ಭಾನುವಾರ ಬಂತು ಎಂದರೆ ಮನೆಯಲ್ಲಿನ ಟಿವಿ ಯ ಕಾರ್ಯಕ್ರಮಗಳು ಸಜ್ಜಿಗ ಅವಲಕ್ಕಿ
ಮಾಡಿದಂತೆ. ಎಲ್ಲ ಕಲಸುಮೇಲೋಗರವಾಗಿ ಭಾಸವಾಗುತ್ತದೆ. ಹಲವು ವಾಹಿನಿಗಳು ವೈವಿಧ್ಯತೆಗೆ ಒತ್ತು
ಕೊಡುತ್ತಾ ಇಡೀ ವಾರ ನೋಡದೇ ಇದ್ದ ಮಹಾಪರಾಧದ ಶಿಕ್ಷೆಯನ್ನು ಆ ಒಂದೇ ದಿನದಲ್ಲಿ
ಕಕ್ಕಿಬಿಡುತ್ತವೆ. ಬೆಳಗ್ಗಿನಿಂದ ತೊಡಗಿ ಸಾಯಂಕಾಲ ಏಕೆ ರಾತ್ರಿಯ ತನಕವು ಚಪ್ಪಾಳೆಯ ಸದ್ದು.
ಜತೆಗೆ ಹೋ ಎಂದು ಬೊಬ್ಬಿಟ್ಟು ಅರಚುವ ಶಬ್ದ. ಯಾರೋ ಒಬ್ಬ ಹೇಳುವ ಜೋಕಿಗೆ ಅಥವ ಹಾಡಿಗೆ ನಗು ಬಾರದೇ
ಇದ್ದರೂ ಸದ್ದು ಮಾತ್ರ ಕಿವಿಗಡಚಿಕ್ಕುವಂತೆ ಕೇಳಿಸುತ್ತದೆ. ಮಕ್ಕಳು ಐ ಪಿ ಲ್ ಹಾಕುವಾಗ ಬಂದು ವಾಲ್ಯೂಮ್ ಕಡಿಮೆ ಮಾಡುವ ಹೆಂಗಸರು ಭಾನುವಾರ
ಮಾತ್ರಾ ಈ ಚಪ್ಪಾಳೆಯ ಸದ್ದಿಗೆ ವಾಲ್ಯೂಮ್ ಗುಂಡಿಯನ್ನು ಮತ್ತಷ್ಟು ಒತ್ತುತ್ತಾ ಶಬ್ದ ಏರಿಸುತ್ತಾ
ಹೋಗುತ್ತಾರೆ. ಅವರವರ ಅಭಿರುಚಿ ಅವರಿಗೆ ಬಿಟ್ಟು ಬಿಡುವ. ಆದರೆ ಈ ಕಿವಿಗಡಚಿಕ್ಕುವ ಶಬ್ದದ
ಕಾರ್ಯಕ್ರಮಗಳ ನಡುವೆ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮಗಳು ಸದ್ದಿಲ್ಲದೇ ಮೌನವಾಗಿ ಮನಸ್ಸನ್ನು ಅತ್ತಕಡೆ
ಸೆಳೆಯುತ್ತದೆ. ಅದೇ ಟೀವಿ ಯಲ್ಲಿ ಬರುವ ಯಕ್ಷಗಾನ ಕಾರ್ಯಕ್ರಮಗಳು. ವಾಸ್ತವದಲ್ಲಿ ಯಕ್ಷಗಾನ
ಎಂದರೆ ಒಂದಿಷ್ಟು ಸದ್ದು ಗದ್ದಲ ಆರ್ಭಟೆಯ ಗಲಾಟೆ ಕಾರ್ಯಕ್ರಮ. ಆದರೆ ಯಕ್ಷಗಾನ ಕಾರ್ಯಕ್ರಮ
ಪ್ರಸಾರವಾಗುವಾಗ ಮಾತ್ರ ಒಂದು ರೀತಿಯ ಶಾಂತ ಪರಿಸರ ನಿರ್ಮಾಣವಾಗುತ್ತದೆ. ಯಕ್ಷಗಾನ ಸಂಬಂಧೀ
ಕಾರ್ಯಕ್ರಮಗಳೂ ಪ್ರತಿ ದಿನವು ಅಲ್ಲೊಂದು ಇಲ್ಲೊಂದು ಅಂತ ಪ್ರಸಾರವಾಗುತ್ತವೆ. ಇವುಗಳು ಕೆಲವೊಮ್ಮೆ
ಏಕತಾನತೆಯಿಂದ ಸೋಲುತ್ತಿದ್ದರೂ ಋಣಾತ್ಮಕವಾದ ವಿಚಾರ ದೂರವಿಟ್ಟು ಯೋಚಿಸಬೇಕಾಗುತ್ತದೆ.
ಭಾನುವಾರ
ಬೆಳಗ್ಗೆ ಚಂದನದಲ್ಲಿ ಕೆಲವು ಕರಾವಳೀ ಜಿಲ್ಲೆಯ ಕಾರ್ಯಕ್ರಮಗಳು ಬಂದರೆ, ಮಧ್ಯಾಹ್ನ ಯಕ್ಷಗಾನ. ಹೇಳಿ ಕೇಳಿ ಚಂದನ ಒಂದು ಸರಕಾರಿ
ಸ್ವಾಮ್ಯದ ವಾಹಿನಿ. ಹಾಗಾಗಿ ಅದರ ಕಡೆಗೆ ಹಲವರ ಗಮನ ಕಾರಣಾಂತರವಾಗಿ ಹೋಗುವುದಿಲ್ಲ. ಗುಣಮಟ್ಟ
ಹೇಗೂ ಇರಲಿ. ಆದರೆ ಇತ್ತೀಚೆಗೆ ಖಾಸಗೀ ಚಾನಲ್, ಅದೂ ಸಹ ಗಂಟೆ ಗಂಟೆಗೂ ಹಸಿ ಬಿಸಿ ಸುದ್ದಿಯನ್ನು ಬಿತ್ತರಿಸುವ
ವಾರ್ತಾ ವಾಹಿನಿಯೊಂದು ಒಂದಷ್ಟು ಘಳಿಗೆ ಯಕ್ಷಗಾನಕ್ಕೆ ಮೀಸಲಿಡುತ್ತದೆ ಎಂದರೆ ಅದರ
ಭಾರವಾಹಿಗಳಿಗೆ ಧನ್ಯವಾದ ಹೇಳಲೇಬೇಕು. ಮುಖ್ಯವಾಗಿ ಭಾನುವಾರದ ಈ ಸದ್ದುಗದ್ದಲದ ನಡುವೆ ಒಂದಷ್ಟು
ಯಕ್ಷಗಾನದ ಸದ್ದು ಅಪ್ಯಾಯಮಾನವಾಗುತ್ತದೆ. ಅದು
ಪ್ರತಿಷ್ಠಿತ ವಾರ್ತಾವಾಹಿನಿ “ ಸುದ್ದಿ” ಟೀವಿ.. ಭಾನುವಾರ ಮಧ್ಯಾಹ್ನ ಯಕ್ಷರಂಗ ಸರಣಿಯಲ್ಲಿ
ಹಲವು ಯಕ್ಷಗಾನ ಕಲಾವಿದರ ಸಂದರ್ಶನಗಳು ಇದಾಗಲೇ ಪ್ರಸಾರವಾಗಿದೆ.
ಕೇವಲ
ಅರ್ಧ ಗಂಟೆಯಲ್ಲಿ ಒಬ್ಬ ಯಕ್ಷಗಾನ ಕಲಾವಿದನ ಅನುಭವ ಜ್ಜಾನಗಳನ್ನು ಸಂಗ್ರಹಿಸಿ ತೋರಿಸುವುದಕ್ಕೆ
ಸಾಧ್ಯವಾಗುವುದಿಲ್ಲ. ಹಾಗಾಗಿ ಇದು ಅನಿವಾರ್ಯವಾಗಿ ಇತಿಮಿತಿಯೊಳಗಿನ ಕಾರ್ಯಕ್ರಮ ಎನ್ನಲೇಬೇಕು.
ಮತ್ತೆ ವಾರ್ತಾವಾಹಿನಿ. ಹಾಗಾಗಿ ಇಲ್ಲಿ ಕೆಲವು
ಕಟ್ಟುಪಾಡುಗಳು ಅವುಗಳಿಗೆ ಇದ್ದೇ ಇರುತ್ತದೆ. ಆದುದರಿಂದ ವಾರದ ಅರ್ಧಗಂಟೆಯಾದರೂ ಮೀಸಲಿದೆಯಲ್ಲಾ
ಎಂದು ತ್ಪಪ್ತಿ ಹೊಂದುವುದರೆಲ್ಲೆ ಒಂದು ಸಮಾಧಾನವಿದೆ. ವಾಸ್ತವದಲ್ಲಿ ಯಾವುದೇ ಖಾಸಗೀ ಟಿ. ವಿ
ವಾಹಿನಿಗಳು ಮೊದಲು ಗಮನಿಸುವುದು ಟಿ ಆರ್ ಪಿಯನ್ನು. ಆನಂತರ ಕಾರ್ಯಕ್ರಮದ ಬಗ್ಗೆ ಗಮನ
ಹೋಗುತ್ತದೆ. ಎಷ್ಟೇ ಒಳ್ಳೆಯ ಸಾಧನವಾದರೂ ಗಿರಾಕಿ ಇಲ್ಲವಾದರೆ ವ್ಯಾವಹಾರಿಕ ಪ್ರಪಂಚದಲ್ಲಿ
ಅದಕ್ಕೆ ಬೆಲೆಯೇ ಇರುವುದಿಲ್ಲ. ಹಾಗಾಗಿ ತನ್ನಲ್ಲಿರುವ ಸಾಧನಕ್ಕೆ ಅದೆಂತಹ ಕಳಪೆ ಸಾಮಾಗ್ರಿಯೇ
ಆದರು ಹೊರಗೆ ಹೇಗೆ ಬೇಡಿಕೆ ಇರಬಹುದು ಎಂದು ಮೊದಲು ಯೋಚಿಸುತ್ತಾನೆ. ಇಂತಹ ಪಕ್ಕಾ ವ್ಯಾಪಾರೀ
ಪರಿಸರದಲ್ಲಿ ಯಕ್ಷಗಾನಕ್ಕೆ ಒಂದಷ್ಟು ವೇಳೆ ಎಂದರೆ ಅದು ಹೇಗೂ ಇರಲಿ ಹೆಮ್ಮೆಯಾಗುತ್ತದೆ.
ಮುಖ್ಯವಾಗಿ
ಇಲ್ಲಿ ಕಾರ್ಯಕ್ರಮ ಹೆಚ್ಚಾಗಿ ಸಂದರ್ಶನಕ್ಕೆ ಮಾತ್ರಾ ಸೀಮಿತವಾಗಿರುತ್ತದೆ. ಇದು ಬಹಳ ಸುಲಭ
ಮತ್ತು ಇಂದಿನ ಕಾಲ ಘಟ್ಟದಲ್ಲಿ ಅತ್ಯಂತ ಹೆಚ್ಚು ಸೂಕ್ತವೂ ಆಗಿರುತ್ತದೆ. ಸಂದರ್ಶನ ಕಲಾವಿದರ ಪರಿಚಯ, ಸಾಧನೆ ಇದು ಹಲವು ಸಲ ಏಕತಾನತೆಯ ನೆರಳಿಗೆ ಸರಿದಂತೆ
ಭಾಸವಾಗುತ್ತದೆ. ಇದರತ್ತ ಮೊದಲು ಗಮನ ಹರಿಸಬೇಕಾಗುತ್ತದೆ. ಯಾವುದೇ ಕಾರ್ಯಕ್ರಮ ಆಸಕ್ತಿಯನ್ನು ಕೆರಳಿಸುವುದು
ಅದರಲ್ಲಿ ಸ್ವಾರಸ್ಯ ಮೂಡಿದಾಗ. ಅದರಲ್ಲೂ ಯಕ್ಷಗಾನದಂತಹ ನವರಸಭರಿತ ಕಾರ್ಯಕ್ರಮಕ್ಕೆ ಇದು ಹೆಚ್ಚು
ಅನಿವಾರ್ಯ.
ಯಕ್ಷಗಾನ ಕಲಾವಿದರ ವಿಷಯಗಳಿಗಿಂತಲೂ ಯಕ್ಷಗಾನದದ
ವಸ್ತುಗಳು ಪ್ರಧಾನವಾವಗಬೇಕು. ಸಾಮಾನ್ಯವಾಗಿ
ಎಲ್ಲ ಯಕ್ಷಗಾನ ಕಲಾವಿದರ ಹಿನ್ನೆಲೆಯ ಬದುಕು ಬಡತನದ ಕಲಾಜೀವನ, ಸಾಮಾಜಿಕ ನೆಲೆಗಟ್ಟು ಇವೆಲ್ಲ
ಒಂದೇ ರೀತಿಯಾಗಿರುತ್ತದೆ. ಮಾತ್ರವಲ್ಲ ಯಕ್ಷಗಾನ
ಕಲಾವಿದನ ಬವಣೆ ಎಲ್ಲರಿಗೂ ತಿಳಿದೇ ಇರುತ್ತದೆ. ಇದನ್ನು
ಕಡೆಗಣಿಸಬೇಕು ಎಂದಲ್ಲ. ಇದರಲ್ಲಿ ಹೊಸತನ ಕಾಣುವುದು ಅಸಾಧ್ಯವಾಗಿರುತ್ತದೆ. ಇಂದಿನ ದಿನದಲ್ಲಿ ಯಕ್ಷಗಾನವನ್ನು
ತಿಳಿದಿರುವುದಕ್ಕಿಂತಲೂ ಹೆಚ್ಚು ಯಕ್ಷಗಾನ ಕಲಾವಿದರ ಬಗ್ಗೆ ತಿಳಿದಿರುವುದು ಒಂದು ವಿಪರ್ಯಾಸವೇ
ಎನ್ನಬೇಕು. ಯಕ್ಷಗಾನಕ್ಕಿಂತಲೂ ಹೆಚ್ಚು ಆಸಕ್ತಿ ಯಕ್ಷಗಾನ ಕಲಾವಿದರ ಬಗ್ಗೆ ಎಂದರೆ
ವಿಚಿತ್ರವೆನಿಸುತ್ತದೆ. ಅದಕ್ಕೊಂದು ಸಣ್ಣ ನಿದರ್ಶನವೆಂದರೆ ಸಾರ್ವಜನಿಕರು ಕೆಲವೊಮ್ಮೆ ಸಭೆಯಲ್ಲಿ
ಇರುವುದಕ್ಕಿಂತಲೂ ಹೆಚ್ಚು ಹೊತ್ತು ಚೌಕಿಯಲ್ಲಿರುವುದು. ಒಟ್ಟಿನಲ್ಲಿ ಯಕ್ಷಗಾನ ಕಲಾವಿದನಿಂದ ತಿಳಿಯಬೇಕಾದ
ವಿಚಾರಗಳು ಯಾವುದು ಎಂದು ಗಮನಾರ್ಹವಾಗುತ್ತದೆ. ಯಕ್ಷಗಾನ ಕಲಾವಿದನ ಸಂದರ್ಶನದಲ್ಲಿ ವೈಯಕ್ತಿಕ ವಿಚಾರಗಳಂತೆ ಯಕ್ಷಗಾನ ಕಲೆಯ ಬಗೆಗಿನ
ವಿಚಾರಗಳ ಕಡೆಗೂ ಪ್ರಾಮುಖ್ಯತೆಯನ್ನು
ಕೊಡಬೇಕಾಗುತ್ತದೆ. ಇದು ಯಕ್ಷಗಾನದ ದೃಷ್ಟಿಯಿಂದಲೂ ಒಂದು ಅಮೂಲ್ಯವೆನ್ನಿಸುತ್ತದೆ.
ಯೋಗ್ಯತಾವಂತ ಕಲಾವಿದನ ಜ್ಞಾನ ತಿಳುವಳಿಕೆ ಪಾಂಡಿತ್ಯಗಳಿಗೆ ಪ್ರಾಮುಖ್ಯತೆ ಕೊಟ್ಟಾಗ ಕಲಾವಿದನಿಗೂ ತನ್ನ
ತಿಳುವಳಿಕೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಮಾತ್ರವಲ್ಲ ಆತ ಇನ್ನಷ್ಟು ಹೆಚ್ಚು ಬೆರೆಯುವುದಕ್ಕೆ
ಸಾಧ್ಯವಾಗುತ್ತದೆ. ಇಂದು ಅದೆಷ್ಟೋ ಅಮೂಲ್ಯ ಯಕ್ಷಗಾನದ ಸಂಗತಿಗಳು ಕಲಾವಿದನಲ್ಲೇ ಉಳಿದು ಅದು
ನಿಂತ ನೀರಂತೆ ಮುಂದಕ್ಕೆ ಹೋಗುವ ಅವಕಾಶವೇ ಇರುವುದಿಲ್ಲ. ಇಂತಹ ವಸ್ತುಗಳು ಬಹಿರಂಗವಾಗಬೇಕು. ಉದಯೋನ್ಮುಖ
ಕಲಾವಿದರಿಗೆ ಇಂತಹ ವಿಚಾರಗಳು ಇವೆ ಎಂಬುದರ ಅರಿವೇ ಇರುವುದಿಲ್ಲ. ಇದ್ದರೂ ಅದನ್ನು ತಿಳಿಯಬೇಕು,
ಅಭ್ಯಸಿಸಬೇಕು ರೂಢಿಸಿಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನವೂ ಇರುವುದಿಲ್ಲ. ಇಂತಹ ಅಮೂಲ್ಯವಿಚಾರಗಳು
ಒಂದು ಮಾಧ್ಯಮದಲ್ಲಿ ಬಹಿರಂಗವಾಗುವಾಗ ಯಕ್ಷಗಾನ
ಲೋಕಕ್ಕೆ ಅದೆಷ್ಟು ಅನಿವಾರ್ಯವೊ ಅಥವಾ ಅದನ್ನು ಎಷ್ಟು ಅಳವಡಿಸಿಕೊಳ್ಳುತ್ತದೋ ಬೇರೆ ವಿಚಾರ.
ಆದರೆ ಇಂದಿನ ಜನಾಂಗ ಯಕ್ಷಗಾನ ಅಂದರೆ ಏನು ಎಂಬ ಮಾನದಂಡ ಲಭಿಸುತ್ತದೆ. ತಾವೆಷ್ಟು ಯಕ್ಷಗಾನಕ್ಕೆ
ಪ್ರಾಮಾಣಿಕವಾಗಿದ್ದೇವೆ ಎಂಬುದು ತಿಳಿದು ಬರುತ್ತದೆ. ಬೆಳಕಿನ ಅನುಭವವಾದರೆ ತಾನೆ ಕತ್ತಲಿನ
ಅನುಭವ ಅರಿವಿಗೆ ಬರುವುದು.
ಇನ್ನು
ಪ್ರಶ್ನೆಗಳು, ಅದೂ ಸಹ ಉತ್ತಮ ಪರಿಪಕ್ವತೆಯ ಪ್ರಶ್ನೆಗಳಾಗಿರಬೇಕು. ಹತ್ತನೆ ತರಗತಿಯ
ವಿದ್ಯಾರ್ಥಿಯಲ್ಲಿ ಮೂರನೇ ತರಗತಿಯ ಪ್ರಶ್ನೆಗಳಂತೆ ಎಳಸು ಪ್ರಶ್ನೆಗಳು ಕಾರ್ಯಕ್ರಮದ
ಗುಣಮಟ್ಟವನ್ನು ಕಸಿಯಬಹುದು. ಹಾಗಾಗಿ ಪ್ರಶ್ನೆಗಳಲ್ಲೂ ಒಂದಷ್ಟು ಔಚಿತ್ಯ ಪೂರ್ಣ ರಸೋತ್ಪತ್ತಿ ಮೂಡಿಸುವುದು ಉತ್ತಮ. ಕೆಲವೊಮ್ಮೆ ಆತ್ಮೀಯತೆ ಮತ್ತು ಸೌಹಾರ್ದದ ಪರಿಧಿಯೊಳಗೆ
ಕುಚೋದ್ಯದ ಪ್ರಶ್ನೇ ಕೇಳೀದರೂ ಕಾರ್ಯಕ್ರಮ ರಸವತ್ತಾಗಿರುತ್ತದೆ. ಇದಕ್ಕೆ ಸ್ವಲ್ಪ ಕಠಿಣ
ಪ್ರಯತ್ನವೂ ಬೇಕು. ಇಲ್ಲಿ ಮಲಯಾಳಂ ಭಾಷೆಯ ಕೈರಳಿ
ಎಂಬ ಖಾಸಗೀ ವಾಹಿನಿಯೊಂದರ ಕಾರ್ಯಕ್ರಮ ನೆನಪಿಗೆ ಬರುತ್ತದೆ. ಜೆ ಬಿ ಜಂಕ್ಷನ್ ಎಂಬ ಈ
ಕಾರ್ಯಕ್ರಮದಲ್ಲಿ ಪ್ರಸಿದ್ಧ ಕಲಾವಿದರಿಗೆ
ಸಂದರ್ಶಕ ಕೇಳುವ ಪ್ರಶ್ನೆಗಳು ಇದಕ್ಕೊಂದು ನಿದರ್ಶನ. ವ್ಯಕ್ತಿಗಳೊಂದಿಗೆ ಸರಸದಿಂದ ಸಹಜವಾಗಿ
ಕೇಳುವ ಪ್ರಶ್ನೆಗಳಿಗೆ ಕಲಾವಿದರೂ ಅಷ್ಟೆ ಸ್ವಾರಸ್ಯವಾಗಿ ಉತ್ತರ ಹೇಳುತ್ತಾರೆ. ಹೀಗಾಗಿ
ಕಾರ್ಯಕ್ರಮ ಕೊನೆಯ ತನಕವೂ ಆಸಕ್ತಿಕರವಾಗಿ ಸಾಗುತ್ತದೆ. ಕೆಲವೊಂದು ಪ್ರಶ್ನೆಗಳೂ ಅತಿಥಿಗಳಿಗೆ ಸವಾಲಾಗಿದ್ದರೆ
ಅವುಗಳನ್ನು ಅವರು ಅಷ್ಟೇ ಕ್ರೀಡಾಸ್ಫೂರ್ತಿಯಲ್ಲಿ ತೆಗೆದುಕೊಂಡು ಅದೇ ಭಾವದಲ್ಲಿ
ಉತ್ತರಿಸುತ್ತಾರೆ. ಹೀಗೆ ಬಹಳ ವಿಚಾರಗಳನ್ನು ಹಂಚಿಕೊಳ್ಳುವುದಕ್ಕಿರುವ ಅವಕಾಶಕ್ಕೆ ಈ ವೇದಿಕೆ
ರೂಪುಗೊಳ್ಳುತ್ತದೆ.
ಇದು ಯಕ್ಷಗಾನ ಕಲಾವಿದರ ಕಾರ್ಯಕ್ರಮ. ಸಹಜವಾಗಿ ಯಕ್ಷಗಾನ
ಕಲಾವಿದರು ಉತ್ತಮ ಮಾತುಗಾರರಾಗಿರುತ್ತಾರೆ. ಇದನ್ನು ಬಳಸಿಕೊಳ್ಳುವುದು ಸಂದರ್ಶಕನ
ಜಾಣತನವಾಗುತ್ತದೆ. ಅದಿಲ್ಲವಾದರೆ ಎಷ್ಟೇ ಪ್ರತಿಷ್ಠಿತ ವಾಹಿನಿಯಾದರೂ ಕಾರ್ಯಕ್ರಮ ಹತ್ತರೊಟ್ಟಿಗೆ
ಹನ್ನೊಂದರ ಪುಟಸೇರಿಬಿಡುತ್ತದೆ.

No comments:
Post a Comment