"ಇದು ವಿಮರ್ಶೆಯಲ್ಲದ ಚಿಂತನ"

Thursday, September 3, 2020

ಲಾಕ್ ಡೌನ್ ನ ಅತಿಥಿಗಳು!!!

  ಎಲ್ಲರೂ ಮಲಗಿದಾಗ ಆಟದವನು ಎದ್ದ.  ಅಂತ ನಮ್ಮ ಹಿರಿಯರು ಯಕ್ಷಗಾನದವರನ್ನು ಹೇಳುತ್ತಿದ್ದರು.  ಆದರೆ ಯಕ್ಷಗಾನದವರು ಎದ್ದು ಕುಳಿತರೆ ಊರಿಗೆ ಊರೆ ಎದ್ದು ಕುಳಿತಿತ್ತು ಅನ್ನೋದು ಬೇರೆ ವಿಷಯ.  ದೇಶವೇ ಕೋರೋನ ಪ್ರಭಾವಕ್ಕೆ ದಂಗಾಗಿ ಸ್ಥಭ್ದವಾಗಿತ್ತು. ಮುಷ್ಕರದ ಅಮಲಿನಲ್ಲಿ ರಸ್ತೆ ಮಲಗಿರುವಂತೆ ಕೋರೋನಕ್ಕೆ ಶರಣಾಗಿ ರಸ್ತೆ ಖಾಲಿ ಖಾಲಿಯಾಗಿ ಉದ್ದಕ್ಕೆ ದೇಶಾದ್ಯಂತ ಮಲಗಿತ್ತು. ಮುಷ್ಕರವಾದರೆ ಬೆಳಗ್ಗೆ ಆರಂಭವಾದರೆ ಮಧ್ಯಾಹ್ನ ನಂತರ ಮಿಸುಕಾಡುವುದಕ್ಕೆ ತೊಡಗುತ್ತಿತ್ತು. ಆದರೆ ಈ ಕೊರೋನದ ಸ್ತಭ್ಧತೆ  ಮಾತ್ರ ಸ್ಮೃತಿಗೆಟ್ಟಂತೆ ಮಾಡಿದ್ದು ಸುಳ್ಳಲ್ಲ. ಆಷಾಢದ ಮಳೆಯಂತೆ ಯಾವಾಗ ನಿಲ್ಲುವುದೊ ಎಂದು ಭರವಸೆ ಇಲ್ಲದೇ ದೇಶಕ್ಕೆ ದೇಶವೇ ಸುಮ್ಮನೆ ಕುಳಿತಿತ್ತು. ಎಲ್ಲ ಕಡೆ ಲಾಕ್ ಡೌನ್ ಆದರೆ ಎಲ್ಲಾ ಮನೆಯ ಅಡುಗೆ ಕೋಣೆ ಎಂದು ಇಲ್ಲದ ಚಟುವಟಿಕೆಯನ್ನು    ಸಕ್ರಿಯವಾಗಿ  ಕೊರೋನ ಕಾಲದಲ್ಲಿ ತೋರಿಸುತ್ತಿದ್ದುದು ಸುಳ್ಳಲ್ಲ. ಮಾಡುವುದಕ್ಕೆ ಬೇರೆ ಕೆಲಸ ಬೇಕಲ್ಲ. ಲಾಕ್ ಡೌನ್ ಕಾಲದಲ್ಲಿ ಸಿಕ್ಕಿದ್ದೆಲ್ಲವನ್ನೂ ಮಾಡಿ ತಿಂದು ಸುಮ್ಮನೇ ಕುಳಿತು ಹೊಟ್ಟೆಯನ್ನು ಹೊರಗೂ ಇಲ್ಲ ಒಳಗೂ ಇಲ್ಲ ಎಂಬಂತೆ ಸೀಲ್ ಡೌನ್  ಮಾಡಿ ಕುಳಿತದ್ದು ಮರೆಯುವ ಹಾಗಿಲ್ಲ. ಇದೇ ಸಮಯ ಒಂದಷ್ಟು ಚಟುವಟಿಕೆ ಗರಿಗೆದರುವಂತೆ ಆದದ್ದು ನನ್ನಲ್ಲಿಗೆ ಬಂದ ಅತಿಥಿಗಳಿಂದ.  ಲಾಕ್ ಡೌನ್ ನ ಅತಿಥಿಗಳು...! ಅಚ್ಚರಿಯಾಗಬಹುದು. ಬೇರೆ ಯಾರು ಅಲ್ಲ ...ಅತ್ಯಂತ ಹಳೆಯದು ಎನ್ನಬಹುದಾದ ಯಕ್ಷಗಾನ ಧ್ವನಿ ಸುರುಳಿಗಳನ್ನು ಮಿತ್ರರೊಬ್ಬರು ತಂದು ಕೊಟ್ಟರು.  





ಸರಿ ಶುರುವಾಯಿತು. ನನ್ನ ಕ್ಯಾಸೆಟ್ ಪ್ಲೇಯರ್ ದುರಸ್ತಿಯಾಗಬೇಕಿತ್ತು. ಆದರೆ ಅದರ ಬಿಡಿ ಭಾಗವೊಂದು ಸಿಗುತ್ತಿಲ್ಲ. ಸಾಮಾನ್ಯವಾಗಿ ಎರಡು ಮೂರು ರೂಪಾಯಿಗೆ ಸಿಗಬಹುದಾದ ಚಿಕ್ಕ ರಬ್ಬರ್ ಬೆಲ್ಟ್  ತುಂಡಾಗಿ ಟೇಪ್ ರೆಕಾರ್ಡರ್ ಸದ್ದು ಮಾಡುವಂತಿರಲಿಲ್ಲ. ಬೆಂಗಳೂರಿನ ಎಸ್ ಪಿ ರಸ್ತೆ ಸುತ್ತಾಡಿದರು ಸಿಗದಾಗ ಅಮೆಜಾನ್ ಮೊರೆ ಹೋಗಿ ಕೊನೆಗೆ ಅಲ್ಲಿ ನಾಲ್ಕು ನೂರು ಕೊಟ್ಟು ಖರಿದಿಸಬೇಕಾಯಿತು. ಅಂತೂ ಕಷ್ಟದಲ್ಲಿ ಟೇಪ್ ರೆಕಾರ್ಡರ್ ದುರಸ್ಥಿಯಾಗಿ ಈ ಕೊರೋನ ಕಾಲದಲ್ಲೇ ಬಂದು ಬಿಟ್ಟಿತು. 


ಕ್ಯಾಸೆಟ್ ಪರಿವರ್ತನೆ ನಿಜಕ್ಕೂ ತಪಸ್ಸಿನಂತೆ. ಹಲವು ಸಲ ಕೈಗೆ ಬಂದ ತುತ್ತು ಬಾಯಿಗಿಲ್ಲದಂತೆ ಆಗಿಬಿಡುತ್ತದೆ. ಹೊರಗಿನ ವಿವರ ನೋಡಿ ಟೇಪ್ ರೇಕಾರ್ಡರ್ ಒಳಗೆ ತುರುಕಿದರೆ ಅದು ಇನ್ನಾವುದೋ ಧ್ವನಿ ಹೊರಡಿಸಿ ಹತಾಶೆಗೊಳಿಸುತ್ತದೆ. ಚಿತ್ರವಿಚಿತ್ರ ಸದ್ದು ಕೇಳಿಸುತ್ತದೆ. ಸಾಕಪ್ಪ ಅಂತ ಹೊರತೆಗೆದರೆ ಟೇಪ್ ಸುತ್ತು ಹಾಕಿರುತ್ತದೆ. ಎಲ್ಲ ತೆಗೆದು ನೋಡಿದರ ರಬ್ಬರ್ ಹೆಡ್ ಗೆ ದಪ್ಪ ಧೂಳು ಅಂಟಿರುತ್ತದೆ. ಅದನ್ನು ಸ್ವಚ್ಛಗೊಳಿಸುವುದೇ ಒಂದು ಕೆಲಸ. ಹಲವು ಸಲ ಅರ್ಧದವರೆಗೆ ತಿರುಗಿ ಮತ್ತೆ ಮುಂದೆ ಮಾತನಾಡದೆ ಹಟ ಮಾಡುತ್ತದೆ. ಆಗ ಅತ್ಯಂತ ಸಹನೆ ಅತ್ಯಗತ್ಯ. ಕೆಲವೊಂದನ್ನು ಬಿಚ್ಚಿ ಒಂದಷ್ಟು ಸ್ವಚ್ಛಗೊಳಿಸಿ ಬೇರೆ ಕ್ಯಾಸೆಟ್ ಬಿಡಿಭಾಗ ಸೇರಿಸಿದರೆ ಸರಿಯಾಗುತ್ತದೆ. ಇದರ ಹೃದಯ ತೆಗೆದು ಮತ್ತೊಂದಕ್ಕೆ ಜೋಡಿಸಿದಂತೆ. ಹಟಕ್ಕೆ ಬಿದ್ದು ಮಧ್ಯರಾತ್ರಿಯವರೆಗೆ ಇದನ್ನು ಮಾಡಿದ್ದು ಇದೆ. ಯಾಕೆಂದರೆ ಯಕ್ಷಗಾನದ ಹುಚ್ಚು ಎಂದರೆ ಅದು. ಅಷ್ಟು ಮಾಡಿ ಒಂದು ಸಲ ಕಂಪ್ಯೂಟರ್ಗೆ ವರ್ಗಾಯಿಸಿ ಮೊಬೈಲ್ ಗೆ ಏರಿಸಿ ಹೆಡ್ ಸೆಟ್ ಹಾಕಿ ಕೇಳಿದರೆ ಸ್ವರ್ಗಕ್ಕೆ ಮೂರೇ ಗೇಣು. 


ಈ ಬಾರಿ ಸುಮಾರು ಎಪ್ಪತ್ತು- ಎಂಭತ್ತು ಕ್ಯಾಸೆಟ್ ಗಳು ಬಂದಿದ್ದವು. ಎಲ್ಲವೂ ಯಕ್ಷಗಾನ ತಾಳ ಮದ್ದಲೆಯ ಯಥಾವತ್ ಧ್ವನಿ ಮುದ್ರಣಗಳು. ಸಮಗ್ರ ಶೇಣಿ ಪ್ರವರ ಎಂದರೂ ಸರಿಯೇ. ಧುರ ವೀಳ್ಯ, ಉರು ಭಂಗ ಕೃಷ್ಣ ಸಂಧಾನ, ವಾಲೀ ಮೋಕ್ಷ ಹೀಗೆ ಮಾಮೂಲಿ ಪ್ರಸಂಗಗಳಾದರೂ ಕೇಳುತ್ತಿರಬೇಕಾದರೆ ಅದ್ಭುತ ಚಿಂತನಾ ಲೋಕಕ್ಕೆ ಎಳೆದುಕೊಂಡು ಹೋಗುತ್ತಿದ್ದವು. ಮಂಡೆಚ್ಚ ಭಾಗವತರ ಅದ್ಭುತ ರಮ್ಯ ಎನಿಸುವ ಪದಗಳು ಪದ್ಯಾಣ, ಅಗರಿ ಅಮ್ಮಣ್ಣಾಯರ ಸ್ವರ ವರ್ಣಗಳು ಆ ಹಳೆಯ ಕಾಲಕ್ಕೆ ಎಳೆದುಕೊಂಡು ಹೋದಂತೆ ಭಾಸವಾಯಿತು.


ಧುರವೀಳ್ಯದ ಕೌರವ, ಗಧಾಯುದ್ದದ ಕೌರವ, ಕುರುಕ್ಷೇತ್ರ ಎಲ್ಲೂ ಇಲ್ಲ ನನ್ನಮೊಬೈಲ್ ನ ಒಳಗೆ ಇದೆ ಅಂತ ಭಾವಿಸುವಂತೆ ಮಾಡಿತು. ಕೌರವ ಯಾರು ಅಂತ ಬೇರೆ ಹೇಳಬೇಕಿಲ್ಲ. ಅದೇ ಶತಮಾನಕ್ಕೊಬ್ಬ ಶೇಣಿ.  ಸಾಮಗರ ಅತಿಕಾಯ ಕೇಳಿ ಕಣ್ಣು ತೇವವಾಗಿದ್ದು ಸುಳ್ಳಲ್ಲ. ಸಾಮಗರ ಅರ್ಥಗಾರಿಕೆಯ ಮಾರ್ದವತೆ ಅದು. ತಾಳ ಮದ್ದಲೆಯ ಅರ್ಥಗಾರಿಕೆ ಹೇಗಿರುತ್ತದೆ ಎಂಬುದಕ್ಕೆ ಪಠ್ಯವಾಗುವ ಯೋಗ್ಯತೆಯ ತಾಳಮದ್ದಲೆಗಳು.  ಈಗೀಗ ಯಕ್ಷಗಾನದಲ್ಲೂ,   ನಡೆಯುವ  ತಾಳಮದ್ದಲೆಯಲ್ಲೂ ಆಸಕ್ತಿಯೇ ಹೊರಟು ಹೋಗಿದೆ. ರಸವಿಲ್ಲದ  ಸೊಪ್ಪಿನಂತೆ ಯಾಕೋ ಅಭಿರುಚಿಯ ಹೊಂದಿಕೆ ಸಾಧ್ಯವಾಗುತ್ತಿಲ್ಲ. ಆದರೆ ಈ ಕ್ಯಾಸೆಟ್ ಗಳು ಮತ್ತೊಮ್ಮೆ ಚೆಂಡೆ ಮದ್ದಲೆಯ ಧ್ವನಿಗೆ ತಲೆ ಆಡಿಸುವಂತೆ ಮಾಡಿದ್ದು ಸುಳ್ಳಲ್ಲ. ಚಿಪ್ಪಾರು ಬಲ್ಲಾಳರು,  ಕುರುಪ್  ಇವರ ಕೈ ಚಳಕ ಯಕ್ಷಗಾನದ ಹಿಮ್ಮೇಳ ಹೇಗಿರುತ್ತದೆ ಮತ್ತು ಹೇಗಿರಬೇಕು ಎಂಬುದನ್ನು ತೋರಿಸಿಕೊಡುತ್ತವೆ. ಇಂದು ಪರಂಪರೆ ಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಯಕ್ಷಗಾನಕ್ಕೆ ಅವ್ಯಾಹತವಾಗಿ ಬದಲಾವಣೆಯ ಧಾಳಿ ಆಗುತ್ತದೆ. ಪರಂಪರೆಯೋ ಮತ್ತೊಂದೋ ಯಾವುದೂ ಅಲ್ಲ. ಯಕ್ಷಗಾನದಲ್ಲಿ ಸಹಜವಾಗಿ ಇರುತ್ತಿದ್ದ ಝೇಂಕಾರ  ಇಂದು ಇಲ್ಲವಾಗಿದೆ. ಪಾತ್ರ ಪೋಷಣೆಯಲ್ಲಿ ಇರುತ್ತಿದ್ದ ಅಧ್ಯಯನ ಇಂದು ಮರೆಯಾಗಿದೆ.  ಮುಖ್ಯವಾಗಿ ಯಕ್ಷಗಾನ ಕೇಳಿದರೆ ಅದು ಯಕ್ಷಗಾನದಂತೆ ಅನ್ನಿಸುವುದೇ ಇಲ್ಲ. 


ಎಲ್ಲವನ್ನೂ ಶ್ರಮ ವಹಿಸಿ ಕಂಪ್ಯೂಟರ್ ಗೆ ಏರಿಸಿಯಾಗಿದೆ.  ಈಗ ಎರಡು ಮೂರು ಸಲ ಕೇಳಿ ಲಾಕ್ ಡೌನ್ ಸಾರ್ಥಕ ಪಡಿಸಿಕೊಂಡೆ.  ಯಕ್ಷಗಾನದ ಈ  ಅದ್ಭುತ ರಮ್ಯತೆಯನ್ನು ಹಂಚಿಕೊಳ್ಳುವ ಯೋಜನೆ, ಮತ್ತು ಯೋಚನೆ ರೂಪಿಸುತ್ತಿದ್ದೇನೆ. ನೋಡಬೇಕು. ಏನಿದ್ದರು ಅದನ್ನು ಕಷ್ಟ ಪಟ್ಟು ಶ್ರಮವಹಿಸಿ ನನ್ನ ಕೈಗೆ ಕೊಡುವಲ್ಲಿ ಹಲವು ಮಿತ್ರರ ಪರಿಶ್ರಮವಿದೆ. ಅದನ್ನು ಮರೆಯುವಂತಿಲ್ಲ. ಎಲ್ಲಕ್ಕೂ ಮಿಗಿಲಾಗಿ ಮೂವತ್ತು ವರ್ಷಕ್ಕೂ ಮೇಲ್ಪಟ್ಟು ಆ ಕ್ಯಾಸೆಟ್ ನ್ನು ಜೋಪಾನವಾಗಿ ಕಾಯ್ದಿರಿಸಿ ಒದಗಿಸಿದ ಕಾರ್ಕಳದ ಅರ್ ಕೆ ಭಟ್ಟರಿಗೆ ದೊಡ್ಡ ನಮಸ್ಕಾರ. ಅತ್ಯಂತ ಶ್ರಮವಹಿಸಿ ಕಾರ್ಯಕ್ರಮವನ್ನು ಧ್ವನಿ ಮುದ್ರಿಸಿ ಈ ವರೆಗೆ ಅದನ್ನು ಕಾಯ್ದಿರಿಸಬೇಕೆಂದರೆ ಅದು ಸಾಮಾನ್ಯ ಮಾತಲ್ಲ. ಇಷ್ಟೆಲ್ಲವಾದರೂ ಅವರನ್ನು ಸಂಪರ್ಕಿಸಿ ಅದನ್ನು ಜೋಪಾನದಲ್ಲಿ ನನ್ನ ಕೈಗೆ ತಲುಪಿಸಿದ ಮಿತ್ರ ಶ್ರೀ ರಘು ರಾಮಣ್ಣನಿಗೆ ಹೃತ್ಪೂರ್ವ ಧನ್ಯವಾದಗಳು.  


No comments:

Post a Comment