"ಇದು ವಿಮರ್ಶೆಯಲ್ಲದ ಚಿಂತನ"

Thursday, October 24, 2019

ಕನ್ನಡಿ ಎದುರಿನ ಹಾಸ್ಯ




            ಒಂದು ತುಳು ಪ್ರಸಂಗದಲ್ಲಿ (ಇದನ್ನು ಹಿಂದೆ ಒಂದು ಸಲ ಉಲ್ಲೇಖಿಸಿದ್ದೆ)  ಯಕ್ಷಗಾನ ಹಾಸ್ಯದ ದಂತ ಕಥೆ ಶ್ರೀ ಮಿಜಾರು ಅಣ್ಣಪ್ಪ ನವರ ಹಾಸ್ಯ ಸನ್ನಿವೇಶ ಮರೆಯದ ಪ್ರಭಾವವನ್ನು ಬೀರಿತ್ತು.  ಅದರಲ್ಲಿ ಚೋಂಕ್ರ, ಅರಮನೆಯ ಚಾಕರಿಯವನು ಅರಸನ ಮಗಳು ಕೊಡುವ ಅಕ್ಕಿ ತೆಂಗಿನ ಕಾಯಿ ಕೊಂಡೊಯ್ಯಲು ಬರುತ್ತಾನೆ. ಇದನ್ನು ನೋಡಿದ  ಮಗಳ ಮಲತಾಯಿ ಮಹಾರಾಣಿ  ಆತನ ಕೈಯಿಂದ ಅದನ್ನು ಕಿತ್ತು ತೆಗೆಯುತ್ತಾಳೆ. ಆಗ ಮಹಾರಾಜ ಬಂದು ಮಹಾರಾಣಿಯಲ್ಲಿ ಕೇಳುತ್ತಾನೆ " ನಿನ್ನವು ಕರಳಾ?" ( ನಿನ್ನ ಹೊಟ್ಟೆಯಲ್ಲಿರುವುದು ಕರುಳೆ?) ಅದಕ್ಕೆ ಮಿಜಾರು ಅಣ್ಣಪ್ಪ ಹೇಳುವ ಮಾತಿದೆ  " ಅವು ಕರಲತ್ತ್ ಕರ್ಬದ ಸರಲ್" ಇದೇ ಸನ್ನಿವೇಶದಲ್ಲಿ ಮತ್ತು ಮುಂದುವರೆದು ಮಹಾರಾಜ ಅದೇ ಅಕ್ಕಿ ತೆಂಗಿನ ಕಾಯಿಯನ್ನು ಕೊಂಡು ಹೋಗುವಂತೆ ವಿನಂತಿಸುತ್ತಾನೆ. ಆಗ ಮಿಜಾರು ಹೇಳುವ ಮಾತು ಅದು ಎಂತಹ ಮನಸ್ಸನ್ನು ಕರಗಿಸುತ್ತದೆ.  " ಎಂಕ್ ದಾನೆ ಅಣ್ಣೆರೆ, ಪರ್ಕಟ್ ಅಂಗಿಗ್ ಕೈ ಪಾಡ್ನವುಳೇ ಕಿಸೆಗೆ" (ಹರಿದ ಅಂಗಿಗೆ ಕೈ ಹಾಕಿದಲ್ಲೆಲ್ಲ ಕಿಸೆಯೇ). ಸಭೆ ಗೊಳ್ಳನೇ ನಗುತ್ತದೆ. ಆದರೆ ಆ ಸನ್ನಿವೇಶದ ಗಂಭೀರತೆ ಮತ್ತಷ್ಟು ಗಾಢವಾಗಿ ಪ್ರಭಾವ ಬೀರುತ್ತದೆ. ಹೀಗೆ ಮಿಜಾರು ಹಾಸ್ಯ ಒಂದು ಪಿ ಹೆಚ್ ಡಿ ಸಂಶೋಧನೆಗೆ ಬೇಕಾಗುವಷ್ಟು ಇದೆ.  ಯಕ್ಷಗಾನದಲ್ಲಿ ಹಾಸ್ಯಕ್ಕೆ ಒಂದು ಮಾರ್ಗದರ್ಶಿತ್ವವನ್ನು ತೋರಿಸಿದ ಮಹನೀಯರಲ್ಲಿ ಒಬ್ಬರು ಮಿಜಾರು ಅಣ್ಣಪ್ಪನವರು. ವಾಸ್ತವದಲ್ಲಿ ಮಿಜಾರು ಹಾಸ್ಯ  ಎಂದರೆ ಆಕಾಲದಲ್ಲಿ ಮಡಿವಂತರು ಒಂದಷ್ಟು ದೂರವೇ ಉಳಿಯುತ್ತಿದ್ದರು. ಅದು ಅಶ್ಲೀಲತೆಯ ವರ್ಗೀಕರಣವೋ  ತುಳು ಪ್ರಸಂಗವಾದ ಕಾರಣವೋ ಏನಿದ್ದರೂ  ಇಂದಿಗೂ ಮಿಜಾರು ಹಾಸ್ಯ  ಸನ್ನಿವೇಶದ ಗಂಭೀರತೆಯನ್ನು ಬಿಟ್ಟು ಕದಲುತ್ತಿರಲಿಲ್ಲ. ಅಂತಹ ಮಾರ್ಮಿಕತನ ಅಲ್ಲಿರುತ್ತಿತ್ತು. ಜನ ಸಾಮಾನ್ಯರಲ್ಲಿ  ಸಾಮನ್ಯನ ಪಾಮರ ಮಾತುಗಳೇ ಅಲ್ಲಿ ನಿಲ್ಲಿಸಲಾಗದ ನಗುವಿನ ಸರಪಳಿಯನ್ನು ಸೃಷ್ಟಿಸಿ, ಸನ್ನಿವೇಶವನ್ನು ಮತ್ತಷ್ಟು ಗಾಢವಾಗಿಸುತ್ತಿದ್ದವು. ಆದರೆ ಎಂದೂ ಅವರ ಹಾಸ್ಯಕ್ಕಾಗಿ ಪ್ರಸಂಗ ನಿರ್ಣಯವಾದ ಚರಿತ್ರೆ ಇರಲಾರದು. ಯಾಕೆಂದರೆ ಯಕ್ಷಗಾನದ ಪ್ರಸಂಗಗಳ ನೆಲೆಗಟ್ಟೆ ಹಾಗೆ. ಅಲ್ಲಿ ಹಾಸ್ಯ ಪ್ರಧಾನವಾಗುವುದಿಲ್ಲ. ಆದರೆ ಇಂದು ಅದನ್ನು ಹಾಗೆ ಅಂತ ನಿರ್ಣಯಿಸುವುದಕ್ಕೆ ಸಾಧ್ಯವಿಲ್ಲ.  ಇಂದು ಗಂಭೀರ ಪ್ರಸಂಗಳು ಹಾಸ್ಯ ಕಲಾವಿದರನ್ನು ಹೇಳಿಕೊಂಡು ನಿರ್ಣಯಿಸಲ್ಪಟ್ಟು  ಪ್ರೇಕ್ಷಕನ ಅಭಿರುಚಿಯ ದಿಕ್ಕನ್ನು ತಪ್ಪಿಸಲಾಗಿದೆ ಎಂದೇ ಹೇಳಬೇಕು.


            ಹಾಸ್ಯದ ವಿಧಗಳು ಹಲವಾರು. ವ್ಯಂಗ್ಯ ಭರ್ತ್ಸನೆ, ವಿಡಂಬನೆ ಹೀಗೆ ಅದರ ಮಾಧ್ಯಮಗಳು ಅದರ ಪರಿಣಾಮಗಳು ತೀರ ವಿಭಿನ್ನ. ನಮ್ಮ ವ್ಯವಹಾರದಲ್ಲೂ ನೇರವಾಗಿ ಹೇಳಲು ಸಾಧ್ಯವಾಗದೇ ಇದ್ದಾಗ, ಹೇಳಿದ್ದು ಹೆಚ್ಚು ಪರಿಣಾಮಕಾರಿಯಾಗುವಲ್ಲಿ ಹಾಸ್ಯವನ್ನು ಬಳಸಿಕೊಳ್ಳುತ್ತೇವೆ. ಯಕ್ಷಗಾನದ ಹಾಸ್ಯ ಇದಕ್ಕೆ ಹೊರತಾಗಿ ಇಲ್ಲ.

            ಇಂದು ಪ್ರೇಕ್ಷಕ ಮನೋಭಾವ ಬದಲಾಗಿದೆಯೋ ಬದಲಾಯಿಸಲ್ಪಟ್ಟಿದೆಯೋ   ಯಕ್ಷಗಾನದ ಹಾಸ್ಯ ಸರಕು ಖಾಲಿಯಾದ ಬಿಕರಿಯನ್ನು ತೋರಿಸುತ್ತದೆ. ಹಾಗಾಗಿ ಅಶ್ಲೀಲತೆ ಅಪಹಾಸ್ಯಗಳು ಭಾಷೆ ವೆತ್ಯಾಸ ಮೀರಿ ಬಳಕೆಯಾಗುತ್ತದೆ. ವಾಸ್ತವದಲ್ಲಿ  ಹಾಸ್ಯವೂ ಗಂಭೀರ ಸನ್ನಿವೇಶದಲ್ಲಿನ ವ್ಯಂಜನದಂತೆ ಪ್ರಭಾವ ಬೀರುತ್ತದೆ. ಆದರೆ ಸನ್ನಿವೇಶದ ಪ್ರಸಂಗದ ಸಂಪೂರ್ಣ ಜ್ಞಾನ , ಪ್ರೇಕ್ಷಕ ಅದನ್ನು ಹೇಗೆ ಸ್ವೀಕರಿಸುತ್ತಿದ್ದಾನೆ ಎಂಬುದನ್ನು ಅರಿತು ಹಾಸ್ಯವನ್ನು ಪ್ರಯೋಗಿಸಬೇಕು. ಶ್ರೀ ಮಿಜಾರು ಅಣ್ಣಪ್ಪ ಇಂತಹ ಸಾಂದರ್ಭಿಕ ಹಾಸ್ಯವನ್ನು ಬಹಳ ಮಾರ್ಮಿಕವಾಗಿ ಬಳಸಿಕೊಳ್ಳುತ್ತಿದ್ದರು. ಎಲ್ಲಕ್ಕಿಂತಲೂ ಅವರು ಉಪಯೋಗಿಸುತ್ತಿದ್ದ ಶಬ್ದಗಳು ಆ ಸ್ವರ ಭಾರ ಅದು ಸನ್ನಿವೇಶದ ಭಾವನೆಯೊಂದಿಗೆ ಮಿಳಿತವಾಗಿ ಇನ್ನಷ್ಟು ಗಂಭೀರವಾಗಿ ಯೋಚಿಸುವಂತೆ ಮಾಡುತ್ತಿದ್ದವು.  ಮೇಲೆ ಹೇಳಿದ ಪರ್ಕಟು ಅಂಗಿ ....ಆ ಸನ್ನಿವೇಶಕ್ಕೆ ಆ ಪದ ಅದೆಷ್ಟು ಎರಕ್ಕ ಹೊಯ್ದಂತೆ ಹೊಂದಿಕೊಳ್ಳುತ್ತದೆ. ಇಲ್ಲಿ ಮಿಜಾರು ಅವರನ್ನು ಉಲ್ಲೇಖಿಸುವುದಕ್ಕೆ ಮುಖ್ಯ ಕಾರಣ ಅಂದಿನ ಕಾಲದಲ್ಲಿ ಮಡಿವಂತರು ಅಂತ ತಿಳಿದುಕೊಳ್ಳುವ ಮಂದಿ ಮಿಜಾರು ಹಾಸ್ಯವನ್ನು ಒಂದಷ್ಟು ದೂರವಾಗಿಯೇ ಇಡುತ್ತಿದ್ದರು. ಆದರೂ ಮಿಜಾರು ಹಾಸ್ಯದ ಗಾಢ ಪರಿಣಾಮ ಪ್ರೇಕ್ಷಕನಾಗಿ ಇದ್ದು ಅನುಭವಿಸಬೇಕು. ಸಾಮಾನ್ಯ ಜನ ಜೀವನದ ವಿಷಯಗಳೇ ಅಲ್ಲಿ ಗಂಭೀರ ಹಾಸ್ಯವಾಗಿ ಪ್ರೆಕ್ಷನ  ಮನಸ್ಸನ್ನು ಸೆಳೆಯುತ್ತಿತ್ತು. ಒಬ್ಬ ಜನಸಾಮಾನ್ಯ ಬಡವನ ಮನೋಭಾವವನ್ನೂ ಆ ಸ್ಥಿತಿಯನ್ನೂ ಮನೋಜ್ಞವಾಗಿ ಚಿತ್ರಿಸುವಲ್ಲಿ ಮಿಜಾರು ಹಾಸ್ಯ ಎಷ್ಟೇ ದೂರವಿಟ್ಟರೂ ಅದು ಮತ್ತಷ್ಟು ಅನಿವಾರ್ಯ ಎನಿಸುತ್ತಿದ್ದವು. ಕೇವಲ ಹೀಗೆ ಅಂತ ವರ್ಗೀಕರಿಸಿ ಅದನ್ನು ದೂರವಿಡುವುದು ಸರಿಯಲ್ಲ. ಯಾಕೆಂದರೆ ಅದರಲ್ಲಿ ಜೀವನಾನುಭವ ಇರುತ್ತಿತ್ತು. ಸಮಾಜದ ವ್ಯಂಗ್ಯ ವಿಡಂಬನೆಗಳು ಯಥೇಚ್ಛವಾಗಿ ಬಳಕೆಯಾಗುತ್ತಿತ್ತು.  ಮಿಜಾರು ಪಾತ್ರಗಳೆಲ್ಲ ಜನ ಸಾಮಾನ್ಯನ ಪ್ರತಿನಿಧಿತ್ವವನ್ನು ವಹಿಸಿಕೊಂಡಂತೆ ಇರುತ್ತಿತ್ತು.  ಇದನ್ನೇ ಮಿಜಾರು ಸ್ಪರ್ಶ ಎನ್ನಬಹುದು.  ಹಾಗಾಗಿ ಅವುಗಳು ಬೇರೆ ಯಾವ ಕಲಾವಿದ ಬಳಸಿಕೊಂಡರೂ ಅದು ಮಿಜಾರಿನ ಸುವಾಸನೆಗೆ ಹತ್ತಿರವಾಗುತ್ತಿರಲಿಲ್ಲ.

            ಆದರೆ ಇಂದು ಸವಕಳಿಯನ್ನು ಅನುಭವಿಸುವ ಹಾಸ್ಯ ಹಲವು ಸಲ ಹಾದಿ ತಪ್ಪಿ ’ದರೆ’  ಹಾರುವುದುಂಟು.  ಇಂತಹ ಸಂದರ್ಭದಲ್ಲಿ ಪ್ರೇಕ್ಷಕ ಜವಾಬ್ದಾರಿಯೇ ಹೆಚ್ಚು ಆವಶ್ಯಕ ಎನಿಸುತ್ತದೆ.  ಅಶ್ಲೀಲತೆ  ದ್ವಂದ್ವಾರ್ಥ ಮಾತುಗಳು ಇವು  ಹಾಸ್ಯದ ಒಂದು ಮುಖ ಅಂತ ತಿಳಿದುಕೊಂಡರೂ ಸಹ ಅದು ಯಾವ ಬಗೆಯ  ಹಾಸ್ಯ?  ಅದು ಬಳಕೆ ಯಾವಾಗ? ಅಸ್ಥಾನದ    ಅಶ್ಲೀತೆಯ ಈ ಹಾಸ್ಯಗಳು ಮನರಂಜನೆಯ  ವಿಕೃತಿಯನ್ನು ಸೃಷ್ಟಿಸುತ್ತದೆ. ಗೇಲಿ ಅಪಹಾಸ್ಯ....ಹಾಸ್ಯವಾದರೂ ಅದು ಸ್ಥಾನ ಭ್ರಷ್ಠವಾದ ಹಾಸ್ಯ. ಅದನ್ನು ಉಪಯೋಗಿಸುವುದೆಂದರೆ , ಈ ವಿಕೃತಿ ಭೀಭತ್ಸ ಅಶ್ಲೀಲ ಅಪಹಾಸ್ಯಗಳು ಅಲ್ಲಿ ಅಂದರೆ ಪ್ರಯೊಗಿಸಲ್ಪಟ್ಟಲ್ಲಿ  ಎಂದು ಸಾರಿ ಹೇಳಿದ ಹಾಗಾಗುತ್ತದೆ. ಒಂದೆಡೆ ಮರ್ಯಾದಾ ಪುರುಷೋತ್ತಮನ ತತ್ವ ಧರ್ಮಗಳನ್ನು ಯಕ್ಷಗಾನ ಪ್ರಸಂಗ ಬೋಧಿಸುತ್ತಿದ್ದರೆ, ಇನ್ನೊಂದೆಡೆ ಈ ಅಪಹಾಸ್ಯಗಳು ಪುರಾಣದ ಪವಿತ್ರತೆಯನ್ನೇ ನಾಶಮಾಡುತ್ತದೆ. ಒಂದೊಮ್ಮೆಗೆ  ಇಂತಹ ಹಾಸ್ಯ ಜನರಂಜನೆಯನ್ನು ಉಂಟು ಮಾಡಿದರೂ ಪ್ರೇಕ್ಷಕ ಅದನ್ನು ಅಂತರಂಗದಿಂದ ತಿರಸ್ಕರಿಸುತ್ತಾನೆ ಎಂಬುದು ಅತ್ಯಂತ ಸತ್ಯ.  ಆ ತಿರಸ್ಕಾರ ಯಾವ ಬಗೆಯಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿಯ ಬೇಕಾದರೆ  ಪ್ರೇಕ್ಷಕ ಜ್ಞಾನ ಅರಿತಿರಬೇಕಾಗುತ್ತದೆ.  ಅತಿ ಬುದ್ಧಿವಂತಿಕೆಯ ಮಂಕು ಗಾಢವಾಗಿರುತ್ತದೆ.  ಹಲವು ಸಲ ಈ ಹಾಸ್ಯಕ್ಕೆ ನಗು ಬಂದರೂ ಆ ನಗುವಿನಲ್ಲೂ ಹಲವು ಪ್ರತಿಕ್ರಿಯೆಗಳಿರುತ್ತದೆ. ಹಾಗಾಗಿ ಹಾಸ್ಯ ಪ್ರಯೋಗಿಸುವಾಗ ಸೂಕ್ತವಾಗಿ ಬಳಸಿಕೊಳ್ಳುವುದೇ ಉತ್ತಮವಲ್ಲವೇ?

            ರಾಮಾಯಣದ ಯಾವ ಪ್ರಸಂಗವನ್ನೂ ಗಮನಿಸಿದರೂ ಅದು ಭಾವನಾತ್ಮಕವಾಗಿ ನಮ್ಮನ್ನು ಹಿಡಿದು ಬಿಡುತ್ತದೆ. ಶ್ರೀರಾಮ ಪಟ್ಟಾಭಿಷೇಕವಾಗಲೀ, ವನಾಭಿಗಮನವಾಗಲೀ ಅದರಂತೆ ಪಾದುಕಾ ಪ್ರದಾನವಾಗಲೀ ಇವುಗಳೆಲ್ಲ ಹಾಸ್ಯದ ಬಳಕೆಗೆ ಅವಕಾಶವನ್ನೇ ಕಲ್ಪಿಸುವುದಿಲ್ಲ. ’ಬಂದೆಯಾ ಇನವಂಶವಾರಿಧಿ ಎಂಭ ಭಾವನಾತ್ಮಕ’  ಪದ ಇರುವಲ್ಲಿ ಹಾಸ್ಯ ಹೇಗೆ ಹೊಂದಿಸಿಕೊಳ್ಳಬಹುದು?   ಆ ಪದವನ್ನು ಸುಮ್ಮನೇ ಕುಳಿತು ಕೇಳುವಾಗಲೂ ಹೃದಯ ಭಾರದ ಸಂವೇದನೆ ಉಂಟಾಗುತ್ತದೆ.   ಶಬರೀ ಮೋಕ್ಷ , ಚೂಡಾಮಣಿ ಪ್ರಸಂಗಗಳ  ಮೂಲ ಧಾತುವೇ  ಭಾವನೆಗಳು.  ಈ ಭಾವ ಸ್ಪಂದನವನ್ನು ಪ್ರೇಕ್ಷಕನಲ್ಲಿ ಜಾಗ್ರತ ಗೊಳಿಸಿ ಆತನನ್ನು ತ್ರೇತಾಯುಗಕ್ಕೆ ಜತೆಯಲ್ಲೇ ಕೊಂಡು ಹೋಗುತ್ತವೆ.  ಹಲವಾರು  ವರ್ಷಗಳ ಹಿಂದೆ ಒಂದು ದಿನ ನಾನು ಯಾವುದೋ ಊರಿಗೆ ಹೋಗಿದ್ದೆ. ಅದೊಂದು ಹಳ್ಳಿ ಪ್ರದೇಶ. ಹಾಗೆ ರಸ್ತೆಬದಿಗೆ ಬಂದು ಬಸ್ ಗೆ ಕಾಯುತ್ತಿರಬೇಕಾದರೆ, ಅಲ್ಲಿ  ಮೈಕ್ ಸೆಟ್ಟಿನ ಅಂಗಡಿಯೊಂದು ಇತ್ತು. ಮೈಕ್ ಬಾಡಿಗೆ ಹೋಗದೇ ಇದ್ದಾಗ ಅಂಗಡಿಯಾತ ಅಲ್ಲೇ ಮೈಕ್ ಅಂಗಡಿ ಮುಂದೆ ಇಟ್ಟು ಯಾವುದಾದರೂ ಧ್ವನಿ ಮುದ್ರಣವನ್ನು ಊರೆಲ್ಲ ಕೇಳುವಂತೆ ಹಾಕುತ್ತಿದ್ದ. ಅದೊಂದು ರೀತಿಯ ಆತನ ಮೈಕಿನ ಜಾಹೀರಾತು. ಆವಾಗ ಇನ್ನೂ ಟೇಪ್ ರೆಕಾರ್ಡರ್ ಬಳಕೆಯಲ್ಲಿ ಇಲ್ಲದ ಕಾಲ. ಇದ್ದರೂ ಬಹಳ ವೆಂದರೆ ಬಹಳ ವಿರಳ. ಹಾಗಾಗಿ ಈ ಮೈಕ್ ನ ಹಾಡುಗಳನ್ನು ಕೇಳುವುದು ಸುತ್ತ ಮುದ್ದಲಿದ್ದವರಿಗೆ ಒಂದು ಹುಮ್ಮಸ್ಸನ್ನು ತರುತ್ತಿತ್ತು. ಯಾವುದಾದರೂ ಯಕ್ಷಗಾನದ ಧ್ವನಿಮುದ್ರಣ ಹಾಕುವ ಸಂಭವವಿದ್ದರೆ ಬಸ್ ಗೆ ಕಾಯುತ್ತಿದ್ದವರು ತಮ್ಮ ಬಸ್ ಬಂದರೂ  ನಂತರದ ಬಸ್ ಗೆ ಹೋಗುವ ಅಂತ ಯಕ್ಷಗಾನಕ್ಕೆ ಕಿವಿ ಗೊಡುತ್ತಿದ್ದರು.  ಆಗ ಧ್ವನಿ ಮುದ್ರಣಗಳು  ಗ್ರಾಮ್  ಫೋನ ತಟ್ಟೆಯ ರೂಪದಲ್ಲಿ ಬರುತ್ತಿದ್ದವು. ಆ ಕಾಲದಲ್ಲಿ ಬಂದ ಮೊದಲ ಯಕ್ಷಗಾನವೇ ಪಾದುಕಾ ಪ್ರದಾನ. ಧರ್ಮಸ್ಥಳ ಮೇಳದ ಪ್ರಸಿದ್ದ ಯಕ್ಷಗಾನ ಪ್ರಸಂಗವನ್ನು ಧ್ವನಿ ಮುದ್ರಣ ಗೊಳಿಸಿ ಬಿಡುಗಡೆ ಮಾಡಿದ್ದರು. ಈ ಧ್ವನಿ ಮುದ್ರಣ ಈ ಅಂಗಡಿಯಾತ ದೊಡ್ಡದಾಗಿ ಹಾಕಿದ್ದ. ಅದನ್ನು ಕೇಳಿ ಅಂಗಡಿಯ ಬೆಂಚ್ ಮೇಳೆ ಕುಳಿತವರು ಮಾಡಿದ ಚರ್ಚೆ ಅತ್ಯಂತ ಸ್ವಾರಸ್ಯವಾಗಿತ್ತು. ಇಂದು ಅಂತಹ  ಸಂದರ್ಭಗಳು ಕಾಣುವುದಕ್ಕಿಲ್ಲ. ಒಂದುವೇಳೆ ಇದ್ದರೂ ಯಾವುದರ ಬಗ್ಗೆ ಚರ್ಚೆಯಾಗಬೇಕು, ರಾಮಾಯಣದಲ್ಲೂ ಸೇರಿಕೊಳ್ಳುವ ಪಡ್ಡೆ ಹಾಸ್ಯದ ಬಗ್ಗೆ ಚರ್ಚೆಯಾಗಬೇಕೆ? ಪುರಾಣದ ಪ್ರಸಂಗದ ಗಂಭೀರತೆಯನ್ನು ತಿಳಿಯದೆ ಚತುರ ಮತಿಯಿಂದ ಹಾಸ್ಯವನ್ನು ಪ್ರಯೋಗಿಸುವಾಗ ಯೋಚಿಸಬೇಕಾಗುತ್ತದೆ.  ಯಕ್ಷಗಾನ ಕೇವಲ ರಂಗಸ್ಥಳಕ್ಕೆ ಮಾತ್ರ ಸೀಮಿತವಾಗಿ ಇರುವುದಿಲ್ಲ ಎಂಬುದಕ್ಕೆ ಇದು ನಿದರ್ಶನ. ಕಾರ್ಯಕ್ರಮಕ್ಕೆ ಬಂದು ನೋಡಿ ಆಮೇಲೆ ಬರೆಯಿರಿ ಎನ್ನುವುದೇನೋ ಸರಿ. ಆದರೆ ಯಕ್ಷಗಾನ ಅಷ್ಟಕ್ಕೇ ಸೀಮಿತವಾಗಿ ಇರುವುದಿಲ್ಲ. ಎಲ್ಲೋ ಆದ ಯಕ್ಷಗಾನ ಮರು ನಿಮಿಷದಲ್ಲಿ ಇನ್ನೊಂದು ಕಡೆ ಪ್ರದರ್ಶನವಾಗುತ್ತದೆ. ಹಾಗಿರುವಾಗ ಅದಕ್ಕಿರುವ ವಿಮರ್ಷೆಯೂ ಅದೇ ರೀತಿಯಲ್ಲಿ ಪ್ರಕಟವಾಗುತ್ತದೆ. ಒಂದು ಕೈಯನ್ನೋ ಬಾಯಿಯನ್ನೋ ತಡೆಯಬಹುದು, ಆದರೆ  ಕೈಯಿಂದ ಮುಚ್ಚಿದ ಬಾಯಿ ಸಿಕ್ಕ ಬೆರಳಸಂದಿನಲ್ಲೂ ತನ್ನ ಪ್ರತಿಕ್ರಿಯೆಯನ್ನು ಹೊರ ಹಾಕುತ್ತದೆ ಎಂಬ ಪರಿಜ್ಞಾನ ರಂಗದಲ್ಲಿ ಬೇಕಾಗುತ್ತದೆ.

            ರಾಮಾಯಣದ ಇನ್ನೊಂದು ಜನಪ್ರಿಯ ಪ್ರಸಂಗ, ಶೂರ್ಪನಖಾ ಮಾನಭಂಗ. ಮೂಲದಲ್ಲಿ ಪಾರ್ತಿಸುಬ್ಬ ಪ್ರಸಂಗ ಬರೆದಾಗ ಅದಕ್ಕೆ ಪಂಚವಟಿ ಅಂತಲೇ ಹೆಸರಿಟ್ಟಿರಬೇಕು. ಆದರೆ ನಂತರ ಅದು ಜನಪ್ರಿಯವಾದದ್ದು  ಮಾತ್ರಾ ಮಾನಭಂಗ ಹೆಸರಿನಿಂದ. ಇಂದಿಗೂ ಹಲವುಕಡೆ ತಾಳಮದ್ದಲೆ ಯಕ್ಷಗಾನ ಬಯಲಾಟದಲ್ಲಿ ಈ ಪ್ರಸಂಗ ಆದರೂ ಅದನ್ನು ಪಂಚವಟಿ ಅಂತ ಹೆಸರಿಸುವುದು ಬಹಳ ಕಡಿಮೆ.  ಇದೋಂದು ವಿಕೃತಿ ಇರಬಹುದೇ ಎಂಬ ಅನುಮಾನ ಹಲವು ಸಲ ಹುಟ್ಟಿದೆ.  ಪಂಚವಟಿಯ ಸುಂದರ ಪರಿಸರವನ್ನು ಶೂರ್ಪನಖೆ ಹಾಳು ಮಾಡಿದ್ದರೂ ಮಾಡಿರಬಹುದು. ಆದರೆ ನಾವು ಅದನ್ನೇ ಪ್ರಾಮುಖ್ಯವಾಗಿಸಿ ಕಥೆಯ ಸ್ವಾರಸ್ಯದ ದಿಕ್ಕನ್ನೇ ಬದಲಾಯಿಸಿಬಿಡುತ್ತೇವೆ.  ಒಂದು ವಸ್ತುವನ್ನು ಋಣಾತ್ಮಕವಾಗಿ ಕಾಣುವ ಮನೋಭಾವ. ಹಾಗಾಗಿ ಈ ಪ್ರಸಂಗದಲ್ಲಿ ಹಾಸ್ಯಕ್ಕಿಂತ ಅಪಹಾಸ್ಯವೇ ವಿಜ್ರಂಭಿಸುವುದುಂಟು. ರಾಮಾಯಣದಲ್ಲಿ ಹಾಸ್ಯ ತುಸುವಾದರೂ ಇರುವುದು ಈ ಪ್ರಸಂಗದಲ್ಲಿ ಎಂಬ ಪರವಾನಿಗೆಯನ್ನೇ ಈ ಅಪ ಹಾಸ್ಯಕ್ಕೆ ಉಪಯೋಗಿಸಿಕೊಳ್ಳುವುದು ಈ ವಿಕೃತಿಯ ಇನ್ನೊಂದು ರೂಪ.  ಶೂರ್ಪನಖಿಯ ಪುರುಷಾತಿಕ್ರಮಣ ಕೇವಲ ಅಸುರೀಭಾವವನ್ನು ತೋರಿಸುವುದಲ್ಲ, ಶ್ರೀರಾಮನ ಧರ್ಮ ಪ್ರಜ್ಞೆಯನ್ನೂ ತೋರಿಸುತ್ತದೆ. ಇಲ್ಲಿ ಯಾವುದನ್ನು ಹೆಚ್ಚು ಸಾರ್ವಜನಿಕವಾಗಿ ಪ್ರತಿಪಾದಿಸಬೇಕು ಎಂಬ ವಿವೇಚನೆ  ಇರದಿದ್ದರೆ ಸಾರ್ವಜನಿಕವಾಗಿ ಅರ್ಹತೆಯನ್ನು ಪಡೆಯುವುದೇ ಇಲ್ಲ.

            ಮುಖ್ಯವಾಗಿ ಹಾಸ್ಯದಲ್ಲಿ ಅಪಹಾಸ್ಯ ಯಾವುದು? ಅದು ಅಶ್ಲೀಲವಾಗುವುದು ಯಾವಾಗ ಎಂಬ ಜ್ಞಾನ ಮುಖ್ಯವಾಗುತ್ತದೆ. ಕಾಗೆಯ ಕೂಗು ವಿಕಾರವಾಗಿಯೇ ಇರುತ್ತದೆ. ಆ ವಿಕಾರ ಅದಕ್ಕೆ ಅರಿವಿಗೆ ಬರುತ್ತದೋ ಇಲ್ಲವೋ ಆದರೆ, ಅದಕ್ಕೆ ವಿಕಾರವಲ್ಲದೆ ಬೇರೆ ತಿಳಿಯದು. ಹಾಗೇ ಹಾಸ್ಯ ಎಂಬುದು ಬೇರೆ ತಿಳಿಯದೇ ಇರುವ ಸಂಭವ ಯಕ್ಷಗಾನಕ್ಕೆ ಬರಲಾಗದು.  ಒಂದು ಕಾಲವಿತ್ತು ಮಲಯಾಳಂ ಸಿನಿಮಾ ಎಂದರೆ ಮೂಗು ಮುರಿಯುತ್ತಿದ್ದರು. ತಲೆ ಎತ್ತಿ ಅದರ ಭಿತ್ತಿಚಿತ್ರವನ್ನೂ ನೋಡುವುದೂ ಸಹ ಸಭ್ಯತೆ ಎನಿಸುತ್ತಿರಲಿಲ್ಲ. ಆದರೂ ದೇಶದಲ್ಲಿ ಮಲಯಯಾಳಂ ನಲ್ಲೇ ಅತ್ಯಂತ ಹೆಚ್ಚು ಪ್ರಬುದ್ದ ಉತ್ಕೃಷ್ಟ  ಸಿನಿಮಾ ತಯಾರಾಗುವುದನ್ನು ಯಾರೂ ಅಲ್ಲಗಳೆಯುವ ಹಾಗಿಲ್ಲ.  ಒಂದು ಉತ್ಕೃಷ್ಟ ಸಿನಿಮ ಹೇಗಿರಬೇಕೆಂದು ಮಲಯಾಳಂ ಸಿನಿಮ ನೋಡಿ ತಿಳಿಯಬಹುದು.  ಈ ರಂಗಕ್ಕೆ ಪ್ರಶಸ್ತಿಗಳು ಅಪರೂಪವಾಗುವುದೇ ಇಲ್ಲ.  ಈ ಉತ್ಕೃಷ್ಟತೆಯ ಹಿರಿಮೆ ಗರಿಮೆಗಳು ಇದ್ದರೂ  ಈಗಲೂ ಮಲಯಾಳಂ ಸಿನಿಮಾ ಎಂದಾಗ ಕೆಲವರು ಹುಬ್ಬು ಹಾರಿಸುವುದುಂಟು. ಅದನ್ನು ಯಾಕೆ ಎಂದು ವಿವರಿಸುವುದು ವಿವರ ಶೂನ್ಯವಾಗುತ್ತದೆ.   ಹೊಸ ವಸ್ತ್ರಕ್ಕೆ ಒಮ್ಮೆ ಕೊಳೆ ಅಂಟಿಕೊಂಡರೆ ಎಷ್ಟು ತೊಳೆದರೂ  ಅದು ಎಂದಿಗೂ ಹೊಸತಾಗುವುದಿಲ್ಲ.  ಹಾಗಾಗಿ ರಸ್ತೆ ಬದಿ ನಿಂತಾಗ ಎಲ್ಲೋ ಆದ ಯಕ್ಷಗಾನ ಕಿವಿಗೆ ಬೀಳುತ್ತದೆ. ಯಕ್ಷಗಾನದ ಪ್ರೇಕ್ಷಕನಲ್ಲದೇ  ಇದ್ದರೂ ಸಹ ಆತ ಪ್ರತಿಕ್ರಿಯೆ ಕೊಡಬಹುದು.  ಅದು ಮಲಯಾಳಂ ಸಿನಿಮಾ ಎಂದಾಗ ಹುಬ್ಬೇರಿಸುವ ಅಂಗೀಕಾರದಂತೆ ಆಗಬಾರದಲ್ಲವೇ?  ತುಳು ಯಕ್ಷಗಾನ ಬಹಳ ಉತ್ಕೃಷ್ಟ ಇದ್ದರೂ ಇರಬಹುದು. ಆದರೆ ಅದನ್ನೂ ಇದೇ ದೃಷ್ಟಿಕೋನದಿಂದ  ಅಷ್ಟೇ ಮಡಿವಂತಿಕೆಯಿಂದ ಕಾಣುವ ಪ್ರೇಕ್ಷಕರೂ ಇಲ್ಲದಿಲ್ಲ. 

        ಇವುಗಳೆಲ್ಲ ನಿಷ್ಠೂರ ಪ್ರತಿಕ್ರಿಯೆ ಎನ್ನಿಸಬಹುದು ಆದರೆ ಅಪಹಾಸ್ಯವನ್ನೂ ಸಮರ್ಥಿಸುವ ಮನೋಭಾವ ಇರುವಾಗ ಈ ನಿಷ್ಟೂರವೂ ಅನಿವಾರ್ಯ ಎನ್ನಿಸುತ್ತದೆ.   ಹಾಸ್ಯ ಸಂಸ್ಕಾರದ ಕನ್ನಡಿ ಇದ್ದಂತೆ. ವ್ಯಕ್ತಿತ್ವವನ್ನು ಬೇಗನೇ ಅಳೆದು ಬಿಡುತ್ತದೆ.

ಅಪಹಾಸ್ಯ ಕೇಳುವವರಿದ್ದರೂ ಹೇಳುವವರ ಸಂಸ್ಕಾರ ಮೊದಲು ತಕ್ಕಡಿಯ ತಟ್ಟೆಯಲ್ಲಿ ಕುಳಿತುಕೊಳ್ಳುತ್ತದೆ. 







No comments:

Post a Comment