ವೈವಿಧ್ಯಮಯ ಜೀವನ ಶೈಲಿಯ ಬದುಕು ಸಹಜವಾಗಿರುವಾಗ ಎಲ್ಲದರಲ್ಲೂ ವೈವಿಧ್ಯವನ್ನು ಕಾಣುವುದು ಸಹ ಸಹಜವಾಗಿರುತ್ತದೆ.ವಿಭಿನ್ನ ಅಭಿರುಚಿಗಳ ಮನೋಭಾವ ಈ ವೈವಿಧ್ಯಕ್ಕೆ ಆಕರವಾಗಿ ಪರಿಣಮಿಸುತ್ತದೆ. ಒಟ್ಟು ವ್ಯವಸ್ಥೆಗೆ ಅದು ಪೂರಕವೋ ಮಾರಕವೋ ಆ ಚಿಂತನೆ ಒತ್ತಟ್ಟಿಗಿಟ್ಟು ಅಭಿರುಚಿಯ ಬೆನ್ನು ಹತ್ತಿದಾಗ ಜಗತ್ತಿನ ವೈವಿಧ್ಯತೆಯ ಅರಿವಾಗುತ್ತದೆ. ನಾವು ಉಣ್ಣುವುದರಲ್ಲಿ ಧರಿಸುವುದರಲ್ಲಿ ನಡೆಯುವ ಹಾದಿಯಲ್ಲಿ ಉಪಯೋಗಿಸುವ ವಸ್ತುಗಳಲ್ಲಿ ಎಲ್ಲವು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅವಿಷ್ಕಾರಗೊಳ್ಳುತ್ತಾ ಒಂದು ಪರಿಷ್ಕಾರಕ್ಕೆ ಒಳಗಾಗುತ್ತೇವೆ. ಬಾಯಾರಿಕೆಗೆ ಬರೀ ನೀರು ಎಂಬುದು ಪರಿಶುದ್ದ ಶಾಸ್ತ್ರೀಯ ಕ್ರಮವಾದರೆ, ಅದೇ ನೀರಿಗೆ ತಮ್ಮ ಅಭಿರುಚಿಗೆ ಹೊಂದಿಕೊಂಡು ಮಿಶ್ರ ಮಾಡಿ ಅಥವಾ ರೂಪಾಂತರಿಸಿ ಸೇವಿಸುವ ವಿಧಾನವನ್ನು ರೂಪಿಸಿಕೊಂಡಲ್ಲಿ ಅದು ಒಂದು ಅವಿಷ್ಕಾರ ಎಂದುಕೊಳ್ಳಬಹುದು. ಆದರೂ ಶಾಸ್ತ್ರೀಯವಾದದ್ದು ಅದು ಸಹಜವಾಗಿ ಅಳಿಸಿ ಹೋಗದೆ ಕೆಲವೊಂದು ಸಲ ತನ್ನ ಅಸ್ತಿತ್ವವನ್ನು ಸಾರುತ್ತಾ ಅದರ ಅನಿವಾರ್ಯತೆ ಮತ್ತು ಮೌಲ್ಯವನ್ನು ತೋರಿಸಿಕೊಡುತ್ತದೆ.ಒಂದಾಗಿ ಇಲ್ಲದೆ ಇರುವುದೇ ದ್ವಂದ್ವ. ಕಲಾಪ್ರಾಕಾರಗಳಲ್ಲಿ ಅಭಿರುಚಿಗೆ ಅನುಸಾರವಾಗಿ ಬಳಕೆಗೆ ಆವಿಷ್ಕಾರಗಳು ಹಲವಾರು ಬಗೆ. ಇದು ಪೂರಕವಾಗಿಯೋ ಮಾರಕವಾಗಿಯೋ, ಅದರ ಸಾಧಕ ಬಾಧಕಗಳು ಏನೇ ಇರಲಿ ರಂಜನೆಯ ದೃಷ್ಟಿಯಲ್ಲಿ ಕಲೆಯ ಬೆಳವಣಿಗೆಯಲ್ಲಿ ಅಥವಾ ರೂಪಾಂತರಗಳಲ್ಲಿ ಇದು ಪ್ರಧಾನ ಪಾತ್ರವಹಿಸಿದೆ. ಒಂದೇ ಏಕತಾನತೆಯ ಕ್ರಮಗಳಿಂದ ಹೊರಬಂದು ಬದಲಾವಣೆಯ ದಿಶೆಯಲ್ಲಿ ಹಲವು ಪ್ರಯೋಗಗಳಿಗೆ ಒಳಗಾಗಿದೆ ಮಾತ್ರವಲ್ಲ ಒಳಗಾಗುತ್ತಲು ಇದೆ. ಭಿನ್ನ ರೂಪಗಳನ್ನು ಒಟ್ಟಾಗಿ ಸವಿಯುವ ಮನೋಭಾವದಿಂದ ಕಲಾಪ್ರಾಕಾರಗಳು ಹಲವು ಪ್ರಯೋಗಳಿಗೆ ತನ್ನನ್ನು ಒಡ್ಡಿಕೊಂಡು ಹತ್ತು ಹಲವು ಕವಲುಗಳಾಗಿ ಬೆಳೆದು ನಿಂತುದನ್ನು ಬೆರಗಿನಿಂದ ಅವುಗಳ ರೂಪಗಳನ್ನು ಅವಲೋಕಿಸಿದರೆ ಕಲೆ ಎಂಬುದರ ವಿಸ್ತ್ರತ ಪ್ರಪಂಚದ ವೈವಿಧ್ಯತೆಯನ್ನೇ ಒಂದು ವಿಷಯವನ್ನಾಗಿ ಅಧ್ಯಯನ ಮಾಡಬಹುದು ಎಂದೆನಿಸುತ್ತದೆ.
ಯಕ್ಷಗಾನ ಕಲೆಯೂ ಸಹ ಈ ಅವಿಷ್ಕಾರಗಳಿಗೆ ಒಳಗಾಗಿ ರಂಜನೆಯ ದೃಷ್ಟಿಯಿಂದಲೋ ಕ್ರಿಯಾತ್ಮಕ ದೃಷ್ಟಿಗೋ ಸಾಕಷ್ಟು ಪ್ರಯೊಗಕ್ಕೆ ಒಳಗಗಾಗಿದೆ. ಬಯಲಾಟದಲ್ಲಿ ಜೋಡಾಟ, ಕೂಡಾಟ ಹೀಗೆ ಸ್ಪರ್ಧಾತ್ಮಕ ಜಗತ್ತನ್ನು ಸಾಧ್ಯವಾದಷ್ಟು ಅನಾವರಣ ಗೊಳಿಸುವ ಪ್ರಯತ್ನ ಸಾಕಷ್ಟು ಬಾರಿ ಅಗಿದೆ. ಮಾತ್ರವಲ್ಲ ಅದು ತನ್ನದೇ ಆದ ಜನಪ್ರಿಯತೆಯನ್ನು ಗಳಿಸಿದೆ. ಹೊಸ ಹೊಸ ನವೀನ ಕ್ರಮಗಳು ಯಥೇಚ್ಛವಾಗಿ ಬಳಕೆಯಾಗುವಾಗ ಹಿಮ್ಮೇಳದಲ್ಲಿ ಸುಲಭವಾಗಿ ಪ್ರಯೋಗಕ್ಕೆ ಬಂದಂತಹುದು ಈ ದ್ವಂದ್ವಗಳಾಗಿರಬಹುದು. .ಯಕ್ಷಗಾನದಲ್ಲಿ ಮೊದಲ ಕಲಾವಿದರಾಗಿ ಅಥವಾ ಮುಖ್ಯ ಸೂತ್ರಧಾರನಾಗಿ ಭಾಗವತನೇ ಆದರೂ ಇಂದು ಭಾಗವತನ ಶ್ರಮವನ್ನು ಕಡಿಮೆ ಮಾಡುವಲ್ಲಿ ಅಥವಾ ಭಾಗವತನ ಕಾರ್ಯವ್ಯಾಪ್ತಿಯನ್ನು ಕಡಿಮೆಗೊಳಿಸುವಲ್ಲಿ ಈ ದ್ವಂದ್ವಗಳು ಪ್ರಧಾನ ಪಾತ್ರವಹಿಸಿದೆ. ಅದರ ಗುಣಾವಗುಣಗಳು ಏನೇ ಇರಲಿ ಇಂದು ಈ ದ್ವಂದ್ವ ಕಲಾಪ್ರದರ್ಶನಗಳು ಜನಪ್ರಿಯತೆಗೆ ಮಾತ್ರವಲ್ಲ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅದರ ಅಸ್ತಿತ್ವದ ಅನಿವಾರ್ಯತೆಯನ್ನು ತೋರಿಸಿಕೊಟ್ಟಿದೆ.
[
ಇತ್ತೀಚಿಗಿನ ಅತ್ಯಂತ ಜನಪ್ರಿಯ ಜೋಡಿ ಹೊಸ ತಲೆಮಾರಿನೊಂದಿಗೆ ಹಳೆ ತಲೆ. ]
ಈ ದ್ವಂದ್ವಗಳ ಜಗತ್ತನ್ನು ಹೊಕ್ಕರೆ ಅದ್ಭುತ ಅನುಭವಾಗಬಲ್ಲುದು. ಇದರಲ್ಲೆ ವರ್ಗೀಕರಿಸಲು ಅಸಾಧ್ಯವಾದಷ್ಟು ವೈವಿಧ್ಯತೆಗಳು ಪ್ರಯೋಗಕ್ಕೆ ಬಂದಿವೆ , ಮಾತ್ರವಲ್ಲ ಪ್ರಯೋಗವಾಗುತ್ತಲೂ ಇವೆ. ಅದರೂ ದ್ವಂದ್ವಗಳು ಮಾತ್ರ ಇರುವ ಗಾನವೈಭವದಂತಹ ರಂಜನೆಯ ಕಾರ್ಯಕ್ರಮಗಳು ಇಂದು ಬಹಳ ಜನಪ್ರಿಯವಾಗಿವೆ. ವಿಭಿನ್ನ ಗುಣ ಸ್ವಭಾವ ಕಲಾ ಸಾಮಾರ್ಥ್ಯವನ್ನು ಹೊಂದಿರುವ ಕಲಾವಿದರು ಒಂದೇ ವೇಳೆಯಲ್ಲಿ ಒಂದೇ ವೇದಿಕೆಯಲ್ಲಿ ತಮ್ಮ ನೈಪುಣ್ಯತೆಯನ್ನು ಒರೆಗೆ ಹಚ್ಚುತ್ತಾರೆ. ಮಾತ್ರವಲ್ಲ ವಿವಿಧ ಜತೆಗಾರಿಕೆಯ ಪ್ರಯೋಗ ಇಲ್ಲಿ ಸುಲಭದಲ್ಲಿ ನೆರವೇಸಲ್ಪಡುತ್ತದೆ.
ದ್ವಂದ್ವ ಪ್ರಯೋಗಗಳು ಹಿಮ್ಮೇಳದ ಭಾಗವತಿಕೆಯಲ್ಲಿ ಪ್ರಯೋಗಿಸಲ್ಪಡುವುದೇ ಹೆಚ್ಚು. ದ್ವಂದ್ವ ಎಂಬ ಪದ ಯಕ್ಷಗಾನದಲ್ಲಿ ಬಳಕೆಗೆ ಬಂದುದು ಕೂಡ ದ್ವಂದ್ವ ಎಂದರೆ ಇಬ್ಬರ ಭಾಗವತಿಕೆ ಎಂದೇ ಅರ್ಥ.ದ್ವಂದ್ವ ಹಾಡುಗಾರಿಕೆ ಯಕ್ಷಗಾನ ಬಯಲಾಟಗಳಲ್ಲಿ ಇವೆಯಾದರೂ ತಾಳಮದ್ದಲೆಗೆ ಹೊಂದಿಕೊಂಡಷ್ಟು ಬಯಲಾಟಗಳಿಗೆ ಸೂಕ್ತವೆನಿಸುವುದಿಲ್ಲ. ವಿಮರ್ಶಕರೊಬ್ಬರ ಅಭಿಪ್ರಾಯದಂತೆ ಯಕ್ಷಗಾನದಲ್ಲಿ ಎರಡು ಭಾಗವತರು ತಮ್ಮ ನಾದ ವೈಭವವನ್ನು ಪ್ರದರ್ಶಿಸಿದರೆ ಅದು ಯಕ್ಷಗಾನ ಭಾಗವತಿಕೆಯ ಬದಲಾಗಿ ಯಕ್ಷಗಾನ ರಸಮಂಜರಿ(ಆರ್ಕೆಸ್ಟ್ರಾ) ಆಗುವುದಲ್ಲದೆ ಅಲ್ಲಿ ಅಭಿನಯಿಸುವ ಕಲಾವಿದ ಅಥವಾ ವೇಷಧಾರಿ ಪ್ರೇಕ್ಷಕನಾಗಿ ಬದಲಾಗುತ್ತಾನೆ.ಹಾಗಾಗಿ ತಾಳ ಮದ್ದಲೆಯಲ್ಲಿ ರಂಜನೆಯ ದೃಷ್ಟಿಯಿಂದ ಕೆಲವೊಮ್ಮೆ ಯಶಸ್ವಿಯಾಗುತ್ತದೆ.
ದ್ವಂದ್ವ ಜತೆಗಾರಿಕೆಯಲ್ಲೂ ಹಲವು ಹೊಸತನದ ಪ್ರಯೋಗಗಳಾಗಿವೆ. ಭಾಗವತರ ಶೈಲಿಗೆ ಅನುಸಾರವಾಗಿ ಹಲವು ವಿಧದ ದ್ವಂದ್ವ ಪ್ರಯೋಗಗಳಾಗಿವೆ. ಇತ್ತೀಚೆಗೆ ಅತ್ಯಂತ ಯಶಸ್ವೀ ದ್ವಂದ್ವ ಅಂದರೆ ಬಲಿಪ್ಪ ಮತ್ತು ಹೊಳ್ಳರದ್ದು. ಒಬ್ಬರು ಪರಂಪರೆಯ ಸೇನಾನಿ ಇನ್ನೊಬ್ಬರು ಸಮನ್ವಯದ ಹರಿಕಾರ. ಇಬ್ಬರದೂ ಏರು ಶ್ರುತಿ. ಒಬ್ಬರನ್ನು ಒಬ್ಬರು ಅನುಸರಿಸುವ ಹೊಂದಾಣಿಕೆ ಇಲ್ಲಿ ಎಲ್ಲವನ್ನೂ ಕಾಣಬಹುದು. ಇಬ್ಬರು ಸ್ವರ ಏರಿಸಿ ಹಾಡಲು ತೋಡಗಿದರೆ ಕೊಬ್ಬಿದ ಗೂಳಿ ಬುಸುಗುಟ್ಟುತ್ತಾ ನುಗ್ಗಿದ ಹಾಗೆ. ರುದ್ರಗಂಭೀರದ ಸಮುದ್ರ ಘರ್ಜನೆ ಮೊಳಗಿದ ಹಾಗೆ ಕೇಳುತ್ತಿರುವ ಪ್ರೇಕ್ಷಕ ಆ ಶ್ರುತಿಗೆ ತನ್ನ ಧ್ವನಿಯನ್ನು ಸೇರಿಸ ಹೋಗಿ ರೋಮ ನೆಟ್ಟಗಾಗಿ ಲೋಕದ ಇರವನ್ನೇ ಮರೆತ ಅನುಭವ.ಇದು ಒಂದು ಬಗೆಯುದಾದರೆ . ಪದ್ಯಾಣ ಮತ್ತು ಹೊಳ್ಳ ಸಂಪ್ರದಾಯದ ಚೌಕಟ್ಟಿನಲ್ಲೇ ರಾಗದಾಲಪನೆಯನ್ನು ಮೊಳಗಿಸಿ ಕೇಳುಗನ ಮನಸ್ಸಿಗೆ ಲಗ್ಗೆಯಿಕ್ಕುವ ಪ್ರಯತ್ನ ಆ ದ್ವಂದ್ವ ರಾಗ ವೈಭವ ಕೇಳಿದಾಗ ಮನಸ್ಸಿನ ಎಲ್ಲ ಭಾವನೆ ಒಮ್ಮಿಂದೊಮ್ಮೆಲೇ ನಿಯಂತ್ರಣವಿಲ್ಲದೆ ಹರಿದ ಹಾಗೆ. ಇನ್ನು ತೆಂಕಬೈಲು ಶಾಸ್ತ್ರಿಗಳು ಕೆಲವೊಮ್ಮೆ ದ್ವಂದ್ವದೊಳಗೆ ಸಿಲುಕಿ ತಲ್ಲೀನರಾಗಿ ರಾಗ ಆಲಾಪಿಸಿದರೆ ಮುಂಜಾವ ಆಗುತ್ತಿದ್ದಂತೆ ಮಿನುಗುತ್ತಿದ್ದ ತಾರೆಗಳು ಸೂರ್ಯೋದಯವಾಗುತ್ತಿದ್ದಂತೆ ಹೇಗೆ ಆ ಪ್ರಭೆಗೆ ಮಾಯವಾಗುತ್ತಿದೆಯೋ ಹಾಗೆ ಆ ರಾಗದ ಆಲಾಪನೆಗೆ ಮತ್ತೆ ಎಲ್ಲವೂ ಕೇಳದ ಅನುಭವ.ಎಲ್ಲರ ರಾಗವೈಭವಕ್ಕೆ ಹುಚ್ಚೆದ್ದು ಕುಣಿದ ಕೇಳುಗನ ಮನಸ್ಸನ್ನು ತಣಿಸಿ ರಮಿಸಿ ಮುದ್ದಿಸಿ ಮಲಗಿಸಿದ ಹಾಗೆ.ಇವರದೆಲ್ಲ ಒಂದು ಬಗೆಯಾದರೆ ಅಮ್ಮಣ್ಣಾಯರ ಶೈಲಿ ಎಲ್ಲದಕ್ಕಿಂತಲೂ ತೀರ ಭಿನ್ನ. ಯಾರ ಯಾವ ಪ್ರೇರಣೆಗೂ ನಿಲುಕದೆ ತಣ್ಣನೆ ತನ್ನದೇ ಶೈಲಿಯಲ್ಲಿ ಶಹಭಾಸ್ ಗಿಟ್ಟಿಸುವ ಪರಿ ಎಲ್ಲವೂ ಅಮೋಘ
.[
ಜನಪ್ರಿಯತೆ ಗಳಿಸಿದ ಇನ್ನೊಂದು ಜತೆಗಾರಿಕೆ ಪದ್ಯಾಣ - ಹೊಳ್ಳ ]
ಹೀಗೆ ಗಾನ ವೈಭವದಂತಹ ಕಾರ್ಯಕ್ರಮಗಳಲ್ಲು ಹಲವು ವಿಶೇಷತೆಯನ್ನು ಗುರುತಿಸಬಹುದು.ಇದರಲ್ಲೂ ಕೆಲವೊಮ್ಮೆ ತಮಟೆ, ಡೋಲು, ಕೊಳಲು, ಕೋಲು ಇವುಗಳನ್ನು ಸೇರಿಸಿ ಬದಲಾಣೆಯನ್ನು ತೋರಿಸಿದರು ಯಕ್ಷಗಾನದ ಹಾಡುಗಾರಿಕೆ ಇವುಗಳು ಸ್ವಲ್ಪವೂ ಒಗ್ಗಿಕೊಳ್ಳದೆ ಶುದ್ದವಾದ ನೀರಿನ ಹರಿವಿನಲ್ಲಿ ರಾಡಿಯಾದ ನೀರು ಬದಿಯಲ್ಲೇ ಬೇರೆಯಾಗಿ ಹೋಗುವಂತೆ ಭಾಸವಾಗುತ್ತದೆ. ಶುದ್ದ ಶಾಸ್ತ್ರೀಯ ಸಂಗೀತಕ್ಕೂ ಯಕ್ಷಗಾನದ ರಾಗಗಳಿಗೂ ಬಹಳ ವೆತ್ಯಾಸವಿದ್ದರೂ ಅದನ್ನು ಗಮನದಲ್ಲಿ ಇಡದೆ ಇಂತಹ ಪ್ರಯೋಗಗಳು ಅಸಹಜ ಎಂದೆನಿಸುತ್ತದೆ. ಒಂದು ಕ್ಷಣದಲ್ಲಿ ಬಿದ್ದ ಚಪ್ಪಾಳೆಯನ್ನೇ ಅಂಗೀಕಾರ ಎಂದು ಭಾವಿಸಿಬಿಡುವ ಪ್ರಮೇಯ ಒದಗಿ ಬಂದಿದೆ.
[
ತೆಂಕಬೈಲು ಅಮ್ಮಣ್ಣಾಯ ಪುತ್ತಿಗೆಯವರ ದ್ವಂದ್ವ ರಸಿಕರ ಹೃದಯಕ್ಕೆ ಲಗ್ಗೆ ಇಡುವ ಪರಿ ]
ಎನೇ ಅದರು ಕೆಲವೊಂದು ಸಲ ದ್ವಂದ್ವ ಹಾಡುಗಾರಿಗೆ ಮನಸ್ಸಿಗೆ ಮುದ ನೀಡುವುದರಲ್ಲಿ ಅನುಮಾನವಿಲ್ಲ.ವಿಭಿನ್ನ ಮಾದರಿಯ ದ್ವಂದ್ವ ಹಾಡುಗಾರಿಕೆಯನ್ನು ಸಂಗ್ರಹದಿಂದ ಕೇಳಿದಾಗ ಅಗುವ ಆನಂದವೇ ಬೇರೆ. ಹೀಗೆ ಒಂದು ಸಲ ಇವುಗಳೆನ್ನೆಲ್ಲ ಅವಲೋಕಿಸಿದಾಗ ಇಂತಹ ಚಿಂತನೆಗಳಿಗೆ ಕಾರಣವಾಗಿಬಿಡುತ್ತದೆ.
ಆದರೂ ವಿಭಿನ್ನ ಚಿಂತನಾ ಶೀಲ ಇರುವ ಇಬ್ಬರು ಭಾಗವತರು ಒಂದು ಪ್ರಸಂಗವನ್ನು ಒಟ್ಟಾಗಿ ಮುಂದುವರೆಸುವಲ್ಲಿ ಬಹಳವಾದ ಹೊಂದಾಣಿಕೆ ಅಗತ್ಯ. ಮಾತ್ರವಲ್ಲ ಕಾರ್ಯಕ್ರಮದ ಯಶಸ್ಸಿಗೂ ಇದು ಅನಿವಾರ್ಯ. ಅದರೂ ಯಕ್ಷಗಾನದಂತಹ ಕಲೆಯಲ್ಲಿ ಈ ದ್ವಂದ್ವಗಳು ಹೊಂದಿಕೆಯೆ ಅಗದೆ ಮೂಲ ರೂಪವನ್ನೆ ಕೆಡಿಸಿಬಿಡುತ್ತದೆ.
[
ಪುತ್ತಿಗೆ ಅಮ್ಮಣ್ಣಾಯರ ದ್ವಂದ್ವ ಒಂದು ಧುಮ್ಮಿಕ್ಕುವ ಜಲಪಾತ ಇನ್ನೊಂದು ಮಂದಗಾಮಿನಿ ]
ದ್ವಂದ್ವ ಬೇಕೆ ಬೇಡವೆ ಎಂದು ಪ್ರತಿಪಾದಿಸುವಲ್ಲಿ ಮನಸ್ಸಿನೊಳಗೆ ದ್ವಂದ್ವ ಯೋಚನೆ ಉಂಟಾದರೆ ಅದಕ್ಕೆ ಆಶ್ಚರ್ಯ ಪಡಬೇಕಿಲ್ಲ. ಅದನ್ನು ಅನುಭವಿಸುವಾಗ ಉಂಟಾಗುವ ಅನಿರ್ವಚನೀಯ ಆ ಅನುಭವವೇ ಇದಕ್ಕೆ ಕಾರಣ. ಚರ್ಚೆ ಸಂವಾದ ಅಭಿಪ್ರಾಯಗಳು ಏನೇ ಇರಲಿ. ಪರಂಪರೆಯ ಹಾದಿ ಬಿಟ್ಟು ಯಕ್ಷಗಾನ ಹಿಮ್ಮೇಳ ಈ ದ್ವಂದ್ವ ಪ್ರಪಂಚಕ್ಕೆ ತೆರೆದು ಕೊಂಡಲ್ಲಿ ನಮ್ಮಂತಹ ಕೇಳುಗರ ಮನಸ್ಸನ್ನು ತಣಿಸುವಲ್ಲಿ ಇದು ತುಂಬ ಸಹಾಯ ಮಾಡಿದೆ. ದೂರದ ಊರಿಗೆ ಹೋಗಿ ಯಕ್ಷಗಾನ ನೋಡುವುದಾಗಲಿ ಶ್ರಮವಹಿಸಬೇಕಾದ ಸನ್ನಿವೇಶದಲ್ಲಿ, ಯಕ್ಷಗಾನ ಹಿಮ್ಮೇಳದ ವೈಭವದಲ್ಲಿನ ಇಂತಹ ದ್ವಂದ್ವ ಕಾರ್ಯಕ್ರಮಗಳ ಧ್ವನಿ ಮುದ್ರಣವನ್ನು ಇಲ್ಲಿ ದೂರದಲ್ಲಿ ಕೇಳಿಸಿಕೊಂಡು ಇರುಳನ್ನು ಹಗಲು ಹಗಲನ್ನು ಇರುಳು ಮಾಡಿಕೊಳ್ಳುವ ನಮ್ಮ ಹಾಗಿನ ಕಲಾಸಕ್ತರಿಗೆ ಸದುಪಯೋಗವಾಗಿದೆ ಎಂದು ಹೇಳಬಹುದು. ಬೇಕಾದಲ್ಲಿ ಇಲ್ಲಿ ಕೊಟ್ಟ ಯಕ್ಷಗಾನ ಪದಗಳನ್ನು ಆಲಿಸಲು ಸಾಧ್ಯವಾದರೆ ಆಲಿಸಿ ನೋಡಿ ಇದರಲ್ಲಿ ಯಾವುದು ಉತ್ತಮ ಎಂದು ಉಲ್ಲೇಖಿಸುವುದಕ್ಕೆ ಅಸಾಧ್ಯ. ಯಕ್ಷಗಾನ ವೈಭವದ ಸೊಗಸು ಇರುವುದೇ ಅಲ್ಲಿ. ಅಲ್ಲವೆ? ಇವುಗಳನ್ನು ಕೇಳಿದಾಗ ಏನನಿಸುತ್ತದೆ?

ಬಹಳ ಒಳ್ಳೆಯ ಕೆಲಸ.you tube ನಲ್ಲೂ ಹಾಕಿದ್ರೆ ಒಳ್ಳೇದಲ್ವಾ..ಇನ್ನೂ ಹೆಚ್ಚು ಕಲಾಸಕ್ತರನ್ನು ತಲುಪಬಹುದು.
ReplyDeleteನನ್ನ ಅಲ್ಪ ಕೆಲಸವನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು. ಆದರೆ ಇದು ಕೇವಲ ದ್ವನಿ ಮುದ್ರಣಗಳೂ ಅಂದರೆ AUDIO NOT VEDIO ಹಾಗಾಗಿ ಅನುಕೂಲ ಅಗುವ ಹಾಗೆ ಮಾಡಿದ್ದೇನೆ.
ReplyDeleteತಡವಾಗಿ ಬ೦ದಿದ್ದೇನೆ. ಉತ್ತಮ ಬರಹ. ಉತ್ತಮ ದ್ವ೦ದ್ವಗಳು. ಒಳ್ಳೆಯ ಆರೋಗ್ಯಕರ, ಸ್ಪರ್ಧೆ ಇದು, ಯಕ್ಷಗಾನದ ಬೆಳವಣಿಗೆಗೆ, ಜನರನ್ನು ಮತ್ತೆ ಎಳೆಯಲು ಸಹಕಾರಿ ಆಗಲಿದೆ, ಆಗುತ್ತಿದೆ
ReplyDeletevery nice,,thank you RajKumar sir
ReplyDelete