"ಇದು ವಿಮರ್ಶೆಯಲ್ಲದ ಚಿಂತನ"

Sunday, March 14, 2010

ಯಕ್ಷಗಾನ ಮತ್ತು ಕಾರ್ಯಾಗಾರ




ಮಿತ್ರರೊಬ್ಬರ ಮೊಬೈಲ್ ಸಂದೇಶವೊಂದು ರಾತ್ರಿ 9 ಗಂಟೆಗೆ ಬಂದಾಗ ಆಶ್ಚರ್ಯಗೊಂಡೆ. ಬೆಂಗಳೂರಲ್ಲಿ ಎಡನೀರು ಮೇಳದ ಆಟದ ಸರಣಿ ಅದಾಗಲೇ ಸ್ಥಳ ಸಮಯದ ಪಟ್ಟಿ ಸಿದ್ದವಾಗಿ ನಮ್ಮ ಸಮಯದ ಹೊಂದಾಣಿಕೆಯ ಸರ್ಕಸ್ಸು ಮಾಡುವಂತಹ ಅನಿವಾರ್ಯತೆಯ ಮಧ್ಯೆ ಮತ್ತೊಂದು ಯಕ್ಷಗಾನ ಕಾರ್ಯಕ್ರಮದ ಸಂದೇಶವಾಗಿತ್ತು. ಕೋಳ್ಯೂರು ರಾಮಚಂದ್ರ ರಾವ್ ಮತ್ತು ಕುಂಬ್ಳೆ ಸುಂದರ್ ರಾವ್ ಜತೆಗೆ ತೆಂಕಬೈಲು ಶಾಸ್ತ್ರಿಗಳ ಹೆಸರು ಕಂಡಾಗ ಪುಳಕ ಗೊಂಡಿತು ಮನಸ್ಸು. ಅಂತೆ ಯಕ್ಷಗಾನ ಕಾರ್ಯಾಗಾರವೂ ಎಂಬ ಉಲ್ಲೇಖ ನೋಡಿದಾಗ ಮಾತ್ರ ಇದನ್ನು ತಪ್ಪಿಸಿಕೊಳ್ಳುವ ಹಾಗಿಲ್ಲ ಏನು ಮಾಡಲಿ?

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಯಕ್ಷ ದಿಶಾ ಬೆಂಗಳೂರು ಸಂಯುಕ್ತವಾಗಿ ಹಮ್ಮಿಕೊಂಡ ಯಕ್ಷಗಾನ ಪ್ರಾತ್ಯಕ್ಷಿಕೆ ಮತ್ತು ಕಾರ್ಯಗಾರ ಜತೆಗೆ ಯಕ್ಷಗಾನ ತಾಳಮದ್ದಲೆ ಮತ್ತು ಯಕ್ಷಗಾನ ಬಯಲಾಟ. ಬರೀ ಬಯಲಾಟಗಳನ್ನೇ ನೋಡಿ ಏಕತಾನತೆಯನ್ನು ಅನುಭವಿಸಿದ ಮನಸ್ಸಿಗೆ ಒಂದು ರೀತಿಯ ಹೊಸ ಬದಲಾವಣೆ ಮತ್ತು ಅದರ ಆಕರ್ಷಣೆ ಕಾರ್ಯಕ್ರಮದ ಭಾರವಾಹಿಗಳಿಗೆ, ಮನಸ್ಸು ಮೊದಲೇ ಧನ್ಯವಾದವನ್ನು ಹೇಳಿತ್ತು. ಕಾರ್ಯಕ್ರಮದ ವಿವರವನ್ನು ಮಾಂಬಾಡಿ ವೇಣುಗೋಪಾಲ್ ಭಟ್ ಈ-ಮೇಲ್ ಮೂಲಕ
ನೀಡಿದ್ದರು .



ಕಾರ್ಯಕ್ರಮ ಸರಳ ವಾದ ಆರಂಭವನ್ನು ಪಡೆಯಿತು. ಸಂಘಟಕರು ಗಿರಿನಗರದ ರಾಮಾಶ್ರಮದ ಕೃಪಾಶ್ರಯದಲ್ಲಿ ಉತ್ತಮ ವ್ಯವಸ್ಥೆ ಮಾಡಿದ್ದರು. ಹಿರಿ ಕಿರಿಯ ಕಲಾವಿದರೆಲ್ಲ ಸೇರಿದ್ದ ಒಂದು ಹಿತವಾದ ವಾತಾವರಣ.

ರಂಗಭೂಮಿಯ ಹಿರಿಯ ಮೇರು ನಟ ಮಾಸ್ಟರ್ ಹಿರಣ್ಣಯ್ಯ ಮುಖ್ಯ ಅತಿಥಿಯಾಗಿ ಬಂದು ಯಕ್ಷಗಾನಕ್ಕೂ ಅವರಿಗೂ ಇದ್ದ ಸಂಭಂಧದ ಎಳೆಯನ್ನು ಬಿಚ್ಚಿದರು. ಯಕ್ಷಗಾನದಿಂದ ಪಡೆದುಕೊಂಡ ಜ್ಞಾನದ ಬಗ್ಗೆ ಭಾವುಕರಾಗಿ ಹೇಳಿ ನಮ್ಮನ್ನು ಒಂದು ಘಳಿಗೆ ಭಾವುಕರಾಗುವಂತೆ ಮಾಡಿಬಿಟ್ಟರು. ಯಕ್ಷಗಾನದ ಅರ್ಥಧಾರಿ ಜಬ್ಬಾರ್ ಸುಮೋ ವನ್ನು ನೆನಸಿಕೊಳ್ಳುತ್ತಾ ಸರಸ್ವತಿ ಒಲಿಯುವಾಗ ಯಾವ ಜಾತಿಯನ್ನೂ ನೋಡುದಿಲ್ಲ ಎಂದು ಮಾರ್ಮಿಕವಾಗಿ ನುಡಿದು ಕಾರ್ಯಕ್ರಮಕ್ಕೆ ಉತ್ತಮ ಹಾರೈಕೆಯೊಂದಿಗೆ ಆರಂಭವನ್ನು ನೀಡಿದರು.ಕುಂಬ್ಳೆ ಸುಂದರ್ ರಾವ್ ಅವರು ಎಂದಿನಂತೆ ಯಕ್ಷಗಾನ ಬಯಲಾಟ ಅಕಾಡೆಮಿಯ ಕಾರ್ಯ ಚಟುವಟಿಕೆಯನ್ನು ಸ್ಥೂಲವಾಗಿ ಪರಿಚಯಿಸಿದರು.

ಕಾರ್ಯಕ್ರಮದ ಅಂಗವಾದ ಯಕ್ಷಗಾನ ಪ್ರಾತ್ಯಕ್ಷಿಕೆಯಲ್ಲಿ ಸ್ತ್ರೀ ಪಾತ್ರದಲ್ಲಿನ ಅರ್ಥ ವಿವಿಧ್ಯತೆ ಬಗೆಗೆ ಕೋಳ್ಯೂರು ತಮ್ಮ ಸ್ವಂತ ಅನುಭವವದ ಸಾರವನ್ನು ತಿಳಿಯ ಪಡಿಸುತ್ತಾ , ಸ್ತ್ರೀ ಪಾತ್ರಗಳಲ್ಲಿರುವ ಮೂರು ವಿಧ ಉತ್ತಮ ಸ್ತ್ರೀಪಾತ್ರಗಳು , ಮಧ್ಯಮ ಸ್ತ್ರೀಪಾತ್ರಗಳು, ಮತ್ತು ಸಾಮಾನ್ಯ ಸ್ತ್ರೀ ಪಾತ್ರಗಳು ಇವುಗಳ ಬಗ್ಗೆ ವಿವರಣೆಯನ್ನು ನೀಡಿದರು. ಸೀತಾ ದ್ರೌಪತಿ ಮಂಡೋದರಿ ಹೀಗೆ ಹಲವು ಪಾತ್ರ ವೈವಿಧ್ಯವನ್ನು ಸ್ವಾರಸ್ಯವಾಗಿ ವಿವರಿಸಿದರು. ಅಂತೆಯೇ ಯಾವುದೇ ಪಾತ್ರದ ಪೋಷಣೆಗೆ ರಂಗದ ಮೇಲೆ ಪರಸ್ಪರ ಸಹಕಾರ ತುಂಬಾ ಅಗತ್ಯ ಎಂದು ಹೇಳುತ್ತಾ,ಅವರಿಗೆ ಈ ನಿಟ್ಟಿನಲ್ಲಿ ಸಹಕರಿಸಿದ ಹಿರಿಯ ಕಲಾವಿದರಾದ ಶ್ರೀ ಪೆರ್ಲ ಕೃಷ್ಣ ಭಟ್ , ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್, ಯಕ್ಷ ದಂಪತಿಯರೆಂದು ಅನ್ವರ್ಥಗೊಳಿಸಿದ ಶ್ರೀ ರಾಮದಾಸ ಸಾಮಗರ ಅರ್ಥ ವಿಶೇಷತೆಯನ್ನು ಉಲ್ಲೇಖಿಸಿದರು , ಹಾಗು ಅಲ್ಲೇ ಉಪಸ್ಥಿತರಿದ್ದ ಕುಂಬ್ಳೆ ಸುಂದರ್ ರಾವ್ ಅವರ ಅರ್ಥ ವಿಶೇಷತೆಯನ್ನು ವರ್ಣಿಸಿದರು. ರಂಗದಲ್ಲಿ
ಪ್ರತಿವೇಷ ಧಾರಿ ಹಾಗು ಅವರ ಪಾತ್ರಗಳನ್ನು ಪೋಷಿಸುವುದರಲ್ಲಿ ಇವರೆಲ್ಲ ತುಂಬಾ ಸಮರ್ಥರು ಎಂದು ಪ್ರತ್ಯೇಕವಾಗಿ ಉಲ್ಲೇಖಿಸಿದರು. ನಂತರ ನಡೆದ ಪ್ರಶ್ನೋತ್ತರ ಕಾರ್ಯಕ್ರಮ ಕೇವಲ ಒಬ್ಬರ ಪ್ರಶ್ನೆಗೆ ಮಾತ್ರ ಸೀಮಿತ ಗೊಂಡಿತು. ಬೇರೆ ಯಾರೂ ತಮ್ಮ ಜಿಜ್ಞಾಸೆಗಳನ್ನು ಹಿರಿಯ ಕಲಾವಿದರಲ್ಲಿ ಮುಂದಿಡುವ ಪ್ರಯತ್ನವನ್ನೇ ಮಾಡಲಿಲ್ಲ. ನಿಜವಾಗಿ ಇಲ್ಲಿನ ಉದಯೋನ್ಮುಖ ಹಾವ್ಯಾಸಿ ಕಲಾವಿದರು ಇಂತಹ ಕಾರ್ಯಕ್ರಮಗಳನ್ನು ತಮ್ಮ ಕಲಾ ಜೀವನಕ್ಕೆ ಪೂರಕವಾಗಿ ಉಪಯೋಗಿಸದೆ ಇದ್ದದ್ದು, ಇಂತಹ ಅರ್ಥ ಪೂರ್ಣ ಕಾರ್ಯಕ್ರಮದ ಸದವಕಾಶವನ್ನು ಪಡೆದುಕೊಳ್ಳುವಲ್ಲಿ ಅವಕಾಶ ವಂಚಿತರಾದರೆಂದೆ ಅನಿಸುತ್ತದೆ.



ಅದರನಂತರ ಎಲ್ಲರ ನಿರೀಕ್ಷೆಯ ತಾಳಮದ್ದಲೆ ವಿದುರಾತಿಥ್ಯ ಆರಂಭವಾಯಿತು. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಗಳು ಭಾಗವತರಾಗಿ ಹಾಗು ಅವರಿಗೆ ಹಿಮ್ಮೇಳದಲ್ಲಿ ನಾರಾಯಣ ಬಳ್ಳುಕ್ಕುರಾಯ, ಮತ್ತು ವೇಣುಗೋಪಾಲ್ ಮಾಂಬಾಡಿ ಸಹಕರಿಸಿ, ಧರ್ಮ ರಾಯನಾಗಿ ರಾಜಗೋಪಾಲ್ ಕನ್ಯಾನ . ಶ್ರೀ ಕೃಷ್ಣನಾಗಿ ಸುಧನ್ವ ದೇರಾಜೆ,ಅರ್ಜುನನಾಗಿ ವೇಣುಗೋಪಾಲ್ ಭಟ್ . ಭೀಮನಾಗಿ ಶಶಾಂಕ ಮತ್ತು ಹಿರಿಯರಾದ ರಾವ್ ದ್ವಯರು ದ್ರೌಪದಿ ಮತ್ತು ವಿದುರನ ಪಾತ್ರಗಳಲ್ಲಿ ನಿರ್ವಹಣೆ ನೀಡಿದರು. ತೆಂಕಬೈಲು ಪದಗಳು ಮೊದಲೆರಡು ಮಂದ ಸ್ವರದಲ್ಲಿ ಶುರುವಾಗಿ ನಂತರ ನಿಧಾನವಾಗಿ ಗತಿಯನ್ನೇರಿಸುತ್ತ ಸಾಗಿತು. ಅದರಲ್ಲೂ ಕೋಮಲಾಂಗಿ ಕೇಳೆ........... , ನಿನ್ನ ಭಕ್ತಿಗೆ ಮೆಚ್ಚಿದೆನು.................. ,ಹಾಗು ನೋಡಿದಂ ಕಣ್ ದಣಿಯೇ..... ಅಮೋಘವಾಗಿ ಹಾಡಿದರು. ಮಧ್ಯದಲ್ಲೊಮ್ಮೆ ನಾನು ಎದ್ದು ಹೊರಬಂದಾಗ ....." ಬೊಳ್ಳೆ ಒಳ್ಳೆ ಊಕಿನಲ್ಲಿದ್ದು ಮಾರಾಯ..." ಎಂದು ಹೇಳಿದ್ದು ಕೇಳಿ, ಸತ್ಯ...!! ತೆಂಕಬೈಲು ಇಳಿವಯಸ್ಸಿನಲ್ಲೂ ಅಮೋಘವಾದ ಸ್ವರ ಶಾರಿರವನ್ನು ತೋರಿಸಿದ್ದರು ಅನಿಸಿತು.

ಇನ್ನು ಹಿಮ್ಮೇಳ ದಲ್ಲಿ ವೇಣು ಅವರ ಮದ್ದಲೆ ಸ್ವಲ್ಪ ಗಮನ ಸೆಳೆಯಿತು.. ಯಾಕೋ ಚೆಂಡೆಗಿಂತ ಇವರ ಮದ್ದಲೆವಾದನ ಹಿಡಿಸಿತು. ಉಳಿದಂತೆ ಅರ್ಥಗಾರಿಕೆ ಯಲ್ಲಿ ಕೋಳ್ಯೂರು ಮತ್ತು ಕುಂಬ್ಳೆ ನಿರೀಕ್ಷೆಗೆ ಮೀರಿ ತಮ್ಮ ಅರ್ಥಗಾರಿಕೆಯನ್ನು ಮೆರೆದರು. ಕೋಳ್ಯೂರು ಅವರು ಇತ್ತೀಚಿಗೆ ತುಂಬಾ ಭಾವುಕರಾಗುವುದು ಇಲ್ಲಿಯೂ ಕಂಡು ಬಂತು. ಪಾತ್ರದೊಳಗಿನ ತಲ್ಲೀನತೆಯೋ, ಮಾಗಿದ ವಯಸ್ಸಿನ ಅನುಭವವೋ ಏನಿದ್ದರು ದ್ರೌಪದಿ ನಿಜ ಆವೇಶ ಮೈಮನದಲ್ಲಿ ತಂದು ಕೊಂಡರು. ಶ್ರೀ ಕೃಷ್ಣನಾಗಿ ಸುಧನ್ವ ದೇರಾಜೆ ಉತ್ತಮವಾಗಿಯೇ ನಿರ್ವಹಣೆ ತೋರಿದರು. ಭೀಮನ ಪಾತ್ರ ಮಾತ್ರ ಸ್ವಲ್ಪ ನಿರ್ವಹಣೆಯಲ್ಲಿ ಸೊರಗಿತು. ಸಂಧಾನಕ್ಕೆ ಹೊರಟ ಕೃಷ್ಣ ಧರ್ಮಜಾದಿಗಳ ಸಹಮತವನ್ನು ಕೇಳಿ ದ್ರೌಪತಿಯನ್ನು ಕರೆಸುವಂತೆ ಹೇಳುತ್ತಾನೆ. ಸಂಗ್ರಾಮ ನಿರ್ಣಯಕ್ಕೆ ಕೃಷ್ಣ ಹಸ್ತಿನಾವತಿಗೆ ಹೊರಡುವನೆಂದು ತಿಳಿದ ದ್ರೌಪದಿ ಸಡಗರದಿಂದ ಸರ್ವಾಭಾರಣ ಭೂಶಿತೆಯಾಗಿ ಬರುತ್ತಲೇ, ಬಾಗಿಲಲ್ಲೇ ಇದ್ದ ಭೀಮನನ್ನು ಕಂಡು ಸಂಭಾಷಣೆಗೆ ತೊಡಗುವ ಸನ್ನಿವೇಶ ಪ್ರಸಂಗದ ಬಹುಮುಖ್ಯ ಸನ್ನಿವೇಶ. ಆದರೆ ಇಲ್ಲಿ ಪಾಂಚಾಲೆಯ ಬೆಡಗು ಬಿನ್ನಾಣ ಮತ್ತು ಸಂತಸಕ್ಕೆ ಕಾರಣವೇನೆಂದು ಕೆಣಕಿ ಕೇಳಬೇಕಿತ್ತು ಮತ್ತು ಆ ಮೂಲಕ ಸಂಭಾಷಣೆಯನ್ನು ತೊಡಗಿಸಿ ಕೋಮಲಾಂಗಿ ಕೇಳೆ ಎಂಬ ಪದಕ್ಕೆ ಎತ್ತುಗಡೆ ಕೊಟ್ಟಿದ್ದರೆ ತುಂಬಾ ಸೂಕ್ತವಾಗುತ್ತಿತ್ತು. ದ್ರೌಪದಿಯಾದ ಕೋಳ್ಯೂರು ಸಹಜವಾಗಿ ಸಂದರ್ಭವನ್ನು ತಾವೇ ನಿಭಾಯಿಸಿಕೊಂಡು ..."ನೋಡು ಈ ಅಲಂಕಾರ ವೆಲ್ಲ ಏಕೆಂದು ಕೇಳುವುದಿಲ್ಲವೇ " ಎಂದು ಕೇಳುವಂತಾದುದು ಅಷ್ಟೊಂದು ಸಹಜ ಎಂದೆನಿಸಲಿಲ್ಲ. ಬಹುಶ: ಅತಿಹಿರಿಯ ಕಲಾವಿದರೊಂದಿಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿ ದೌರ್ಬಲ್ಯವನ್ನು ಮೆಟ್ಟಿನಿಲ್ಲುವ ಸಾಹಸವನ್ನು ಯವಕಲಾವಿದ ಮಾಡುವುದರಲ್ಲಿ ವಿಫಲಾರದರೆಂದೆ ನನ್ನ ಅನಿಸಿಕೆ. ಕೋಮಲಾಂಗಿ ಕೇಳೆ ಎಂಬ ಬಹು ಮುಖ್ಯ ಪದ ಭೀಮನ ಪಾತ್ರಕ್ಕಾದರೂ ಅದಕ್ಕೆ ಅರ್ಥ ಹೇಳಿದ್ದು ದ್ರೌಪದಿ.. !!! ಇಂತಿದ್ದರೂ ಹಿರಿಯ ಕಲಾವಿದರೊಂದಿಗೆ ಅರ್ಥ ಹೇಳುವ ಧೈರ್ಯವನ್ನು ತೋರಿದ್ದಕ್ಕೆ ಮೆಚ್ಚಲೇ ಬೇಕು.

ಇಂತಹ ಹಿರಿಯ ಕಲಾವಿದರ ಯಕ್ಷಗಾನ ಈ ನಗರಿಯಲ್ಲಿ ತೀರ ಅಪರೂಪವಾಗಿರುವಂತಹ ಸಮಯದಲ್ಲಿ ಹಿರಿಯರ ಕರೆ ತರಿಸಿ ಉತ್ತಮ ಯಕ್ಷಗಾನ ಆಸ್ವಾದನೆಗೆ ಕಾರಣರಾದ ಎಲ್ಲ ಕಾರ್ಯಕರ್ತ ಮಿತ್ರರಿಗೆ ಕೃತಜ್ಞತೆಗಳು. ಅದರಂತೆ ಈ ಮೂಲಕ ಒಂದು ಮನವಿ.. ಹಿರಿಯ ಕಲಾವಿದ ಪ್ರಕೃತ ಯಕ್ಷಗಾನದ ಭೀಷ್ಮ ಎಂದೇ ಕರೆಸಲ್ಪಡುವ ಶ್ರೀ ಬಲಿಪ ನಾರಾಯಣ ಭಾಗವತರ ಕಾರ್ಯಕ್ರಮವನ್ನು ಇದೆ ರೀತಿ ಸರಳ ಸುಂದರವಾಗಿ ಆಯೋಜಿಸಿ ಆ ಮೂಲಕ ನಮಗೆಲ್ಲ ತೀರ ಅಪರೂಪವಾದ ಕಲಾವಿದ ಮಹಾಶಯರ ಕಲಸ್ವಾದನೆಗೆ ಅನುವು ಮಾಡಿಕೊಡುವಂತೆ ಒಂದು ವಿನಮ್ರ ಭಿನ್ನಹ.

ಹೀಗೆ ವಿದುರ ಕೃಷ್ಣ ರ ಭಕ್ತಿ ರಸದ ಸಂಭಾಷಣೆಯೊಂದಿಗೆ ತಾಳಮದ್ದಲೆ ಸಮಾಪನಗೊಂಡಾಗ ಉತ್ತಮ ಯಕ್ಷಗಾನವನ್ನು ಮೈಮನಗಳಲ್ಲಿ ತುಂಬಿದ ಅನುಭವವಾದರೆ., ಉಪಾಹಾರ ಮತ್ತು ಸರಳ ಹಾಗು ರುಚಿಕರ ಭೋಜನದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದ ಯಕ್ಷದಿಶಾ ಹಾಗು ಯಕ್ಷಗಾನ ಬಯಲಾಟ ಅಕಾಡೆಮಿಗೆ ನಮನವನ್ನು ಸಲ್ಲಿಸದೆ ಇರಲು ಸಾಧ್ಯವೇ?

5 comments:

  1. ಅನಿವಾರ್ಯ ಕಾರಣಗಳಿ೦ದ ಈ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ.. ಆದ ನಷ್ಟ ಸಣ್ಣದಲ್ಲ ಎ೦ದು ಗೊತ್ತಾಯಿತು.
    ನೀವು ಹಾಕಿದ ೨ ಪದ್ಯಗಳನ್ನು ನೋಡಿದಾಗ ತೆ೦ಕಬೈಲು ಪ್ರೇಕ್ಶಕರನ್ನು ಸೆಳೆದಿಡುವುದರಲ್ಲಿ ಖ೦ಡಿತ ಸಫಲರೆ೦ದೆನಿಸಿತು.

    ಕೋಳ್ಯೂರು ತಮ್ಮ ಪಾತ್ರ ನಿರ್ವಹಿಸುತ್ತಾ ಭಾವುಕರಾಗುವುದು, ಕಣ್ಣೀರಿಡುವುದು ಹೊಸತಲ್ಲ. ಪಾತ್ರದಲ್ಲಿ ಅವರ ತಲ್ಲೀನತೆಯ ದ್ಯೋತಕ ಅದು.. ಅ೦ಥಾ ಮೇರು ಕಲಾವಿದನಲ್ಲೂ ಕೇಳಿ ತಿಳಿಯುವ ಪ್ರಯತ್ನ ಯಾರೂ ಮಾಡಾದಿದ್ದದ್ದು ಅಚ್ಚರಿ ತ೦ದಿತು..

    ReplyDelete
  2. ಬಹಳ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದ ಸಂಘಟಕರ ಪ್ರಯತ್ನಕ್ಕೆ ಅಭಿನಂದನೆಗಳು . ಉತ್ತಮ ಅವಕಾಶವಿದ್ದರೂ ತರಾತುರಿಯಲ್ಲಿ ಸಂವಾದ ಕಾರ್ಯಕ್ರಮವನ್ನು ಮುಗಿಸಿದಂತೆ ಅನಿಸಿತು . ಹಿರಿಯ ಕಲಾವಿದರೊಂದಿಗೆ ಸಂವಾದ ಏರ್ಪಡಿಸುವಾಗ ಕನಿಷ್ಠ ಒಂದು ಗಂಟೆ ಅವಧಿಯನ್ನಾದರೂ ಮೀಸಲಿಡಬೇಕು . ಸಿಕ್ಕ ಅವಕಾಶದಲ್ಲಿ ಮೇಲಿಂದ ಮೇಲೆ ಮಾತ್ರ ಹೇಳಲು ಸಾದ್ಯವಾಯಿತು ಅಂತ ಕಲಾವಿದರು ಅಂದುಕೊಂಡರೆ , ಇಷ್ಟು ಬೇಗ ಮುಗಿಸಿದರಲ್ಲ ಅಂತ ಪ್ರೇಕ್ಷಕರು ಗೊಣಗಿಕೊಂಡರು . ಇನ್ನು ತಾಳಮದ್ದಲೆ ಬೆಂಗಳೂರಿನ ಹವ್ಯಾಸಿಗಳಲ್ಲಿ ಭೀಮನ ಪಾತ್ರಧಾರಿಯೊಬ್ಬರು ಡಾ. ಪ್ರಭಾಕರ ಜೋಷಿಯವರ ಅರ್ಥವನ್ನು ಯಥಾವತ್ ಕಂಠಪಾಠ ಮಾಡಿ ಒಪ್ಪಿಸಿದಂತೆ ಅನಿಸಿತು. ಹಿರಿಯ ಕಲಾವಿದರು ಉತ್ತಮ ಪತ್ರ ನಿರ್ವಹಣೆ ಸಹಜವಾಗಿಯೇ ಮಾಡಿದ್ದೂ. ತೆನ್ಕಬೈಲು ರವರ ಹಾಡುಗರಿಕೆಯಂತೂ ಉತ್ತಮವಾಗಿ ಮೂಡಿಬಂತು. ಒಟ್ಟಿನಲ್ಲಿ ಸಂಘಟಕರ ಶ್ರಮ ಸಾರ್ಥಕ..

    ReplyDelete
  3. sooper bandide article,oodidaga Tala maddale nodida haage aayetu

    ReplyDelete
  4. Khushiyaytu article nodi.. chennagi barediddeeri

    vandanegalu

    ReplyDelete
  5. ಎಲ್ಲರ ಪ್ರೋತ್ಸಾಹಕ್ಕೆ ತು೦ಬ ಧನ್ಯವಾದಗಳು...

    ReplyDelete