![]() |
| ಚಿತ್ರಕೃಪೆ: ಉಲ್ಲಾಸ್ |
“ ಸ್ವಾದಿಷ್ಟ ರುಚಿಯಾದ ಮದುವೆಯ ಭೋಜನ ಉಂಡು ಅರಗಿಸಿಕೊಳ್ಳುವ ಮೊದಲೇ ನಾಲಿಗೆ ಅದರ ರುಚಿಯನ್ನು ಚಪ್ಪರಿಸುತ್ತ ಇರುವಾಗ ಅದಕ್ಕಿಂತಲೂ ರುಚಿಯಾದ ಗೃಹ ಪ್ರವೇಶದ ಭೂರಿ ಭೋಜನ ಸವಿಯುವ ಹಾಗಾಯಿತು.” ಇದು ಮೊನ್ನೆ ವೇಣೂರಿನ ತಾಳ ಮದ್ದಲೆ ಕಾರ್ಯಕ್ರಮ ಮುಗಿಸಿ ಬರುವಾಗ ಅನ್ನಿಸಿದ್ದು. ನಮ್ಮೆಲ್ಲರ ಮುಖದಲ್ಲಿ ತುಂಬಿದ ಸಂತೃಪ್ತಿಯ ಕಿರುನಗೆ ಇದಕ್ಕೆ ದ್ಯೋತಕವಾಗಿ ಇದನ್ನು ಸಾರಿ ಹೇಳುತ್ತಿತ್ತು. ಮೊನ್ನೆಯ ದಿನಾಂಕ ಶನಿವಾರ, ಪೆಬ್ರವರಿ ಐದರಂದು ಅದ್ಭುತವಾಗಿ ವ್ಯವಸ್ಥೆ ಮಾಡಿ ಭೂರಿ ಭೋಜನದೊಂದಿಗೆ ಯಕ್ಷ ಭೋಜನವನ್ನು ಊಣ ಬಡಿಸಿದ ವೇಣೂರು ಕಜೆ ಮನೆಯವರಿಗೆ ಮತ್ತೊಮ್ಮೆ ಅಭಾರಿಯಾಯಿತು ಮೈಮನ. !!!
![]() |
| ಚಿತ್ರಕೃಪೆ: ಉಲ್ಲಾಸ್ |
ನಮ್ಮ ಬೆಂಗಳೂರಿನ ಕಾರ್ಯಕ್ರಮ ಕ್ಕಿಂತ ಮೊದಲೇ ನಮ್ಮ ಸುಬ್ಬಣ್ಣ ಅವರ ಮನೆಯ ಅತಿ ಮುಖ್ಯ ಕಾರ್ಯಕ್ರಮದ ತಾಳ ಮದ್ದಲೆಯನ್ನು ನಿಶ್ಚೈಸಿದ್ದರು. ಅದಕ್ಕೆಂದೆ ನಮ್ಮೆಲ್ಲರ ಸಲಹೆಗೆ ಪ್ರಸಂಗಗಳ ಪಟ್ಟಿಯನ್ನು ಕೊಟ್ಟಿದ್ದರು. ಐದಾರು ಪ್ರಸಂಗಗಳ ಪಟ್ಟಿಯಲ್ಲಿ “ಸತೀ ಸಂರಕ್ಷಣೆ” ಎಂದು ಮರುನಾಮಾಂಕಿತವಾಗಿ ಅದೇ ಪ್ರಸಂಗವನ್ನು ಆಯ್ಕೆ ಮಾಡಿದ್ದರು ಸುಬ್ಬಣ್ಣ. ವರ್ಷದ ಮೊದಲು ಈ ಪ್ರಸಂಗದ ಬಗ್ಗೆ ನಾನು ನನ್ನ ಇರಾದೆಯನ್ನು ತಿಳಿಸಿದ್ದು.. ಅದನ್ನೇ ಈ ವರ್ಷದ ಪ್ರಸಂಗವಾಗಿ ಆಯ್ಕೆಮಾಡಿದ್ದು ನನ್ನಲ್ಲಿ ಉತ್ಸಾಹ ಮೂಡಿಸಿತ್ತು.
![]() |
| ಚಿತ್ರಕೃಪೆ: ಉಲ್ಲಾಸ್ |
ವಿರಾಟಪರ್ವದ ಅತೀ ಪ್ರಮುಖ ಭಾಗವಾದ ಕೀಚಕ ವಧೆಯ ಪ್ರಸಂಗವೇ ಈ ಸತೀ ಸಂರಕ್ಷಣೆ. ತಾಳ ಮದ್ದಲೆಗೆ ಅತ್ಯಂತ ವಿರಳ ಪ್ರಸಂಗವಿದು. ತಾಳ ಮದ್ದಲೆಗೆ ಬರುವ ಇಂಗಿತವನ್ನು ಪುತ್ತಿಗೆ ರಘುರಾಮ ಹೊಳ್ಳರು ತಾವಾಗಿಯೇ ಸುಬ್ಬಣ್ಣನ್ನಲ್ಲಿ ವ್ಯಕ್ತಪಡಿಸಿದ್ದರು. ಇಂತಹ ಮೇರು ಕಲಾವಿದರು ಅವರಾಗಿಯೇ ಬರುವ ಇಂಗಿತವನ್ನು ತೋಡಿಕೊಂಡದ್ದು ಸಹವಾಗಿ ಕಾರ್ಯಕ್ರಮದ ಮೌಲ್ಯವನ್ನೇ ವರ್ಧಿಸಿತ್ತು. ಪ್ರಸಂಗದ ಬಗ್ಗೆ ವಿಚಾರಿಸಿದಾಗ ಅವರಿಗೆ ಆಶ್ಚರ್ಯವಾಗಿತ್ತು. ಆಗ ಹೇಳಿದ್ದರು ‘ ತಾವು ಅದನ್ನು ಇಷ್ಟರವರೆಗೆ ತಾಳಮದ್ದಲೆ ಮಾಡಿಲ್ಲ.ಆಟ ಮಾತ್ರ ಆಡಿಸಿದ್ದು ಅಂತ. ಆದರೂ ಪರವಾಗಿಲ್ಲ ಬಲಿಪ್ಪರು ಇದ್ದಾರಲ್ಲ? ಅವರಲ್ಲಿ ಕೇಳಿ ಮಾಡುವ ತೊಂದರೆ ಇಲ್ಲ.’ ಇದು ನಿಜಕ್ಕೂ ಅವರ ದೊಡ್ಡ ಗುಣವನ್ನು ತೋರಿಸಿತ್ತು. ಹೊಳ್ಳರಂತಹ ಕಲಾವಿದರು ಇನ್ನೂ ಕಲಿಯಬೇಕು ಅದೂ ಬಲಿಪ್ಪರಲ್ಲಿ ಎಂಬ ಬಾವನೆ ವ್ಯಕ್ತ ಪಡಿಸುವುದು ನಮಗೆಲ್ಲ ರೋಮಾಂಚನ ಉಂಟುಮಾಡುವ ಸಂಗತಿ. ಆಗ ನನಗನಿಸಿದ ವಿಚಾರವೆಂದರೆ ಪ್ರತಿಯೊಂದರಲ್ಲೂ ಹೊಳ್ಳರನ್ನು ಅನುಕರಣೆ ಮಾಡುವ ಮರಿಕಲಾವಿದರು ಅವರ ಇಂತಹ ದೊಡ್ಡಗುಣಗಳನ್ನೂ ಅನುಕರಣೆ ಮಾಡಿದರೆ ಒಳ್ಳೆಯದು ಅಲ್ಲವೇ?
![]() |
| ಚಿತ್ರಕೃಪೆ: ಉಲ್ಲಾಸ್ |
ಸದುದ್ದೇಶದ ಯಾವ ಕಾರ್ಯಕ್ರಮವೂ ಸತ್ಪಲವನ್ನು ಕೊಡುತ್ತದೆ ಎಂಬುದಕ್ಕೆ ಇಂತಹ ಕಾರ್ಯಕ್ರಮಗಳು ನಿದರ್ಶನವಾಗಬಲ್ಲುದು. ತಾಳ ಮದ್ದಲೆಗೆ ಪೂರ್ವ ಭಾವಿಯಾಗಿ ಗಣ್ಯ ಕಲಾವಿದರನ್ನೇ ಸುಬ್ಬಣ್ಣ ಆಯ್ಕೆ ಮಾಡಿದ್ದರು. ಬಲಿಪ್ಪ ಹೊಳ್ಳರ ದ್ವಂದ್ವ ಭಾಗವತಿಕೆಗೆ ಮತ್ತು ವೇಣೂರಿನ ಕಜೆ ಮನೆಗೆ ಅತ್ಯಂಟ ನಿಕಟಪೂರ್ವವಾದ ಸಂಬಂಧವಿದೆ. ಹಲವು ಯಶಸ್ವಿ ಮಾದರಿ ತಾಳ ಮದ್ದಲೆಗೆ ಇವರದ್ದು ಸ್ಥಿರ ಹಿಮ್ಮೇಳ. ಅದರಂತೆ ಮದ್ದಲೆಗೆ ಅತಿ ಉತ್ಕೃಷ್ಟ ಪ್ರತಿಭೆಯ ಸುಬ್ರಹ್ಮಣ್ಯ ಶಾಸ್ತ್ರಿಯ ಆಯ್ಕೆ ಅತ್ಯಂತ ಸೂಕ್ತವಾಗಿ ಅದು ಸಂಪೂರ್ಣ ತಾಳಮದ್ದಲೆಯ ಯಶಸ್ಸಿಗೆ ಬಹುಮುಖ್ಯ ದೇಣಿಗೆಯನ್ನು ಕೊಟ್ಟಿತು. ಸಾಂಪ್ರದಾಯಿಕ ಸೊಗಡಿನ ಮತ್ತು ಅದ್ಭುತ ಸಾಹಿತ್ಯದ ಶಾಸ್ತ್ರೀ..!!! ಪೆಟ್ಟುಗಳು ಅತ್ಯದ್ಭುತ. ಎಂತಹ ಖಚಿತ ಪೆಟ್ಟುಗಳ ಮದ್ದಲೆ ವಾದನ ನಿಜಕ್ಕೂ ತಲೆದೂಗಬೇಕು. ಚೆಂಡೆವಾದನಕ್ಕೆ ಎಂದಿನಂತೆ ಕೊಂಕಣಾಜೆ ಸೂಕ್ತ ಜತೆಗಾರಿಗೆ ನೀಡಿದರು. ಇನ್ನು ಮುಮ್ಮೇಳ.. ಕೋಳ್ಯೂರು ರಾಮಚಂದ್ರ ರಾಯರ ಸ್ತ್ರೀ ಪಾತ್ರದ ಅರ್ಥ ವೈಭವವನ್ನು ಸವಿಯಬೇಕು ಎನ್ನುವುದು ಸುಬ್ಬಣ್ಣನ್ನ ಬಯಕೆ. ಆಗ ಮೊದಲು ಗೋಚರವಾಗುವುದು ಅವರ ದ್ರೌಪದೀ ಪಾತ್ರ..ಈ ಪಾತ್ರ ನಿರ್ವಹಿಸುವಾಗ ವಿಶೇಷವಾಗಿ ಪ್ರಸಂಗ ಯಾವುದೇ ಆಗಿದ್ದರೂ ರಾಯರು ಆವೇಶ ಭರಿತರಾಗಿ ಅದರಲ್ಲಿ ಪೂರ್ಣವಾಗಿ ಲೀನವಾಗಿಬಿಡುತ್ತಾರೆ. ಅವರ ಪಾತ್ರದೊಳಗಿನ ಪರಕಾಯ ಪ್ರವೇಶಕ್ಕೆ ವೇಣೂರು ಕಜೆ ಮನೆ ವೇದಿಕೆ ಸಜ್ಜಾಗಿತ್ತು. ಮಾತ್ರವಲ್ಲ ಅಭೂತಪೂರ್ವವಾದ ಪಾಂಚಾಲೆಯ ಅವತಾರವನ್ನು ಕಾಣುವ ಅವಕಾಶ ಒದಗಿ ಬಂತು. ಅವರ ಅಭಿವ್ಯಕ್ತಿಗೆ ಭಹಳ ಸೂಕ್ತ ಈ ಪ್ರಸಂಗ . ಇನ್ನು ಕೀಚಕನ ಅತೀ ಮುಖ್ಯ ಪಾತ್ರಕ್ಕೆ ಸೂರಿಕುಮೇರಿ ಗೋವಿಂದ ಭಟ್ಟರನ್ನು ಕರೆಯುವುದು ಮತ್ತು ಈ ಮೂಲಕ ವೇಣೂರು ತಾಳ ಮದ್ದಲೆಗೆ ಅವರ ಹೆಸರು ಪ್ರಥಮ ಬಾರಿ ಗಮನಕ್ಕೆ ಬಂತು. ಭೀಮನಾಗಿ ಇಲ್ಲಿಯ ಸ್ಥಿರ ಅರ್ಥಧಾರಿ ಸುಣ್ಣಂಬಲ ವಿಶ್ವೇಶ್ವರ ಭಟ್ ಹಾಗೇನೇ ಸುಧೇಶ್ಣೆಯಾಗಿ ವಾಟೆಪಡ್ಪು ವಿಷ್ಣುಭಟ್ ಹೀಗೆ ಒಟ್ಟೂ ತಾಳ ಮದ್ದಲೆಯ ಸ್ವರೂಪ ಅತ್ಯಂತ ಆಕರ್ಷಕವಾಗಿತ್ತು.
![]() |
| ಚಿತ್ರಕೃಪೆ: ಉಲ್ಲಾಸ್ |
ಸ್ವಕೀಯವಾದ ಈ ಕೌಟುಂಬಿಕ ಕಾರ್ಯಕ್ರಮದಲ್ಲಿ ಪರಿಶುದ್ದ ಕಲಾಪ್ರೇಮಿಗಳಾದ ಅಲ್ಪ ಸ್ವಲ್ಪ ಜನರೇ ಎಂದಿನಂತೇ ಪ್ರೇಕ್ಷಕರು.ಮಧ್ಯಾಹ್ನದ ಉರಿಬಿಸಿಲ ಬಿಸಿಗೆ ತಾಳಮದ್ದಲೆ ಆರಂಭದಲ್ಲೇ ಬಿಸಿ ಏರತೊಡಗಿತು. ಒಂದೇ ವೆತ್ಯಾಸ ಹೊತ್ತು ಕಳೆದಂತೆ ಬಿಸಿಲು ತಂಪಾದರೆ ತಾಳ ಮದ್ದಲೆ ಮಾತ್ರ ಬಿಸಿಯಾಗುತ್ತಾ ಹೋಯಿತು. ಸೂರಿಕುಮೇರಿಯವರ ಕೀಚಕ ಒಡ್ಡೋಲಗದ ಅರ್ಥಗಾರಿಕೆ ಬಲಿಪ್ಪರ ಏರು ಶ್ರುತಿಯ ಪದದಿಂದ ಸ್ಫೂರ್ತಿ ಪಡೆದುಕೊಂಡಿತು. ಇದರಿಂದ ಬಹಳ ಪ್ರಭಾವಿತ ರಾದ ಸೂರಿಕುಮೇರಿ ಅದೇ ಶ್ರುತಿಯಲ್ಲಿ ತೊಡಗಿ ಅರಂಭದಿಂದಲೇ ಉತ್ತಮ ಮಟ್ಟವನ್ನು ಕಾಯ್ದುಕೊಂಡರು. ಬಲಿಪ್ಪ ಹೊಳ್ಳರ ದ್ವಂದ್ವ ಆರಂಭದಿಂದಲೇ ಸಿಡಿ ಮದ್ದಿಗೆ ಕಿಚ್ಚು ಹತ್ತಿಸಿದಂತೆ ಭಾಸವಾಯಿತು. ಉತ್ತಮ ಶ್ರುತಿಯಲ್ಲೇ ಬಿರುಸಿನ ಮದ್ದಲೆ ಪ್ರತಿಯೊಂದು ಪದಕ್ಕೂ ಕಾಯುವಂತೆ ಮಾಡುತ್ತಿತ್ತು. ಅಂದು ಕೀಚಕನ ಪಾತ್ರ ಮರೆಯಲಾರದ ಒಂದು ಪಾತ್ರವಾಗಿ ಪರಿಣಮಿಸಿಉತು. ಬಲು ಮುಖ್ಯ ಭಾಗವಾದ ಕೀಚಕ ದ್ರೌಪದೀ ಮುಖಾಮುಖಿ ಸಂವಾದ ತುಂಬ ರಂಜನೀಯವಾಗಿತ್ತು. ಇದರಲ್ಲಿ ಕೀಚಕನ ಮನೋಧರ್ಮವನ್ನು ಭಟ್ಟರು ಅತ್ಯಂತ ಸುಂದರವಾಗಿ ಮಂಡಿಸಿದರು. “ಸುಲಲಿತಾಂಗಿ ಎನ್ನೊಳಿನಿತು ಕರುಣವಿಲ್ಲ ನಿನಗೆ”...ಎಂಬ ಬಲಿಪ್ಪರ ಭಾವಪೂರ್ಣ ಪದಕ್ಕೆ ಅರ್ಥ ವೈಭವದಿಂದ ಮತ್ತೂ ಭಾವವನ್ನು ತುಂಬಿಸಿದರು.
ಸುಂದರ ಕೀಚಕನ ಕ್ರೌರ್ಯ ಅಧಿಕವಾಗಿ ದುಪದ ನಂದನೆಯ ಮಂದಲೆಗೆ ಕೈ ಹಾಕಿ ಒದೆದ ಸನ್ನಿವೇಶವಂತೂ ಕಣ್ಣಿಗೆ ಕಟ್ಟಿದಂತೆ ಭಾಸವಾಯಿತು. ಸುಧೇಶ್ಣೆಯ ಕಟ್ಟಾಜ್ಞೆಗೆ ಮನನೊಂದ ಸೈರಂಧ್ರಿ ಮಧುವಿನ ಪಾತ್ರವನ್ನು ಕೈಯಲ್ಲಿ ಹಿಡಿದು ಗೋವಿಂದನಿಗೆ ಮೊರೆಯಿಡುವ ಪದ. “ಎಂದ ಮಾತನು ಕೇಳಿ ನೊಂದು ಪಾಂಚಾಲೆಯು..” ಎಂಬ ಪದವನ್ನು
[ಆ ಪದವನ್ನು ಆಲಿಸಲು ಇಲ್ಲಿ ಅದುಮಿರಿ]
ಹೊಳ್ಳರು ಸುಂದರವಾಗಿ ಭಾವಪೂರ್ಣವಾಗಿ ಹಾಡಿದರೆ ಸೈರಂಧ್ರಿಯ ಅಂತರಂಗದ ವೇದನೆಯನ್ನು ಕೋಳ್ಯುರು ಅಮೋಘವಾಗಿ ತೆರೆದಿಟ್ಟರು.
[ಆ ಪದವನ್ನು ಆಲಿಸಲು ಇಲ್ಲಿ ಅದುಮಿರಿ]
ಹೊಳ್ಳರು ಸುಂದರವಾಗಿ ಭಾವಪೂರ್ಣವಾಗಿ ಹಾಡಿದರೆ ಸೈರಂಧ್ರಿಯ ಅಂತರಂಗದ ವೇದನೆಯನ್ನು ಕೋಳ್ಯುರು ಅಮೋಘವಾಗಿ ತೆರೆದಿಟ್ಟರು.
ಇನ್ನೊಂದು ಮಹತ್ವದ ಸನ್ನಿವೇಶ ವಲಲ ಭೀಮ ಮತ್ತು ಪಾಂಚಾಲೆಯ ರಹಸ್ಯ ಸಂಭಾಷಣೆ. ಇಡಿ; ತಾಳ ಮದ್ದಲೆ ಪ್ರಸಂಗದ ಅತ್ಯಂತ ಭಾವಪೂರ್ಣ ಸನ್ನಿವೇಶವಿದು. ಕೋಳ್ಯೂರರ ಪರಕಾಯ ಪ್ರವೇಶ ಪೂರ್ಣ ರೂಪವನ್ನು ಪಡೆದಕೊಂಡದ್ದು ಈ ಸನ್ನಿವೇಶದಲ್ಲಿ. ಕಂಕ ಸನ್ಯಾಸಿ ಯಾಗಿರುವ ಅಣ್ಣನ ಮಾತಿನಿಂದ ನೊಂದ ಭೀಮ ಅಡಿಗೆ ಶಾಲೆಯಲ್ಲಿ ಮಸ್ತಕದಡಿಗೆ ಸೌದೆಯನ್ನು ಇಟ್ಟು ಮಲಗಿರುತ್ತಾನೆ. ಅಲ್ಲಿಗೆ ನಿಶಭ್ಧವಾಗಿ ಬಂದ ಸೈರಂಧ್ರಿ ಚಂದ್ರವಶಜನ ದುರವಸ್ಥೆಯನ್ನು ಕಂಡು ಮಮ್ಮಲ ಮರುಗುವ ಮತ್ತು ಇವಳ ಕರೆಗೆ ನಿಧಾನವಾಗಿ ಕಣ್ತೆರೆವ ಭೀಮ ಹೀಗೆ ಭಾವ ಪೂರ್ಣ ಸನ್ನಿವೇಶದ ಒಳಗೆ ನಾವೆಲ್ಲ ನಿಧಾನವಾಗಿ ಜಾರಿದ ಅರಿವೆ ನಮಗಿಲ್ಲ. ನಕಾರಾತ್ಮಕವಾಗಿ ಮೊದಲು ಮಾತಾಡಿದ ಭೀಮನಾಗಿ ಸುಣ್ಣಂಬಲ ಉತ್ತಮ ಪಾತ್ರ ಪೋಷಣೆ ಮಾಡಿ ಕೀಚಕನಿಂದ ನೊಂದ ದ್ರೌಪದಿಯ ಕಣ್ಣೀರು ಒರೆಸುವ ದೃಶ್ಯ ಮನ ಕರಗಿಸಿತು.
ಸತೀ ಸಂರಕ್ಷಣೆ ಎಂದು ಸಂದರ್ಭೋಚಿತವಾಗಿ ಪುನರ್ನಾಮಾಂಕಿತ ಗೊಂಡ ಕೀಚಕ ವಧೆ ಪ್ರಸಂಗ ತಾಳ ಮದ್ದಲೆ ರೂಪದಲ್ಲಿ ಅಗುವುದೆ ಅಪರೂಪ. ಅದನ್ನು ಸವಿದ ಮೇಲೆ ಅನ್ನಿಸಿದ್ದು- ಬಲಿಪ್ಪ ಹೊಳ್ಳರ ದ್ವಂದ್ವ ಭಾಗವತಿಕೆ ಪ್ರಸಂಗದ ಉತ್ತರಾರ್ಧದಲ್ಲಿ ಏರು ಶ್ರುತಿಯಲ್ಲಿ ಹಾಡಿದ ಬಲಿಪ್ಪರ ಅಮೋಘ ಪದಗಳು ಶಾಸ್ತ್ರಿಯವರ ಅದ್ಭುತ ಮದ್ದಲೆ ವಾದನ ಜತೆಗೆ ಸೂಕ್ತ ಮುಮ್ಮೇಳ ಇದು ಇನ್ನು ಸಿಗಬಲ್ಲುದೇ? ಸಿಗುವುದಿದ್ದರೂ ಅದಕ್ಕೆ ಇಂತಹುದೇ ಕೂಟಗಳು ಸಂದರ್ಭಗಳು ಕೂಡಿ ಬರಬೇಕು.
ಎಂದಿನಂತೆ ವೇಣೂರು ಮನೆಯವರ ಅತಿಥ್ಯ ಜತೆಗೆ ಅದ್ಭುತ ತಾಳ ಮದ್ದಲೆ ಎಲ್ಲವನ್ನು ಸವಿದ ಮನಸ್ಸು ಹೃದಯ ತುಂಬಿದ ಕೃತಜ್ಞತೆಯನ್ನು ಅರ್ಪಿಸಿತು. ಪಿತೃಗಳ ಸ್ಮರಣೆಯಲ್ಲಿ ಜರಗಿಸಿದ ತಾಳಮದ್ದಲೆ ಆ ಕಾರ್ಯಕ್ರಮಕ್ಕೆ ಉತ್ತಮ ಅರ್ಥ ಪೂರ್ಣ ಸ್ಮರಣೆಯನ್ನು ಒದಗಿಸಿತು. ನಿಜಕ್ಕು ವೇಣೂರು ಕುಟುಂಬದವರೊಂದಿಗೆ ನಾವೆಲ್ಲರೂ ಧನ್ಯರು.





very nice. Even i enjoyed the event. thanks to subbanna - for oota and thalamaddale koota :)
ReplyDeleteGood mornign Rajanna...
ReplyDeletenimma blog odide .. sathe samrakshane lekhana tumbha chennagi moodi
bandide....
nimma lekhana oduvudu andre ondu ritiya excitement... heegi innu
halavaaru adhbhuta lekhanagalannu barita iri endu harisuva
nimma
deepak rao
Madhu Hardur
ReplyDeletevery nice !! missed this pgm.. !!
I missed a golden opportunity, kya kare!
ReplyDelete