ನಾಲಗೆ ಇದ್ದರೆ ಮಗ ಬದುಕಿಯಾನು ಎಂಬ ನಾಣ್ಣುಡಿ ಇದೆ. ಮಾತು ಎಂಬುದು ಮನುಷ್ಯನನ್ನು ಭೂಮಿಯ ಉಳಿದ ಜೀವ ಜಾಲಗಳಿಂದ ಪ್ರತ್ಯೇಕಿಸುತ್ತದೆ. ಮನುಷ್ಯನಿಗಲ್ಲದೆ ಬೇರೆ ಯಾವುದಕ್ಕೂ ಈ ಗುಣ ಇರುವುದಿಲ್ಲ ಮಾತು ಕೆಟ್ಟರೆ ದೇಶ ಕೆಟ್ಟಿತು. ಹೀಗೆ ಮಾತು ಎಂಬುದು ಮನುಷ್ಯನ ಜೀವ ಅಸ್ತಿತ್ವದ ಅಂಗ. ಅದರಲ್ಲೂ ಕರಾವಳಿ ಜನಗಳಿಗೆ ಇದು ಸಹಜ ಧರ್ಮ ಎನ್ನಬೇಕು. ಹಾಗಾಗಿಯೇ ಯಕ್ಷಗಾನ ಎಂಬುದು ಅವಿಭಾಜ್ಯ ಅಂಗವಾಯಿತು. ಯಾಕೆಂದರೆ ಈ ’ಮಾತು’ ಎಂಬುದು ಯಕ್ಷಗಾನದ ಜೀವಭಾವ ಎಂದರೂ ತಪ್ಪಾಗಲಾರದು. ಹೊರ ಜಗತ್ತಿಗೆ ಈ ಕಲೆ ತೋರಿಸಿದ್ದು ಒಂದಾದರೆ ಇದರಲ್ಲಿ ಅಡಕವಾಗಿರುವುದೇ ಇನ್ನೊಂದು. ಅದರಲ್ಲಿ ಹೇಳಬಹುದಾದ್ದು ಎಂದರೆ ಮತ್ತದೇ ಮಾತು. ಹಾಗಾಗಿಯೇ ಇಲ್ಲಿ ಅವ್ಯಕ್ತವಾಗಿ ಭಾಸವಾಗುವುದು ಬಾಯಿ ಇದ್ದರೆ ಮಗ ಬದುಕಿಯಾನು.
ಯಕ್ಷಗಾನವೆಂದರೆ ಬಣ್ಣದ ವೇಷ ಕುಣಿತ ಗಾಯನ ಹೀಗೆ ಹೊರ ಪ್ರಪಂಚಕಂಡುಕೊಂಡರೆ
ಯಕ್ಷಗಾನದ ನಿಜವಾದ ಆಸ್ವಾದನೆಯ ರಸಿಕನ ಕಥೆಯೇ ಬೇರೆ. ಆತ
ಇಲ್ಲಿ ಕಂಡುಕೊಂಡದ್ದು ಮಾತಿನ ಮಂಟಪವನ್ನು. ಈ
ಮಾತಿನ ಮಂಟಪದ ಅದ್ಭುತವಾದ ಶಿಲ್ಪಿಗಳು ಕಟ್ಟಿ ಬೆಳೆಸಿದ ಪರಂಪರೆಯೇ ಯಕ್ಷಗಾನದ ಅರ್ಥಗಾರಿಕೆ. ಒಬ್ಬಬ್ಬರೂ ಕಟ್ಟಿದ ಮಾತಿನ ಮಂಟಪವೇನು ಜಗತ್ತನ್ನೇ
ಇಲ್ಲಿ ಸೃಷ್ಟಿ ಮಾಡಿದರು. ರಸಿಕನ ಕಣ್ಣ ಕಾಣಲಾಗದೇ ಇದ್ದದ್ದನ್ನು, ಮನಸ್ಸು ಕಲ್ಪಿಸಲಾಗದೇ
ಇದ್ದದ್ದನ್ನು ಇಲ್ಲಿ ಸೃಷ್ಟಿ ಮಾಡಿ ತೋರಿಸಿದರು. ಅದರಲ್ಲಿ ಖ್ಯಾತ ನಾಮರಾಗಿ ತನ್ನದೇ ವ್ಯಕ್ತಿ
ವಿಶೇಷವನ್ನು ಹೊಂದಿ ರಸಿಕರ ಮನಗೆದ್ದವರು ಇತ್ತೀಚೆಗೆ ನಮ್ಮನ್ನಗಲಿದ ಮಲ್ಪೆ ವಾಸುದೇವ ಸಾಮಗರು.
ಸಾಮಗರ ವೇಷಗಳನ್ನು
ಪಾತ್ರಗಳನ್ನು ಅರ್ಥಗಾರಿಕೆಯನ್ನು ಅನುಭವಿಸುವಾಗ ಆ ವಾಕ್ ಚಾತುರ್ಯಕ್ಕೆ ಶಬ್ದ ವಿನ್ಯಾಸಗಳನ್ನು
ಕಂಡಾಗ ನಾನು ಹೇಳಿಕೊಂಡದ್ದಿದೆ , ಬಾಯಿ ಇದ್ದರೆ ಮಗ ಬದುಕಿಯಾನು. ಇದು ಅವರೇ ಹೇಳುವ
ಅರ್ಥಗಾರಿಕೆಯ ಶೈಲಿಯ ವಾಕ್ಯ. ಎಂತಹಾ ಮಾತುಗಾರಿಕೆ. ಶಬ್ದಗಳು ಇವರ ಅರ್ಥಗಾರಿಕೆಗೆ
ಸೃಷ್ಟಿಯಾದಂತೆ ಅದರ ಸೂಕ್ತ ಬಳಕೆ. ಪಾತ್ರದ ಮಂಡನೆ ರಸಿಕರ ಚಿಂತನೆಗೆ ಕಿಚ್ಚು ಹಚ್ಚಿಸಿ ಆ
ಬೆಳಕನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡುವ ಒಂದು ರೀತಿ ಮಿಂಚಿನ ಅರ್ಥಗಾರಿಕೆ ಸಾಮಗರದ್ದು.
ಯಕ್ಷಗಾನದಲ್ಲಿ ಮಾತಿನ
ಪರಂಪರೆಗೆ ಮತ್ತೊಂದು ಅನ್ವರ್ಥ ಪರಂಪರೆಯನ್ನು ಸೃಷ್ಟಿಸಿದ್ದು ಸಾಮಗ ಪರಂಪರೆ. ಇದರಲ್ಲಿ ಹಲವರು
ಯಕ್ಷಗಾನದ ಅರ್ಥಾಗಾರಿಕೆಯಲ್ಲೂ ಪಾತ್ರ ವೈಖರಿಯಲ್ಲೂ ತಮ್ಮದೇ ಸ್ಥಾನವನ್ನು ನಿರ್ಮಿಸಿದವರು. ಆ
ಸಾಮಗ ಪರಂಪರೆ ಯಕ್ಷಗಾನದ ಅನಿವಾರ್ಯ ಅಂಗವೆಂಬಂತೆ ಅವಿನಾಭಾವ ಸಂಬಂಧವನ್ನು ಬೆಳೆಸಿ ಯಕ್ಷಗಾನಕ್ಕೆ
ತಮ್ಮ ಪರಂಪರೆಯ ದೇಣಿಗೆಯನ್ನು ಸಲ್ಲಿಸಿದೆ. ಇಂದು ಯಕ್ಷಗಾನದ ಅರ್ಥಗಾರಿಕೆಯ ಪ್ರಪಂಚ
ವಿಶಿಷ್ಟವಾಗಿರುವುದಕ್ಕೆ ಒಂದು ಕಾರಣವೇ ಈ ಸಾಮಗ ಪರಂಪರೆ. ಯಕ್ಷಗಾನದ ಅರ್ಥಗಾರಿಕೆಯ ಅಂಗಿಯ ಒಂದು
ಗುಂಡಿ ಕಳಚಿ ಬಿದ್ದಿದೆ. ಮೊನ್ನೆ ಮೊನ್ನೆ ವರೆಗೂ ಭದ್ರವಾಗಿ ಯಕ್ಷಗಾನವನ್ನುಅಲಂಕರಿಸಿದ್ದ ಈ
ಅಮೂಲ್ಯ ವಸ್ತು ಇಂದು ಇಲ್ಲ ಎಂದಾಗಬೇಕಾಗಿದ್ದರೆ ನಂಬುದುವುದಕ್ಕೆ ಸಾಧ್ಯವಿಲ್ಲ.
ನಾನು ಸಾಮಗರ ವೇಷವನ್ನು ಮೊದಲು
ನೋಡಿದ್ದು ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಗೋವಿಂದ ಭಟ್ಟರ ಪಾತ್ರದಲ್ಲಿ. ಆವಾಗ ನಿಜಕ್ಕೂ
ಬೆರಗಾಗಿದ್ದೇನೆ. ಇಂದು ಆ ಪಾತ್ರದಲ್ಲಿ ಹಲವರನ್ನು ಕಂಡಿದ್ದೇನೆ. ಆದರೆ ವಾಸುದೇವ ಸಾಮಗರ ಭಟ್ಟರು
ಎಂದರೆ ಅದು ಅದ್ವಿತೀಯ. ಆ ಪಾತ್ರದ ವ್ಯಕ್ತಿತ್ವದ ಸಂಪೂರ್ಣ ಅಭಿವ್ಯಕ್ತಿಯನ್ನು ಇವರಂತೆ
ಬಿಂಬಿಸಿದವರಿಲ್ಲ ಅಂತ ನನ್ನ ಭಾವನೆ. ಆನಂತರ ಬೇಡರ ಕಣ್ಣಪ್ಪದ ಕೈಲಾಸ ಶಾಸ್ತ್ರಿ, ಕಾಯ ಕಲ್ಪದ
ಅಶ್ವಿನಿ ದೇವತೆ...ಇದೆಲ್ಲ ಹಳೆಯ ಚರಿತ್ರೆಯ ಕಥೆಗಳು. ಬಯಲಾಟದಲ್ಲಿ ನೋಡಿದಕ್ಕಿಂತಲೂ ಹೆಚ್ಚು
ತಾಳಮದ್ದಲೆಯಲ್ಲಿ ಕಂಡ ಪಾತ್ರಗಳೇ ಹೆಚ್ಚು. ಉತ್ತರನ ಪೌರುಷ ಪ್ರಸಂಗ ಇವರಿಗಾಗಿಯೇ ರಚಿಸಲ್ಪಟ್ಟಿತೇ
ಎಂದು ಭಾಸವಾಗಬೇಕು. ಉತ್ತರನ ಪಾತ್ರ ಪ್ರಸ್ತುತಿಯದು. ಏಕ ಮಾತ್ರ ವ್ಯಕ್ತಿಯಾಗಿ ಆ ಪ್ರಸಂಗವನ್ನು ಮೆರೆಸುವ ಪರಿ
ಅದು ಸಹಜ ಸಾಮಗ ಶೈಲಿ ಅಂತ ಹೇಳಬೇಕು.
ದಮಯಂತಿ ಸ್ವಯಂವರ, ನಿಜಕ್ಕೂ ಯಕ್ಷಗಾನದ ಸಹಜ ಗದ್ದಲವಿಲ್ಲದ ಸೌಮ್ಯ ಪ್ರಸಂಗ. ಹಲವರು
ಇದನ್ನು ಸಪ್ಪೆ ಪ್ರಸಂಗ ಅಂತ ಭಾವಿಸುತ್ತಾರೆ. ಸುರತ್ಕಲ್ ಮೇಳದ ಆಟದ ಇದೇ ಪ್ರಸಂಗದಲ್ಲಿ ಕೆಲವು
ನಿಮಿಷಗಳ ಪುಷ್ಕಳನ ಪಾತ್ರ ನಿರ್ವಹಣೆ ಈಗಲೂ ನೆನಪಿಗೆ ಬರುತ್ತದೆ. ಅಚ್ಚುಕಟ್ಟಿನ ಪಾತ್ರ
ನಿರ್ವಹಣೆ. ಸಪ್ಪೆ ಎನಿಸುವ ಪ್ರಸಂಗಕ್ಕೂ ಇವರ ಪುಷ್ಕರ ಕಿಚ್ಚು ಹತ್ತಿಸಿಬಿಡುತ್ತಾನೆ.
ಯಾವುದೇ ಪಾತ್ರವಾದರೂ ಆ
ಪಾತ್ರದ ಮನೋಭಾವಕ್ಕೆ ಲಗ್ಗೆ ಇಡುವ ಪಾತ್ರ ನಿರ್ವಹಣೆ ಸಾಮಗರ ವೈಶಿಷ್ಟ್ಯ ಎನ್ನಬೇಕು. ತೆಂಕು
ಬಡಗು ಎಂಬ ವೆತ್ಯಾಸವೇ ಇಲ್ಲದಂತೆ ಇವರ ಪಾತ್ರಗಳು ವಿಜ್ರಂಭಿಸುತ್ತವೆ. ಇವರ ವಾದಗಳಲ್ಲಿ
ವಿತಂಡವಾದ ಮೊಂಡುತನ ಧಾರಾಳವಾಗಿ ಕಾಣಬಹುದು. ಬಹಳ ಅಪರೂಪ ಎನ್ನಿಸುವ ಶಬ್ದಗಳನ್ನು ಸಹಜ ಎಂಬಂತೆ
ಪ್ರಯೋಗಕ್ಕೆ ತರುವ ಕ್ಷಮತೆ ನಿತ್ಯ ತೋರುತ್ತಾರೆ. ತಾಳ ಮದ್ದಲೆಗಳಲ್ಲಿ ಇವರು ಪಾತ್ರವನ್ನು
ಕಟ್ಟುವ ಪರಿ ಅದ್ಭುತವಾಗಿರುತ್ತದೆ. ಹೆಚ್ಚಾಗಿ ರಾಮದಾಸ ಸಾಮಗರಂತೆ ಭಾವೋತ್ಕರ್ಷಕ್ಕೆ
ಒಳಗಾಗುತ್ತಾರೆ. ಅರ್ಥಗಾರಿಕೆ ಕೇವಲ ವಿಚಾರ ಮಂಡನೆಯಾಗಬಾರದು. ಕೇವಲ ವಾದ ತರ್ಕಕ್ಕೆ ಸೀಮಿತವಾಗಬಾರದು.
ಪ್ರತಿಸ್ಪರ್ಧಿಯ ಜತೆ ಸೀಮಿತವಾಗಿ ಸ್ಪರ್ಧಿಸಬೇಕು. ಹೆಚ್ಚಾಗಿ ಪ್ರತಿವಾದಿಯಲ್ಲಿ ಘರ್ಷಣೆಗೆ
ಇಳಿದಾಗ ತನ್ನ ಪಾತ್ರದ ನಿಜವಾದ ವ್ಯಕ್ತಿತ್ವವನ್ನೂ ಸ್ವಭಾವವನ್ನು ಹಲವರು ಮರೆತು ಬಿಡುತ್ತಾರೆ. ಆದರೆ
ಇವರ ಅರ್ಥಗಾರಿಕೆಯ ವೈಶಿಷ್ಟ್ಯವೇ ಎಂತಹಾ ವಾದವಿರಲಿ ಪಾತ್ರಕ್ಕೆ ಹೊಂದಿಕೊಂಡು ಸಂವಾದವಾಗುತ್ತದೆ.
ಪಾತ್ರದ ಚೌಕಟ್ಟಿನೊಳಗೆ ಸಾಕಷ್ಟು ಸರ್ಕಸ್ ಮಾಡುವ ಅರ್ಥಗಾರಿಕೆ
ಸಾಮರ ವೈಶಿಷ್ಟ್ಯ ಕೇವಲ ಒಂದೆರಡು
ವಾಕ್ಯದ ಪುಟ್ಟ ಅಂಕಣಕ್ಕೆ ಸೀಮಿತವಾಗುವಂಥದ್ದಲ್ಲ. ಅದೊಂದು ವಿಶಾಲವಾದ ಸಾಮ್ರಾಜ್ಯ. ವಾಸುದೇವ ಸಾಮಗರು
ಇದ್ದಾರೆ ಎಂದರೆ ಅಲ್ಲಿ ಮಾತು...ಬರೇ ಮಾತು. ಹೀಗಿದ್ದರೂ ಮಾತುಗಾರಿಕೆಗೆ ಇವರು ಕೊಟ್ಟಿರುವ ಆಯಾಮ
ಮಾತ್ರ ಅದ್ಭುತ. ತಾಳಮದ್ದಲೆಗೂ ಒಂದು ಮೇಳವನ್ನು ಕಟ್ಟಿಕೊಂಡು ಸಂಯಮದಿಂದ ತಿರುಗಾಟ ಮಾಡಿ ಮಾತಿನ
ಅರಮನೆಗೆ ಕಲ್ಲು ಜೋಡಿಸಿದ ಕಾಯಕ ಪುರುಷ.
ಮಾತುಗಾರಿಕೆಯ ಪಾತ್ರಗಳು ಇಂದು
ಮೌನಕ್ಕೆ ಸರಿದು ರೋಧಿಸಿದ ಅನುಭವವಾಗುತ್ತದೆ. ಇನ್ನು ತಮ್ಮ ಪಾತ್ರಗಳು ವ್ಯಂಜನವಿಲ್ಲದ
ಭೋಜನವಾದೀತೆ ಎಂದು ಆತಂಕ ಪಡುತ್ತವೆ.
ರಂಗದ ಮಟ್ಟಿಗೆ ಪಾತ್ರಗಳು
ಕೇವಲ ರಂಗದ ಅಂಗವಾಗಿರಬಹುದು. ಆದರೆ ಒಬ್ಬ ಸಾಮಗರಂತಹ ಒಬ್ಬ ಅರ್ಥಧಾರಿ ಕಲಾವಿದನಿಗೆ ಅಷ್ಟಕ್ಕೇ
ಸೀಮಿತವಾಗುವುದಿಲ್ಲ. ಅದರ ಹಿನ್ನೆಲೆಯಲ್ಲಿ ಸಾಕಷ್ಟು ಅಧ್ಯಯನ ಸಾಧನೆ ಬೇಕಾಗುತ್ತದೆ. ಇವೆಲ್ಲವೂ
ಅವರ ಅರ್ಥಗಾರಿಕೆಯಲ್ಲಿ ವ್ಯಕ್ತವಾಗುತ್ತದೆ.
ಅದ್ಭುತ ಮಾತುಗಾರ ಈಗ ಮೌನಕ್ಕೆ
ಜಾರಿದ್ದಾನೆ. ಪ್ರೇಕ್ಷಕ ಆ ಮೌನದಲ್ಲಿ ಮಾತನ್ನು ಹುಡುಕಬಹುದು. ಯಾಕೆಂದರೆ ಸಾಮಗರ ಪ್ರತಿಬೆ ಆ
ರೀತಿಯದು. ಇದುವರೆಗು ಭೀಷ್ಮ ಪರಶುರಾಮರನ್ನು ಮೆರೆಸಿದ ನಾಲಗೆ ಇಂದು ಮೌನಕ್ಕೆ ಜಾರಿದೆ. ಇನ್ನು
ಎಲ್ಲವೂ ನೆನಪು ಮಾತ್ರ.
ಮೃತರ ಆತ್ಮಕ್ಕೆ ಸದ್ಗತಿಯನ್ನು
ಮೌನವಾಗಿ ಪ್ರಾರ್ಥಿಸುವುದಷ್ಟೇ ಉಳಿದಿದೆ.

No comments:
Post a Comment