ಯಕ್ಷಗಾನ ಕಲಾವಿದ ಅನ್ಯ ಕಲೆಗಳ ದಾಸ್ಯಕ್ಕೆ ಒಳಗಾಗಿರುವನೆ? ಅಥವಾ
ಯಕ್ಷಗಾನ ದಾಸ್ಯಕ್ಕೆ ತಳ್ಳಲ್ಪಡುತ್ತಿದೆಯೇ? ಹೀಗೊಂದು ಭಾವನೆ ಅನುಮಾನ ಮೂಡುತ್ತದೆ.
ಕೇಳುವುದಕ್ಕೆ ನೋವಾದರೂ ಇದು ವಾಸ್ತವ ಎಂದನಿಸುತ್ತದೆ. ಇತ್ತೀಚೆಗೆ ಯಕ್ಷಗಾನ ಚಿಂತಕ ಡಾ| ಶ್ರೀ ರಾಘವ ನಂಬಿಯಾರರ ಸಂದರ್ಶನಗಳನ್ನು ನೋಡುವಾಗ
ಅನಿಸಿದ್ದು. ಹೀಗೆ ಅನ್ನಿಸುವುದಿದ್ದರೆ ಅದು ವಿಷಾದನೀಯ ಎಂದೇ ಹೇಳಬೇಕಾಗುತ್ತದೆ. ನಂಬಿಯಾರ ಪ್ರತಿಪಾದನೆಗಳ ಸತ್ಯದರ್ಶನವನ್ನು ಕೇಳುವಾಗ
ದ್ಯೂತದಲ್ಲಿ ಸೋತು ತನ್ನದೆಲ್ಲವನ್ನೂ ಕಳೆದುಕೊಂಡ
ನಳ ಮಹಾರಾಜನಂತೆ ಯಾವುದೋ ಗ್ರಹಬಾಧೆ ಶುರುವಾದ ಹಾಗೆ ಅನ್ನಿಸುತ್ತದೆ. ಯಾಕೆಂದರೆ
ಯಕ್ಷಗಾನ ಚಕ್ರವರ್ತಿ ನಳ ಮಹಾರಾಜನಂತೆ ಸರ್ವ ಸುಂದರ ಕಲೆ. ಇಂತಹ ಕಲೆಗೆ ಆಮದಾಗುತ್ತಿರುವ
ಸರಕುಗಳನ್ನು ಕಂಡಾಗ ನಿಜಕ್ಕೂ ಯಕ್ಷಗಾನ ಬಡವಾಗಿದೆ ಎಂದನಿಸುವುದಲ್ಲ. ನಳ ಮಹಾರಾಜನ ಅವಸ್ಥೆಯೇ
ಬಂದೊದಗಿದಂತೆ ಅನ್ನಿಸುತ್ತದೆ.
ವಾಸ್ತವದಲ್ಲಿ
ಯಕ್ಷಗಾನ ಕಲೆಯ ಬಡತನವಲ್ಲ. ಕಲೆಯ ಬೆಗೆಗಿನ ಕೀಳರಿಮೆಯೇ ಇದನ್ನು ನಿರ್ಣಯಿಸುತ್ತದೆ. ಇಲ್ಲಿ
ದಾಸ್ಯ ಎಂದು ತೀಕ್ಷ್ಣವಾಗಿ ಹೇಳುವುದಕ್ಕೆ ಕಾರಣವಿದೆ. ಇದೇ ಸಂದರ್ಶನದಲ್ಲಿ ನಂಬಿಯಾರರು
ಸ್ವಾತಂತ್ರ ಸಮರ ಮತ್ತದರ ಮಹತ್ವದ ಕುರಿತಾಗಿ ಉಲ್ಲೇಖಿಸುತ್ತಾರೆ. ಒಂದು ಸನಾತನ ಜೀವನ ಕ್ರಮವಿದ್ದ
ಭಾರತದಲ್ಲಿ ಆಂಗ್ಲ ಧಾಳಿಯಿಂದ ಆ ಪರಂಪರೆ ಹೇಗೆ ಭಾಧೆಗೆ ಒಳಗಾಯಿತು. ಇದರಿಂದ ಸನಾತನ
ಪರಂಪರೆಯನ್ನು ಒತ್ತೆ ಇಟ್ಟು ದಾಸ್ಯದ ಜೀವನ ನಡೆಸಬೇಕಾಯಿತು. ಇದುವೇ ಸ್ವಾತಂತ್ರ್ಯ ಸಮರದ ಮೂಲ ಹೇತು.
ಇಂದು ಆಗುತ್ತಿರುವುದು ಅದೇ ಅಲ್ಲವೆ? ಸತ್ಯ ಸಮತ್ವ ಸ್ವಾತಂತ್ರ್ಯ ಇವು ಮೂರೂ ಪರಸ್ಪರ
ಸಂಬಂಧಿಗಳು. ಇಂದು ಪರಂಪರೆಯ ಸತ್ಯವನ್ನು ಬಿಟ್ಟು ಸಮತ್ವವನ್ನು ಬಿಟ್ಟು ಅದೇ ದಾಸ್ಯದ ಸುಳಿಗೆ
ಸಿಲುಕುತ್ತಿದ್ದೇವೆ.
ಯಕ್ಷಗಾನದ ಸಾಮಾನ್ಯ ಪ್ರೇಕ್ಷಕ ಲಘುವಾಗಿ ಅವಲೋಕನ ಮಾಡಿದರೂ ಯಕ್ಷಗಾನ ಇತ್ತೀಚೆಗಿನ ದಶಕಗಳಲ್ಲಿ
ಬದಲಾದ ಪರಿಯನ್ನು ಅರ್ಥೈಸಿಕೊಳ್ಳಬಹುದು. ಆದರೂ ಹೀಗೆಯೇ
ಬದಲಾಗಿದೆ ಎಂದು ನಿರ್ಣಯಿಸುವುದು ಕಷ್ಟವಾಗುತ್ತದೆ. ಮೇಲಿಂದ ಮೇಲೆ ನೋಡಿದರೆ ಬದಲಾವಣೆ
ಅಷ್ಟೇನೂ ಗಂಭೀರವಲ್ಲ ಅಂತನ್ನಿಸಿದರೂ ಒಂದು ಕೊರತೆ ಅನುಭವಕ್ಕೆ ಬರುತ್ತದೆ. ಆ ಸೆಳೆತದ ಕೊರತೆ ಏನೆಂದು ಗುರುತಿಸುವುದೇ
ಕಷ್ಟವಾಗುತ್ತದೆ. ಅದೇ ಕಾರಣಕ್ಕೆ ನಂಬಿಯಾರರ ಮಾತುಕತೆಯನ್ನು ಸತ್ಯದರ್ಶನ ಅಂತ
ಉಲ್ಲೇಖಿಸುತ್ತಿರುವುದು. ಬಹಳ ಸರಳವಾಗಿ ಅಷ್ಟೇ ಮಾರ್ಮಿಕವಾಗಿ ವಿವರಿಸಿದ್ದಾರೆ. ಮಾರ್ಮಿಕತೆ ಇರುವುದೇ ಅಲ್ಲಿ. ಕಳೆದುಕೊಂಡದ್ದು ಏನು ?
ಕಳೆದುಕೊಂಡ ಆಯಾಮ ಅದೆಂತಹುದು? ಇದು ಅರ್ಥವಾಗಬೇಕಾದರೆ ನಂಬಿಯಾರರ ವಿಚಾರಗಳನ್ನು ಅವರದೇ
ಮಾತುಗಳಲ್ಲಿ ಕೇಳಬೇಕು. ನಮ್ಮ ಅನುಭವದ ಕಾರಣದ ರೂಪ ಹೊಳಹು ತಿಳಿಯಲು ನಂಬಿಯಾರರ ವಿಚಾರಗಳನ್ನು
ತಿಳಿದರೆ ಸಾಕು. ಮುಖ್ಯವಾಗಿ ಇದು ನನ್ನ ಆಕರ್ಷಿಸಿದ ವಿಷಯಗಳು. ಅಲ್ಲಿಂದ ನಂತರ ನಾನೇನು
ಅನುಭವಿಸುತ್ತಿದ್ದೇನೆ? ಅದರ ಕಾರಣ ಏನು ಎಂದು ಅರಿವಿಗೆ ಬಂದದ್ದು ಇದನ್ನು ಕೇಳಿದಾಗಲೇ.
ಯಕ್ಷಗಾನದ ಪೂರ್ಣಾನುಭವ ಸಾಧ್ಯವಾಗುವುದಿಲ್ಲ ಯಾಕೆ? ಇದು ಸಾಮಾನ್ಯ ಪ್ರೇಕ್ಷಕನಾದ ನನಗೆ ತಕ್ಕ
ಮಟ್ಟಿಗೆ ಮನವರಿಕೆಯಾಯಿತು.
ಎರಡು ಭಾಗಗಳಲ್ಲಿರುವ ಸಂದರ್ಶನ ಹೇಳುವುದಕ್ಕಿಂತಲೂ ಮಾತು ಕತೆ
ಎನ್ನುವುದೇ ಸೂಕ್ತ. ಅದಕ್ಕಿಂತ ಮೇಲೆ ಇದನ್ನು ನಂಬಿಯಾರರ ಪ್ರವಚನ ಎನ್ನಬಹುದು. ಮೊದಲ ಹಂತದಲ್ಲಿ
ಯಕ್ಷಗಾನ ಅಂದರೆ ಏನು? ಯಕ್ಷಗಾನ ಹಿಮ್ಮೇಳದ ಬಗ್ಗೆ ಹೇಳುತ್ತಾ ಪದ ಅಂದರೆ ಹಾಡುಗಾರಿಕೆ ಅದು ಹೇಗಿರಬೇಕು? ಪದಗಳು ರಾಗ ಮತ್ತು ತಾಳಕ್ಕೆ ನಿಬದ್ದವಾಗಿರುತ್ತವೆ.
ಅವುಗಳು ಛಂದೋಬದ್ದವಾಗಿರುತ್ತವೆ. ಹೀಗೆ ಇದ್ದಾಗ ಅವುಗಳು ಅರ್ಥವನ್ನು ಭಾವವನ್ನೂ
ಉಳಿಸಿಕೊಳ್ಳುತ್ತವೆ. ಪದದ ಮೂಲ ಛಂದಸ್ಸು ಏನಿದೆ ಅದರಲ್ಲೇ ಭಾಗವತ ಹಾಡುವಂತಾಗಬೇಕು. ಇಂದು ಅದು
ಬದಲಾವಣೆಯಗುವುದಕ್ಕೆ ಕಾರಣ ಬದಲಾಗುತ್ತಿರುವ ಗುರು ಪರಂಪರೆ. ಒಂದು ಶುದ್ದ ಪರಂಪರೆಯಲ್ಲಿ
ಮೌಖಿಕವಾಗಿ ಇದು ಶಿಷ್ಯನಿಗೆ ರವಾನಿಸಲ್ಪಟ್ಟರೆ ಈಗ ಎಲ್ಲವೂ ಪುಸ್ತಕ ಅಥವಾ ಬರಹ
ರೂಪದಲ್ಲಿರುತ್ತವೆ. ಇದರಿಂದ ಅದರಲ್ಲಿ ಶ್ರದ್ದೆ ಪ್ರಾಮಾಣಿಕತೆಯ ಮಟ್ಟ ಕುಸಿಯುತ್ತಿದೆ. ಇಂದು
ಯಕ್ಷಗಾನ ಪದಗಳನ್ನು ಹಾಡುವರೀತಿ ಅವುಗಳನ್ನು ಬಳಸಿಕೊಳ್ಳುವ ರೀತಿ ನೋಡಿದರೆ ಈ ಮಾತು ಎಷ್ಟು
ಸತ್ಯವಾದದ್ದು ಎಂದು ಮನವರಿಕೆಯಾಗುತ್ತದೆ. ಹಾಗೆ ಮನವರಿಕೆಯಾಗಬೇಕಾದರೆ ಹಳೆಯ ಪರಂಪರೆ ಹೇಗಿತ್ತು
ಎಂದು ತಿಳಿದಿರಬೇಡವೇ? ಅದಕ್ಕೆ ಕಾರಣ ಸಂಪನ್ಮೂಲದ ಕೊರತೆ. ಇಂದು ಯಕ್ಷಗಾನ ಸಂಪನ್ಮೂಲದ
ಕೊರತೆಯನ್ನು ದಯನೀಯವಾಗಿ ಅನುಭವಿಸುತ್ತಿದೆ. ಹೀಗಾಗಿಯೇ ಮೇಲೆ ಹೇಳಿದ ದಾಸ್ಯ ಎಂಬುದನ್ನು ಅರ್ಥೈಸುವುದಕ್ಕೆ
ಸಾಧ್ಯವಾಗಬಹುದು.
ಈ ಸಂವಾದದಲ್ಲಿ ಮನದಾಳದ
ಮಾತುಗಳಳನ್ನು ಹೇಳಿದರು ಅದು ಯಕ್ಷಗಾನದ ಅಂತರಂಗದ ಮಾತಿನಂತೆ ಭಾಸವಾಗುತ್ತದೆ. ಅದಕ್ಕೆ ಕಾರಣ
ನಂಬಿಯಾರರು ಯಕ್ಷಗಾನದ ಬಗ್ಗೆ ಇರಿಸಿದ ಆಸಕ್ತಿ ಮಾತ್ರವಲ್ಲ ಅದರ ಅಂಗೋಪಾಂಗಗಳ ಸಮಗ್ರ ಅಧ್ಯಯನ ಮತ್ತು ಸಂಶೋಧನೆಯ ಧ್ವನಿ ಅಲ್ಲಿದೆ
.
ಯಕ್ಷಗಾನ ಪದಗಳ ಛಂದಸ್ಸು ರಾಗ
ತಾಳಗಳು ಭಾಗವತನಂತೆ ಪ್ರಸಂಗ ಕರ್ತನಿಗೂ ಅದರ ಪರಿಜ್ಞಾನವಿರಬೇಕಾದದ್ದು ಅನಿವಾರ್ಯ. ಆದರೆ ಇಂದು
ಅದಾವುದೂ ಇಬ್ಬರ ನಿಯಂತ್ರಣದಲ್ಲೂ ಇರುವುದಿಲ್ಲ. ಒಂದು ಪದ ಹಾಡಿದ ರೀತಿ ಬಳಸಿಕೊಂಡ ರೀತಿ
ಜನಪ್ರಿಯವಾದರೆ ಅದು ಇನ್ನಾವುದೋ ಪ್ರಸಂಗಕ್ಕೆ ಯಥಾವತ್ತಾಗಿ ಬಳಕೆಯಾಗುತ್ತದೆ. ಇದಕ್ಕೊಂದು
ಉದಾಹರಣೆ ದೇವೆಂದ್ರನ ಒಡ್ಡೋಲಗ. ಪ್ರಸಂಗ ಯಾವುದೇ ಆಗಿರಲಿ ದೇವೇಂದ್ರನ ಒಡ್ಡೋಲಗಕ್ಕಿರುವ ಪದ
ಅದೊಂದೇ.ಯಾಕೆಂದರೆ ಭಾಗವತನಿಗೆ ಅದರ ಜ್ಞಾನ ಇದೆಯೋ ಅಲ್ಲ ಕಲಾವಿದ ತಂತ್ರಗಳೋ ಅಂತೂ ಇಂತದ್ದೊಂದು
ಪರಂಪರೆ ಬೆಳೆದು ಅದೇ ಪರಂಪರೆಯಾಗಿಹೋಗಿದೆ. ಈ ಏಕತಾನತೆಯಿಂದಲೋ ಏನೋ ಇಂದು ಅಸುರೀ ಪಾತ್ರಗಳು
ಜನಪ್ರಿಯವಾಗಿ ವಿಂಜ್ರಭಿಸಲ್ಪಡುವುದು.
ಯಕ್ಷಗಾನ ಹಾಡುಗಾರಿಕೆ ಅಥವಾ
ಭಾಗವತಿಕೆ ಎಂದು ಹೇಳಿದಾಕ್ಷಣ ಇಂದು ಗಮನಕ್ಕೆ ಬರುವುದು. ಸಂಗೀತ. ವಿವಿಧ ರಾಗ ತಾಳಗಳ ತಂತ್ರಗಳು.
ಆದರೆ ಯಕ್ಷಗಾನದಲ್ಲಿ ಕಛೇರಿಯ ಸಂಗೀತ ಅವಶ್ಯಕತೆಯಿಲ್ಲ. ಅಲ್ಲಿರುವುದು ಕೇವಲ ರಂಗ ಸಂಗೀತ. ಸಂಗೀತಕ್ಕೊಸ್ಕರ ತಾಳವಲ್ಲ.
ತಾಳದೊಂದಿಗೆ ಸಂಗೀತವಿರಬೇಕು. ಯಾಕೆಂದರೆ ತಾಳದೊಂದಿಗೆ ಛಂದಸ್ಸು ಇರುತ್ತದೆ. ಛಂದಸ್ಸನ್ನು
ಬೆಸೆದುಕೊಂಡು ಭಾವವಿರುತ್ತದೆ. ಹಾಗಾಗಿ ಸಂಗೀತ ಪ್ರಧಾನವಾದಾಗ ಇದೆಲ್ಲ ಮರೆಯಾಗಿ
ಅಭಾಸವಾಗುತ್ತದೆ. ರಂಗ ನಿಯಮದ ವಿಡಂಬನೆಯಾಗುತ್ತದೆ. ಭಾಗವತ ಸಂಗೀತದ ಪ್ರಸ್ತಾರದ ಬಗ್ಗೆ
ಯೋಚಿಸುತ್ತಾನೆ. ಛಂದಸ್ಸಿನ ಬಗ್ಗೆ ಯೋಚಿಸುವುದಿಲ್ಲ. ಯಾವುದೇ ಸಂಗೀತದಲ್ಲಿ ಸಾಹಿತ್ಯಕ್ಕೆ
ಪ್ರಾಧಾನ್ಯತೆ ಕಡಿಮೆ. ರಾಗ ಲಯ ಪ್ರಸ್ತಾರ ಇದೇ ಪ್ರಧಾನವಾಗುತ್ತದೆ. ಯಕ್ಷಗಾನ ಭಾಗವತಿಕೆಯ
ಜೀವಾಳವಿರುವುದೇ ರಂಗ ಸಂಗೀತ ಕ್ರಮದಲ್ಲಿ. ಅಲ್ಲಿ ಸಾಹಿತ್ಯ, ಛಂದಸ್ಸು ಪ್ರಧಾನವಾಗುತ್ತದೆ.
ಯಕ್ಷಗಾನ ಶಾಸ್ತ್ರಿಯ ಕಲೆಯಲ್ಲ. ಹೀಗೆ ಹೇಳಬಹುದು. ಅದರ ಸತ್ಯಾಸತ್ಯತೆಯ ವಿಶ್ಲೇಷಣೆಗಿಂತ ಯಕ್ಷಗಾನ ಪದಗಳ ರಾಗ ತಾಳ ಛಂದಸ್ಸು ಅವುಗಳು ಬೆಳೆದು ಬಂದರೀತಿ ಶುದ್ದ ಶಾಸ್ತ್ರೀಯತೆಯ ಅನುಭವವನ್ನು ಕೊಡುವುದಿಲ್ಲವೇ? ಇಲ್ಲಿ ಯಕ್ಷಗಾನ ಶೈಲಿಯಲ್ಲಿ ಬಳಕೆಯಾಗುವ ಸಂಗೀತದ ರಾಗಗಳು ನರ್ತನ ಶೈಲಿಗಳು ಯಕ್ಷಗಾನಕ್ಕಾಗುವಾಗ ಬೇರೆಯೇ ರೂಪವನ್ನು ಪಡೆದುಕೊಂಡಿದೆ.
ನಂಬಿಯಾರರು ಹಲವು ವಿಚಾರಗಳನ್ನು ಸರಳವಾಗಿ ವಿವರಿಸುತ್ತಾ ಚಿಂತನೆಯ ಹೊಸ ಬಿತ್ತನೆಯನ್ನು
ಬಿತ್ತುತ್ತಾರೆ ಎಂದನಿಸುತ್ತದೆ. ರಾಮಾಯಣದ ಕತ ತಿಳಿದಿದ್ದರೂ ಯಕ್ಷಗಾನವನ್ನೋ ನಾಟಕವನ್ನೋ ನೋಡುವ
ಕುತೂಹಲವೇಕೆ? ಅಲ್ಲಿ ಕಥೆಯನ್ನು ತಿಳಿಯುವ ಉದ್ದೇಶವಿರುವುದಿಲ್ಲ. ಕಾದಂಬರಿಯನ್ನೋ ಕಥೆಯನ್ನೋ
ಸಿನಿಮಾ ಅಥವಾ ನಾಟಕವಾಗಿ ರಂಗದ ಮೇಲೆ ತರುವಾಗ ಮೂಲ ಕಥೆಯಂತೆ ಅಲ್ಲಿ ಚಿತ್ರಿತವಾಗುತ್ತದೆಯೇ?
ಇಲ್ಲ. ರಂಗಕ್ಕನುಸಾರವಾಗಿ ಅಲ್ಲಿ ಬದಲಾವಣೆ ಕಾಣಬೇಕಾಗುತ್ತದೆ. ಅಲ್ಲಿ ಅಸ್ವಾದಿಸಬಲ್ಲ
ರಸಾನುಭವವೇ ಪ್ರಧಾನವಾಗುತ್ತದೆ. ಕಥೆ ಓದುವಾಗ ಆಗುವ ರಸೋತ್ಪತ್ತಿಗೂ ಕಥೆ ರಂಗದ ಮೇಲೆ ಕಾಣುವಾಗ
ಆಗುವ ರಸೋತ್ಪತ್ತಿಗೂ ವೆತ್ಯಾಸ ಇರುತ್ತದೆ. ಇದು ಒಂದು ಕಲೆ ಮತ್ತು ಅದರ ಆಸ್ವಾದನೆ ಹೇಗಿರುತ್ತದೆ
ಎಂಬುದರ ಅಧ್ಯಯನದ ವಿಶ್ಲೇಶಣೆ.
ನಂಬಿಯಾರರ ವಿಚಾರಧಾರೆಗಳನ್ನು ಕೇಳಿದಾಗ ಹಲವು ವಿಚಾರಗಳಲ್ಲಿ ಅವರು ಕಲೆಯನ್ನು ಕಂಡುಕೊಂಡ
ರೀತಿ ಅದರ ಆಳವಾದ ಜ್ಜಾನ ಅರಿವಿಗೆ ಬರುತ್ತದೆ. ಪ್ರತಿಯೊಂದು ವಿಚಾರಗಳಿಗೂ ತಾತ್ವಿಕವಾದ
ತರ್ಕಬದ್ಧ ವಿವರಣೆಯನ್ನು ನೀಡುತ್ತಾರೆ. ಯಕ್ಷಗಾನದಲ್ಲಿ ಕೇವಲ ಪರಂಪರೆ ಎಂದು ಹೇಳಿ ಅಡ್ಡಗೋಡೆಯ
ದೀಪ ಉರಿಸುವುದಲ್ಲ. ಪರಂಪರೆಯಲ್ಲಿ ಅದು ಯಾಕಾಗಿ ಬಳಕೆ ಬಂತು? ಅದರ ನಿಜವಾದ ಕಾರಣಗಳೇನು? ಇದನ್ನೆಲ್ಲ ವಿವರಿಸುವಾಗ
ಯಕ್ಷಗಾನವನ್ನು ನಾವು ಕಾಣಬೇಕಾದ ದೃಷ್ಟಿಕೋನವೇ ಬದಲಾಗಿಬಿಡುತ್ತದೆ. ಅದು ಬದಲಾಗರ್ರ್ಬೇಕಾದ
ಅನಿವಾರ್ಯತೆಯೂ ಇದೆ. ಯಾಕೆಂದರೆ ಇಲ್ಲಿ ಪ್ರತಿಪಾದಿತವಾಗುವ ವಿಚಾರಗಳು ಅಷ್ಟೂ ಆಳವಾದ
ಅಧ್ಯಯನದಿಂದ ಹುಟ್ಟಿದವುಗಳು.
ಯಕ್ಷಗಾನದಲ್ಲಿ ಹಲವು ವೇಷಗಳು, ಅದು ದೇವೆಂದ್ರನೋ ಅರ್ಜುನನೋ ರಾಮನೋ ಇನ್ನಾವುದೆ ಪೌರಾಣಿಕ
ಪಾತ್ರಗಳಿಗೆ ಒಂದು ಚೌಕಟ್ಟು ಇರುತ್ತದೆ. ಅದರ ಪ್ರವೇಶ ಕುಣಿತ ಎಲ್ಲವೂ ಒಂದು ನಿಯಮದ
ಆಧೀನದಲ್ಲಿರುತ್ತದೆ. ನಿಯಮಮದಂತೆ ರಂಗವೇರಿ ನಿಯಮವನ್ನು ಅನುಸರಿಸಿದಾಗ ಮಾತ್ರ ಅದರ ಪಾತ್ರೋಚಿತ
ಆಶಯ ಯಕ್ಷಗಾನದೊಂದಿಗೆ ಅದು ವ್ಯಕ್ತವಾಗುತ್ತದೆ.
ಅದನ್ನು ಬೇರೆ ಕಲಾ ರೂಪದಲ್ಲಿ ತೋರಿಸುವುದಕ್ಕೆ ಹೋದರೆ ಭರತ ನಾಟ್ಯವೋ ನಾಟಕವೋ ಮತ್ತೊಂದೋ
ಮಗುದೊಂದೊ ರೂಪದಲ್ಲಿ ತೋರುವುದಕ್ಕೆ ಹೋದಾಗ ರಂಗದಲ್ಲೂ ಅದು ಯಕ್ಷಗಾನದಿಂದ ಪ್ರತ್ಯೇಕವಾಗಿ
ಉಳಿಯುತ್ತದೆ. ಅದು ಯಕ್ಷಗಾನವಾಗುವುದಿಲ್ಲ. ಪರಂಪರೆ ಸಹಾಯಕ್ಕೆ ಬರುವುದು ಇಲ್ಲೇ. ಪರಂಪರೆಯ ಆಧಾರವಿದ್ದಾಗ ವೇಷವಾಗಲೀ ಯಕ್ಷಗಾನವೇ ಆಗಲಿ
ತೋರಿಸುವುದಕ್ಕೆ ಸುಲಭವಾಗುತ್ತದೆ. ಪರಂಪರೆ ಇರುವುದು ಕಲೆಯನ್ನು ಸುಲಭವಾಗಿಸುವುದಕ್ಕೆ. ಇದು
ಅನುಭವಕ್ಕೆ ಬರೆಬೇಕಾದರೆ ಯಕ್ಷಗಾನವನ್ನು ತೀರಾ ಅಪರಿಚಿತ ಜಾಗದಲ್ಲಿ ಪ್ರದರ್ಶಿಸಬೇಕು. ಅಲ್ಲಿ
ಯಕ್ಷಗಾನದೊಂದಿಗೆ ನಾಟಕವನ್ನೋ ಇನ್ನಾವುದನ್ನೋ ಮಿಶ್ರ ಮಾಡಿ ತೋರಿಸಿದಾಗ ಪ್ರೇಕ್ಷಕ ಪರಸ್ಪರ ಹೋಲಿಸುವುದಕ್ಕೆ ಆಸ್ಪದವಿರುತ್ತದೆ. ಆ
ಹೋಲಿಕೆಯಲ್ಲಿ ಮೂಲ ಯಕ್ಷಗಾನದ ಅನುಭವ ಇಲ್ಲದೇ
ಇರುವುದರಿಂದ ಯಕ್ಷಗಾನಕ್ಕೆ ಇದರಿಂದ ಯಾವ ಪ್ರಯೋಜನವೂ ಇಲ್ಲ ಬದಲಾಗಿ ಹಾನಿಯೇ ಆಗುತ್ತದೆ. ಅದೇ
ಜಾಗದಲ್ಲಿ ಕೇವಲ ಪರಂಪರೆಯ ಶುದ್ದ ಯಕ್ಷಗಾನವನ್ನು ಮಾತ್ರ ತೋರಿಸಿದಾಗ ಆತನಿಗೆ ಹೋಲಿಸುವುದಕ್ಕೆ
ಅಲ್ಲಿ ಸುಲಭವಾಗುವುದಿಲ್ಲ. ಆತ ನೋಡುವ ದೃಷ್ಟಿಕೋನವೇ ಬದಲಾಗಿಬಿಡುತ್ತದೆ. ಮತ್ತು ಯಕ್ಷಗಾನದ
ಬಗೆಗಿನ ಕೌತುಕ ಜಾಗ್ರತವಾಗುತ್ತದೆ. ಯಕ್ಷಗಾನಕ್ಕೂ ಉಳಿದ ರಂಗಗಳಿಗೂ ವೆತ್ಯಾಸ ತಿಳಿಯದವರು
ರಂಗಸ್ಥಳವನ್ನು ಏರುವುದೇ ಅಭಾಸಕರ. ಹೀಗಾಗಿಯೇ ಯಕ್ಷಗಾನಕ್ಕೆ ಸಲ್ಲಬೇಕಾದ ಮೌಲ್ಯ ಸಲ್ಲುವುದಿಲ್ಲ.
ಕೇವಲ ಕರ್ನಾಟಕದ ರಾಜ್ಯ ಕಲೆಯಾಗಬೇಕು ಎನ್ನುವ ಕೂಗು ಮೊಳಗಿಸಿದರೆ ಯಕ್ಷಗಾನ
ಅಭಿಮಾನವಾಗುವುದಿಲ್ಲ. ಕಥಕ್ಕಳಿಗೆ ಕೇರಳದಲ್ಲಿ ರಾಜ ಮಾನ್ಯತೆ ಸಿಗಬೇಕಾದರೆ ಕಥಕ್ಕಳಿಯ ಆ
ಗುಣಗಳನ್ನು ನಿಯಮಗಳ ಪಾಲನೆಯೆ ಕಾರಣ. ಇಲ್ಲಿ ಅದಾವ ನಿಯಮವೂ ಇಲ್ಲ. ಅದರ ಬಗ್ಗೆ ಗಂಭೀರ ಚಿಂತನೆಯೂ
ಇಲ್ಲ ಗೌರವವೂ ಇಲ್ಲ.
ಎರಡನೇ ಭಾಗದ ಸಂವಾದದಲ್ಲಿ ಯಕ್ಷಗಾನ ಬದಲಾದ ಬಗ್ಗೆ
ಹೆಚ್ಚು ಗಹನವಾದ ವಿಚಾರಗಳಿವೆ. ಈಗ ಹಲವು ಬದಲಾವಣೆಗಳು ಆವಿಷ್ಕಾರಗಳು ಆಗಿವೆ ಮತ್ತು ಆಗುತ್ತಿವೆ.
ಆದರೆ ಬದಲಾವಣೆ ಮಾಡುವವರಿಗೆ ಬದಲಾವಣೆ ಬಯಸುವವರಿ ಯಕ್ಷಗಾನದ ಪ್ರಾಚೀನ ಮೌಲ್ಯದ ಅರಿವಿಲ್ಲ. ಅಜ್ಜ
ಸಾಕಿದ ಆಲದ ಮರದ ಕಾರಣವನ್ನೇ ಬದಲಾವಣೆ ಬಯಸುವವರು ಮುಂದಿಡುತ್ತಾರೆ. ಆದರೆ ಇದು ತಮ್ಮ
ಸ್ವಾರ್ಥಕ್ಕೆ ತೆವಲಿಗೆ ಬಳಸಿಕೊಳ್ಳುವ ಮಾತು. ಯಕ್ಷಗಾನದಲ್ಲಿ ಏನುಂಟು ಅದನ್ನು ಪೂರ್ಣವಾಗಿ
ನೋಡದೇ ಬದಲಾವಣೆ ಮಾಡುತ್ತಾ ಹೋದರೆ ಅದರ ಪ್ರಾಚೀನ ಮೌಲ್ಯ ಉಳಿಯುವುದಾದರು ಯಾವುದರಲ್ಲಿ? ಇದು
ಆಭಾಸ. ಯಕ್ಷಗಾನದ ಮೌಲ್ಯಗಳನ್ನು ನಾಶಮಾಡಿ ಬದಲಾವಣೆ ಮಾಡುವಂತಹುದು ಯಾವ ಬಗೆಯಲ್ಲೂ
ಒಪ್ಪಿಕೊಳ್ಳತಕ್ಕದ್ದಲ್ಲ. ಇದನ್ನು ನಂಬಿಯಾರರು ಅಧಿಕಾರಯುತವಾಗಿ ಹೇಳುವ ಸ್ಥಾನವನ್ನು ಹಕ್ಕನ್ನು
ಪಡೆದಿದ್ದಾರೆ. ಯಾಕಂದರೆ ಯಕ್ಷಗಾನದ ಪುನರ್ನವೀಕರಣದಲ್ಲಿ
ಪ್ರಧಾನ ಅಂಗವಾಗಿ ಕಾರ್ಯವೆಸಗಿದವರು. ಈಗ ಯಕ್ಷಗಾನ ಅಮೇರಿಕದ ವರ್ಲ್ಡ್ ಟ್ರೇಡ್ ಬಹು
ಮಹಡಿ ಕುಸಿದಂತೆ ಯಕ್ಷಗಾನದ ಮೌಲ್ಯಗಳು ಕುಸಿಯುತ್ತಿದೆ.
ಯಕ್ಷಗಾನ ಪ್ರೇಕ್ಷಕನ ಕಲ್ಪನಾ ಸಾಮಾರ್ಥ್ಯವನ್ನು
ಹೆಚ್ಚಿಸುತ್ತದೆ. ಸಿನಿಮಾದಲ್ಲೋ ನಾಟಕದಲ್ಲೋ ನೈಜತೆಗೆ ಒತ್ತು ಕೊಟ್ಟು ನಡೇಯುವಂತಹ ಕಥೆಗಳನ್ನೇ
ಯಕ್ಷಗಾನದಲ್ಲಿ ಪ್ರೇಕ್ಷಕ ಅಲ್ಲಿಗಿಂತಲು ಹೆಚ್ಚು ಸುಖವಾಗಿ ಆಸ್ವಾದಿಸುತ್ತಾನೆ. ದೇವೆಂದ್ರನ
ಒಡ್ಡೋಲಗ ನಾಲ್ಕು ಕಂಬದ ನಡುವೆ ನಡೆದರೂ ಅದನ್ನು ಸ್ವರ್ಗ ಎಂದು ಕಲ್ಪಿಸಿಕೊಂಡು ಉಳಿದ ಭಾಗವನ್ನು
ಕಂಡು ಭ್ರಮಾಧೀನ ನಾಗುತ್ತಾನೆ. ಹಸ್ತಿನಾವತಿಯ ಸಭೆಯಲ್ಲಿ ತಾನೂ ಒಬ್ಬನಾಗಬಲ್ಲ. ಕಲೆ ಎಂದರೆ ಅದುವೇ ಅಲ್ಲವೆ. ಮನಸ್ಸು ಭ್ರಾಮಕ ಲೋಕದಲ್ಲಿ
ವಿಹರಿಸುವುದಕ್ಕೆ ಸಹಾಯ ಮಾಡುವುದು. ಯಕ್ಷಗಾನ ಉಳಿದೆಲ್ಲ ಪ್ರಕಾರಗಳಿಗಿಂತ ಸುಲಭವಾಗಿ ಸರಳವಾಗಿ ಈ
ಕೆಲಸವನ್ನು ಮಾಡುತ್ತದೆ.
ಈ ಭಾಗದ ಸಂವಾದಗಳಲ್ಲಿ ಯಕ್ಷಗಾನದ ಪ್ರಾಚೀನ
ಮೌಲ್ಯಗಳೇನಿವೆಯೋ ಅವುಗಳನ್ನು ಪನರುಜ್ಜೀವನಗೊಳಿಸುವ ಕಾರ್ಯ ಹೇಗೆ ನಡೆಯಿತು ಎಂಬುದನ್ನು ಹೆಚ್ಚು
ವಿವರಿಸುತ್ತಾರೆ. ಅತೀ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳನ್ನು ಕೂಡ ಅಧ್ಯಯನ ಮಾಡಿ ಸಂಶೋಧನೆ ಮಾಡಿ
ಅದನ್ನು ಪುನರ್ ನಿರ್ಮಿಸಲಾಗಿತ್ತು. ಆದರೆ ಅವರ ಅಂತರಾಳದ ಧ್ವನಿಯ ವೇದನೆ ಅದು ಮೌನವಾಗಿಯೇ ನಮ್ಮ
ಮನಸ್ಸನ್ನು ಇರಿಯುತ್ತದೆ. ಬದವಾಣೆಗಳಿಗೆ ಹಲವು ಕ್ಷುಲ್ಲಕ ಕಾರಣ ಕೊಟ್ಟು ತೋಚಿದಂತೆ
ಪ್ರಯೋಗಿಸಿ ಅದನ್ನು ಕುಲಗೆಡಿಸುವವರು ಈ ನೋವನ್ನು
ಅರ್ಥವಿಸಿಕೊಳ್ಳಬೇಕು.
ಪರಿಶ್ರಮದಿಂದ ಯಕ್ಷಗಾನವನ್ನು ಪುನರುಜ್ಜೀವನ
ಮಾಡಿದನ್ನು ಗಮನಿಸಿದರೆ ಯಕ್ಷಗಾನ ಇನ್ನೂ ಅದೇ ಪುರಾತನ ಲಯಕ್ಕೆ ತರಬಹುದು. ಯಕ್ಷಗಾನವೆಂದರೆ ಅದು
ಕೇವಲ ಕಲೆಯಲ್ಲ. ಅದು ಜ್ಞಾನದ ಮಾಧ್ಯಮ. ಅದೊಂದು ವಿದ್ಯೆ. ಮೇಲೆ ಹೇಳಿದ ಉದಾಹರಣೆಯಲ್ಲಿ ನಳ ಮಹಾರಾಜನಿಗೆ ತಾನು
ಬದಲಾಗುತ್ತೇನೆ ಎಂಬ ವಿಶ್ವಾಸ ಇದ್ದಿರಲಿಕ್ಕಿಲ್ಲ. ಅಷ್ಟು ವಿರೂಪವಾಗಿ ಸ್ಥಾನ ಭ್ರಷ್ಠನಾಗಿ
ಸಮಾಜದಲ್ಲಿ ತನ್ನ ಮೌಲ್ಯಗಳನ್ನು ಕಳೆದುಕೊಂಡನಂತರ ಅದನ್ನು ಪುನಃ
ಗಳಿಸುತ್ತೇನೆಂಬ ವಿಶ್ವಾಸ ಆತನಿಗಿರಲಿಲ್ಲ. ಆದರೆ ಇಲ್ಲಿ ಆ ವಿಶ್ವಾಸ ತಳೆಯಬಹುದು. ತಳೆಯಲೇ
ಬೇಕು. ಯಾಕೆಂದರೆ ಯಕ್ಷಗಾನ ಅದು ಕೇವಲ ಯಕ್ಷಗಾನವಲ್ಲ.
(ಇತ್ತೀಚೆಗೆ ಯಕ್ಷರಂಗ ಕಟೀಲು ಸಿತ್ಲ ಪೌಂಡೇಶನ್ (ರಿ) ಇವರಿಂದ ಪ್ರಕಾಶನಗೊಂಡ ’ರಂಗವಿಚಿಕಿತ್ಸೆ’ ಎಂಬ ಪುಸ್ತಕದಲ್ಲಿ ಪ್ರಕಟವಾದ ನನ್ನ ಲೇಖನ.)

No comments:
Post a Comment