ನನ್ನ ಮನೆ ಮಗಳು ನನ್ನ ಮೊಬೈಲ್ ಹಿಡಿದು ಕೆಲವೊಮ್ಮೆ ನೋಡುವುದುಂಟು.
ಅದರಲ್ಲಿರುವ ಒಂದಷ್ಟು ವೀಡಿಯೋಗಳನ್ನು ಹಾಡುಗಳನ್ನು ಕಂಡು ಒಂದೆರಡು ಕಮೆಂಟುಗಳನ್ನು ಹೇಳಿ
ನನ್ನನ್ನೊಂದಿಷ್ಟು ಕಿಚಾಯಿಸುವುದೆಂದರೆ ಅವಳಿಗಿಷ್ಟವಾದ ಕಾಲಯಾಪನೆ. ನಾನೂ ಅದನ್ನು
ಹುಡುಗಾಟಿಕೆಯೊಂದಿಗೆ ಸ್ವೀಕರಿಸಿ ಮಕ್ಕಳಲ್ಲಿ ಮಕ್ಕಳಾಗುವ ಒಂದು ಅವಕಾಶವಾಗಿ ಕಾಣುತ್ತೇನೆ. ಇಂತಹ
ಸಮಯದಲ್ಲಿ ಒಂದಷ್ಟು ಸಲಿಗೆಯಿಂದ ಗೊಣಗಿ ಅವಳಿಂದ
ಮೊಬೈಲ್ ಕಿತ್ತುಕೊಳ್ಳುವುದು ನಿತ್ಯ ರೂಢಿ. ನಿನ್ನೆ ನೋಡುತ್ತಿದ್ದಂತೆ ಇದೇನು ದೊಡ್ಡಪ್ಪ ನಿಮ್ಮ
ಯಕ್ಷಗಾನದಲ್ಲಿ ಡುಯಟ್ ಸಾಂಗು ಇದೆ . ಯಕ್ಷಗಾನ ಹಾಗೆ ಹೀಗೆ ಹೇಳ್ತೀರಲ್ಲ? ಇದೆಂತದು
ಯಕ್ಷಗಾನ? ನನಗೂ ಕೆಲವೊಮ್ಮೆ ಪಿತ್ಥ ನೆತ್ತಿಗೇರುವುದುಂಟು.
ಆದರೂ ಮುದ್ದಿನ ಮಗಳು ಅಂತ ದುರುಗುಟ್ಟುವಿಗೆ ಮಾತ್ರ ಸೀಮಿತವಾಗಿರಿಸಿ ಏನು ಎಂಬಂತೆ ನೋಡಿದೆ. ಆಕೆ
ಮೊಬೈಲ್ ಪಕ್ಕಕ್ಕೆ ತಂದು ವೀಡಿಯೋ ತುಣುಕೊಂದನ್ನು ತೋರಿಸಿದಳು.
ಈಗ ಬೆಚ್ಚಿ ಬೀಳುವ ಸರದಿ ನನ್ನದು. ಬೆಚ್ಚಿ ಬೀಳುವುದಲ್ಲ. ಒಂದು
ವಿಲಕ್ಷಣ ಭಾವ ನನ್ನ ಮುಖದಲ್ಲಿ ಹಾದು ಹೋಯಿತು. ಹೌದು, ಅಕ್ಷರಶಃ ಒಂದು ಯುಗಳ ಗೀತೆಯೇ. ಒಂದೆರಡು
ಸೆಕುಂಡಿನ ವಿಡೀಯೋ ಒಂದು ವಿಶಾಲ ಇತಿಹಾಸದ ಯಕ್ಷಗಾನಕ್ಕೆ ಮಾನವನ್ನು ಗೆರೆ ಎಳೆದಂತೆ ನನ್ನ ಕಣ್ಣು
ನಾನೇ ನಂಬಿಕೊಳ್ಳದಂತಹ ಸ್ಥಿತಿ. ಪುಟ್ಟ ಮಗಳ ಎದುರಲ್ಲೇ ಯಕ್ಶಗಾನ ಎಂದರೆ ಇಷ್ಟೇಯಾ ಎಂಬಂತಹ
ಪರಿಸ್ಥಿತಿ. ಅದು ಇತ್ತೀಚೆಗೆ ಯಕ್ಷಗಾನ ವಲಯದಲ್ಲಿ
ವೈರಲ್ ಆದ ವೀಡಿಯೋ. ಅದರ ವಿವರಣೆ ಕೊಡುವುದೂ ಅಸಹ್ಯ. ಹೋಗಲಿ ನೋಡುವವರು ನೋಡುತ್ತಾರೆ
ಆಡುವವರು ಆಡುತ್ತಾರೆ. ಹೀಗೆ ತಟಸ್ಥನಾಗಿ ನಿರ್ವಿಕಾರ ಭಾವದಲ್ಲಿ ಮೊಬೈಲ್ ಕಿತ್ತುಕೊಂಡು
ಮತ್ತಷ್ಟು ಕುಲಂಕೂಷವಾಗಿ ನೋಡುವ ಪ್ರಯತ್ನ ಮಾಡುತ್ತೇನೆ. ಕೆಲವು ಸೆಕುಂಡುಗಳ ವೀಡಿಯೋವಾದರೂ ಸಮಯವಿದ್ದರೂ
ಪುನಃ ಕಾಣೂವುದಕ್ಕೆ ಮನಸ್ಸಾಗುವುದಿಲ್ಲ. ಈ ನಡುವೆ ಮನಸ್ಸು ಯೋಚಿಸುತ್ತದೆ. ಅದನ್ನು ಯಥಾವತ್
ನೋಡಿದವರ ಭಾವನೆಗಳೇನಿರಬಹುದು. ಒಂದಷ್ಟು ಜನ ಚಪ್ಪಾಳೆ ಹೊಡೆದು ಶಿಳ್ಳೆ ಹಾಕಿರಬಹುದು. ಇನ್ನಷ್ಟು
ಜನ ಏನೂ ನಡೇ ಇಲ್ಲವೆಂಬಂತೆ ಇರಬಹುದು. ಇನ್ನು ಕೆಲವರು ಛೇ ಅಂತ ಲೋಚಗುಟ್ಟಿರಲೂ ಬಹುದು. ಘಟನೆ
ನಡೆದು ಅದೆಷ್ಟು ಸಮಯವಾಯಿತೋ. ಈಗ ನಮ್ಮ ಕಣ್ಣಿಗೆ ಬಿದ್ದಿದೆ ಅಂತ ನಾನು ತಿಳಿದೆ. ಯಾಕಂದರೆ ಈಗ
ಯಕ್ಷಗಾನಕ್ಕೆ ಯಾವುದೂ ವಿಶೇಷವಲ್ಲ. ಯಾವುದೂ ಅನಿರೀಕ್ಷಿತವಲ್ಲ. ಅವರವರ ದೃಷ್ಟಿಕೋನಕ್ಕೆ
ಏನನ್ನಾದರೂ ಮಾಡಿಕೊಳ್ಳಬಲ್ಲಂತಹ ಕಲೆ ಯಕ್ಷಗಾನ. ಹಾಗಾಗಿ ಕೆಲವರಂತೂ ಇವುಗಳಿಗೆಲ್ಲ ಔದಾಸಿನ್ಯದ
ಪ್ರತಿಕ್ರಿಯೆಯನ್ನೇ ನೀಡುತ್ತಾರೆ. ಇದು ಸುಲಭವಾದ ಮತ್ತು ತೊಂದರೆ ಇಲ್ಲದ ಪ್ರತಿಕ್ರಿಯೆ ಅಂತ
ನನ್ನ ಭಾವನೆ.ಕೆಲವೊಮ್ಮೆ ನಿಜಕ್ಕೂ ಸಂತೋಷ ಬೆರಗು ಒಟ್ಟಿಗೇ ಹುಟ್ಟಿಕೊಳ್ಳುತ್ತದೆ. ಯಕ್ಷಗಾನ
ಇಂಥವುಗಳನ್ನೇಲ್ಲಾ ಒಡಲಲ್ಲಿ ಸೇರಿಸಿಬಿಡುವ ಅದ್ಭುತ ಕಲೆಯಾಗಿಬಿಟ್ಟಿದೆಯಲ್ಲ? ಯಕ್ಷಗಾನದಂತಹ ಸರ್ವಗ್ರಾಹ್ಯ ಕಲೆ ಇನ್ನೊಂದಿರಲಾರದು.
ವೀಡಿಯೋ ಎನೋ ವೈರಲ್ ಆಯಿತು. ಅದಕ್ಕೆ ಎಷ್ಟು ಜನ ವಿರೋಧವಿದ್ದಾರೆ
ಪರವಾಗಿ ಎಷ್ಟು ಜನ ಇದ್ದಾರೆ ಯಾರು ಪರ ಯಾರು ವಿರೋಧ ಈ ಜಿಜ್ಞಾಸೆಗಳಲ್ಲೆ ವಾಟ್ಸಾಪ್ ದಿನ ಸರಿದು
ಹೋಗುತ್ತದೆ. ಸಾಮಾನ್ಯ ವಿವಾದಕ್ಕೆ ಒಂದು
ಸ್ಪಷ್ಟೀಕರಣ ನೀಡಿ ವಿವಾದವನ್ನು ತಣಿಸುವ ಶ್ಲಾಘನೀಯ ಯತ್ನವೂ ಆಗುತ್ತದೆ. ಅದು ಆಗಬೇಕಾದದ್ದೆ.
ಇಲ್ಲವಾದರೆ ಸಮಸ್ಯೆ ತಾರ್ಕಿಕ ಅಂತ್ಯ ಕಾಣುವ ಬಗೆ ಹೇಗೆ? ಹಲವು ಕಾರಣಗಳನ್ನು ನೀಡಿದ ಸಮರ್ಥನೆಯ
ಮಾತುಗಳು. ಅದನ್ನು ಅಲ್ಲ ಅಂತ ಹೇಳುವಷ್ಟಾಗಲೀ
ಅಥವ ಹೌದು ಎಂದು ಪೂರಕವಾಗಿ ಹೇಳುವಷ್ಟಾಗಲೀ ನಮ್ಮ ಜ್ಜಾನ ಬೆಳೀಲಿಲ್ಲ. ಇಂತಹ ಸಮಯದಲ್ಲಿ ನಾವು ತಿಳಿದುಕೊಂಡ ಯಕ್ಷಗಾನ ತುಂಬ ಕಡಿಮೆ ಅಂತ
ಅನ್ನಿಸಿಬಿಡುತ್ತದೆ. ಆದರೂ ಅಲ್ಪಮತಿಗೆ ಕೆಲವೊಮ್ಮೆ ಪ್ರಶ್ನೆಗಳು ಮೂಡುವುದುಂಟು. ಅದು ನಮಗಷ್ಟೇ
ಸೀಮಿತ.
ನಾನಂತೂ ಯಾರ ಪರವಾಗಿಯೋ ವಿರೋಧವಾಗಿಯೋ ಯೋಚಿಸುವುದಿಲ್ಲ. ಹಾಗೆ
ಯೋಚಿಸುವುದರಿಂದ ಪ್ರಯೋಜನವೂ ಇಲ್ಲ. ಈ ಸತ್ಯವನ್ನು ನಾನು ಎಂದಲ್ಲ ಹಲವರು ಕಂಡುಕೊಂಡಾಗಿದೆ.
ಹಾಗಾಗಿ ಯಾವ ಚರ್ಚೆ ಸಂವಾದಗಳೂ ಸ್ವಾರಸ್ಯವಾಗಿ ಕಾಣುವುದಿಲ್ಲ. ಸುಮ್ಮನೆ ನೋಡೋಣ ಎಂಬ ಮನರಂಜನಾ
ಭಾವವೂ ಉಂಟಾಗುವುದಿಲ್ಲ. ಹಿರಿಯ ವಿದ್ವಾಂಸರರೋಬ್ಬರು ಹೇಳಿದ್ದನ್ನು ಕೇಳಿದ್ದೇನೆ. ಯಕ್ಷಗಾನ
ಸರಿಯಾಗಿ ಕಲಿಯುವುದಕ್ಕೆ ಪೂರ್ಣವಾಗಿ ಅಭ್ಯಾಸ ಮಾಡುವುದಕ್ಕೆ ಯಾರೂ ಹೋಗುವುದಿಲ್ಲ. ಬದಲಾಗಿ
ಅದರಲ್ಲಿ ಹೊಸತನ್ನು ಇಂಪ್ಲಿಮೆಂಟ್ ಗೆ ತೊಡಗುತ್ತಾರೆ. ಯಕ್ಷಗಾನದಲ್ಲಿ ಇದ್ದದ್ದು ಸಾಕಾಗುವುದಿಲ್ಲ.
ಅದರ ಬಗ್ಗೆ ವಿಶ್ವಾಸ ವಿಲ್ಲ. ಹಾಗಾಗಿ ಮತ್ತೇನನ್ನೋ ಸೇರಿಸುತ್ತಾರೆ. ಯಕ್ಷಗಾನದಲ್ಲಿ ಜೀವಮಾನದಲ್ಲಿ ಕಲಿತು
ಪೂರೈಸದಷ್ಟು ಇದೆ ಅಂತ ಹಿರಿಯ ಕಲಾವಿದರು ಹಲವರು ಹೇಳುತ್ತಾರೆ. ಅದನ್ನೇ ಸರಿಯಾಗಿ ಅಭ್ಯಾಸ ಮಾಡಿ
ಬಳಕೆ ಮಾಡಿದರೆ ಸಾಕಾಗುತ್ತದೆ. ಆದರೆ ಇಂದಿನ ಯುವ ಪೀಳಿಗೆಗೆ ಹಿರಿಯ ಮಾತುಗಳಲ್ಲಿ ಹಿರಿಯರ
ಜ್ಜಾನದಲ್ಲಿ ವಿಶ್ವಾಸವಿಲ್ಲ. ಅಥವಾ ಹಿರಿಯರು ಹೇಳಿದಂತೆ ಜೀವಮಾನದಲ್ಲಿ ಕಲಿತು ಮುಗಿಸಲು
ಸಾಧ್ಯವಿಲ್ಲದೇ ಇದ್ದುದನ್ನು ಕೇವಲ ಆರು ತಿಂಗಳಲ್ಲಿ ಕಲಿತು ಮುಗಿಸಿದ್ದಾರೋ ಎನೋ ತಿಳಿಯದು.
ಹಾಗಾಗಿ ತಮ್ಮತಮ್ಮದು ಇರಲಿ ಅಂತ ಒಂದೊಂದನ್ನು ಇಳಿಸಿ ನೋಡುತ್ತಾರೆ. ಚಪ್ಪಾಳೆ ಸಿಕ್ಕಿದಾಗ ಮತ್ತೂ
ಒಂದಷ್ಟನ್ನು ಸೇರಿಸುತ್ತಾರೆ. ತಪ್ಪು ಅಂತ ಹೇಳುವುದಕ್ಕೆ ಸಾಧ್ಯವೇ? ಯಕ್ಷಗಾನ ನಿಂತ ನೀರಾಗಿದೆ.
ಹಾಗಾಗಬಾರದಲ್ಲ? ಹಿರಿಯರು ಹೇಳುವಂತೆ ಯಕ್ಷಗಾನದಲ್ಲಿ ಇದ್ದುದನ್ನೇ ಸರಿಯಾಗಿ ಅಭ್ಯಾಸ ಮಾಡಿ
ಅದಷ್ಟನ್ನೇ ಬಳಕೆ ತರುತ್ತಿದ್ದರೆ, ಕಲಾವಿದರಿಗೆ ಕಣ್ಸನ್ನೆಯ ನಿರ್ದೇಶನವಾಗಲೀ ಆಕ್ಷಣದ
ಬದಲಾವಣೆಗಳಾಗಲಿ ಅಗತ್ಯ ಬೀಳಲಾರದು. ಈ ವಿವಾದವೂ ಹುಟ್ಟಿಕೊಳ್ಳುವುದಕ್ಕೆ ಆಸ್ಪದವೂ ಇರಲಾರದು.
ಪರಂಪರೆ ನಿಂತ ನೀರಾಗಿ ಕೆಸರಾಗಿ ಮಡುಗಟ್ಟಿ ಹೋಗಿದೆ. ಹಾಗಾಗಿ ವಿವಾದ ಮತ್ತು ಕೆಲವೆಲ್ಲ
ಸಹಿಸಿಕೊಳ್ಳಬೇಕು. ಯಕ್ಷಗಾನಕ್ಕೆ ಅಷ್ಟು ಮಾಡದೇ ಇದ್ದರೆ ಹೇಗೆ? ಗಂಟೆ ಕಟ್ಟಲೆ ಪದ ಎಳಿಯದೇ
ಇದ್ದರೆ ಹೊಸದನ್ನು ಹುಡುಕುವ ಅವಶ್ಯಕತೆಯೇ ಬೀಳುವುದಿಲ್ಲ. ಎಲ್ಲವು ಕಾಲಕ್ಕೆ ಹೊಂದಿಕೊಂಡಂತೆ ಸರಿ
ಅಂತಲೇ ಒಪ್ಪಿಕೊಂಡು ಯಕ್ಷಗಾನ ಬೇಕೋ ಬೇಡವೋ ಅಂತ ದೂರ ಉಳಿಯ ಬೇಕಾದರೆ ಉಳಿದು ಬಿಡಬಹುದು.
ಸುಮಾರು ನಲ್ವತ್ತು ವರ್ಷಗಳಿಂದ ಯಕ್ಷಗಾನ
ನೋಡಿ ಆನಂದಿಸಿದ್ದೇನೆ. ಬಾಲ್ಯದಿಂದಲೂ ಯಕ್ಷಗಾನ ಎಂದರೆ ಇದೇ ಅಂತ ಒಂದು ನಂಬಿಕೆ ಬೆಳೆದು ಬಂದು
ಬಿಟ್ಟಿದೆ. ಅದು ನನ್ನ ಅಮ್ಮ ಎಂದರೆ ಇವಳು ಎಂಬ ಹಾಗೆ. ಬೇರೆ ಯಾವ ಹೆಂಗಸನ್ನು ತಂದು ತೋರಿಸಿದರೂ
ಅಂತರಾಳದಲ್ಲಿ ಅಮ್ಮ ಎನ್ನುವ ಭಾವನೆ ಸ್ಪುರಿಸೀತೆ.? ಇಲ್ಲ. ಹಾಗಾಗಿ ಹೊಸ ಹೊಸ ಅವಿಷ್ಕಾರಗಳು
ಮಾಡುವವರು ಮಾಡುತ್ತಾರೆ ನೋಡುವವರು ನೋಡುತ್ತಾರೆ. ಆದರೆ ನಮ್ಮ ನಂಬಿಕೆ ಹಾಗೇ ಉಳಿದು ಬಿಡುತ್ತದೆ.
ನೋಡುವವರಿಗಿಂತಲೂ ನೋಡದೇ ಇರುವವರ ಸಂಖ್ಯೆ
ಬೇಕಾದಷ್ಟಿದೆ. ಹಾಗೆಂದು ಯಾವುದೂ ನಿಲ್ಲುವುದಿಲ್ಲವಲ್ಲ? ತಮ್ಮ ತಮ್ಮ ಕಾರ್ಯಗಳಿಗೆ ವಿವರಣೆಯೋ ಸ್ಪಷ್ಟೀಕರಣವೋ
ಇದ್ದೇ ಇರುತ್ತದೆ. ಆದರೆ ಅದನ್ನು ಸತ್ಯ ಎಂದು ನಂಬುವುದು ಬಿಡುವುದು ಹೇಳುವಾತನ ಕೈಯಲ್ಲಿ ಇರುವುದಿಲ್ಲ. ಒಂದು ಭವ್ಯ ಪರಂಪರೆಯನ್ನು ದೂರ ಮಾಡುವಲ್ಲಿನ
ಕಾಳಜಿ ಅದನ್ನು ಉಳಿಸುವುದರಲ್ಲಿ ಇರುವುದಿಲ್ಲ. ಪ್ರೇಕ್ಷಕ ಬೇಕು ಎಂದು ಬಯಸಿದರೂ ಅದನ್ನು ಒದಗಿಸುವ ಭಂಡವಾಳ ಸ್ವತಃ
ಇರುವುದಿಲ್ಲ. ಹಾಗಾಗಿ ಪ್ರೇಕ್ಷಕನ ದೃಷ್ಟಿಕೋನವನ್ನು ಬದಲಿಸಿದರೆ ಸಸೂತ್ರ. ಇದ್ದ ಭಂಡವಾಳದಲ್ಲೇ
ವ್ಯವಹಾರ ಸಾಗಿಬಿಡುತ್ತದೆ. ಆದರೂ ಈಗ ಬದಲಾಗುವ ಪ್ರೇಕ್ಷಕ ಮುಂದೆ ಬದಲಾಗುವುದಿಲ್ಲ ಎಂಬುವುದಕ್ಕೆ ಭರವಸೆ ಇದೆಯೇ?
ಇದೆಲ್ಲ ಚಿಂತನೆಗಳು ನನಗಷ್ಟೇ ಸೀಮಿತ. ಸರಿ
ತಪ್ಪು ಎಂದು ವಿಶ್ಲೇಷಣೆ ಮಾಡಬಹುದು. ಆದರೆ ಅದನ್ನು ನಂಬುವುದು ಅಂತರಂಗದ ವಿಚಾರ ಮಾತ್ರವಲ್ಲ.
ಅಂತರಂಗದ ಸ್ವಾತಂತ್ಯ್ರ. ಹಾಗಾಗಿ ಅದು ಕೇವಲ ನನ್ನ ಪರಿಧಿಯೊಳಗಿನವುಗಳು. ಯಾರಾದರೂ ಆ
ಪರಿಧಿಯೊಳಗೆ ಬರುತ್ತಾರೆ ಎಂದಾದರೆ ಅದವರವರ ಮನೋಭಾವ ಅಷ್ಟೆ.
No comments:
Post a Comment