ಬಡ
ಪುರೋಹಿತನೊಬ್ಬನಿಗೆ ದಾನವಾಗಿ ತೆಂಗಿನ ಕಾಯಿ ಅಕ್ಕಿ ಬೆಲ್ಲ ಸಿಗುತ್ತದೆ. ಹೀಗೆ ದಾನವಾಗಿ
ಸಿಕ್ಕಿದ್ದು ಮನೆಯಲ್ಲಿ ತಂದಾಗ ಒಂದು ಸಂಭ್ರಮ.
ಅದಿನದ ಊಟಕ್ಕೆ ಅಕ್ಕಿ ಪರಮಾನ್ನ ಸಿದ್ದಪಡಿಸಿ ದೇವರ ಮುಂದೆ ನೈವೇದ್ಯ ಮಾಡಿ ಸಂತೋಷದಿಂದ ಉಣ್ಣುತ್ತಾರೆ. ಅಂದು ಪಾಯಸ ಮಾಡುವ ಉದ್ದೇಶದಿಂದ ಪಾಯಸ ಮಾಡಿದ್ದಲ್ಲ.
ಪಾಯಸ ಮಾಡಲೇ ಬೇಕೆಂಬ ಅನಿವಾರ್ಯತೆಯೂ ಇಲ್ಲ. ಮಾಡಿದ ನಂತರ ಅದನ್ನು ದೇವರ ಮುಂದೆ ಇಡಲೇ ಬೇಕೆಂಬ
ನಿಯಮವೂ ಇಲ್ಲ. ಆದರೆ ಅಂದು ಅವರು ಅದನ್ನು ಆಸಕ್ತಿ ಶ್ರದ್ದೆಯಿಂದ ಮಾಡುತ್ತಾರೆ. ಕಾರಣ ಇಷ್ಟೆ
ಪಾಯಸದ ಸಾಮಾಗ್ರಿಗಳು ಸಿಕ್ಕಿತಲ್ಲ? ಹಾಗೆ ಸಿಕ್ಕಿದ ಸಾಮಾಗ್ರಿಯನ್ನು ಇನ್ನೇನೋ ತಯಾರಿಸಿ,
ಅಕ್ಕಿಯ ಅನ್ನವೋ ದೋಸೆಯೋ ಮಾಡಿ ಉಣ್ಣಬಹುದಿತ್ತು. ಆದರೆ ಬಡತನದ ಬೇಗೆಯಲ್ಲಿ ಅಂದು ಊಟವಿದೇ ಎಂಬ
ಖಾತರಿಯೇ ಇಲ್ಲದಿರುವಾಗ ಹೀಗೆ ಯಾರೋ ಕೊಟ್ಟ ವಸ್ತು ಅದೃಷ್ಟವೆಂಬಂತೆ ಸಿಗುವಾಗ ಪಾಯಸ ಮಾಡಿ
ಉಣ್ಣುವುದೇ ಒಂದು ಸಂಭ್ರಮ.
ಹಿರಿಯ
ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರು ಬರುತ್ತಿದ್ದಾರೆ. ಇಂದಿನ ಯುವಜನತೆಯ ವಯಸ್ಸಿನ ಇಮ್ಮಡಿಯಷ್ಟು
ವರ್ಷವನ್ನು ರಂಗಸ್ಥಳದಲ್ಲೇ ಕಳೆದಂತಹ ಮಹಾನ್
ಭಾಗವತರು ಬರುತ್ತಿದ್ದಾರೆ ಎಂದರೆ ಅದು ಯಕ್ಷಗಾನ ಭಾಗವತಿಕೆಯ ವೈಶಿಷ್ಟ್ಯವನ್ನೇ ಸಾರುತ್ತದೆ.
ಅದರಲ್ಲೂ ಬಲಿಪ್ಪರ ಕಾರ್ಯಕ್ರಮ ಎಂದರೆ ಅದು ಕೇವಲ ಯಕ್ಷಗಾನ
ಕಾರ್ಯಕ್ರಮವಾಗುವುದಿಲ್ಲ. ಅರ್ಥಧಾರಿ ಅಥವಾ ವೇಷಧಾರಿ ಅದು ಯಾರೇ ಆಗಿರಲಿ, ಹೆಚ್ಚೇಕೆ ಪ್ರಸಂಗವೂ
ಪ್ರಾಮುಖ್ಯತೆ ಪಡೆಯುವುದಿಲ್ಲ . ಕೇವಲ ಒಂದೆರಡು ಪದಗಳನ್ನು ಕೇಳುವ ಎಂಬ ಆಸಕ್ತಿಯೊಂದೇ ಪ್ರಥಮ
ಆದ್ಯತೆಯಾಗಿಬಿಡುತ್ತದೆ. ಇದು ಬಲಿಪ್ಪರ ಪದಕ್ಕಿರುವ ಆಕರ್ಷಣೆ. ಅಲ್ಲಿ ಯಕ್ಷಗಾನದ ಉಳಿದ ಅಂಗಗಳೆಲ್ಲ ಮಹತ್ವವನ್ನು
ಕಳೆದುಕೊಂಡಂತೆ ಎನಿಸುತ್ತದೆ.
ವಾಡಿಕೆಯಲ್ಲಿ
ಒಂದು ಮಾತುಂಟು, ಅರ್ಥ ಹೇಳುತ್ತೇನೆ ಎಂದರೆ ಯಾರೂ
ಬರವುದಿಲ್ಲ. ಬದಲಾಗಿ ಪದ ಹೇಳುತ್ತೇನೆ ಎಂದರೆ ಕೇಳುವುದಕ್ಕೆ ಕಿವಿಗಳು ಸಿಗುತ್ತವೆ. ಇದು
ಯಕ್ಷಗಾನ ಭಾಗವತಿಕೆಯ ಸೌಂದರ್ಯ. ಅದರೆ ಆ ಮಾತು ಹೆಚ್ಚು ಅರ್ಥ ಪೂರ್ಣವಾಗುವುದು ಬಲಿಪ್ಪರ
ಭಾಗವತಿಕೆಯಿಂದ. ಸರಿ ಸುಮಾರು ಮೂರು
ದಶಕಗಳಿಗಿಂತಲೂ ಮಿಗಿಲಾದ ನನ್ನ ಅರಿವಿನ ಚರಿತ್ರೆಯಲ್ಲಿ ಈ ಪ್ರವೃತ್ತಿ ಬದಲಾಗಿಲ್ಲ. ಬಲಿಪ್ಪರ
ಹೆಸರು ಇದ್ದಲ್ಲಿ ಒಂದೆರಡು ಪದ ಕೇಳುವ ಎಂದು ಆಗಮಿಸುವ ರಸಿಕರಿಗೆ ಕೊರತೆ ಇಲ್ಲ. ಸಂಘಟಕರೂ ಹಾಗೆ ಬಲಿಪ್ಪರು ಇದ್ದಾರೆಂದರೆ ಬೇರೆ
ಪಾತ್ರಧಾರಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ್ದಿಲ್ಲ. ಈ ಆಕರ್ಷಣೆಯ ನಡುವೆ ಉಳಿದವೆಲ್ಲ
ಗೌಣವಾಗುತ್ತದೆ.
ಹೀಗೆ
ವ್ಯಕ್ತಿಯೊಬ್ಬರಿಗಾಗಿ ಕಾರ್ಯಕ್ರಮ ಏರ್ಪಡುತ್ತದೆ. ಅದಕ್ಕೆ ಪೂರಕವಾಗಿ ಮತ್ತೆಲ್ಲ ಸಿದ್ದತೆಗಳು
ಆಸಕ್ತಿಯಿಂದಲೇ ನಡೆದು ಹೋಗುತ್ತದೆ. ಹಾಗೋ ಹೀಗೋ ಹತ್ತೆಂಟು ಕಡೆಯ ನೀರು ಹರಿದು ಬಂದು ಸೇರುವ
ಹಾಗೆ ಸಹಕಾರಗಳೂ ಬಂದು ಸೇರುತ್ತದೆ. ಎಲ್ಲದರಲ್ಲೂ
ಉದ್ದೇಶ ಒಂದೇ ಬಲಿಪ್ಪರ ಒಂದೆರಡು ಪದ ಕೇಳಬೇಕು. ಮತ್ತದೆಲ್ಲ ಜತೆಯಲ್ಲೇ ಬಂದು ಸೇರುವ ಹೂವಿನ
ಎಲೆಗಳು.
ಇದೀಗ
ಬಲಿಪ್ಪರು ಬರುತ್ತಿದ್ದಾರೆ. ಬೆಂಗಳೂರಿನ ಪಲ್ಲವಿ ಸಾಂಸ್ಕೃತಿಕ ವೇದಿಕೆಯ ವಿಶೇಷ
ಕಾರ್ಯಕ್ರಮವೊಂದು ಅವರಿಗಾಗಿಯೇ ಸಿದ್ದವಾಗುತ್ತಿದೆ. ಇದೇ ಬರುವ ಭಾನುವಾರ ದಿನಾಂಕ
ಅಕ್ಟೊಬರ್ 23 ರಂದು ಗಣ್ಯರ
ಉಪಸ್ಥಿತಿಯಲ್ಲಿ ವಿಶೇಷವಾಗಿ ಸನ್ಮಾನಗೊಳ್ಳಲಿದ್ದಾರೆ.
ಬಲಿಪ್ಪ ಭಾಗವತರಿಗೆ ಸನ್ಮಾನ ಎಂಬುದು ವಿಶೇಷವಲ್ಲ. ಆದರೆ ಅಭಿಮಾನಿಗಳಿಗೆ ಅದು ವಿಶೇಷ. ಅವರ ನಿವಾಸದ ಬಳಿಯ ಬಲಿಪ ಭವನದಲ್ಲಿ ಇರಿಸಿದ ಸನ್ಮಾನ
ಪತ್ರಗಳು ಫಲಕಗಳನ್ನು ಬರಿದೇ ನೋಡಿ ಮುಗಿಸಲು ದಿನ ಸಾಕಾಗುವುದಿಲ್ಲ. ಅಷ್ಟುಆದರ ಸನ್ಮಾನ
ಗೌರವವಗಳನ್ನು ಪಡೆದಿದ್ದಾರೆ. ಹಾಗಾಗಿ ಸನ್ಮಾನ ಇದು ಸಂಸ್ಥೆಗೆ ಮುಖ್ಯವಾಗುತ್ತದೆ. ಯಾವುದೇ
ಯಕ್ಷಗಾನಕ್ಕೆ ಸಂಬಂಧಿಯಾದ ಸಂಸ್ಥೆಗಾಗಲಿಲೀ ಸಂಘಗಳಿಗಾಗಲೀ
ಶ್ರೀ ಬಲಿಪ್ಪರನ್ನು ಸನ್ಮಾನಿಸುವುದು ಕರೆದು ಕಾರ್ಯಕ್ರಮ ನೆರವೇರಿಸುವುದು ಒಂದು ಯೋಗವೇ
ಎನ್ನಬೇಕು. ಇದರಿಂದಲೇ ಒಂದು ಸಂಸ್ಥೆಗೆ ಯಕ್ಷಗಾನ
ಕಲೆಯ ಬಗ್ಗೆ ಇರುವ ಕಾಳಜಿ ವ್ಯಕ್ತವಾಗುತ್ತದೆ. ಯಕ್ಷಗಾನ ಸೇವೆಯಲ್ಲಿ ಒಂದು ಸಂಸ್ಥೆಗೂ ಇದೊಂದು
ಅರ್ಹತೆ ಎಂದು ಗುರುತಿಸಲ್ಪಡುತ್ತದೆ. ಹಾಗಾಗಿಯೇ ಬಲಿಪ್ಪರಿಗೆ ಸಲ್ಲುವ ಸನ್ಮಾನ ಅದು ಕೇವಲ
ವ್ಯಕ್ತಿಗೆ ಮಾತ್ರವಲ್ಲ ಅದು ಯಕ್ಷಗಾನಕ್ಕೆ ಸಲ್ಲುವ ಸನ್ಮಾನ ಎಂದರೆ ಬಹಳ ಅರ್ಥಪೂರ್ಣ. ಈ ನಿಟ್ಟಿನಲ್ಲಿ ಪಲ್ಲವಿ ಸಾಂಸ್ಕೃತಿಕ ವೇದಿಕೆ
ಯಕ್ಷಗಾನ ಲೋಕದಲ್ಲಿ ತನ್ನನ್ನು ತಾನು ಗುರುತಿಸಿಕೊಂಡು
ಯಕ್ಷಗಾನ ಕಲೆಯಿಂದ ಪ್ರಮಾಣಿಕರಿಸಲ್ಪಡುತ್ತದೆ.
ಬಹುಜನರ ಹಾರೈಕೆ, ಹಿತೈಷಿಗಳ ಸಹಕಾರ ಎಲ್ಲವೂ ಜತೆಗೂಡಿ ಈಕಾರ್ಯಕ್ರಮ ನೆರವೇರಲಿದೆ. ಹೀಗೆ ಯಕ್ಷಗಾನದ ಪರಮಾನ್ನ
ಅಂಗೈ ತುಂಬಾ ತುಂಬಲಿದೆ. ಜತೆಗೂಡಿ ಸವಿಯುವ ಮಧುರ
ಘಳಿಗೆಯ ನಿರೀಕ್ಷೆ ಸಾಕಾರಗೊಳ್ಳಲಿದೆ.
ಯಕ್ಷಗಾನಂ
ಗೆಲ್ಗೆ
No comments:
Post a Comment