ಹಲವು ದಿವಸಗಳ ನಂತರ ಹಿರಿಯ ಭಾಗವತರಾದ ದಿವಂಗತ ಅಗರಿ ರಘುರಾಮ ಭಾಗವತರ ಧ್ವನಿ ಸುರುಳಿ ಬಿಚ್ಚಿ ಕೇಳಿದೆ. ಯಕ್ಷಗಾನದ ಸುಸ್ವರೂಪದ ಭಾಗವತಿಕೆ. ಲಯ ಶುದ್ದಿ ಸ್ಪಟಿಕ ರೂಪದ ಉಚ್ಚಾರ ಎರಕ ಹೊಯ್ಯುವ ತಾಳ ಒರಟು ಸ್ವರವಾದರೂ (ಹಲವರ ಅಭಿಪ್ರಾಯ ನನ್ನದಲ್ಲ) ಸ್ವರದಲ್ಲಿರುವ ಗಾಂಭೀರ್ಯತೆ ಮತ್ತು ಆಕರ್ಷಣೆ, ಬಿಡ್ತಿಗೆ ಎತ್ತುಗಡೆಯ ನಡುವೆ ಸಂಚರಿಸುವ ಗಾಯನ ಶೈಲಿ, ಪದ ಮುಗಿದರೂ ತಲೆದೂಗುತ್ತದೆ. ಈಗೀಗ ಹೊಸದಾಗಿ ಯಕ್ಷಗಾನ ಕೇಳುವ ನೋಡುವ ಪ್ರಚೋದನೆ ಮನಸ್ಸಿಗಾಗುತ್ತಿಲ್ಲ. ಅತಿಯಾದ ಸಂಗೀತ ಅಲಾಪನೆಯಿಂದ ಹಳಿತಪ್ಪಿದ ಯಕ್ಷಗಾನ ಹಿಮ್ಮೇಳ ಒಂದೆಡೆಯಾದರೆ ಮನಬಂದಂತಹ ಕುಣಿತ, ರಂಗಸ್ಥಳವನ್ನೇ ಓರೆಯನ್ನಾಗಿಸಿದ ಅನುಭವವಾಗುತ್ತದೆ. ಸಂಗೀತ , ಭಜನೆ, ಭಾವಗೀತೆ ಎಲ್ಲವೂ ಕಲಸು ಮೇಲೋಗರವಾಗಿ ಮೂಲ ಯಾವುದೆಂದು ಗುರುತು ಹಿಡಿಯದಷ್ಟು ಬದಲಾಗಿದೆ. ದುರ್ದೈವ ಎಂದರೆ ಕತ್ತಲೆ ಬೆಳಗಾಗುವುದರೊಂದಿಗೆ ಯಾವುದೋ ಬಿರುದು ತೆಲೆಗೇರಿಸಿಕೊಂಡು ಹೆಗಲಿಗೆ ಉತ್ತರಿ ಶಾಲು ಹೊದ್ದುಕೊಂಡು ಗಂಧರ್ವಗಳಾಗುತ್ತಿರುವ ನವ ಪೀಳಿಗೆಗಳಿಗೆ ಈ ಮೂಲ ಯಕ್ಷಗಾನದ ಅರಿವೇ ಇಲ್ಲ.
ಅಗರಿ ಶೈಲಿ ಅದೊಂದು ಯಕ್ಷಗಾನದ ಮೂಲಭೂತವಾದ ಶೈಲಿ. ಬರೀ ಸಂಗೀತಮಯವಾಗುತ್ತಿರುವ ಇಂದಿನ ಭಾಗವತಿಕೆ ಕ್ಯಾಟರಿಂಗ್ ನ ಆಡುಗೆಯಂತೆ ಒಂದೊಮ್ಮೆ ರುಚಿಸಿದರೂ ಮತ್ತೆ ಹೊಟ್ಟೆ ಉಬ್ಬರಿಸುವುದಕ್ಕೆ ತೊಡಗಿ ಯಾಕಾದರೂ ಉಂಡೆನೋ ಎನ್ನುವಂತಾಗುತ್ತದೆ. ಯಾವುದೇ ಭಾಗವತರನ್ನು ಕೇಳಿ ಮೊದಲು ರಾಗದ ಹೆಸರಿಗೆ ಹಲುಬುತ್ತಾರೆ. ಮೊಹನ ಕಲ್ಯಾಣಿ ಹೀಗೆ ಚಪ್ಪಾಳೆಗೆ ಕೀರಲುಗುಟ್ಟಿ ಬರುವ ಕಾಗೆಗಳಂತೆ ನಿಜವಾದ ಯಕ್ಷಗಾನ ನಿಸ್ತೇಜವಾಗಿ ಬಿದ್ದುಬಿಡುತ್ತದೆ. ಅತ್ತ ಹಿಂದುಸ್ಥಾನಿಯೂ ಅಲ್ಲದ ಇತ್ತ ಕರ್ನಾಟಕೀಯೂ ಅಲ್ಲದ ಗಾಯನ ಇಲ್ಲಿ ಯಕ್ಷಗಾನದ ಪ್ರಚೋದನೆಯನ್ನೂ ನುಂಗಿಹಾಕುತ್ತದೆ. ರಾಗವಲ್ಲದೆ ಯಕ್ಷಗಾನದ ಅರಿವಿದ್ದಂತೆ ಇಲ್ಲ. ಯಥಾಗುರು ತಥಾ ಶಿಷ್ಯ ಎಂಬ ಪರಂಪರೆಯ ನಡುವೆ ಕೇಳಿದ ಅಗರಿ ರಘುರಾಮ ಭಾಗವತರ ಹಾಡುಗಾರಿಕೆ ಅದೆಷ್ಟು ಯಕ್ಷಗಾನದ ರಸವನ್ನು ಉಕ್ಕಿಸುತ್ತದೆ ಎಂದರೆ ಶುರುವಾಗಿ ಪರಮ ಮೂರ್ಧಾವಸ್ಥೆಗೆ ಕ್ಷಣದಲ್ಲಿ ಸಂಚರಿಸಿ ಅದೇ ರೀತಿ ಮಗುವನ್ನು ತೊಟ್ಟಿಲಿಗೆ ಇಳಿಸಿದಂತೆ ಮೆತ್ತಗೆ ಇಳಿಸಿಬಿಡುತ್ತದೆ. ಮನಸ್ಸಿನ ಸಹನೆಯನ್ನು ಪರೀಕ್ಷಿಸುವ ಯಾವುದೇ ವಾಮ ಮಾರ್ಗಗಳಿಲ್ಲ. ಮಾತೆತ್ತಿದರೆ ಸಂಗೀತಮಯವಾಗುವ ಇಂದಿನ ಭಾಗವತರು ಯಕ್ಷಗಾನವನ್ನು ಕೇವಲ ಗಾಯನವನ್ನಾಗಿಸುತ್ತಾರೆ. ಗಾಯನಕ್ಕೇ ಮನಮಾಡುವಾಗ ತಪ್ಪುವ ಶ್ರುತಿ ತಾಳ ಸಾಧನೆಯ ಕೊರತೆಯನ್ನು ಹೇಳುತ್ತದೆ. ಯಾಕೋ ಯಕ್ಷಗಾನದ ಅನುಭವದ ಸ್ಪುರಣೆಯೇ ಮನಸ್ಸಿಗೆ ಆಗುತ್ತಿಲ್ಲ. ಅತ್ತ ಸಂಗೀತವೂ ಇಲ್ಲದ ಇತ್ತ ಯಕ್ಷಗಾನವೂ ಇಲ್ಲದ ಒಂದು ಬರಿದಾಗುವ ಶುಷ್ಕ ಅನುಭವ. ಆ ದಾಹವನ್ನು ಪರಿಹರಿಸುವುದು ಹೀಗೆ ಹಳೆಯ ಧ್ವನಿಯನ್ನು ಮತ್ತೊಮ್ಮೆ ತೆಗೆದು ಆಲಿಸುವುದು.
ಮೊದಲು ಯಕ್ಷಗಾನದ ಹಾಡುಗಾರಿಕೆಗೆ ಪೂರ್ವ ನಿರ್ಧಾರವಿರುತ್ತಿತ್ತು. ಅದಕ್ಕೊಂದು ಖಚಿತವಾದ ಲಯವಿರುತ್ತಿತ್ತು. ಇಂತಹ ಕಡೆಗೆ ಹೋಗುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿ ಬಂದಂತೆ ಎಲ್ಲವೂ ಆರಂಭಕ್ಕೆ ಮೊದಲೇ ನಿರ್ಧಾರವಾದಂತೆ. ಒಂದಷ್ಟು ಅಗರಿಯವರು ಹಾಡಿದ ಪದಗಳನ್ನು ತನ್ಮಯತೆಯಿಂದ ಕೇಳಿದರಷ್ಟೇ ಅದು ಅರಿವಿಗೆ ಬರುತ್ತದೆ. ಬಳಲಿ ಬೆಂಡಾಗಿಸುವ ಪದಗಳ ಪುನರಾವರ್ತನೆಗಳಿರುವುದಿಲ್ಲ. ಕೇಳುಗನನ್ನು ಹಿಡಿದಿಟ್ಟುಕೊಳ್ಳುವ ಯಾವ ತಂತ್ರಗಾರಿಕೆಯೂ ಇಲ್ಲಿರುವುದಿಲ್ಲ. ಎಲ್ಲಿಯೂ ಸಂಗೀತಮಯವಾಗುವುದಿಲ್ಲ. ಬದಲಿಗೆ ಕೇಳುಗ ವಶನಾಗಿಬಿಡುತ್ತಾನೆ. ಈಗ ಪ್ರೇಕ್ಷಕ ತಾಳ ಬಡಿಯುತ್ತಾನೆ, ಭಾಗವತರು ಹಾಡುತ್ತಾರೆ ಎಂಬಂತಾಗಿದೆ. ಯಕ್ಷಗಾನದ ನಿಜಶೈಲಿಗಳು ಮರೆಯಾಗುತ್ತಾ ಯಾವುದೋ ಒಂದು ಆಧುನೀಕತೆ ಸರ್ವವ್ಯಾಪಕವಾಗಿದೆ. ಯಕ್ಷಗಾನದ ಪರಂಪರೆಯ ಅವನತಿಯ ಸಂಕೇತ ಇದು. ಯಾವ ಸಂಗೀತವನ್ನು ನಾವು ಪ್ರತ್ಯೇಕವಾಗಿ ಕೇಳಿ ಮನಸ್ಸು ಹಗುರವಾಗಿಸುತ್ತೇವೋ, ಅದೇ ಸಂಗೀತ ಇಲ್ಲಿ ಬೆರಕೆಯಾದಾಗ ಮನಸ್ಸು ರೋಸಿ ಹೋಗುತ್ತದೆ. ಮಧುರವಾದ ಸುವಸ್ತುವಿಗೆ ಕಹಿಯ ಆವರಣವನ್ನು ಹೊದಿಸಿದಂತೆ. ಈಗ ಮಾಧುರ್ಯದ ಸಿಹಿ ಇಲ್ಲದಾಗಿ ಬರಿ ಕಹಿಯ ಅನುಭವವಾಗುತ್ತಿದೆ. ಕಳೆದುಕೊಂಡ ಮಾಧುರ್ಯ ಏನು ಎಂದು ಅರಿವಿಗೆ ಬರಬೇಕಾದರೆ ಹಳೆಯ ಧ್ವನಿ ಮುದ್ರಣಗಳನ್ನು ಕೇಳಬೇಕು. ಪುಣ್ಯ ನಾವು ಅಷ್ಟಾದರೂ ಅದೃಷ್ಟವಂತರಿದ್ದೇವೆ. ಒಂದಷ್ಟು ಹಳೆಯದನ್ನು ಮೆಲುಕುವ ಅವಕಾಶವಿದೆ. ಹಳೆಯದನ್ನು ಯಾವುದೋ ಹುಚ್ಚಿನಲ್ಲಿ ಧ್ವನಿ ಮುದ್ರಿಸಿದ ಆ ಮಹನೀಯರ ರಸಿಕತನ ಇಂದು ಒಂದಷ್ಟು ಗಂಗಾಜಲವನ್ನು ಉಣ್ಣಿಸುತ್ತದೆ. ಇಂದಿನ ಭಾಗವತರು ಕಡೆಮೆ ಎಂದರೆ ದಿವಸಕ್ಕೆ ಮೂರು ಸಲ ಅಗರಿ ಅಥವಾ ಬಲಿಪರ ಪದಗಳನ್ನುಖಡ್ಡಾಯವಾಗಿ ಕೇಳಬೇಕು. ಎಷ್ಟು ಹಾಳುಗೆಡಹಿದ್ದಾರೆ, ಅಥವಾ ಎಷ್ಟು ಹಾಳು ಗೆಡಹುತ್ತಾರೆ ಎಂಬ ಅರಿವಾದರೂ ಉಂಟಾಗಿ ಪಾಪ ಪ್ರಜ್ಞೆ ಉಂಟಾದರೆ ಯಕ್ಷಗಾನ ಉಸಿರಾಡಬಹುದು.

No comments:
Post a Comment