ಅದು ಅಯೋಧ್ಯೆಯ ರಾಜ ಸಭೆ. ಋತುಪರ್ಣ ಮಹಾರಾಜ ಸಿಂಹಾಸನದಲ್ಲಿ
ವಿರಾಜಮಾನನಾಗಿದ್ದಾನೆ. ಒಮ್ಮಿಂದೊಮ್ಮೆಗೆ ಮಹಾರಾಜನಿಗೆ ಕುಳಿತ ಸಿಂಹಾಸನ ಅಲುಗಿದ ಅನುಭವ. ಅಷ್ಟೇ
ಕುಳಿತಲ್ಲಿಂದ ಧಿಗ್ಗನೆ ಕೆಳಗೆ ಹಾರಿ ಬಿಡುತ್ತಾನೆ. ಅದು ಕ್ಷಣ ಮಾತ್ರದ ಪ್ರಚೋದನೆ ಮತ್ತು
ಪ್ರತಿಕ್ರಿಯೆ. ಯಾಕೆ ಹೀಗಾಯಿತು. ಆಗಲೇ ರಾಜಸಭೆಗೆ ದೂರದಲ್ಲಿ ಒಂದು ಆಕೃತಿಯ ಪ್ರವೇಶವಾಗುತ್ತದೆ.
ಅದು ಮನುಷ್ಯಾಕೃತಿ ಎನ್ನುವುದಕ್ಕೇ ಅನುಮಾನ ಪಡುವಂತೆ ವಿಕೃತ ರೂಪ. ಆದರೂ ಅದು ನೇರವಾಗಿ
ಸಭೆಯೊಳಗೆ ಬರುತ್ತದೆ. ಆ ಧೈರ್ಯ ಆತ್ಮ ಶಕ್ತಿಗೆ ರಾಜ ಗೊಂದಲಕ್ಕೆ ಸಿಲುಕುತ್ತಾನೆ. ತಾನೇಕೆ
ಕುಳಿತಲ್ಲಿಂದ ಎದ್ದೆ? ಅದಾವ ಪ್ರಚೋದನೆ ತನ್ನನ್ನು ತಳ್ಳಿಬಿಟ್ಟಿತು. ಆಂತರ್ಯವನ್ನು ಬಡಿದೆಬ್ಬಿಸಿದ
ಆ ಶಕ್ತಿ ಅದಾವುದು?
ಅದು ಬೇರಾವ ಶಕ್ತಿಯೂ ಅಲ್ಲ. ಅದು ಚಕ್ರವರ್ತಿಯೊಬ್ಬನ ತೇಜಸ್ಸು
ಎಂಬುದು ಋತುಪರ್ಣನಿಗೆ ಅರಿವಾಗುವುದು ಕಥೆಯ
ಅಂತ್ಯದಲ್ಲಿ. ಚಕ್ರವರ್ತಿಯೊಬ್ಬನಿಗಿರುವ ತೇಜಸ್ಸು ಸಾಮಂತನಾದ ಋತು ಪರ್ಣನನ್ನು ಬಡಿದೆಬ್ಬಿಸಿತು.
ಮುಂದೆ ಆತನ ಅನುಮಾನಕ್ಕೇ ಅದೂ ಒಂದು ಕಾರಣವಾಯಿತು. ವಿಚಿತ್ರ ಕುರೂಪಿಯಾದ ಆ ಬಾಹುಕನೆಲ್ಲಿ?
ಸುರಸುಂದರ ಚಕ್ರವರ್ತಿ ನಳನೆಲ್ಲಿ? ಕಾರ್ಕೋಟಕ ವಿಷ ಪ್ರಭಾವದಿಂದ ತನ್ನ ದೇಹ ವಿಕಾರವಾಗಿದ್ದರೂ
ನಳನ ಅಂತಶಕ್ತಿಯಿಂದ ಆತ್ಮದಲ್ಲಿ ಅಡಕವಾಗಿದ್ದ ಆತ್ಮ ವರ್ಚಸ್ಸು ತನ್ನ ಪ್ರಭೆಯನ್ನು
ಕಳೆದುಕೊಳ್ಳಲಿಲ್ಲ. ಅದನ್ನು ಕಸಿಯುವುದಕ್ಕೆ ಬಹುಶಃ ಆತನನ್ನು ಕಾಡುವ ಶನಿದೇವನಿಗೂ
ಸಾಧ್ಯವಾಗಲಿಲ್ಲವೋ ಏನೋ? ತೇಜಸ್ಸು! ಎನ್ನುವುದು
ಇದನ್ನು.
ಅದು ನರ್ಮದೆಯ ತೀರದಲ್ಲಿನ ಬಲಿ ಚಕ್ರವರ್ತಿಯ ಯಾಗ ಶಾಲೆ. ಇನ್ನೇನು
ಪೂರ್ಣಾಹುತಿಗೆ ಎಲ್ಲವೂ ಸಿದ್ಧವಾಗಿದೆ. ಅಸುರ ಗುರು ಶುಕ್ರ ನಿಂದ ತೊಡಗಿ ಅದೆಷ್ಟೋ ಮುನಿಗಳು ಋಷಿ
ಪ್ರಮುಖರು, ಋತ್ವಿಜರು ಯಾಗ ಶಾಲೆಯಲ್ಲಿ ಉಪಸ್ಥಿತರಿದ್ದಾರೆ. ಇನ್ನೊಂದು ಆಹುತಿಯೊಂದಿಗೆ ಬಲಿಗೆ
ಇಂದ್ರಪದವಿ ಸಿದ್ದಿಸುತ್ತದೆ. ಆವಾಗ ಯಾಗ ಶಾಲೆಯ ದ್ವಾರದಲ್ಲಿ ದಿವ್ಯ ಬಾಲಕನ ಆಗಮನವಾಗುತ್ತದೆ.
ಬಾಲಕನ ತೇಜಸ್ಸು ಕಂಡು ಯಾಗದೀಕ್ಷೆಯಲ್ಲಿ ಕುಳಿತಿದ್ದ ಬಲಿ ಚಕ್ರವರ್ತಿ ತನಗರಿವಿಲ್ಲದೇ
ಎದ್ದೇಳುತ್ತಾನೆ. ಅದೆಂತಹ ತೇಜಸ್ಸು. ಅಲ್ಲಿದ್ದ
ಅಷ್ಟೂ ಋಷಿ ಪ್ರಮುಖರ ತೇಜಸ್ಸು ಈ ಬಾಲಕನ ತೇಜಸ್ಸಿಗೆ ಶರಣಾಗಿ ಆತನನ್ನು ಹಿಂಬಾಲಿಸುತ್ತದೆ.
ಶುಕ್ರ ಪ್ರಮುಖರೆಲ್ಲ ಬೆಕ್ಕಸ ಬೆರಗಾಗುತ್ತಾರೆ. ತೇಜಸ್ಸು! ಎನ್ನುವುದು ಇದನ್ನು.
ವಿಚಿತ್ರವೆಂದರೆ ಇಂದು ಸಾರ್ವಜನಿಕ ವಲಯದಲ್ಲಿ ತಿಳಿಯದೇ
ಚರ್ಚೆಗೊಳಗಾಗುವ ಶಬ್ದವೆಂದರೆ ತೇಜೋವಧೆ. ತನ್ನ ತೇಜೋವಧೆಯಾಯಿತು ಎನ್ನುವುದೇ ಒಂದು ಸ್ವಾರ್ಥದ
ಸಂಕೇತ. ತನ್ನ ಬೆನ್ನನ್ನು ತಾನೆ ಚಪ್ಪರಿಸಿಕೊಂಡ ಹಾಗೆ. ನಿಜವಾಗಿ ತೇಜಸ್ಸು ಎಂಬುದು ಅಡಕವಾಗಿದ್ದಲ್ಲಿ ಅದು ಬೇಡವೆಂದರೂ
ಗೌರವವನ್ನು ಎಳೆದು ತರುತ್ತದೆ. ಅಂತಹ ತೇಜಸ್ಸು ಇದ್ದವನು ತೇಜೋವಧೆಯಾಯಿತು ಎಂದು
ಅಲವತ್ತುಕೊಳ್ಳುವುದಿಲ್ಲ. ಯಾಕೆಂದರೆ ಆತನ ತೇಜಸ್ಸು ಅದು ವಿಕ್ರಯಿಸುವ ಸೊತ್ತಲ್ಲ. ಇನ್ನೊಬ್ಬರು
ಕೊಡುವ ಮೌಲ್ಯಕ್ಕೆ ಅದು ಕಾದು ಕುಳಿತುಕೊಳ್ಳುವುದಿಲ್ಲ. ತೇಜಸ್ಸು
ಇಲ್ಲದವರೆ ತಮ್ಮೈಲಿ ಇಲ್ಲದೇ ಇದ್ದುದರ ವಧೆಯಾಯಿತು ಎಂದು ಪರಿತಪಿಸುವುದು. ಪ್ರಪಂಚ ನಿಯಮವೇ
ಹಾಗೆ, ಕಳುವಾದಾಗ ತನ್ನಲ್ಲಿ ಇಲ್ಲದೇ ಇದ್ದ ವಸ್ತುವೂ ಕಳುವಾಗಿದೆ ಎಂದು ಹೇಳುವುದು ಜಾಣತನ.
ಹಾಗಾದರೂ ತನ್ನ ಅರ್ಹತೆಯನ್ನು ಬಾಹ್ಯ ಪ್ರಪಂಚ ಗುರುತಿಸಲಿ ಎಂಬ ಸ್ವಾರ್ಥ.
ತೇಜಸ್ಸು ಸತ್ವಯುತ ಬದುಕಿನ ಪ್ರತೀಕ. ಅದು ಅರ್ಹತೆಯಿಲ್ಲದಲ್ಲಿ
ಬೆಳಗುವುದಿಲ್ಲ. ನಂದಾದೀಪ ಬೆಳಗಿ ಪ್ರಬೆಯನ್ನು ಬೀರುವುದಕ್ಕೆ ಹೇಗೆ ಸೂಕ್ತವಾದ ವಾತಾವರಣ ಬೇಕೋ
ಹಾಗೆ ಸೂಕ್ತ ನೆಲೆ ಸಿಕ್ಕಿದಲ್ಲಿ ಮಾತ್ರ
ತೇಜಸ್ಸು ಬೆಳಗುವುದು.
ದೇಹ ಮನಸ್ಸು ಮತ್ತು
ದೈವ ಹೀಗೆ ಬರುವ ತಾಪಗಳನ್ನು ಮೂರು ವಿಭಾಗ ಮಾಡಿ ಅದನ್ನು ತಾಪತ್ರಯ ಎಂದರೆ , ಇಂದು ನೂರೆಂಟು
ತಾಪತ್ರಯ ಎನ್ನುವುದೂ ಇದೆ. ನಿಜವಾಗಿ ತಾಪಗಳು ಮೂರೆ. ಅದರಂತೆ ತೇಜಸ್ಸು ಎಂಬ ಶಬ್ದ ಪ್ರಯೋಗದ
ಉಪಯೋಗದಲ್ಲಿ ಶಬ್ದ ತೇಜಸ್ಸೇ ಕಾಣೆಯಾಗಿದೆ.
ವಿದ್ಯಾವಂತನಾದ ವ್ಯಕ್ತಿಯಲ್ಲಿ ಆತ ಆರ್ಜಿಸಿದಂತಹ ವಿದ್ಯೆ ಆತನಲ್ಲಿ
ವರ್ಚಸ್ಸನ್ನು ಮೂಡಿಸುತ್ತದೆ. ಆ ವರ್ಚಸ್ಸು ವಿದ್ಯಾರ್ಹತೆ. ಅದು ಅತನ ಬದುಕಿನ ಶೈಲಿಯೊಂದಿಗೆ ಬೆರೆತಿರುತ್ತದೆ. ಅದು
ಪ್ರಕಾಶಿಸುವುದು ಅಥವಾ ಕಂದಿಹೋಗುವುದು ಅದೇನಿದ್ದರು ಅವನನ್ನು ಸಂಬಂಧಿಸಿಯೇ ಹೊರತು ಅವನೊಳಗಿನ
ಪ್ರಕಾಶವನ್ನು ಮತ್ತೊಬ್ಬನಿಂದ ನಾಶ ಪಡಿಸುವುದಕ್ಕೆ ಸಾಧ್ಯವಿಲ್ಲ. ಕ್ರೋಧಗೊಂಡಾಗ ಶರೀರ
ಕಂಪಿಸಬಹುದು. ಮುಖದ ತುಂಬ ರಕ್ತ ತುಂಬ ಬಹುದು. ಉದ್ವೇಗ ಅಧಿಕವಾಗಿ ಎದೆಯ ಬಡಿತ ಹೆಚ್ಚಾಗಬಹುದು.
ಕಣ್ಣುಗಳು ರೂಪ ಕೆಡಿಸಿಕೊಳ್ಳಬಹುದು. ಹೀಗೆ ದೇಹದ ಹಲವು ಭಾಗಗಳ ಸ್ಪಂದನೆಗೆ ಸ್ವತಃ ಜೀವ ಭಾವವೇ
ಕಾರಣ ಹೊರತು, ಸಿಟ್ಟು ಬರುವಂತೆ ಮಾಡುವ ಇನ್ನೊಬ್ಬನಲ್ಲ. ತಮ್ಮ ಸಿಟ್ಟಿಗೆ ಇನ್ನೊಬ್ಬನನ್ನು
ನಿಮಿತ್ತ ಮಾಡುವುದರಲ್ಲೂ ಇದೆಯೊಂದು ಸ್ವಾರ್ಥ.
ನಮ್ಮಲ್ಲಿನ ಅರ್ಹತೆಗಳಿಗೆ ನಮ್ಮನ್ನು ನಾವೆ ಕಾರಣರನ್ನಾಗಿ
ಮಾಡುತ್ತೇವೆ. ಅದೇ ದೌರ್ಬಲ್ಯಗಳಿಗೆ ಹೊರಗಿನ ವಿಚಾರಗಳನ್ನು ಕಾರಣವನ್ನಾಗಿಸುತ್ತೇವೆ. ನಮ್ಮ
ಅರ್ಹತೆಗೆ ಮಿಗಿಲಾಗಿ ಸ್ವಾಭಿಮಾನವನ್ನು ಬೆಳೆಸುತ್ತೇವೆ. ಅದು ಅಹಂಕಾರವಾಗುತ್ತದೆ. ಅದರೊಂದಿಗೆ
ಸ್ವಾರ್ಥ ಬೆರೆತು ಅದು ದುರಹಂಕಾರವಾಗಿ ಪ್ರತಿಷ್ಠೆಯಾಗುತ್ತದೆ. ಹೀಗೆ ನಮ್ಮ ಅಹಮಿಕೆಗೆ ನಾವು
ಕೊಡುವ ಹೆಸರೇ ತೇಜಸ್ಸು!
ಮನುಷ್ಯನ ದೇಹ ಕೊಳೆಯಾದಾಗ ಅತ ಸ್ನಾನ ಮಾಡಲು ಕೊಳಕ್ಕೆ ಇಳಿಯುತ್ತಾನೆ.
ತನ್ನ ದೇಹದ ಕಲ್ಮಷವನ್ನು ಕೊಳದ ನೀರಿಗೆ ಬೆರೆಸುತ್ತಾನೆ. ಆಗ ಯೋಚಿಸುವುದಿಲ್ಲ ನನ್ನಿಂದ ನೀರು
ಕಲುಷಿತಗೊಂಡಿತು ಎಂದು. ತನ್ನ ದೇಹದ ಮಲೀನತೆ ಕಳೆದುಕೊಳ್ಳುವುದಷ್ಟೇ ಆಗಿರುತ್ತದೆ. ಆತನಿಗೆ
ಬೇರೆನೂ ಕಾಣುವುದಿಲ್ಲ. ಅದೇ ನೀರು ಕೊಳೆಯನ್ನು ಕಳೆದುಕೊಂಡು ನಂತರವೂ ಶುದ್ದವಾಗಬಹುದು. ಆದರೂ
ತನ್ನ ಕೊಳೆಯನ್ನು ಅಲ್ಲಿ ಕಳೆದುಕೊಂಡದ್ದು ಸತ್ಯ. ಹಕ್ಕಿಯೊಂದು ಮರದ ಮೇಲೆ ಕುಳಿತಿರುತ್ತದೆ.
ವ್ಯಾಧ್ಯನೊಬ್ಬ ಅದಕ್ಕೆ ಬಾಣ ಎಸೆಯುತ್ತಾನೆ. ಇಲ್ಲ ಮನುಷ್ಯ ತನ್ನ ಕೋವಿಯಿಂದ ಗುಂಡು ಸಿಡಿಸಲೂ
ಬಹುದು. ಆದರೆ ಬಾಣ ಅಥವಾ ಗುಂಡು ಹಕ್ಕಿಗೆ ತಾಕಿ ಹಕ್ಕಿ ಸಾಯುತ್ತದೆ. ಜತೆಯಲ್ಲಿ ಹಕ್ಕಿ
ಅವಿತುಕುಳಿತಲ್ಲಿನ ಹಲವು ಎಲೆಗಳು ಉದುರಿಬೀಳಬಹುದು. ಮರದ ಗೆಲ್ಲು ಘಾಸಿಯಾಗಬಹುದು. ಆಸರೆ ಪಡೆದ
ಹಕ್ಕಿ ಯೋಚಿಸುವುದಿಲ್ಲ. ಬಾಣ ಬಿಟ್ಟ ಬೇಟೆಗಾರನೂ ಯೋಚಿಸುವುದಿಲ್ಲ. ಮರಕ್ಕೆ ಯಾವ ಅಪರಾಧಕ್ಕೆ
ಘಾಸಿಗೊಳಗಾಗಬೇಕಾಯಿತು. ಬೇಟೆಗೆ ಆಸರೆಯನ್ನು ಕೊಟ್ಟ ಅಪರಾಧವೇ? ಅದರ ಎಲೆಗಳನ್ನು
ಕಳೆದುಕೊಳ್ಳುವುದಕ್ಕೆ ಅದರ ಅಪರಾಧವೇನು?
ಸಂಗೀತಗಾರನೊಬ್ಬ ಹಾಡುತ್ತಾನೆ. ಅಥವಾ ಸಂಗೀತ ನುಡಿಸುತ್ತಾನೆ.
ಅದಕ್ಕೊಂದು ರಾಗ ಅದು ಶಂಕರಾಭರಣ, ಕಲ್ಯಾಣಿ ಮತ್ತೇನೋ ರಾಗವಾಗಿರಬಹುದು. ತಾಳವೂ ಅಷ್ಟೇ. ಆದರೆ
ಕೇಳುಗನೊಬ್ಬ ಆತನ ಶಂಕರಾಭರಣದ ಅವರೋಹಣವನ್ನು ವಿಮರ್ಶಿಸಬಹುದು. ಇದು ತಪ್ಪು ಎಂದು
ಸಾರ್ವಜನಿಕವಾಗಿ ಹೇಳಬಹುದು. ಸಂಗೀತಗಾರ ಹೇಗೆ
ಸಂಗೀತದ ಅಂಗವೋ ಕೇಳುಗನೂ ಅದರ ಅಂಗವೇ. ಶಂಕರಾಭರಣ ಕೆಡುವುದನ್ನು ಆತನಿಗೆ
ಕೇಳುವುದಕ್ಕಾಗುವುದಿಲ್ಲ. ಕೆಟ್ಟು ಹೋದ ಸಂಗಿತವನ್ನು ಆಸ್ವಾದಿಸುವುದಕ್ಕೆ ಆಗುವುದಿಲ್ಲ. ಹೋಗಲಿ
ಸಂಗೀತ ಕೆಡುವುದನ್ನು ಸಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಆದರೆ
ಸಂಗೀತಗಾರನ ಅಹಮಿಕೆ ಪೆಟ್ಟುಬೀಳುತ್ತದೆ . ಹಾಡುವುದಕ್ಕೆ ಆಗದವನು ಸಂಗೀತ ನುಡಿಸುವುದಕ್ಕೆ
ಅರಿಯದವನು ತನ್ನ ರಾಗದ ಬಗ್ಗೆ ವ್ಯಾಖ್ಯಾನ ಮಾಡುತ್ತಾನೆ. ಆತ ಒರಲುತ್ತಾನೆ ತನ್ನ ತೇಜೋವಧೆಯಾಯಿತು. ಅಹಂಕಾರ ಇಲ್ಲದೇ ಇರುತ್ತಿದ್ದರೆ ಸಂಗೀತಗಾರ ಸಂಗೀತದ
ಬಗ್ಗೆ ಯೋಚಿಸುತ್ತಿದ್ದ. ನಂತರ ತನ್ನ ಬಗ್ಗೆ ಯೋಚಿಸುತ್ತಿದ್ದ. ಹಾಗಾಗಿದ್ದರೆ ಅಲ್ಲಿ ಸಹೃದಯ
ವಾತಾವರಣ ಮೂಡುತ್ತಿತ್ತು. ಒಂದು ವೇಳೆ ಹಾಡುವುದಕ್ಕೆ ಅರಿತ್ತಿದ್ದವನೂ ಸಾರ್ವಜನಿಕವಾಗಿ ಹೇಳಿದರೆ
ಅಗಲೂ ಅದು ತೇಜೋವಧೆಯಾಗುತ್ತದೆ. ವಿಚಿತ್ರವೆಂದರೆ
ಸಾರ್ವಜನಿಕವಾಗಿ ಹಾಡಬಹುದು. ಸಾರ್ವಜನಿಕವಾಗಿ ಪ್ರತಿಕ್ರಿಯೆ ಸಲ್ಲದು
ಈ ಸಂಗೀತ ಆ ಶಂಕರಾಭರಣ ಇದ್ದ ಕಾರಣವೇ ಆತ ಸಂಗೀತಗಾರನಾಗಿದ್ದು.
ಕೇಳುಗನೂ ಅಷ್ಟೇ ಶಂಕರಾಭರಣವನ್ನು ಅಥವಾ ಸಂಗೀತವನ್ನು ಸವಿಯುವುದಕ್ಕೆ ಕುಳಿತಿದ್ದ. ಇಬ್ಬರಿಗೂ
ಆಸರೆಯಾಗಿದ್ದು ಸಂಗೀತವೆಂಬ ಮಾಧ್ಯಮ. ಬೆಸೆಯುವ ಕೊಂಡಿಯನ್ನೇ ಸಂಗೀತಗಾರ ತುಂಡರಿಸುವ ಪ್ರಯತ್ನ
ಮಾಡುತ್ತಾನೆ! ಸಂಗೀತದ ಬಗ್ಗೆ ಯೋಚಿಸದೇ ತನ್ನ ತೇಜೋವಧೆಯ ಬಗ್ಗೆ ಯೋಚಿಸುತ್ತಾನೆ!! ಆದರೆ ಆ ತೇಜಸ್ಸು ಆತನಲ್ಲಿ ಇದೆ ಎಂದು ಅನ್ನಿಸುವುದೇ
ಇಲ್ಲ. ಸಂಗೀತದ ಅಸ್ತಿತ್ವ ಇದ್ದರೆ ಮಾತ್ರ
ಸಂಗೀತಗಾರ ಅಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಬಹುದು. ಆತನ ಶಂಕರಾಭರಣವನ್ನು ಸವಿಯಲು
ತಿಳಿದಿದ್ದವನು ಇದ್ದರೆ ಮಾತ್ರ ಆತನ ಶಂಕರಾಭರಣಕ್ಕೆ ಮೌಲ್ಯ ಬರುವುದು. ಒಬ್ಬ ಕಲಾವಿದನಲ್ಲಿ
ಇರುವ ಪ್ರತಿಭೆ ಅತನದ್ದು ಸ್ವಂತ ನಿಜ. ಆದರೆ ಕಲೆ
ಅದು ಸಾರ್ವಜನಿಕ ಸೊತ್ತು. ಇದಕ್ಕೆ ಆತ ಬದ್ಧನಾಗಿರಬೇಕು. ತಂಡ ಸೋತರೂ ಆಟಗಾರ ಶತಕ ಸಿಡಿಸಿದ ಹಾಗೆ
ಏನು ಪ್ರಯೋಜನ? ಕಲೆ ವ್ಯಕ್ತಿ ನಿಷ್ಠವಾದರೆ ಕಲೆ ಜೀವಸತ್ವವನ್ನು ಕಳೆದುಕೊಂಡಂತೆ. ಬಾಡಿಗೆ ದಾರ
ಮನೆ ಬಿಡುವಾಗ ಎಷ್ಟೇ ಬದಲಾವಣೆ ಮಾಡಿದರೂ ಅದು ತಾತ್ಕಾಲಿಕ. ಆತ ಬಿಟ್ಟು ಹೋಗುವಾಗ ಮನೆ
ಮೊದಲಿನಂತೆ ಇರಬೇಕು. ಅದು ಕರಾರು.
ತಪ್ಪೆಸಗುವುದಕ್ಕೆ ಅನಿವಾರ್ಯವಾದ ಹಲವಾರು
ಕಾರಣಗಳು ಇರಬಹುದು. ಆದರೆ ತಪ್ಪನ್ನು ಒಪ್ಪದಿರುವುದಕ್ಕೆ ಒಂದು ಕಾರಣವೂ ಇರುವುದಿಲ್ಲ. ತೇಜಸ್ಸು
ಇರುವಲ್ಲಿ ತಪ್ಪನ್ನು ಒಪ್ಪಿಕೊಳ್ಳುವ ವಿಶಾಲ ಮನಸ್ಸು ಇದ್ದೇ ಇರುತ್ತದೆ. ಕ್ಷಮಿಸುವುದು ದೊಡ್ಡ
ಗುಣವಿರಬಹುದು. ಅದರೆ ಕ್ಷಮೆ ಕೇಳುವ ಮನಸ್ಸು ವಿಶಾಲವಾಗಿರುತ್ತದೆ . ಮನಸ್ಸು ವಿಶಾಲವಾಗಿ ಸ್ಥಿತ ಪ್ರಜ್ಞವಾಗಿದ್ದರೆ ತೇಜಸ್ಸು ವಾಸವಾಗಿರುತ್ತದೆ. ನಿಜವಾದ ತೇಜಸ್ಸು ಎಂದಿಗೂ ವಧೆಯಾಗುವುದಿಲ್ಲ. ಒಂದು
ವೇಳೆ ಅದು ವಧೆಯಾಗಿ ಹೋದರೆ, ಅದು ಸ್ವಯಂಕೃತ
ಅಪರಾಧದ ಆತ್ಮ ಹತ್ಯೆಯೇ ಹೊರತು ವಧೆಯಾಗುವುದಿಲ್ಲ.
No comments:
Post a Comment