ಕಂಸ ವೃತ್ತಾಂತ....
[ ಹರಿದಾಸ ಶ್ರೀ ಶೇಣಿ ಗೋಪಾಲ
ಕೃಷ್ಣ ಭಟ್ಟರು ಯಕ್ಷಗಾನ ಲೋಕ ಕಂಡ ಅದ್ಭುತ
ಕಲಾವಿದ ಶ್ರೇಷ್ಠ. ತಮ್ಮ ಮಾತುಗಾರಿಕೆಯಿಂದಲೇ ಪಾತ್ರಗಳನ್ನು ಚಿತ್ರಿಸುತ್ತಾರೆ ಎಂದಾದರೆ, ಆ
ಪಾತ್ರಗಳು ಮತ್ತೊಮ್ಮೆ ಜೀವ ತಳೆದು ಬಂದ ಅನುಭವವಾಗುತ್ತದೆ. ಪ್ರಕೃತಿಯಲ್ಲಿ ಮನುಷ್ಯನಿಗೆ ಮಾತ್ರವೇ
ಮಾತನಾಡುವ ಯೋಗ್ಯತೆ ಭಗವಂತ ಕಲ್ಪಿಸಿದ್ದಾನೆ. ಆದರೆ ಭಗವಂತನ ಈ ಅನುಗ್ರಹವನ್ನು ಸಾರ್ಥಕಗೊಳಿಸಿದ
ಶ್ರೇಯಸ್ಸು ಯಕ್ಷಗಾನ ಲೋಕಕ್ಕೆ ಸಂದರೆ, ಅದರಲ್ಲಿ
ಬಹುಪಾಲು ಶತಮಾನಕ್ಕೊಬ್ಬ ಶೇಣಿ ಎಂಬ ಖ್ಯಾತಿಗೆ ಕಾರಣರಾದ ಶ್ರೀ ಶೇಣಿ ಗೋಪಾಲ ಕೃಷ್ನ ಭಟ್ಟರಿಗೆ
ಸಲ್ಲುತ್ತದೆ. ಕಣ್ಣು ತೆರೆದು ಪಾತ್ರಗಳನ್ನು ಕಾಣುವುದಕ್ಕಿಂತಲೂ ಕೇಳುವುದರಲ್ಲೇ ಅದರ
ಪೂರ್ಣಾನುಭವವನ್ನು ಕೊಡುವ ಭಟ್ಟರ ಮಾತುಗಾರಿಕೆ ಯಕ್ಷಗಾನದ ಅದ್ಭುತ ರಮ್ಯ ಚರಿತ್ರೆಯ
ಭಾಗವಾಗುತ್ತದೆ. ಈ ಮಾತಿನ ವೈಖರಿಯಲ್ಲಿ ಜೀವ ತಳೆದ ಒಂದು ಪಾತ್ರ ಕಂಸ. ಶ್ರೀಕೃಷ್ಣ ಜನ್ಮ ಎಂಬ ಕಥಾಭಾಗದ ಒಂದು ಅರ್ಥಗಾರಿಕೆ ಕೇಳುತ್ತಿರಬೇಕಾದರೆ ಹತ್ತು ಹಲವು
ಚಿಂತನೆಯ ಅನುಭವ ಕೇಳುಗನಿಗೂ ಸಾಧ್ಯವಾಗುತ್ತದೆ. ಆ ಅರ್ಥಗಾರಿಕೆಯ ಸಂಕ್ಷೇಪ ರೂಪದೊಂದಿಗೆ ಹಲವು
ಚಿಂತನೆಗಳು ರೂಪಗೊಂಡ ಸ್ವ ಅನುಭವ ಇಲ್ಲಿದೆ. ಭಾವನೆಗಳು ವಿಮರ್ಶಾತೀತವಾಗುತ್ತದೆ ಎಂಬ ಭಾವನೆ
ನನ್ನದು. ಅದು ಸರಿ ಇರಬಹುದು ತಪ್ಪಿರಬಹುದು. ಅದು ಕೇವಲ ಭಾವನೆಗಳಷ್ಟಕ್ಕೆ ಸೀಮಿತ. ಹುಚ್ಚು ಮನಸ್ಸಿನ ಕಲ್ಪನೆಗಳಂತೆ ಅನುಭವಗಳಲ್ಲಿ
ನ್ಯೂನ್ಯತೆಗಳಿದ್ದರೆ ಅದನ್ನು ಮನ್ನಿಸುತ್ತ ಅನುಭವಿಸಬೇಕು. ]
ಕಂಸನ ಸ್ವಗತ....
ಎಂಟಾಗಬೇಕಾದರೆ
ಏಳು ಕಳೆಯಲೇ ಬೇಕಲ್ಲ? ಏಳರವರೆಗೆ ಸಂದದೇ ಇದ್ದರೆ
ಎಂಟು ಹೇಗೆ ಉಂಟಾದೀತ?. ವಸುದೇವ ಹುಟ್ಟಿದ
ಏಳು ಮಕ್ಕಳನ್ನೂ ಕಂಸನಿಗೆ ತಂದು ಒಪ್ಪಿಸಿದ. ಯಾಕೆ? ಎಂಟನೆಯದ್ದು ಹುಟ್ಟುವುದಕ್ಕೆ ಅವಕಾಶ
ಒದಗಿಬರಬೇಕಲ್ಲ? ಏಳು ಕಳೆಯದೇ ಇದ್ದರೆ, ಏಳು ಹೆಜ್ಜೆ ಇಡದೇ ಇದ್ದಲ್ಲಿ ಎಂಟನೆಯ ಹೆಜ್ಜೆಯ ಸ್ಥಾನ
ಒದಗುವುದಾದರೂ ಹೇಗೆ? ಹೀಗೆ ಎಂಟರ ನಂಟಿನ ಮರ್ಮವನ್ನು ಬಿಚ್ಚಿಕೊಳ್ಳುತ್ತಾ ಸಾಗುವ ಕಂಸ ವೃತ್ತಾಂತ
ಪರಮಾತ್ಮ ಸಂಕಲ್ಪಕ್ಕಿಂತ ಮಿಗಿಲಾದುದು ಇಲ್ಲ ಎಂಬುದನ್ನು ತೋರಿಸುತ್ತಾ ಸಾಗುತ್ತದೆ. ಆದರೆ ಕಂಸ ಪ್ರಯತ್ನ ಎಂಬುದು ಪರಮಾತ್ಮನಿಗೆ
ಸವಾಲೆಸೆಯುತ್ತಾ ಸಾಗುತ್ತದೆ. ಕಂಸ ಪರಮಾತ್ಮನೊಡನೆ ಸಂಘರ್ಷಕ್ಕಿಳಿಯುವುದು ಹೀಗೆ. ಪರಮಾತ್ಮನಿಗೆ
ತೊಡಗುವ ಎಂಟರ ನಂಟಿನ ಅನುಬಂಧವನ್ನು ವಿವರಿಸುತ್ತಾ ಸಾಗುವ ಯಕ್ಷಗಾನ ತಾಳ ಮದ್ದಲೆ ಇದು. ಯಕ್ಷಗಾನದ
ವಾಕ್ ಪ್ರಪಂಚದ ಯುಗ ಪುರುಷ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಕಂಸನ ಪಾತ್ರ ಲೌಕಿಕ ಮತ್ತು
ಅಧ್ಯಾತ್ಮದ ಜೀವನವನ್ನು ತೆರೆದಿಡುತ್ತಾ ಸಾಗುತ್ತದೆ.
ಭಾವ ವಸುದೇವ ತಂಗಿ ದೇವಕಿಯನ್ನು ವೈಭವೋಪೇತವಾಗಿ ಕರೆದುಕೊಂಡು
ಹೋಗುವಾಗ ಕೇಳುವ ಅಶರೀರವಾಣಿ, ದೇವರ ಅಸ್ತಿತ್ವವನ್ನು
ನಂಬದ ಕಂಸನಿಗೆ ಅನುಮಾನವನ್ನು ಹುಟ್ಟುಹಾಕಿಸುತ್ತದೆ. ಮೃತ್ಯುವನ್ನು ತನ್ನ ಕಂಕುಳಲ್ಲೇ ಇಟ್ಟುಕೊಂಡು ಸಾಗುವ ಕಂಸನಿಗೆ ಸಾವು ಹತ್ತಿರವಾದ ಅನುಭವ. ಆದರೂ ದೇವರು ತನಗೆ
ಎಂಟರವರೆಗೆ ಸಮಯವನ್ನು ಕೊಟ್ಟಿದ್ದಾನಲ್ಲ ಎಂದು ತಿಳಿಯದೇ ಹೋದ. ನಾಳೆಯೋ ಮರುಕ್ಷಣವೋ ಹೀಗೆ ಸಾವಿನ
ಬಗ್ಗೆ ಖಚಿತವಾಗಿ ತಿಳಿಯದೇ ಇರುವವನಿಗೆ ಎಂಟರವರೆಗಾದರೂ ಸಮಯವಿದೆಯಲ್ಲ ಎಂದು ಕಂಸ ಭಾವಿಸುವುದಿಲ್ಲ.
ಬದಲಾಗಿ ಎಂಟರ ನಂತರವಾದರೂ ಬರುವ ಮರಣಕ್ಕೆ
ಅಂಜಿಬಿಡುತ್ತಾನೆ. ಆಧ್ಯಾತ್ಮ ಮತ್ತು ಲೌಕಿಕದ
ಮುಖದರ್ಶನವಾಗುವುದು ಹೀಗೆ.
ಮಹಾ ಜ್ಞಾನಿಗಳಿಗೂ ತಮ್ಮ ಮರಣದ ಬಗ್ಗೆ ತಿಳಿಯುವುದಿಲ್ಲ. ಆದರೆ
ಕಂಸನಿಗೆ ಅಶರೀರವಾಣಿ ಬಂದು ಮೊಳಗುತ್ತದೆ. ಶರೀರವಿಲ್ಲದ ಶಾರೀರ ಧ್ವನಿ ತೋರಿಸಿದ ಅಶಾಶ್ವತ ಶರೀರ
ಸಂಬಂಧವನ್ನು ಕಂಸ ತಿಳಿಯದೇ ಹೋದ. ಒಂದಲ್ಲ ಎರಡಲ್ಲ ಎಂಟು ಸಲ ದೇವಕಿ ತಾಯಿಯಾಗಬೇಕು. ಯೋಚಿಸುತ್ತಾನೆ ಕಂಸ, ಮಹಾ ಜ್ಞಾನಿಗಳು ಎಷ್ಟು
ಯತ್ನಿಸಿದರೂ ತಿಳಿಯದ ರಹಸ್ಯವನ್ನು ತನಗೆ ಪರಮಾತ್ಮ ಏಕೆ ಹೇಳಿದ? ಮತ್ತೇನೂ ಅಲ್ಲ. ಇದು ದೇವಕಿಯ
ದುರ್ದೈವ. ದುರಾದೃಷ್ಟ. ಮಹಾರಾಜನ ಮುದ್ದಿನ ತಂಗಿ, ಹೇಗೆ ಬದುಕನ್ನು ಸಾಗಿಸಬಹುದಿತ್ತು. ದುರ್ದೈವವಲ್ಲದೇ
ಮತ್ತೇನು? ದೇವಕಿಯ ದುರ್ದೈವ ತನಗಿಂದು ಸದೈವವಾಗಿ
ಪರಿಣಮಿಸಿದೆ. ಬರಬಹುದಾದ ವ್ಯಾಧಿಯನ್ನು
ಮೊದಲೇ ತಿಳಿದಾಗಿದೆ. ಇನ್ನು ಅದಕ್ಕೆ ಚಿಕಿತ್ಸೆ
ಪಡೆದುಕೊಳ್ಳಬೇಕಿದೆ. ಸಾವನ್ನು ಮೊದಲಾಗಿ ತಿಳಿದ ನಾನು ಅದೃಷ್ಟವಂತ. ಅಶರೀರವಾಣಿ ರೂಪದಲ್ಲಿ ಪರಮಾತ್ಮ ನಾನು ಸಾಯಲಿ ಎಂದು ಬಯಸಿ ಹೇಳಿದ್ದಲ್ಲ. ಬದಲಿಗೆ ಎಚ್ಚರಿಸಿದ್ದಾನೆ.
ಜಾಗರೂಕನಾಗಬೇಕಿದೆ. ಹೀಗೆ ಮರಣವನ್ನು ಅಥವಾ ವಿಧಿಯನ್ನು ಎದುರಿಸುವುದಕ್ಕೆ ಕಂಸ
ಪ್ರಯತ್ನಿಸುತ್ತಾನೆ.
ಎಲ್ಲ ತರ್ಕಗಳ ಭರವಸೆ ಇದ್ದರೂ ಕಂಸ ಕೊಂಚ ಅಧೀರನಾಗುತ್ತಾನೆ. ಬದುಕಲ್ಲಿ ಮೊದಲಾಗಿ ಮರಣ ಭಯ ಕಾಣಿಸಿಕೊಳ್ಳುತ್ತದೆ.
ಹಾಗಾಗಿ ಆತ ವಸುದೇವನೆದುರಿಗೆ ದಯನೀಯ ಭಾವದಿಂದ ವರ್ತಿಸುತ್ತಾನೆ. ಯಾಕೆಂದರೆ ಇಡೀ ಜಗತ್ತಿನಲ್ಲಿ
ಯಾವ ದೇವರು ರಕ್ಷಿಸಲಾರ. ವಸುದೇವ ....ಈ ವಸುದೇವ ಪ್ರಾಮಾಣಿಕವಾಗಿ ಮನಸ್ಸು ಮಾಡಿದರೆ ಕಂಸನಿಗೆ ಮರಣ ಭಯ
ಇನ್ನಿಲ್ಲವಾಗುತ್ತದೆ. ಇನ್ನು ಕಂಸ ಮರಣದ ಬಗ್ಗೆ
ಯೋಚಿಸುವ ಅಗತ್ಯವೇ ಇಲ್ಲ. ಆದರೆ ವಸುದೇವ ಮನಸ್ಸು
ಮಾಡಬೇಕಲ್ಲ? ಕಾಲಿಗೆ ಮುಳ್ಳು ತಾಗಿದ್ದಕ್ಕೆ ಕಾಡಲ್ಲಿದ್ದ ಮುಳ್ಳಿಗೆ ಬೆಂಕಿ ಕೊಡಬೇಕಾದ
ಅಗತ್ಯವಿಲ್ಲ. ಕಾಲಿಗೆ ಚಿಕಿತ್ಸೆ ಮಾದಿದರಾಯಿತು. ಹೌದು ವಸುದೇವನಿಂದಲೇ ತೊಡಗಬೇಕು. ಮತ್ತೊಮ್ಮೆ ದಯನೀಯ ಭಾವದಿಂದ ವಸುದೇವನಲ್ಲಿ
ಬೇಡಿಕೊಳ್ಳುತ್ತಾನೆ . ದಯನೀಯವಾಗಿ ಹೇಳುವ ’ಭಾವಯ್ಯ’
ಎನ್ನುವ ಆ ದೀನ ಸ್ಥಿತಿ , ಶೇಣಿಯವರ ಕಂಸ
ನಿಜಕ್ಕೂ ಪರಕಾಯ ಪ್ರವೇಶದ ಅನುಭವವನ್ನು ಕೊಡುತ್ತದೆ. ಕಂಸನಿಗೆ ಅರಿಯದೇ
ಆವರಿಸಿದ ಮರಣಭಯಕ್ಕೆ ಅದು ಸಾಕ್ಷಿಯಾಗುತ್ತದೆ. ವಸುದೇವನಲ್ಲಿ ಮತ್ತೂ ಮತ್ತೂ ಕೇಳುತ್ತಾನೆ "ಭಾವ ನಿನಗೆ
ಮನಸ್ಸುಂಟ ನಾನು ಸಾಯ್ಲಿ ಅಂತ?" ಎಂತಹ ಮಾರ್ಮಿಕ ಪ್ರಶ್ನೆ ಇದು. ಒಂದು ಘಳಿಗೆ ಮರಣ ದಂಡನೆಯನ್ನು ವಿಧಿಸುವ ಯಮರೂಪಿಯಾಗಿ
ವಸುದೇವ ಕಂಡು ಬರುತ್ತಾನೆ.
ಅದುವೆರೆಗೆ ತಂಗಿ ದೇವಕಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ
ಕಂಸ. ಹಾಗಾಗಿ ಭಾವನೊಂದಿಗೆ ಒಡಂಬಡಿಕೆಯೊಂದಕ್ಕೆ
ಮನಸ್ಸು ಮಾಡಿದ್ದು. ತಂಗಿಯನ್ನು ಅತಿಯಾಗಿ
ಪ್ರೀತಿಸಿದ್ದ. ಅದು ಕಂಸನ ತಪ್ಪಲ್ಲ. ಭಾವನನ್ನು ಗೌರವದಲ್ಲಿ ಕಂಡಿದ್ದ. ಅದೂ ತಪ್ಪಲ್ಲ. ಕೇವಲ ಮರಣ ಭಯಕ್ಕೆ ವಶವಾದದ್ದು...!!! ಕಂಸನ
ಅಪರಾಧವೆಂದರೆ ಅದು ಮರಣ ಭಯ. ಅಷ್ಟಾಗಿಯೂ ಈತನಲ್ಲಿ ಮರಣ ಭಯವನ್ನು ಹುಟ್ಟಿಸಿದ ವಿಧಿಯ ಮರ್ಮ ಏನೋ?
ಕೊನೆಯಲ್ಲಿ ವಸುದೇವನ
ಬೇಡಿಕೆಯಂತೆ ಒಂದು ಒಪ್ಪಂದಕ್ಕೆ ಬರುತ್ತಾರೆ. ಹುಟ್ಟಿದ ಅಷ್ಟೂ ಮಕ್ಕಳನ್ನು ತಂದು ಕಂಸನಿಗೆ
ಒಪ್ಪಿಸುವುದು. ಹುಟ್ಟಿದ ಎಂಟು ಮಕ್ಕಳನ್ನೂ ಕೊಡುವುದಕ್ಕೆ
ವಸುದೇವ ಒಪ್ಪಿಕೊಂಡ. ಕೊನೆಯಲ್ಲಿ ಕಂಸ ಹೇಳುತ್ತಾನೆ, ಈ ಎಳನ್ನು ಕೊಡದೇ ಇದ್ದರೆ ಎಂಟನೆಯದನ್ನು
ಹುಟ್ಟುವುದಕ್ಕೇ ಕಂಸ ಬಿಡಲಾರ.! ಎಂತಹ ವಿಚಿತ್ರ
ತರ್ಕ? ಇದು ತನ್ನ ಅತ್ಮವಿಶ್ವಾಸವನ್ನು ಕಂಸ ವ್ಯಕ್ತ ಪಡಿಸುವ ರೀತಿ. ಮನದಲ್ಲೇ ಕಂಸ ಲೆಕ್ಕ ಹಾಕುತ್ತಾನೆ.
ಒಂದರಿಂದ ಏಳು ಪರ್ಯಂತ ನನಗೆ ತೊಂದರೆ ಇಲ್ಲ. ಎಂಟನೆಯದ್ದು. ಒಬ್ಬ ಮನುಷ್ಯನಿಗೆ ಎಂಟು ಮಕ್ಕಳು
ಬೇಕೇ ಬೇಕು ಎಂಬ ನಿಯಮವೇನೂ ಇಲ್ಲವಲ್ಲ. ಅಕ್ಕರೆಯ ತಂಗಿ ಪ್ರೀತಿಯ ಭಾವ ಎಲ್ಲ ಇದ್ದೂ
ಎಂಟನೆಯದ್ದನ್ನು ಬಯುಸುತ್ತಾರೆ ಎಂದಾದರೆ, ವಿಚಿತ್ರ
ಸಂಕಟದಲ್ಲಿ ಕಂಸ ಸಿಲುಕಿದ.
ಎಂಟನೆಯ ಜನ್ಮಕ್ಕಾಗಿ ಕಾದು ಕುಳಿತ ಕಂಸ. ಇಷ್ಟಕ್ಕೇ ವಿಧಿಯಾಟ
ನಿಲ್ಲುವುದಿಲ್ಲ. ನಾರದ ಬರುತ್ತಾನೆ. ಲೆಕ್ಕದ
ಮರ್ಮವನ್ನು ತಿಳಿಸುತ್ತಾನೆ. ಸುರುಳಿ ಸುತ್ತಿದ ಎರಡು ಶೂನ್ಯದ ಎಂಟರ ಮಹತ್ವ ಹೇಳಿಬಿಡುತ್ತಾನೆ. ಸಪ್ತಸ್ವರ,
ಸಪ್ತ ಸಾಗರ, ಸಪ್ತ
ಲೋಕ, ಸಪ್ತ ಋಷಿ ಹೀಗೆ ಸೃಷ್ಟಿಯ ಏಳರ ಆಚೆಗಿನ ಪರಮಾತ್ಮ ಎಂಬುದನ್ನು ಎಂಟರಲ್ಲಿ ತೋರಿಸುತ್ತಾನೆ. ಎಂಟನೆಯದರ ಹುಡುಕಾಟ
ಆರಂಭವಾಗುತ್ತದೆ. ಎಂಟನೆಯದ್ದು ಎಲ್ಲಿ ಅಡಗಿದೆ? ಎರಡು
ಶೂನ್ಯವನ್ನು ಸುತ್ತಿಕೊಂಡ ಎಂಟು ಅಧ್ಯಾತ್ಮಿಕ ಲೌಕಿಕದಲ್ಲಿರುವ ಶೂನ್ಯತೆಯನ್ನೇ ಬಿಂಬಿಸುತ್ತದೆ. ನಾರದರ
ರಹಸ್ಯ ಭೇದನದ ಮರ್ಮ ಕಂಸ ತಿಳಿಯುವುದಿಲ್ಲ. ಎಂಟು ಅದು, ಈ ಏಳರಲ್ಲಿ ಎಲ್ಲಿ ಬೇಕಾದರೂ
ಇರಬಹುದು. ಒಂದು ಎರಡು...ಹೀಗೆ ಯವುದೂ
ಎಂಟಾಗಬಹುದು. ಎಂಟರ ಶೂನ್ಯದಂತೆ ಅದು
ವರ್ತುಲಾಕಾರವಾಗಿ ಎಲ್ಲವೂ ಆಯೋಮಯವಾಗಿಬಿಡುತ್ತದೆ. ಪ್ರಾಮಾಣಿಕವಾಗಿ ಹೇಳುವುದಿದ್ದರೆ, ನಾರದ ಬಂದದ್ದು ಆತನಲ್ಲಿದ್ದ ಮರಣ ಭಯವನ್ನು ದೂರಿಕರಿಸುವುದಕ್ಕೆ. ಪ್ರಾಪಂಚಿಕ
ವ್ಯವಹಾರದ ಆಚೆಗಿನ ಸಂಭಂಧವನ್ನು ವಿವರಿಸುವ ಅವಶ್ಯಕತೆಯೇ ಒದಗುವುದಿಲ್ಲ. ಮೊದಲೆ ಭಯಗೊಂಡವನು
ಹಗ್ಗವನ್ನು ತುಳಿದು ಹಾವೆಂದು ಭಯಗೊಂಡಂತಾಗುತ್ತದೆ. ಕಂಸ ಮತ್ತಷ್ಟು ಹತಾಶನಾಗುತ್ತಾನೆ, ವ್ಯಗ್ರನಾಗುತ್ತಾನೆ. ಮಗಳ ಕೈ ಹಿಡಿದ ಅಳಿಯನನ್ನು ಮಾವ ದೇವರಾಗಿ
ಕಾಣುತ್ತಾನೆ. ಅದರೆ ಭಗವಂತ ಅಳಿಯನಾಗಿ ಹುಟ್ಟಿದರೂ ಕಂಸ ದೇವರಾಗಿ ಕಾಣಲೇ
ಇಲ್ಲ. ವಸುದೇವ ದೇವಕಿಯರಿಗೆ ಸೆರೆಮನೆಯೇ ಅಂತಃಪುರವಾಗಿಬಿಡುತ್ತದೆ.
ದೇವಕಿ ನನ್ನ ಸಹೋದರಿ, ವಸುದೇವ ತನ್ನ ಭಾವ ಇಬ್ಬರೂ ತನ್ನ ವಶದಲ್ಲಿದ್ದರೂ
ಕಂಸನಿಗೆ ತಾನು ಗೆದ್ದೇ ಬಿಡುವ ವಿಶ್ವಾಸ ಇರುವುದಿಲ್ಲ. ಮೃತ್ಯು ಭಯ ತನ್ನವರನ್ನೂ ಸಹ ನಂಬದಂತಹ
ಕತ್ತಲೆಗೆ ಆತನನ್ನು ತಳ್ಳಿಬಿಡುತ್ತದೆ. ಕತ್ತಲೆಯ
ಕೋಣೆಯಲ್ಲಿದ್ದರೂ ವಸುದೇವ ದೇವಕಿಯರು ಬೆಳಕನ್ನು ಕಂಡರೂ ಕಂಸ ತನಗಾವರಿಸಿದ ಕತ್ತಲಿಂದ
ಹೊರಬರಲಾಗುವುದೇ ಇಲ್ಲ. ಒಂದು ಸುಮೂಹುರ್ತದಲ್ಲಿ ಶ್ರೀಕೃಷ್ಣ ಜನನವಾಗುತ್ತದೆ. ಭಗವಂತನ
ಅಪೇಕ್ಶೆಯಂತೆ ಶಿಶು ರೂಪದ ಪರಮಾತ್ಮನನ್ನು ವಸುದೇವ ನಂದಗೋಕುಲಕ್ಕೆ ಹೊತ್ತೊಯ್ಯುತ್ತಾನೆ. ಎಂಟನೆಯ
ಜನ್ಮವಾಗಿ ಹೆಣ್ಣು ಮಗುವನ್ನು ಕಾಣುವಾಗ ಕಂಸ ತನ್ನ ಸ್ಥಿಮಿತವನ್ನು ಕಳೆದುಕೊಳ್ಳುತ್ತಾನೆ. ತನ್ನನ್ನು ಕೊಲ್ಲುವ ಶಿಶು ನಂದಗೋಕುಲದಲ್ಲಿ ಬೆಳೆಯುತ್ತಿದೆ. ಕಂಸ
ಹತಾಶನಾಗುತ್ತನೆ. ಮೊದಲೊಮ್ಮೆ ಮೊಳಗಿದ ಅಶರೀರವಾಣಿ ಸಾವಿನ ಭೀತಿಯನ್ನು ತಂದು
ಭಯವನ್ನು ಹುಟ್ಟಿಸಿದ್ದರೆ ನಂತರ ಬಂದ ನಾರದರು ಮತ್ತಷ್ಟು ಗೊಂದಲವನ್ನು ಸೃಷ್ಟಿಸಿ ಬಿಡುತ್ತಾರೆ.
ಇದೀಗ ಕೊನೆಯಲ್ಲಂತೂ ವಿಧಿಯ ಅಟ್ಟ ಹಾಸದ ಸದ್ದಿಗೆ ಬೆರಗಾಗುತ್ತಾನೆ. ಮೂರು
ಬಾರಿಯೂ ವಿಧಿ ಆತನ ಮರಣದ ನಿಮಿತ್ತವನ್ನು ಮೊದಲಾಗಿ
ತಿಳಿಸಿದರೂ ಕಂಸ ಅಸಹಾಯಕನಾಗುತ್ತಾನೆ.
ನಂತರವೂ ವಿಧಿಗೆ ಸಡ್ಡು ಹೊಡೆಯುವಲ್ಲಿಆತನ ಮನಸ್ಸು ಪೂತನಿಯ ಕುರಿತು ಚಿಂತಿಸುತ್ತದೆ. ಅಲ್ಲಿಯೂ ಕಂಸ
ಯೋಚಿಸುವುದು...ಒಂದೋ ವಿಷ ಹೀರಿ ಮಗು ಸಾಯಬೇಕು, ಇಲ್ಲಾ ಈಕೆಯ ನಂಜಾದರೂ ಖಾಲಿಯಾಗಬೇಕು. ಆದರೆ
ನಂಜಲ್ಲದೇ ಪೂತನಿಯಲ್ಲಿ ಏನೂ ಇಲ್ಲ ಎಂಬುದು ವಿಪರ್ಯಾಸ.
ಕೃಷ್ಣಜನ್ಮ ಕಥಾನಕ ಮಂಗಳವಾದರೂ ಕಂಸನ ಹತಾಶ ಮುಖ ಸ್ಮೃತಿಯಿಂದ
ಮಾಸುವುದೇ ಇಲ್ಲ.

very good
ReplyDelete