ದಶಕಗಳ ಹಿಂದೆ ಯಾವುದೋ ಪುಸ್ತಕವನ್ನು ಕೊಂಡುಕೊಳ್ಳಲು ಪೈವಳಿಕೆಯ
ನಗರದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಗೆ
ಹೋಗಿದ್ದೆ. ಅಂದು ಈಗಿನಂತೆ ದೊಡ್ಡ ಶಾಲಾ
ಕಟ್ಟಡಗಳಿರಲಿಲ್ಲ. ಎರಡು ಮೂರು ಹಂಚಿನ ಕಟ್ಟಡವಿದ್ದ ಅತ್ಯಂತ ಹಳೆಯ ಶಾಲೆಯದು. ಶಿಥಿಲವಾದ ಹಳೆಯ
ಗೋಡೆ, ಹಂಚು, ಬಾಗಿಲು ಇಲ್ಲದ ಕಿಟಿಕಿಗಳು, ಹೀಗೆ ಒಂದು ಹಳ್ಳಿಯ ಸರಕಾರೀ ಶಾಲೆ ಅಂದು ಹೇಗಿರಬೇಕಿತ್ತೋ
ಹಾಗಿತ್ತು. ಹೀಗೆ ಶಾಲಾ ವಠಾರಕ್ಕೆ ಕಾಲಿಡಬೇಕಾದರೆ ಸುಶ್ರಾವ್ಯವಾಗಿ ಇಂಪಾದ ಗಡಸು
ಸ್ವರದಲ್ಲಿ ರಾಘವಾಂಕನ ಕಾವ್ಯದ ಪದ್ಯವೊಂದು ಅಲೆ
ಅಲೆಯಾಗಿ ಶಾಲಾವಠಾರವೆಲ್ಲ ಮೊಳಗುತ್ತಿತ್ತು. ಬೇರೆ ಹಲವು ತರಗತಿಗಳಲ್ಲಿ ವಿವಿಧ ಪಾಠಗಳು
ಚಟುವಟಿಕೆಗಳು ನಡೆಯುತ್ತಿದ್ದರೂ ಈ ತರಗತಿಯ ರಾಘವಾಂಕನ ಕಾವ್ಯ ಪಠನ ಮೌನವಾಗಿ ಒಂದು ಸಲ
ಕಿವಿಕೊಡುವಂತೆ ಮಾಡಿದ್ದು ಸುಳ್ಳಲ್ಲ. ಜಗಲಿಯಲ್ಲಿ ಹೆಜ್ಜೆ ಇಡುತ್ತಿರಬೇಕಾದರೆ ತರಗತಿಯ
ಕಿಟಿಕಿಯೊಳಗಡೆ ಒಂದು ಸಲ ಆಯಾಚಿತವಾಗಿ ಧ್ವನಿ ಬಂದೆಡೆ ಇಣುಕಿದೆ. ಉದ್ದ ಜುಬ್ಬಾ, ಕಪ್ಪನೆಯ ದಪ್ಪ
ಕನ್ನಡಕದ ಆಜಾನು ಬಾಹು ಎಂಬ ವ್ಯಕ್ತಿತ್ವದ ಆಧ್ಯಾಪಕರೊಬ್ಬರು ಪಾಠ ಮಾಡುತ್ತಿದ್ದರು. ಅವರ
ಅಂಗಭಂಗಿ, ಮಕ್ಕಳ ಶಾಂತ ಮೌನ ಎಲ್ಲವನ್ನೂ ನೋಡುತ್ತಿದ್ದರೆ ರಾಘವಾಂಕ ನಿಜಕ್ಕೂ ಮೋಡಿ
ಮಾಡಿದಂತಿತ್ತು.
ಅಂದು ಕನ್ನಡ
ಕಾವ್ಯದ ಪಾಠ ಮಾಡುತ್ತಿದ್ದ ಆ ವ್ಯಕ್ತಿ ಬೇರೆ
ಯಾರೂ ಅಲ್ಲ, ನಮ್ಮ ಗ್ರಾಮ ಮಾತ್ರವಲ್ಲ ಸುತ್ತ ಹತ್ತೂರಿನಲ್ಲೂ ಜನಪ್ರಿಯ ಗುರುಗಳಾದ ಶ್ರೀ ದೇವಕಾನ ಕೃಷ್ಣ ಭಟ್ಟರು. ಅತ್ಯಂತ ಸರಳ
ವ್ಯಕ್ತಿತ್ವದ ಅಷ್ಟೇ ಗಾಂಭೀರ್ಯ ನಡೆಯ ದೇವಕಾನದವರು ಇದ್ದಲ್ಲಿ ಯಕ್ಷಗಾನದ ದೇವ ಕಾನನವೇ ಬಂದು
ನಿಂತ ಅನುಭವವಾಗುತ್ತಿತ್ತು. ಇಂದು ಆ ದೇವ ಕಾನನ
ನಿಜಕ್ಕೂ ಮೌನದಲ್ಲಿ ಲೀನವಾಗಿದೆ.
ಹಗಲಿನಲ್ಲಿ ಶಾಲಾ ಅಧ್ಯಾಪನದಲ್ಲಿ ಎಷ್ಟು ತಲ್ಲೀನರಾಗಿ
ಒಂದರ್ಥದಲ್ಲಿ ಪುರುಸೊತ್ತಿಲ್ಲದ ಚಟುವಟಿಕೆಯಲ್ಲಿ ಇರುತ್ತಿದ್ದರೋ ಅದೇ ರೀತಿ ರಾತ್ರಿ ಊರ ಹತ್ತು
ಹಲವು ಸಮಾರಂಭಗಳಲ್ಲಿ ಚಟುವಟಿಕೆಯ ಚಿಲುಮೆಯಾಗುತ್ತಿದ್ದ ಕೃಷ್ಣ ಮಾಸ್ಟ್ರು ವೃತ್ತಿಯಿಂದಲೂ ಪ್ರವೃತ್ತಿಯಿಂದಲೂ ಸದಾ
ಕಾರ್ಯಶೀಲ ವ್ಯಕ್ತಿಯಾಗಿದ್ದರು. ಹಗಲಿನಲ್ಲಿ
ಶಾಲೆಯ ಅಧ್ಯಾಪನ, ರಾತ್ರಿ ಯಕ್ಷಗಾನ, ವೇಷ ಭೂಷಣ.
ನಮ್ಮೂರಿನ ಹಲವು ಶಾಲೆಗಳ
ವಾರ್ಷಿಕೋತ್ಸವಗಳಲ್ಲಿ ಇವರ ವೇಷ ಭೂಷಣಗಳು ಮೆರುಗದೇ ಇದ್ದರೆ ರಾತ್ರಿ ಬೆಳಗಾಗುವುದಿಲ್ಲ. ಸ್ವತಃ ವೇಷಧಾರಿಯಾಗಿದ್ದರೂ ಇವರು ವೇಷ ಹಾಕಿ
ರಂಗವೇರುತ್ತಿದ್ದುದು. ಅಪರೂಪ. ನನ್ನ ತೀರಾ ಬಾಲ್ಯದಲ್ಲಿ ಇವರ ಕೆಲವು ವೇಷಗಳನ್ನಷ್ಟೇ ನೋಡಿದ
ನೆನಪು, ಮಿಕ್ಕೆಲ್ಲ ಇವರೆಂದಿಗೂ ಹಿನ್ನೆಲೆಯ ಚಕ್ರವರ್ತಿಯಾಗಿಯೇ ಮೆರೆದವರು. ಊರಲ್ಲಿ ಎಲ್ಲೇ
ನಾಟಕ ಯಕ್ಷಗಾನ ಆದರೂ ಚೌಕಿಗೆ ಹೋದರೆ, ತಲೆಗೆ ಒಂದು ಮುಂಡಾಸು, ಮುಖದಲ್ಲಿ ಒಂದು ಕನ್ನಡಕ ಹಿಂಗೈಗೆ ಮೆತ್ತಿದ ಒಂದಿಷ್ಟು ಬಣ್ಣಗಳು, ಕೈಯಲ್ಲೊಂದು
ಕುಂಚ ಹಿಡಿದ ಭಟ್ಟರನ್ನು ಕಾಣದೇ ಬರುವುದು ಸಾಧ್ಯವಿಲ್ಲ. ದೂರದಲ್ಲಿ ನಮ್ಮನ್ನು ನೋಡಿದರೂ ಹತ್ತಿರ
ಕರೆದು ಕುಶಲವನ್ನು ವಿಚಾರಿಸುವ ಕೃಷ್ಣ ಭಟ್ಟರ ಸ್ನೇಹ
ಆತ್ಮೀಯತೆ ಮರೆಯುವುದು ಸಾಧ್ಯವಿಲ್ಲದ ಮಾತು.
ಯಕ್ಷಗಾನವೆಂದರೆ ನಾನು
ಕೇವಲ ಪ್ರೇಕ್ಷಕನಾದವನು. ಆದರೂ ಬಾಲ್ಯ ಪ್ರೇಕ್ಷಕತ್ವ ಏನಿದೆ, ಅದರ ಪರಿಚಯವಾದದ್ದು ಶಾಲಾ ಕಾರ್ಯಕ್ರಮದಲ್ಲಿನ ಮಾಸ್ತರ
ವೇಷವನ್ನು ನೋಡಿ. ಒಂದರ್ಥದಲ್ಲಿ ಯಕ್ಷಗಾನದ ಆದ್ಯಾಕ್ಷರದಂತೆ ಯಕ್ಷಗಾನದ ಪರಿಚಯವೂ ಸಹ ಕೃಷ್ಣ
ಭಟ್ಟರ ವೇಷದಿಂದಲೇ ಆಗಿತ್ತು. ಮೊದ ಮೊದಲು ವೇಷದಲ್ಲಿ ಕಾಣುತ್ತಿದ್ದವರು, ಯಕ್ಷಗಾನ ವಲಯ
ಕೊರತೆಯನ್ನು ಅನುಭವಿಸುತ್ತಿದ್ದ ಹಿನ್ನೆಲೆಯಾದ ಆಹಾರ್ಯದ ಬೆಳೆಗೆ ಕೈ ಹಾಕಿ ಶ್ರೀ ಗಣೇಶ ಕಲಾವೃಂದ
ಪೈವಳಿಕೆಯನ್ನು ಕಟ್ಟಿ ಬೆಳೆಸಿದರು. ಇಂದಿಗೂ ದೇವಕಾನದ ವೇಷ ಭೂಷಣವೆಂದರೆ ಅಚ್ಚುಕಟ್ಟಾದ ಶಿಸ್ತಿನ
ಝಗ ಝಗಿಸುವ ವೇಷ ಭೂಷಣಗಳೆಂದು ಪ್ರಸಿದ್ಧಿಯನ್ನು ಪಡೆದಿವೆ. ಹಲವು ಮೇಳಗಳಿಗೆ ಬೇಕಾಗುವಷ್ಟು
ವೇಷಭೂಷಣಗಳನ್ನು ಹೊಂದಿರುವ ಈ ಸಂಸ್ಥೆ ಬೆಳೆದು ಬಂದಿರುವುದು ಅಚ್ಚರಿ ಎನಿಸಿತ್ತದೆ. ಇದರ ಹಿಂದೆ
ದೇವಕಾನದವರ ಕರ್ತೃತ್ವ ಶಕ್ತಿ ಅಗಾಧವಾದುದು. ಇಂದು ಯಕ್ಷಗಾನ ಕ್ಷೇತ್ರ ಇದನ್ನು ಕೃತಜ್ಞತೆಯಿಂದ
ಸ್ಮರಿಸುತ್ತದೆ. ಇಂದು ದೇವಕಾನದವರ ವೇಷ ಭೂಷಣವನ್ನು ತೊಡದ ಯಕ್ಷಗಾನ ಕಲಾವಿದರೂ ಇಲ್ಲ, ಕುಣಿಯದ
ರಂಗಸ್ಥಳವೂ ಇಲ್ಲ. ಯಕ್ಷಗಾನದ ಪ್ರತೀ ಮೇಳಕ್ಕೂ ಒಂದು ಚೌಕಿ ಇದ್ದೇ ಇರುತ್ತದೆ. ಆದರೆ ಸಮಗ್ರ
ಯಕ್ಷಗಾನಕ್ಕೆ ಚೌಕಿ ಎಂಬುದು ಇದ್ದರೆ ಅದು ದೇವಕಾನದವರ ಚೌಕಿ. ಇದು ವಿಪುಲವಾಗಿ ವಿಶಾಲವಾಗಿ ಯಕ್ಷಗಾನದ ಅನಿವಾರ್ಯ
ಅಂಗವಾಗಿ ಬೆಳೆದು ನಿಂತಿದೆ. ಯಕ್ಷಗಾನದಲ್ಲಿ
ನೇಪಥ್ಯ ಕಲಾವಿದರಿಗೂ ಒಂದು ಸೂಕ್ತ ಸ್ಥಾನಮಾನವನ್ನೂ ಒದಗಿಸಿದ ಇವರ ಕಾರ್ಯಶೀಲತೆ ಯಕ್ಷಗಾನದಲ್ಲಿ
ನೇಪಥ್ಯವೂ ಹೇಗೆ ಪ್ರಧಾನವಾಗುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ. ಅತ್ಯಂತ ಶಿಸ್ತು ಬದ್ದ
ಚೌಕಿಯ ವ್ಯವಸ್ಥೆಗಳು, ಸುಂದರವಾದ ಶುಭ್ರವಾದ ವೇಷ ಭೂಷಣಗಳು ವಾಸ್ತವದಲ್ಲಿ ಯಕ್ಷಗಾನದ ಚೌಕಿ
ಪರಿಕರಗಳು ಹೇಗಿರಬೇಕು ಎಂಬುದಕ್ಕೆ ನಿದರ್ಶನವಾಗಿ ವ್ಯವಸ್ಥಿತವಾಗಿರುತ್ತಿತ್ತು. ಇಂದಿಗೂ
ಪೈವಳಿಕೆ ಬಸ್ ಸ್ಟಾಪ್ ನ ಎದುರಿನ ಖಾಲಿಜಾಗವನ್ನು ಕಂಡಾಗ ಇವರ ನೆನಪು ಒತ್ತಿ ಬರುತ್ತದೆ. ಇಂದ್ರನೋ, ಪಾರ್ಥನೋ
ಆಗಿ ರಂಗದಲ್ಲಿ ಮೆರೆದಾಡಿದ ವೇಷ ಭೂಷಣಗಳು ಸೂರ್ಯನ ಬಿಸಿಲಿಗೆ ಮೈಯೊಡ್ದಿ
ಪುಳಕಗೊಳ್ಳುತ್ತಿದ್ದವು. ಅದು ಇನ್ನೆಂದಿಗೂ ನೆನಪಿನ ಪುಟಗಳಿಗೇ ಸೀಮಿತ. ವೇಷತೊಟ್ಟ ನಂತರ ಕಲಾವಿದ ಅದು ಯಾರೇ ಆಗಿರಲಿ ಇವರ
ಸೊತ್ತಾಗಿ ಪರಿಗಣನೆಯಾಗುತ್ತಿತ್ತು.
ವೇಷತೊಟ್ಟವರಿಗೆ ಕುಳಿತುಕೊಳ್ಳುವುದಕ್ಕಾಗಿಯೇ ಒಂದು ಬೆಂಚನ್ನು ಇಟ್ಟು ವೇಷಧಾರಿಗಳು
ಯಾರೇ ಇರಲಿ ಅಲ್ಲೇ ಕುಳಿತುಕೊಳ್ಳುವಂತೆ ನಿರ್ಬಂಧಿಸುತ್ತಿದ್ದರು. ಒಂದು ರೀತಿಯಲ್ಲಿ ಯಕ್ಷಗಾನದ ವೇಷಗಾರಿಕೆಗೆ ಇದು
ಗೌರವವನ್ನು ತಂದುಕೊಡುತ್ತಿತ್ತು.
ಶಾಲಾ ಕಾಲೆಜುಗಳ ಯಕ್ಷಗಾನ
ಕಾರ್ಯಕ್ರಮಗಳಿರಲಿ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿರಲಿ, ವ್ಯವಸಾಯಿ ಅಥವಾ ಹವ್ಯಾಸಿ ಕಲಾವಿದರಿರಲಿ,
ಇವರಿಂದ ಯಕ್ಷಗಾನದ ತಕ ಧಿಮಿ ತಾ ಕುಣಿತವನ್ನು ಕಲಿತವರು
ಹಲವರು. ಎಲ್ಲಾ ಕ್ಷೇತ್ರಗಳಲ್ಲೂ ಗುರು ಸಮಾನ ವ್ಯಕ್ತಿತ್ವ ಹೊಂದುವುದು ಎಂದರೆ ಅದು
ವ್ಯಕ್ತಿಗತವಾಗಿ ಗಳಿಸುವ ಅರ್ಹತೆ. ಅದು ದೇವಕಾನ
ಕೃಷ್ಣ ಭಟ್ಟರ ಹೆಗ್ಗಳಿಕೆ.
ಬಿಡುವಿನವೇಳೆಯಲ್ಲೂ
ಇವರಿಗೆ ಯಕ್ಷಗಾನದ ಕಲೆಯ ಮೇಲೆ ಇರುವ ಕಾಳಜಿ ಗಮನಾರ್ಹವೆನಿಸುತ್ತದೆ. ಅದಿಲ್ಲವಾದರೆ ಯಕ್ಷಗಾನದ
ವೇಷ ಭೂಷಣಗಳು ಈ ರೀತಿ ವೈಭವೀಕರಿಸುತ್ತಿರಲಿಲ್ಲ. ಶಾಲೆಯಲ್ಲಿದ್ದಾಗಲು ಸದಾ ಯಕ್ಷಗಾನ ಪದಗಳನ್ನು
ಗುನು ಗುನಿಸುತ್ತಿದ್ದ ಇವರು ತಮ್ಮೊಳಗೆ ಯಕ್ಷಗಾನ ಪ್ರಚೋದನೆಯನ್ನು ಸದಾ
ಜೀವಂತವಾಗಿರಿಸುತ್ತಿದ್ದರು.
ಯಕ್ಷಗಾನ ಚೌಕಿಯ ಪ್ರೇರಕ ಶಕ್ತಿ ದೇವಕಾನ ಕೃಷ್ಣ ಭಟ್ಟರು ಬದುಕಿನ
ವೇಷ ಕಳಚಿ ನಿಜ ಜೀವನದ ಚೌಕಿಗೆ ಸೇರಿ ಹೋದರು. ಯಕ್ಷಗಾನದಲ್ಲಿ ದೇವಕಾನಕ್ಕ್ಕೂ
ಒಂದು ಖ್ಯಾತಿಯನ್ನು ತಂದು ಕೊಟ್ಟ ಇವರ ಕಾರ್ಯಶೈಲಿ ಯಕ್ಷಗಾನ ಇರುವವರೆಗೂ ಚಿರಸ್ಥಾಯಿಯಾಗಿ
ಉಳಿಯುವುದರಲ್ಲಿ ಅನುಮಾನವಿಲ್ಲ. ಕಳಚಿದ ವೇಷ
ಇನ್ನೊಂದು ಪಾತ್ರವಾಗಿಯೋ ವೇಷವಾಗಿಯೋ ರಂಗಸ್ಥಳ ಏರುವುದು ಸಾಮಾನ್ಯ. ಅಂತೇ ದೇವಕಾನ ಕೃಷ್ಣ
ಭಟ್ಟರು, ದೈಹಿಕವಾಗಿ ನಮ್ಮೊಡನೇ ಇಲ್ಲದೇ ಇದ್ದರೂ ಯಾವುದೋ ಒಂದು ರೂಪದ ವೇಷವಾಗಿಯೋ ನಮ್ಮ ನಡುವೆ
ಇದ್ದಂತೆ ಭಾಸವಾಗುತ್ತದೆ. ಗತಿಸಿದ ಮಹನೀಯರ ಜೀವಂತಿಕೆಯ ದ್ಯೋತಕವದು. ಇವರ ಒಡನಾಡಿಗಳಿಗೂ , ಬಂಧು
ಮಿತ್ರರಿಗೂ ಇವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ದಯಪಾಲಿಸುತ್ತಾ ಇವರ
ಆತ್ಮಕ್ಕೆ ಚಿರಶಾಂತಿಯನ್ನು ಕಲ್ಪಿಸಲಿ ಎಂಬ ಪಾರ್ಥನೆ ಇದು.
.

No comments:
Post a Comment