"ಇದು ವಿಮರ್ಶೆಯಲ್ಲದ ಚಿಂತನ"

Sunday, September 15, 2019

ಸತ್ಯ ಕಹಿಯಾಗುವಾಗ


            ಸತ್ಯಕ್ಕೆ ವಿಭಿನ್ನ ಮುಖವಿದೆ ಅಂತ ಕೆಲವರ ಅನಿಸಿಕೆ. ಆದರೆ ಸತ್ಯಕ್ಕೆ ಇರುವ ಮುಖ ಒಂದೇ, ಕಾಣುವ ದೃಷ್ಟಿಯೇ ಭಿನ್ನ. ಜ್ವರ ಬಂದು ಖಾಯಿಲೆ ಮಲಗಿದವನನ್ನು ಎಬ್ಬಿಸಿ ಬಿಸಿ ಬಿಸಿ ತುಪ್ಪ ಗಂಜಿ ಕಲಸಿಕೊಟ್ಟರೂ ಅದು ಕಹಿಯಾಗಿಯೇ ಇರುತ್ತದೆ. ಅದು ತುಪ್ಪ ಗಂಜಿಯ ಕಹಿ ಅಂತ ಹೇಳುವುದಕ್ಕೆ ಸಾಧ್ಯ ಉಂಟೇ? ಆತನ ಬಾಯಿ ನಾಲಗೆ ಕೆಟ್ಟಿರುವುದಕ್ಕೆ ತುಪ್ಪ ಗಂಜಿಯನ್ನು ಕಹಿಯಾಗಿಯೇ ಕಂಡರೆ ತನ್ನ ಖಾಯಿಲೆ ಮುಚ್ಚಿ ಹೋಗುತ್ತದೆ ಎಂಬ ಭ್ರಮೆ ಆವರಿಸಿರುವುದೇ ಕಾರಣ. ಹಾಗಾಗಿ ಸತ್ಯವನ್ನೂ ಕಹಿ ಸತ್ಯ ಕಟು ಸತ್ಯ ಅಂತ ತಮ್ಮ ದೌರ್ಬಲ್ಯವನ್ನು ಸತ್ಯದ ಮೇಲೆ ಆರೋಪಿಸುವುದುಂಟು. ಇದನ್ನೇ ಪಲಾಯನವಾದ ಅಂತ ವ್ಯಾಖ್ಯಾನಿಸಲೂ ಬಹುದು.  ಸತ್ಯ ಕಹಿಯಾದರೆ ಸುಳ್ಳು ಸಿಹಿಯೇ? ಅಥವಾ ಈಗ ಅನುಭವಿಸುವ ಸಿಹಿ ಏನಿದೆಯೋ ಅದು ಭ್ರಮೆ ಎಂದು ಅಂದುಕೊಳ್ಳುವುದೇ?

            ಸತ್ಯ ಕಹಿಯೋ ಸಿಹಿಯೋ ಅಂತ ಕನ್ನಡಿಯ ಪ್ರತಿಫಲನದಂತೆ  ವರ್ತನೆಯೇ ಹೇಳಿಬಿಡುತ್ತದೆ.

            ಹಿಂದೆ ನಾನು ಚಿಕ್ಕವನಿರುವಾಗ ಊರಲ್ಲಿ ಒಂದು ಸ್ಥಳೀಯ ಪತ್ರಿಕೆ ಬರುತ್ತಿತ್ತು. ಸೀಮಿತ ಪರಿಧಿಯಲ್ಲಿ ಈ ಫೇಸ್ ಬುಕ್ ಮುಂತಾದ ಮಾಧ್ಯಮಗಳೇನು ಮಾಡುತ್ತವೆಯೋ ಅದನ್ನು ಅದೇ ಪತ್ರಿಕೆ ಮಾಡುತ್ತಿತ್ತು. ಈಗಿನ  ಅಂತರ್ಜಾಲದ ದೊಡ್ಡ ಬಡಬಾಗ್ನಿಯ ಮುಂದೆ ಅದು ಮಂದ ಬೆಳಕಾದರೂ ಅದೂ ಈಗಲು ನೆನಪಿನಲ್ಲಿರುವುದಕ್ಕೆ ಮಂದವಾಗಿ ಉರಿದುಕೊಂಡು ಅದು ಮಾಡಿದ ಕೆಲಸವೇ ಕಾರಣ.  ಆ ಪತ್ರಿಕೆಯ ಹೆಸರು ಅಮೃತ ವಾರ ಪತ್ರಿಕೆ. ಅದು ವಾರ ಪತ್ರಿಕೆಯೋ ಮಾಸಿಕವೋ ನೆನಪಿಲ್ಲ. ಆದರೆ ಕೈಯಗಲದ ಆ ಪುಟ್ಟ ಪತ್ರಿಕೆ ಹೇಳಿದ ಸತ್ಯಗಳು ಅಂದು ಕಹಿಯಾಗಿ ಕಂಡರೂ ಇಂದು ಸಿಹಿಯ ಅನುಭವವನ್ನು ನೀಡುತ್ತದೆ. ಬಹುಶ ಈಗ ಬಂದ ಪ್ರೌಢತೆಯಿಂದ ಬಂದ ಜ್ವರ ಈಗ ವಾಸಿಯಾಗಿದೆ ಅಂತ ತಿಳಿಯಬೇಕು.

            ಆಗ ಯಕ್ಷಗಾನದಲ್ಲಿ ತುಳು ಯಕ್ಷಗಾನಗಳ ಮತ್ತು ಡೇರೆ ಮೇಳಗಳ ಪರ್ವಕಾಲ. ಊರೆಲ್ಲಾ ಸಡಗರವನ್ನು ದಿನವೂ ಹಂಚುವ ಈ ಮೇಳಗಳು ಅಂದು ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ಸಿನಿಮಾ ಲೋಕ ಗ್ರಾಮಗಳಲ್ಲಿ ಅಷ್ಟಾಗಿ ಪರಿಚಯವಿಲ್ಲದಿರುವುದರಿಂದ ಈಗಿನಂತೆ ಸಿನಿಮಾ ವಿಚಾರಗಳು ಅಂದು ವ್ಯಾಪಕವಾಗಿ ಇರಲಿಲ್ಲ. ಹಾಗಾಗಿ ಜನರಿಗೆ ಈ ಯಕ್ಷಗಾನದ ಒಳ ಒರಗಿನ ವಿಚಾರಗಳೇ ಇಂದಿನ ಸಿನಿಮಾ ಅನುಭವದ ಚಿತೋಹಾರಿಯನ್ನುಒದಗಿಸುತ್ತಿದ್ದುದು ಅಪ್ಪಟ ಸತ್ಯ.

ಡೇರೆ ಮೇಳದ ಯಕ್ಷಗಾನ  ಬಹಳಷ್ಟು ವಾಣಿಜ್ಯ ಪರವಾಗಿ ಇದ್ದು ಹಲವಾರು ಕಲಾವಿದರ ಜೀವನಾಧಾರವಾಗಿದ್ದದ್ದು ಸುಳ್ಳಲ್ಲವಾದರೂ ಆಟದ ಜನಪ್ರೀಯತೆಯನ್ನು ಉಳಿಸುಕೊಳ್ಳುವಲ್ಲಿ ಮೇಳಗಳು ವಕ್ರಹಾದಿಯನ್ನು ತುಳಿಯುತ್ತಿದ್ದುದು ಅಷ್ಟೇ ಸತ್ಯ. ಹೊಸ ಪ್ರಸಂಗಗಳು ಅದರಲ್ಲೂ ತುಳು ಪ್ರಸಂಗಗಳು ( ಹೆಸರುಗಳು ಇಲ್ಲಿ ಅಪ್ರಸ್ತುತ)  ಪ್ರತೀ ವರ್ಷವೂ ಹೊಸದಾಗಿ ಪ್ರಯೋಗಕ್ಕೆ ಬರುತ್ತಿತ್ತು. ಹಲವಾರು ಪ್ರಸಂಗಗಳು ಇನ್ನಿಲ್ಲದ ಜನಪ್ರಿಯತೆಯನ್ನು ಮೇಳದ ಖ್ಯಾತಿಯನ್ನು ಕಲಾವಿದರ ಖ್ಯಾತಿಯನ್ನು ಹೆಚ್ಚಿಸಿದ್ದು ಒಂದು ಇತಿಹಾಸ. ಈ ಸಮಯದಲ್ಲಿ ಈ ತುಳು ಪ್ರಸಂಗಗಳ ವಿಮರ್ಷಾ ಲೇಖನಗಳು  ಈ ಅಮೃತ ಪತ್ರಿಕೆಯಲ್ಲಿ ಬರುತ್ತಿದ್ದವು. ಯಾವುದೇ ಹೊಸ ಪ್ರಸಂಗ ಆಡಿದಾಗ ಅದರ ಬಗ್ಗೆ ಕಟು ವಿಮರ್ಷೆಗಳು ಅದರಲ್ಲಿರುತ್ತಿದ್ದುವು. ನಾವು ಸಂಭ್ರಮಿಸಿ ನೋಡಿ ಸಂತಸ ಪಟ್ಟ ಪ್ರಸಂಗಗಳ ಬಗ್ಗೆ ಅದರಲ್ಲಿ ಕಟುವಾದ ಲೇಖನಗಳು ಬಂದಾಗ  ನಮಗೆ ಖೇದವೆನಿಸುತ್ತಿತ್ತು. ಛೇ..ಇಷ್ಟು ಒಳ್ಳೆಯ ಆಟದ ಬಗ್ಗೆ ಅದರಲ್ಲಿ ಹೀಗೆ ಬರೆದಿದೆಯಲ್ಲ?  ಆಗ ಅದರ ಬಗ್ಗೆ ಅಸಮಾಧಾನವಾದರೂ ಈಗ ಅನ್ನಿಸುತ್ತದೆ ಸುಂಟರಗಾಳಿಯ ವಿರುದ್ಧ ಸಿಳ್ಳೆ ಹೊಡಿವ ಕೆಲಸ ಆಗಲೂ ಆಗುತ್ತಿತ್ತು.

ಒಂದು ಸಲ ಪತ್ರಿಕೆಯಲ್ಲಿ ತುಳು ಪ್ರಸಂಗಗಳ ಮತ್ತದರ ಖ್ಯಾತಿಯ ಬಗ್ಗೆ ಬರೆದ ಒಂದು ವಾಕ್ಯ ಈಗಲೂ ನೆನಪಿದೆ. ಯಕ್ಷಗಾನದಲ್ಲಿ ರಾಮ ರಾವಣ ಕುಂಭಕರ್ಣ ಅರ್ಜುನ ಕೃಷ್ಣ ಕರ್ಣ...ಹೀಗೆ ಇರುವ ಪಾತ್ರಗಳ ಬದಲು ಇಂದು ಅಬ್ಬು ಸೇಕು, ಪುರುಬು ಚೋಮ ಚೋಂಕ್ರ  ಪಾತ್ರಗಳೇ ಹೆಚ್ಚು ಖ್ಯಾತಿಯನ್ನು ಗಳಿಸುತ್ತವೆ.  ಯಕ್ಷಗಾನ ಪುರಾಣದಿಂದ ಹೇಗೆ ದೂರಾಗುತ್ತದೆ ಎಂಬುದರ ಬಗ್ಗೆ ಬಂದ ಲೇಖನವದು.ಇದರ ಸತ್ಯಾಸತ್ಯತೇ ವಿಮರ್ಷೆ ಏನೇ ಇರಲಿ ಆದರೆ ವರ್ತಮಾನದ ಯಕ್ಷಗಾನದ ಬಗ್ಗೆ ಆಗಲೂ ಕಿಂಚಿತ್ ಪ್ರತಿಕ್ರಿಯೆ ಅಲ್ಲೀ ವ್ಯಕ್ತವಾಗಿತ್ತು.

ಅದರಲ್ಲೂ ಪತ್ರಿಕೆಗಳು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಪಾದಿಸುವುದು ಸಾಮಾನ್ಯ. ನೇರವಾದ ಆಪಾದನೆ ಅರೋಪ ವಿಮರ್ಶೆಗಳಿಂದ ದೂರ ಉಳಿದು ಒಂದು ರೀತಿಯ ಮಡಿವಂತಿಕೆಯ ಅಭಿಪ್ರಾಯಗಳನ್ನಷ್ಟೆ ಮಂಡಿಸಿ  ಸುರಕ್ಷಿತವಾಗಿ ಇರುತ್ತಿದ್ದವು.  ಇಂದೂ ಸಹ ಮುಂಚೂಣಿಯ ಪತ್ರಿಕೆಗಳು ಅದನ್ನೇ ಮಾಡುವುದನ್ನು ಗಮನಿಸಬಹುದು.  ಆದರೆ ಅಂದಿಗೂ ಇಂದಿಗೂ ಇರುವ ವೆತ್ಯಾಸ ಮಾತ್ರ ಆಗಾಧ ಅಂತಲೇ ಹೇಳಬೇಕು. ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಬರುವ ಅಂದಿನ ಪ್ರತಿಕ್ರಿಯೆಗೂ ಈಗ ಒಂದೆಡೇ ಆಟ ಆಗುತ್ತಿರಬೇಕಾದರೆ ಮತ್ತೊಂದು ಕಡೆ ಅದರ ಪರ ವಿರುದ್ಧ ಪ್ರತಿಕ್ರಿಯೆಗಳು ಬಂದು ಜಗಳ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪುತ್ತದೆ. ರಂಗಸ್ಥಳದಲ್ಲಿ ವೇಷ ಹಾಕಿದ ಕಲಾವಿದ ಅಲ್ಲಿ ಸಭೆಯಲ್ಲಿ ಎಷ್ಟು ಚಪ್ಪಾಳೆ ಬಿತ್ತು ಎಂದು ಎಣಿಸುವುದಕ್ಕಿಂತ ಮೊದಲು ಚೌಕಿಗೆ ಹೋಗಿ ಫೇಸ್ ಬುಕ್ ನೋಡಿಬಿಡುತ್ತಾನೆ. ವಿಪರ್ಯಾಸವೆಂದರೆ ನೋಡುವುದಕ್ಕೆ ಎಷ್ಟು ಕುತೂಹಲವಿದೆಯೋ ಅಲ್ಲಿ ಬಂದ ಪತ್ರಿಕ್ರಿಯೆಯನ್ನು ಸಮಚಿತ್ತದಿಂದ ಸ್ವೀಕರಿಸುವುದಕ್ಕೆ ಸಿದ್ಧನಿರುವುದಿಲ್ಲ. ಅಂದು ಅಮೃತ ಹೇಗೆ ಕಹಿಯಾಗಿ ಭಾಸವಾಗುತ್ತಿತ್ತೋ ಇಂದು ಅಂತರ್ಜಾಲ ಮೂಷಿಕದ ಎದುರಿನ ಮಾರ್ಜಾಲದಂತೆ ಭಾಸವಾಗುತ್ತದೆ.

ಯಕ್ಷಗಾನದ ಪ್ರೇಕ್ಷಕ ಜಗತ್ತಿನ ಅಪಸ್ವರಗಳು ಇಂದು ಮಾತ್ರವಲ್ಲ ಅಂದೂ ಇತ್ತು. ಅಂದು ಕೆಲವು ಸಲ ಪರಿಣಾಮ ಬೀರಿದರೂ ಯಕ್ಷಗಾನ ರಂಗಸ್ಥಳ ಅದರ ಬಗ್ಗೆ ಗಂಭೀರವಾಗಿದ್ದದ್ದು ಕಡಿಮೆ ಅಂತಲೇ ಹೇಳಬೇಕು. ಬಹುಶಃ ನೇರಾ ನೇರ ಪ್ರತಿಕ್ರಿಯೆಗೆ ಮಾತ್ರ ಯಕ್ಷಗಾನದ ಚೌಕಿಯಲ್ಲಿ ಕಿವಿ ತೆರೆಯುತ್ತಿತ್ತೋ ಏನೋ. ಅಂದಿನ ಬಗ್ಗೆ ಅಷ್ಟು ತಿಳಿಯದು. ಆದರೆ ಇಂದು ಯಕ್ಷಗಾನ ರಂಗ ನೇರಾನೇರ ಪ್ರತಿಕ್ರಿಯೆಗೆ ಕಾದು ಕುಳಿತಂತಿದೆ ! ವಿಚಿತ್ರ ಎಂದರೆ  ನೇರವಾಗಿ ಮುಖಾಮುಖಿಯಲ್ಲಿ ಪ್ರತಿಕೂಲ ಅಭಿಪ್ರಾಯಗಳನ್ನು ಹೇಳುವುದಕ್ಕೆ ಎಂತಹ ವಿಶ್ವಾಮಿತ್ರನೂ ಸಿದ್ದವಾಗಲಾರ. ಇಂತಹ ಸಮಯದಲ್ಲಿ ಅಂತರ್ಜಾಲದ ವಿಪುಲ ಅವಕಾಶವನ್ನು ಅಸ್ತ್ರವನ್ನಾಗಿ ಪ್ರೇಕ್ಷಕ ಸ್ವೀಕರಿಸಿದ್ದರೆ ಕಲಾವಿದ ಅದನ್ನು ಸ್ವೀಕರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾದ್ದು ಅನಿವಾರ್ಯ. ಯಾಕೆಂದರೆ ತಿಂದವನಿಗೆ ಉಗುಳುವ ಅವಕಾಶ ಇದ್ದೇ ಇರುತ್ತದೆ. ಮೊದಲು ತಿಂಗಳವರೆಗೆ ಕಾಯಬೇಕಾದರೆ ಇಂದು ಮರುಘಳಿಗೆಯೇ ಪ್ರತಿಕ್ರಿಯೆ ಸಾರ್ವಜನಿಕವಾಗಿ ಪ್ರಕಾಶಕ್ಕೆ ಬರುತ್ತದೆ.

ಇಂದು ಫೇಸ್ ಬುಕ್ ಎಂಬ ಮುಖದಿಂದ ತೊಡಗಿ ಬ್ಲಾಗುಗಳು ಅಂತರ್ಜಾಲದ ಇನ್ನಿತರ ಮಾಧ್ಯಮಗಳು ಬಹು ಸಂಖ್ಯೆಯ ಲೇಖಕರನ್ನು ಸೃಷ್ಟಿಸಿವೆ. ಅದರಲ್ಲಿ ಸತ್ವಯುತವಾದದ್ದು ಎಷ್ಟು?  ಹಾಗೆ ಎಸೆದು ಬಿಡುವ ಜಳ್ಳುಗಳೆಷ್ಟು?  ಎಂಬುದು ಓದುಗನ ಮನಸ್ಥಿತಿಯನ್ನು ಹೊಂದಿಕೊಂಡು ಇದೆ. ಇಲ್ಲಿಯೂ ಹೊಗಳಿ ಹೊಗಳಿ ವ್ಯಕ್ತಿಪೂಜೆಯ ಪರಾಕಾಷ್ಠೆಯನ್ನು ತೋರಿಸಿ ಚಮಚಾಗಿರಿಯ ಸ್ವಾರ್ಥವನ್ನು ಮೆರೆಸುವವರು ಇದ್ದಾರೆ.   ಅಪಸ್ವರಗಳು ಅಂದರೆ ವಿರುದ್ಧವಾದ ಪ್ರತಿಕ್ರಿಯೆಗಳು ಕಡಿಮೆ ಸಂಖ್ಯೆಯಲ್ಲಿ ಎಲ್ಲೊ ಒಂದೆರಡರಂತೆ ಇದ್ದರೂ ಈಗೀಗ ಅಪಸ್ವರಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸುಳ್ಳಲ್ಲ. ಆದರೆ ಯಕ್ಷಗಾನ ಲೋಕ ಅದನ್ನು ಸ್ವೀಕರಿಸುವ ರೀತಿ ನೋಡುವಾಗ ವಿಡಂಬನೆ ಎನಿಸುತ್ತದೆ. ತಪ್ಪಾದುದನ್ನು ಪ್ರಾಮಾಣಿಕವಾಗಿ ಒಪ್ಪಿ ಪ್ರೇಕ್ಷಕ ಕಲಾವಿದ ಎಂಬ ಸೌಹಾರ್ದ ಸಂಬಂಧ ಬೆಸೆಯಲು ಸಾಧ್ಯವಿದ್ದರೂ  ಅದನ್ನು ಮಾಡಲಾಗದ ಸ್ವಾರ್ಥ ಸಾಧನೆ ಇದೆ. ತುತ್ತು ಅನ್ನ ತಿನ್ನುವಾಗ ಉಪ್ಪೋ ಖಾರವೋ ಜಾಸ್ತಿಯಾದಾಗ ಅನ್ನವೆಂದರೆ ಏನೆಂದು ತಿಳಿಯದ ಮಗುವು ಅನ್ನದ ಗುಣಾವಗುಣಗಳನ್ನು ಹೇಳಿಬಿಡುತ್ತದೆ. ಆದರೆ ಯಕ್ಷಗಾನದಲ್ಲಿ ಕೇವಲ ಹೊಗಳಿಕೆ ಮಾತ್ರ ಸ್ವಾಗತವಿರುತ್ತದೆ. ಅವಗುಣಗಳನ್ನು ಹೇಳುವ ಪ್ರತಿಪಾದಿಸುವ ಅಧಿಕಾರ ಪ್ರೇಕ್ಷಕನಿಗೆ ಇಲ್ಲ.

ಒಂದು ಯಕ್ಷಗಾನ ಪ್ರದರ್ಶನವಾದಾಗ ಬಂದ ಪ್ರೇಕ್ಷಕ ಚೌಕಿಗೆ ಬಂದು ನೇರ ಕಲಾವಿದನಲ್ಲೇ ಪ್ರತಿಕ್ರಿಯೆನ್ನು ನೀಡಬೇಕು ಎಂದು ಕಲಾವಿದ ಬಯಸುತ್ತಾನೆ. ನ್ಯೂನ್ಯತೆ ಏನಿದ್ದರೂ ಸಾರ್ವಜನಿಕವಾಗಿ ಅದು ಪ್ರಚಾರವಾಗುವುದು ಇಷ್ಟವಿರುವುದಿಲ್ಲ. ಕಲಾವಿದ ಸದಾ ಚಲಾವಣೆಯಲ್ಲಿರುವುದನ್ನು ಬಯಸುವುದು ಸಹಜ. ಅಪಸ್ವರಗಳು ವಿರುದ್ದ ಪ್ರತ್ರಿಕ್ರಿಯೆಗಳು ಸಾರ್ವಜನಿಕವಾಗಿ ವ್ಯಕ್ತವಾಗುವಾಗ ಇಲ್ಲಿ ಚಲಾವಣೆಯ ನಾಣ್ಯ,  ಪೆಟ್ಟಿಗೆಯ ತಳಭಾಗಕ್ಕೆ ಸೇರುವ ಭಯ. ಎಲ್ಲವೂ ನ್ಯಾಯಯುತವಾದರೂ ಸಮಷ್ಟಿಯ ನ್ಯಾಯ ನೋಡುವಾಗ ಸಾರ್ವಜನಿಕವಾಗಿ ಬರೆದು ಪ್ರತಿಕ್ರಿಯೆಯನ್ನು ನೀಡುವ ಪ್ರೇಕ್ಷಕನಿಗೆ ನೇರ ಪ್ರತಿಕ್ರಿಯೆಗೆ ಹಲವಾರು ತೊಂದರೆಗಳಿವೆ ಎಂಬುದು ಅಷ್ಟೇ ಸತ್ಯ.

ಒಂದೆಡೆ ಯಕ್ಷಗಾನಕ್ಕೆ ಉತ್ತಮ  ಪ್ರೇಕ್ಷಕವರ್ಗ ಇಲ್ಲ ಎಂಬ ಮಾತಿದೆ. ಆದರೆ ಬಂದ ಪ್ರೇಕ್ಷಕರ ಧ್ವನಿಯನ್ನು ಕೇಳುವ ಮನಸ್ಥಿತಿಯನ್ನೂ ತೋರುವ ಮನೋಬಲವೂ ಇಲ್ಲ. ಧ್ವನಿ ಬಂದ ಕಡೆ, ಆ ಧ್ವನಿಯ ಅರ್ಹತೆಯ ಹಿನ್ನೆಲೆಯನ್ನು ನೋಡುವ ದೃಷ್ಟಿಯಲ್ಲಿ,  ಪ್ರತಿಕ್ರಿಯೆ, ಅಭಿಪ್ರಾಯ,  ವಿಮರ್ಷೆಗಳ,  ವೆತ್ಯಾಸವೇ ತಿಳಿಯದೆ ಅವುಗಳನ್ನು ವಿಮರ್ಷೆಯ ಪಟ್ಟ ಕಟ್ಟಿ ಹೇಳಿದವನ ಯೋಗ್ಯತೆಯನ್ನು ಅಳೆಯುತ್ತಾರೆ. ಈ ನಡುವೆ ಕಳೆದುಕೊಳ್ಳುವ ತನ್ನಯೋಗ್ಯತೆಯನ್ನು ಚಿಂತಿಸುವುದಿಲ್ಲ. ಒಂದು ಸತ್ಯವನ್ನು ಒಪ್ಪಿಕೊಳ್ಳದ ಸ್ವಾರ್ಥ ಹೆಡೆಯಾಡುತ್ತದೆ.  ಸಾರ್ವಜನಿಕವಾದ ಒಂದು ಪ್ರದರ್ಶನದ ಬಗ್ಗೆ ಸಾರ್ವಜನಿಕವಾಗಿಯೋ ಖಾಸಗಿಯಾಗಿ ಪ್ರತಿಕ್ರಿಯೆಯನ್ನು ನೀಡುವ  ಹಕ್ಕು ಪ್ರೇಕ್ಷಕನಿಗಿರುತ್ತದೆ. ಈ ಸಾಮಾನ್ಯ ಜ್ಞಾನವೂ ಇಂದು ಕಂಡುಬರುವುದಿಲ್ಲ.  ಪ್ರತಿಕ್ರಿಯೆ ಸ್ವೀಕರಿಸುವ ಮನಸ್ಸಿಲ್ಲದೇ ಇದ್ದಲ್ಲಿ ಕಲ್ಲು ಗೋಡೆಯ ಎದುರು ಪ್ರದರ್ಶನ ನೀಡುವುದೇ ಸೂಕ್ತ.  ಸಾರ್ವಜನಿಕವಾಗಿ ನೀಡುವ ಯಾವುದೇ ಪ್ರದರ್ಶನಕ್ಕೆ ಬೀದಿ ಬದಿಯಲ್ಲಿ ಹೋಗುವವನು ಪ್ರಕ್ರಿಯೆ ನೀಡುತ್ತಾನೆ. ಆದರೆ ಯಕ್ಷಗಾನದ ಒಬ್ಬ ಸ್ಥಿರ ಪ್ರೇಕ್ಷಕ ಪ್ರತಿಕ್ರಿಯಿಸಿದ್ದಲ್ಲಿ ಅದು ಮಹಾಪರಾಧವಾಗಿ ಆತನ ನಿತ್ಯ ಜೀವನವನ್ನು ಬಲಿತೆಗೆದುಕೊಳ್ಳುವ ಹಂತಕ್ಕೆ ತಲಪಿಸುತ್ತದೆ.  ಯಕ್ಷಗಾನ ಸಮಾಜ ಅಷ್ಟೊಂದು ಅಮಾನವೀಯತೆಯನ್ನು ಬೆಳೆಸಿದೆಯೇ ಎಂದು ಆಶ್ಚರ್ಯವಾಗುತ್ತದೆ. ಯಾಕೆ ಇಲ್ಲಿ ಸೌಹಾರ್ದತೆಯ ಸ್ನೇಹದ ವ್ಯವಹಾರ ಸಾಧ್ಯವಾಗುವುದಿಲ್ಲ. ಕಾರಣ ಇಷ್ಟೆ,  ಕಲೆಯಿಂದಲೂ ಕಲಾವಿದ ದೊಡ್ಡವನಾಗಿದ್ದಾನೆ.

ತನ್ನ ಸಮಯವನ್ನು ವ್ಯರ್ಥವಾಗಿ ಕಳೆಯುವುದಕ್ಕೆ ಯಾರೂ ಬಯಸುವುದಿಲ್ಲ. ಅದರಲ್ಲೂ ಇಂದಿನ ಜೀವನ ಕ್ರಮದಲ್ಲಿ ಸಮಯವೆಂಬುದು ವ್ಯರ್ಥವಾಗಿ ಕಳೆಯುವುದಕ್ಕಿಲ್ಲ. ಹಾಗೂ ಸಮಯ ಉಳಿಸಿ ಒಂದು ಬಯಲಾಟವನ್ನು ನೋಡುವ ಮನಸ್ಸಾಗುತ್ತದೆ. ಕೆಲವು ಸಲ ಸಮಯದ ಸದುಪಯೋಗವಾದರೂ ಎಲ್ಲ ಸಂದರ್ಭ ಅದೇ ರೀತಿಯಾಗಿರುವುದಿಲ್ಲ.  ಆಟ ನೋಡಿ ಬರುವಾಗ ಇಲ್ಲದ ಸಮಯ ಉಳಿಸಿ ಹಣ ಖರ್ಚು ಮಾಡಿ ಇದಕ್ಕೆ ಬರಬೇಕಿತ್ತೆ ಎಂದು ಅನ್ನಿಸಿದರೆ ಅದು ಆತನ ಅಪರಾಧವಾಗುವುದಿಲ್ಲ. ತನಗನಿಸಿದ ಅನಿಸಿಕೆಯನ್ನು ನೇರವಾಗಿ ಹೋಗಿ ಹೇಳುವನೋ ಪರೋಕ್ಷವಾಗಿ ಹೇಳಿದರೆ ಕಣ್ಣು ಕೆಂಪಗೆ ಪೃಷ್ಠ ಸುಡುವಂತೆ ವರ್ತಿಸುವವರು  ಇನ್ನು ನೇರವಾಗಿ ಹೇಳಿದರೆ ಒಂದೋ ಗೇಲಿ ಮಾಡಿ  ತಮ್ಮ ಅನಿಸಿಕೆಯೆನ್ನೇ ಲೇವಡಿ ಮಾಡಿಬಿಡುತ್ತಾರೆ. ಇಲ್ಲ ಜನ ಸೇರಿಸಿ ತಮ್ಮ ಬಾಹುಬಲದ ಪ್ರದರ್ಶನ ಮಾಡಿಬಿಡುತ್ತಾರೆ. ಇಂದು ಸಾರ್ವಜನಿಕ ಮಾಧ್ಯಮ ತಮ್ಮ ಅನಿಸಿಕೆಯೆನ್ನು ಹೇಳುವುದಕ್ಕೆ ಸಾಕಷ್ಟು ಅವಕಾಶವನ್ನು ಒದಗಿಸಿವೆ. ಹಾಗೆ ಹೇಳಿಕೊಳ್ಳುವುದು ಈ ಪ್ರಜಾ ಪ್ರಭುತ್ವದಲ್ಲಿ ಆತನ ಹಕ್ಕು ಆಗಿರುತ್ತದೆ.  ತಮ್ಮ ಹಣ ಸಮಯ ವ್ಯರ್ಥವಾದಾಗ ಅದರ ನೋವಿನಲ್ಲಿ ಸಾರ್ವಜನಿಕ ಮಾದ್ಯಮ ಬೆರಳ ತುದಿಯಲ್ಲಿರುವಾಗ ಅಲ್ಲೇ ತನ್ನ ಅಸಮಾಧಾನವನ್ನು ಹೊರ ಹಾಕಿಬಿಡುತ್ತಾನೆ. ತನಗಿಷ್ಟವಾಗದೇ ಇದ್ದದ್ದನ್ನು ಅದು ತಪ್ಪಾದರೂ ಅದನ್ನು ಹೇಳುವ ಸ್ವಾತಂತ್ರ್ಯ ಅವನಿಗೆ ಇದೆ.  ಅಷ್ಟಕ್ಕೆ ಆತನಿಗೆ ಬೆದರಿಕೆ ಕರೆಗಳು ಬಂದು ಬಿಡುತ್ತವೆ. ಸ್ವತಃ ಕಲಾವಿದರೇ ಕರೆ ಮಾಡಿದರೆ ಒಂದು ರೀತಿಯಲ್ಲಿ ನ್ಯಾಯ ಎನ್ನಬಹುದೇನೋ, ಆದರೆ ಚೇಲಾಗಳು ಚಮಚಾಗಿರಿ ಮಾಡುವವರು ಯಾರನ್ನೋ ಓಲೈಸಿ ತಮ್ಮ ಸ್ವಾರ್ಥ ಸಾಧಿಸುವುದಕ್ಕೆ ಬರೆದವನಿಗೆ ಕರೆ ಮಾಡಿ ದಮನ ಮಾಡುವುದು ಸಮಾಜದ ಅನಾಗರಿಕ ಮುಖದ ಲಕ್ಷಣ ಇದು. ಮಾನಸಿಕ ಗುಲಾಮರಿಗೆ ಸ್ವ ಚಿಂತನೆ ಇರುವುದಿಲ್ಲ. ಸ್ವ ಪ್ರವೃತ್ತಿ ಇರುವುದಿಲ್ಲ. ಕಲಾವಿದರಿಗೆ ಅಭಿಮಾನಿಗಳು ಯಜಮಾನರು ಇರುವುದು ಈ ದಮನ ಕಾರ್ಯಕ್ಕೆ ಅಂತ ಆನಿಸಿಬಿಡುತ್ತದೆ. ಯಕ್ಷಗಾನದಂತ ಸುಸಂಸ್ಕೃತ ಕಲೆಯ ಪ್ರತಿನಿಧಿಗಳು ನಾವುಗಳು ಎಂಬುದನ್ನು ಮರೆತು ವ್ಯವಹರಿಸುತ್ತಾರೆ.  ತಾವು ಎಸಗಿದ್ದು ತಪ್ಪು ಎಂಬ ಅಪರಾಧೀ ಭಾವ ಆತ್ಮದೊಳಗೆ ಕಾಡುವುದೇ ಇದಕ್ಕೆ ಕಾರಣ. ಹಾಗಿದ್ದು ಇವರಿಗೆ ಆತ್ಮ ಎಂಬುದು ಇದೆ ಅಂತ ಅನ್ನಿಸುವುದಿಲ್ಲ.

ನಾನು ಪ್ರತಿ ಬಾರಿಯೂ ಲೇಖನ ಬರೆಯುವಾಗ ಒಂದು ವಿಷಯವನ್ನು ಸದಾ ಜ್ಙಾಪಿಸುತ್ತೇನೆ. ಜೀವನ ಪರ್ಯಂತ ಯಕ್ಷಗಾನದ ವಿಚಾರದಲ್ಲಿ ಸಂಶೋಧನೆ ಮಾಡಿ ಗ್ರಂಥಗಳನ್ನು ಬರೆದವರ ವೇದವಾಕ್ಯಗಳನ್ನೇ ಕೇಳದೇ ಮೂಲೆಗೆ ತಳ್ಳಿದವರು ಇನ್ನು ನನ್ನ ಲೇಖನ ಗಮನಿಸಬಹುದೇ?

ಅಭಿಪ್ರಾಯಗಳನ್ನು ದಮನರೀತಿಯಲ್ಲಿ ಹತ್ತಿಕ್ಕುವುದು ಸಮುದ್ರಕ್ಕೆ ವಸ್ತುವನ್ನು ಎಸೆದಂತೆ. ಎಂದಾದರೊಂದು ದಿನ ಅದು ದಡಕ್ಕೆ ಅಪ್ಪಳಿಸಿಯೇ ಬಿಡುತ್ತದೆ. 

ಸಾವಿರಾರು ಜನರ ಮುಂದೆ ಯಕ್ಷಗಾನದ ಮಾನ ಹರಾಜಾದರು ತಕರಾರಿಲ್ಲ. ತಮ್ಮ ಪ್ರತಿಷ್ಠೆಗೆ ಧಕ್ಕೆ ಬಂದಾಗ ಯಕ್ಷಗಾನದ ಮರ್ಯಾದೆಗಿಂತಲೂ ತಮ್ಮ ಮರ್ಯಾದೆಯೇ ಹಿರಿದಾಗಿ ತೇಜೋವಧೆಯಾಯಿತು ಅಂತ ಹುಯಿಲೆಬ್ಬಿಸಿಬಿಡುತ್ತಾರೆ. ಖಾಸಗಿಯಾಗಿ ಹೋಗಿ,  ಅವರ ಸಮಯಾವಕಾಶ ನೋಡಿ,   ತಮಗೆ ತಮ್ಮ ಅನಿಸಿಕೆ ತಿಳಿಸಲೇ ಬೇಕು ಎಂಬ ಚಟವಿದ್ದಲ್ಲಿ ಹೇಳಿಬಿಡಬೇಕು.   ಅಷ್ಟಕ್ಕೂ ಬರೆದವನ ಬರಹದಲ್ಲಿ ಸತ್ಯವಿಲ್ಲ ಎಂದಾದರೆ ಸಾರ್ವಜನಿಕರು ಏನೂ ಮೂರ್ಖರೆ? ಸತ್ಯ ಯಾವುದು ?ಸುಳ್ಳು ಯಾವುದು?  ಎಂದು ನಿರ್ಧರಿಸಿ ಬರೆದವನದ್ದೇ ತಪ್ಪು ಎಂದಾದರೆ ಮೂರ್ಖ ಪ್ರಲಾಪ ಅಂತ ಬದಿಗೆ ತಳ್ಳಿಬಿಡುತ್ತಾರೆ.  ನೀವು ಪದೆ ಪದೇ ಮುಖತಃ ಭೇಟಿಯಾಗಿ ಅಭಿಪ್ರಾಯ ಮಂಡಿಸಿದರೆ ನಿಮ್ಮ ಮುಖವನ್ನು ನೋಡುವುದಕ್ಕೆ ಅವರಿಗೆ ಸಮಯ ಒದಗಿಬರುತ್ತದೆ ಎಂಬ ಭರವಸೆ ಇಲ್ಲ.  ಹಾಗಿದ್ದೂ ಸಾರ್ವಜನಿಕವಾಗಿ ಹೇಳಿದರೆ  ತಮ್ಮ ಅನುಯಾಯಿಗಳಿಂದ ಕರೆ ಮಾಡಿಸಿ ಬೆದರಿಸುವಷ್ಟು ಪ್ರಾಮುಖ್ಯತೆ ಆ ಬರಹ ಲೇಖನಕ್ಕೆ ಕೊಡುತ್ತಾರೆ ಎಂದಾದರೆ ಆ ಲೇಖನ ವಸ್ತು ಸ್ಥಿತಿಯ ಸತ್ಯವನ್ನು ತೋರಿಸಿರುತ್ತದೆ. ಸುಳ್ಳಾದರೆ ಇವರಿಗಷ್ಟು ಸಿಟ್ಟು ಬರುವ ಅವಶ್ಯಕತೆಯೇ ಇರುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಇವುಗಳೆಲ್ಲ ಸಾಮಾನ್ಯ. ಅದನ್ನು ಯಥಾ ಪ್ರಕಾರ ಸ್ವೀಕರಿಸುವ ಮನೋಭಾವ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ರಂಗಸ್ಥಳದಲ್ಲಿ ಕುಣಿವ ಬದಲು ಮನೆಯ ಅಂಗಳದಲ್ಲಿ ಕುಣಿದು ಬಿಡಬಹುದು. ಯಾರೂ ಪ್ರಶ್ನಿಸುವ ಹಾಗಿಲ್ಲ.  ಇಲ್ಲಿ ಬೇಕಾದಂತೆ ಕುಣಿವ ಸ್ವಾತಂತ್ರ್ಯ ಇದೆ ಎಂದಾದರೆ ಅದನ್ನು ವಿಮರ್ಶಿಸುವ ಪ್ರತಿಕ್ರಿಯೆಯನ್ನು ಹೇಗೆ ಬೇಕೋ ಹಾಗೆ ನೀಡುವ ಸ್ವಾತಂತ್ರ್ಯ ಅದಕ್ಕಿಂತಲೂ ಮಿಗಿಲಾಗಿ ಸಾರ್ವಜನಿಕರಿಗೆ ಇರುತ್ತದೆ.  ಇದುವರೆಗೆ ಯಕ್ಷಗಾನ ಬಲ್ಲವ ಮಾತ್ರ ಪ್ರತಿಕ್ರಿಯೆ ಕೊಡುತ್ತಿದ್ದ. ಇನ್ನು ಯಕ್ಷಗಾನಕ್ಕೆ ಸಂಭಂಧ ಪಡದವರೂ  ಅದನ್ನು ತಿಳಿಯದವರೂ ಸಹ ಯಕ್ಷಗಾನದ ಬಗ್ಗೆ ಬರೆಯುವ ವಿಮರ್ಶಿಸುವ ಹಂತ ಬರಬಹುದು.

            ನಾವು ಹೇಳಿದ್ದು ಸತ್ಯ ಅಂತ ನಿರೂಪಿಸುವುದಕ್ಕೆ ಸಾಕ್ಷ್ಯ ಬೇಕಾಗಿ ಬರುವುದಿಲ್ಲ. ನಾವು ಹೇಳಿದ್ದು ಸತ್ಯವೋ ಸುಳ್ಳೋ ಎಂಬುದನ್ನು,   ಆ ಸತ್ಯವನ್ನು ಕೇಳಿದವನ ವರ್ತನೆಯೇ ಹೇಳಿಬಿಡುತ್ತದೆ.  ಈ ಸಾಕ್ಷಿ ಇದು ಕೇವಲ ಆತ್ಮ ಸಾಕ್ಷಿಗೆ ಸಂಭಂಧಿಸಿರುತ್ತದೆ.
             
            ಅಂದಿನ ಕೈಯಗಲದ ಪತ್ರಿಕೆಯೇ  ಇಂದು ಬೃಹದಾಕಾರವಾಗಿ ಅಂತರ್ಜಾಲದ ರೂಪದಲ್ಲಿ ಬೆಳೆದು ನಿಂತಿದೆ.  ಸಾಗರದ ನೀರಿನಂತೆ ಅದನ್ನು ಅನುಭವಿಸುವ ಹಕ್ಕು ಪ್ರತಿಯೊಬ್ಬನಿಗೂ ಇರುತ್ತದೆ. ಯಕ್ಷಗಾನ ಸರ್ವ ಭಕ್ತರಿಗೂ ಸಮಾನವಾಗಿ ಸಿಗುವ ಪ್ರಸಾದವಾಗಲಿ.
 

x

No comments:

Post a Comment