ಕಣ್ಣುರೆಪ್ಪೆಯ
ಸನಿಹದಲ್ಲಿದ್ದರೂ ಕಾಣಿಸದಂತಹ ಕಡುಗತ್ತಲೆಯ ವಾತಾವರಣ. ವಿದ್ಯುತ್
ಸಂಪರ್ಕವಿನ್ನೂ ಊರಿಗೆ ಬರದೇ ಇದ್ದಂತಹ ಸಮಯ.
ಸಂಜೆ ಸೂರ್ಯಾಸ್ತವಾಗುತ್ತಿದ್ದರೆ ಊರೆಲ್ಲ ಸಾಮಾನ್ಯವಾಗಿ ಕತ್ತಲೆಯಲ್ಲಿ ಮುಳುಗಿರುತ್ತಿತ್ತು. ಕಣ್ಣು ಕಾಣಿಸದಾಗ ಕಿವಿ ಚುರುಕಾಗುವಂತೆ ದೂರದ ಕ್ಷೀಣ
ಧ್ವನಿಗೂ ಕಿವಿ ಸ್ಪಂದನೆಯನ್ನು ನೀಡುತ್ತದೆ. ದೇಹದ ಸುತ್ತೆಲ್ಲ ಗಾಳಿ ಶುಷ್ಕವಾಗಿ
ಸ್ಪರ್ಶಸುಖವನ್ನು ಪಡೆದಿದ್ದರೆ ಅದೇ ಗಾಳಿ ಕಿವಿಯ ಸನಿಹಕ್ಕೆ ಬರುವಾಗ ದೂರದಿಂದ ಹೊತ್ತು ತಂದ
ಅಬ್ಬರದ ಧ್ವನಿಯನ್ನು ಯಥಾಸಾಧ್ಯ ಚುರುಕಾದ ಕಿವಿಯೊಳಗೆ ರವಾನಿಸಿತ್ತು. ಅಬ್ಬರದ ಧ್ವನಿ ಕೇಳುವುದೇ
ತಡ ಮನಸ್ಸು ತಾಳ ಬಡಿಯಿತು. ಮತ್ತೆ ಕಾಲು ನಿಂತಲ್ಲಿ ನಿಲ್ಲದೆ ಸದ್ದು ಬಂದೆಡೆ ಹೆಜ್ಜೆ
ಹಾಕಿತು.
| ಛಾಯಾ ಚಿತ್ರ : ಕಟೀಲು ರಂಗನಾಥ ರಾವ್ ಸಿತ್ಲ |
ಅದು ಸುಮಾರು ಎಪ್ಪತ್ತರ ದಶಕದ ಕಾಲ. ಕಾಯರ್ ಕಟ್ಟೆಯ ಗುಡ್ಡದ ತುದಿಯಲ್ಲಿರುವ ಹೈಸ್ಕೂಲು
ಊರಿಗೆ ಅನ್ವರ್ಥವಾಗಿ ಕಾಯರ್ ಕಟ್ಟೆ ಮತ್ತು ಶಾಲೆ ಎಂದರೆ ಒಂದೇ ಆಗಿ ಕಾಣುವಂತೆ ಮಾಡಿದಂತಹ ಕಾಲ.
ಉಪ್ಪಳದಲ್ಲಿ ಬಸ್ಸು ಹತ್ತಿ ’ಹೈಸ್ಕೂಲು’ ಎಂದು
ಟಿಕೆಟ್ ತೆಗೆದರೆ ಕಂಡಕ್ಟರ್ ಕಾಯರ್ ಕಟ್ಟೆಗೆ ಟಿಕೇಟ್ ಕಿತ್ತು ಕೊಡುತ್ತಿದ್ದ. ಯಾಕೆಂದರೆ
ಪೈವಳಿಕೆ ಪಂಚಾಯತ್ ನ ಏಕಮೇವ ಪ್ರೌಢ ಶಾಲೆ ಎಂದರೆ ಅದು ಕಾಯರ್ ಕಟ್ಟೆ ಸರಕಾರಿ ಹೈಸ್ಕೂಲು. ದೂರದ
ಪೆರ್ಮುದೆ, ಕನ್ಯಾನ ಚಿಪ್ಪಾರು ಕುರುಡ ಪದವು ಈ
ಕಡೇ ಕುಬಣೂರು ಹೀಗೆ ಇಷ್ಟೊಂದು ಪ್ರದೇಶಗಳಿಗೆ ಕೇಂದ್ರವಾಗಿದ್ದ ಈ ಶಾಲೆ ಒಂದೇ
ಆಗಿದ್ದುಕೊಂಡು ಶಿಕ್ಷಣದಲ್ಲೂ ಅತ್ಯಂತ ಪ್ರಸಿದ್ಧಿಯನ್ನು ಪಡೆದಿತ್ತು. ರಸ್ತೆಗೆ
ಸನಿಹದಲ್ಲಿದ್ದೂ ಪೇಟೆಯ ಗದ್ದಲದಿಂದ
ಬಹುದೂರವಿದ್ದಂತೆ ಶಾಲೆಯ ಪರಿಸರ ಶಿಕ್ಷಣಕ್ಕೆ ಅನುಕೂಲವಾದಂತೆ ಶಿಕ್ಷಣಕ್ಕೆ ಪೂರಕವಾದ
ಚಟುವಟಿಗೆಗಳಿಗೂ ಪ್ರಾಕೃತಿಕ ಸೌಕರ್ಯವನ್ನು ನೀಡಿತ್ತು.
ಅಂದು
ಶಾಲಾ ವಾರ್ಷಿಕೋತ್ಸವ ಎಂದರೆ ಊರ ಹಬ್ಬದಂತೆ ವಿಜ್ರಂಭಿಸುತ್ತಿತ್ತು. ಇಡೀ ರಾತ್ರಿ ಯಿಂದ
ಬೆಳಗಿನವರೆಗೆ ನಡೆಯುವ ವಾರ್ಷಿಕೋತ್ಸವದಲ್ಲಿ ಮಕ್ಕಳ ನೃತ್ಯ ನಾಟಕ ಯಕ್ಷಗಾನ ಹೀಗೆ ವಿವಿಧ್ಯಮಯ
ಕಾರ್ಯಕ್ರಮಗಳು ಸಾಮಾನ್ಯ. ಎಲ್ಲ ಕಾರ್ಯಕ್ರಮದ ಕೊನೆಯಲ್ಲಿ ಯಕ್ಷಗಾನ ಅದು ಅನಿವಾರ್ಯ. ಅದು
ಶಾಲಾವಿದ್ಯಾರ್ಥಿಗಳಿಂದ ಕೆಲವೊಮ್ಮೆ ಶಾಲಾ ಹೆಳೆ ವಿದ್ಯಾರ್ಥಿಗಳಿಂದ ಇಷ್ಟು ಸಾಲದೇ ಇದ್ದರೆ ಊರಿನ
ಪ್ರಸಿದ್ದ ಕಲಾವಿದರಿಂದ. ಇಲ್ಲಿ ಪೈವಳಿಕೆ ಬಾಯಾರು
ಸನಿಹದ ಎಲ್ಲ ಊರುಗಳ ಪ್ರತಿ ಮನೆಯಲ್ಲೂ ಯಕ್ಷಗಾನ ಕಲಾವಿದರು ಸಿಗುತ್ತಾರೆ. ಇದೊಂದು ಇಲ್ಲಿನ ಹೆಗ್ಗಳಿಕೆ.
ಇಂತಹ ಸಮಯದಲ್ಲಿ ಕಾಯರ್ ಕಟ್ಟೆ ಶಾಲೆಯ ಪ್ರತಿ ಯಕ್ಷಗಾನದಲ್ಲೂ
ಮಕ್ಕಳನ್ನು ಕುಣಿಸಿ ಸ್ವತಃ ಯಕ್ಷಗಾನವನ್ನು ಅನುಭವಿಸಿ ಆನಂದಿಸುವ ವ್ಯಕ್ತಿಯೆಂದರೆ ಅದು ಇಂದಿನ
ಜನಪ್ರಿಯ ಭಾಗವತ ಕುರಿಯ ಶಾಸ್ತ್ರಿಗಳು. ಯಕ್ಷಗಾನ ಕಲೆ ಹೇಗೆ ಒಲಿದು ಬಂತೋ ಹಾಗೇನೇ, ಯಕ್ಷಗಾನ ನಿರ್ದೇಶನದ ನೈಪುಣ್ಯತೆಯೂ ಅವರ ನರ ನಾಡಿಗಳಲ್ಲಿ ಹರಿದಾಡುತ್ತಿದೆ. ಯಕ್ಷಗಾನದ
ಪ್ರಾಥಮಿಕ ಹಂತದಲ್ಲೇ ಇವರು ದಕ್ಷ ನಿರ್ದೇಶಕರಾಗಿದ್ದುದನ್ನು ಕಣ್ಣಾರೆ ಕಂಡಿದ್ದೆನೆ. ಇವರ ನಾಡಿಮಿಡಿತ
ವೆಂದರೆ ಅದು ಯಕ್ಷಗಾನದ ಮಿಡಿತ ಎಂದರೂ ತಪ್ಪಾಗಲಾರದು. ಇವರ ಸರಳ ಶಿಕ್ಷಣ ಕ್ರಮ ರಂಗದಲ್ಲಿ ಒಂದಾಗಿ ಅದರಲ್ಲಿ
ಮಾನಸಿಕವಾಗಿ ವಿಲೀನವಾಗುವುದು ಪ್ರತಿಯೋಬ್ಬರಲ್ಲೂ ರಂಗದ ಬಗ್ಗೆ ಜಾಗೃತಿಯನ್ನು ಗೌರವವನ್ನು
ಹುಟ್ಟಿಸುತ್ತದೆ.
ಅಂದು ಉತ್ಸಾಹೀ ತರುಣರಾಗಿದ್ದ ಶಾಸ್ತ್ರಿಗಳು ಇಂದು ಯಕ್ಷಗಾನದಲ್ಲಿ
ವ್ಯಕ್ತಿತ್ವದಿಂದಲೂ ಪ್ರತಿಭೆಯಿಂದಲೂ
ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಯಕ್ಷಗಾನಕ್ಕೆ ಎಂತಹಾ ಭಾಗವತ ಬೇಕು ಎಂಬುದಕ್ಕೆ
ಕುರಿಯ ಶಾಸ್ತ್ರಿಗಳನ್ನು ಉದಾಹರಿಸುವಷ್ಟು ಸುಲಭದಲ್ಲಿ
ಮತ್ತೊಬ್ಬರು ಸಿಗಲಾರರು. ಕುರಿಯ ಶಾಸ್ತ್ರಿಗಳ ಭಾಗವತಿಕೆ ಎಂದರೆ ವೈವಿಧ್ಯವಿರುತ್ತದೆ.
ಆದರೆ ಅಲ್ಲಿ ಗೊಂದಲಗಳಿರುವುದಿಲ್ಲ. ಅತ್ಯಂತ ಸರಳ ಶೈಲಿ.
ಸಾಮಾನ್ಯವಾಗಿ ಯಕ್ಷಗಾನದಲ್ಲಿ ’ಅಗರಿ ಶೈಲಿ’ ಭಾಗವತಿಕೆ ಅತ್ಯಂತ ಜನಪ್ರಿಯ ಪ್ರಕಾರ.
ಅತ್ಯಂತ ಸರಳ ಸುಂದರ ಶೈಲಿಯಲ್ಲಿ ಕುರಿಯ ಭಾಗವತರೂ ಏಕೆಮೇವಾದ್ವೀತಿಯರು. ಅಗರಿ ಶೈಲಿ ಇವರಿಗೆ
ಒಲಿದಂತೆ ಇನ್ನಾರಿಗೂ ಒಲಿದಿಲ್ಲ. ಭಾಗವತಿಕೆ ಎಂದರೆ ಇಷ್ಟು ಸುಲಭವೇ ಎನ್ನುವಂತಹ ಸುಗಮ
ಹಾಡುಗಾರಿಕೆಯ ಈ ಶೈಲಿ ಇದೀಗ ರಂಗಸ್ಥಳವನ್ನು
ಏರುವ ಮಕ್ಕಳಿಂದ ತೊಡಗಿ ಅತ್ಯಂತ ಹಿರಿಯ ಕಲಾವಿದರಿಗೂ ಅಪ್ಯಾಯಮಾನವಾಗಿಬಿಡುತ್ತದೆ. ಯಕ್ಷಗಾನದ ಹಿಮ್ಮೇಳವಾಗಲೀ ಕುಣಿತವಾಗಲೀ ಅದನ್ನು
ಅಸ್ವಾದಿಸಿ ಅನುಭವಿಸುತ್ತಾ ಇವರು ಹಾಡುವುದನ್ನು ಕಾಣುವಾಗ ರಂಗದಲ್ಲಿನ ಅರ್ಪಣಾ ಭಾವ
ವ್ಯಕ್ತವಾಗುತ್ತದೆ.
ಯಕ್ಷಗಾನದಲ್ಲಿ
ಭಾಗವತರದ್ದು ಅತ್ಯಂತ ಹಿರಿಯ ಸ್ಥಾನ. ಅದು ಕೇವಲ ರಂಗಸ್ಥಳಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ.
ರಂಗದ ಹೊರಗೂ ಅದರ ಪ್ರಭಾವ ಮತ್ತು ಯೋಗ್ಯತೆಯನ್ನು ಭಾಗವತನಾದವ ಉಳಿಸಿಕೊಳ್ಳಬೇಕು. ಭಾಗವತ ಸ್ಥಾನದ
ಆಳ ಅರಿವು ಭಾಗವತಿಕೆಯನ್ನು ಅಭ್ಯಾಸ ಮಾಡಿದುದಕ್ಕಿಂತಲೂ ಅಧಿಕವಾಗಿರುತ್ತದೆ. ಆ ಸ್ಥಾನದ ಗೌರವ
ಅರಿತಿದ್ದರೆ ಮಾತ್ರ ಭಾಗವತ ಸ್ಥಾನ ಭದ್ರತೆಯನ್ನು ಅನುಭವಿಸುತ್ತದೆ. ಆ ನಿಟ್ಟಿನಲ್ಲಿ ಕುರಿಯ
ಶಾಸ್ತ್ರಿಗಳು ಭಾಗವತ ಎಂಬುದಕ್ಕೆ ಅನ್ವರ್ಥವಾಗಿಬಿಡುತ್ತಾರೆ. ಇವರಿದ್ದಲ್ಲಿ ಭಾಗವತ ಸ್ಥಾನ
ಪ್ರಶ್ನಾತೀತವಾಗಿ ಸೆಟೆದು ನಿಲ್ಲುತ್ತದೆ. ಇದಕ್ಕೆ ಇವರ ಭ್ಯವ್ಯ ವ್ಯಕ್ತಿತ್ವದ ನಿಲುಮೆಯೂ ಜತೆಯಲ್ಲಿ ಯಕ್ಷಗಾನದ ಬಗೆಗಿರುವ ಜ್ಞಾನ ಮತ್ತು ಬದ್ದತೆ ಮುಖ್ಯ ಕಾರಣಗಳಾಗುತ್ತವೆ. ಯಕ್ಷಗಾನದ ಸೂಕ್ಷ್ಮಾತಿ ಸೂಕ್ಷ್ಮ ಅಂಗವನ್ನೂ ಸ್ವತಃ
ಅನುಭವಿಸಿದ ಶಾಸ್ತ್ರಿಗಳ ಸ್ಥಾನ ಯಕ್ಷಗಾನದಲ್ಲಿ ಪ್ರಶ್ನಾತೀತ. ಇಷ್ಟಾದರೂ ಇವರು ನಿಗರ್ವಿ, ಸರಳ, ಸಜ್ಜನ.
ಯಕ್ಷಗಾನ
ವಿಚಾರಕ್ಕೆ ಬಂದಾಗ ಶಾಸ್ತ್ರಿಗಳು ನಿಷ್ಠೂರ ವ್ಯಕ್ತಿಯಾಗಿಬಿಡುತ್ತಾರೆ. ರಂಗದ ಪ್ರದರ್ಶನದಲ್ಲಿ
ಪ್ರತಿಕ್ಷಣವೂ ಇದನ್ನು ಕಾಣಬಹುದು. ರಂಗಸ್ಥಳ ಇರುವುದು ವೇಷಧಾರಿ ಕುಣಿಯುವುದಕ್ಕೆ. ಅದು ಕಲಾವಿದ
ದಣಿವಾರಿಸುವ ಸ್ಥಳವಾಗಬಾರದು. ಇದು ಕುರಿಯ ಭಾಗವತರ ನಂಬಿಕೆ. ಪಾತ್ರಧಾರಿಯೂ ಹಾಗೇನೆ, ಒಬ್ಬ
ಕುರುಡನಾದವನು ಇನ್ನೊಬ್ಬ ವ್ಯಕ್ತಿಯ ಹೆಗಲ ಮೇಲೆ
ಕೈಯಿಕ್ಕಿ ವಿಶ್ವಾಸದಿಂದ ಮುಂದೆ ಹೆಜ್ಜೆ ಹಾಕಿದಂತೆ
ಪಾತ್ರಧಾರಿಯಾದವನು ಕುರಿಯ ಭಾಗವತರು ರಂಗದಲ್ಲಿದ್ದರೆ ಹೆಜ್ಜೆ ಹಾಕುತ್ತಾನೆ. ಯಾಕೆಂದರೆ
ಅಲ್ಲಿ ರಂಗದ ಸಂಫೂರ್ಣ ಜವಬ್ದಾರಿ ಸ್ಥಿರವಾಗಿ ಭದ್ರವಾಗಿರುತ್ತದೆ. ಭಾಗವತರು ತೋರಿದತ್ತ ಹೆಜ್ಜೆ
ಹಾಕಿದರೆ ಸಾಕು. ಉಳಿದುದಕ್ಕೆ ಯೋಚಿಸುವ ಪ್ರಮೇಯವೇ ಬರುವುದಿಲ್ಲ.
ಸಾಮಾನ್ಯವಾಗಿ
ಗಾಯಕನೊಬ್ಬ ಹಾಡಬೇಕಾದರೆ ಆತನಿಗೆ ಸ್ಫೂರ್ತಿ ಅತ್ಯವಶ್ಯ. ಕುರಿಯ ಶಾಸ್ತ್ರಿಗಳೂ ಹಾಗೆ. ಇವರೊಳಗಿನ
ಗಾಯಕ ವಿಜ್ರಂಭಿಸುವುದು ಅಲ್ಲಿ ರಂಗ ನಿರ್ಮಾಣವಾದಾಗ. ಅದು ಯಕ್ಷಗಾನ ಬಯಲಾಟವಾಗಲೀ ತಾಳ
ಮದ್ದಲೆಯಾಗಲೀ ರಂಗದಲ್ಲಿ ಒಂದಾಗುವುದು ಇವರ ಸಹಜ ಗುಣ. ಎದುರಲ್ಲಿ ಪಾತ್ರಧಾರಿ ಇಲ್ಲವಾದರೆ ಇವರ
ಭಾಗವತ ಪೂರ್ಣವಾಗಿ ಅನಾವರಣಗೊಳ್ಳುವುದಿಲ್ಲ. ಹಾಗಾಗಿ ಗಾನ ವೈಭವದಂತಹ ರಸಮಂಜರಿ ರೂಪಕ್ಕೆ ಬಂದಾಗ
ಇವರು ಅದನ್ನು ನಯವಾಗಿ ತಿರಸ್ಕರಿಸುತ್ತಾರೆ. ರಂಗ ಭಾಗವತನಾಗುವುದೇ ಇವರ ಭಾಗವತಿಕೆಯ ಸಹಜ ಗುಣ.
ಇವರ ಹಾಡಿಗೆ ಕುಣಿಯುವ ಅರ್ಥ ಹೇಳುವ ಪಾತ್ರ ಅಲ್ಲಿ ಇರಲೇಬೇಕು. ಆಗ ಶಾಸ್ತ್ರಿಗಳು
ವಿಜ್ರಂಭಿಸುತ್ತಾರೆ.
ಕುರಿಯ ಭಾಗವತರ
ನಿಲುಮೆ ಎಂದರೆ ಅದು ರಂಗಸ್ಥಳವನ್ನು ತುಂಬಿ ನಿಲ್ಲುತ್ತದೆ. ಅಲ್ಲಿ ಕಲಾವಿದನ ಸ್ಥಾನ ಆನಂತರವೇ
ಗೋಚರಿಸುತ್ತದೆ. ಇದು ಭಾಗವತ ಸ್ಥಾನ ಎಂಬ ಪ್ರಜ್ಞೆ ನೋಡುವ ಪ್ರೇಕ್ಷಕನಲ್ಲೂ
ಜಾಗ್ರತವಾಗಿರುತ್ತದೆ. ಭಾಗವತನೆಂದರೆ ರಂಗಸ್ಥಳಕ್ಕೂ ಚೌಕಿಗೂ ಮತ್ತು ಪ್ರೇಕ್ಷಕನಿಗೂ ಸಂವಹನವನ್ನು
ಕಲ್ಪಿಸುವ ಏಕ ಮಾಧ್ಯಮ. ಅಲ್ಲಿ ಒಂದು ಬಡವಾದರೂ ಯಕ್ಷಗಾನಕ್ಕೆ ಪೂರ್ಣವಾದ ನ್ಯಾಯ ಲಭಿಸುವುದಿಲ್ಲ.
ಬಾಲ ವೇಷಧಾರಿ
ಪುಂಡುವೇಶಧಾರಿಯಾಗಿ ಬದಲಾಗಿ ತೇರ್ಗಡೆಯಾಗುವಾಗ ಬಾಲ ವೇಶಧಾರಿ ಸ್ಥಾನ ಸಹಜವಾಗಿ ನಷ್ಟವನ್ನು
ಅನುಭವಿಸುತ್ತದೆ. ಅದರಂತೇ ಪುಂಡು ವೇಶಧಾರಿ
ಬಣ್ಣದ ವೇಶಧಾರಿಯಾಗುವಾಗ. ಆದರೆ ಅಲ್ಲಿ ಹಳೆ ಚಿಗುರು ಬಲಿತು ಹೊಸ ಚಿಗುರು
ಮೊಳಕೆಯೊಡೆದಂತೆ ಮತ್ತೊಬ್ಬರು ಆ ಸ್ಥಾನವನ್ನು ತುಂಬಿಬಿಡುತ್ತಾರೆ. ಕುರಿಯದವರ ವಿಚಾರದಲ್ಲೂ ಹಾಗೆ
ಮೊದಲು ಪ್ರಸಿದ್ಧ ವೇಷಧಾರಿಯಾಗಿದ್ದವರು. ಇವರ ಹಲವು ವೇಶಗಳು ಪ್ರಸಿದ್ದವಾಗಿ ಮಹಿಷಾಸುರ
ಪಾತ್ರಕ್ಕೆ ಸ್ವತಃ ಹೊಸ ರೂಪವನ್ನು ತಂದವರು. ಅನಾರೋಗ್ಯದ ನಿಮಿತ್ತ ಕುರಿಯದವರು ವೇಷ ಕಳಚಿದಾಗ
ಆಭಾಗ ನಷ್ಟ ಅನುಭವಿಸಿತು. ಇಂದಿನ ತಲೆ ಮಾರಿಗೆ ಕುರಿಯದವರ ವೇಶ ಕೇವಲ ವರ್ಣನೆಗೆ ಸೀಮಿತ. ಇವರ
ಅಪರಿಮಿತ ಉತ್ಸಾಹ ಪಾತ್ರದಲ್ಲಿ ಒಂದಾಗಿ ಶುದ್ದ ಪಾತ್ರವೇ ಆಗಿಬಿಡುವ ಅರ್ಪಣಾ ಭಾವ ಅವರ್ಣನೀಯ.
ಹಣ್ಣೆಲೆ ಉದುರಿ ಹೊಸ ಚಿಗುರು ಚಿಗುರಬಹುದು. ಅರಳಿದ ಹೂವು ಉದುರಿ ಗಿಡದಲ್ಲಿ ಹೊಸ ಹೂವು
ಅರಳಬಹುದು. ಆದರೆ ಕುರಿಯ ಶಾಸ್ತ್ರಿಗಳ ಸ್ಥಾನದಲ್ಲಿ ಹೊಸ ಚಿಗುರಾಗಲೀ ಹೊಸ ಹೂವಾಗಲಿ ಹಾಗೇ
ಹುಟ್ಟುವುದಕ್ಕೆ ಸಾಧ್ಯವೇ ಇಲ್ಲ. ಅಗರಿ ಶೈಲಿಯಂತೆ ಕುರಿಯ ಶೈಲಿ ಎಂಬುದು ಅದು ಯಕ್ಷಗಾನಕ್ಕೆ
ಸಂಬಂಧಿಸಿದಂತೆ ಅದು ಅವರಿಗಷ್ಟೇ ಸೀಮಿತ. ಅಂತಹ ಮರೆಯಲಾಗದ ಘನ ವ್ಯಕ್ತಿತ್ವವನ್ನೂ ಪ್ರತಿಭಾ
ಮುದ್ರೆಯನ್ನೂ ಇವರು ಒತ್ತಿ ತೋರಿದವರು.
ಸರ್ವ ತಂತ್ರ
ಸ್ವತಂತ್ರವಾಗುವ ಭಾಗವತ ಶೈಲಿ ಕುರಿಯ ಶಾಸ್ತ್ರಿಗಳ ಶೈಲಿ ಇಂದಿನ ತಲೆಮಾರಿನಲ್ಲಿ ಇದು
ಕಾಣುವುದಕ್ಕೆ ಸಾಧ್ಯವೇ ಇಲ್ಲ. ಮಾತ್ರವಲ್ಲ ಇವರ ಭಾಗವತಗುಣಗಳು ಅದು ಕೇವಲ ಶಾಸ್ತ್ರಿಗಳಿಗಷ್ಟೇ
ಸೀಮಿತ. ಅದು ಅವರಲ್ಲೇ ಭದ್ರವಾಗಿರುವ ನಿಕ್ಷೇಪದಂತೆ ಅದರ ವಾರಸುದಾರ ಯಾರೂ ಇಲ್ಲ ಎಂಬಂತಹ
ನಿರ್ಭೀತ ನಡೆ ಈ ಭಾಗವತ ವರೇಣ್ಯ ಕುರಿಯ ಗಣಪತಿ ಶಾಸ್ತ್ರಿಗಳದ್ದು. ಇದಕ್ಕೆ ಅನುಮಾನವೇ ಇಲ್ಲ.
No comments:
Post a Comment