"ಇದು ವಿಮರ್ಶೆಯಲ್ಲದ ಚಿಂತನ"

Sunday, June 5, 2022

ಭೀಷ್ಮನ ಪ್ರಥಮ ಪ್ರಮಾದ

 ಭೀಷ್ಮನ ಪ್ರಥಮ ಪ್ರಮಾದ

ಭೀಷ್ಮ.....ದೇವವ್ರತ. ಮಹಾಭಾರತದ ಆದಿಯಿಂದ ಅಂತ್ಯದ ವರೆಗೂ ವ್ಯಾಪಿಸಿಕೊಂಡ ಧೀಮಂತ  ವ್ಯಕ್ತಿತ್ವ. ಶಾಂತನು ಚಕ್ರವರ್ತಿಯ ಮಗ ಮಾತ್ರವಲ್ಲ, ದೇವನದಿ ಗಂಗೆಯ ಪುತ್ರನೂ ಹೌದು. ಮಹಾ ಪರಾಕ್ರಮಿ, ಮೇಧಾವಿ, ಸರ್ವ ಧರ್ಮ ಸೂಕ್ಷ್ಮಗಳನ್ನು ಶಾಸ್ತ್ರಗಳನ್ನು ಬಲ್ಲ ಈತ ಪರಶುರಾಮ ಮುನಿಯ ಪಟ್ಟ ಶಿಷ್ಯ. ಓಂ ನಮೋ ಭಗವತೇ ವಾಸುದೇವಾಯ ಎಂದು ಶ್ರೀಕೃಷ್ಣನ ಅವತಾರಕ್ಕೂ ಮೊದಲೇ ಶ್ರೀಕೃಷ್ಣನನ್ನು ಕಂಡು  ಉಪಾಸನೆ ಗೈದಂತಹ ಮಹಾಭಾಗವತೋತ್ತಮ ಭೀಷ್ಮ.  ಏಲ್ಲೇ ಆಗಲಿ ತನ್ನ ವ್ಯಕ್ತಿತ್ವ ನಿಲುಮೆಯಿಂದಲೇ ಗೆಲ್ಲುವಂತಹ ವ್ಯಕ್ತಿತ್ವ. ಈತ ಒಂದೆರಡು ಕಡೆಯಲ್ಲಿ ಮಾತ್ರವೇ ಯುದ್ದ ಮಾಡಿದಂತಹ ಉಲ್ಲೇಖ ಮಹಾಬಾರತದಲ್ಲಿದೆ. ಹೀಗಿದ್ದರೂ ಈತನಿಗೆ ಸರಿಗಟ್ಟುವ ಪರಾಕ್ರಮಿ ಆ ಕಾಲದಲ್ಲಿ ಇರಲಿಲ್ಲ ಎಂಬುದು ಸುಸ್ಪಷ್ಟ. ದೇವವ್ರತನಾಗಿದ್ದ ಭೀಷ್ಮನಾಗಿ ಕರೆಸಿಕೊಂಡ ಕಥೆಯೂ ಒಂದು ಭೀಷ್ಮನ ವ್ಯಕ್ತಿತ್ವಕ್ಕೆ ಗರಿಯನ್ನು  ತೊಡಿಸಿದೆ.  ಇಂತಹ ಮೇರು ವ್ಯಕ್ತಿತ್ವದ ಭೀಷ್ಮ ಮಾಡಿದ ಮೊದಲ ತಪ್ಪು ಮಹಾಭಾರತದ ದುರಂತಗಳಿಗೆ ಕಾರಣವಾಯಿತು. 

ಅದು ದೇವವ್ರತ ಭೀಷ್ಮನಾಗಿ ಬದಲಾದ ಕಥೆ. ಶಂತನು ಚಕ್ರವರ್ತಿ ಮತ್ತು ಗಂಗೆ ಶಾಪ ಗ್ರಸ್ಥರಾಗಿ ಭೂಮಿ ಮೇಲೆ ಬಂದ ನಂತರ, ಗಂಗೆ ಅಷ್ಟವಸುಗಳನ್ನು ಮಕ್ಕಳಾಗಿ ಹೆತ್ತು ಏಳು ಮಕ್ಕಳನ್ನು ನದಿಗೆಸೆದು ಕಳೆಯುತ್ತಾಳೆ. ಉಳಿದ ಒಬ್ಬ ಮಗ ದೇವವ್ರತ ನನ್ನು ಶಂತನುವಿನ ಬೇಡಿಕೆಯಂತೆ ಬಿಟ್ಟು  ಮೊದಲೇ ಹೇಳಿದ ಮಾತಿನಂತೆ ಆತನನ್ನು ಬಿಟ್ಟು ಶಾಪ ವಿಮೋಚನೆ ಪಡೆದುಕೊಳ್ಳುತ್ತಾಳೆ. ಪತ್ನಿಯನ್ನು ಕಳೆದು ಕೊಂಡ ಚಕ್ರವರ್ತಿ ದಶರಥ ಒಂದು ದಿನ ಬೆಸ್ತನಾದ ದಾಶರಾಜನ ಮಗಳು ಸತ್ಯವತಿಯನ್ನು ಕಂಡು ಮೋಹ ಪರವಶನಾಗುತ್ತಾನೆ. ಚಕ್ರವರ್ತಿಯಾದರು ದಾಶರಾಜನಲ್ಲಿ ವಿನಯದಿಂದ ಗೌರವ ಪೂರ್ಣವಾಗಿ ಮಗಳು ಸತ್ಯವತಿಯನ್ನು ಮದುವೆ ಮಾಡಿಕೊಡುವಂತೆ ಕೇಳಿಕೊಳ್ಳುತ್ತಾನೆ. ಆದರೆ ದಾಶ ರಾಜ ಒಪ್ಪುವುದಿಲ್ಲ. ಸತ್ಯವತಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಮುಂದೆ ರಾಜಕೀಯವಾಗಿ ಅನ್ಯಾಯವಾಗಬಹುದು ಎಂಬ ಅಂಜಿಕೆ ಆತನಿಗೆ ಇರುತ್ತದೆ. ಅದಾಗಲೇ ಮಗನನ್ನು ಪಡೆದಿದ್ದ ಶಂತನು, ಸತ್ಯವತಿಯ ಮಕ್ಕಳಿಗೆ ಪಟ್ಟವನ್ನು ಕೊಡಲಾರ ಎಂಬ ಆತಂಕ ಮಾತ್ರವಲ್ಲ ಮಕ್ಕಳಿಗೆ ಮುಂದೊಂದು ದಿನ ಅನ್ಯಾಯವಾಗಬಹುದು ಎಂದು ಹಿಂಜರಿಯುತ್ತಾನೆ. ಈ ಘಟನೆಯಿಂದ ತೀವ್ರವಾಗಿ ಮನನೊಂದ ಶಂತನು ರಾಜ್ಯಾಢಳಿತದಲ್ಲಿ ವಿರಕ್ತನಾಗುತ್ತಾನೆ. ಇದರ ಕಾರಣ ತಿಳಿದ ಮಗ ದೇವವ್ರತ ದಾಶ ರಾಜನಲ್ಲಿ ತನ್ನ ತಂದೆಯ ಕನ್ಯಾರ್ಥಿಯಾಗಿ ಹೋಗಿ ಸತ್ಯವತಿಯನ್ನು ಮದುವೆ ಮಾಡಿಕೊಡುವಂತೆ ಕೇಳುತ್ತಾನೆ. ದಾಶರಾಜನ ಇಂಗಿತವನ್ನು ಅರಿತ ಆತ, ರಾಜ್ಯದ ಅಧಿಕಾರವನ್ನು ತ್ಯಾಗ ಮಾಡುತ್ತಾನೆ. ಮುಂದೆ ತನಗೆ ಹುಟ್ಟಿದ ಮಕ್ಕಳಿಂದ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಅಖಂಡ ಬ್ರಹ್ಮಚಾರಿಯಾಗಿ ಉಳಿಯುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಈ ಭೀಷಣ ಪ್ರತಿಜ್ಞೆಯಿಂದ ದೇವವ್ರತ ಭೀಷ್ಮನಾಗಿ ಬದಲಾಗುತ್ತಾನೆ. 

ಇದು ಕಥೆಯ ಸಂಕ್ಷೇಪ. ಎಲ್ಲ ಧರ್ಮ ಸೂಕ್ಷ್ಮವನ್ನು ಬಲ್ಲ ಭೀಷ್ಮ ಇಲ್ಲೊಂದು ಧರ್ಮ ಸೂಕ್ಷ್ಮವನ್ನು ಮೀರುತ್ತಾನೆ. ರಾಜ್ಯದ ಆಢಳಿತ ಎಂಬುದು ರಾಜನಿಗೆ ಭೋಗವಸ್ತುವಲ್ಲ. ಅದೊಂದು ಕರ್ತ್ಯವ್ಯ. ಮುಳ್ಳಿನ ಹಾಸಿಗೆ. ರಾಜನಾದವನು ಭೋಗವಸ್ತು ಆಲ್ಲದೇ ಇದ್ದ ರಾಜ್ಯವನ್ನು ಬಿಟ್ಟುಕೊಡುವಂತಿಲ್ಲ. ಬಿಟ್ಟುಕೊಟ್ಟರೂ  ಅದು ಹೇಗೆ ತ್ಯಾಗವಾಗುತ್ತದೆ. ಅರಸನಾದವನಿಗೆ ರಾಜ್ಯ ಆಢಳಿತ ಎಂಬುದು ಕರ್ತವ್ಯ ಮತ್ತು ವೃತ್ತಿಯಾಗಿರುತ್ತದೆ. ಒಬ್ಬ ತನ್ನ ಕರ್ತವ್ಯದಿಂದ ವಿಮುಖನಾಗುವ ಹಾಗಿಲ್ಲ. ಅದೂ ಧರ್ಮ ಶಾಸ್ತ್ರವನ್ನು ಚೆನ್ನಾಗಿ ತಿಳಿದಿದ್ದವನು ಹೀಗೆ ಏಕಾಏಕಿ ತ್ಯಾಗ ಮಾಡಿ ಪ್ರಮಾದ ಎಸಗಿದ್ದು ಮುಂದಿನೆ ಘೋರ ದುರಂತಗಳಿಗೆ ಕಾರಣವಾಗುತ್ತದೆ. ಅಖಂಡ ಬ್ರಹ್ಮ ಚಾರಿತ್ವವೂ ಒಬ್ಬ ರಾಜನಿಗೆ ಸಾಧುವಲ್ಲ.  ಹೀಗಿದ್ದರೂ ದೇವವ್ರತ ಭೀಷ್ಮನಾಗುವುದು ಒಂದು ವಿಪರ್ಯಾಸ ಎನ್ನಬೇಕು. ಒಂದು ವೇಳೆ ಯುಧಿಷ್ಠಿರನಾದ ಧರ್ಮರಾಯ ಇದೇ ಸ್ಥಾನದಲ್ಲಿದ್ದರೆ ಹೀಗೆ ನಡೆದುಕೊಳ್ಳುತ್ತಿದ್ದನೆ?  ಅಥವಾ ಹೀಗೆ ನಡೆದುಕೊಳ್ಳಲು ಭೀಷ್ಮ ಸಮ್ಮತಿಸುತ್ತಿದ್ದನೇ? ಇದು ಪ್ರಶ್ನೆ. 

ರಾಜ್ಯ ಎಂಬುದು ಅರಸನಾದವನಿಗೆ ಭೋಗವಸ್ತುವಲ್ಲ. ಭೀಷ್ಮ ಹೀಗೆ ತ್ಯಾಗ ಮಾಡಿ ರಾಜ್ಯವನ್ನು ಭೋಗವಸ್ತುವಾಗಿ ಕಂಡ. ಇದು ಭೀಷ್ಮ ಮಾಡಿದ ಮೊದಲ ತಪ್ಪು. ಆನಂತರ ಇಂತಹ ಹಲವಾರು ತಪ್ಪುಗಳು ಜೀವನದುದ್ದಕ್ಕೂ ಭೀಷ್ಮ ಮಾಡುತ್ತಲೇ ಬರುತ್ತಾನೆ. ಹೀಗಿದ್ದರೂ ಮಹಾಭಾರತದಲ್ಲಿ ಭೀಷ್ಮನದ್ದು ಮೇರು ವ್ಯಕ್ತಿತ್ವ.  ಇಂದಿನ ರಾಜಕೀಯ ಸ್ಥಿತಿಗತಿಗೂ ಇದು ಅನ್ವಯವಾಗುತ್ತದೆ. ಪದವಿಯಲ್ಲಿರುವವರು ಮಾಡುವ ಘನಘೋರ ತಪ್ಪುಗಳು ತಪ್ಪುಗಳೇ ಅಲ್ಲ ಎಂಬಂತೆ ಅವರನ್ನು ಪೂಜಿಸಲಾಗುತ್ತದೆ. ಅಧಿಕಾರ ಎಂಬುದು ಭೋಗವಸ್ತುವಾಗಿ ಕಂಡು ಅದಕ್ಕೆ ಮಾಡಬಾರದ ಅನ್ಯಾಯಗಳನ್ನು ಮಾಡುತ್ತಾರೆ. ಬಹುಶಃ ಇಂತಹ ಧರ್ಮ ಸೂಕ್ಷ್ಮ ಅರಿತಿದ್ದರೆ ಇಂದಿನ ರಾಜಕೀಯನಾಯಕರು ಎಂದೋ ರಾಜಕೀಯ ಸನ್ಯಾಸವನ್ನು ತೆಗೆದುಕೊಳ್ಳಬೇಕಿತ್ತು. ಹಾಗಾಗುವುದಿಲ್ಲ ಎಂಬುವುದೇ ವಿಪರ್ಯಾಸ. ಇಂದಿನ ರಾಜಕೀಯ ಜೀ



ವನ ಎಂದರೆ ಎಲ್ಲವನ್ನು ಒದಗಿಸಿಕೊಡುವ ಭೋಗ ಜೀವನವೇ ಆಗಿ ಬದಲಾದದ್ದು ಮಹಾಭಾರತದ ತತ್ವವನ್ನು ಹೆಜ್ಜೆ ಹೆಜ್ಜೆಗೂ ಹೇಳುವ ಭಾರತದಲ್ಲಿನ ಒಂದು ವಿಪರ್ಯಾಸ ಎನ್ನಬೇಕು. 

ಮಹಾವಿದ್ವಾಂಸ ಡಾ. ಶ್ರೀ  ಕೆ ಎಸ್  ನಾರಾಯಣ ಆಚಾರ್ಯ ಅವರ ಮಹಾಭಾರತ ಪ್ರವಚನದಲ್ಲಿನ ಈ ಚಿಂತನೆಯ ಸೂಕ್ಷ್ಮವನ್ನು ಇಲ್ಲಿ ಒದಗಿಸಿದ್ದೇನೆ. ಇದು ಇಂದಿನ ರಾಜಕೀಯ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. 

No comments:

Post a Comment