ನಾನು ಚೆಂಡೆ........ನೋಡುವಾಗಲೇ
ಅರ್ಥವಾಗಬಹುದು. ನನ್ನನ್ನು ಸೃಷ್ಟಿಸಿದವನು ಯಾವ ಮನೋಭಾವದಿಂದ ಸೃಷ್ಟಿಸಿರಬಹುದು ಎಂದು ಹಲವು ಸಲ ಸಂದೇಹವಾಗುತ್ತದೆ.
ನಾನು ಹಿಂಸೆ ಅನುಭವಿಸಿದಾಗಲೇ ನನ್ನ ಅಸ್ತಿತ್ವ ಜೀವಂತವಾಗುವುದು ಒಂದು ವಿಪರ್ಯಾಸವೇ ಸರಿ.
ಹಲವು ಸಲ ಕೇವಲ ನೋಡುವಾಗ
ಒಂದೊಂದು ಬಗೆ ಪ್ರಚೋದನೆಯಾಗುವುದು ಜನರ ಮನಸ್ಸಿನ ರೋಗ ಅಂತ ನನ್ನ ಭಾವನೆ. ಕತ್ತರಿ ಚಾಕು ನೋಡಿದಾಗ
ಏನಾದರೂ ಕತ್ತರಿಸುವ ಎಂದು ಪ್ರಚೋದನೆಯಾದರೆ ಅಲ್ಲಿ ಹಿಂಸೆ ಉಂಟಾದರೆ ಅದಕ್ಕೆ ಯಾರು ಮರುಗಬೇಕು? ಹಾಗಾಗಿ ನನ್ನನ್ನು ನೋಡುವಾಗ ನನ್ನನ್ನು ಬಡಿಯಬೇಕು ಎಂದು ಪ್ರಚೋದನೆಯಾಗುವುದು
ನನ್ನ ದುರ್ದೈವ ಎನ್ನಬೇಕು. ಸಾಲದೇ ಇರುವುದಕ್ಕೆ ನನ್ನ ಬಗಲಲ್ಲೇ ಕೋಲು ಬೇರೆ ಇಟ್ಟಿರುವುದು ಇದಕ್ಕೆ
ಬಹಳ ಅನುಕೂಲ. ಕೋಲು ತೆಗೆದು ಒಂದು ಬಡಿಯದೇ ಇದ್ದರೆ
ಏನೋ ಒಂದು ಅತೃಪ್ತಿಯ ಬಾಧೆಗೆ ಒಳಗಾದಂತೆ ಜನರ ವರ್ತನೆ. ಹಾಗಾಗಿ ಕಂಡಕೂಡಲೇ ಕೋಲು ತೆಗೆದು ಠಂ.....ಅಂತ ಒಂದು ಬಡಿಯುತ್ತಾರೆ. ಇನ್ನು ನನ್ನ ಸ್ವರ ಅವರಿಗೆ
ಸುಸ್ವರದಂತೆ ಭಾಸವಾದರೆ ನನ್ನ ಅವಸ್ಥೆ ಹೇಳುವುದೇ ಬೇಡ. ಒಂದು
ಪೆಟ್ಟಿನ ಜತೆಗೆ ಮತ್ತೂ ಪೆಟ್ಟುಗಳ ಸರಮಾಲೆಯೇ ಬೆನ್ನ ಮೇಲೆ ಪ್ರಹಾರವಾಗುತ್ತದೆ. ಅಬ್ಬಾ ನನ್ನ ಅವಸ್ಥೆ ಆ ಯಮ ಯಾತನೆ ಯಾರಿಗೆ ಹೇಳುವುದು? ನನ್ನ ರೋದನವೇ
ಇವರಿಗೆ ಸಂತಸವನ್ನು ರಂಜನೆಯನ್ನು ಕೊಡುವುದಾದರೆ ನನ್ನ ದೌರ್ಭಾಗ್ಯ ಎನ್ನಬೇಕು. ಸರಿ ನನ್ನ ಬೆನ್ನು ಎನ್ನುವುದು ಪರೀಕ್ಷಾ ಕೇಂದ್ರವಾಗುತ್ತದೆ.
ನನ್ನ ಹುಟ್ಟಿಸಿದವನು
ಅದೆಷ್ಟು ಶ್ರಮ ವಹಿಸಿದ್ದಾನೆ ಎಂದರೆ ಆತನ ಪರಿಶ್ರಮಕ್ಕೆ ಆಗ ನನಗೆ ನಿಜವಾಗಿ ಗೌರವ ಮೂಡಿತ್ತು. ತಪಸ್ಸಿನಂತೆ
ಶ್ರಮ ವಹಿಸಿ ನಾನು ಒಳ್ಳೆ ಸ್ವರ ಹೊರಡಿಸುವ ತನಕ ನನ್ನನ್ನು ಬಡಿಯುತ್ತಿದ್ದ. ನನ್ನ ಹಾಗೆ ಮತ್ತೆ ಕೆಲವರು
ಇದ್ದಾರೆ, ಅವರೆಲ್ಲ ತೆಳು ಚರ್ಮದವರಿರಬೇಕು. ಬರಿ ಗೈಯಲ್ಲೆ ಬಡಿದರೂ
ರೋಧಿಸಿಬಿಡುತ್ತಾರೆ, ಆದರೆ ನನ್ನದು ದಪ್ಪ ಚರ್ಮ ಇರಬೇಕು. ಕೋಲು ಬೇಕೇ ಬೇಕು.
ಇಷ್ಟೆಲ್ಲಾ ಹೇಳುವಾಗ
ಯಾರೂ ಹೇಳಬಹುದು, ಲೋಕದಲ್ಲಿ ಇದ್ದವರೆಲ್ಲ ಕೆಟ್ಟವರು ಅಂತ. ಆದರೆ ಹಾಗಲ್ಲ.
ಹಲವರು ನನ್ನನ್ನು ಬಹಳವಾಗಿ ಪ್ರೀತಿಸುತ್ತಾರೆ. ನನ್ನನ್ನು ಮಗುವಿನಂತೆ ಮುದ್ದಿಸಿ ಖುಷಿ ಪಡುವಾಗ ನಾನೂ
ಪುಳಕಿತನಾಗಿ ಖುಷಿ ಪಡುತ್ತೇನೆ. ಆದರೂ ಕೆಲವೊಮ್ಮೆ ಪೆಟ್ಟು ಬೀಳುವಾಗ ಇದೆಲ್ಲ ಮರೆತು ಬಿಡುತ್ತೇನೆ. ಆದರೂ ಇಂತಹ ಒಳ್ಳೆಯವರು ಸಿಕ್ಕಿದಾಗ ನಾನೂ ಖುಷಿ ಅನುಭವಿಸುತ್ತೇನೆ.
ಅವರು ಹೆಚ್ಚು ಹೆಚ್ಚು ನನ್ನನ್ನು ಪ್ರೀತಿಸಿ ಮುದ್ದಿಸುತ್ತಾರೆ. ನನ್ನನ್ನು ಜೀವಕ್ಕಿಂತ ಹೆಚ್ಚು ಲಾಲಿಸುತ್ತಾರೆ.
ನನ್ನನ್ನು ಹೆಗಲಿಗೆ ನೇತಾಡಿಸಿದಾಗ ಅವರ ಮುಖದ ನಗುವನ್ನು ಕಾಣಬೇಕು. ಆಗ ನನ್ನ ಅಳುವು ನನಗೆ ಮರೆತು
ಹೋಗುತ್ತದೆ. ಇಂತಹ ಕೆಲವರು ಬಡಿದರೆ ನನಗೆ ನೋವು ಎಂದನಿಸುವುದಿಲ್ಲ. ನನ್ನ ನರನಾಡಿ ನೋಡಿ ನನ್ನ ಮಾಧುರ್ಯ
ಎಲ್ಲಿ ಅಡಗಿದೆ ಎಂದು ಹುಡುಕಿ ತೆಗೆಯುತ್ತಾರೆ. ಈಗೀಗ ಇಂತಹವರು ಬಹಳ ಅಪರೂಪ ಅಂತ ನನಗೆ ಅನ್ನಿಸತೊಡಗಿದೆ.
ಪೆಟ್ಟುಗಳು ಬೀಳತೊಡಗಿ ನನ್ನ ಶ್ರುತಿ ನನಗೇ ಮರೆತು ಹೋಗಿದೆ.
ನನ್ನ ಮಿತ್ರನೊಬ್ಬ
ಸಂತಸದಿಂದ ಹೇಳುತ್ತಿದ್ದ ವಿಚಾರ ಹೇಳಬೇಕೆನಿಸುತ್ತದೆ. ಒಬ್ಬರು ಅಜ್ಜ ಇದ್ದರಂತೆ. ಆತನನ್ನು ಬಹಳವಾಗಿ
ಮುದ್ದಿನಿಂದ ಕಾಣುತ್ತಿದ್ದರಂತೆ. ಬಿಡುವಿದ್ದಾಗ ಎಲ್ಲಾ ತನ್ನನ್ನು ತಡವಿ ಪ್ರೀತಿಯಿಂದ ಮೈಸವರುತ್ತಿದ್ದರಂತೆ.
ಸುಕ್ಕು ಕಟ್ಟಿದ ಅವರ ಕೈಯಲ್ಲಿ ಆತನ ಮೈದಡವಿ ಮೆಲು ದನಿ ಹೊರಡಿಸಿದರೆ ಈತನೂ ತನ್ನ ಸರ್ವಾಂಗವನ್ನು
ಅವರಿಗೆ ಅರ್ಪಿಸುತ್ತಿದ್ದನಂತೆ. ಇಂತಹವರು ಸಿಗಬೇಕಾದರೆ ಜನ್ಮಾಂತರದ ಪುಣ್ಯ ಫಲ ಇರಬೇಕು. ಇವರಂತೆ
ಇನ್ನೂ ಕೆಲವರಿದ್ದಾರೆ ಅವರ ಕುಶಲತೆ ಎಂದರೆ ನಮ್ಮಂತವರ ದೇಹ ಪುಟಿದೇಳುತ್ತದೆ. ನಮ್ಮ ಭಾಷೆ ಮಾತುಗಳೆಲ್ಲ
ಸಂಗೀತವಾಗುತ್ತದೆ. ಈಗೀಗ ನನಗೆ ಎಲ್ಲೋ ಒಬ್ಬಿಬ್ಬರು
ಈ ರೀತಿ ಸಿಗುತ್ತಾರೆ. ಹಲವರು ನನಗೆ ಏಟು ಕೊಟ್ಟಮೇಲೆ ನನ್ನನ್ನು ಜೋಪಾನವಾಗಿ ನೋಡಿ ದಿನವೂ ಮೈ ತಡವಿ
ನನ್ನನ್ನು ಹುರಿದುಂಬಿಸುತ್ತಾ ಇರುತ್ತಾರೆ. ನನ್ನ ಆರೋಗ್ಯ ಕ್ಷೀಣಿಸಿ ಅಪಸ್ವರ ಹೊರಟರೆ ಏನೋ ಕಳೆದುಕೊಂಡಂತೆ
ಮರುಗುತ್ತಾರೆ. ಹೆಚ್ಚಿನ ಸಮಯ ನನ್ನ ಜತೆಯಲ್ಲೇ ಕಳೆದು ಬಿಡುತ್ತಾರೆ. ಇಂತಹವರ ಸಖ್ಯ ಬಹಳ ಆಪ್ಯಾಯ
ಮಾನವಾಗುತ್ತದೆ.
ನನ್ನ ಆತ್ಮ ಸಖ ಎಂದರೆ
ನನ್ನ ಹಾಗೆ ಇನ್ನೊಬ್ಬ ಎರಡು ಮುಖದವನು, ಅವನೇ ಮದ್ದಲೆ. ಮುಖವನ್ನು
ನಾವು ಬೆನ್ನು ಅಂತಲೇ ಹೇಳುವುದು, ಯಾಕೆಂದರೆ ನಮಗೆ ಸ್ವರ ಮಾತ್ರ ಇರುತ್ತದೆ.
ಮುಖ ಇರುವುದಿಲ್ಲ. ನನ್ನ ನೋವು ತಡಿಯದೇ ಒಂದು ಸಲ ಅವನಲ್ಲಿ ನನ್ನ ಅಳವು ತೋಡಿಕೊಂಡೆ. " ಎಂತದು
ಮಾರಾಯ, ಇವತ್ತು ಬಿದ್ದ ಪೆಟ್ಟು ಜನ್ಮಕ್ಕೆ ಮರೆಯುವುದಿಲ್ಲ. ಸಾಕಾಗಿ ಹೋಯಿತು.
ಯಮ ಯಾತನೆ" ಅದಕ್ಕೆ ಅವನು ಹೇಳಿದ, " ಎನೇ ಹೇಳು ಮಾರಾಯ,
ನಿನಗಾದರೆ ಒಂದೇ ಕಡೆ ಹಿಡಿದು ಬಡಿಯುತ್ತಾರೆ, ನನಗೋ ಎರಡು
ಕಡೆ ಹಿಡಿದು ಬಡಿಯುತ್ತಾರೆ. ಈ ಕಡೆಯಿಂದ ಆಕಡೇ ಹೋಗುವಂತಿಲ್ಲ. ಆಕಡೆಯಿಂದ ಈ ಕಡೆ ಸರಿಯುವಂತಿಲ್ಲ.
ತಿರು ತಿರುಗಿಸಿ ಬಡಿಯುತ್ತಲೇ ಇರುತ್ತಾರೆ. ನಿನಗಾದರೋ ಅಲ್ಪ ಸ್ವಲ್ಪ ವಿರಾಮ ಇರುತ್ತದೆ. ನನಗೋ ವಿರಾಮವೇ
ಇಲ್ಲ."
ಹಲವು ಸಲ ನನ್ನಂತಹವರು
ಹೇಳುವ ಮಾತಿದೆ. ರಂಗದಮೇಲೆ ದೇವತೆ ಕುಣಿದರೂ ರಕ್ಕಸ ಕುಣಿದರೂ, ಪೆಟ್ಟು ಮಾತ್ರ ನಮಗೇ ಬೀಳುತ್ತದೆ. ಇದರ ನಡುವೆ ಇನ್ನು ಕೆಲವರಿದ್ದಾರೆ ನಾವೆಷ್ಟು
ಅರಚಿಕೊಂಡರೂ ಏನೂ ಆಗಲಿಲ್ಲ ಎಂಬಂತೆ ಕುಣಿಯದವರೂ ಸಿಕ್ಕಿ ಬಿಡುತ್ತಾರೆ. ಬಡಿಯುವವರೂ ಅಷ್ಟೇ ಕುಣಿಯುವವರನ್ನು
ನೋಡಿ ಬಡಿಯುತ್ತಾರೆ, ನನ್ನತ್ತ ದೃಷ್ಟೀಯೇ ಇಲ್ಲ. ಅವರಿಗೆ ಹಿತವಾಗುವಂತೆ
ನನ್ನ ಸ್ವರ ಇದ್ದರೆ ಸರಿ, ಇಲ್ಲದಿದ್ದರೆ ನನ್ನ ನರ ನಾಡಿಗಳನ್ನೆಲ್ಲಾ ಹಿಡಿದೆಳೆದು
ಸ್ವರ ಹೊರಡಿಸುವವರೆಗೆ ಬಿಡುವುದಿಲ್ಲ. ಒಂದು ಸಲ ನನ್ನ ನರ ಬಿಗಿಯುವಾಗಲೇ ಅರ್ಧ ಸುಸ್ತು ಹೊಡೆದಿದ್ದೆ.
ಆದರೂ ಬಡಿಯುವವರಿಗೆ ತೃಪ್ತೀ ಸಿಕ್ಕಹಾಗಿಲ್ಲ. ಮಾತ್ರವಲ್ಲ ಯಾರೋ ಬಂದು ಅವರಲ್ಲಿ ಹೇಳಿಬಿಟ್ಟರು
" ಎಂದಿನ ಹಾಗೆ ಇಂದು ರೈಸಲಿಲ್ಲ....." ಸರಿ ಸಿಟ್ಟು ನನ್ನ ಮೇಲೆ. ಇಲ್ಲ " ಈ ಚೆಂಡೆಯೇ
ಸರಿ ಇಲ್ಲ. ಸ್ವರವೇ ಹೊರಡುವುದಿಲ್ಲ. " ನಾನೂ
ಹೇಳಿದೆ ಅದರೆ ಅದು ನನ್ನ ಭಾಷೆಯಲ್ಲಿ , " ಒಂದು ಸಲ ನನಗೆ ಅವಕಾಶ
ಕೊಟ್ಟು ನೋಡಿ, ಇದಕ್ಕಿಂತ
ಚಿತ್ರ ವಿಚಿತ್ರ ಸ್ವರ ನಿಮ್ಮ ಬಾಯಿಂದ ಹೊರಡುತ್ತದೆ"
ಇದು ನನ್ನದೇ ಭಾಷೆಯಲ್ಲಿ ನಾನು ಹೇಳಿದ್ದು. ನನ್ನ ಭಾಷೆ ಎಂದರೆ ಅದುವೇ ಯಾರಿಗೆ ಗೊತ್ತಿಲ್ಲ. ಆದರೆ
ಅವರು ಎಷ್ಟು ಅರ್ಥ ಮಾಡಿಕೊಂಡಿದ್ದಾರೋ ಗೊತ್ತಿಲ್ಲ.
ಮೊದಲೆಲ್ಲ ಯಕ್ಷಗಾನ
ಬಯಲಾಟವಾದರೇ ನನ್ನ ಒಂದು ಸ್ವರ ಇದ್ದರೆ ಸಾಕಿತ್ತು.
ಈಗ ಹಾಗಲ್ಲ.....ನನಗೆ ವ್ಯಯಿಸುವುದಕ್ಕಿಂತ ಹೆಚ್ಚು ಹಣ ಖರ್ಚು ಮಾಡಿ ಬ್ಯಾಂಡಿನವರನ್ನು ಕರೆಯುತ್ತಾರೆ.
ಕೆಲವೊಮ್ಮೆ ಮಾತ್ರ ಅವರೆಲ್ಲ ಬಡಿದು ನನ್ನ ಧ್ವನಿ ಅಡಗಿಸುವುದಕ್ಕೆ ನೋಡುತ್ತಾರೆ. ಯಾಕೆ ಹೀಗೆ? ನನಗೇ ಮೀಸಲಾಗಿರುವ ಒಂದೇ ಕ್ಷೇತ್ರದಲ್ಲೂ ನನ್ನ ಬಗ್ಗೆ ಗೌರವವಿಲ್ಲದೆ ನನ್ನ
ಮರ್ಯಾದಿ ಕಳೆಯುತ್ತಾರೋ ಗೊತ್ತಿಲ್ಲ. ಒಟ್ಟು ಗಲಾಟೆ. ಅವರ ಮಾತೂ ಕೇಳುವುದಿಲ್ಲ. ನನ್ನದೂ ಧ್ವನಿ ಇಲ್ಲ.
ಈಗೀಗ ನನ್ನ ಬೇಡಿಕೆ
ಹೆಚ್ಚಿದೆ. ಮೊದಲು ಕೇವಲ ಬಯಲಾಟಕ್ಕೆ ಉಪಯೋಗಿಸುತ್ತಿದ್ದರೆ, ಈಗ ಇದ್ದ ಬಿದ್ದ ಕಾರ್ಯಕ್ರಮಕ್ಕೆಲ್ಲ ನಾನು ಬೇಕು. ಯಾರೋ ಮಹನೀಯರು ಬಂದರೂ ಅವರು ಕೇಳಲಿ
ಬಿಡಲಿ ನಾನು ಬೇಕು. ಯಾರೋ ಒಬ್ಬ ಏನೋ ಗೊತ್ತಿಲ್ಲ ಸಿಕ್ಕಿರುವುದೇ ಅವಕಾಶ ಎಂದು ನನಗೆ ಬಡಿಯುತ್ತಾನೆ.
ಅಷ್ಟು ಜನರ ಎದುರು ನನ್ನ ರೋದನ ಕೇಳುವವರಿಲ್ಲ. ಆದರೂ
ನನಗೆ ಹಿಡಿದು ಬಡಿದು ಬಡಿದು ವಿಕೃತ ಆನಂದ ಅನುಭವಿಸುತ್ತಾನೆ.
ಇಷ್ಟೆಲ್ಲ ಅಳಲು ತೊಡಿಕೊಂಡರೂ
ನಾನು ಬಡಿಯುವವರ ಬಗ್ಗೆ ಯೋಚಿಸುತ್ತೇನೆ. ಅವರಿದ್ದರೆ ನಾನಿದ್ದೇನೆ. ನನ್ನ ಅಸ್ತಿತ್ವ ಇದೆ. ನನ್ನ
ನಾಡಿ ಮಿಡಿತ ಇರುತ್ತದೆ. ಬಡಿಯುವವ ಇಲ್ಲ ಎಂದಾದರೆ ನಾನು ಮರಗಟ್ಟಿ ಹೋಗಿಬಿಡಬಹುದು. ಆದರೂ ಒಂದು ಪ್ರಾರ್ಥನೆ
ನನ್ನ ಬಗ್ಗೆ ಚೆನ್ನಾಗಿ ತಿಳಿದು ಅಧ್ಯಯನ ಮಾಡಿ ಬಡಿಯುವವರಿದ್ದರೆ ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ.
No comments:
Post a Comment