“ಯಾವುದಕ್ಕಾದರೂ ಪರಿಪೂರ್ಣತೆ
ಬರಬಹುದು, ಆದರೆ ವಿದ್ಯೆಗೆ ಪರಿಪೂರ್ಣತೆ ಸಾಧ್ಯವಿಲ್ಲ. ಮನುಷ್ಯನ ಜೀವನವೇ ಒಂದು ವಿದ್ಯಾರ್ಥಿ
ಜೀವನ. ಇಲ್ಲಿ ಸಾಧನೆ ನಿರಂತರ. ಅಭ್ಯಾಸ ನಿರಂತರ. “ ಇದು ಖ್ಯಾತ ಗಾಯಕ ಶ್ರೀ ಜೇಸುದಾಸ್ ಅವರು ಶಾಸ್ತ್ರೀಯ ಸಂಗೀತದ
ಕಛೇರಿಯಲ್ಲಿ ಹೇಳಿದ ಮಾತುಗಳು. ಕನಕಾಂಗಿ ರಾಗದ ಪ್ರಸ್ತುತಿಯ ಮುನ್ನುಡಿಯಾಗಿ ದಾಸೇಟ್ಟನ್ ಹೀಗೆ
ಹೇಳುತ್ತಾ ಕನಕಾಂಗಿ ರಾಗದ ವಿಶೇಷತೆಗಳನ್ನು ಹೇಳಿ ತಾನು ಈಗಲೂ ನಿಯಮಿತವಾಗಿ ರಾಗಗಳನ್ನು ಅಭ್ಯಾಸ
ಮಾಡುತ್ತಿದ್ದೇನೆ. ಯಾಕೆಂದರೆ ವಿದ್ಯಾಸರಸ್ವತಿ ನಮ್ಮಲ್ಲಿ ನೆಲೆ ನಿಲ್ಲಬೇಕಾದರೆ ಆಕೆಯನ್ನು ಈ
ಅಭ್ಯಾಸದ ಮೂಲಕವೇ ಸಂಪ್ರೀತಿಗೊಳಿಸಬೇಕು. ಸಾಧನೆ ಅಭ್ಯಾಸ ಇಲ್ಲದೆಡೆ ಸರಸ್ವತಿ
ನೆಲೆ ನಿಲ್ಲುವುದಿಲ್ಲ.
ಎಪ್ಪತ್ತೈದರ ಹರಯದ ಜನಪ್ರಿಯ
ಸಂಗೀತ ಚಕ್ರವರ್ತಿ ಈಗಲೂ ಅಭ್ಯಾಸ ಮಾಡುತ್ತಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ. ಆ ಸಾಧನೆಯ ಗುರಿ ಉದ್ದೇಶ
ಏನಿರಬಹುದು? ಜೇಸುದಾಸ್ ಹೇಳಿ ಕೇಳಿ ಖ್ಯಾತ ಗಾಯಕ. ಹಾಡದಿದ್ದ ಪ್ರಾಕಾರಗಳಿಲ್ಲ. ಭಾರತದ ಹಲವು
ಭಾಷೆಗಳಲ್ಲಿ ಹಾಡಿದ ಮಹಾನ್ ಸಾಧಕ. ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಸಿನಿಮಾ ಕ್ಷೇತ್ರ ಹೀಗೆ
ಎಲ್ಲ ಕ್ಷೇತ್ರದಲ್ಲಿ ತಮ್ಮ ಅದ್ವಿತೀಯ ಪ್ರತಿಭೆಯನ್ನು ಜನಪ್ರಿಯಗೊಳಿಸಿದ ಅಪ್ರತಿಮ ಕಲಾವಿದರು.
ಇನ್ನು ಉನ್ನತಿಯಲ್ಲಿ ಅವರು ಏರಬೇಕಾಗಿರುವ ಪದವಿ ಏನಿರಬಹುದು? ಏನೂ ಇಲ್ಲ. ಒಬ್ಬ ಕಲಾವಿದ ಬಯಸುವ
ಎಲ್ಲಾ ಬಯಕೆಗಳನ್ನು ಈಡೆರಿಸಿಕೊಂಡವನಿಗೆ ಅಭ್ಯಾಸ ಸಾಧನೆಯ ಹಾದಿ ಇನ್ನೂ ಇದೆ ಎಂದರೆ
ಆಶ್ಚರ್ಯವಾಗುತ್ತದೆ.
ಯಕ್ಷಗಾನದ ಹಿರಿಯ ಭಾಗವತ
ಶ್ರೀ ಬಲಿಪ್ಪ ನಾರಾಯಣ ಭಾಗವತರು, ಒಂದು ಸಲ ಮಾತನಲ್ಲಿ ಹೇಳುತ್ತಾರೆ, ಮನುಷ್ಯನಿಗೆ ಕಲಿತು
ಮುಗಿಯುವುದಿಲ್ಲ. ನಿತ್ಯ ಅಭ್ಯಾಸ ಮಾಡಬೇಕು. ಆಗ ಕಲಿತ ವಿದ್ಯೆ ಉಳಿಯುತ್ತದೆ. ಯಕ್ಷಗಾನದಲ್ಲಿ
ಅದು ಇಂದು ಯಾರಿಗೂ ಬೇಡ. ಸ್ವಲ್ಪ ಕಲಿತು ರಂಗಸ್ಥಳ ಹತ್ತಿದ ನಂತರ ಮತ್ತೆ ಅಧ್ಯಯನ ಕಲಿಯುವ
ನಿರಂತರ ಸಾಧಿಸುವ ಮನಸ್ಸು ಬರುವುದಿಲ್ಲ. ಅಧ್ಯಯನ ಕೊರತೆ ಇಂದು ಹೆಚ್ಚಿನವರಿಗೆ ಇದೆ. ತಲೆಯಲ್ಲಿ
ನಾವು ಕಲಿತಾಯಿತು ಎಂಬ ಅಹಂ ಬೆಳೆದು ಬಿಟ್ಟರೆ ಮತ್ತೆ ಆತನಲ್ಲಿ ವಿದ್ಯೆಯ ಚಿಗುರು ಅರಳುವುದಿಲ್ಲ.
ಇಂಥವರಿಂದ ಯಕ್ಷಗಾನ ಉಳಿಯುವುದಾದರೂ ಹೇಗೆ?
ಕಲಾವಿದನ ಅಪೂರ್ಣ ಜ್ಞಾನ ಅದು
ಅವನನ್ನು ಮಾತ್ರ ಬಾಧಿಸುವುದಲ್ಲ. ಪರೋಕ್ಷವಾಗಿ ಕಲೆಯನ್ನೂ ಬಾಧಿಸುತ್ತದೆ. ಒಂದು ಸಲ ರಂಗಸ್ಥಳ
ಹತ್ತಿ ಸಂಭಾವನೆಯ ರುಚಿ ಹತ್ತಿತೋ ಮತ್ತೆ ಕಲಿಯುವ ಮನೋಭಾವ ಬರುವುದಿಲ್ಲ. ಸಿಗುವ ಸಂಭಾವನೆ
ಸ್ಥಾನಮಾನ ಉಳಿಯುವುದಕ್ಕೆ ಏನೆಲ್ಲ ವಕ್ರ ಹಾದಿಗಳಿರುತ್ತವೆಯೋ ಅವುಗಳನ್ನು ಹುಡುಕುತ್ತಾ ಹೋಗುತ್ತಾನೆ.
ಅದಲ್ಲೆ ಆತನೇ ಕಂಡುಕೊಳ್ಳುವ ಮಾರ್ಗವೆಂದರೆ ಹೊಸತನ. ತನ್ನ ನೆಲೆ ಕಾಯುವುದಕ್ಕಷ್ಟೇ ಮಹತ್ವ. ಬದಲಿಗೆ ಯಕ್ಷಗಾನದಲ್ಲಿ ಏನುಂಟು? ಅದರ ಸಂಪನ್ಮೂಲದ
ಹಾದಿ ಯಾವುದುಂಟು ? ಅ ಆಧ್ಯಯನಕ್ಕೆ ತೊಡಗುವುದಿಲ್ಲ. ಕಲಾವಿದ ಒಮ್ಮೆ ರಂಗ ಎರಿದನೋ ಬಾಳೆ ಗೊನೆ
ಹಾಕಿದಂತೆ ಮತ್ತೆ ಅಲ್ಲಿ ಪುನಃ ಚಿಗುರು ಹುಟ್ಟುವುದಿಲ್ಲ. ಆ ಬಾಳೆ ಮರ ಇರುವವರೆಗೆ ಅಲ್ಲಿ ಮತ್ತೊಂದು ಬಾಳೆ
ಪರಿಪೂರ್ಣವಗಿ ಬೆಳೆಯುವುದೂ ಇಲ್ಲ. ಅಧ್ಯಯನ
ಶೀಲವಿಲ್ಲದ ಕಲಾವಿದ ಎಷ್ಟೇ ದೊಡ್ಡ ಸ್ಥಾನಮಾನ ಇದ್ದರೂ ಆತ ಯಕ್ಷಗಾನಕ್ಕೆ ಕಲೆಗೆ
ಮಾರಕವಾಗುತ್ತಾನೆ.
ಪ್ರಸಿದ್ಧ
ಮದ್ದಲೆಗಾರ ಶ್ರೀ ಕುದ್ರೆಕೊಡ್ಲು ರಾಮ ಭಟ್
(ಕುದ್ರೆಕೊಡ್ಲು ರಾಮಮೂರ್ತಿಯವರ ತಂದೆಯವರು) ನಮ್ಮ ಮಂಗಳೂರಿನಲ್ಲಿರುವ ಮಾವನ ಮನೆಗೆ ಆಗಾಗ
ಬರುತ್ತಿದ್ದರು. ನನ್ನ ಮಾವ ಅಜ್ಜ ಹೀಗೆ ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದರು. ನಮ್ಮ ಮನೆಗೆ
ಬಂದರೆ ಒಂದೆರಡು ದಿನ ತಂಗಿ ಹೋಗುತ್ತಿದ್ದರು. ಅದೇ ಸಮಯದಲ್ಲಿ ಸುತ್ತಮುತ್ತಲು ಕಾರ್ಯಕ್ರಮ
ಇದ್ದರೆ ಅದು ಮುಗಿಸಿ ನಮ್ಮಲ್ಲೇ ಮೊಕ್ಕಾಂ ಹೂಡುತ್ತಿದ್ದರು. ಸುಮ್ಮನೇ ಇದ್ದಾಗ ಚಾಪೆಯಲ್ಲಿ ಕುಳಿತು ಚೆಂಡೆ ಕೋಲಿನಿಂದ
ಚಾಪೆಗೆ ಅಂದರೆ ನೆಲಕ್ಕೆ ಬಡಿದು ಚೆಂಡೆ ಅಭ್ಯಾಸ ಮಾಡುತ್ತಿದ್ದರು. ಪ್ರತೀ ದಿನ ಒಂದಷ್ಟು ಹೊತ್ತು
ಸಮಯ ಇದ್ದಾಗಲೆಲ್ಲಾ ಹೀಗೆ ಚೆಂಡೆ (ಚಾಪೆ) ಬಾರಿಸುತ್ತಿದ್ದರು. ಒಂದು ಸಲ ನಾನು ಕೇಳಿದ್ದೆ ಚೆಂಡೆ
ತಂದು ಬಾರಿಸುವುದಿಲ್ಲ ಯಾಕೆ ಅಂತ? ಆದರೆ ಒಂದು ಸಲವೂ ಅವರು ಚೆಂಡೆ ತಂದವರಲ್ಲ. ಆದರೆ
ಬಂದಾಗಲೆಲ್ಲ ಹೀಗೆ ಚಾಪೆಗೆ ಬಡಿಯುತ್ತಿದ್ದರು. ಚೆಂಡೆ
ಹೀಗೆ ಅಭ್ಯಾಸ ಮಾಡಬೇಕು. ನಿತ್ಯ ಅಭ್ಯಾಸ ಮಾಡಿದರೆ ಒಳ್ಳೆದು ಅಂತ ನಮಗೆಲ್ಲ ಹೇಳುತ್ತಿದ್ದರು.
ಪ್ರಸಿದ್ಧ
ಮದ್ದಲೆಗಾರರಾಗಿ ಮೇಳದಲ್ಲಿ ವೃತ್ತಿನಿರತರಾಗಿದ್ದರೂ ಹೀಗೆ ನಿತ್ಯ ಅಭ್ಯಾಸ ಮಾಡುತ್ತಿದ್ದ
ಅವರನ್ನು ಈಗ ನೆನಪಿಸುತ್ತಿದ್ದೇನೆ. ಅಂತಹ ವೃತ್ತಿ ಪರತೆ ಈಗ ಕಾಣುವುದಕ್ಕಿಲ್ಲ. ಚೆಂಡೆ ಇಲ್ಲದೇ
ಇದ್ದರೂ ಚಾಪೆಗೆ ಬಡಿದು ಅಭ್ಯಾಸ ಮಾಡುತ್ತಿದ್ದ ಅವರ ಕಾಳಜಿ ತನ್ಮಯತೆ ಸ್ಮರಣೀಯ.
ಮೇಳದಲ್ಲಿದ್ದರೇನು, ಇನ್ನೂ ಅಭ್ಯಾಸ ಶೀಲವಾಗಿರುವ ಆ ಪ್ರವೃತ್ತಿ ಇಂದಿನವರು ಬೆಳೆಸಿಕೊಳ್ಳಬೇಕು.
ಅಧ್ಯಯನ ಮತ್ತು ಅಭ್ಯಾಸ ಇಲ್ಲದೇ ಇದ್ದರೆ ಯಾವ ಪ್ರತಿಭೆಗೂ ವಿದ್ಯೆಗೂ ನ್ಯಾಯ ಒದಗಿಸಲು ಸಾಧ್ಯವಿಲ್ಲ.
ಅದು ನಿಂತ ನೀರಾಗುತ್ತದೆ. ಕಲೆ ನಿಂತ ನೀರಾಗಬಾರದು ಅಂತ ಏನೇನೋ ಸೇರಿಸುತ್ತಾರೆ. ಅದಕ್ಕೆ ಸೃಜನ
ಶೀಲತೆ ಅಂತ ಕರೆಯುತ್ತಾರೆ. ಸೃಜನ ಶೀಲತೆ ಎಂದರೆ ಮೂಲ ಕಲೆಯನ್ನು ಬದಲಿಸುವುದಲ್ಲ. ರೂಪ ವಿಕಾರ
ಮಾಡುವುದಲ್ಲ. ಮೂಲ ರೂಪದಲ್ಲೇ ಅದಕ್ಕೆ ನಾವಿನ್ಯತೆಯನ್ನು ಮೆರುಗನ್ನು ಕೊಡಬೇಕು. ಅದಕ್ಕೆ ನಿತ್ಯ
ಅಧ್ಯಯನ ಇರಬೇಕು.
ನಾನು ಬಾಲ್ಯದಲ್ಲಿರುವಾಗ
ಒಂದೆರಡು ವರ್ಷ ನನ್ನಜ್ಜನ ಬಳಿಯಲ್ಲಿ ವೇದ ಪಾಠ ಅಭ್ಯಾಸ ಮಾಡುತ್ತಿದ್ದೆ. ವೇದ ಪಾಠದಲ್ಲಿ
ನಿರಂತರವಾದ ಒಂದು ಸಾಧನೆ ಎಂದರೆ ಅದು ವರ್ಗಸಂತೆ, ವಿದ್ಯಾರ್ಥಿಗೆ ಉಪದೇಶವಾದ ಮಂತ್ರಗಳನ್ನು ಆತ
ವರ್ಗಸಂತೆ , ಅಂದರೆ ನಿರಂತರ ಪಠಣದ ಮೂಲಕ ಕಲಿಯಬೇಕು. ಪ್ರತಿಯೊಂದು ಮಂತ್ರಕ್ಕೂ ಇಷ್ಟು ವರ್ಗ ಸಂತೆ ಎಂದಿದ್ದರೂ ನಿರಂತರ ಪಠಣಕ್ಕೆ ಕೊನೆ
ಇಲ್ಲ. ನಿತ್ಯ ಅಭ್ಯಾಸದ ಸಾಧನೆ ಇದ್ದಲ್ಲಿ ಆರ್ಜಿಸಿದ ವಿದ್ಯೆ ನೆಲೆನಿಲ್ಲುತ್ತದೆ. ಕಲಿತ ಮಂತ್ರ
ನಾಲಗೆಯಲ್ಲಿರುತ್ತದೆ. ಹೀಗಾಗಿ ಬ್ರಾಹ್ಮಣನಾದವನಿಗೆ ವೇದ ಪಾರಾಯಣವೆಂಬುದು ನಿತ್ಯ
ವಿಧಿಯಾಗುತ್ತದೆ. ಬ್ರಹ್ಮೋಪದೇಶದಿಂದ ಸ್ನಾತಕ ವೃತಧಾರಿಯಾಗುವವನ ಮುಂದೆ ಬ್ರಹ್ಮತ್ವದ ಸಾಧನೆ
ಇರುತ್ತದೆ. ಈ ಸಾಧನೆಗೆ ಈ ಪಾರಾಯಣ ಸಾಧನೆಯ ಹಾದಿಯಾಗುತ್ತದೆ. ಹಾಗಾಗಿ ವಿದ್ಯೆ ಸಾಧನೆಯ
ಹಾದಿಯನ್ನು ತೋರಿಸುತ್ತದೆ. ಸಾಧನೆಯ ಶಿಕರ ಮಾತ್ರ ಇನ್ನೂ ಬೆಳೆಯುತ್ತಾ ಸಾಗುತ್ತದೆ. ಅದಕ್ಕೆ
ಸೀಮೆ ಎಂಬುದಿಲ್ಲ.
ವಿದ್ಯೆ ಅಮೃತವಾಗುತ್ತದೆ
ಎಂದು ಹೇಳುತ್ತಾರೆ. ಆದರೆ ಅಫೂರ್ಣ ವಿದ್ಯೆ ಅದು ಅವಸಾನದತ್ತ ಸೆಳೆಯುತ್ತದೆ.
No comments:
Post a Comment