ಆಡುಗೆ ರುಚಿಯಾದರೂ ಘಮ ಘಮಿಸುತ್ತದೆ. ಕೆಟ್ಟು ಹೋದರೂ
ಪರಿಮಳ ಬರುತ್ತದೆ. ಪರಿಮಳ ಅಥವಾ ವಾಸನೆ ಎಂಬುದು ಅನಿವಾರ್ಯ. ಹೆಸರುವಾಸಿಯಾಗುವುದು, ಖ್ಯಾತಿಗಳಿಸುವುದು ಇದೂ ಸಹ
ಹಾಗೇ , ಒಳ್ಳೆಯದಾದರೂ ಕೆಟ್ಟು ಹೋದರೂ ಹೆಸರಂತೂ ಬಂದೇ ಬರುತ್ತದೆ. ಪತ್ರಿಕೆಯ ಪುಟಗಳಲ್ಲಿ ದೂರದರ್ಶನ
ಮಾಧ್ಯಮಗಳಲ್ಲಿ ಹೆಸರು ಮುಖ ಜಾಗ ಪಡೆವಲ್ಲಿ ಎರಡೂ
ಕಾರಣವಾಗಿರುತ್ತದೆ. ಮನುಷ್ಯ ದೇಹದಿಂದಲೂ ಗಳಿಸಿದ ಸಂಪತ್ತಿನಿಂದಲೂ ಶ್ವಾಶ್ವತವಾಗಿ
ಉಳಿಯುವುದಿಲ್ಲ. ಅಥವಾ ದೇಹವಾಗಲೀ ಸಂಪತ್ತಾಗಲಿ ಅವನು ತನ್ನದು ಎಂದು ಏನನ್ನು
ತಿಳಿದುಕೊಂಡಿರುತ್ತಾನೋ ಅದು ಎಂದಿಗೂ ಅವನದಾಗಿ ಶಾಶ್ವತವಾಗಿ ಉಳಿಯುವುದಿಲ್ಲ. ಈ ಜಗತ್ತಿನಲ್ಲಿ ಶ್ವಾಶ್ವತವಾಗಿ ಸ್ಮರಣೆಯಲ್ಲಿ ಉಳಿಯುವುದಿದ್ದರೆ
ಅದು ಆತನ ವ್ಯಕ್ತಿತ್ವ ಮಾತ್ರ. ಬೇರೆ ಯಾರಿಂದಲೂ ಅದನ್ನು ಅನುಭವಿಸುವುದಕ್ಕೆ ಸಾಧ್ಯವಿಲ್ಲ. ನಂತರದ
ಆತನ ಸ್ಮಾರಕಗಳು ಇವುಗಳಿಗೆ ಪ್ರತೀಕಗಳಾಗಿ ಕೇವಲ ಸ್ಮರಣೆಯನ್ನು ಪ್ರಚೋದಿಸುತ್ತಿರುತ್ತವೆ.
ಇಂತಹ ಚಿಂತನೆಗಳು ನನಗೆ ಪ್ರಚೋದಿಸಲ್ಪಟ್ಟಿದ್ದರೆ
ಅದಕ್ಕೆ ಕಾರಣ ಬಾಲ್ಯದಿಂದಲೇ ಅಂಟಿಕೊಂಡ ಯಕ್ಷಗಾನದ ಆಸ್ವಾದನೆ. ಅದರಲ್ಲೂ ಯಕ್ಷಗಾನ ಲೋಕ ಕಂಡ
ಅದ್ಬುತ ಕಲಾವಿದ ಹರಿದಾಸ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರ ಅರ್ಥಗಾರಿಕೆ ಕೇಳುತ್ತಲೇ ಬೆಳೆದ
ನನಗೆ ಇಂತಹ ಚಿಂತನೆಗಳು ಯೋಚನೆಗಳು ಅತಿಶಯವೆಂದೆನಿಸುವುದಿಲ್ಲ. ಈ ಅನಿಸಿಕೆಗಳಲ್ಲೂ
ಬರವಣಿಗೆಯಲ್ಲಿಯೂ ಮಾತ್ರವಲ್ಲ ಬರವಣಿಗೆ ಶೈಲಿಯಲ್ಲೂ ಶೇಣಿಯವರ ದಟ್ಟವಾದ ಪ್ರಭಾವ ತಿಳಿದೋ
ತಿಳಿಯದೆಯೋ ಘಾಢವಾಗಿ ಅಂಟಿಕೊಂಡಿದೆ. ಇದು ಕೇವಲ
ಪ್ರಾಮಾಣಿಕ ಅನಿಸಿಕೆ. ಅಂತಹ ಶೇಣಿಯವರು
ಶತಮಾನಕ್ಕೊಬ್ಬನೇ ಎಂಬ ಪ್ರತಿಭೆಯಿಂದ
ಜನಮಾನಸದಲ್ಲಿ ಜನ ಮಾಧ್ಯಮಗಳಲ್ಲಿ ಉನ್ನತ ಸ್ಥಾನವನ್ನು ಪಡೆದವರು. ವಿಚಿತ್ರವೆಂದರೆ
ಶೇಣಿಯವರನ್ನು ಕರಾವಳಿ ಜನತೆ, ಯಕ್ಷಗಾನ ಪ್ರೇಕ್ಷಕ ಇಂದು ಸ್ಮರಿಸುವುದಿದ್ದರೆ ಅವರ ಸ್ಮಾರಕವನ್ನು
ನೋಡಿಯಂತೂ ಅಲ್ಲವೇ ಅಲ್ಲ. ಅವರ
ಸ್ಮಾರಕ ಇದೆಯೋ ಇಲ್ಲವೋ ತಿಳಿದಿಲ್ಲ. ಆದರೂ ಅವರ ಸ್ಮರಣೆ ಚಿರ ಸ್ಥಾಯಿಯಾಗಿರುವುದಕ್ಕೆ
ಸ್ಮಾರಕ ಕಾರಣವಲ್ಲ. ಎಂದಿನವರೆಗೆ ಅವರ ಸಾಧನೆ ಜನಸ್ಮರಣೆಯಲ್ಲಿ ಸ್ಥಿರವಾಗಿದೆಯೋ ಅಲ್ಲಿವರೆಗೆ
ಶೇಣಿಯವರನ್ನು ನೆನಪಿಸುವುದಕ್ಕೆ ಸ್ಮಾರಕದ ಆವಶ್ಯಕತೆ ಇರುವುದಿಲ್ಲ. ಒಂದು ವೇಳೆ ಸ್ಮಾರಕಗಳು ಇದ್ದರೂ ಒಂದು ಖಂಡಿತವಾಗಿ
ಹೇಳಬಲ್ಲೆ ಅದರಲ್ಲಿ ಸರಕಾರದ ಅನುದಾನ ಇರುವುದಕ್ಕೆ ಸಾಧ್ಯವಿಲ್ಲ. ಇಂದು ಸ್ಮಾರಕಗಳು ಮಧುರ ಸ್ಮರಣೆಗಿಂತಲೂ ಪ್ರತಿಷ್ಠೆಯ
ಸ್ಮರಣೆಗಾಗಿಯೇ ಸ್ಥಾಪಿತವಾಗುತ್ತಿದೆ. ವಾಸ್ತವದಲ್ಲಿ ಸ್ಮಾರಕಗಳು ಉಸಿರಾಡುವುದಕ್ಕೆ ಮೊದಲೇ ಸದ್ದು
ಮಾಡುತ್ತಿವೆ. ಮಾತ್ರವಲ್ಲ ಸ್ಥಾಪನೆಗೆ ಮೊದಲೇ ಸುದ್ದಿಮಾಡುತ್ತವೆ ಮತ್ತು ವಿವಾದಗಳನ್ನು
ಸೃಷ್ಟಿಸುತ್ತವೆ. ವಿವಾದ ಹಲವು ಸಲ ಎಷ್ಟು
ಭೀಕರವಾಗಿ ಕ್ರೂರವಾಗಿ ಇರುತ್ತದೆ ಎಂದರೆ ಸತ್ತವನಿಗೆ ಸಾವು ನಿಜವಾಗಿ ಶಿಕ್ಷೆಯಂತೆ ಭಾಸವಾಗಿ
ತಾನೇಕೆ ಸತ್ತು ಹೋದೆನೋ ಎಂದು ಅನಿಸಬೇಕು.
ಇಂದು ಜಗತ್ತು ಸ್ವಾಮೀ ವಿವೇಕಾನಂದರನ್ನು ಸ್ಮರಿಸುತ್ತದೆ.
ಶತಮಾನ ಕಳೆದರೂ ವಿವೇಕಾನಂದರ ವ್ಯಕ್ತಿತ್ವ ಗಾಢವಾಗಿ ಅಚ್ಚೊತ್ತಿದೆ. ಗಾಂಧೀಜಿ ಸುಭಾಸ್ ಚಂದ್ರ
ಭೋಸ್, ನೆಲ್ಸನ್ ಮಂಡೇಲ ...ಛೇ ಜಗತ್ತು ಅದೆಷ್ಟು
ಶ್ರೇಷ್ಠ ವ್ಯಕ್ತಿಗಳನ್ನು ಕಂಡಿದೆಯೋ ಇವರ ನೆನಪುಗಳು ಯಾವುದೇ ಸ್ಮಾರಕಗಳಿಂದ ಉಳಿದಿಲ್ಲ. ಕೇವಲ
ಕನ್ಯಾಕುಮಾರಿಗೆ ಭೇಟಿ ಕೊಟ್ಟವರಿಗಷ್ಟೇ ವಿವೇಕಾನಂದರು ಸ್ಮರಣೆಗೆ ಬರುವುದಲ್ಲ. ಹಾಗೆ ನೋಡಿದರೆ ಹಿಟ್ಲರ್ ನನ್ನು ನೆಪೋಲಿಯನನ್ನು ಜಗತ್ತು
ಮರೆಯಲಿಲ್ಲ. ಹೆಚ್ಚೇಕೆ ಘಜನಿಯನ್ನೂ ಭಾರತವೂ
ಮರೆಯಲಿಲ್ಲ. ಕೇವಲ ಸ್ಮಾರಕ ಇರುವುದರಿಂದ
ಮಾತ್ರವೇ ಒಬ್ಬ ಮನುಷ್ಯ ನೆನಪಿಗೆ ಬರುತ್ತಾನೆ ಎಂದರೆ ಆತನ ಸಾಧನೆ ಪರಿಪೂರ್ಣವಲ್ಲ ಎಂದೇ
ತಿಳಿಯಬೇಕು. ಹಾಗಾದರೆ ಸ್ಮಾರಕ ನಿರ್ಮಾಣ ಯಾವುದರ
ಪ್ರತೀಕ?
ಕಲೆ ಕಲಾವಿದ ಪ್ರತಿಭೆ ಇವುಗಳು ಮನುಷ್ಯನೊಬ್ಬನ ಸ್ಮರಣೆಗೆ
ಕಾರಣವಾಗುತ್ತವೆ ಎಂದುಕೊಂಡರೆ, ವಾಸ್ತವದಲ್ಲಿ
ಕಲಾವಿದನಿಗೆ ತನ್ನ ಪ್ರತಿಭೆಯ ಮೇಲೆಯೇ ವಿಶ್ವಾಸವಿರುವುದಿಲ್ಲ. ಯಾಕೆಂದರೆ ಕಲಾವಿದ
ಎಂದನಿಸಿಕೊಂಡ ಮೇಲೆ, ಆತ ನೆಲೆ ನಿಂತು ತನ್ನ
ಸ್ಥಾನವನ್ನು ಗುರುತಿಸುಕೊಳ್ಳುವುದಕ್ಕೆ ತನ್ನಲ್ಲಿರುವ ಪ್ರತಿಭೆಗಿಂತಲೂ ಬೇರೆ ವಿಚಾರಗಳಲ್ಲೆ
ವಿಶ್ವಾಸ ತಳೆಯುತ್ತಾನೆ. ಹಾಗಾಗಿ ವಶೀಲಿ ರಾಜಕೀಯ ಮತ್ತೊಂದು ಮಾಡಿ ತನ್ನ ಅಸ್ತಿತ್ವ ಉಳಿಸುವಲ್ಲಿ
ಯತ್ನಿಸುತ್ತಾನೆ. ಎಲ್ಲಾ ಕಲಾವಿದರೂ ಹೀಗೆ
ಎನ್ನುವುದು ಸಮಂಜಸವಲ್ಲ. ಆದರೆ ಇಂದಿನ ಪ್ರಪಂಚ ಅಸ್ತಿತ್ವದ ಹೋರಾಟಕ್ಕೆ ಬಹಳಷ್ಟು ಪುಷ್ಟಿಯನ್ನು ಒದಗಿಸುತ್ತದೆ ಎನ್ನುವುದು
ಸುಳ್ಳಲ್ಲ. ಕಲಾವಿದನಿಗೆ ತನ್ನ ಪ್ರತಿಭೆಯಲ್ಲೇ ಸ್ವತಃ ವಿಶ್ವಾಸವಿಲ್ಲ. ತನ್ನ ಪ್ರತಿಭೆಯಲ್ಲಿ ಆತನಿಗೆ ದಟ್ಟವಾದ
ಗಾಢವಾದ ವಿಶ್ವಾಸವಿದ್ದಲ್ಲಿ ಅದು ಅವನನ್ನು ಪ್ರಕಾಶಿಸದೇ ಬಿಡುವುದಿಲ್ಲ. ಎಲೆಯ ಮರೆಯ ಕಾಯಿಯಾದರೂ
ಹಣ್ಣಾದಾಗ ಪರಿಮಳ ಬಂದಂತೆ ಪ್ರತಿಭೆ ಅದಾಗಿಯೆ ಹೊರಹೊಮ್ಮಿ ಪ್ರಕಾಶಿಸುವಾಗ ಅದಕ್ಕೆ ತೂಕ ಹೆಚ್ಚು.
ಇಂದು ಪ್ರತಿಭೆ ಕಲಾವಿದ ಈ ಮಾನದಂಡ ಯಾವುದನ್ನು ಲೆಕ್ಕ ಹಾಕಿ ನಿರ್ಣಯವಾಗುತ್ತದೋ
ಅರಿವಾಗುವುದಿಲ್ಲ. ಈಗ ಕಲಾವಿದ ಪ್ರಕಾಶಿಸುವುದಕ್ಕೆ ಕೇವಲ ಪ್ರತಿಭೆಯೊಂದೇ ಕಾರಣವಾಗಿಲ್ಲ.
ಹಾಗಾಗಿ ಹಿಂಬಾಲಕರಿದ್ದಲ್ಲಿ ನನಗೂ ನಿಮಗೂ ಸ್ಮಾರಕ
ನಿರ್ಮಾಣವಾಗಬಹುದು ಎಂದು ಅನ್ನಿಸಿಬಿಡುತ್ತದೆ. ಸಿನಿಮಾದಲ್ಲೇ ಆಗಲಿ ಯಕ್ಷಗಾನದಲ್ಲೇ ಆಗಲಿ
ಯಾವುದೇ ಕಲಾ ಪ್ರಕಾರಗಳಲ್ಲೇ ಆಗಲಿ ಕಲಾವಿದ ತನ್ನ ಪ್ರತಿಭೆಯಿಂದ ಗುರುತಿಸಿಕೊಳ್ಳ ಬೇಕಾದದ್ದು
ನ್ಯಾಯ.
ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರು, ಯಕ್ಷಗಾನದಲ್ಲಿ ದಂತಕತೆಯಾಗಿ ತನ್ನದೇ
ವ್ಯಕ್ತಿತ್ವವನ್ನು ಛಾಪನ್ನೂ ಮೂಡಿಸಿದ ಮಹಾತ್ಮರು. ಬಯಲಾಟದ ಕರಪತ್ರಗಳಲ್ಲಿ, ಗೋಡೆಯ ಮೇಲಿನ
ಭಿತ್ತಿ ಪತ್ರಗಳಲ್ಲಿ “ಇಂದು ಹರಿದಾಸ್ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರ ಇಂತಹ ಪಾತ್ರವನ್ನು
ನೋಡಲು ಮರೆಯದಿರಿ” ಎಂದು ಬರೆದಿದ್ದರೆ ಸಂಶಯ ಬೇಡ ಅಂದು ಯಕ್ಷಗಾನ ಸಭೆ ತುಂಬಿ ತುಳುಕುತ್ತದೆ
ಕಟ್ಟಿದ ಟೆಂಟ್ ಹರಿದುಹೋಗುವಷ್ಟು ಜನ ಸೇರುತ್ತದೆ. ರಾತ್ರಿಯಿಡೀ ನಿದ್ದೆಯನ್ನು ಮರೆಯುವುದಕ್ಕೆ
ಸಿದ್ದವಾಗಿಯೇ ಪ್ರೇಕ್ಷಕ ಸೇರಿಬಿಡುತ್ತಾನೆ. ಶೇಣಿಯವರು ವೇಷ ತೊಟ್ಟು ಎರಡು ಮೂರನೆಯ ಜಾವದಲ್ಲಿ ಮೂರು ನಾಲ್ಕು ಘಂಟೆಗೆ ರಂಗಕ್ಕೆ ಬರುವುದಿದ್ದರೂ ಒಂಭತ್ತು ಘಂಟೆಗೇ ಅಸನಗಳಲ್ಲಿ ಕುಳಿತು ಶೇಣಿಯವರ ವೇಷವನ್ನು ನೋಡುವುದಕ್ಕೆ
ಪ್ರೇಕ್ಷಕ ಕಾದು ಕುಳಿತಿರುತ್ತಾನೆ. ಹಾಗೆ ಕುಳಿಕೊಳ್ಳುತ್ತಿದ್ದುದು ಕೇಕೆ ಹಾಕಿ ಚಪ್ಪಾಳೆ ತಟ್ಟಿ
ಶಿಳ್ಳೆ ಹಾಕುವ ಕೇವಲ ಸಾಮಾನ್ಯ ಪ್ರೇಕ್ಷಕನಲ್ಲ. ಪ್ರಬುದ್ದ ಪ್ರಜ್ಞಾವಂತ ಪ್ರೇಕ್ಷಕ. ರಾತ್ರಿ ಒಂಭತ್ತರಿಂದ ಬೆಳಗಿನ ಜಾವದವರೆಗೂ ಕುಳಿತಲ್ಲೆ
ಕುಳಿತುಬಿಡುವ ಆಕರ್ಷಣೆ ಅದೊಂದೇ, ಬೇರೆ ಏನಲ್ಲ. ಅದು ಶೇಣಿಯವರ
ಮೋಡಿ ಮಾಡಿ ಬಿಡುವ ಪಾತ್ರಗಳು. ವಾಲಿ
ರಾವಣ, ದುರ್ಯೋಧನ ಭೀಷ್ಮ... ಒಂದೆ ಎರಡೆ...ಛೇ ಆ ಅಭಿವ್ಯಕ್ತಿಗಳಿಗೆ ಸೀಮೆ ಪ್ರೇಕ್ಷಕರ
ಮನಸ್ಸು. ಅಲ್ಲಿಂದಾಚೆಗೆ ಅವುಗಳು
ಕದಲುವುದಿಲ್ಲ. ಯಕ್ಷಗಾನದ ಪಾತ್ರಗಳ
ವ್ಯಕ್ತಿತ್ವವನ್ನು ತೋರಿಸಿ ನಿರೂಪಿಸಿ ತಾರಾಮೌಲ್ಯವನ್ನು ನಿಸ್ಸಂಶಯವಾಗಿ ಗಳಿಸಿದ
ಕಲಾವಿದರಿವರು. ಭೀಷ್ಮನ ಕತೆ ಯಾವುದರಲ್ಲೇ
ಓದಲಿ, ಅಥವಾ ಯಾವುದರಲ್ಲೇ ಕೇಳಲಿ ಮೊದಲು ಸ್ಮೃತಿಗೆ ಬರುವುದು ಶೇಣಿಯವರ ಭೀಷ್ಮ. ಇಂತಹ ಗಾಢವಾದ
ಪ್ರಭಾವವನ್ನು ತನ್ನ ಪಾತ್ರಗಳಿಂದ ಮಾಡಿ, ಆ ಪಾತ್ರಗಳೇ ಇಂದು ಸ್ಮಾರಕಗಳಾಗಿ ಸ್ಥಿರವಾಗಿ
ಕುಳಿತಿದೆ. ಕೇವಲ ಯಕ್ಷಗಾನ ವೇಷಗಾರಿಕೆಯಲ್ಲ. ಒಂದು ಪ್ರವಚನ ಭಾಷಣವಾದರು ಸರಿಯೇ ಕೇಳುಗ
ಸದ್ದಿಲ್ಲದೇ ಕಲ್ಲಿನಂತೆ ನಿಶ್ಚಲನಾಗಿ ಬಿಡುತ್ತಾನೆ.
ಇದು ಒಂದು ಶೇಣಿಯ ಕಥೆಯಾದರೆ ಹಲವು ಬಗೆಯಲ್ಲಿ
ಯಕ್ಷಗಾನದ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡು ಸ್ಥಾನ ಭದ್ರಗೊಳಿಸಿದ ಕಲಾವಿದರು ಹಲವರಿದ್ದಾರೆ.
ಅಗರಿ ಬಲಿಪ ಭಾಗವತರ ಸ್ವರ ಕಿವಿಗೆ ಬಿದ್ದ ಕೂಡಲೇ ನಿಂತು ನಿಮಿರಿಕೊಂಡು ಕೇಳುವ
ಕೇಳುಗರೆಷ್ಟಿದ್ದಾರೆ. ನಿದ್ದೆಬಿಟ್ಟು ಸೇರುವ ಜನವೆಷ್ಟು?
ಇದೆಲ್ಲ ಅಪ್ಪಟ ಲೈವ್ ಪ್ರತಿಭೆಗಳು. ಯಥಾವತ್ ಆಗಿ ರಂಗದಲ್ಲೆ ಆಗಿಂದಾಗೆ ತೆರೆದುಕೊಳ್ಳುವ
ದೈತ್ಯ ಪ್ರತಿಭೆಗಳು. ಒಂದು ವೇಳೆ ಅವರ
ಸ್ಮಾರಕಗಳು ಇದ್ದರೂ ಇರಬಹುದು, ಅವುಗಳೆಲ್ಲವೂ ಅಪ್ಪಟ ಕಲಾವಂತಿಕೆಯನ್ನು ಮೆರೆದವುಗಳು. ಕೇವಲ
ಪರಿಶ್ರಮದ ಸಂಕೇತಗಳು. ಯಾವ ಅನುದಾನಕ್ಕೂ ಕಾಯದ ಪ್ರತೀಕಗಳು. ಒಂದೆರಡು ವರ್ಷದ ಮೊದಲು ಯಕ್ಷಗಾನ ಭಾಗವತ ಭೀಷ್ಮ ಶ್ರೀ
ಬಲಿಪ ನಾರಾಯಣ ಭಾಗವತರ ಸ್ಮರಣೆಯಲ್ಲಿ ಅವರ ಮನೆಯ ಹತ್ತಿರವೇ ಸ್ಮಾರಕ ಒಂದು ನಿರ್ಮಾಣವಾಯಿತು. ಇದು
ಕೇವಲ ಯಕ್ಷಗಾನದ ಅಭಿಮಾನದಿಂದ ಒಂದು ಭ್ಯವ್ಯ ವ್ಯಕ್ತಿತ್ವದ ಪ್ರತೀಕವಾಗಿ ನಿರ್ಮಾಣಗೊಂಡಿತು. ಇದರಲ್ಲಿ
ಕೇವಲ ಯಕ್ಷಗಾನ ಪ್ರೇಕ್ಷಕನ ಪರಿಶ್ರಮವಷ್ಟೇ
ವಿನಿಯೋಗವಾಯಿತು.
ಇಂದು ದಿನ ಬೆಳಗಾದರೆ ಸ್ಮಾರಕಗಳು ವಿವಾದವನ್ನು
ಸೃಷ್ಟಿಸುವುದನ್ನು ನೋಡಿದರೆ ಈ ವಿಚಾರಗಳೆಲ್ಲವೂ ಮಂಥನಕ್ಕೆ ಸಿಕ್ಕಿಬಿಡುತ್ತವೆ. ಸಿನಿಮಾ ನಟರ
ಸ್ಮರಣೆಗಾಗಿ ಅತ್ಯಮೂಲ್ಯವಾದ ಎಕರೆಗಟ್ಟಲೆ ಸರಕಾರೀ ಭೂಮಿ ಇದಕ್ಕೆ ವಿನಿಯೋಗವಾಗುತ್ತದೆ. ಪ್ರಜೆಗಳ
ಶ್ರಮದ ತೆರಿಗೆ ಹಣ ಇದಕ್ಕೆ ಬಳಕೆಯಾಗುತ್ತದೆ. ಹೋಗಲಿ,
ಅವರವರ ನಂಬಿಕೆ ವಿಶ್ವಾಸಗಳು ದೊಡ್ಡದು. ಅದನ್ನು ಒಂದರೊಡನೆ ಇನ್ನೊಂದು ಹೋಲಿಸುವುದು
ಮೂರ್ಖತನವಾದೀತು. ಆದರೂ ಸಹ ಸ್ಮಾರಕಗಳು ಕೇವಲ ಸ್ಮರಣೆಯ ಪ್ರತೀಕಗಳಾಗಬೇಕು. ಪ್ರತಿಷ್ಠೆಯ
ಅನುಕರಣೆಯ ವಿಚಾರವಾಗಬಾರದು. ಆದರೂ ಇಂದು ಅಭಿಮಾನವೂ ಒಂದು ಅನುಕರಣೆಯ ವಿಷಯವಾಗಿದೆ. ಇನ್ನೊಂದು
ರಾಜ್ಯದಲ್ಲಿ ಅಭಿಮಾನ ಯಾವ ರೂಪದಿಂದ ಹೇಗೆ ಪ್ರಕಟವಾಗುವುದೋ ಅದೇ ಮತ್ತೊಂದು ಭಾಗದಲ್ಲೂ
ಅನುಕರಣೆಯಾಗುತ್ತದೆ. ಅಭಿಮಾನ ವ್ಯಕ್ತ ಪಡಿಸುವುದರಲ್ಲೇ ಒಂದು ಸ್ಪರ್ಧೆ.!! ಸ್ಮಾರಕ ನಿರ್ಮಾಣದಲ್ಲೂ ಅದೇ ಸ್ಪರ್ಧೆ ಮುಂದುವರೆದಿದೆ.
ಇದು ಸರಿ ತಪ್ಪುಗಳ ವಿಶ್ಲೇಷಣೆಯಲ್ಲ. ಆದರೆ ಕೇವಲ
ಸಿನಿಮಾ ನಟ ಮಾತ್ರ ಕಲಾವಿದನೇ? ಹೆಸಾರಂತ ನಟ
ವಿಷ್ಣು ವರ್ಧನ್ ಒಂದು ಸಲ ಇದೇ ಶೇಣಿಯವರ ಪಾತ್ರವನ್ನು ಕಂಡು ಸಾಷ್ಟಾಂಗ ನಮಸ್ಕರಿಸಿದ್ದರಂತೆ,
“ಸ್ವಾಮಿ, ನಾವು ಯಾರೋ ಬರೆದುಕೊಟ್ಟ ಡೈಲಾಗ್ ನ್ನು ತೆರೆಯ ಮೇಲೆ ಹೇಳುತ್ತೇವೆ. ಅದು ಪ್ರತಿಭೆಯೇ
ಅಲ್ಲ. ನಿಮ್ಮದು ನಿಜವಾದ ಪ್ರತಿಭೆ”. ಪ್ರತಿಭೆಯ ತುಲನೆ ಹೋಲಿಕೆ
ಸಲ್ಲದು. ಆದರೂ ಕಲಾವಿದನ ಸ್ಮಾರಕಕ್ಕೆ ಜನಪ್ರೀಯತೆಯೇ ಮಾನದಂಡವಾಗುವಾಗ ಪ್ರತಿಭೆ
ಪುರಸ್ಕಾರವಾದಂತೆ ಅನಿಸುವುದಿಲ್ಲ.
ಸಿನಿಮಾದಲ್ಲೇ ಆಗಲಿ ಯಕ್ಷಗಾನದಲ್ಲೇ ಆಗಲಿ ಕಲಾವಿದ
ತನ್ನ ಪ್ರತಿಭೆಯಿಂದ ಗುರುತಿಸಿಕೊಳ್ಳಬೇಕು.
ಪ್ರತಿಭೆಯಿಂದ ಅಂಗೀಕರಿಸಲ್ಪಟ್ಟ ವ್ಯಕ್ತಿತ್ವ ಎಂದಿಗೂ ಅಳಿಸಲ್ಪಡುವುದಿಲ್ಲ. ದಾಖಲೆ
ಇಲ್ಲದೇ ಉಳಿಯುವ ಪ್ರತಿಭೆ ಅದು ನಿಜವಾದ ಪ್ರತಿಭೆ. ಸ್ಮಾರಕಗಳಿಗಾಗಿ ಈ ವಿವಾದ ಹೋರಾಟ ಎಲ್ಲವನ್ನು
ನೋಡುವಾಗ ನಿರ್ಮಿಸುವ ಸ್ಮಾರಕ ದಿವ್ಯ ಸ್ಮರಣೆಯನ್ನು
ಒದಗಿಸುವ ಬದಲಾಗಿ ಬರೀ ನಿಟ್ಟುಸಿರ ನೆನಪಾಗಬಾರದು.

No comments:
Post a Comment