೆ ಪರಿಷತ್ ನ ಸಭಾಭವನದಲ್ಲಿ ಸಂಗೀತ ತರಂಗಗಳನ್ನು ಸೃಷ್ಟಿಸಿತು. ಎರಡು ಸಂಗೀತ ಪ್ರತಿಭೆಗಳು ಪ್ರೇಕ್ಷಕರನ್ನು ವಿಶೇಷವಾಗಿ
ರಂಜಿಸಿದವು.
ಆನಂತರ ಸುಮಾರು ಮೂರು ತಾಸುಗಳ ಅವಧಿಗೆ ಅತಿಕಾಯ ಮೋಕ್ಷ
ಎಂಬ ಪ್ರಸಂಗ ತಾಳ ಮದ್ದಲೆ ರೂಪದಲ್ಲಿ ಸಂಪನ್ನಗೊಂಡಿತು. ಇದರ ನೇತೃತ್ವವನ್ನು ವಹಿಸಿದವರು ಶ್ರೀ
ಶಿವ ಶಂಕರ ಬಲಿಪರು. ಮದ್ದಲೆಯಲ್ಲಿ ಶ್ರೀ ಶ ನಿಡ್ಲೆ ಮತ್ತು ಶ್ರೀ ಅವಿನಾಶ್ ಬೈಪಡಿತ್ತಾಯ, ಚೆಂಡೆ ಶ್ರೀ ವೇಣು
ಗೋಪಾಲ ಪಡ್ರೆ.
ತಾಳ ಮದ್ದಲೆ ನೋಡಿದಮೇಲೆ ಒಂದೆರಡು ವಿಚಾರಗಳು
ಬೇಡವೆಂದರೂ ಮನಸ್ಸಿನಲ್ಲಿ ಕೊರೆಯತೊಡಗಿದವು. ಯಕ್ಷಗಾನ ತಾಳ ಮದ್ದಲೆ ಅಂದಿನಿಂದ ಇಂದಿನವರೆಗೆ
ಹಲವು ಕಾರಣಗಳಿಂದ ಹಲವಾರು ಅವಿಷ್ಕಾರಗಳನ್ನೂ ಬದಲಾವಣೆಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡು
ಜೀವಸೆಲೆಯನ್ನು ಉಳಿಸಿಕೊಂಡಿದೆ ಎನ್ನಬಹುದು. ಇದು ಎಷ್ಟು ಸರಿ ಯಾವುದು ತಪ್ಪು ಅದನ್ನು
ಪ್ರತ್ಯೇಕಿಸುವುದೇ ಇಂದಿನ ಕಾಲದಲ್ಲಿ ಸಮರ್ಪಕವೆಂದೆನಿಸುವುದಿಲ್ಲ. ಯಾಕೆಂದರೆ ಅದರಜತೆಗೆ ಬೆಳೆದು
ಬಂದಿರುವ ವಿಭಿನ್ನದೃಷ್ಟಿಕೋನ ಇದಕ್ಕೆ ಕಾರಣ. ಹಾಗಿರುವಾಗ ಇಲ್ಲಿ ನಿರ್ಣಾಯಕವಾಗುವುದು ಅವರವರ
ಅಭಿರುಚಿ. ಆ ನಿಟ್ಟಿನಲ್ಲಿ ವಿಚಾರಗಳು ಕೊರೆಯತೊಡಗಿತು ಎನ್ನಲೇಬೇಕಾಗುತ್ತದೆ.
ಪ್ರಸ್ತುತ ಅತಿಕಾಯ ಮೋಕ್ಷವೆಂಬ ಪ್ರಸಂಗ. ಪ್ರಸಂಗ
ಕರ್ತೃ ಇದನ್ನು ಯಾವ ದೃಷ್ಟಿಕೋನದಿಂದ ರಚಿಸಿರಬಹುದು, ನನ್ನಂತಹವನ ಯೋಚನೆಗೆ ನಿಲುಕುವುದಿಲ್ಲ.
ಆದರೂ ಯಕ್ಷಗಾನ ಪ್ರಸಂಗಗಳ ಒಂದು ಸಾರ್ವತ್ರಿಕ ರೂಪ
ಹೇಗಿರುತ್ತದೆ ಎನ್ನುವಲ್ಲಿ ಸರಳವಾಗಿ ಹೇಳಬೇಕೆಂದರೆ ಅವುಗಳು ಪುರಾಣಕ್ಕೆ ಹೊಂದಿಕೊಂಡು ಇರುತ್ತವೆ
ಹೊರತು ಅದು ಪುರಾಣ ಕಥೆಗಳ ಯಥಾವತ್ ಆಗಿರುವುದಿಲ್ಲ. ಆದರೆ ಹಲವು ಸಲ ಇದನ್ನು ಒಂದೇ ಆಗಿ
ರೂಪಿಸಿ ಹಲವು ತರ್ಕಗಳಿಗೆ ಎಡೆಮಾಡಿಕೊಡುತ್ತವೆ.
ತಾಳ ಮದ್ದಲೆಯಲ್ಲಂತೂ ಇದು ನಿಷ್ಠೂರ ಸತ್ಯ ಎನ್ನಬೇಕು.
ಅತಿಕಾಯ ಮೋಕ್ಷಪ್ರಸಂಗ ಮೂಲ ಧ್ಯೇಯವೆಂದರೆ ಇಲ್ಲಿ
ವೈಷ್ಣವ ಮತ್ತು ಶೈವ ಪಂಥದ ಸ್ಥೂಲವಾದ ದರ್ಶನ
ಎನ್ನಬಹುದು. ರಾವಣ ಅಖಂಡ ಶಿವಭಕ್ತ ಮಾತ್ರವಲ್ಲ ತಾತ್ವಿಕವಾಗಿ ಹರಿದ್ವೇಷವನ್ನೇ ಅನುಸರಿಸಿಕೊಂಡು
ಬಂದವನು. ಆದರೆ ಅತನ ಮಗ ಅತಿಕಾಯ ಪರಮ ವೈಷ್ಣವನಾಗಿರುತ್ತಾನೆ. ಹಾಗಾಗಿ ಇಲ್ಲಿ ಈ ಪ್ರಸಂಗದಲ್ಲಿ
ಅಲ್ಪಮಟ್ಟಿನ ಸಂಘರ್ಷವನ್ನು ಪ್ರಸಂಗ ಕರ್ತ ಬಯಸುತ್ತಾನೆ
ಎನ್ನಬೇಕು. ಹಾಗಾಗಿಯೇ ಅತಿಕಾಯ “ ಏತಕೆ ಮರುಳಾಹೆ ತಾತ.......”
ಎಂದು ರಾವಣ ತತ್ವದೊಡನೆ ಸಂಘರ್ಷಕ್ಕೆ ಇಳಿಯುತ್ತಾನೆ. ಇಲ್ಲಿ ಮರುಳು ಎಂಬ ವಿಚಾರಕ್ಕೇ ಒಂದಷ್ಟು
ಚರ್ಚೆಯಾಗುತ್ತದೆ. ಕೇಳುತ್ತಾ ಹೋದಂತೆ ಇಂದಿನ
ತಾಳ ಮದ್ದಲೆಯ ಅರ್ಥಗಾರಿಕೆಯ ರೂಪವೇ
ಬದಲಾಗುತ್ತಿದೆ ಎಂದನಿಸುತ್ತದೆ. ಇದು ಸರಿಯೋ ತಪ್ಪೋ ಅದನ್ನು ವಿಶ್ಲೇಷಿಸುವ ಸಾಮಾರ್ಥ್ಯ ಇಲ್ಲ.
ಆದರೂ ನಮ್ಮ ಮನಸ್ಸು ಸ್ವಾರಸ್ಯ ಕಳೆದುಕೊಳ್ಳುವುದಕ್ಕೆ ನಾವೇ ಹೊಣೆಗಾರರು ಎಂದು ಹೇಳಬೇಕು.
ಪ್ರಸಂಗದ ಕರ್ತೃವಿಗೆ ರಾವಣ ಅತಿಕಾಯರ ನಡುವೆ
ಕಚ್ಚಿಕೊಳ್ಳಬೇಕು ಎಂದು ಇದ್ದೀತೆ? ಇಂದಿನ ಪ್ರೇಕ್ಷಕ ದೃಷ್ಟೀಕೋನವೂ ಇದರಿಂದ ಭಿನ್ನವಾಗಿಲ್ಲ.
ತಾಳ ಮದ್ದಲೆ ಎಂದರೆ ಒಂದಷ್ಟು ಕಚ್ಚಿಕೊಂಡು ಪರಸ್ಪರ ಮರ್ಮಕ್ಕೆ ನೋಟವಿರಿಸಿದ ಮಾತುಗಳು
ಇರಲೇಬೇಕು. ರಾವಣನ ಮೋಕ್ಷವೋ ಅತಿಕಾಯನ ಮೋಕ್ಷವೋ ಅದು ವೆತ್ಯಾಸವಿರುವುದಿಲ್ಲ. ರಾವಣ ವಧೆಯಾದರೆ
ಅತಿಕಾಯ ಮೋಕ್ಷ ಯಾಕಾಗಬೇಕು? ಇದರ ಜಿಜ್ಞಾಸೆ ಇರುವುದಿಲ್ಲ. ಚರ್ಚೆಯಂತೂ ರಂಜನೆಯನ್ನು ಕೊಡುತ್ತದೆ ಚಪ್ಪಾಳೆಯನ್ನು
ಗಿಟ್ಟಿಸುತ್ತದೆ.
ಅತಿಕಾಯ ಪ್ರವೇಶದಿಂದ ತೊಡಗಿ ರಣ ವೀಳ್ಯ ಪ್ರದಾನವಾಗುವರೆಗೂ ತಂದೆ ಮಗ ಅಕ್ಷರಶಃ
ಕಚ್ಚಿಕೊಂಡರು ಎಂದರೂ ಸರಿಯೇ, ಆದರೂ ಅಲ್ಲಿ ವ್ಯಕ್ತವಾಗಬೇಕಾದ
ವಿಭಿನ್ನ ಭಕ್ತಿ ಮಾರ್ಗದ ಪ್ರತಿಪಾದನೆಗೆ ಸಮಯವೇ ಒದಗಿ ಬರಲಿಲ್ಲ. ರಾವಣ ಹರಿದ್ವೇಷವನ್ನೆ
ಜೀವನವನ್ನಾಗಿಸಿ ದ್ವೇಷಭಕ್ತಿಯಲ್ಲೇ ಮೋಕ್ಷಗಮನ ನಾಗಿದ್ದರೆ, ಮಗ ಭಕ್ತ ವೈಷ್ಣವನಾಗಿ
ತಾತ್ವಿಕವಾಗಿ ತಂದೆಗೆ ವಿರುದ್ದವಾಗಿರುತ್ತಾನೆ. ಶ್ರೀರಾಮನ ಔನ್ನತ್ಯವನ್ನು ಶ್ರೇಷ್ಠತೆಯನ್ನು
ಅರಿತೇ ರಾವಣ ರಾಮನಲ್ಲಿ ಸಂಘರ್ಷಕ್ಕೆ ಇಳಿಯುತ್ತಾನೆ. ಇಷ್ಟೆಲ್ಲ ತಿಳಿದ ರಾವಣ ಅಷ್ಟನ್ನು ತಿಳಿಯದೇ ಹೋದನೆ?
ಇದು ಇಲ್ಲಿನ ತಾತ್ವಿಕ ಸಮರ್ಥನೆ.
ಕೊನೆಗೆ
ಚರ್ಚೆ ಉಪಸಂಹಾರಗೊಂಡು ಅತಿಕಾಯ ಯುದ್ದಕ್ಕೆ ಹೋರಡುವುದೇ ಲೇಸೆಂದು ಬಗೆಯುತ್ತಾನೆ. “ ಜೀಯ ತಾ
ಸಂಗರಕೆ ........” ಎಂದು ಯುದ್ದಕ್ಕೆ
ಅಣಿಯಾಗಿ ಕೊಡು ಧುರವೀಳ್ಯವನು ಎನ್ನುವಾಗ ರಾವಣ ಸಂತುಷ್ಟನಾಗಿ ಅತಿಕಾಯನ ವೈಶಿಷ್ಟ್ಯವನ್ನೂ
ಚರಿತ್ರೆಯನ್ನೂ ತುಂಬು ಮನಸ್ಸಿನಿಂದ ಹೊಗಳುತ್ತಾನೆ. “ ನಿನ್ನಂತಹ ಮಗನನ್ನು ಪಡೆದ ನಾನು
ಧನ್ಯ....ಧಾನ್ಯ ಮಾಲಿನಿ (ಅತಿಕಾಯನ ತಾಯಿ) ಯಂತಹವಳನ್ನು ಪಡೆದ ನಾನು ಧನ್ಯ ” ಈ ಹೊಗಳಿಕೆಯ ನಡುವೆಯೇ ಚರ್ಚೆ ಬೆಳೆದು ರಾವಣ ಅತಿಕಾಯನ
ಮೇಲೆ ಏರಿಹೋಗುವುದು ವಿಚಿತ್ರವೆನಿಸುತ್ತದೆ. ಹಾಗಾದರೆ ಮಗನ ಹೊಗಳಿಕೆ ಮಹತ್ವ ಎಲ್ಲಿ ಬಂತು?
ಕೊನೆಯ
ಒಂದೆರಡು ವಾಕ್ಯದ ಅತಿಕಾಯ ಅರ್ಥಗಾರಿಕೆಯಲ್ಲಿ ರಾವಣ ಮತ್ತು ಅತಿಕಾಯನ ಭಕ್ತಿ ಮಾರ್ಗವನ್ನು ವಿವರಿಸಿದರೂ. ಆದರೆ
ಅದುವರೆಗೆ ಪೂರ್ಣ ತಾಳ ಮದ್ದಲೆಗೆ ಇದ್ದ ಮೂರು ತಾಸಿನ ಸಮಯಾವಕಾಶದಲ್ಲಿ ಒಂದುವರೆ ತಾಸಿನ ತಾಳಮದ್ದಲೆ ಅವಧಿ ಮುಗಿದು ಹೋಗಿತ್ತು.
ಈ ಒಂದೆರಡು ವಾಕ್ಯದ ತಾತ್ಪರ್ಯಕ್ಕೆ ಚರ್ಚೆಯಲ್ಲಿ ಈವರೆಗೆ ಬಂದ ವಿಚಾರಗಳು ಮಾತ್ರ ಅದಕ್ಕೆ ಸಂಬಂಧಿಸಿಯೇ ಇರಲಿಲ್ಲ.
ತಾಳ ಮದ್ದಲೆ ಕ್ಷೇತ್ರದಲ್ಲಿ ಇಂದು ಬಹು ಸಂಖ್ಯೆಯಲ್ಲಿ
ವಿದ್ವಾಂಸರೂ ವಿದ್ಯಾವಂತರೂ ಇರುತ್ತಾರೆ. ನಿಜವಾಗಿಯೂ ಇದು ಯಕ್ಷಗಾನ ಕ್ಷೇತ್ರಕ್ಕೆ
ಸಲ್ಲುತ್ತಿರುವ ಸೌಭಾಗ್ಯ ಎನ್ನಬೇಕು. ಹೀಗಿರುವಾಗ
ಅರ್ಥಗಾರಿಕೆಯೂ ಪಾಂಡಿತ್ಯ ಪೂರ್ಣವಾಗುವ ಅವಕಾಶವಿರುತ್ತದೆ. ವಿಪರ್ಯಾಸವೆಂದರೆ ಹೀಗಿದ್ದೂ
ತಾಳಮದ್ದಲೆಗಳು ಪ್ರಸಂಗದ ಆಶಯದಿಂದ
ದೂರವಾಗುತ್ತಿರುವುದು. ಒಂದು ಸಣ್ಣ ಮೊಳೆಯನ್ನು
ಹೊಡೆಯುವುದಕ್ಕೆ ದೊಡ್ಡ ಸುತ್ತಿಗೆಯನ್ನೇನೋ ಉಪಯೋಗಿಸಬಹುದು. ಆದರೆ ಅದರ ಮೇಲೆ ಹೊಡೆಯುವ ಪ್ರಹಾರ
ಅದೇ ರೀತಿಯಾದರೆ ಮೊಳೆ ಹೊಡೆಯುವ ಉದ್ದೇಶವೇ ಸಫಲವಾಗುವುದಿಲ್ಲ. ಪಾಂಡಿತ್ಯವಾಗಲೀ ಅನುಭವವಾಗಲಿ
ಔಚಿತ್ಯ ಪೂರ್ಣವಾಗಿ ಉಪಯೋಗವಾದಲ್ಲಿ ತಾಳ ಮದ್ದಲೆ ವಿದ್ವಜ್ಜನರ ಸಮ್ಮೇಳನವಾಗಬಹುದು.
ಅರ್ಥಗಾರಿಕೆ ಸ್ಪರ್ಧಾತ್ಮವಾಗಿರಬೇಕು. ಜತೆಗೆ ಅದರ
ಆಶಯವೂ ಸ್ಪಷ್ಟವಾಗಿರಬೇಕಲ್ಲ? ಪ್ರಸಂಗದ ಆಶಯವೇ ಬದಲಾದರೆ ಅಯೋಮಯವಾಗುತ್ತದೆ. ಯಾವುದು ಸರಿ
ಯಾವುದು ತಪ್ಪು ಎಂಬ ಗೊಂದಲದಲ್ಲಿ ಪ್ರೇಕ್ಷಕ ಮುಳುಗಿಬಿಡುತ್ತಾನೆ. ದೀರ್ಘವಾದ ಅರ್ಥಗಾರಿಕೆ, ನಿರರ್ಗಳ ಉಪಕಥೆ ಉದಾಹರಣೆಗಳು ಇದ್ದುಕೊಂಡು ಅದು ತಾಳಮದ್ದಲೆ ಅರ್ಥಗಾರಿಕೆ ಎಂಬಂತೆ ಬಿಂಬಿಸಲ್ಪಟ್ಟರೆ
ಅಲ್ಲಿ ಕ್ಷಣಿಕವಾದ ರಂಜನೆಗಳಿಸಬಹುದು, ಆದರೆ ಅದು ಒಟ್ಟು ಆಶಯದ ವಿರುದ್ದವಾಗುವುದಿಲ್ಲವೇ?
ಮಾತ್ರವಲ್ಲ ದೀರ್ಘವಾದ
ಅರ್ಥಗಾರಿಕೆ ಮತ್ತು ಚರ್ಚೆಯ ನಡುವೆ ಹಿಮ್ಮೇಳದವರ ಅಸಹನೀಯತೆಯನ್ನು ಯಾರು
ಅರ್ಥವಿಸಿಕೊಳ್ಳುತ್ತಾರೆ?
ನನ್ನ ತಿಳುವಳಿಕೆಯಂತೆ ತಾಳ ಮದ್ದಲೆಗೂ ಪುರಾಣಕ್ಕೂ
ಸಂದರ್ಭೋಚಿತವಾಗಿ ಬಹಳಷ್ಟು ವೆತ್ಯಾಸವಿರುತ್ತದೆ. ಹಲವು ಪ್ರಸಂಗಗಳು ಅದರಲ್ಲಿ ಬರುವ ಹಲವು ಸನ್ನಿವೇಶಗಳು
ಪುರಾಣದಲ್ಲಿ ಉಲ್ಲೇಖವೇ ಇರುವುದಿಲ್ಲ, ಮತ್ತು ಹಲವು ಕಾಲ್ಪನಿಕ. ತಾಳಮದ್ದಲೆ ಎಂಬುದು ಸಂಪೂರ್ಣ
ಆಶು ಸಾಹಿತ್ಯದ ರೂಪ. ಇಲ್ಲಿ ಹಿನ್ನೆಲೆಯ ತಯಾರಿ ಏನೂ ಇರುವುದಿಲ್ಲ. ಇದರ ಚಿತ್ರಕಥೆ ಮೊದಲೇ
ತಯಾರಿಯಾಗುವುದಿಲ್ಲ. ಹಾಗೊಂದು ವೇಳೆ ಅದು ಪೂರ್ವ ತಯಾರಿಯಾದರೆ ತಾಳ ಮದ್ದಲೆಯಲ್ಲಿ ಸ್ವಾರಸ್ಯವೇ
ಇರುವುದಿಲ್ಲ. ಪೂರ್ವ ಸಿದ್ದತೆಯಲ್ಲಿ ಅರ್ಥಧಾರಿ ರಂಗವೇರಿದರೆ ಆತನ ಸಿದ್ದತೆಗೆ ಅಲ್ಲಿ ಅವಕಾಶವೇ
ಒದಗಿ ಬಾರದೆ ಇರಬಹುದು. ಉಳಿದೆಲ್ಲ ಕಲೆಗಳಿಗಿಂತ ಯಕ್ಷಗಾನ ಭಿನ್ನವೆನಿಸುವುದು ಇಂತಹ
ವಿಚಾರಗಳಿಂದಲೇ. ಇಲ್ಲಿ ಬಿಟ್ಟ ರೀಲನ್ನು ಪುನ ಬಿಚ್ಚಿಟ್ಟರೆ ಅದರ ಮಹತ್ವವೇ ಮಾಯವಾಗಿಬಿಡುತ್ತದೆ.
ಆದರೆ ಇಂದು ತದ್ವಿರುದ್ದವಾಗಿ ಇಷ್ಟೇ ಹೀಗೆ
ಮಾತನಾಡಬೇಕು ಎಂದು ಸಿದ್ದತೆಯಲ್ಲಿ ಬರುವುದನ್ನು ಕಾಣಬಹುದು. ಇಂತಹ ಸಂದರ್ಭದಲ್ಲಿ ಮಾತುಗಾರಿಗೆ
ವಾದಗಳು ವಿವಾದವಾಗಿ ಪ್ರಸಂಗದ ಮೂಲ ಆಶಯವೇ ಬದಲಾಗಿಬಿಡುತ್ತದೆ.
ಈ ವಿಚಾರಗಳನ್ನೆಲ್ಲ ಯೋಚಿಸುವಾಗ ಅತಿಕಾಯ ಮೋಕ್ಷದ
ಪೂರ್ವಾರ್ಧ ಪ್ರೇಕ್ಷಕ ಸ್ಪಂದನೆಯಿಂದ ದೂರವಾಗಿದ್ದರೂ ಉತ್ತರಾರ್ಧ ಉತ್ತಮವಾಗಿ ಕೊನೆಯ
ಕ್ಷಣದವರೆಗೂ ಪ್ರೇಕ್ಷಕನ ಆಕರ್ಷಣೆಯ ಪರಿಧಿಯಲ್ಲೇ ಸುತ್ತುತ್ತಿತ್ತು. ಕ್ಲಪ್ತ ಸಮಯದಲ್ಲೇ ಕಾರ್ಯಕ್ರಮ ಪರಿಸಮಾಪ್ತಿಗೊಂಡು ಪಲ್ಲವಿ
ಸಾಂಸ್ಕೃತಿಕ ವೇದಿಕೆಯ ಮತ್ತೊಂದು ಪುಟವನ್ನು ತುಂಬಿಸಿಬಿಟ್ಟಿತು. ಇನ್ನೀಗ ಇನ್ನೊಂದು ಬೃಹತ್
ಕಾರ್ಯಕ್ರಮ ಒಂದು ವೇದಿಕೆಯಲ್ಲಿ ಅನಾವರಣಗೊಳ್ಳಲಿದೆ. ಅದಕ್ಕೆ ಪೂರ್ವಭಾವಿಯಾಗಿ ಈ ಕಾರ್ಯಕ್ರಮ
ತಕ್ಕ ಮಟ್ಟಿನ ಯಶಸ್ವೀ ಕಾರ್ಯಕ್ರಮ ಎನ್ನಬಹುದು. ಪ್ರತೀ ವರ್ಷವೂ ಸರಳವಾಗಿ ಸುಂದರವಾಗಿ ಯಕ್ಷಗಾನ , ಸುಗಮ ಸಂಗೀತ, ಹೀಗೆ ಕಲಾಲೋಕದ ಶ್ರೀರಾಮನ ಪಾದದ ತಳದಲ್ಲಿ ಅಳಿಲಾಗಿ
ತನ್ನ ಕೈಂಕರ್ಯವನ್ನು ಮಾಡುತ್ತ ಬಂದಿದೆ. ಈ ಸತ್ಕಾರ್ಯಕೆ ಪಲ್ಲವಿ ಸಾಂಸ್ಕೃತಿಕ ವೇದಿಕೆಯ
ಭಾರವಾಹಿಗಳಿಗೆ ಕೃತಜ್ಞತೆ ಸಲ್ಲಲೇಬೇಕು.
ಯಕ್ಷಗಾನಂ ಗೆಲ್ಗೆ


No comments:
Post a Comment