ಕೃಷ್ಣ ಸಂಧಾನ ವಿಫಲವಾಗಿ ಯುದ್ಧವೇ ನಿರ್ಣಯವಾಗಿ ಕುರು ಪಾಂಡವ ಸೇನೆ ಕುರುಕ್ಷೇತ್ರದಲ್ಲಿ ಎದುರು ಬದುರಾಯಿತು. ಇನ್ನೇನು ಯುದ್ದ ಆರಂಭವಾಗುತ್ತದೆ. ಎಲ್ಲರೂ ಪರಸ್ಪರ ನೋಡುವುದರಲ್ಲೇ ಒಂದಷ್ಟು ಕ್ಷಣ ಕಳೆಯುತ್ತಾರೆ. ಶಂಖನಾದ ಮೊಳಗುತ್ತದೆ. ಆಗ ಕುರುಸೇನೆ ಒಂದು ದಿಗ್ಭ್ರಮೆಗೆ ಒಳಾಗಾಗುತ್ತದೆ. ಪಾಂಡವರಲ್ಲಿ ಹಿರಿಯನಾದ ಯುದ್ಧಿಷ್ಠಿರ ರಥದಿಂದ ಇಳಿದು ನೇರವಾಗಿ ಕುರುಸೇನೆಯತ್ತ ನಡೆದು ಬರುತ್ತಿದ್ದಾನೆ. ಎಲ್ಲರೀಗೂ ಕುತೂಹಲ. ಯುಧಿಷ್ಠಿರ ಧರ್ಮಾತ್ಮ. ಹಾಗಾಗಿಯೇ ಇನ್ನು ಯಾವ ಧಾರ್ಮಿಕ ವಿಧಿ ಬಾಕಿ ಉಳಿದಿದೆ ಎಂದು ಕುತೂಹಲ. ಆತ ನೇರವಾಗಿ ಭೀಷ್ಮನೆಡೆಗೆ ಬಂದು, ಗುರು ಹಿರಿಯರಿಗೆ ಮೊದಲಾಗಿ ವಂದಿಸಿ ಅಜ್ಜಯ್ಯ ಯುದ್ದ ಆರಂಭಿಸುವುದಕ್ಕೆ ಅಪ್ಪಣೆ ಕೊಡಬೇಕು. ಎಂದು ಕೇಳುತ್ತಾನೆ. ಆಗ ಭೀಷ್ಮರು ಹೇಳುತ್ತಾರೆ, "ನೀನು ಯಾಕೆ ಬರಲಿಲ್ಲ ಎಂದು ಯೋಚಿಸುತ್ತಿದ್ದೆ.ಹೀಗೆ ನೀನು ಬರದೆ ಇದ್ದರೆ ನಾನು ಶಪಿಸುತ್ತಿದ್ದೆನೋ ಏನೋ ಈಗ ನೀನು ಬಂದಿದ್ದಿ. " ಆ ಸೈನ್ಯ ಸಮೂಹದಲ್ಲಿ ದಿಗ್ಭ್ರಮೆಗೆ ಒಳಗಾಗದೇ ಉಳಿದವರೆಂದರೆ ಭೀಷ್ಮರೊಬ್ಬರೆ. ಅವರಿಗೆ ಧರ್ಮರಾಯನ ಆಂತರ್ಯ ಮಾತ್ರವಲ್ಲ ಧರ್ಮ ಎಂದರೆ ಏನು, ಅದನ್ನು ಧರ್ಮರಾಯ ಹೇಗೆ ಅನುಸರಿಸುತ್ತಿದ್ದಾನೆ ಎಂದು ಅರಿವಿತ್ತು. ಹಾಗಾಗಿ ಅವರಿಗೆ ಕೇವಲ ಧರ್ಮರಾಯನ ನಡೆ ನೊಡುವುದಷ್ಟೇ ಉಳಿದಿತ್ತು. ಬರೀ ಹಗೆ ಶತ್ರುತ್ವವನ್ನೇ ತುಂಬಿಕೊಂಡಿದ್ದ ಉಳಿದ ಕೌರವಾದಿಗಳಿಗೆ ಧರ್ಮರಾಯನ ಇಂಗಿತವಾಗಲೀ ನಡೆಯಾಗಲೀ ಅರ್ಥವಾಗುವುದಿಲ್ಲ. ಹಾಗಾಗಿ ಅವರು ಗಾಬರಿಯಾಗಿದ್ದರು.
ಧರ್ಮರಾಯ ಹೇಳುತ್ತಾನೆ, "ಅಜ್ಜಯ್ಯ, ನೀವಿಂದು ವಿರೋಧಿ ಬಣದ ನಾಯಕನ ಸ್ಥಾನದಲ್ಲಿ ನಿಂತಿರುವಿರಿ. ಈಗಲೂ ಹೇಳಿ ನಿಮಗೆ ಇಷ್ಟವಿಲ್ಲದೇ ಇದ್ದರೆ ನಾವು ಈಗಲೂ ಕಾಡಿಗೆ ಹೋಗುತ್ತೇವೆ ನೀವು ಯುದ್ದ ಮಾಡದೇ ಉಳಿಯಬಹುದು ಎಂದು ತಿಳಿದಿದ್ದೆ" ಆಗ ಭೀಷ್ಮರು ಮೊದಲಿಗೆ ಯುಧಿಷ್ಠಿರನ ಧರ್ಮ ತತ್ಪರತೆಯನ್ನು ನೋಡಿ ಕಣ್ಣಿರು ಮಿಡಿಯುತ್ತಾರೆ. ನಂತರ ತಾನೇಕೆ ವಿರೋಧಿ ಬಣದಲ್ಲಿದ್ದೇನೆ ಎಂಬುದಕ್ಕೆ ಹೇಳುತ್ತಾರೆ . " ಅರ್ಥಸ್ಯ ಪುರುಷೋ ದಾಸಃ" ಹಣಕ್ಕೆ ಮನಸ್ಸು ದಾಸವಾಗುತ್ತದೆ, ಆದರೆ ಹಣ ಯಾವುದಕ್ಕೂ ದಾಸನಲ್ಲ. ಇದನ್ನು ಅವರೂ ಒಪ್ಪಿಕೊಳ್ಳುತ್ತಾರೆ. ಪುರುಷನು ಅರ್ಥದ ದಾಸನಾಗಿರುತ್ತಾನೆ. ತಾನೂ ಇಂದು ಅದೇ ದಾಸನಾಗಿದ್ದೇನೆ. ಹಾಗಾಗಿ ಅನ್ನದ ಋಣ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ನಾನು ದುರ್ಯೋಧನನ ಎಂಜಲು ತಿಂದಿದ್ದೇನೆ. ಅದಕ್ಕಾಗಿ ಅವನ ಕಡೆಗೆ ನಿಂತಿದ್ದೇನೆ. " ಭೀಷ್ಮನ ಆತ್ಮವಂಚನೆ ಇದು. ಜಗತ್ತು ಅರ್ಥದ ಹಿಂದೆಯೇ ಹೋಗಿದೆ ಧರ್ಮದ ಹಿಂದೆ ಹೋಗಿಲ್ಲ.ಇಂದು ಹಲವು ಸಿದ್ದಾಂತಗಳ ಸೋಲು ಇದರಿಂದಲೇ ಆಗಿದೆ.
ಒಂದು ಕಾಲದಲ್ಲಿ ರಾಜ್ಯ ಪರಿತ್ಯಾಗ ಮಾಡಿದವರು ಭೀಷ್ಮರು. ಅದೇ ರಾಜ್ಯವನ್ನು ಕೌರವ ಆಳುತ್ತಿದ್ದಾನೆ. ಭೀಷ್ಮರು ತಿಂದ ಎಂಜಲನ್ನೇ, ಭೀಷ್ಮರು ಬೇಡ ಎಂದು ಬಿಟ್ಟದ್ದನ್ನು ಕೌರವ ತಿನ್ನುತ್ತಿದ್ದಾನೆ. ಮತ್ತೆ ಇಲ್ಲಿ ಋಣದ ಮಾತೆಲ್ಲಿಂದ ಬಂತು ? ಭೀಷ್ಮರು ಎಂತಹಾ ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದಾರೆ.?
ಆಗ ಧರ್ಮರಾಯ ಒಂದು ಮಾರ್ಮಿಕವಾದ ಮಾತು ಹೇಳುತ್ತಾನೆ. " ಸರಿ, ನಿಮ್ಮನ್ನು ಸೋಲಿಸಿದಲ್ಲದೇ ನಮಗೆ ಜಯ ಸಿಗುವುದಿಲ್ಲ. ಈ ಯುದ್ದ ಜಯಿಸುವುದಕ್ಕೂ ಸಾಧ್ಯವಿಲ್ಲ. ನಿಮ್ಮನ್ನು ಹೇಗೆ ಸೋಲಿಸಬಹುದು. ಹೇಳಿಬಿಡಿ"
ಶತ್ರುವಿನಲ್ಲಿ ಆತನ ಸೋಲಿನ ಬಗ್ಗೆ ಕೇಳುವುದು ಹೇಗೆ ಸರಿಯಾಗುತ್ತದೆ? ಹೀಗೊಂದು ವಿಶ್ಲೇಷಣೆ ಇದೆ. ಆದರೆ ಅಜ್ಜನಾದವನಲ್ಲಿ ಮೊಮ್ಮಗ ಕೇಳುವುದರಲ್ಲಿ ತಪ್ಪೇನಿದೆ. ಯುದ್ದರಂಗದಲ್ಲಿ ಸಂಬಂಧಗಳು ಗೌಣವಾಗಿರುತ್ತವೆ. ಕೇವಲ ಪ್ರತಿಸ್ಪರ್ಧಿ ಎನ್ನುವುದು ಮಾತ್ರ ಮುಖ್ಯವಾದರೂ, ಧರ್ಮರಾಯ ರಥದಿಂದ ಇಳಿದು ಬಂದುದು ಶತ್ರುವಾಗಿ ಅಲ್ಲ. ಭೀಷ್ಮ ಹಿರಿಯ, ಪಿತಾಮಹ ಎನ್ನುವ ಕಾರಣಕ್ಕೆ. ಹಾಗಾಗಿಯೇ ಕೇಳಿಬಿಟ್ಟ.....ನಮ್ಮ ಜಯ ಹೇಗೆ?
ಭೀಷ್ಮರು ಹೇಳುತ್ತಾರೆ " ನನ್ನನ್ನು ಸೋಲಿಸುವವರು ಈ ರಣರಂಗದಲ್ಲಿ ಎರಡೂ ಕಡೆಯಲ್ಲಿ ಯಾರೂ ಇಲ್ಲ. ನಾನು ಸೋಲುವುದೂ ಇಲ್ಲ. ನಾನು ಇಚ್ಛಾಮರಣಿ. ಅದರೆ ನಾನು ಗೆದ್ದರೆ ಧರ್ಮ ಗೆಲ್ಲಬಹುದೇ? " ಕೌರವನ ಸೋಲಿನ ಆರಂಭ ಇಲ್ಲೇ. ಮುಖ್ಯ ಸೇನಾಧಿಪತಿಯೇ ದ್ವಂದ್ವದಿಂದ ಬಂಧಿತನಾಗಿದ್ದಾನೆ. " ಆಗ ಕಾಲ ಬಂದಾಗ ನನ್ನನ್ನು ಹೇಗೆ ಸೋಲಿಸಬಹುದು ಎಂದು ಹೇಳುತ್ತೇನೆ. ಆದರೂ ನಾನು ನಂಬಿದ ತತ್ವವಿದೆ, ಯಥೋ ಧರ್ಮಃ ತತೋ ಜಯಃ ಎಂದು ಮಾರ್ಮಿಕವಾಗಿ ಹೇಳುತ್ತಾರೆ. ತಾನು ಅಧರ್ಮದ ಹಾದಿಯಲ್ಲಿದ್ದರೂ ಧರ್ಮರಾಯನಿಗೆ ಧರ್ಮ ಬಿಡದಂತೆ ಪ್ರಚೋದಿಸುತ್ತಾರೆ. ಕೊನೆಯಲ್ಲಿ ಒಂದು ಸಲ ತನ್ನ ಸೋಲಿಗೆ ನಿಮಿತ್ತವನ್ನು ಹೇಳುತ್ತಾರೆ, ಎಲ್ಲಿ ಆಯುಧ ಇಲ್ಲದ ಯೋಧ ಎದುರು ಬರುತ್ತಾನೋ, ಹೆಣ್ಣಿನ ನಾಮದಲ್ಲಿ ಗಂಡು ಎದುರು ನಿಲ್ಲುತ್ತಾನೋ, ಎಲ್ಲಿ ಅಪಶಕುನ ಕಾಣುತ್ತದೋ , ಗಂಡೂ ಅಲ್ಲದ ಹೆಣ್ಣು ಅಲ್ಲದ ಅದು ಎದುರು ಬಂದು ನಿಂತರೆ ನಾನು ಯುದ್ಧ ಮಾಡುವುದಿಲ್ಲ. ಮತ್ತೆ ಪ್ರಪಂಚದಲ್ಲಿ ಯಾವ ಹೆಣ್ಣಿಗೂ ನಾನು ಸೋಲುವವ ಅಲ್ಲ ಅದು ನನ್ನ ಬದುಕಿನಿಂದ ವೇದ್ಯವಾಗಿದೆ. ಮತ್ತೆ ಇನ್ನು ಗಂಡಸು...? ಎರಡೂ ಅಲ್ಲದ ಶಿಖಂಡಿ ಬಂದು ನಿಲ್ಲಲಿ, ನಾನು ಆಯುಧ ಕೆಳಗೆ ಹಾಕುತ್ತೇನೆ."
ಇದು ಕೌರವನಿಗೆ ಮೊದಲೇ ತಿಳಿದಿತ್ತು. ಹಾಗಾಗಿ ತನ್ನವರಲ್ಲಿ ಆಂತರಂಗಿಕವಾಗಿ ಹೇಳುತ್ತಾನೆ. ಪಾಂಡವಸೇನೆ ಭೀಮನಿಂದ ರಕ್ಷಿಸಲ್ಪಟ್ಟರೆ, ಕೌರವ ಸೇನೆ ಭೀಷ್ಮನಿಂದ ರಕ್ಷಿಸಲ್ಪಡುತ್ತದೆ. ಆದರೂ ಇದು ಅಪರ್ಯಾಪ್ತವಾಗಿದೆ. ಧುರ್ಯೋಧನ ಭೀಮನಿಗೆ ಎಷ್ಟು ಭಯ ಪಡುವನೋ ಅಷ್ಟೇ ಭಯ ಶಿಖಂಡಿಯ ಬಗ್ಗೆಯೂ ಇರುವುದು ಒಂದು ವಿಡಂಬನೆ.
ಹಲವು ಕಡೆಯಲ್ಲಿ ವಿಶ್ಲೇಷಣೆ ಕಾಣಬಹುದು. ಭೀಷ್ಮರಲ್ಲಿ ಧರ್ಮರಾಯ ಅವರ ಸೋಲಿನ ಬಗೆಯನ್ನು ಕೇಳಿದ್ದು ಯುದ್ದ ಧರ್ಮಕ್ಕೆ ವಿಹಿತವಾಗಿದೆ. ಆದರೆ ಒಂದು ಯೋಚಿಸಬೇಕು. ಧರ್ಮರಾಯ ಎಲ್ಲರ ಎದುರಲ್ಲಿಯೇ ಕೇಳಿದ. ಅದಕ್ಕಾಗಿ ಬೇರೆ ಯಾವ ನಿಗೂಢವಾದ ತಂತ್ರಗಾರಿಕೆ ವಂಚನೆ ಮಾಡಲಿಲ್ಲ. ಮಾತ್ರವಲ್ಲ ಇಲ್ಲಿ ಭೀಷ್ಮರೇ ಹೇಳುತ್ತಾರೆ....ನನ್ನ ಸೋಲು ಇಲ್ಲಿದೆ. ಕದ್ದು ಮುಚ್ಚಿ ಅಲ್ಲ. ಹಾಗಾಗಿ ಧರ್ಮರಾಯನದ್ದು ವಂಚನೆ ಎಂದಾಗುವುದಿಲ್ಲ.
ಧರ್ಮರಾಯ ನಂತರ ದ್ರೋಣರ ಬಳಿಗೆ ಹೋಗಿ ವಂದಿಸುತ್ತಾನೆ. ದ್ರೋಣರೆ ಆಶೀರ್ವದಿಸಬೇಕು. ನಮಗೆ ಕಲಿಸಿದ ಗುರುವಿನನ್ನೇ ನಾವು ಎದುರಿಸಬೇಕಿದೆ. ಗುರುವಿನ ಸೋಲಿನಲ್ಲಿ ಶಿಷ್ಯನ ಉತ್ಕರ್ಷವಿದೆ. ನೀವು ಶಿಷ್ಯನನ್ನು ಸೋಲಿಸುವುದಕ್ಕೆ ಹಾತೊರೆಯುತ್ತಿದ್ದೀರಲ್ಲಾ?"
ದ್ರೋಣರ ಉತ್ತರವೂ ಅದೇ " ಅರ್ಥಸ್ಯ ಪುರೋಷೋ ಜಾತಹ" ಅವರೂ ಈ ಬಂಧನದ ಸುಳಿಯಲ್ಲಿ ಸಿಲುಕಿದವರು. ಕುರುಕ್ಷೇತ್ರದ ಯುದ್ದದಲ್ಲಿ ಹದಿನೈದು ದಿನ ಯುದ್ದ ಮಾಡಿದ ನಾಯಕರ ಪಾಡು ಇದಾದರೆ ಕೌರವನ ಸೋಲಿಗೆ ಬೇರೆ ಮುನ್ನುಡಿಬೇಕಾಗಿಲ್ಲ. ದ್ರೋಣನೂ ತನ್ನ ಸೋಲಿನ ಬಗೆಯನ್ನು ಹೇಳುತ್ತಾನೆ. ಅತ್ಯಂತ ಅಪ್ರಿಯವಾಗಿರುವ ವಿಷಯವನ್ನು ಯಾವಾಗ ಕೇಳುವೆನೋ ಆವಾಗ ನಾನು ಆಯುಧ ಕೆಳಗಿಡುತ್ತೇನೆ. ಮುಂದೆ ಅಶ್ವತ್ಥಾಮ ಸತ್ತ ಎಂಬ ವಾರ್ತೆ ಕೇಳಿ ಆತ ಶಸ್ತ್ರ ತ್ಯಾಗ ಮಾಡುತ್ತಾನೆ. ಅದಕ್ಕಿಂತ ಅಪ್ರಿಯವಾದ ಸುದ್ದಿ ಆತನಿಗೆ ಬೇರೆ ಯಾವುದೇ ಇರಲಿಲ್ಲ.
ಧರ್ಮಾಚರಣೆಯಲ್ಲೂ ಭೀಷ್ಮ ದ್ರೋಣರು ಹೇಗೆ ಅಧರ್ಮದ ಹಾದಿ ತುಳಿದರು ಎಂಬುದನ್ನು ಮಹಾಭಾರತದಲ್ಲಿ ಇದೊಂದು ವಿಶ್ಲೇಷಣೆ. ಅರ್ಥಸ್ಯ ಪುರುಷೋ ಜಾತಃ ಎಂಬುದು ತಮ್ಮ ಅಧರ್ಮಕ್ಕೆ ಹಿಡಿದ ಒಂದು ಮರೆಯಾಗಿರುತ್ತದೆ. ಭೀಷ್ಮರ ಮನಸ್ಸು ದ್ರೋಣರ ಮನಸ್ಸು ದುಗುಡವನ್ನು ಆವರಿಸಿತ್ತು. ಮಾಡುವುದು ತಪ್ಪು, ಅಧರ್ಮ ಎಂದು ಗೊತ್ತಿದ್ದೂ ಅದನ್ನೇ ಮಾಡುವುದು ಆತ್ಮ ವಂಚನೆಯಾಗಿರುತ್ತದೆ. ಗೊತ್ತಿಲ್ಲದೇ ಮಾಡುವ ಅಪರಾಧಕ್ಕಿಂತಲೂ ಇದು ಗಹನವಾಗಿದೆ. ಹಾಗಾಗಿಯೇ ಶ್ರೀಕೃಷ್ಣ ಇವರಿಬ್ಬರನ್ನೂ ಕಟುವಾಗಿ ವಿಮರ್ಶಿಸುತ್ತಾನೆ. ಗುರು ಹಿರಿಯರು ಧರ್ಮದ ಹಾದಿ ಬಿಟ್ಟ ಮೇಲೆ ಅಲ್ಲಿ ಕ್ಷಮೆಗೆ ಅರ್ಹತೆಯೇ ಉಳಿಯುವುದಿಲ್ಲ.
ಆಧಾರ : ಶ್ರೀ ಕೆ ಎಸ್ ನಾರಾಯಣ ಆಚಾರ್ಯ, ಮಹಾಭಾರತ ಪ್ರವಚನ
No comments:
Post a Comment