ಒಂದು ಕಥೆಯಿದೆ. ಅದರಲ್ಲಿ ಓರ್ವ ತನ್ನ ಮಿತ್ರನಲ್ಲಿ ತನ್ನ ಮನೆ ಹಾಗು ಊರಿನ ವಿವಿಧ ಕ್ರಮಗಳನ್ನು ಹೇಳುತ್ತಾ ಅದರ ಬಗ್ಗೆ ಅಭಿಮಾನ ಪಟ್ಟುಕೊಳ್ಳುತ್ತಾನೆ. ಹಾಗೆ ಅವನ ಮನೆಯಲ್ಲಿ ಮಾಡುವ ವಿವಿಧ ತಿಂಡಿಗಳ ಬಗ್ಗೆಯೂ ಅಡುಗೆ ಊಟದ ಬಗ್ಗೆಯೂ ಹೆಮ್ಮೆ ಪಟ್ಟುಕೊಳ್ಳುತ್ತಾ ವಿವರಿಸುತ್ತಿರುತ್ತಾನೆ. ಹಾಗೆ ಒಂದು ದಿನ ತನ್ನ ಮಿತ್ರನನ್ನು ಮನೆಗೆ ಅತಿಥಿಯಾಗಿ ಊಟಕ್ಕೆ ಆಹ್ವಾನಿಸುತ್ತಾನೆ. ತನ್ನ ಪತ್ನಿಗೆ ವಿಶೇಷವಾದ ಅಡುಗೆ, ಅದರಲ್ಲಿ ಅವರ ಪರಂಪರೆಯ ಆಡುಗೆಯನ್ನೇ ಅಧಿಕವಾಗಿ ಮಾಡುವಂತೆ ಹೇಳುತ್ತಾನೆ. ತಾನು ಹೇಳೀದಂತೆ ತನ್ನ ಮನೆಯ ವಿವಿಧ ಬಗೆ ಊಟ ಖಾದ್ಯಗಳ ಬಗ್ಗೆ ತೋರಿಸಿಕೊಡುವುದೇ ಆತನ ಉದ್ದೇಶವಾಗಿರುತ್ತದೆ. ಹೀಗೆ ಮನೆಗೆ ಕರೆದ ಮೇಲೆ ಬಂದ ಅತಿಥಿ ಮಿತ್ರನಿಗೆ ಹಲವು ಬಗೆಯ ಭಕ್ಷ್ಯ ಭೋಜನಗಳೊಂದಿಗೆ ಬಡಿಸುತ್ತಾ ವಿವರಿಸುತ್ತಿರುತ್ತಾನೆ. ಆಗ ಒಂದೆರಡು ತಿಂಡಿಗಳಲ್ಲಿ ಮಾಡಿದ ಕೊರತೆಯನ್ನು ಕಂಡು ಪತ್ನಿಯೊಡನೆ ಸಿಡಿಮಿಡಿಗುಟ್ಟುತ್ತಾ “ ನೋಡು ನಮ್ಮ ಆಡುಗೆ ಹಾಗಿಲ್ಲ.. ತೆಂಗಿನ ಕಾಯಿ ಸರಿಯಾಗಿ ಅರೆದು ಹಾಕಬೇಕು… ಮೊಸರಿನ ಬದಲು ಮಜ್ಜಿಗೆಯೇ ಹಾಕಬೇಕು..” ಇತ್ಯಾದಿ ಗದರುತ್ತಾನೆ. ಆಗ ರೋಸಿ ಹೋದ ಹೆಂಡತಿ ಹೇಳುತ್ತಾಳೇ “ ಎನೋ ಒಂದು ಕಷ್ಟ ಪಟ್ಟು ಮಾಡಿ ಬಡಿಸಿದ್ದೇನೆ..ಹಾಗೇನು ಆಗಿಲ್ಲ … ಅಷ್ಟಕ್ಕೂ ಅದೆಲ್ಲ ಅವರಿಗೆ ತಿಂದೂ ಗೊತ್ತಿಲ್ಲ ತಾನೆ?”
ಇಲ್ಲಿ ಯಾರದೂ ತಪ್ಪು ಕಾಣುವುದಿಲ್ಲ. ತನ್ನ ಮನೆಯ ಕ್ರಮಗಳ ಬಗ್ಗೆ ಅಭಿಮಾನ ಪಟ್ಟುಕೊಳ್ಳುವ ಅವನ ತಪ್ಪು ಇಲ್ಲ. ಸಂದರ್ಭಕ್ಕೆ ತಕ್ಕ ಕಷ್ಟ ಪಟ್ಟು ಏನೋ ಒಂದು ಅಂತ ಮಾಡಿ ಬಡಿಸುವ ಪತ್ನಿಯ ತಪ್ಪೂ ಇರುವುದಿಲ್ಲ. ಆದರೂ ಮಾಡಿದ ಕ್ರಿಯಯಿಂದ ಪತಿ ಪೂರ್ಣ ತೃಪ್ತನಾಗುವ ಹಾಗೂ ಇಲ್ಲ.
ಹಿರಿಯ ಭಾಗವವತ ಬಲಿಪ ನಾರಾಯಣ ಭಾಗವತರೊಂದಿಗೆ ಔಪಚಾರಿಕವಾಗಿ ಸಂವಾದ ನಡೆಸುವಾಗ ಈ ಬಗೆಯ ಗ್ರಹಿಕೆ ಬಂದು ಹೋಯಿತು. ಬಲಿಪ್ಪರೊಂದಿಗೆ ಒಂದೆರಡು ತಾಸು ಕಾಲ ಕಳೆಯುವ ಸುಯೋಗ ಇತ್ತೀಚೆಗೆ ಲಭ್ಯವಾದಾಗ ಅವರ ಅಮೂಲ್ಯ ಅನುಭವಗಳನ್ನು ನಾವು ಮಿತ್ರರು ಹಂಚಿಕೊಂಡೆವು. ಯಕ್ಷಗಾನದ ಬಗೆಗಿನ ಅವರ ಅದ್ಭುತ ಚಿಂತನೆಗಳು ಹಾಗೂ ಅಪಾರವಾದ ಜ್ಞಾನ ಎಂತಹವರಿಗೂ ಬೆರಗನ್ನು ಉಂಟುಮಾಡುತ್ತದೆ. ಅವರದೇ ಮಾತುಗಳಲ್ಲಿ ಅವರ ಅನುಭವ ಸವಿದರೆ ಆಗುವ ಆನಂದ ಪ್ರತಿಸಲವೂ ಭಿನ್ನವಾಗಿರುತ್ತದೆ. ಕೆಲವೊಮ್ಮೆ ಬಲಿಪ್ಪರು ಎಷ್ಟು ಮುಗ್ಧರೋ ಕೆಲವೊಮ್ಮೆ ಈ ಅನುಭವದ ವಿಚಾರದಲ್ಲಿ ಅವರು ಮುಗ್ಧರು ಎಂದು ಅನ್ನಿಸುವುದಿಲ್ಲ.
ಪ್ರತಿಸಲವೂ ಅವರು ಒಂದು ಸಾಮಾನ್ಯ ಮಾತೊಂದನ್ನು ಆಡುತ್ತಾರೆ ಮೊದಲಿನ ಹಾಗೆ ಜನರನ್ನು ಹಿಡಿದಿಡುವ ಕಲಾವಿದರು ಇಂದು ಇಲ್ಲ. ಆದರೂ ಅವರಲ್ಲಿ ಅದು ಇದೆ ಎಂಬುದು ಮೊನ್ನೆ ತಾನೆ ನಮ್ಮ ಅಭಿನಂದನಾ ಕಾರ್ಯಕ್ರಮದಲ್ಲಿ ರುಜುವಾತಾಗಿಬಿಟ್ಟಿದೆ. ಕೊನೆಯವರೆಗೂ ಪ್ರೇಕ್ಷಕರು ತಲ್ಲೀನರಾಗಿದ್ದುದೇ ನಿದರ್ಶನ. ಬದಲಾದ ಪರಿಸ್ಥಿತಿಯಲ್ಲಿ ಅವರ ಅನುಭವದ ಮಾತುಗಳನ್ನು ಗಮನಿಸಿದಾಗ ನನಗೆ ಮೇಲಿನ ಗ್ರಹಿಕೆ ಬಂದು ಹೋಯಿತು. ತುಂಬ ಅಪರೂಪ ಹಳೆಯ ಮಟ್ಟಿನ ಯಕ್ಷಗಾನದ ತಾಳದ ರೂಪವನ್ನು ನಮ್ಮ ಪ್ರಶ್ನೆಯೊಂದಕ್ಕೆ ವಿವರಿಸುತ್ತಾ.. ಈ ತಾಳಕ್ಕೆ ಕುಣಿಯುವ ಕಲಾವಿದನೇ ಇಲ್ಲ. ಅಳಕೆ ರಾಮ ರೈ ಪಡ್ರೆ ಚಂದು ಮುಂತಾದ ಹಿರಿಯ ಕಲಾವಿದರು ಇದೇ ತಾಳಕ್ಕೆ ಐದಾರು ವಿಧದಲ್ಲಿ ಕುಣಿದು ರಂಜಿಸುತ್ತಿದ್ದರು. ಅವರಿಂದ ಮುಂದಿನವರು ಅದನ್ನು ಅವರಿಂದ ಕಲಿಯುವ ಉತ್ಸಾಹವನ್ನೇ ತೋರಿಸಿಲ್ಲ ಅಥವಾ ಕಲಿಯಲೂ ಇಲ್ಲ. ಇಂದಿನವರು ಹತ್ತು ಗಂಟೆಗೆ ಬೈಕಿನಲ್ಲಿ ಬರ್ತಾರೆ “ ಭಾಗವತರೆ ಈ ಪದ ಮಾರವಿಯಲ್ಲಿ ಹಾಕಿ ಇದು ತಿತ್ತಿಥೈ ಯಲ್ಲಿ ಹಾಕಿ..” ಅಂತ ಹೇಳ್ತಾರೆ ಏನೋ ಒಂದು ಕುಣಿದು ಹೋಗ್ತಾರೆ” ಇದು ಇರುವಾಗ ಇಲ್ಲಿ ಕಾಲಮಿತಿಯಲ್ಲದೆ ಇಡೀ ರಾತ್ರಿ ಯಕ್ಷಗಾನ ನಡೆದೀತೆ? ಒಂದು ಕಾಲವಿತ್ತು ಭಾಗವತನ ತಾಳಕ್ಕೆ ವೇಷಧಾರಿ ಕುಣಿಯುತ್ತಿದ್ದ. ಅದು ಯಾವುದಾದರೂ ಸಮಸ್ಯೆ ಎಂದು ಅನ್ನಿಸುತ್ತಿರಲಿಲ್ಲ. ಇಂದು ಭಾಗವತನೇ ತಾಳಕ್ಕೆ ತಕ್ಕಂತೆ ಕುಣಿಯಬೇಕಾದದ್ದು ವಿಪರ್ಯಾಸ. ಒಂದು ಹಾಸ್ಯದ ಮಾತಿದೆ. ಒಬ್ಬಾತ ಮಿತ್ರನೋಡನೆ ಜಂಬ ಕೊಚ್ಚಿಕೊಳ್ಳುತ್ತಾ ಹೇಳುತ್ತಾನೆ… “ ನಾನು ಹಾಕಿದ ಗೆರೆಯಿಂದ ನನ್ನ ಹೆಂಡತಿ ಆ ಕಡೆ ದಾಟುದಿಲ್ಲ….” ಅದರೆ ಗೆರೆ ಎಲ್ಲಿ ಹಾಕಬೇಕು ಎಂದು ನಿರ್ಧರಿಸುವುದು ಅವಳೇ ಆಗಿರುತ್ತಾಳೆ ಇದು ಮಾತ್ರ ವಾಸ್ತವ. ಖರ್ಚಿಗೆ ನಾಲ್ಕು ರಾಗ ಕಲಿತಿದ್ದೇನೆ ಅದು ಭಾಗವತ ಅಗ್ಲಿಕ್ಕೆ ಸಾಕು ಎಂಬ ಮನೋಭಾವ ಇರುವಾಗ ಇದೆಲ್ಲ ಸಹಜವೇ. ಜ್ಞಾನದೀಕ್ಷೆ ಪರಿಪೂಣತ್ವವನ್ನು ಪಡೆಯುವಲ್ಲಿ ಇಚ್ಚಾಶಕ್ತಿಯೂ ಬೇಕಾಗುತ್ತದೆ. ಈಗಿನ ಮಟ್ಟಿಗೆ ಇದು ಧಾರಾಳ ಸಾಕು ಎಂಬ ಉಡಾಫೆ ಮನೋಭಾವ ಇದ್ದಲ್ಲಿ ಬೇರೇನು ಸಾಧ್ಯ.?
ನಮ್ಮ ಮಿತ್ರರೊಬ್ಬರ ಅನುಭವ ಮೇಲೆ ಹೇಳಿದ ಕಥೆಗೆ ತುಂಬ ಹತ್ತಿರದ ನಿದರ್ಶನ. ಯಕ್ಷಗಾನಕ್ಕೆ ಹೊಸ ಪ್ರೇಕ್ಷಕವರ್ಗ ಇಲ್ಲ ಎಂಬ ಮಾತಿದೆ. ಹೊಸದಾಗಿ ಒಬ್ಬಾತನನ್ನು ಹುರಿದುಂಬಿಸಿ ಒಂದು ಯಕ್ಷಗಾನಕ್ಕೆ ಕರೆದು ಕೊಂಡು ಹೋದರೆ ಮನೆ ಊಟಕ್ಕೆ ಮಿತ್ರನನ್ನು ಅತಿಥಿಯಾಗಿ ಕರೆದ ಅನುಭವವೇ ಆಯಿತು. ಬನ್ನಿ ನಮ್ಮ ಕರಾವಳಿಯ ಗಂಡು ಕಲೆ, ಕರ್ನಾಟಕ ರಾಜ ಕಲೆ ಯಕ್ಷಗಾನ. ಕೇರಳದ ಕಥಕ್ಕಳಿ ಯಂತೆ ಕರ್ನಾಟಕದ ಯಕ್ಷಗಾನ ಇದರ ಬಗ್ಗೆ ಏನೆಲ್ಲ ವಿಶೇಷಣಗಳು ಬೇಕೋ ಎಲ್ಲವನ್ನೂ ಹೇಳಿದರು. ಹೋದರೆ ಯಕ್ಷಗಾನ ಏನೋ ಅದ್ಧೂರಿಯಾಗಿಯೇ ಇದ್ದಿತು. ಭರ್ಜರಿಯಾಗಿ ವೇದಿಕೆ ಸಜ್ಜುಗೊಳಿಸಲಾಗಿತ್ತು. ಸುತ್ತು ಮುತ್ತಲು ಜಾಹೀರಾತುಗಳ ಬ್ಯಾನರ್ ಗಳು. ಶುಭ ಹಾರೈಕೆಯ ಮಹಾಪೂರಗಳು.ವೇದಿಕೆಯ ಮೇಲೆ ಯಕ್ಷಗಾನದ ಹಿಮ್ಮೇಳದವರಾಗಲಿ ಕುಣಿವ ಪಾತ್ರಗಳಾಗಲಿ ಗಮನಕ್ಕೆ ಬಾರದಷ್ಟು ದೊಡ್ಡದಾದ ರಂಗುರಂಗಿನ ಬ್ಯಾನರ್ .. ಬಣ್ಣದ ವೇಶದ ಬ್ರ್ ಹದಾಕಾರದ ಚಿತ್ರಗಳು.ಮಿತ್ರರಿಗೆ ಇದೇ ನಮ್ಮೂರಿನ ಯಕ್ಷಗಾನ ಎಂದು ಅಭಿಮಾನದಿಂದ ಹೇಳುವ ಬಗ್ಗೆ ಯೋಚಿಸುವಂತಾಯಿತು. ಯಾವುದನ್ನು ಹೇಳುವುದು? ಶ್ರುತಿಯಿಲ್ಲದ ಹಿಮ್ಮೇಳದ ಬಗ್ಗೆಯೆ? ನಾಲ್ಕುರಾಗದ ಭಂಡವಾಳದ ಭಾಗವತಿಕೆಯನ್ನೇ? ದಿಗಿಣ ಮಾತ್ರ ಯಕ್ಷಗಾನದ ಕುಣಿತ ಎಂದು ಭಾವಿಸಿ ಕುಣಿದ ನಾಟ್ಯಕ್ಕೆಯೆ? ದಿಗಿಣದ ರಭಸಕ್ಕೆ ಜಾರುವ ಕಿರೀಟದ ಬಗ್ಗೆಯೆ? ತಲೆಯ ಮೇಲೆ ಕಿರಿಟವಿದೆ ಎಂದು ತಲೆಯ ಒಳಗೆ ಅರಿವಿಲ್ಲದೆ ಇರುವುದಕ್ಕೆಯೆ?
ಈ ಮಾತು ಹೇಳಿವಾಗ ಇತ್ತೀಚೆಗೆ ಊರಿನ ಕಾರ್ಯಕ್ರದಲ್ಲಿ ಹಿರಿಯ ಕಲಾವಿದರೊಬ್ಬರು ಹೇಳಿದ ಮಾತು ನೆನಪಿಗೆ ಬರುತ್ತದೆ. ಬೆಂಗಳೂರಿನಲ್ಲಿ ಇವರ ಕಾರ್ಯಕ್ರಮ ಒಂದು ಆಯೋಜನೆಗೊಂಡು ಪ್ರದರ್ಶಿತವಾಗಿ ಬಲು ಪ್ರಶಂಸೆ ಗಳಿಸಿತು. ಅದರ ಬಗ್ಗೆ ಹೇಳುತ್ತಾ ತೆಂಕು ತಿಟ್ಟು ಯಕ್ಷಗಾನ ಬರೀ ದಿಗಿಣ ಮಾತ್ರಾ ಕುಣಿತ ಎಂದು ಭಾವಿಸಿದವರಿಗೆ ನಮ್ಮ ಪ್ರದರ್ಶನ ಅತ್ಯದ್ಭುತ ಅನುಭವ ಕೊಟ್ಟಿತು. ಎಲ್ಲರ ಪ್ರಶಂಸೆಗ ಪಾತ್ರವಾಗಿ ಆ ಪ್ರದರ್ಶನ ನೆರವೇರಿತು. “ನಾವು ತೋರಿಸಿಕೊಡಬೇಕು ಯಕ್ಷಗಾನ ಎಂದರೆ ಬರೀ ಚಪ್ಪಾಳೆಗೋಸ್ಕರ ಹಾರುವ ದಿಗಿಣವಲ್ಲ. ತನ್ನ ದಿಗಿಣದಲ್ಲಿ ಎಲ್ಲ ಅಭಾಸಗಳನ್ನು ಅಜ್ಞಾನವನ್ನೂ ಮುಚ್ಚಿಹಾಕುವ ಪ್ರಮೇಯ ಇರಬಾರದು.”
ಇಲ್ಲಿಗೆ ಇಷ್ಟು ದೊಡ್ಡದು ಬೇಕಾದರೆ ನೋಡಿ ಇದೇ ಎಂಬ ಭಾವದ ಮಾತು ಬಂದರೆ ..ಹೊಸ ಪ್ರೇಕ್ಷಕ ಮಿತ್ರನಿಗೆ ಇದೇ ಯಕ್ಷಗಾನ ಎಂದು ತೋರಿಸುವ ಅನಿವಾರ್ಯತೆ ನಮ್ಮ ಮಿತ್ರರಿಗೆ. ತೋರಿಸುವುದಕ್ಕೇನು ಬಿಡಿ ಅಸಲೀ ಯಕ್ಷಗಾನ ನೋಡದವರು ಒಹ್ ಅದ್ದೂರಿ ಸೆಟ್ಟಿಂಗ್ಸ್ ದಣಿವಿಲ್ಲದ ದಿಗಿಣ.. ಇದನ್ನೆ ತಲೆಯಲ್ಲಿ ತುಂಬಿಕೊಂಡು ಒಹ್ ಇದು ಯಕ್ಷಗಾನ ಎಂದು ಕಂಡದ್ದಕ್ಕೆ ತೃಪ್ತಿಪಟ್ಟುಕೊಳ್ಳುವ ಅನಿವಾರ್ಯತೆ. ಕಥೆ ಯಲ್ಲಿದ್ದಂತೆ ಇಲ್ಲಿಯೂ ಯಾರದೂ ತಪ್ಪಿಲ್ಲ. ಎಲ್ಲವೂ ಭ್ರಮನಿರಸನ. ಉತ್ತಮವಾದುದನ್ನು ಕೊಡುವ ಪ್ರಾಮಾಣಿಕ ಪ್ರಯತ್ನ ಅಲ್ಲೊಂದಿಲ್ಲೋಂದು ಆದರೂ ಅದು ಗಮನಕ್ಕೆ ಬರುವುದಿಲ್ಲ. ಎಷ್ಟೇ ಪರಿಮಳ ಬೀರುವ ಸುಗಂಧ ದ್ರವ್ಯ ಪೂಸಿದರೂ ಒಂದು ತೊಟ್ಟು ಸೀಮೇ ಎಣ್ಣೆಯೊ ಅಥವಾ ಇನ್ಯಾವುದೋ ದುರ್ನಾತಕ್ಕೆ ಮಾಸಿ ಹೋದಂತೆ.ಆನಿವಾರ್ಯತೆಯ ದಾಕ್ಷಿಣ್ಯದ ಉರುಳು ಬಿಗಿಯಾಗುತ್ತಾ ಹೋಗುತ್ತಿದೆ. ಸಹಜವಾದ ಅಭಿರುಚಿ ಕರಗಿ ಅಭಿರುಚಿಯ ರೂಪವೇ ಬದಲಾಗುತ್ತಿದೆ.
No comments:
Post a Comment