“ ಕಪಟ ನಾಟಕ ರಂಗ .....” ಯಾರೋ ಕಳುಹಿಸಿದ ದೃಶ್ಯ ತುಣುಕೊಂದರ ಕಡೆಗೆ
ಗಮನ ಹರಿಸಿದಾಗ ಕಂಡ ಪದ್ಯ ಭಾಗವಿದು. ಇದೊಂದೇನು ಇಂದು ಯೂಟ್ಯೂಬ್ ಅಥವಾ ಇನ್ನಿತರ ಅಂತರ್ಜಾಲ
ಮಾಧ್ಯಮಗಳಲ್ಲಿ ಬೇಕಾದಷ್ಟು ಇಂತಹ ದೃಶ್ಯಗಳು ಸಾಮಾನ್ಯ. ಇದು ಗದಾಯುದ್ದ ಪ್ರಸಂಗದ ಅತ್ಯಂತ
ಜನಪ್ರಿಯ ಪದಗಳಲ್ಲಿ ಒಂದು. ಯಾಥಾರ್ಥ್ಯಕ್ಕಾದರೆ ಯಕ್ಷಗಾನದಲ್ಲಿ ಜನಪ್ರಿಯ ಪದ ಎನ್ನುವ ಬಳಕೆಯೇ
ಸರಿಯಲ್ಲ. ಪ್ರಸಂಗದನಡೆಗೆ ಅನುಸಾರವಾಗಿ ಪ್ರತಿಯೊಂದು ಪದವೂ ಪ್ರಮುಖವಾಗಿರುತ್ತದೆ. ಜನಪ್ರಿಯ
ಎಂದು ಒಂದನ್ನು ಉಲ್ಲೇಖಿಸುವಾಗ ಪ್ರಸಂಗದ ಉಳಿದ ಕಡೆಗೆ ಗಮನ ಕಡಿಮೆಯಾಗುತ್ತದೆ. ಇದು ಒಟ್ಟು
ಪ್ರಸಂಗಕ್ಕೆ ಮಾಡುವ ಅಪಚಾರವಾಗುತ್ತದೆ. ಒಂದು ಪದಕ್ಕೆ ಮಾತ್ರ ಗಮನ ಹರಿಸುವುದೋ ಅಥವಾ
ಕಲಾವಿದನೊಬ್ಬನನ್ನು ಮಾತ್ರಾ ಗಮನ ಹರಿಸುವುದೋ ಮಾಡುವುದಾದರೆ ಅದು ಪ್ರಸಂಗಕ್ಕೆ ಎಸಗುವ ಅಪಚಾರ.
ಆದರೂ ಈ ಪದವನ್ನು ಜನಪ್ರಿಯ ಪದ ಎಂದು ಹೇಳುವುದರಲ್ಲಿ ಸಮಕಾಲೀನ ಪ್ರವೃತ್ತಿ ಒಂದು ಪದ್ದತಿ
ಯಕ್ಷಗಾನದಲ್ಲಿ ಬೆಳೆದು ಬಂದಿದೆ. ತಮಗೆ ಅಗತ್ಯವಾಗಿರುವ ಭಾಗವನ್ನಷ್ಟೇ ತಿದ್ದಿ ತೀಡಿ
ಸ್ವಚ್ಛಗೊಳಿಸುವಂತೆ ಆಯ್ದ ಭಾಗಗಳಲ್ಲಷ್ಟೆ ಗಮನ ಕೇಂದ್ರೀಕರಿಸಲ್ಪಡುತ್ತದೆ. ಪ್ರಸಂಗದ ಆಯ್ದ
ಪದಗಳಿಗೋ ಸನ್ನಿವೇಶಗಳಿಗೋ ಭಾಗವತ ನಾಗಲೀ
ಕಲಾವಿದನಾಗಲೀ ತನ್ನನ್ನು ತಾನು
ಮೀಸಲಾಗಿರಿಸುವುದೆಂದರೆ ಉಳಿದ ಭಾಗವನ್ನು ಅಲಕ್ಷಿಸುವುದೇ ಆಗಿದೆ. ಅಲಕ್ಷಿಸುವುದೆಂದರೆ
ಅಗೌರವಿಸುವುದೇ ಆಗಿರುತ್ತದೆ. ಕಲೆಯನ್ನು ಅಗೌರವಿಸುವಾಗ ಕಲಾವಿದ ಕಲವಿದಾನಗುವುದಕ್ಕೆ ಸಾಧ್ಯವೇ?
ಕಪಟ ನಾಟಕ ರಂಗ ಎಂದು ಅಭಿನಯಿಸಿ
ತೋರಿಸುವಲ್ಲಿನ ಕಾಳಜಿ ಉಳಿದ ಭಾಗಗಳಲ್ಲಿ ಇರುವುದಿಲ್ಲ. ಇಲ್ಲಿ ಹೀಗೆ ಹಾಡಬೇಕು ಎಂದು ಭಾಗವತ
ನಿರ್ದೇಶಿಸಲ್ಪಟ್ಟಿದ್ದರೆ, ವೇಷಧಾರಿ ಹೀಗೆ ನಲಿಯಬೇಕು ಎಂದು ಬಹಳಷ್ಟು ಅಭ್ಯಾಸ ಮಾಡಿರುತ್ತಾನೆ. ಭಾಗವತನ “ ರಂಗಾ.....’ ಅಲಾಪನೆಗೆ ಕೊಳಲ ಕೃಷ್ಣನ ಭಂಗಿಯನ್ನು
ನೀಡಿ ಒಂದಷ್ಟು ಕುಣಿಯುತ್ತಾನೆ. ಆದರೆ ಈ ವಿಡಿಯೋ ದೃಶ್ಯ ನೋಡುತ್ತಿದ್ದಂತೆ ಗೊತ್ತಾಗಿಬಿಡುತ್ತದೆ
ಇದು ಎಲ್ಲಿಯೋ ಕಂಡ ದೃಶ್ಯವಾಗಿರುತ್ತದೆ. ಮುಂದೇ ಆತ ಹೇಗೆ ಕುಣಿಯುತ್ತಾನೆ ಎಂದು ಕ್ಷಣ
ಮಾತ್ರದಲ್ಲೇ ನೀವು ಊಹಿಸಬಲ್ಲಿರಿ. ಯಾಕೆಂದರೆ ಆದೃಶ್ಯಗಳನ್ನು ಹಿರಿಯ ಕಲಾವಿದರು
ಅಭಿನಯಿಸುವುದನ್ನು ಎವೆಯಿಕ್ಕದೇ ನೀವು ನೋಡಿರುತ್ತೀರಿ. ಇಲ್ಲೂ ಅದನ್ನೇ ಕಂಡಮೇಲೆ ಈ ಕಾಗೆ
ಕುಣಿತದಲ್ಲಿ ಸ್ವಾರಸ್ಯ ಉಳಿಯುವುದಿಲ್ಲ. ಉಳಿಯುವುದೊಂದೆ ಈತ ಅದು ಹೇಗೆ ಅನುಕರಿಸುತ್ತಾನೆ
ಎಂಬುದಷ್ಟೇ. ನವಿಲನ್ನು ಅನುಕರಿಸಿದ ಕಾಗೆಯ ನೆನಪಾದರೆ ಅಚ್ಚರಿಯಿಲ್ಲ. ಯಾಕಂದರೆ ಹಿರಿಯ ಕಲಾವಿದರ
ಸುಂದರ ಕೌಶಲವನ್ನು ಇಲ್ಲಿ ಯಥಾವತ್ ಅನುಕರಿಸಿ ಮಿಮಿಕ್ರಿ ಮಾಡಿ ಭಟ್ಟಿ ಇಳಿಸಲಾಗುತ್ತದೆ. ಅನುಕರಣೆಯೂ
ಒಂದು ಕಲೆಯಂತೆ. ಹಾಗಾದರೆ ಅನುಕರಣೆಯನ್ನು ತೋರುವುದು ಯಕ್ಷಗಾನವೇ? ಇದು ಕೇವಲ ಒಂದು ಪ್ರಸಂಗಕ್ಕೆ
ಒಂದು ಪಾತ್ರಕ್ಕೆ ಸೀಮಿತವಾಗಿಲ್ಲ. ಬಹಳಷ್ಟು ಪಾತ್ರಗಳು ಯಕ್ಷಗಾನದಲ್ಲಿ ಕೇವಲ ಅನುಕರಣೆಯಾಗಿ
ಬಳಕೆಯಾಗುತ್ತದೆ. ಅಸಲೀ ನಾಯಿ ಬೊಗಳುವಾಗ ಯಾರೂ ಚಪ್ಪಾಳೆ ತಟ್ಟುವುದಿಲ್ಲ. ಬದಲಿಗೆ ಮನುಷ್ಯನಾಯಿಯಂತೆ
ಬೊಗಳುವಾಗ ಚಪ್ಪಾಳೆ ತಟ್ಟುತ್ತಾರೆ. ಮೂಲ ರೂಪದಲ್ಲಿರುವ ಕಲೆಗೆ ಗಮನವೇ ಇರುವುದಿಲ್ಲ. ಆದರೆ ನಕಲೀ
ಅನುಕರಣೆಗೆ ತಲೆದೂಗುತ್ತಾರೆ. ಯಕ್ಷಗಾನ ಭ್ರಾಮಕ ಕಲೆ. ಇದರಿಂದ ಮತ್ತಷ್ಟು ಭ್ರಮಾಧೀನರಾಗುವಾಗ
ನೈಜತೆ ಹರಣವಾಗುತ್ತದೆ.
ಹೆಸರಾಂತ ಕಲಾವಿದ ಆರೋಗ್ಯ ಸರಿ
ಇಲ್ಲದೇಯೋ ಕೈಕಾಲು ಬೇನೆಯಿಂದಲೋ ಒಂದು ದಿನ ಒಂದಿಷ್ಟು ನಾಟ್ಯ ಬದಲಾಯಿಸಿ ಒಟ್ಟು
ಭಾವವೆತ್ಯಾಸವಾಗದೆ ಕುಣಿಯುತ್ತಾನೆ. ಅದರಲ್ಲಿ ಏಳುವ ಯಾವುದೇ ಪ್ರಶ್ನೆಗೂ ಆತ ಉತ್ತರವನ್ನೋ
ಸ್ಪಷ್ಟೀಕರಣವನ್ನೋ ನೀಡುವುದಕ್ಕೆ ಸಮರ್ಥನಿದ್ದಾನೆ. ಯಾಕಂದರೆ ಯಕ್ಷಗಾನದ ಸಂಪೂರ್ಣ ಜ್ಞಾನ
ಹೊಂದಿದ ಕಲಾವಿದನಿಗೆ ಅದೇ ರೂಪದಲ್ಲಿ ಉತ್ತರಿಸುವುದಕ್ಕೆ ಆತ ಸಮರ್ಥನಾಗಿರುತ್ತಾನೆ. ಆದರೆ ಆ
ದಿನದ ಒಂದು ಕುಣಿತ ನೋಡಿದ ಅರೆಬೆಂದ ಕಲಾವಿದ ಅದನ್ನು ಹಾಗೇ ಅನುಕರಿಸಿದರೆ ಅದರಲ್ಲಿ ಏಳುವ
ಪ್ರಶ್ನೆಗಳಿಗೆ ಆತನಲ್ಲಿ ಉತ್ತರವಿರುವುದಿಲ್ಲ. ಆತನ ಉತ್ತರ ಒಂದೇ ಇಂಥಹವರು ಹೀಗೆ ಮಾಡಿದ್ದಾರೆ.
ತಾಯಿಯ ಬಾಣಂತನದಲ್ಲಿ ಚಿಕಿತ್ಸೆಗಾಗಿ ಹಿರಿಯರು ಒಂದಿಷ್ಟು ಮದ್ಯವನ್ನು ಔಷಧಿಯಂತೆ ಕೊಡುವುದನ್ನು
ನೋಡಿದ ಮಗ ಅವರು ಹಾಗೆ ಮಾಡಿದ್ದಾರೆ ಎಂದು ತಾನು ಸಂಪೂರ್ಣ ಮದ್ಯವ್ಯಸನಿಯಾಗಿ ಕುಡುಕನಾದಂತೆ. ಯಕ್ಷಗಾನ
ಜಾನ ಪದಕಲೆ ಹಾಗಾಗಿ ಅಲ್ಲಿ ಅನುಸರಣೆ ಮುಖ್ಯವಾಗುತ್ತದೆ ಹೊರತು ಅನುಕರಣೆಯಲ್ಲ. ಅನುಸರಣೆ
ಸಾಧ್ಯವಾಗಬೇಕಾದರೆ ಅಲ್ಲಿ ಪೂರ್ಣ ಪ್ರಮಾಣದ ಶಿಷ್ಯತ್ವ ಸಾಧ್ಯವಾಗಬೇಕು.
ಒಬ್ಬ ಕಲಾವಿದ ರೂಪುಗೊಳ್ಳಬೇಕಾದರೆ
ಹಲವು ಸಂವತ್ಸರಗಳ ಪರಿಶ್ರಮವಿರುತ್ತದೆ. ಅದನ್ನು ಕೆಲವು ದಿನಗಳಲ್ಲಿ ಅನುಕರಿಸುವುದರಿಂದ ಕಲೆಗೆ
ಯಾವ ನ್ಯಾಯ ಸಲ್ಲಿಸಬಹುದು. ಬದಲಾಗಿ ಅದು ಕಲೆಯ ಅವಹೇಳನವೇ ಆಗಿಬಿಡುತ್ತದೆ. ದೂರ ಪಯಣದಲ್ಲಿ
ಭೂಮಿಮೇಲಿನ ಕಾಲ ನಡಿಗೆಯಲ್ಲಿ ವಿಶಾಲವಾದ
ಜೀವನಾನುಭವ ಸಿಗುತ್ತದೆ. ಆಕಾಶದಲ್ಲಿ ಕ್ಷಣಮಾತ್ರದಲ್ಲಿ
ಮುಗಿಸುವ ಪಯಣದಲ್ಲಿ ಸಿಗುವ ಅನುಭವ ಅತ್ಯಂತ ಸೀಮಿತ. ಅದೆಂದಿಗೂ ಭೂಮಿಯ ಮೇಲಿನ ಅನುಭವಕ್ಕೆ
ತುಲನೆಯಾಗಲಾರದು. ಇಂದಿನ ವಿದ್ಯುತ್ ಯುಗದಲ್ಲಿ ಕ್ಷಿಪ್ರವಾದ ಸಾಧನೆಗ ಗುರಿಯಷ್ಟೇ ಇರುತ್ತದೆ.
ಆಗಲೇ ಮಾಡಿ ಈಗಲೆ ಮುಕ್ಕಿಬಿಡುವ ಕ್ಷಿಪ್ರ ಆಹಾರದಂತೆ (fast food) ಎಲ್ಲವೂ ತ್ವರಿತಗತಿಯ ಆಕಾಂಕ್ಷೆಗಳು.
ಎಲ್ಲೆಂದರಲ್ಲಿ ಮೊಳಗುವ ಗಾಯತ್ರಿ
ಮಂತ್ರ, ಯಾವೂದೇ ವಸ್ತುವು ಅಮೂಲ್ಯವಾಗುವುದು ಅದು
ಶ್ರಮವಿಲ್ಲದೇ ಎಲ್ಲೆಂದರಲ್ಲಿ ಸುಲಭವಾಗಿ ಸಿಗದೇ ಇರುವಾಗ. ಎಲ್ಲವೂ ಬೇಕಾದಂತೆ ಪಡೆದು ಕೈವಶ
ಮಾಡುವ ಧಾವಂತ ನಮ್ಮದು. ಹಾಗಾಗಿ ಮಂತ್ರಗಳೇನು ಎಲ್ಲೂ ಮೊಳಗುತ್ತದೆ. ಆ ಮಂತ್ರಗಳ ಮೇಲೆ ವಿಶ್ವಾಸವಿದೆ. ಮಂತ್ರೋಚ್ಚಾರದಿಂದ ಭಗವಂತನ
ಅನುಗ್ರಹ ಗಳಿಸುವ ವಿಶ್ವಾಸವಿರುವಾಗ, ಅದೇ ಮಂತ್ರ
ಉಚ್ಚಾರಕ್ಕೆ ಪೂರಕವಾದ ಇತರ ವಿಷಯಗಳಲ್ಲಿ ವಿಶ್ವಾಸವಿಲ್ಲ.ಯಾವುದೇ ಮಂತ್ರವಾದರೂ ಅದು ಕೇವಲ
ಅಕ್ಷರಗಳ ಜೋಡಣೆಯಲ್ಲ. ಅದಕ್ಕೆ ಸ್ವರ ಪ್ರಸ್ಥಾರವಿರುತ್ತದೆ. ಶುದ್ದವಾದ ಉಚ್ಚಾರ
ಆವಶ್ಯವಿರುತ್ತದೆ. ಒಂದು ಪ್ರಾಣಾಕ್ಷರ ವೆತ್ಯಾಸದಲ್ಲಿ ವಿಸರ್ಗದ ಪ್ರಯೋಗದಲ್ಲಿ ಅದರ ಅರ್ಥವೇ
ಬದಲಾಗುತ್ತದೆ. ಅಷ್ಟು ಸೂಕ್ಷವಿಚಾರಗಳನ್ನು
ಕಲಿಯಬೇಕಾಗುತ್ತದೆ. ಇದು ಸಿದ್ದಿಸಬೇಕಾಗದರೆ ಅದಕ್ಕೆ ಸಮರ್ಥವಾದ ಗುರೂಪದೇಶವೂ ಅತ್ಯಂತ ಪ್ರಧಾನ. ಎಲ್ಲಿಯೋ ಕೇಳಿದ ಬರೆದ ಮಂತ್ರಗಳ ಪಾರಾಯಣದಲ್ಲಿ ಯಾವ ಫಲವೂ ಪ್ರಾಪ್ತಿಯಾಗುವುದಿಲ್ಲ.
ವ್ಯಾದ ವಾಲ್ಮೀಕಿಯಾಗುವುದಕ್ಕೆ ಕಾರಣವಾದ ತಾರಕ ಮಂತ್ರ ರಾಮನಾಮವೂ ಗುರೂಪದೇಶದಿಂದಲೇ
ಸಿದ್ದಿಸಿರುತ್ತದೆ. ಇಂದು ವಿಚಿತ್ರವೆಂದರೆ ಗುರು
ಉಪದೇಶದಿಂದ ಕಲಿಯುವ ಬಗ್ಗೆ ಗೌರವವಿಲ್ಲ. ಆದರೆ ಮಂತ್ರದಬಗ್ಗೆ ವಿಶ್ವಾಸವಿರುತ್ತದೆ. ಗುರು ಎಂದರೆ
ಹಿರಿದು, ಬೃಹತ್ ದೊಡ್ಡದು ಎಂದು ಅರ್ಥ. ಗುರುವಿನ ಉಪದೇಶದ ಅವಶ್ಯಕತೆ ಇಲ್ಲ ಎಂದರೆ ಹಿರಿದಾದ
ಸ್ಥಾನವೂ ಇಲ್ಲ. ಅದರ ತಾತ್ಪರ್ಯ ಸ್ವಯಂ ನಮ್ಮನ್ನು ನಾವೇ ಗುರುವಾಗಿ ಕಾಣುವುದು ಎಂದರೆ ನಮ್ಮಲ್ಲೇ
ಹಿರಿತನವನ್ನು ಆರೋಪಿಸುವುದು ಎಂದಲ್ಲವೇ? ಇದನ್ನೇ
ದುರಹಂಕಾರ, ದುರಾಭಿಮಾನ ಎನ್ನುವುದು. ಗಾಢವಾದ
ಶಿಷ್ಯ ಪರಂಪರೆ ಇಲ್ಲದಿರುವುದೇ ಇಂದಿನ ಹಲವು ಮೌಲ್ಯಗಳು ನಾಶವಾಗುವುದಕ್ಕೆ ಮೂಲ ಕಾರಣ.
ಯಕ್ಷಗಾನವೂ ಇದರಿಂದ ಹೊರತಾಗಿಲ್ಲ. ಗುರುವಿನ ಅನುಗ್ರಹದಿಂದ ವಿದ್ಯಾವಂತನಾಗಬೇಕು ಎನ್ನುವ
ಪ್ರತಿಪಾದನೆಯಲ್ಲಿ ಗುರುವಿನ ಸ್ವಾರ್ಥವನ್ನೇ ಗುರುತಿಸುವ ಶಿಷ್ಯನಿಗೆ ಆ ವಿದ್ಯೆಯ ಪೂರ್ಣ ಸಿದ್ದಿ
ಪ್ರಾಪ್ತಿ ಸಾಧ್ಯವಾಗಲಾರಾದು.
ಸಾಮಾನ್ಯಾವಾಗಿ ಎಲ್ಲದರಲ್ಲೂ ಅಸಲಿಯನ್ನೇ ಬಯಸುವುದು
ಸಹಜ. ನಕಲಿಯು ಶಾಶ್ವತವಾಗಿ ಉಳಿಯುವುದಿಲ್ಲ. ಹಾಗಾಗಿ ಅನುಕರಣೆಮಾಡಿ ನಕಲಿಯನ್ನು ತೋರಿಸುವುದು
ಕಲಾವಿದನಾದವನ ಕ್ರಿಯಾತ್ಮಕ ಬದುಕನ್ನು ನಾಶಗೊಳಿಸುತ್ತದೆ. ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ.
ಕಲೆಯಲ್ಲಿ ಸೃಜನ ಶೀಲತೆ ಅತ್ಯಂತ ಪ್ರಾಮುಖ್ಯ. ಅದು ಅನುಕರಣೆಯಲ್ಲಿ ಅರಳುವುದಿಲ್ಲ. ಇದಕ್ಕೆ
ಪರಿಪೂರ್ಣ ಅಧ್ಯಯನ ಮತ್ತು ಅವಿರತ ಪರಿಶ್ರಮ ಅತ್ಯವಶ್ಯ. ಅದನ್ನು ಮೈಗೂಡಿಸುವಲ್ಲಿ ಕಲಾವಿದನಾದವನು
ಪ್ರಾಮಾಣಿಕವಾಗಿ ವ್ಯವಹರಿಸಬೇಕಾಗಿದೆ. ಹಿರಿಯ ಕಲಾವಿದರು ಇಂದಿಗೂ ಸ್ಮೃತಿಯಲ್ಲಿ
ಜೀವಂತವಾಗಿರುವುದಾದರೆ ಅದಕ್ಕೆ ಕಾರಣ ಅವರ ಸ್ವಂತ ಅಧ್ಯಯನ ಮತ್ತು ಪರಿಶ್ರಮವೇ
ಕಾರಣವಾಗಿರುತ್ತದೆ. ಹಾಗಾಗಿ ಹಿರಿಯರನ್ನು ಆ ನಿಟ್ಟಿನಲ್ಲೇ ಅನುಕರಿಸಬೇಕೆ ಹೊರತು ಅಲ್ಪ ಕಲಿಯಿಂದ
ಅಲ್ಪ ಜ್ಞಾನವನ್ನು ಪ್ರದರ್ಶಿಸುವುದಲ್ಲ. ಇದು ಕಲೆಗೂ ಕಲಾವಿದನಿಗೂ ಮಾರಕ. ಕಲೆಯಲ್ಲಿ ಶ್ರದ್ದೆ
ಗೌರವ ಇರುವ ಕಲಾವಿದ ಎಂದಿಗೂ ತನ್ನ ನೆಲೆಯನ್ನು ಅನುಕರಣೆಯಲ್ಲಿ ಕಂಡುಕೊಳ್ಳುವುದು ಕಲೆಯನ್ನು
ಅವಗಣಿಸಿದಂತೆ.
ಈ ಲೇಖನ ಹಲವು ದಿನಗಳ ಮೊದಲೇ ಬರೆದಿದ್ದೆ. ಆದರೆ
ಕಾರಣಾಂತರದಿಂದ ಅದನ್ನು ಪ್ರಕಟಿಸಲಾಗಲಿಲ್ಲ. ವಿಪರ್ಯಾಸವೆಂದರೆ ಸಂಪಾಜೆಯ ಯಕ್ಷೋತ್ಸವದಲ್ಲಿ ನಡೆದ
ಹವ್ಯಾಸಿ ಯಕ್ಷಗಾನ ಸ್ಪರ್ಧೆಯಲ್ಲಿ ತೀರ್ಪುಗಾರರ ಅಭಿಪ್ರಾಯಗಳು ಈ ಲೇಖನದ ಆಶಯವನ್ನೇ
ಬಿಂಬಿಸುತ್ತದೆ. ಹಾಗಾಗಿ ನವಾಗತರಾಗಿ ಬರುವ ಕಲಾವಿದರು ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.
No comments:
Post a Comment