ಬದಲಾವಣೆ ಎಂಬುದು ಜಗದ ನಿಯಮ. ಆದರೆ ಅದರ ಪರಿಣಾಮದ ಫಲಾಫಲಗಳ ಬಗ್ಗೆ ಯೋಚಿಸುವಾಗ , ಇಲ್ಲಿ ಭಿನ್ನಾಭಿಪ್ರಾಯ ತೋರಿ ಬರುವಾಗ ಅದು ವಿವಾದವಾಗುತ್ತದೆ. ಬದಲಾವಣೆ ಬೇಕೋ ಬೇಡವೋ ಅದಕ್ಕೆ ಅದು ಕಾಯುವುದೇ ಇಲ್ಲ. ಅದು ಸಂಭವಿಸಿಬಿಡುತ್ತದೆ. ವಿವಾದಕ್ಕೆ ಸಂಬಂಧಿಸಿ ಅದು ನಿಲ್ಲುವುದಿಲ್ಲ.
ಯಕ್ಷಗಾನದಲ್ಲಿ ಸಿನಿಮಾ ನಟನಟಿಯರು ಬರುವುದು ಹೊಸತೇನಲ್ಲ. ಅವರು ಅಂತ ಅಲ್ಲ...ಅನ್ಯರೂ ಬರುತ್ತಾರೆ. ವಿಪರ್ಯಾಸವೆಂದರೆ ಅದು ಸುದ್ದಿಯಾಗುವುದಿಲ್ಲ. ನಟನಟಿಯರು ಬಂದಾಗ ಯಾಕೆ ಸುದ್ದಿಯಾಗುತ್ತದೆ? ಯಾಕೆಂದರೆ ಅದು ಸಂಭವಿಸುವುದು ಸುದ್ದಿಗಾಗಿ. ಹಾಗಾಗಿ ಅದಕ್ಕೆ ಉದಾಸೀನವೇ ಸೂಕ್ತ ಪರಿಹಾರ.
ಹಿಂದೆ ಹಲವು ನಟನಟಿಯರು ಬಂದಿದ್ದಾರೆ. ಅವಶ್ಯಕತೆ ಇದೆಯೋ ಇಲ್ಲವೊ ಆದರೆ ಬಂದಾಗ ಬಿಳಿಯಾನೆಯ ನೆನಪಾಗುತ್ತದೆ. ಕರಿಯಾನೆಯೇ ನೋಡಿದವರಿಗೆ ಬಿಳಿಯಾನೆ ಎನ್ನುವಾಗ ಒಂದಷ್ಟು ವಿಶೇಷವಾಗುತ್ತದೆ. ವಿಡಂಬನೆ ಎಂದರೆ ಕರಿಯಾನೆಯನ್ನೇ ಬಿಳಿಯಾನೆ ಅಂತ ಹೇಳುವಾಗ ಮೂರ್ಖತನದ ಅನುಮಾನ ಮಾತ್ರ ಉಂಟಾಗುತ್ತದೆ.
ಅನೆಗೆ ಸಲ್ಲುವ ಮಹತ್ವದಲ್ಲಿ ನಿತ್ಯ ಇರುವುದಕ್ಕೆ ಬೆಲೆ ಕಡಿಮೆಯಾಗಿ ಅಥವಾ ಇಲ್ಲದಾಗುವುದು ಆತಂಕದ ವಿಷಯವಾಗುತ್ತದೆ. ಆಗ ಇದು ಬೇಕಾ ಬೇಡವಾ ಅಂತ ಚರ್ಚೆಯಾಗುತ್ತದೆ.
ಹಿಂದೆ ಮಲಯಾಳಂ ಸಿನಿಮಾ ಒಂದರಲ್ಲಿ ಆಗಿನ ಪ್ರಸಿದ್ದ ನಟಿ ಶ್ರೀದೇವಿ ನಟಿಸುವುದು ಸುದ್ದಿಯಾಗಿತ್ತು. ಸುದ್ದಿ ಮಾತ್ರವಲ್ಲ ಅದು ಚರ್ಚೆಗೂ ಕಾರಣವಾಗಿತ್ತು. ಕಾರಣ ಇಷ್ಟೇ, ಮಲಯಾಳಂ ಸಿನಿಮ ಹೆಚ್ಚಾಗಿ ಕಡಿಮೆ ಬಜೆಟ್ ನ ಸಿನಿಮಾಗಳು. ಆಗ ಒಂದು ಸಿನಿಮಾದ ಒಟ್ಟು ಖರ್ಚಿಗಿಂತ ಆಧಿಕ ಈ ನಟಿಯ ಸಂಭಾವನೆಯಾದರೆ ಅಲ್ಲಿ ನಿತ್ಯ ವಾಡಿಕೆಯ ನಟಿಯರಿಗೆ ಹೇಗಾಗಬೇಡ? ಹಾಗಾಗಿ ಈ ಆಡಂಬರದಲ್ಲಿ ಲೆಕ್ಕ ಕಳೆದುಕೊಳ್ಳುವವರು ಸಾಮನ್ಯರು. ಪಾಪ ಅವರ ಪಾಡು ತಮ್ಮ ಮಟ್ಟ ಮೇಲಾಯಿತೋ ಇಲ್ಲ ಮೇಲಿನವರದ್ದು ಕೆಳಗಾಯಿತೋ ಎಂಬ ಜಿಜ್ಜಾಸೆಯಲ್ಲಿ ಉಳಿದುಬಿಡುತ್ತಾರೆ. ಆಗ ಇದೆಲ್ಲ ಅವಶ್ಯಕತೆ ಉಂಟಾ ಅಂತ ಚರ್ಚೆಯಾಗುವುದು ಸ್ವಾಭಾವಿಕ.
ಒಬ್ಬ ಸಿನಿಮಾದವರನ್ನು ಕರೆಯುವ ಬದಲಾಗಿ ಅದೇ ಹಣದಲ್ಲಿ ಇಲ್ಲಿಯ ಮಟ್ಟಿಗೆ ಒಂದು ಮೇಳದ ಹಿರಿಯ ಉತ್ತಮ ಅಗ್ರ ಪಂಕ್ತಿಯ ಕಲಾವಿದರನ್ನು ಹಾಕಿದರೆ ಉತ್ತಮವಲ್ಲವೇ? ಕೆಲವೊಮ್ಮೆ ಹಾಗೇ ಹೂವಿಗಿಂತಲೂ ಹೂವಿನ ಬುಟ್ಟಿಗೆ ಹೆಚ್ಚು ಬೆಲೆ ತೆರಬೇಕಾಗುತ್ತದೆ.
ಹಲವು ಸಲ ಬೆಂಗಳೂರಿಂದ ಮಂಗಳೂರಿಗೆ ಇರುವ ರೈಲಿನ ಟಿಕೇಟ್ ಬೆಲೆಗಿಂತಲೂ ರೈಲು ಇಳಿದು ಮನೆಗೆ ಹೋಗುವ ಆಟೊದ ಬಾಡಿಗೆ ಹೆಚ್ಚಾಗಿರುತ್ತದೆ.
ಬದಲಾವಣೆ ಬೇಕು. ಆದರೆ ಅದು ಅವಶ್ಯಕತೆಯನ್ನು ಮೀರಬಾರದು, ಮಾತ್ರವಲ್ಲ ಅದು ಸೂಕ್ತವಾಗಿ ಎಲ್ಲದಕ್ಕೂ ಗೌರವವನ್ನು ತರಬೇಕು. ಮೂಲ ಯಕ್ಷಗಾನಕ್ಕೇ ಏನು ಪ್ರಯೋಜನ ಅಂತ ಕೇಳಿದರೆ ಏನುಂಟು? ಏನೂ ಇಲ್ಲ. ಬಂದವರಿಗೆ ತಂದವರಿಗೆ ಒಂದು ಹೆಗ್ಗಳಿಕೆ ಒಂದಷ್ಟು ಸ್ವಾರ್ಥ ಬಿಟ್ಟು ಮತ್ತೆ ಯಾವ ಪುರುಷಾರ್ಥವೂ ಇರುವುದಿಲ್ಲ.ಇದು ಯಕ್ಷಗಾನಕ್ಕೂ ಏನೂ ಹೊಸತಲ್ಲ. ಈ ಚರ್ಚೆ ವಿವಾದವೂ ಹೊಸತಲ್ಲ. ಸಂಭವ ನಿರಂತರ. ಹಾಗಾಗಿ ಇದು ನಿಸ್ಸಾರ ವಿಷಯವಾಗುತ್ತದೆ.
No comments:
Post a Comment